ಆಗಸದೆತ್ತರಕೆ ಬೆಳೆದ ಮಣಿಪಾಲದ ಬಳ್ಳಿ
Team Udayavani, Jan 17, 2022, 6:15 AM IST
ನಾನು ನನ್ನ ಜೀವನದ ಸಾಧನೆಗಳಲ್ಲಿ ಯಾವ ಎತ್ತರಕ್ಕೆ ಏರಿದ್ದೇನೆಯೋ ಅದಕ್ಕೆ ಟಿ.ಎ. ಪೈ ಅವರೇ ಕಾರಣ. ನಿಜವಾದ ಮಿತ್ರ, ಮಾರ್ಗದರ್ಶಕರೆಂದು ಗೌರವಿಸುತ್ತಿದ್ದಂಥ ಮಹಾನ್ ವ್ಯಕ್ತಿಯೊಂದಿಗಿನ ಮೊದಲ ಭೇಟಿಯ ನೆನಪು ಇನ್ನೂ ಹಸುರಾಗಿದೆ. 1959ರ ಮಾರ್ಚ್. ಟಿ.ಎ. ಪೈ ಅವರು ದಿ ಕೆನರಾ ಇಂಡಸ್ಟ್ರಿಯಲ್ ಆ್ಯಂಡ್ ಸಿಂಡಿಕೇಟ್ ಬ್ಯಾಂಕ್ ಲಿಮಿಟೆಡ್ (ಸಿಐಬಿಎಸ್ ಲಿ.)ನ ಇಬ್ಬರು ಅಧಿಕಾರಿಗಳ ಜತೆಗೆ ಮಧುರೈಯಲ್ಲಿರುವ ಬ್ಯಾಂಕ್ ಆಫ್ ಮಧುರೈ ಮುಖ್ಯಸ್ಥರ ಭೇಟಿಗಾಗಿ ಆಗಮಿಸಿದ್ದರು. 1952ರಿಂದ ನಾನು ಆ ಬ್ಯಾಂಕ್ ಮುಖ್ಯಸ್ಥರ ಸಹಾಯಕನಾಗಿದ್ದೆ. ಟಿ.ಎ. ಪೈ ಅವರು ಆಗಮಿಸಿದಾಗ ಬ್ಯಾಂಕ್ ಮುಖ್ಯಸ್ಥರು ಬೇರೆಡೆ ತೆರಳಿದ್ದರು. ಹೀಗಾಗಿ ಟಿ.ಎ. ಪೈ ಅವರಿಗೆ ವಾಸ್ತವ್ಯ-ಊಟೋಪಚಾರಗಳ ಹೊಣೆ ನನಗೆ ಲಭಿಸಿತು. ಅವರನ್ನು ಸುತ್ತಮುತ್ತಲಿನ ಸ್ಥಳಗಳಿಗೆ ಕರೆದೊಯ್ಯುವ ಸಂದರ್ಭ ಎತ್ತಿದ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ. ಮೀನಾಕ್ಷಿ ದೇಗುಲದ ಬಗ್ಗೆ ಸವಿವರವಾಗಿ ಉತ್ತರಿಸಿದ್ದೆ. ಬಳಿಕ ಜವುಳಿ ಮತ್ತು ಸರಕಾರಿ ವಿದ್ಯುತ್ಛಕ್ತಿ ಮಂಡಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ವಿವಿಧ ವಿಷಯಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿದ್ದ ಅವರು, ಕುತೂಹಲಿಗರಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಮಸ್ಯೆಗಳಿವೆ ಎಂದರೆ ಪರಿಹರಿಸಬೇಕೆಂಬ ಕಾಳಜಿಯೂ ಇತ್ತು.
ಉಡುಪಿಗೆ ವಾಪಸಾದ ಬಳಿಕ ಟಿ.ಎ. ಪೈ ಅವರು ಪ್ರವಾಸದ ಅವಧಿಯಲ್ಲಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಅವರ ಬ್ಯಾಂಕ್‌ನಲ್ಲಿ ಉದ್ಯೋಗದ ಅವಕಾಶ ಇರುವ ಬಗ್ಗೆಯೂ ಪತ್ರ ಬರೆದಿದ್ದರು. ಹಲವು ಬಾರಿ ಯಾವಾಗ ಸೇರಿಕೊಳ್ಳುತ್ತೀರಿ ಎಂಬ ಬಗ್ಗೆ ನೆನಪಿನ ಓಲೆಗಳನ್ನು ಕಳುಹಿಸಿದ್ದರು.
1959ರ ಸೆಪ್ಟಂಬರ್‌ನಲ್ಲಿ ನಾನು ಸಿಐಬಿಎಸ್ ಲಿ.ಗೆ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ಪಿಆರ್ ವಿಭಾಗದ ಮುಖ್ಯಸ್ಥನಾಗಿ ಸೇರಿದೆ. ಭಾಷೆಯ ಸಮಸ್ಯೆ ಎದುರಾದರೂ ನಾವಿಬ್ಬರೂ ಆಗಬೇಕಾದ ಕೆಲಸಗಳ ಬಗ್ಗೆ ಮಾತ್ರ ಮುತುವರ್ಜಿ ವಹಿಸುತ್ತಿದ್ದೆವು. ವಿವಿಧ ವರ್ಗದ, ನಂಬಿಕೆಯ ಹಿನ್ನೆಲೆಯುಳ್ಳವರು, ಸಮಾಜದ ವಿವಿಧ ಹಂತದ ಜನರು ಭೇಟಿಯಾಗುತ್ತಿದ್ದರು. ಪೈ ಅವರೂ ತಮ್ಮನ್ನು ಭೇಟಿಯಾಗಲು ಬಂದವರನ್ನು ಮಾತನಾಡಿಸದೆ ವಿರಮಿಸುತ್ತಿರಲಿಲ್ಲ. ಜತೆಗೆ ಕಚೇರಿಯ ಕೆಲಸಗಳು, ಅದಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದ್ದರು. ಸಭೆ ನಡೆಸುತ್ತಿದ್ದರು.
ನಾನು ಸೇರಿದಂತೆ ಹಲವು ಮಂದಿ ಅವರು ಸೂಚಿಸುವ ಹಲವು ಆಸಕ್ತಿಕರ ವಿಚಾರಗಳ ಬಗ್ಗೆ ಸತತವಾಗಿ ಚರ್ಚಿಸುತ್ತಿದ್ದೆವು. ಹೂಡಿಕೆದಾರರ ವಿಭಾಗ ರಚನೆ (ಮ್ಯೂಚುವಲ್ ಫಂಡ್‌ಗಳಿಗೆ ಸಮನಾಗಿರುವಂತೆ), ಸಣ್ಣ ಮತ್ತು ಅತೀ ಸಣ್ಣ ಬ್ಯಾಂಕ್‌ಗಳ ವಿಲೀನಗೊಳಿಸಿ, ಬಲವರ್ಧನೆಗೊಳಿಸಿ ದೊಡ್ಡ ಸಂಸ್ಥೆಗಳನ್ನಾಗಿ ಸುವುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಲಹೆ-ಪರಾಮರ್ಶೆ, ಮಹಿಳಾ ಶಾಖೆ, ಕೃಷಿ ಕ್ಷೇತ್ರಕ್ಕೆ ವಿತ್ತೀಯ ನೆರವು ಸೇರಿದಂತೆ ಹಲವು ವಿಷಯಗಳ ಪರಾಮರ್ಶೆಗಳು ಸಾಗುತ್ತಿದ್ದವು.
ಟಿ.ಎ. ಪೈ ಅವರ ಕಾರಿನಲ್ಲಿ ಒಬ್ಬರು ಅಥವಾ ಇಬ್ಬರು ಅಧಿಕಾರಿಗಳ ಜತೆ ರಾಜ್ಯದ ಉದ್ದಗಲಕ್ಕೂ ಹಲವು ಬಾರಿ ಪ್ರವಾಸ ಮಾಡಿದ್ದೆವು. ಪ್ರತೀ ಬಾರಿ ಅವರೇ ಕಾರು ಚಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಯುತ್ತಿತ್ತು. ಅವರ ಜತೆಗೆ ತೆರಳಿದ ಸಹ-ಪ್ರಯಾಣಿಕರಿಗೆ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರತಾದ ಹೊಸ ವಿಷಯ- ವಿಚಾರಗಳ ಅಧ್ಯಯನವೂ ಮಾಡಿದಂತಾಗುತ್ತಿತ್ತು. ಇದರಿಂದಾಗಿ ಪ್ರವಾಸದ ಅನುಭವ ವಿಶೇಷ ಅನುಭೂತಿ ನೀಡುತ್ತಿತ್ತು.
ಅವರಿಂದಾಗಿ ಡಬ್ಲೂéಸಾಮರ್‌ಸೆಟ್ ಮಾಮ್, ಆ್ಯನ್ ರ್‍ಯಾಂಡ್, ಅಲ್ಬರ್ಟ್ ಕಾಮೂ, ಬರ್ನಾರ್ಡ್ ಶಾ ಸೇರಿದಂತೆ ಹಲವು ಪ್ರಸಿದ್ಧ ಲೇಖಕರ ಕೃತಿಗಳತ್ತ ಆಕರ್ಷಿ ತರಾದೆವು. ಅವುಗಳ ಬಗೆಗೂ ಚರ್ಚಿಸುತ್ತಿದ್ದೆವು. ಇದರಿಂದ ಜ್ಞಾನ ಹೆಚ್ಚಿತು.
ಬ್ಯಾಂಕ್‌ನ ಅಂತಾರಾಷ್ಟ್ರೀಯ ವಿಭಾಗದ ವ್ಯವಹಾರಗಳನ್ನು ನೋಡಿಕೊಳ್ಳಲು ನಾನು ಮುಂಬಯಿಯಲ್ಲಿ 17 ವರ್ಷ ಇರಬೇಕಾಯಿತು. ಆ ಕಾಲಕ್ಕೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವಹಿವಾಟಿಗೆ ವಿಳಂಬ ಪ್ರವೇಶ ಮಾಡಿದ್ದೆಂದರೆ ನಾವೇ. ಬಿಡುವಿಲ್ಲದ ಕೆಲಸ-ಕಾರ್ಯಗಳಿದ್ದರೂ ಮುಂಬಯಿಯ ಮರೀನ್ ಡ್ರೈವ್‌ನಲ್ಲಿ ಇದ್ದ ಡಾ| ಬಾಳಿಗ ಅವರ ಸ್ಥಳದಲ್ಲಿ ಪೈ ಅವರನ್ನು ಭೇಟಿಯಾಗುತ್ತಿದ್ದೆ. ಎಲ್‌ಐಸಿಯ ಅಧ್ಯಕ್ಷರಾಗಿ, ಸಚಿವರಾಗಿದ್ದರೂ ಮುಂಬಯಿಗೆ ತಪ್ಪದೇ ಭೇಟಿ ನೀಡುತ್ತಿದ್ದರು. ಅವರ ಜತೆಗೆ ನಡೆಸುವ ಪ್ರತೀ ಭೇಟಿಯೂ ನನಗೆ ವೈಯಕ್ತಿಕವಾಗಿ ಹೊಸ ವಿಷಯಗಳನ್ನು ಅರಿತು, ತಿಳಿವಳಿಕೆ ವೃದ್ಧಿಸಿಕೊಳ್ಳಲು ನೆರವಾಗುತ್ತಿತ್ತು.
ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅವರು ಕೋಪ ಮಾಡಿಕೊಳ್ಳುವ (ಯಾವತ್ತೂ ಅಲ್ಲ) ಅಥವಾ ದುಃಖದ ಕ್ಷಣಗಳು ಬಂದರೆ ಮೌನವಾಗುತ್ತಿದ್ದರು. ಕ್ಷಣಮಾತ್ರದಲ್ಲಿ ಮರೆತು ಮುಗುಳ್ನಗುತ್ತಾ ಎಲ್ಲರ ಜತೆಗೆ ಬೆರೆಯುತ್ತಿದ್ದರು. ಕಹಿ ಘಟನೆಗಳನ್ನು ಮೆಲುಕು ಹಾಕುವ ವ್ಯಕ್ತಿತ್ವವೇ ಅವರದ್ದಲ್ಲ. ಮುಕ್ತ ಮನಸ್ಸಿನವರು.
ಕರಾವಳಿ ಪ್ರದೇಶದ ಮಟ್ಟಿಗೆ ಹೇಳುವುದಿದ್ದರೆ, ಒಬ್ಬರಲ್ಲ ಒಬ್ಬರಿಗೆ ಮಣಿಪಾಲದ ಪೈಗಳ ಕುಟುಂಬದಿಂದ ಪ್ರತ್ಯಕ್ಷ ವಾಗಿಯೋ ಪರೋಕ್ಷವಾಗಿಯೋ ಅನುಕೂಲವೇ ಆಗಿದೆ. ಅವರು ಹಾಕಿ ಕೊಟ್ಟ ದಾರಿಯನ್ನು ನಾವು ಅನುಸರಿಸಲು ಮುಂದಾದರೂ ಅವರು ಏರಿದ ಎತ್ತರಕ್ಕೆ ಏರಲು ಎಂದಿಗೂ ಸಾಧ್ಯವೇ ಆಗದು.
- ಲಕ್ಷ್ಮೀನಾರಾಯಣ
(ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.