ಮಹಾ ಮೈತ್ರಿಯ ಮೌನರಾಗ
Team Udayavani, May 25, 2019, 5:00 AM IST
ನಿಜ ಹೇಳಬೇಕೆಂದರೆ, ಬಿಜೆಪಿಯ ಪರಿಣಾಮಕಾರಿ ತಂತ್ರಗಾರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಲೆಯ ಮುಂದೆ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ಇಷ್ಟು ಹೀನಾಯವಾಗಿ ಸೋಲಬೇಕಿರಲಿಲ್ಲ. ಅವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಘಟಾನುಘಟಿ ನಾಯಕರಿದ್ದರು. ಅವರಿಗೆ ಕನಿಷ್ಟವೆಂದರೂ ಮೂರು- ನಾಲ್ಕು ದಶಕಗಳ ರಾಜಕೀಯ ಅನುಭವವಿತ್ತು. ಸಾಲದ್ದಕ್ಕೆ ತಮ್ಮ ತಮ್ಮ ರಾಜ್ಯಗಳಲ್ಲಿ ಅಗಾಧ ಪ್ರಭಾವ ಅಥವಾ ವರ್ಚಸ್ಸು ಹೊಂದಿದವರು ಅವರಾಗಿದ್ದರು. ಆದರೆ, ಅತಿಯಾದ ಆತ್ಮವಿಶ್ವಾಸ ಹಾಗೂ ಎಸಗಿದ ಕೆಲವು ತಪ್ಪುಗಳು ಆವರ ಆಸೆಯನ್ನು ಹುಸಿಯಾಗಿಸಿದೆ.
ಮೋದಿ ಅಲೆ ಮೆಟ್ಟಲು ಹೋಗಿ ಅತಂತ್ರಗೊಂಡವರ ಕತೆ: ಕಾಳಿದಾಸ, ಮಹಾಕವಿ ಆಗುವ ಮೊದಲು ಕುರಿ ಕಾಯುತ್ತಿದ್ದವ. ಅದೊಂದು ದಿನ ಆತ ಮರದ ಕೊಂಬೆಯನ್ನು ಕತ್ತರಿಸುವಾಗ, ತಾನು ಕತ್ತರಿಸಿದ ಮೇಲೆ ಮುರಿದು ಬೀಳುವ ಕೊಂಬೆಯ ಭಾಗದ ಮೇಲೆಯೇ ಕೂತು ಆತ ಆ ಕೊಂಬೆಯನ್ನು ಕತ್ತರಿಸುತ್ತಿದ್ದ. ಪರಿಣಾಮ, ಆ ಕೊಂಬೆಯು ಮುರಿದು, ಅದರೊಂದಿಗೆ ಆತನೂ ಮರದಿಂದ ಕೆಳಗೆ ಬಿದ್ದ. 2019ರ ಮಹಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಮಾಡಿರುವ ಕಳಪೆ ಸಾಧನೆಯನ್ನು ನೋಡಿದರೆ ಕಾಳಿದಾಸನ ಈ ದೃಷ್ಟಾಂತ ನೆನಪಾಗುತ್ತದೆ.
ನಮ್ಮಲ್ಲಿ ದಶಕಗಳಿಂದಲೂ ಚುನಾವಣೆಗಳನ್ನು ಎದುರಿಸುವ ಹಾಗೂ ಜನರ ಮೇಲೆ ಪ್ರಭಾವ ಬೀರುವ ತಂತ್ರಗಾರಿಕೆಯ ಒಂದು ನಿರ್ದಿಷ್ಟ ಸಂಪ್ರದಾಯವಿದೆ. ಆದರೆ, ಆ ಎಲ್ಲಾ ಸಾಂಪ್ರದಾಯಿಕ ರಣತಂತ್ರಗಾರಿಕೆಗಳನ್ನು ಬದಲಾಯಿಸಿದ್ದು 2014ರ ಲೋಕಸಭಾ ಚುನಾವಣೆ. ಅದನ್ನು ಅರ್ಥ ಮಾಡಿಕೊಳ್ಳದ ವಿರೋಧ ಪಕ್ಷಗಳು ಆ ಚುನಾವಣೆಯಲ್ಲೇ ಬೋರಲು ಬಿದ್ದಿದ್ದವು. ಆ ಚುನಾವಣೆಯಲ್ಲಿ ಕಲಿಯದ ಪಾಠವನ್ನು ಕನಿಷ್ಟ ಈ ಚುನಾವಣೆಯಲ್ಲಾದರೂ ಅಳವಡಿಸಿಕೊಳ್ಳದ ವಿರೋಧ ಪಕ್ಷಗಳು ಸೋಲಿನ ವ್ಯೂಹದಲ್ಲಿ ಸಿಲುಕಿವೆ.
ಇದರ ಜತೆಯಲ್ಲೇ, ಚುನಾವಣಾ ಅಖಾಡಕ್ಕಿಳಿದ ನಂತರವೂ ಆ ಪಕ್ಷಗಳು ನಡೆದುಕೊಂಡ ರೀತಿ, ತೆಗೆದುಕೊಂಡ ನಿರ್ಧಾರಗಳು ಆ ಪಕ್ಷಗಳ ತೃತೀಯ ರಂಗವೊಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಅವುಗಳ ಕನಸನ್ನು ನುಚ್ಚುನೂರು ಮಾಡಿತು. ಮೋದಿ ಸರ್ಕಾರವನ್ನು ಎದುರಿಸುವಲ್ಲಿ ವಿರೋಧ ಪಕ್ಷಗಳು ಮಾಡಿದ ಆ ಐದು ಪ್ರಮುಖ ತಪ್ಪುಗಳ ಪಟ್ಟಿ ಇಲ್ಲಿದೆ. ಈ ಐದೂ ತಪ್ಪುಗಳು, ಕಾಳಿದಾಸನು ಕೊಂಬೆ ಕತ್ತರಿಸಿದಂತೆ ಮೈತ್ರಿಕೂಟ ನಿಂತಿದ್ದ ಕೊಂಬೆಗೆ ಗಾಢವಾದ ಪೆಟ್ಟುಗಳನ್ನು ನೀಡಿ ಅವರೆಲ್ಲರನ್ನೂ ಕೆಳಗೆ ಕೆಡವಿದೆ.
ಒಗ್ಗಟ್ಟಿನ ಕೊರತೆ: ಮೋದಿಯಂಥ ಪ್ರಭಾವಿ ನಾಯಕನನ್ನು ಅಥವಾ ಬಿಜೆಪಿಯಂಥ ಬಲಿಷ್ಠ ಪಕ್ಷವನ್ನು ಸೋಲಿಸಲು ತಂತ್ರಗಾರಿಕೆಗಿಂತ ಮುಖ್ಯವಾಗಿ ಬೇಕಿದ್ದದ್ದು ಒಗ್ಗಟ್ಟು ಎನ್ನುವುದನ್ನು ವಿರೋಧ ಪಕ್ಷಗಳ ನಾಯಕರು ಅರ್ಥ ಮಾಡಿಕೊಳ್ಳಲೇ ಇಲ್ಲದ್ದು ವಿಪರ್ಯಾಸ. ಮೇಲ್ನೋಟಕ್ಕೆ ಮಹಾ ಮೈತ್ರಿ ಎಂಬುದಿದ್ದರೂ, ಮಾಯಾವತಿ, ಅಖೀಲೇಶ್ ಯಾದವ್, ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಅವರುಗಳಿಗೆ ಕಾಂಗ್ರೆಸ್ ಮುಂದಾಳತ್ವದಲ್ಲಿ ಮಹಾಮೈತ್ರಿಯಾಗುವುದು ಬೇಕಿರಲಿಲ್ಲ. ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಸಿಎಂ ಆದಾಗ ಪ್ರಮಾಣ ವಚನ ವೇದಿಕೆಯ ಮೇಲೆ ಪರಸ್ಪರ ಕೈ ಕೈ ಹಿಡಿದು ತೋರಿದ ಒಗ್ಗಟ್ಟು ವಿಪಕ್ಷಗಳ ನಾಯಕರಲ್ಲಿ ಆನಂತರ ಮಾಯವಾಗಿದ್ದು ವಿಪರ್ಯಾಸ. ಒಗ್ಗಟ್ಟಿನಲ್ಲಿದ್ದ ಎನ್‌ಡಿಎಗೆ ಇದು ಮತಗಳಿಕೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಯಿತು.
ನಿರ್ಲಕ್ಷ್ಯ ಮತ್ತು ಅವಗಣನೆಯ ಪರಮಾವಧಿ: ನಮ್ಮ ದೇಶ ವೈವಿಧ್ಯಪೂರ್ಣವಾದ ರಾಜಕೀಯ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವೆಂಬುದನ್ನು ವಿಪಕ್ಷಗಳು ಅರಿಯಲೇ ಇಲ್ಲ. ಜನರ ನಾಡಿ ಮಿಡಿತ ಹೇಗಿದೆ, ಜನರ ಆಲೋಚನೆಗಳೇನು, ಸಾಮಾಜಿಕ ಜಾಲತಾಣಗಳು, ಪ್ರಚಾರ ತಂತ್ರಗಾರಿಕೆಯ ಆಧುನಿಕ ವಿಧಾನಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿ ವಿಚಾರಗಳನ್ನು ಅವು ಆಲೋಚಿಸಲೂ ಇಲ್ಲ, ಅವುಗಳನ್ನು ಅಳವಡಿಸಿಕೊಳ್ಳಲು ಮುಂದಾಗಲೂ ಇಲ್ಲ.
ಅದರ ಬದಲಿಗೆ, ಅಂಥ ವಾಜಪೇಯಿಯಂಥ ವಾಜಪೇಯಿಯವರೇ ಮತ್ತೂಂದು ಅವಧಿಗೆ ಪ್ರಧಾನಿಯಾಗಲು ಆಗಲಿಲ್ಲ. ಅಂಥ ಮುತ್ಸದ್ದಿಯ ಮುಂದೆ ಮೋದಿಯೇನು ಮಹಾ ಎಂಬ ಸಣ್ಣದೊಂದು ಅವಗಣನೆ ಅವರದಲ್ಲಿ ಭದ್ರವಾಗಿ ಬೇರೂರಿತ್ತು. 2004ರಲ್ಲಿ ಮರುಕಳಿಸಿದ ಇತಿಹಾಸವೇ ಪುನಃ ಮರುಕಳಿಸುತ್ತದೆ ಎಂಬ ಭ್ರಮೆಯಲ್ಲಿ ವಿರೋಧ ಪಕ್ಷಗಳು ತೇಲಾಡಿದರು. ಇದೂ ಸಹ ಅವರ ಸೋಲಿಗೆ ಪ್ರಮುಖವಾದ ಕಾರಣ.
ಭರವಸೆಯ ನಾಯಕನ ಗೈರು!: ಎನ್‌ಡಿಎಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರಿಗೆ ಸರಿಸಮನಾಗಂತೂ ಅಲ್ಲ, ಕನಿಷ್ಟ ಅವರ ಹತ್ತಿರಕ್ಕೆ ಬಂದು ನಿಲ್ಲುವಂಥ ಸಮಾನಾಂತರ ನಾಯಕನೊಬ್ಬನು ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಮತದಾರನಿಗೆ ಕಾಣದಿದ್ದುದೂ ಕೂಡ ಮಹಾ ಮೈತ್ರಿಗೆ ಆದ ಹಿನ್ನಡೆ ಎಂದರೆ ತಪ್ಪಾಗಲಾರದು. ಮೋದಿಯವರಾದರೋ, ನೇರಾನೇರವಾಗಿ ಅದು ಮಹಾಮೈತ್ರಿಯಲ್ಲ ಮಹಾ ಮಿಲಾವಟ್ (ಮಹಾ ಕಲಬೆರಕೆ) ಎಂದು ವಿರೋಧ ಪಕ್ಷಗಳನ್ನು ಹಂಗಿಸಿದ್ದರು. ಮಹಾ ಮೈತ್ರಿಯಲ್ಲಿ ಸಮರ್ಥ ಪ್ರಧಾನಿ ಒಬ್ಬರೂ ಇಲ್ಲ ಎಂದಿದ್ದರಲ್ಲದೆ, ಮಹಾ ಮೈತ್ರಿ ಅಧಿಕಾರಕ್ಕೆ ಬಂದರೆ, ಒಂದೊಂದು ದಿನ ಒಬ್ಬೊಬ್ಬ ಪ್ರಧಾನಿಯಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದರು.
ಇವರ ಹೇಳಿಕೆಗಳನ್ನು ತುಲನೆ ಮಾಡಿ ನೋಡಿದ ಮತದಾರನಿಗೆ ಮೋದಿ, ಶಾ ಹೇಳಿದ್ದು ನಿಜವಿರಬೇಕು ಎಂದೆನಿಸಿದ್ದಂತೂ ಸುಳ್ಳಲ್ಲ. ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರಬಾಬು ನಾಯ್ಡು, ಮುಂತಾದವರಲ್ಲಿ ಯಾರನ್ನೂ ಪ್ರಧಾನಿಯಾಗಿ ನೋಡುವ ಮನಸ್ಥಿತಿಯಲ್ಲಿ ಮತದಾರನಿರಲಿಲ್ಲ ಎಂಬುದೂ ಅಷ್ಟೇ ಸತ್ಯ. ಜತೆಗೆ, ಮೈತ್ರಿ ಕೂಟದ ಸರ್ಕಾರ ರಚನೆಯಾದರೆ ದಿನಕ್ಕೊಂದು ರಗಳೆ, ದಿನಕ್ಕೊಂದು ಕಚ್ಚಾಟ ಆಗುತ್ತದೆ ಎಂಬ ಸಣ್ಣದೊಂದು ಅನುಮಾನವೂ ಮತದಾರನನ್ನು ಕಾಡಿತ್ತು. ಇದೆಲ್ಲದರ ಫಲವಾಗಿಯೇ ಈ ಅಂಶವೂ ಮೋದಿ ನೇತೃತ್ವದ ಎನ್‌ಡಿಎಗೆ ವರವಾಗಿ ಪರಿಣಮಿಸಿತು.
ಸಾಕ್ಷ್ಯ ಕೊಡಿ ಎಂದು ಕೇಳಿದ್ದು: ಹೌದು. ಮೋದಿಯವರ ಬಹುತೇಕ ಚುನಾವಣಾ ಭಾಷಣಗಳ ಒಟ್ಟಾರೆ ತಿರುಳು ದೇಶ ಮೊದಲು, ರಾಜಕೀಯ ಆನಂತರ ಎಂಬುದೇ ಆಗಿತ್ತು. ಭಯೋತ್ಪಾದನೆ ನಮ್ಮ ದೇಶದ ಶತ್ರು ಎಂದು ಪದೇ ಪದೇ ತಮ್ಮ ಭಾಷಣಗಳಲ್ಲಿ ಉಲ್ಲೇಖೀಸುತ್ತಿದ್ದ ಮೋದಿ, ಆ ಪಿಡುಗನ್ನು ಹತ್ತಿಕ್ಕುವಲ್ಲಿ ತಮ್ಮ ಸರ್ಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ ಎಂದು ಚುನಾವಣಾ ಹೊಸ್ತಿಲಲ್ಲಿ ನಡೆಸಲಾಗಿದ್ದ ಬಾಲಕೋಟ್ ದಾಳಿಯನ್ನು ಪದೇ ಪದೇ ಉದಾಹರಣೆಯಾಗಿ ನೀಡುತ್ತಿದ್ದರು. ಮೋದಿಯವರು ಹಾಗೆ ಪ್ರತೀ ಬಾರಿ ಹಾಗೆ ಬಾಲಕೋಟ್ ದಾಳಿಯನ್ನು ಪ್ರಸ್ತಾಪಿಸುತ್ತಿದ್ದಾಗಲೆಲ್ಲಾ, ವಿರೋಧ ಪಕ್ಷಗಳ ನಾಯಕರು ಸಾಕ್ಷ್ಯ ಕೊಡಿ, ಸಾಕ್ಷ್ಯ ಕೊಡಿ ಎನ್ನುತ್ತಲೇ ಇದ್ದರು.
ಅತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಅದೇ ಮಾತನ್ನೇ ಕೇಳುತ್ತಿದ್ದರು. ಇವರೆಡನ್ನೂ ನೋಡುತ್ತಿದ್ದ ಜನರಿಗೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ, ನಮ್ಮ ದೇಶದ ವಿರೋಧ ಪಕ್ಷಗಳ ನಾಯಕರ ನಡುವೆ ಏನೂ ವ್ಯತ್ಯಾಸ ಕಾಣಲಿಲ್ಲ. ಇದನ್ನು ವಿರೋಧ ಪಕ್ಷಗಳ ನಾಯಕರು ಅರ್ಥ ಮಾಡಿಕೊಳ್ಳಲಿಲ್ಲ. ಅತ್ತ, ಮೋದಿ ಅಭಿಮಾನಿಗಳಲ್ಲದವರೂ ರಾಷ್ಟ್ರ ಮೊದಲು, ರಾಜಕೀಯ ಆಮೇಲೆ ಎಂಬ ಆಧಾರದಲ್ಲಿ ಮೋದಿಗೆ ಮತ ಹಾಕಲು ನಿರ್ಧರಿಸಿದರು.
ತಪ್ಪು ಸಮಯದಲ್ಲಿ ಪ್ರಿಯಾಂಕಾ ರಂಗಪ್ರವೇಶ!: ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ, ಕಾಂಗ್ರೆಸ್ ಗೆದ್ದರೆ ರಾಹುಲ್ ಅವರನ್ನೇ ಕಾಂಗ್ರೆಸ್ ಪ್ರಧಾನಿಯನ್ನಾಗಿಸುತ್ತೆ ಎಂಬುದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಆದರೆ, ಬಹುತೇಕ ಜನರಿಗೆ ರಾಹುಲ್ ಪ್ರಧಾನಿಯಾಗುವುದು ಬೇಕಿರಲಿಲ್ಲ. ಇದು ಖುದ್ದು ಕಾಂಗ್ರೆಸ್‌ಗೂ ಗೊತ್ತಿತ್ತು. ಆದರೆ, ಬೇರೆ ಕಾರಣಕ್ಕಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಬೇಕೆಂಬ ಒಂದೇ ಉದ್ದೇಶದಿಂದ ಕಾಂಗ್ರೆಸ್, ಪ್ರಿಯಾಂಕಾ ಗಾಂಧಿಯವರನ್ನು ಎಳೆದು ತಂದರು. ಆದರೆ, ಕಾಂಗ್ರೆಸ್ಸಿನಲ್ಲಿ ಆತ್ಮವಿಶ್ವಾಸ ವೃದ್ಧಿಸುವುದರ ಜತೆಗೆ, ಜನರಲ್ಲಿ ಅನುಮಾನವನ್ನೂ ಹುಟ್ಟಿಹಾಕಿತು.
ಕಾಂಗ್ರೆಸ್ ಅಥವಾ ಅದರ ನೇತೃತ್ವದ ಯುಪಿಎಗೆ ಸ್ಪಷ್ಟ ಬಹುಮತ ಬಂದರೆ, ರಾಹುಲ್ ಅಲ್ಲದಿದ್ದರೇನು ಪ್ರಿಯಾಂಕಾ ಅವರನ್ನಾದರೂ ಪ್ರಧಾನಿ ಮಾಡುತ್ತಾರೆಂಬ ಅನುಮಾನಗಳು ಹುಟ್ಟಿದವು. ಮೊದಲೇ ವಂಶ ಪಾರಂಪರ್ಯ ಆಡಳಿತದ ವಿರೋಧಿ ಅಲೆ ಎದ್ದಿದ್ದರಿಂದ ಜನರಿಗೆ ರಾಹುಲ್, ಪ್ರಿಯಾಂಕಾ ಇಬ್ಬರಲ್ಲಿ ಯಾರೊಬ್ಬರೂ ಪ್ರಧಾನಿಯಾಗುವುದರ ವಿರುದ್ಧ ಒಂದು ಅಸಹನೆಯಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಎನ್‌ಡಿಎಗೆ ಇದು ಅನುಕೂಲವೇ ಆಗಿದ್ದರ ಜತೆಗೆ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಜಾದೂ ನಡೆಯದಂತಾಯ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.