ಪ್ರಶಸ್ತಿ ಪ್ರದಾನವೇ ಪ್ರಧಾನವಾದ ದಿನಾಚರಣೆ
Team Udayavani, Sep 5, 2018, 12:30 AM IST
ಶಿಕ್ಷಕರ ದಿನಾಚರಣೆ ಎಂದಿನಂತೆ ಸೆ. 5 ರಂದು ನಡೆಯುತ್ತಿದೆ. ಮಧುಮೇಹ ದಿನ, ಮಹಿಳಾ ದಿನ, ಹಿರಿಯ ನಾಗರಿಕರ ದಿನ, ವೈದ್ಯರು, ಎಂಜಿನಿಯರುಗಳು, ಕಾರ್ಮಿಕರು ಹೀಗೆ ನಾನಾ ದಿನಾಚರಣೆಗಳು ನಡೆಯುವುದು ಸಾಮಾನ್ಯ. ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರು ಪ್ರಶಸ್ತಿ ಪಡೆಯುವುದಕ್ಕೆ ವಿಶೇಷ ಗಮನ ಹರಿಸಿದಂತೆ ಬೇರೆ ಯಾವ ದಿನಾಚರಣೆಗಳಲ್ಲಿಯೂ ಕಂಡುಬರುತ್ತಿಲ್ಲ. ಬೇರೆ ದಿನಾಚರಣೆಗಳಲ್ಲಿ ಪ್ರಶಸ್ತಿಗಳಿದ್ದರೂ ಇಲ್ಲಿ ಪ್ರಶಸ್ತಿ ಪ್ರದಾನವೇ ಪ್ರಧಾನವಾಗಿರುತ್ತದೆ. ಹಾಗೆಂದು ಎಲ್ಲ ಶಿಕ್ಷಕರು ಪ್ರಶಸ್ತಿಗಾಗಿ ಹಾತೊರೆಯುತ್ತಿಲ್ಲ. ಆದರೆ ಕೆಲವರಿಂದಾಗಿ ಇಡೀ ಶಿಕ್ಷಕ ಸಮುದಾಯ ಈ ಅಪವಾದಕ್ಕೆ ಗುರಿಯಾಗಬೇಕಾಗಿದೆ.
ಪ್ರತಿ ಜಿಲ್ಲೆಗಳಲ್ಲಿ ಸಾವಿರಾರು ಶಿಕ್ಷಕರಿದ್ದಾರೆ. ರಾಷ್ಟ್ರ ಮಟ್ಟದ ಪ್ರಶಸ್ತಿ ರಾಜ್ಯಕ್ಕೆ ಕೆಲವೇ ಪ್ರಶಸ್ತಿಗಳು ಸಿಗುತ್ತವೆ. ರಾಜ್ಯ ಮಟ್ಟದ ಪ್ರಶಸ್ತಿ ಒಂದು ಜಿಲ್ಲೆಗೆ ಒಂದು ಅಥವಾ ಎರಡು ಬಂದರೆ, ಜಿಲ್ಲಾ ಮಟ್ಟದ ಪ್ರಶಸ್ತಿ ತಾಲೂಕಿಗೆ ಒಂದು ಪ್ರೌಢಶಾಲೆಗೆ, ಒಂದು ಹಿ.ಪ್ರಾ. ಶಾಲೆಗೆ ನೀಡಲಾಗುತ್ತದೆ. ಈ ಬಾರಿ ಕಿ.ಪ್ರಾ. ಶಾಲೆಯೂ ಸೇರಿದೆ. ಅಂದರೆ ಒಂದು ಜಿಲ್ಲೆಗೆ 15-20 ಪ್ರಶಸ್ತಿಗಳು ಸಿಗಬಹುದು. ಶಿಕ್ಷಕರ ದಿನಾಚರಣೆ ಹತ್ತಿರ ಬರುವಾಗ ಇದು ಪ್ರಕಟವಾಗುತ್ತದೆ. ಈ ಹೊತ್ತಿನಲ್ಲಿ ಪ್ರಶಸ್ತಿಯಿಂದ ಹೊರಗುಳಿದ ಸಾವಿರಾರು ಶಿಕ್ಷಕರು ಒಂದೋ ಕೀಳರಿಮೆಯಿಂದ ದಿನಕಳೆದರೆ, ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವರು ರಕ್ತದೊತ್ತಡ, ಮಧುಮೇಹದ ಪ್ರಮಾಣವನ್ನು ಹೆಚ್ಚಿಗೆ ಮಾಡಿಕೊಳ್ಳಲು ಏನು ಬೇಕೋ ಅದನ್ನೆಲ್ಲ ಮಾಡುತ್ತಾರೆ.
ಪ್ರಶಸ್ತಿಗಾಗಿ ಕೆಲಸ!
“ಯಾರಾದರೊಬ್ಬ ಒಳ್ಳೆಯ ಕೆಲಸ ಮಾಡುತ್ತಿದ್ದಾನೆಂದರೆ ಆತ ಏನೋ ಲಾಭಕ್ಕಾಗಿ ಮಾಡುತ್ತಾನೆ’ ಎಂಬ ಪುಕಾರು ಹುಟ್ಟಿಸುವುದನ್ನು ನೋಡುತ್ತೇವೆ. ಶಿಕ್ಷಕರ ಸ್ಥಿತಿ ಇದನ್ನು ಹೌದೆಂಬಂತೆ ಎಂಡೋಸ್ಮೆಂಟ್ ಕೊಡುತ್ತಿದೆ. ಕೆಲವು ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ತರುವುದು, ಶಾಲಾ ಮೈದಾನ ಸರಿಪಡಿಸುವುದು, ಬಾವಿ ತೋಡಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು, ಹೆಚ್ಚುವರಿ ತರಗತಿ ನಡೆಸಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವುದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು ಇತ್ಯಾದಿ ಕೆಲಸಗಳನ್ನು ಮಾಡುವುದು ಪ್ರಶಸ್ತಿ ಪಡೆಯಲು ಎಂಬಂತಾಗಿದೆ. ಪ್ರಶಸ್ತಿ ಪಡೆದವರ ಸಾಧನೆಗಳನ್ನು ನೋಡಿದರೆ ಇವೆಲ್ಲ ಕೆಲಸಗಳು ಅವರ ಸಾಧನೆಯ ಪಟ್ಟಿಯಲ್ಲಿರುತ್ತವೆ. ಇವರೇ ಶೈಕ್ಷಣಿಕ ವಲಯದಲ್ಲಿ ಅಗ್ರಮಾನ್ಯರು, ಸಂಪನ್ಮೂಲ ವ್ಯಕ್ತಿಗಳು. ಒಂದು ದಿನ ಪ್ರಶಸ್ತಿ ಪಡೆಯಲು ಇಡೀ ವರ್ಷ ಗಮನವನ್ನು ಕೇಂದ್ರೀಕರಿಸಿಕೊಂಡಿರುತ್ತಾರೆ.
ಮಕ್ಕಳಿಲ್ಲದ ಶಾಲಾ ಶಿಕ್ಷಕರಿಗೆ ಪ್ರಶಸ್ತಿ, ಮಕ್ಕಳಿರುವ ಶಾಲಾ ಶಿಕ್ಷಕರು ಅಯಶಸ್ವಿ
ಈಗ ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಮಕ್ಕಳಿಲ್ಲದೆ ಸೊರಗುತ್ತಿವೆ. ಈ ಮಧ್ಯೆ ಶಿಕ್ಷಕರ ಪ್ರಶಸ್ತಿಗಳು ಪ್ರಕಟವಾಗುತ್ತಿರುವುದು ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳ ಶಿಕ್ಷಕರಿಗೆ. ಅದರಲ್ಲೂ ಮುಖ್ಯವಾಗಿ ಸರಕಾರಿ ಶಾಲೆಗೆ ಹೆಚ್ಚು ಪ್ರಶಸ್ತಿಗಳು ಹೋಗುತ್ತವೆ. ಬಹುತೇಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಇದ್ದರೂ ಆ ಶಿಕ್ಷಕರು ಜೀತದಾಳುಗಳಂತೆ ಇರುತ್ತಾರೆ. ಅಂತಹ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಹೇಗೆ ರೂಪಿಸಬಹುದು? ಉಡುಪಿಯಂತಹ ಕೆಲವು ಜಿಲ್ಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರಿಗೂ ಖಾಸಗಿ ಪ್ರಾಯೋಜಕರ ನೆರವಿನಿಂದ ಪ್ರಶಸ್ತಿ ನೀಡುತ್ತಿದ್ದಾರೆ. ಸರಕಾರಿ, ಅನುದಾನಿತ ಶಾಲೆಗಳ ಶಿಕ್ಷಕರು ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದರೂ ಮಕ್ಕಳನ್ನು ಆಕರ್ಷಿಸಲು ಹೆಣಗಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿಯೂ ಅವರು ಪ್ರಶಸ್ತಿ ಪಡೆಯಲೋಸುಗವೇ ಕೆಲಸಕ್ಕೆ ಸೇರಿದ್ದು ಎಂಬ ಮನೋಭಾವನೆ ಮೂಡುವಂತೆ ನಮ್ಮ ವ್ಯವಸ್ಥೆ ರೂಪಿಸಿಬಿಟ್ಟಿದೆ. ಮಕ್ಕಳು ಹೆಚ್ಚಿಗೆ ಇರುವ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರೂ ಉದ್ಯೋಗಕ್ಕೆ ಆದ್ಯತೆ ಕೊಡುವಾಗ ಸರಕಾರಿ ಶಾಲೆಗಳ ಉದ್ಯೋಗಕ್ಕೇ ಕೊಡುತ್ತಾರೆ. ಅವರ ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಒಂದೆಡೆ ಸರಕಾರಿ ಶಾಲೆಗಳನ್ನು ಉದ್ಧಾರ ಮಾಡಬೇಕೆಂದು ಹೇಳುತ್ತಲೇ ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಸರಕಾರವೇ ಶುಲ್ಕ ಭರಿಸಿ ಮಕ್ಕಳನ್ನು ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದೆ. ಅಲ್ಲಿ ಬಡ ಮತ್ತು ಸಿರಿವಂತರ ಮಕ್ಕಳ ನಡುವೆ ಇನ್ನೊಂದು ಪೈಪೋಟಿ ಸೃಷ್ಟಿಯಾಗುತ್ತಿದೆ.
ಸಹಶಿಕ್ಷಕರ ಪಾಡು
ಕೆಲವು ವರ್ಷಗಳಿಂದ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದನ್ನು ಶಿಕ್ಷಣ ಇಲಾಖೆ ರದ್ದುಗೊಳಿಸಿದೆ. ಕೇವಲ ಪ್ರಸ್ತಾವನೆಗಳನ್ನು ಸಿದ್ಧಪಡಿಸಬಹುದು. ಬಿಇಒ, ಡಿಡಿಪಿಐ ಅವರು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಬೇಕು. ಆಯ್ಕೆ ಮಾಡುವಾಗ ಸಮಿತಿಗಳು ಮೀಟಿಂಗ್ ನಡೆಸುತ್ತವೆ. ಆದರೂ ಒಂದು ಜಿಲ್ಲೆಗೆ ಕೊಡುವ 10-12 ಶಿಕ್ಷಕ ಪ್ರಶಸ್ತಿಗೆ ಸಾವಿರಾರು ಶಿಕ್ಷಕರು ತಲೆ ಕೆಡಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಮುಖ್ಯ ಶಿಕ್ಷಕರಾದವರಿಗೆ ಆವರಣಗೋಡೆ, ನೀರು, ಶೌಚಾಲಯ, ಪ್ರಯೋಗಾಲಯ ಇತ್ಯಾದಿಗಳನ್ನು ದಾನಿಗಳ ನೆರವಿನಿಂದ ನಿರ್ಮಿಸಬಹುದು. ಸಹ ಶಿಕ್ಷಕರಾದವರು ಪಾಠ ಬಿಟ್ಟು ಬೇರೇನನ್ನೂ ಮಾಡುವಂತಿಲ್ಲ. ಸಹಶಿಕ್ಷಕರ ಕಡತ ಮುಂದೆ ಚಲಿಸದಂತೆ ಮುಖ್ಯಶಿಕ್ಷಕರು ಅಡ್ಡಗಾಲು ಹಾಕುತ್ತಾರೆ. ಈ ದೃಷ್ಟಿಯಲ್ಲಿ ಮುಖ್ಯಶಿಕ್ಷಕರ ಅಡೆತಡೆಯನ್ನು ಎದುರಿಸಿ ಸಹಶಿಕ್ಷಕರು ಪ್ರಶಸ್ತಿ ಪಡೆಯುವುದು ಬಹಳ ಕಷ್ಟ.
ಕಡತ ನಿರ್ಮಾಣ ತಜ್ಞರು
ಹಿಂದೆಲ್ಲ ಶಾಸಕರು, ಮಂತ್ರಿಗಳು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದರೆ ಈಗ ಶಿಕ್ಷಕರ ಸಂಘಟನೆಗಳು, ಹಿಂದಿನ ಬಾರಿ ರಾಷ್ಟ್ರ, ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡವರಲ್ಲಿ ಕೆಲವರು ಇದೇ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಸಂಘಟನೆಗಳ ಪದಾಧಿಕಾರಿಗಳುವುದೇ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆಯಲು ಒಂದು ಅರ್ಹತೆ ಎಂಬ ಟ್ರೆಂಡ್ ಕ್ರಿಯೇಟ್ ಮಾಡಿಬಿಟ್ಟಿದ್ದಾರೆ. ಒಂದು ಶಾಲೆಯನ್ನು ಅಭಿವೃದ್ಧಿಪಡಿಸಿದವರು ಜಿಲ್ಲಾ ಪ್ರಶಸ್ತಿಗೂ, ಬಳಿಕ ರಾಜ್ಯ, ರಾಷ್ಟ್ರ ಪ್ರಶಸ್ತಿಗೂ ಅರ್ಹವಾಗುವ ಪವಾಡ ನಡೆಯುತ್ತಿದೆ. ಹೆಚ್ಚು ಹೆಚ್ಚು ಕಡತಗಳನ್ನು ತಯಾರಿಸಿ ಫೈಲ್ ಪುಟ್‌ಅಪ್ ಮಾಡುವುದರಲ್ಲಿ ಇವರು ನಿಷ್ಣಾತರಾಗಿರುತ್ತಾರೆ. ಕಡತ ತಯಾರಿ ವೈಖರಿ ಹೇಗಿರುತ್ತದೆಂದರೆ ತಮ್ಮ ಕಾರ್ಯಸಾಧನೆಗೆ ಇವರು ಜಾತಿ, ಪಕ್ಷ, ಸಂಘಟನೆಯನ್ನು ಬಳಸಿ ಕೈಕಾಲು ಹಿಡಿಯುತ್ತಾರೆ. ಆದರೆ ಪ್ರಶಸ್ತಿ ಘೋಷಣೆಯಾದ ತತ್‌ಕ್ಷಣ ಇವರ ಶ್ರೀಮದ್‌ಗಾಂಭೀರ್ಯವೇ ಬೇರೆ ಇರುತ್ತದೆ. ತತ್‌ಕ್ಷಣ ಕಂಪ್ಯೂಟರ್‌ನ ಬಯೋಡಾಟಾದಲ್ಲಿ ಒಂದು ಪ್ರಶಸ್ತಿ ಹೆಚ್ಚಿಗೆ ಸೇರ್ಪಡೆಯಾಗಿರುತ್ತದೆ.
ಶೇ. 20 ಶ್ರೇಷ್ಠರು, ಶೇ. 20 ಕನಿಷ್ಠರು
“ಶೇ. 20 ಶಿಕ್ಷಕರು ಶ್ರೇಷ್ಠ ಪ್ರತಿಭಾವಂತರು, ಶೇ. 20 ಕಳಪೆ ದರ್ಜೆಯವರೂ, ಉಳಿದ ಶೇ. 60 ಸಾಮಾನ್ಯ ದರ್ಜೆಯ ಶಿಕ್ಷಕರೂ ಇರುತ್ತಾರೆ. ನಾವು ಶೇ. 20 ಕಳಪೆ ದರ್ಜೆಯವರಿಗೆ ಪ್ರಶಸ್ತಿ ಹೋಗದಂತೆ ನೋಡಿಕೊಳ್ಳಬೇಕು. ಹೀಗೇನಾದರೂ ಆದರೆ ಶೇ. 80 ಶಿಕ್ಷಕರು ವ್ಯವಸ್ಥೆಯ ವಿರುದ್ಧ ತಿರುಗಿಬೀಳುತ್ತಾರೆ. ಶೇ. 20 ಶಿಕ್ಷಕರಲ್ಲಿ ಒಬ್ಬನಿಗೆ ಮಾತ್ರ ಪ್ರಶಸ್ತಿ ನೀಡಲು ಸಾಧ್ಯ. ಇವರಲ್ಲಿ ಒಂದಿಷ್ಟು ಮಂದಿಗೆ ಬೇಸರವಾದರೂ ಇದು ಅನಿವಾರ್ಯ’ ಎನ್ನುತ್ತಾರೆ ಜಿಲ್ಲಾ ಪ್ರಶಸ್ತಿಯಿಂದ ಪುರಸ್ಕೃತ, ರಾಜ್ಯ ಪ್ರಶಸ್ತಿಯಿಂದ ತಿರಸ್ಕೃತ ಅನುಭವ ಹೊಂದಿದ, ಈಗ ಆಯ್ಕೆ ಮಾಡುವ ಅಧಿಕಾರ ಹೊಂದಿದ ಅಧಿಕಾರಿಯೊಬ್ಬರು.
ಈ ಕಳಪೆ ದರ್ಜೆಯವರು ಯಾರೆಂದು ಬಲ್ಲಿರಾ? ಶಾಲೆಗೆ ಬಾರದೆ ಅವರ ಬದಲಿಗೆ ಪುಡಿಗಾಸು ಸಂಬಳ ಕೊಟ್ಟು ಖಾಸಗಿ ಶಿಕ್ಷಕರಿಂದ ಪಾಠ ಮಾಡಿಸುತ್ತಿರುವವರು, ಸದಾ ತಮ್ಮ ಮುಖ್ಯ ವ್ಯಾಪಾರದಲ್ಲಿ ನಿರತರಾಗಿರುವ ಲಕ್ಷಣ ಹೊಂದಿದವರು, ಹಣಕಾಸು (ಅ)ವ್ಯವಹಾರ ಮಾಡುವವರು ಇವರು. ಇಂತಹವರೂ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಾರೆ. ಇವರನ್ನು ತಡೆಯುವುದು ಇಲಾಖೆಯ ಮುಖ್ಯ ಗಮನವಾಗಿರಬೇಕಂತೆ. ಪ್ರಶಸ್ತಿಗೆ ಪ್ರಯತ್ನಪಟ್ಟ ಯೋಗ್ಯ ಶಿಕ್ಷಕರಿಗೆ ಎಷ್ಟು ನೋವು ಆಗುತ್ತದೆಂಬುದನ್ನು ತಾನು ಬಲ್ಲೆ. ಆದರೆ ಇದು ಸಹಜ ಎನ್ನುತ್ತಾರೆ ಆ ಅಧಿಕಾರಿ.
ಓಬಿರಾಯನ ಕಾಲದ ಪದ್ಧತಿ
ಈ ಪ್ರಶಸ್ತಿ ವ್ಯವಸ್ಥೆ ಓಬಿರಾಯನ ಕಾಲಕ್ಕೆ ಸೇರಿದ್ದು. ಮಕ್ಕಳಿಲ್ಲದ ಶಾಲೆಗಳಲ್ಲಿ ಪ್ರಶಸ್ತಿಗಾಗಿ ಪೈಪೋಟಿ, ಮಕ್ಕಳಿರುವ ಶಾಲೆಯ ಶಿಕ್ಷಕರು ಯೋಗ್ಯ ವೇತನಕ್ಕಾಗಿ ಪರದಾಟ ನಡೆಯುವ ಈ ಕಾಲಘಟ್ಟದಲ್ಲಿ ವ್ಯವಸ್ಥೆಯ ಪುನಾರಚನೆ ಆಗುವ ಅಗತ್ಯವಿಲ್ಲವೆ? ಶಿಕ್ಷಕರು ವಿಷಯ ತಜ್ಞತೆಯಲ್ಲಿ ಹೊಸ ಶೋಧನೆ ನಡೆಸಿ ರಾಜ್ಯ ಮಟ್ಟದಲ್ಲಿ ಪ್ರಭಾವ ಬೀರಿದ್ದಾರೆಯೆ? ತಮ್ಮ ಸ್ವಂತ ಖರ್ಚಿನಲ್ಲಿ ಬಡ ಮಕ್ಕಳಿಗೆ ಶುಲ್ಕ ಕಟ್ಟಿದ್ದಾರೆಯೆ? ತಮ್ಮ ಸ್ವಂತ ಖರ್ಚಿನಲ್ಲಿ ಗೌರವ ಶಿಕ್ಷಕರಿಗೆ ಸಂಭಾವನೆ ಕೊಟ್ಟಿದ್ದಾರೆಯೆ? ಎಲ್ಲಕ್ಕಿಂತ ಹೆಚ್ಚಿಗೆ ತಾನು ಮಾಡುವ ಕೆಲಸ ಪ್ರಶಸ್ತಿಗಾಗಿ ಅಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆಯೆ? ಎಂಬ ಮಾನದಂಡವನ್ನು ಇರಿಸಿಕೊಳ್ಳುವುದು ಉತ್ತಮ. ಕೆಲವು ಶಾಲೆಗಳಲ್ಲಿ ನಿವೃತ್ತಿಯಾದ ಬಳಿಕ ಉಚಿತವಾಗಿ ಬಂದು ಪಾಠ ಮಾಡಿಹೋಗುವ ಶಿಕ್ಷಕರಿದ್ದಾರೆ. ಇವರಿಗೆ ಯಾವ ಸ್ತರದ ಪ್ರಶಸ್ತಿ ಕೊಡಬೇಕು?
ಪ್ರಶಸ್ತಿ ರದ್ದುಪಡಿಸುವುದೇ ಉತ್ತಮ
“ಶಿಕ್ಷಕರ ಪ್ರಶಸ್ತಿಯನ್ನು ರದ್ದುಪಡಿಸಬೇಕು. ಏಕೆಂದರೆ ಪ್ರಶಸ್ತಿ ಆಯ್ಕೆಯಲ್ಲಿ ಲಾಬಿ, ರಾಜಕೀಯ ನಡೆಯುತ್ತದೆ, ಜಾತಿಯನ್ನು ಪರಿಗಣಿಸುತ್ತಾರೆ, ನಿವೃತ್ತಿ ಅಂಚಿಗೆ ಬರುತ್ತಾರೆ ಎಂಬ ಮಾನ ದಂಡವಿದೆ. ಇತರ ಚಟುವಟಿಕೆಗಳನ್ನು ನಡೆಸುವವರನ್ನು ಆಯ್ಕೆ ಮಾಡುತ್ತಾರೆ. ನಾನಿದನ್ನು ಕಂಡು ಆಯ್ಕೆ ಸಮಿತಿಯಿಂದ ಹೊರಬಂದಿದ್ದೇನೆ. ಸರಕಾರ ಸಾಧನೆಯನ್ನು ಗುರುತಿಸಿ ಕೊಡುವಂತಾಗಬೇಕು. ಈಗ ಅರ್ಜಿ ಹಾಕುವ ಕ್ರಮ ಇಲ್ಲದಿದ್ದರೂ ಪ್ರಸ್ತಾವನೆಗಳನ್ನು ಕಳುಹಿಸುವ ಇನ್ನೊಂದು ರೂಪವಿದೆ. ಇದಕ್ಕೆ ದಾಖಲೆಗಳನ್ನು ಇಡಬೇಕು. ದಾಖಲೆಗಳನ್ನು ನಿರ್ವಹಿಸುವುದರಲ್ಲಿಯೇ ಇವರು ಮಗ್ನರಾಗಿರುತ್ತಾರೆ. ಪ್ರಶಸ್ತಿಗಾಗಿ ಕೆಲಸ ಮಾಡುವ ಸ್ಥಿತಿ ಇರಬಾರದು. ಮಕ್ಕಳೇ ಶಿಕ್ಷಕರಿಗೆ ಪ್ರಶಸ್ತಿಯಾಗಬೇಕು’ ಎಂಬ ಅಭಿಮತ ಶಿಕ್ಷಣ ತಜ್ಞ ಡಾ|ಬಿ.ಮಹಾಬಲೇಶ್ವರ ರಾವ್ ಅವರದು.
ಸಮಾಜಸೇವೆ ಮಾಡಬೇಕೆ?
ವಿವಿಧ ಸೇವೆಗಳಲ್ಲಿ ನಿವೃತ್ತಿಯಾದ ಬಳಿಕ ಕಾಲಹರಣಕ್ಕೋ, ಬೋರ್ ಆಗುತ್ತದೆಂದೋ ಸಮಾಜ ಸೇವೆಯ ಬೋರ್ಡ್ ಹೊತ್ತು ತಿರುಗುವವರಿದ್ದಾರೆ. ಇಂತಹವರು ಅಗತ್ಯವಿರುವ ಪ್ರಾಥಮಿಕ ಶಾಲೆಗಳಲ್ಲಿ ಒಂದೆರಡು ಗಂಟೆ ಉಚಿತವಾಗಿ ಪಾಠ ಮಾಡಿದರೆ ಅದ್ಭುತ ಪರಿಸರ ನಿರ್ಮಿಸಲು ಸಾಧ್ಯವಿದೆ. ನಿವೃತ್ತ ಯಾವುದೇ ನೌಕರರಿಗೆ, ಅಧಿಕಾರಿಗಳಿಗೆ ಪ್ರಾಥಮಿಕ ಶಾಲೆಯ ಪಾಠ ಮಾಡುವುದು ಕಷ್ಟದ ಕೆಲಸವಲ್ಲ.
ಕೃಷ್ಣ ಶಾಸ್ತ್ರಿ, ತಿಮ್ಮಯ್ಯರಿದ್ದಾರೆ… ಹುಡುಕಬೇಕಷ್ಟೆ
ಆದರ್ಶ ಶಿಕ್ಷಕರೆನಿಸಿದ “ಯೇಗ್ಧಾಗೆಲ್ಲಾ ಐತೆ’ ಗ್ರಂಥಕರ್ತ ಚಿತ್ರದುರ್ಗದ ಬೆಳೆಗೆರೆ ಕೃಷ್ಣ ಶಾಸ್ತ್ರಿಯವರು ರಾಜ್ಯ ಶಿಕ್ಷಕರ ಪ್ರಶಸ್ತಿ ಬಂದಾಗ “ನನಗೇಕಪ್ಪ ಪ್ರಶಸ್ತಿ, ನಾನು ಹಳ್ಳಿಯಲ್ಲಿರುವವನು’ ಎಂದು ಅದನ್ನು ಸ್ವೀಕರಿಸಲು ಬೆಂಗಳೂರಿಗೆ ಹೋಗಲೇ ಇಲ್ಲ. ಆಗಿನ ಡಿಡಿಪಿಐ ಇಮ್ಯಾನುವಲ್ ಪ್ರಭಾಕರ ಥಾಮಸ್ ಅವರು ಚಳ್ಳಕೆರೆಯಲ್ಲಿ ಸಮಾರಂಭ ಏರ್ಪಡಿಸಿ ಪ್ರಶಸ್ತಿ ಕೊಟ್ಟರು. ಎರಡು ವರ್ಷ ಅರ್ಜಿ ನಮೂನೆಯನ್ನು ಹರಿದುಹಾಕಿದರೂ ಮೂರನೆಯ ವರ್ಷ ರಾಷ್ಟ್ರ ಪ್ರಶಸ್ತಿ ಬಂತು. ಆಗಿನ ಡಿಡಿಪಿಐ ಕೃಷ್ಣ ರಾವ್ ಅವರು ಶಾಸಿŒಗಳಿಗೆ ಕಲಿಸಿದ ಸಿದ್ದಯ್ಯರನ್ನು ಕರೆದುಕೊಂಡು ಶಾಸ್ತ್ರಿಗಳ ಗುಡಿಸಿಲಿಗೆ ಬಂದರು. ಪ್ರಶಸ್ತಿ ವಿಷಯ ತಿಳಿಸಿದಾಗ ಶಾಸ್ತ್ರಿಗಳು ನಿರಾಕರಿಸಿದರು. “ದೊಡ್ಡ ಸಾಹೇಬರು ನಿನ್ನ ಗುಡಿಸಿಲಿಗೆ ಬಂದು ಏನೋ ಹೇಳ್ತಾರೆ ಅಂದರೆ ಅಷ್ಟು ಸಲೀಸೋ ನಿನಗೆ’ ಸಿದ್ದಯ್ಯ ಗಡುಸಾಗಿ ಹೇಳಿದಾಗ ಶಾಸ್ತ್ರಿಗಳು ಒಪ್ಪಿದರು.
ಪರಿಶಿಷ್ಟ ಜಾತಿಯ ಸಣ್ಣ ತಿಮ್ಮಯ್ಯರೆಂಬ ಶಿಕ್ಷಕರಿಗೆ ಊರಿನವರು ನಿವೃತ್ತಿ ಸಂದರ್ಭ ಸಮ್ಮಾನ ಮಾಡಬೇಕೆಂದಾಗ ಸುತಾರಾಂ ಒಪ್ಪಲಿಲ್ಲವಂತೆ. “ನಾನು ಕೆಲಸ ಮಾಡಿದ್ದಕ್ಕೆ ಸರಕಾರದಿಂದ ಕೂಲಿ ತೆಗೆದುಕೊಂಡಿದ್ದೇನೆ. ಈಗ ಸಮ್ಮಾನವೇಕೆ? ಹಾಗಿದ್ದರೆ ಈ ಊರಲ್ಲಿ ಎಷ್ಟು ಜನ ಕೂಲಿ ಮಾಡುತ್ತಿದ್ದಾರೆ’ ಎಂದು ತಿಮ್ಮಯ್ಯ ಪ್ರಶ್ನಿಸಿದ್ದರು. ಕೊನೆಗೆ ಕೃಷ್ಣ ಶಾಸ್ತ್ರಿಗಳ ಮಾತಿನಂತೆ ಸಮ್ಮಾನವನ್ನು ಒಪ್ಪಿಕೊಂಡರು.
ಈ ತಿಮ್ಮಯ್ಯ ಎಂಥವರೆಂದರೆ ತಾಯಿ ತೀರಿ ಹೋದಾಗ ಶಾಲೆಗೆ ಇನ್ಸ್‌ಪೆಕ್ಟರ್ ಬರುತ್ತಾರೆಂದು ಶಾಲೆಗೆ ಬಂದವರು. ಇದು ಗೊತ್ತಾದದ್ದು ಹೇಗೆಂದರೆ ಮುಖ್ಯಶಿಕ್ಷಕರ ಮನೆಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿ ಕರೆದಾಗ ತಿಮ್ಮಯ್ಯ ಬರಲು ಒಪ್ಪಲಿಲ್ಲ. ಒತ್ತಾಯ ಮಾಡಿದಾಗ ಊರಿನ ಗೌಡರನ್ನು ಹತ್ತಿರ ಕರೆದು ಗುಟ್ಟಿನಲ್ಲಿ “ನಾನೀಗ ಹೋಳಿಗೆ ಊಟ ಮಾಡಬೇಕೆ? ತಾಯಿಯನ್ನು ಮಣ್ಣು ಮಾಡಬೇಕೆ?’ ಎಂದು ಹೇಳಿ ಅಲ್ಲಿಂದ ಹೋದರು.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.