Teacher’s Day; ಆದರ್ಶ ಶಿಕ್ಷಕರ ಸ್ವಯಂ ಪ್ರಾಯಶ್ಚಿತ್ತ
Team Udayavani, Sep 2, 2023, 6:30 AM IST
ಎರಡನೆಯ ರಾಷ್ಟ್ರಪತಿಯಾದ ಡಾ| ಎಸ್.ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ (ಸೆ. 5) ಆಚರಿಸಲಾಗುತ್ತಿದೆ. ಆದರ್ಶ ಶಿಕ್ಷಕರಾಗಿದ್ದ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು ಎಂಬುದು ರಾಜ್ಯಕ್ಕೆ ಹೆಮ್ಮೆ. ಹೆಸರಾಂತ ಸಾಹಿತಿಗಳಿಬ್ಬರು ಕಲಿಯುತ್ತಿದ್ದಾಗ ಅವರು ಮಾರು ಹೋದ ಇಬ್ಬರು ಶಿಕ್ಷಕರ ಆದರ್ಶವನ್ನು ಇಲ್ಲಿ ಉಲ್ಲೇಖೀಸಲಾಗಿದೆ. ಮನುಷ್ಯ ತಪ್ಪೆಸಗುವುದು ಸಹಜ. ಆತ್ಮಾವಲೋಕನ ಮಾಡಿಕೊಂಡು ತನ್ನದು ತಪ್ಪೆಂದು ಗೋಚರಿಸಿದಾಗ ಅದರ ಬಗೆಗೆ ಪಶ್ಚಾತ್ತಾಪಪಟ್ಟು, ಅದಕ್ಕೆ ಸರಿಯಾದ ಬೆಲೆಯನ್ನು ತಾನೇ ತೆರುವುದು ಆದರ್ಶ ವ್ಯಕ್ತಿಗಳ ವೈಶಿಷ್ಟé. ಇಂತಹ ಶಿಕ್ಷಕರೇ ನೂರಾರು, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಕರಾಗಿ ದೇಶಾಭ್ಯುದಯಕ್ಕೆ ಪರೋಕ್ಷವಾಗಿ ಕಾರಣರಾಗುತ್ತಾರೆ.
ತನ್ನ ಕೆನ್ನೆಗೆ
ತನ್ನದೇ ಏಟು
ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಮೇಲೆ ಭಕ್ತಿ ಇದ್ದಷ್ಟು ಸ್ವಾತಂತ್ರ್ಯ ಸಿಕ್ಕಿದ ಬಳಿಕ ಇಲ್ಲ. ಸೌಲಭ್ಯ ಪಡೆದ ಬಳಿಕ ಸೌಲಭ್ಯ ಪಡೆಯುವ ಪೂರ್ವದಲ್ಲಿದ್ದ ಮನಃಸ್ಥಿತಿ ಇರುವುದಿಲ್ಲವಲ್ಲ? ಈ ನೀತಿ ಸಾರ್ವತ್ರಿಕವಾಗಿರಬಹುದು ಎಂದು ಅನಿಸುತ್ತದೆ. ಶ್ರೀನಿವಾಸಮೂರ್ತಿ ಎಂಬ ಶಾಲಾ ಶಿಕ್ಷಕರೊಬ್ಬರು ಗಾಂಧೀಜಿಯ ಪರಮಭಕ್ತರು, ಆದರೆ “ಒಂದು ಕೆನ್ನೆಗೆ ಬಾರಿಸಿದರೆ, ಇನ್ನೊಂದು ಕೆನ್ನೆ ತೋರಿಸು’ ಎಂಬ ನೀತಿಯವರಲ್ಲ. ತಾನು ಮಾಡಿದ ತಪ್ಪಿಗೆ ತನ್ನ ಕೆನ್ನೆಗೇ ಪೆಟ್ಟು ಕೊಟ್ಟವರು. ಬಾಲ್ಯದಲ್ಲಿ ತಮ್ಮಂತೆಯೇ ಸಾಮಾನ್ಯ ವ್ಯಕ್ತಿಯಾಗಿದ್ದ ಗಾಂಧೀಜಿ ಸತ್ಯ, ಅಹಿಂಸೆಗಳ ದಾರಿ ತುಳಿದು ಅವತಾರ ಪುರುಷರೆನಿಸಿದರು ಎಂದು ತರಗತಿಗಳಲ್ಲಿ ಆಗಾಗ್ಗೆ ಹೇಳುತ್ತಿದ್ದರು. ಗಾಂಧೀಜಿ ಮೃತಪಟ್ಟಾಗ ತಲೆಗೂದಲನ್ನು ಪೂರ್ತಿ ತೆಗೆಸಿದ್ದರು. ಇವರು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಕನ್ನಡ ಪಾಠ ಮಾಡುತ್ತಿದ್ದರು. ಇವೆರಡೂ ಪಾಠಗಳನ್ನು ಪ್ರತ್ಯೇಕ ನೋಟ್ ಪುಸ್ತಕಗಳಲ್ಲಿ ಬರೆದು ತರಲು ಹೇಳುತ್ತಿದ್ದರು. ಒಬ್ಬ ವಿದ್ಯಾರ್ಥಿ ಬರೆದುಕೊಂಡು ಹೋಗಿರಲಿಲ್ಲ. ಆತನನ್ನು ಶ್ರೀನಿವಾಸಮೂರ್ತಿಗಳು ಬೆಂಚಿನ ಮೇಲೆ ನಿಲ್ಲಿಸಿ (ಹಿಂದಿನ ಕಾಲದಲ್ಲಿ ಇದೊಂದು ಬಗೆಯ ಶಿಕ್ಷೆಯಾಗಿತ್ತು) “ಛೀ, ಸೋಮಾರಿ, ನೀನು ತರಗತಿಯಲ್ಲಿ ಕೂರುವುದಕ್ಕೆ ಅರ್ಹನಲ್ಲ’ ಎಂದು ಹೇಳಿ ಕೆನ್ನೆಗೆ ಹೊಡೆದರು. ನೋವು, ಅವಮಾನಗಳಿಂದ ವಿದ್ಯಾರ್ಥಿ ಕಣ್ಣಿನಲ್ಲಿ ನೀರು ಉಕ್ಕಿತು. “ಅಳುವುದಕ್ಕೆ ಬರತ್ತೆ, ಬರೆದು ತರಲು ಬರುವುದಿಲ್ಲವಲ್ಲವೆ?’ ಗದರಿದರು ಶ್ರೀನಿವಾಸಮೂರ್ತಿ.
“ಸಾರ್, ನಾನು ಬಡವ. ಪುಸ್ತಕ ಕೊಳ್ಳಲು ನನ್ನ ಬಳಿ ದುಡ್ಡಿಲ್ಲ. ಇದ್ದಿದ್ದರೆ ಖಂಡಿತ ಮೊದಲ ದಿನವೇ ಬರೆದು ತರುತ್ತಿದ್ದೆ’ ಎಂದು ವಿದ್ಯಾರ್ಥಿ ಹೇಳಿದಾಗ ಶ್ರೀನಿವಾಸಮೂರ್ತಿ ಪೂರ್ತಿ ಕರಗಿ ಹೋದರು. “ಹಾಗಂತ ನನಗೆ ಮೊದಲೇ ಯಾಕೆ ಹೇಳಲಿಲ್ಲ’ ಎಂದು ಹೇಳಿ ಕುಳಿತುಕೊಳ್ಳುವಂತೆ ತಿಳಿಸಿದರು. ಮಾರನೆಯ ದಿನ ತರಗತಿಗೆ ಬರುವಾಗ ಎರಡು ನೋಟ್ ಪುಸ್ತಕಗಳನ್ನು ತಂದು ಆ ವಿದ್ಯಾರ್ಥಿಗೆ ಕೊಟ್ಟರು. ಮರುದಿನವೇ ವಿದ್ಯಾರ್ಥಿ ಪಾಠದ ಭಾಗಗಳನ್ನು ಬರೆದುಕೊಂಡು ಹೋಗಿ ತೋರಿಸಿದ. ಅದನ್ನು ನೋಡಿದ ಶ್ರೀನಿವಾಸಮೂರ್ತಿಗಳು “ಭೇಷ್, ಅಂದವಾಗಿ ಒಂದೂ ತಪ್ಪಿಲ್ಲದೆ ಬರೆದಿದ್ದೀ. ನೀನು ಒಳ್ಳೆಯ ವಿದ್ಯಾರ್ಥಿ. ಗೊತ್ತಿಲ್ಲದೆ ನಿನಗೆ ಹೊಡೆದೆ, ತಪ್ಪು’ ಎಂದು ಹೇಳಿ, ತರಗತಿಯಲ್ಲಿ ಎಲ್ಲರೆದುರಿಗೇ ತಾವೇ ತಮ್ಮ ಕೆನ್ನೆಗೆ ಏಟು ಬಿಗಿದುಕೊಂಡರು! ಅದನ್ನು ನೋಡಿ ಇಡೀ ತರಗತಿ ಬೆರಗಾಗಿ ಹೋಯಿತು. ಅಂದಿನಿಂದ ಶ್ರೀನಿವಾಸಮೂರ್ತಿ- ವಿದ್ಯಾರ್ಥಿ ಅಚ್ಚುಮೆಚ್ಚಿನವರಾದರು. ಈ ವಿದ್ಯಾರ್ಥಿಯೇ ಹೆಸರಾಂತ ಕವಿ, ಸಾಹಿತಿಯಾಗಿ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಹೆಸರಾದ ಮೂಲತಃ ಉಡುಪಿ ಜಿಲ್ಲೆ ಶಿರಿಯಾರ ಸಮೀಪದ ನೈಲಾಡಿಯವರಾದ ಡಾ| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (1936-2021). ಇವರು ಶಿವಮೊಗ್ಗದ ಪ್ರೌಢಶಾಲೆಯಲ್ಲಿ ಓದುತ್ತಿರುವಾಗ 1947-48ರಲ್ಲಿ ನಡೆದ ಘಟನೆ ಇದು.
ನಶ್ಯಕ್ಕೂ, ಬೆಳ್ಳಿಯ
ಡಬ್ಬಿಗೂ ವಿದಾಯ
ಅಳಸಿಂಗಾಚಾರ್ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಇವರ ಮೈಬಣ್ಣ ಕೆಂಪಗೆ ಸೇಬಿನಂತೆ ಇದ್ದ ಕಾರಣ ಬ್ರಿಟಿಷರ ರೀತಿ ಕಾಣುತ್ತಿದ್ದರಿಂದಾಗಿ ಜನರು ಪಾದ್ರಿಸಾಹೇಬರು ಎಂದು ಕರೆಯುತ್ತಿದ್ದರು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ವಿಚಾರವಲ್ಲದೆ ಸತ್ಯ, ಧರ್ಮ, ನೀತಿ, ದೇಶಪ್ರೇಮ, ಸೇವೆ ಮಹತ್ವ ಇವುಗಳನ್ನೆಲ್ಲ ತಿಳಿಸಿ ಅಂತಹ ಸತ್ಕಾರ್ಯಕ್ಕೆ ಪ್ರೇರಣೆ ನೀಡುತ್ತಿದ್ದರು. ಅವರಲ್ಲಿದ್ದ ದೋಷವೆಂದರೆ ತುಸು ಮುಂಗೋಪ ಮತ್ತು ನಶ್ಯ ಹಾಕುವುದು. ನಶ್ಯದ ಪುಡಿ ಇಟ್ಟುಕೊಳ್ಳಲು ಕುಸುರಿ ಕಲೆ ಇದ್ದ ಬೆಳ್ಳಿಯ ಡಬ್ಬಿ ಇತ್ತು. ಆ ಬೆಳ್ಳಿ ಡಬ್ಬಿಯಿಂದ ನಶ್ಯ ಹಾಕುವುದೇ ಒಂದು ವೈಭವ. ನಶ್ಯಕ್ಕಿಂತ ಡಬ್ಬಿಗೂ ಪ್ರಾಶಸ್ತ್ಯ. ವಿಶೇಷ ಪ್ರೀತಿಯ ಗುರುತಾಗಿ ನಿತ್ಯ ಹಲವು ಜನರು ಬಂದು ನಶ್ಯ ತೆಗೆದುಕೊಳ್ಳುತ್ತಿದ್ದರು.
ಒಂದು ದಿನ ನಶ್ಯದ ಡಬ್ಬಿ ಕಣ್ಣಿಗೆ ಬೀಳಲಿಲ್ಲ. ಮನೆ, ಶಾಲೆಯಲ್ಲಿ ಹತ್ತಾರು ಬಾರಿ ಹುಡುಕಿದರು. ಬೆಳ್ಳಿಯ ಸುಂದರ ಡಬ್ಬಿಯಾದ ಕಾರಣ ವಿದ್ಯಾರ್ಥಿಗಳು ಯಾರೋ ಕದ್ದಿರಬೇಕೆಂದು ತಿಳಿದು ವಿದ್ಯಾರ್ಥಿಗಳನ್ನೆಲ್ಲ ಪರಿಪರಿಯಾಗಿ ಕೇಳಿದರೂ ಯಾರೂ ಒಪ್ಪಿಕೊಳ್ಳಲಿಲ್ಲ. ಸಿಟ್ಟುಗೊಂಡ ಪಾದ್ರಿ ಸಾಹೇಬರು ವಿದ್ಯಾರ್ಥಿಗಳಿಗೆಲ್ಲರಿಗೂ ಏಟು ಕೊಟ್ಟರು.
20 ದಿನಗಳ ಅನಂತರ ಮೇಜಿನ ಬದಿಯಲ್ಲಿ ಡಬ್ಬಿ ಬಿದ್ದದ್ದು ಕಣ್ಣಿಗೆ ಬಿತ್ತು. ತಮ್ಮ ದುಡುಕಿನಿಂದ ತಪ್ಪಾಗಿ ಭಾವಿಸಿ, ವಿದ್ಯಾರ್ಥಿಗಳನ್ನು ಹೊಡೆದುದಕ್ಕೆ ಖನ್ನರಾದರು. ಮುಂದಿನ ರವಿವಾರ ಬೆಳಗ್ಗೆ ಸ್ಥಳೀಯ ದೇವಸ್ಥಾನದ ಹಿಂದಿನ ತೋಪಿಗೆ ವಿದ್ಯಾರ್ಥಿಗಳೆಲ್ಲ ಬರಬೇಕು ಎಂದು ಕರೆಕೊಟ್ಟರು. ವಿದ್ಯಾರ್ಥಿಗಳಿಗೆ ಸೊಗಸಾದ ಕೇಸರಿಬಾತು, ಅಂಬೊಡೆ ತಿನ್ನಲು ಕೊಟ್ಟು ವಿದ್ಯಾರ್ಥಿಗಳನ್ನೆಲ್ಲ ಸುತ್ತ ನಿಲ್ಲಿಸಿ “ವಿದ್ಯಾರ್ಥಿಗಳೇ, ನನ್ನ ನಶ್ಯ ಡಬ್ಬಿ ಹೋಯಿತೆಂದು ನಿಮ್ಮೆಲ್ಲರನ್ನು ಅನುಮಾನಿಸಿ ಶಿಕ್ಷೆ ಕೊಟ್ಟೆ. ಅದು ನನ್ನ ತಪ್ಪು. ಆ ಡಬ್ಬಿಯನ್ನು ಮೇಜಿನ ಮೇಲಿಟ್ಟಾಗ ಅದು ಹಿಂದಕ್ಕೆ ಹೋಗಿತ್ತು. ಇನ್ನೂ ನಿಧಾನವಾಗಿ ಹುಡುಕಿದ್ದರೆ ಸಿಕ್ಕುತ್ತಿತ್ತು. ನಾನು ಪೂರ್ವಗ್ರಹಪೀಡಿತನಾಗಿ ದುಡುಕಿದೆ. ನೀವು ವಿದ್ಯಾರ್ಥಿಗಳಾದರೂ ನಿಮ್ಮಲ್ಲಿ ಕ್ಷಮಾಪಣೆ ಕೇಳಿಕೊಳ್ಳುತ್ತೇನೆ. ಇಷ್ಟೆಲ್ಲ ಅನರ್ಥಕ್ಕೆ ಕಾರಣವಾದ ನಶ್ಯದ ಚಟವನ್ನು ಇವತ್ತಿನಿಂದ ಬಿಟ್ಟೆ. ಈ ಡಬ್ಬಿ ಯನ್ನೂ ಬಿಟ್ಟೆ’ ಎಂದು ಹೇಳಿ ಆ ಡಬ್ಬಿಯನ್ನು ನೀರಿನ ಮಡುವಿಗೆ ಎಸೆದರು. ಅನಂತರ ಅವರು ನಶ್ಯವನ್ನು ಮುಟ್ಟಲಿಲ್ಲ. ಅವರ ಮನೆಗೆ ನಶ್ಯ ಅಭ್ಯಾಸವಾಗಿದ್ದ ಮಹನೀಯರು ಬರುತ್ತಲೇ ಇದ್ದರು. ಕೆಲವರಿಗೆ ತುಂಬ ಕೋಪವೇ ಬಂತು. “ಅವರು ಹಾಕಿಕೊಳ್ಳದೆ ಇದ್ದರೆ ಬೇಡ. ನಮಗೆ ಯಾಕೆ ತಪ್ಪಿಸಬೇಕು’ ಎಂದು ಕೂಗಾಡಿದರಂತೆ. ಇದು ಹಾಸನ ಜಿಲ್ಲೆ ಗೊರೂರಿನಲ್ಲಿ ಸುಮಾರು 1915ರಲ್ಲಿ ನಡೆದ ಘಟನೆ. ಈ ವಿವರಗಳನ್ನು ದಾಖಲಿಸಿದವರು ಹೆಸರಾಂತ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ (1904-1991). “ನಾನು ಪ್ರಾಥಮಿಕ ಶಾಲೆಗೆ ಸೇರುವಾಗಲೇ ಅಳಸಿಂ ಗಾಚಾರ್ ನಿವೃತ್ತರಾಗಿದ್ದರು. ಅವರ ಪಾಠ ಹೇಳಿಸಿಕೊಳ್ಳುವ ಯೋಗ ನನಗೆ ಬರಲಿಲ್ಲ’ ಎಂದು ಗೊರೂರು ಬೇಸರ ವ್ಯಕ್ತಪಡಿಸಿದ್ದರು.
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.