Teachers’ Day ಜೀವನ ಬದಲಿಸಿದ ಮೇಷ್ಟ್ರ ನೆನೆದೇವಾ…
Team Udayavani, Sep 5, 2023, 6:40 AM IST
ವ್ಯಕ್ತಿಯೊಬ್ಬ ಯಾವುದೇ ಎತ್ತರಕ್ಕೆ ಏರಲು ಅವರಿಗೆ ಪಾಠ ಮಾಡಿದ ಗುರುಗಳ ಪಾತ್ರ ಮಹತ್ವದ್ದೇ. ಪ್ರತೀ ವರ್ಷ ಶಿಕ್ಷಕರ ದಿನದಂದು ಅಂಥ ಗುರುಗಳನ್ನು ನೆನಪಿಸಿಕೊಳ್ಳುವುದು ರೂಢಿ. ಪ್ರತಿಯೊಬ್ಬರೂ, ತಮ್ಮ ಓದಿನ ಅವಧಿಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರಿಂದ ಸ್ಫೂರ್ತಿ ಪಡೆದಿರುತ್ತಾರೆ. ಅಂಥ ಉತ್ತೇಜನ ಅವರ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಅನುರಣಿಸುತ್ತದೆ. ಅವರ ಮಾತುಗಳನ್ನು, ಆದರ್ಶ ನುಡಿಗಳನ್ನು ಪಾಲಿಸಿದಾಗ ಮಾತ್ರ ಜೀವನದಲ್ಲಿ ಯಶ ಪಡೆಯಲು ಸಾಧ್ಯ. ಇಂಥ ಜೀವನ ಬದಲಿಸಿದ ಶಿಕ್ಷಕರ ಕುರಿತು ಸಿಎಂ ಸಿದ್ದರಾಮಯ್ಯ ಆದಿಯಾಗಿ ವಿವಿಧ ಕ್ಷೇತ್ರಗಳ ನಾಯಕರು ಹೇಳಿದ್ದು ಹೀಗೆ…
ರಾಜಪ್ಪ ಮೇಸ್ಟ್ರೆ ಊರಿಗೆ ಬರದೇ ಹೋಗಿದ್ರೆ…
ಶಿಕ್ಷಕರ ದಿನಾಚರಣೆ ಬಂದಾಗೆಲ್ಲ ನನಗೆ ರಾಜಪ್ಪ ಮೇಸ್ಟ್ರೆ ನೆನಪಾಗ್ತಾರೆ. ನಾನು ಶಾಲೆ ಮುಖ ಅಂತ ನೋಡಿದ್ದು ಇವರಿಂದಲೇ. ನಾನು ಒಂದನೇ ಕ್ಲಾಸು, ಎರಡನೇ ಕ್ಲಾಸು ಅಂತ ಮೊದಲಿಂದ ಸ್ಕೂಲಿಗೆ ಹೋದೋನಲ್ಲ. ವೀರ ಕುಣಿತ ಕಲಿಯೋಕೆ ಹೋಗ್ತಿದ್ದೆ . ಅಲ್ಲಿ ಮರಳಿನ ಮೇಲೆ ಅಕ್ಷರ ಕಲಿಸ್ತಾ ಇದ್ರು. ರಾಜಪ್ಪ ಮೇಸ್ಟ್ರೆ ನಮ್ ಊರಿಗೆ ಮೇಸ್ಟ್ರಾಗಿ ಬಂದ ಮೇಲೆ ಯಾರ್ಯಾರ ಮನೆ ಮಕ್ಕಳು ಸ್ಕೂಲಿಗೆ ಸೇರಿಲ್ಲ ಅಂತ ಮನೆ ಮನೆಗೆ ಬಂದು ಕೇಳ್ಳೋರು.
ಹೀಗೆ ನಾನು ಸ್ಕೂಲಿಗೇ ಸೇರಿಲ್ಲ ಅನ್ನೋದು ರಾಜಪ್ಪ ಮೇಸ್ಟ್ರಿಗೆ ಗೊತ್ತಾಗಿ, ಅವರೇ ನನ್ನನ್ನು ಕರ್ಕೊಂಡು ಹೋಗಿ ಸೀದಾ ಐದನೇ ಕ್ಲಾಸಿಗೆ ಸೇರಿಸಿದ್ರು. ಅಲ್ಲಿಂದ ಮುಂದಕ್ಕೆ ನಾನು ಬಿಎಸ್ಸಿ ಮುಗಿಸಿ ಕಾನೂನು ಡಿಗ್ರಿ ಸಿಗೋವರೆಗೂ ಓದುತ್ತಲೇ ಹೋದೆ. ರಾಜಪ್ಪ ಮೇಸ್ಟ್ರೆ ನಮ್ ಊರಿಗೆ ಬರದೇ ಹೋಗಿದ್ರೆ ನಾನು ಶಾಲೆ ಮುಖನೂ ನೋಡ್ತಾ ಇರ್ಲಿಲ್ಲ. ವಕೀಲನೂ ಆಗ್ತಿರಲಿಲ್ಲ. ಮುಖ್ಯಮಂತ್ರಿನೂ ಆಗ್ತಿರಲಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ನನ್ನ ಗುರು ಡಾ| ಗೋಪಾಲಕೃಷ್ಣ
ಜೀವನ ಮಾರ್ಗದಲ್ಲಿ ನನಗೆ ಪಾಠ ಕಲಿಸಿದ ಅನೇಕ ಸಂಗತಿಗಳಿವೆ. ಶಾಲೆಯ ದಿನಗಳನ್ನು ನೆನಪು ಮಾಡಿಕೊಂಡರೆ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಡಾ| ಗೋಪಾಲಕೃಷ್ಣ ಗುರುಗಳು ಕಣ್ಣೆದುರು ಬರುತ್ತಾರೆ. ಅದೇ ರೀತಿ ಕಾರ್ಮಲ್ ಸ್ಕೂಲ್‌ನ ಪಾರ್ವತಿ ಟೀಚರ್.
ಚಿಕ್ಕಂದಿನಿಂದಲೂ ನಾಯಕತ್ವ ವಹಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದ ನಾನು ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಯೂನಿಯನ್, ಚುನಾವಣೆ ಎಂದು ಓಡಾಡುವಾಗ ಗೋಪಾಲಕೃಷ್ಣ ಗುರುಗಳು ನನಗೆ ಟಿ.ಸಿ. ಕೊಟ್ಟು ಕಳುಹಿಸಿದ್ದರು. ಅದೇ ಶಾಲೆಯಲ್ಲಿ ನನ್ನನ್ನು ಓದಿಸಬೇಕೆಂದಿದ್ದ ನನ್ನ ತಂದೆ-ತಾಯಿಗೆ ಬೇಸರ ವಾಯಿತು. ನನಗೂ ಸಿಟ್ಟಿತ್ತು. ಬಳಿಕ ಕಾರ್ಮಲ್ ಸ್ಕೂಲ್ ಸೇರಿದೆ. ನನ್ನ ತುಂಟತನಗಳ ಬಗ್ಗೆ ಈಗಲೂ ಪಾರ್ವತಿ ಟೀಚರ್ ನೆನಪಿಸಿಕೊಳ್ಳುತ್ತಾರೆ. ಪ್ರೌಢಶಾಲೆಗೆ ವಿದ್ಯಾವರ್ಧಕ ಸೇರಿದೆ. ಗುರುಗಳಾದ ಡಾ| ಗೋಪಾಲಕೃಷ್ಣ ಅವರು ದೊಡ್ಡ ಶಿಕ್ಷಣ ತಜ್ಞರು. ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ನನ್ನ ಬದುಕಿನಲ್ಲಿ ಎದುರಾದ ನಾಲ್ವರು ಶಿಕ್ಷಕರಿಗೆ ನಮನ
ಪ್ರತಿಯೊಬ್ಬ ಶಿಕ್ಷಕರು ನನ್ನ ಕಲಿಕಾ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಶಿಕ್ಷಣ ಪಡೆಯುವಾಗ ಭೌತಶಾಸ್ತ್ರ ಶಿಕ್ಷಕರಾಗಿದ್ದ ಪ್ರೊ| ಆಚಾರ್ ಅವರ ಪ್ರೋತ್ಸಾಹದಿಂದ ದ್ವಿತೀಯ ಪಿಯುಸಿನಲ್ಲಿ ರ್‍ಯಾಂಕ್ ಪಡೆದು ಎಂಬಿಬಿಎಸ್ ಸೀಟು ಪಡೆದೆ. ಆರು ತಿಂಗಳ ಬಳಿಕ ಮಣಿಪಾಲಕ್ಕೆ ವರ್ಗಾವಣೆ ಮಾಡಿಕೊಂಡ ಸಮಯದಲ್ಲಿ ಹಿಂದುಳಿದ ಪಠ್ಯಕ್ರಮವನ್ನು ರಜೆ ಅವಧಿಯಲ್ಲಿಯೂ ಪೂರ್ಣಗೊಳಿಸಲು ಮಣಿಪಾಲ ಕೆಎಂಸಿ ಡೀನ್ ಡಾ| ಕೃಷ್ಣಾ ಹಾಗೂ ಫಿಸಿಯೋಲಾಜಿಸ್ಟ್ ಪ್ರೊ| ಲಕ್ಷ್ಮೀನಾರಾಯಣ ಸಹಾಯ ಮಾಡಿದ್ದರು. ಇದರಿಂದಾಗಿ ಉತ್ತಮ ದರ್ಜೆ ಯಲ್ಲಿ ಪೂರ್ಣಗೊಳಿಸಿದೆ. ಇನ್ನು ಉನ್ನತ ಶಿಕ್ಷಣ ಅವಧಿಯಲ್ಲಿ ಅಮೆರಿಕಾದ ಡಾ| ಕೇವಿನ್ ಮಾರ್ಟಿನ್ ಅವರು 7 ವರ್ಷದಲ್ಲಿ ಮುಗಿಸಬಹುದಾದ ಅಧ್ಯಯನವನ್ನು ಕೇವಲ 4 ವರ್ಷದಲ್ಲಿ ಪೂರ್ಣಗೊಳಿಸಲು ನೆರವಾಗಿದ್ದಾರೆ. ಈ ನಾಲ್ವರು ಶಿಕ್ಷಕರಿಂದ ನಾನು ವೈದ್ಯ ವೃತ್ತಿ ಜೀವನದಲ್ಲಿ ಅತ್ಯುತ್ತಮ ಯಶಸ್ಸು ಪಡೆಯಲು ಸಾಧ್ಯವಾಗಿದೆ.
-ಡಾ| ಎಚ್. ಸುದರ್ಶನ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆ, ಬೆಂಗಳೂರು.
ಪ್ರತೀ ಹಂತದಲ್ಲೂ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಗುರುವಂದನೆ
ನನ್ನ ಪ್ರಾಥಮಿಕ ಓದು ಚಿಂತಾಮಣಿಯ ಕಿಶೋರ ವಿದ್ಯಾ ಭವನದಲ್ಲಿ ಆರಂಭ. ಪ್ರಾಥಮಿಕ ಶಾಲೆಯಲ್ಲಿ ನಮ್ಮನ್ನು ಮೊದಲಿಗೆ ತಿದ್ದಿ ತೀಡಿ ಹುರಿಗೊಳಿಸಿದವರು ಪ್ರಭಾಕರ್ ಟೀಚರ್.., ಆಗಿನ ಸಮಯದಲ್ಲಿ ಅವರೇ ನನಗೆ ಆದರ್ಶ. ಅವರು ನಮ್ಮ ಕುತೂಹಲಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿ ನಮ್ಮನ್ನು ಓದಿನ ಚಟುವಟಿಕೆಗೆ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿತು. ಆನಂತರ ನಾನು ಪ್ರೌಢಶಾಲೆ ಎಂಟನೇ ತರಗತಿಗೆ ಮುದ್ದೇನಹಳ್ಳಿ ಶ್ರೀಸತ್ಯಸಾಯಿ ಲೋಕಸೇವಾ ಶಾಲೆಯಲ್ಲಿ ಸೇರಿದೆ. ಅಲ್ಲಿ ನನ್ನನ್ನು ಆಕರ್ಷಿಸಿದ ಶಿಕ್ಷಕರು ಎಂದರೆ ವಸಂತ್ ರಾಜ್. ಪ್ರೌಢಾವಸ್ಥೆಯಲ್ಲಿದ್ದ ನನ್ನಲ್ಲಿ ಮುಂದಿನ ಶಿಕ್ಷಣದ ಭವಿಷ್ಯದ ಬಗ್ಗೆ, ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದವರು. ನಾನು ಪಿಯುಗೆ ಬಂದದ್ದು ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜು. ಅಲ್ಲಿನ ವಾತಾವರಣ, ಶಿಕ್ಷಣ ಶೈಲಿ ನನ್ನನ್ನು ಬೆರಗುಗೊಳಿಸಿತ್ತು. ಅದಕ್ಕೆ ಮುಖ್ಯ ಕಾರಣ ಶಿಕ್ಷಣ ತಜ್ಞರು, ಗಾಂಧಿವಾದಿಗಳು ಆಗಿದ್ದ ದಿವಂಗತ ಎಚ್. ನರಸಿಂಹಯ್ಯನವರು. ಅವರ ಬದುಕಿನ ಶೈಲಿ ನಮ್ಮನ್ನು ನಮಗೆ ಗೊತ್ತಿಲ್ಲದಂತೆ ಪ್ರೇರೇಪಿಸಿತ್ತು. ಪಿಯುಸಿ ಮುಗಿಸಿ ನಾನು ಬೆಂಗಳೂರು ಡೆಂಟಲ್ ಕಾಲೇಜ್ ಸೇರಿದಾಗ ಆಕರ್ಷಿಸಿದವರೆಂದರೆ ಆಗ ನಮಗೆ ಪೊ›ಫೆಸರ್ ಆಗಿದ್ದ ರಮಾನಂದ ಶೆಟ್ಟಿ ಅವರು ನೀಡಿದ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದಾಗಿಯೇ ಡೆಂಟಲ್ ಸರ್ಜರಿಯಲ್ಲಿ ನಾನು ಸ್ನಾತಕೋತ್ತರ ಪದವಿ ಪಡೆಯುವಂತಾಗಿದ್ದು ಎನ್ನಬೇಕು. ಹೀಗೆ ನನ್ನ ಶಿಕ್ಷಣ ವ್ಯವಸ್ಥೆಯ ಪ್ರತೀ ಹಂತದಲ್ಲೂ ಈ ಮಹನೀಯ ಗುರುಗಳು ನನಗೆ ಪ್ರೇರಣಾ ಶಕ್ತಿಯಾದರೂ ಇವರುಗಳ ಮಾರ್ಗದರ್ಶನದಿಂದಾಗಿಯೇ ನನ್ನ ವಿದ್ಯಾರ್ಥಿ ಜೀವನ ಭಿನ್ನ ಅನುಭವ ನೀಡಿತು. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸುತ್ತೇನೆ.
-ಡಾ| ಎಂ.ಸಿ.ಸುಧಾಕರ,ಉನ್ನತ ಶಿಕ್ಷಣ ಸಚಿವರು
ರಿಟೈರ್ಡ್ ಆದ್ರೂ ಗಣಿತ ಹೇಳಿಕೊಟ್ಟ ಕಾರಂತ ಮೇಷ್ಟ್ರನ್ನ ಯಾವತ್ತು ಮರೆಯಲಾರೆ
ನನ್ನ ಜೀವನದಲ್ಲಿ ಸಿಕ್ಕಂಥ ಕೆಲವು ಗುರುಗಳು ಇಂದಿಗೂ ಗುರುತಾಗಿ ಉಳಿದಿದ್ದಾರೆ. ನಾನು ಎಸೆಸೆಲ್ಸಿ ಓದುವಾಗ ಗಣಿತದಲ್ಲಿ ತುಂಬ ಹಿಂದೆ ಉಳಿಯುತ್ತಿದ್ದೆ. ಅಂಥ ಸಮಯದಲ್ಲಿ ರಿಟೈರ್ಡ್ ಆಗಿದ್ರೂ ಕಾರಂತ ಮೇಷ್ಟ್ರು ನಮಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳಿಗೆ ಸರಳವಾಗಿ, ನಿಸ್ವಾರ್ಥವಾಗಿ ಕಲಿಸುತ್ತಿದ್ದ ಅವರು, ಗಣಿತ ಅಂದ್ರೆ ಕಬ್ಬಿಣದ ಕಡಲೆ ಅಂಥ ಭಾವಿಸುತ್ತಿದ್ದ, ನಮ್ಮಂಥ ದಡ್ಡರಿಗೂ ಗಣಿತವನ್ನು ಅರ್ಥವಾಗುವಂತೆ ಹೇಳಿಕೊಟ್ಟು ನಮ್ಮನ್ನು ಪಾಸ್ ಆಗುವಂತೆ ಮಾಡಿದ್ದರು. ಇನ್ನು ಬೆಂಗಳೂರು ಬಿ.ಎಚ್.ಎಸ್ ಕಾಲೇಜಿಗೆ ಬಂದ ಮೇಲೆ ನನ್ನ ಜೀವನದಲ್ಲಿ ನನ್ನ ಮೇಲೆ ತುಂಬ ಪ್ರಭಾವ ಬೀರಿದವರು ಪಿ.ಎಂ.ಟಿ, ಆರ್.ಪಿ ಉಮಾಶಂಕರ್ ಎಂಬ ಇಬ್ಬರು ಲಕ್ಚರರ್. ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದ, ಕಾಲೇಜಿನಲ್ಲಿದ್ದ ನಮ್ಮಂಥ ಯುವ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುತ್ತಿದ್ದ ಇವರು, ಕೇವಲ ಪಾಠ ಮಾತ್ರವಲ್ಲದೆ, ರಂಗಭೂಮಿ ಚಟುವಟಿಕೆಗಳಲ್ಲೂ ನನ್ನನ್ನು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಸಹಾಯ ಮಾಡಿದ್ದರು. ನಮ್ಮ ಗೆಲುವನ್ನು, ಏಳಿಗೆಯನ್ನು ದೂರದಲ್ಲಿಯೇ ನಿಂತು ಖುಷಿಪಡುವ ಇವರು ಸದಾ ಕಾಲ ಮನಸ್ಸಿನಲ್ಲಿ ಉಳಿಯುತ್ತಾರೆ.
-ರಿಷಭ್ ಶೆಟ್ಟಿ, ನಟ, ನಿರ್ದೇಶಕ
ನನ್ನ ತಾಯಿ ನನ್ನ ಆದರ್ಶ ಗುರು
ನನಗೆ ಮೊದಲು ಅಕ್ಷರ ಕಲಿಸಿದ ಗುರುಗಳು ನನ್ನ ತಾಯಿ. ಅಕ್ಷರದ ಜತೆಗೆ ಜಗತ್ತಿನ ಒಳ್ಳೆಯದನ್ನು ನನ್ನ ಮನದಾಳದಲ್ಲಿ ಬೇರೂರುವಂತೆ ಮಾಡಿದ್ದು ನನ್ನ ತಾಯಿ. ಅವಳು ನನ್ನ ಆದರ್ಶ ಗುರು.
ಒಂದು ಸಾರಿ ನಾನು ವಿವೇಕಾನಂದರ ಪುಸ್ತಕ ಓದಿ ತಿಳಿಯದಿದ್ದಾಗ ನಿನ್ನ ವಯಸ್ಸಿಗೆ ಮೀರಿ ಓದುತ್ತಿರುವೆ ಎಂದು ತಿಳಿ ಹೇಳಿ ಅದರ ಅರ್ಥವನ್ನು ಅತ್ಯಂತ ಸರಳವಾಗಿ ನನಗೆ ತಿಳಿ ಹೇಳಿರುವುದು ಇಂದೂ ನನ್ನ ಮನದಾಳದಲ್ಲಿ ಅಚ್ಚಳಿಯದೇ ಉಳಿದಿದೆ.
ನನ್ನ ಪ್ರಾಥಮಿಕ ಶಾಲೆಯಲ್ಲಿ ನನಗೆ ಗಣಿತ ಕಲಿಸಿದ ಪದ್ಮಾ ಟೀಚರ್, ಗಣಿತ ಮತ್ತು ಸಂಖ್ಯಾಶಾಸ್ತ್ರದ ಭದ್ರ ಬುನಾದಿ ಹಾಕಿದ್ದಾರೆ. ದೈಹಿಕ ಶಿಕ್ಷಣ ಒದಗಿಸಿರುವ ನಾಯ್ಡು ಮಾಸ್ತರನ ನಾನು ಎಂದೂ ಮರೆಯುವುದಿಲ್ಲ. ಅದೇ ರೀತಿ ನಮಗೆ ಕಾಲೇಜಿನಲ್ಲಿ ಗಣಿತವನ್ನು ಅತ್ಯಂತ ಆಕರ್ಷಕವಾಗಿ ಹೇಳಿ ಜೀವನದ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ಮೂಡಿಸಿರುವ ಪಿ.ಸಿ. ಜಾಬಿನ್ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಬೆಲ್ಲದ ನನಗೆ ಆದರ್ಶ ಗುರುಗಳು.
ಎಂಜಿನಿಯರಿಂಗ್ ಸರಳವಾಗಿ ಹೇಳಿಕೊಟ್ಟ ಧೊತರದ ಸರ್ ಅವರು ನನ್ನ ವೃತ್ತಿ ಜೀವನಕ್ಕೆ ಮಾರ್ಗದರ್ಶಕರು. ಟೆಲ್ಕೊದಲ್ಲಿ ಕೆಲಸ ಮಾಡುವಾಗ ನಮ್ಮ ಟ್ರೇನಿಂಗ್ ಮುಖ್ಯಸ್ಥರಾದ ಡಾ| ಮದನ ಶೆಟ್ಟಿ, ಸಿಂಬಾಸಿಸ್ ಮ್ಯಾನೇಜ್ಮೆಂಟ್ ನ ಮುಖ್ಯಸ್ಥರಾದ ಜಾರ್ಜ್ ಜೂಡಾ ಅವರ ವಿಚಾರಗಳು ನನ್ನ ಮನದಾಳದಲ್ಲಿ ಆಳವಾಗಿ ಬೇರೂರಿದೆ.ಹೀಗೆ ಎಲ್ಲ ಹಂತದಲ್ಲಿ ಎಲ್ಲ ಗುರುಗಳ ಪಾತ್ರ ಮಹತ್ವದ್ದಾಗಿದೆ. ಅದನ್ನು ಸ್ಮರಿಸಿದರೆ ನಮ್ಮ ಜೀವನದಲ್ಲಿ ಆದರ್ಶವಾದಂತಹ ಬದುಕು ನಡೆಸಲು ಸುಲಭವಾಗುತ್ತದೆ ಎನ್ನುವುದು ನನ್ನ ಪ್ರಬಲವಾದ ನಂಬಿಕೆ
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ಸಮಯಪಾಲನೆ ಹೇಳಿಕೊಟ್ಟ ಹೊನ್ನಪ್ಪಗೌಡ ಟೀಚರ್
ಕೇರಳ -ಕರ್ನಾಟಕ ಗಡಿ ಭಾಗ ಕೇರಳದ ವಿಷ್ಣುಮೂರ್ತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಶಿಕ್ಷಣ ಪಡೆದುಕೊಂಡಿದ್ದೇನೆ. ಕಡು ಬಡತನದ ಜೀವನ ಎರಡು ಜತೆ ಬಟ್ಟೆಯಲ್ಲಿ ವರ್ಷ ಪೂರ್ತಿ ತರಗತಿಗೆ ತೆರಳಬೇಕಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ಹೊನ್ನಪ್ಪ ಗೌಡ ಅವರು ಶಿಸ್ತು, ಸ್ವಚ್ಛತೆ, ಸಮಯ ಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.ಬಟ್ಟೆಯ ಸ್ವತ್ಛತೆ ಬಗ್ಗೆ ನಿತ್ಯ ಪರಿಶೀಲನೆ ನಡೆಸುತ್ತಿದ್ದರು. ತರಗತಿಯಲ್ಲಿ ಶಿಸ್ತು ಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಎಲೆಯಲ್ಲಿ ಕಟ್ಟಿಕೊಂಡು ಹೋಗುತ್ತಿದ್ದ ಊಟ ಸ್ವಲ್ಪವೂ ಕೆಳಗೆ ಚೆಲ್ಲದಂತೆ ಎಚ್ಚರಿಕೆ ನೀಡುತ್ತಿದ್ದರು. ಈ ವೇಳೆ ಅನ್ನ ಪ್ರಾಮುಖ್ಯತೆಯನ್ನು ಹೇಳುತ್ತಿದ್ದರು. ಅಂದು ಅವರು ಪ್ರಾಥಮಿಕ ಹಂತದಲ್ಲಿ ನೀಡಿದ ಶಿಕ್ಷಣ ನನಗೆ ರಾಜಕೀಯ ಬದುಕಿನ ಭದ್ರ ಬುನಾದಿಗೆ ದಾರಿದೀಪವಾಗಿದೆ.
-ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.