ಇಂದಿನ ಶಿಕ್ಷಣ, ವಸತಿ ಸಾಲದ ಜನಪ್ರಿಯತೆಗೆ ಅಂದೇ ಮುನ್ನುಡಿ
Team Udayavani, Jan 17, 2022, 6:05 AM IST
ಇಂದಿರಾ ಗಾಂಧಿ ಅವರ ಜತೆ ಟಿ.ಎ. ಪೈ.
ಟಿ.ಎ. ಪೈಯವರು ಸಿಂಡಿಕೇಟ್ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿದ್ದಾಗ ಶಿಕ್ಷಣ ಮತ್ತು ವಸತಿ ಸಾಲವನ್ನು ಕೊಡಲು ಉಪ ಕ್ರಮಿಸಿದರು. ಇಂತಹ ಸಂದರ್ಭ ಸಾಮಾನ್ಯ ವಾಗಿ ಮುಂಗಡ ವಿಭಾಗದ ಮಹಾಪ್ರಬಂಧ ಕರು ಸುತ್ತೋಲೆ ಬರೆಯುತ್ತಾರೆ. ಈ ಬಾರಿ ಸ್ವತಃ ಅಧ್ಯಕ್ಷರೇ ಎಲ್ಲ ಶಾಖಾ ಪ್ರಬಂಧಕರಿಗೆ ಶಿಕ್ಷಣ ಸಾಲ ಮಂಜೂರು ಮಾಡಿ ವಿದ್ಯೆ ಕಲಿಯು ವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಪತ್ರ ಬರೆದರು. ಕೆಲವರು ಸ್ಪಂದಿಸಿದರು, ಕೆಲವರು ಸ್ಪಂದಿಸಲಿಲ್ಲ. ಮತ್ತೆ 15 ದಿನಗಳು ಬಿಟ್ಟು ಮತ್ತೆ ಪತ್ರ ಬರೆದು ಸಮಸ್ಯೆಗಳಿದ್ದರೆ ತಿಳಿಸಿ ಎಂದರು. ಆಗ ಕೆಲವರು ಈಗಾಗಲೇ ಶಿಕ್ಷಣ ಸಾಲವನ್ನು ನೀಡಿದ್ದು ಸಾಲ ವಸೂಲಿಯಾಗುತ್ತಿಲ್ಲ ಎಂದು ವಾಪಸು ಪತ್ರ ಬರೆದರು. ಸ್ನಾತಕೋತ್ತರ ಅಧ್ಯ ಯನ, ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ಶಿಕ್ಷಣ ಪಡೆಯುವವರಿಗೆ ಸಾಲ ಕೊಟ್ಟು ಅವರು ಉದ್ಯೋಗ ಗಳಿಸಿದ ಬಳಿಕ ಹಿಂದಿರುಗಿಸುತ್ತಾರೆ ಎಂದು ಅಧ್ಯಕ್ಷರು ಪತ್ರ ಬರೆದರು. “ನಾವು ಸಾಲ ಕೊಡುತ್ತಿದ್ದೇವೆ. ಸಾಲ ವಸೂಲಾತಿಗೆ ಬರೆದ ಪತ್ರ ಹಿಂದಿರುಗಿ ಬರುತ್ತಿದೆ. ಪೋಷಕರು ಹಿಂದಿನ ವಿಳಾಸದಲ್ಲಿ ಇರುವುದಿಲ್ಲ’ ಎಂದು ಮ್ಯಾನೇಜರ್ ವಾಪಸು ಪತ್ರ ಬರೆದರು. “ಇವರ ವಿಳಾಸಗಳನ್ನು ಹುಡುಕಬೇಕು. ಅದಕ್ಕಾಗಿ ಬರುವ ಖರ್ಚನ್ನು ಬ್ಯಾಂಕ್ ಭರಿಸಬೇಕು’ ಎಂದು ಅಧ್ಯಕ್ಷರು ಸಲಹೆ ನೀಡಿದರು. ಹೀಗೆ ಶೇ. 80ರಷ್ಟು ವಿಳಾಸಗಳು ಸಿಕ್ಕಿದವು. ಶೇ. 95ರಷ್ಟು ವಸೂಲಾತಿಯಾಯಿತು. ಶೇ. 5 ಅಂಶ ದೊಡ್ಡ ಸಂಗತಿಯಲ್ಲ, ಅದನ್ನು ಮನ್ನಾ ಮಾಡಿ. ಮುಂದೊಂದು ದಿನ ವಸೂಲಾದರೆ ಸಸ್ಪೆನ್ಸ್ ಖಾತೆಯಲ್ಲಿ ಹಾಕಿ ಎಂದರು. ಒಟ್ಟಾರೆಯಾಗಿ ಶೇ. 99ರಷ್ಟು ಸಾಲ ವಸೂಲಿಯಾಯಿತು. ಶೇ. 1 ವಸೂಲಿಯಾಗದಿದ್ದರೆ ತೊಂದರೆ ಇಲ್ಲ ಎಂದು ಟಿ.ಎ. ಪೈ ಅವರು ಹೇಳಿದರು. ಶಿಕ್ಷಣ ಸಾಲ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಜನಪ್ರಿಯವಾಗಲು ಟಿ.ಎ. ಪೈ ಅವರ ಆಸ್ಥೆಯೇ ಮುಖ್ಯ ಕಾರಣ.
ಇದೇ ತೆರನಾಗಿ ನಗರ ಮತ್ತು ಗ್ರಾಮೀಣ ಭಾಗದ ವಸತಿ ಸಾಲವನ್ನೂ ಜನಪ್ರಿಯಗೊಳಿಸಲಾಯಿತು. ಜನರಿಗೆ ಉತ್ತಮ ಮನೆ ನಿರ್ಮಿಸಲು ಹಣದ ಕೊರತೆ ಇರುತ್ತಿತ್ತು. ಅವರಿಗೆ ಎಂಟು ವರ್ಷದ ಅವಕಾಶ ಕೊಟ್ಟು ಸಾಲ ನೀಡಲು ಟಿ.ಎ. ಪೈ ಅವರು ಸಲಹೆ ನೀಡಿದರು. ಇದೂ ಸಹ ಶಿಕ್ಷಣ ಸಾಲದಂತೆ ಶೇ. 1-2ರಷ್ಟು ಮನ್ನಾ ಮಾಡಬೇಕಾಯಿತು. ಆದರೆ ಶೇ. 99ರಷ್ಟು ಯಶಸ್ವಿಯಾಯಿತು.
ನಾಯಕ ನಡೆದಂತೆ ಜನರು ನಡೆಯುತ್ತಾ ರೆಯೇ ಹೊರತು ನಾಯಕ ಸ್ವತಃ ಹೇಳಿದಂತೆ ನಡೆಯುವುದಿಲ್ಲ. ಟಿ.ಎ. ಪೈ ಅವರು ನುಡಿದಂತೆ ನಡೆದು ತೋರಿಸುತ್ತಿದ್ದರು.
ಪ್ರಥಮ ಭೇಟಿಯ ಒಗಟು
ಸುಮಾರು 1950ರ ದಶಕದಲ್ಲಿ ನಾನು ಎಸೆಸೆಲ್ಸಿ ತರಗತಿಯಲ್ಲಿ ಮಲ್ಪೆ ಫಿಶರೀಸ್ ಶಾಲೆಯಲ್ಲಿ ಓದುತ್ತಿರುವಾಗ ತೆಂಕನಿಡಿಯೂರಿನ ಮನೆಗೆ ಟಿ.ಎ. ಪೈ ಕಾರಿನಲ್ಲಿ ಬಂದು ಊರಿನ ಕೆಲವು ಗಣ್ಯರನ್ನು ಪರಿಚಯಮಾಡಿಕೊಡುವಂತೆ ಹೇಳಿದರು. ನಾನು ಅದರಂತೆ ಅವರನ್ನು ವಾಗಮ್ಮ, ಶ್ರೀಧರ ಕಲ್ಕೂರ, ನೀಲಕಂಠ ನಾವಡರ ಮನೆಗೆ ಕರೆದೊಯ್ದು ಪರಿಚಯ ಮಾಡಿಸಿದೆ.
“ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಆಗ ನನ್ನನ್ನು ಬಂದು ನೋಡು’ ಎಂದು ಪೈಗಳು ಹೇಳಿದರು. ಉಡುಪಿ ನಗರ ಸಭೆ ಸಮೀಪದ “ಮುಕುಂದ ನಿವಾಸ’ದಲ್ಲಿದ್ದ ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿಗೆ ಹೋಗಿ ಮಾತನಾಡಿಸಿದೆ. ಟಿ.ಎ. ಪೈ ಆಗ ಮಹಾಪ್ರಬಂಧಕ ರಾಗಿದ್ದರು. ಸಿಂಡಿಕೇಟ್ ಬ್ಯಾಂಕ್ ಲೋಕಲ್ ಕಚೇರಿಯಲ್ಲಿ ಪ್ರೊಬೆಶನರಿ ಕ್ಲರಿಕಲ್ ಹುದ್ದೆಯನ್ನು ಕೊಟ್ಟರು. ಬೆಳಗಾವಿಗೆ ವರ್ಗವಾದಾಗ ಅಲ್ಲಿ ಬೆರಳಚ್ಚು, ಶೀಘ್ರಲಿಪಿ ಪರೀಕ್ಷೆಯಲ್ಲಿ ಪಾಸಾದೆ. ಆಗ ಟಿ.ಎ. ಪೈ ಅವರು ಮಂಗಳೂರು ಹಂಪನ ಕಟ್ಟೆ ಪ್ರಬಂಧಕರಿಗೆ ಶೀಘ್ರಲಿಪಿಕಾರನಾಗಿ ನನ್ನನ್ನು ವರ್ಗಾವಣೆ ಮಾಡಿದರು.
ದಿಲ್ಲಿಯ ಆರ್.ಕೆ. ಪುರಂ ಶಾಖೆಯಲ್ಲಿ ಎಷ್ಟು ಉಳಿತಾಯ ಖಾತೆಗಳಿವೆ ಎಂದಾಗ 10,000 ಎಂದಿದ್ದೆ. ಉಳಿದ ಶಾಖೆಗಳ ಸಂಖ್ಯೆ ಕಡಿಮೆ ಇತ್ತು. ಆಗ ಪೈಯವರು “ಮಿಸ್ಟರ್ ಗಾಣಿಗ, ಆರ್.ಕೆ. ಪುರಂ ಪ್ರದೇಶದಲ್ಲಿ ಇನ್ನೂ ಹೆಚ್ಚು ಖಾತೆಗಳನ್ನು ತೆರೆಯಲು ಸಾಧ್ಯ’ ಎಂದು ಸ್ಫೂರ್ತಿ ತುಂಬಿದರು. ಟಿ.ಎ. ಪೈಯವರ ಪತ್ನಿ ವಸಂತಿ ಪೈ
ಅವರೂ ಇದೇ ಮಾತನ್ನು ಹೇಳಿ ದರು. ಕೊನೆಗೆ 1.3 ಲಕ್ಷ ಖಾತೆಗಳು ನನ್ನ ನೇತೃತ್ವದಲ್ಲಿ ತೆರೆಯುವಂತಾ ಯಿತು. ಇದುಒಂದು ಶಾಖೆಯಲ್ಲಿ ಆದ ಆ ಕಾಲದ ವಿಶ್ವ ದಾಖಲೆ. ಇದನ್ನು ತಿಳಿದು ಮಾಧ್ಯಮದವರು ಬಂದು ಅಚ್ಚರಿ ವ್ಯಕ್ತಪಡಿಸಿದ್ದರು.
ಟಿ.ಎ. ಪೈ ಅವರು ಮುಂದೆ ಭಾರತೀಯ ವಿಮಾ ನಿಗಮ, ಭಾರತ ಆಹಾರ ನಿಗಮದ ಅಧ್ಯಕ್ಷರು, ಕೈಗಾರಿಕೆ, ರೈಲ್ವೇ ಸಚಿವರಾಗಿದ್ದಾಗಲೂ ನಾನು ಸಿಗುತ್ತಿದ್ದೆ. ಆಗಲೂ ಅವರ ಮಾತು ಬ್ಯಾಂಕ್‌ನ ಚಟುವಟಿಕೆ ಕುರಿತೇ ಇತ್ತು. ನಾನು ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ಮಹಾಪ್ರಬಂಧಕನಾಗಿ ಸೇವೆ ಸಲ್ಲಿಸುವಾಗಲೂ ಸಿಗುತ್ತಿದ್ದೆ. ಬಳಿಕ ಆಂಧ್ರ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ, ಆಡಳಿತ ನಿರ್ದೇಶಕನಾಗುವ ಅವಕಾಶ ಸಿಕ್ಕಿತು. ಶಾಲೆಗೆ ಹೋಗುವಾಗ ಆಕಸ್ಮಿಕವಾಗಿಸಿಕ್ಕಿದ ದೊಡ್ಡ ವ್ಯಕ್ತಿಯ ಸಂಪರ್ಕ ನನ್ನ ಜೀವನದ
ದಿಕ್ಕನ್ನೇ ಬದಲಾಯಿಸಿತು. ಆದರೆ ತೆಂಕನಿಡಿ ಯೂರಿಗೆ ಏಕೆ ಬಂದಿದ್ದರು ಎಂಬುದು ಬಗೆ ಹರಿಯದ ಒಗಟಾಗಿಯೇ ಉಳಿಯಿತು.
ಶೇ.99 ಸತ್ಯವಾದ
ಕಲ್ಕೂರರ ಕೈ ಭವಿಷ್ಯ
ಮೊದಲ ಬಾರಿ ಭೇಟಿಯಾಗಿ ಗಣ್ಯರನ್ನು ಪರಿಚಯಿಸಲು ಹೇಳಿದಾಗ ಶ್ರೀಧರ ಕಲ್ಕೂರ ಎಂಬ ಜ್ಯೋತಿಷ್ಕರ ಮನೆಗೆ ಹೋದೆವು. ಅಲ್ಲಿ ಆತಿಥ್ಯ ನಡೆದ ಬಳಿಕ ಕೈ ತೋರಿಸಲು ಕಲ್ಕೂರ ಹೇಳಿದರು. “ಹಲವು ವರ್ಷಗಳ ಬಳಿಕ ಒಳ್ಳೆಯ ದಿನಗಳು ಬರುತ್ತವೆ. ನೀವು ರಾಷ್ಟ್ರಮಟ್ಟದ ಹುದ್ದೆಯನ್ನು ಅಲಂಕರಿಸುತ್ತೀರಿ’ ಎಂದರು. ಅವರು ಹೇಳಿದ್ದು ಮುಂದೆ ಶೇ. 99 ಸತ್ಯವಾಯಿತು.
-ಟಿ.ಜೆ.ಎ. ಗಾಣಿಗ
(ಆಂಧ್ರ ಬ್ಯಾಂಕ್‌ನ ಮಾಜಿ ಅಧ್ಯಕ್ಷರು
ಮತ್ತು ಆಡಳಿತ ನಿರ್ದೇಶಕರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.