ಮೋದಿ ಆಡಳಿತದಿಂದ ನಾಲ್ಕು ಮಹತ್ತರ ನಿರೀಕ್ಷೆ
Team Udayavani, May 30, 2019, 10:24 AM IST
ಪ್ರಧಾನಿ ನರೇಂದ್ರ ಮೋದಿಯವರು ಐದು ವರ್ಷಗಳ ದೇಶದಲ್ಲಿ ಉತ್ತಮ ಆಡಳಿತ ನಡೆಸಿ ಮುಂದಿನ ಐದು ವರ್ಷಗಳ ಕಾಲ ದೇಶದ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಹುಮ್ಮಸ್ಸಿನಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ದೇಶವನ್ನು ಮುನ್ನಡೆಸಲು ಮುಂದಾಗಿರುವ ಮೋದಿಯವರ ಹಿಂದಿನ ಐದು ವರ್ಷದ ಆಡಳಿತವೂ ಸಾಕಷ್ಟು ಭರವಸೆ ಹುಟ್ಟಿಸಿದೆ.
ಮುಖ್ಯವಾಗಿ ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿದೇಶಾಂಗ ನೀತಿ, ಕೈಗಾರಿಕೀಕರಣ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪ್ರಖರ ರಕ್ಷಣಾ ಚಟುವಟಿಕೆಗಳು ಹಾಗೂ ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಬದುಕಿನ ಸುಧಾರಣೆಯ ಪರಿಕಲ್ಪನೆಯನ್ನು ಪ್ರತಿಬಿಂಬಿಸಿದೆ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದ ರಕ್ಷಣೆಗೆ ಬಹಳ ಮಹತ್ವ ನೀಡಿದ್ದರು. ಅವರ ನಂತರ ಬಂದ ರಾಜಕೀಯ ನೇತಾರರಿಗೆ ಆ ರೀತಿಯ ಹಿಡಿತ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಅದನ್ನು ಸಾಧಿಸಿ ತೋರಿಸಿದರು. ಆ ಮೂಲಕ ಭಾರತದ ರಾಜಕಾರಣದಲ್ಲಿ ಮೋದಿ ಒಂದು ಎತ್ತರಕ್ಕೆ ಬೆಳೆದು ನಿಂತಿ¨ªಾರೆ. ಈ ಬದಲಾವಣೆಯನ್ನು ಗಮನಿಸಿದರೆ ಸ್ವಾತಂತ್ರ್ಯ ಸಿಕ್ಕ ಕೂಡಲೇ ಮೋದಿಯಂಥವರು ಪ್ರಧಾನಿಯಾಗಿದ್ದರೆ ಇಂದಿನ ಭಾರತದ ಚಿತ್ರಣವೇ ಬದಲಾಗುತ್ತಿತ್ತು ಎಂದು ಬಹಳ ಸಾರಿ ಅನಿಸುತ್ತದೆ.
ಪ್ರಖರ ರಾಷ್ಟ್ರೀಯವಾದದ ಪ್ರತಿಪಾದಕರಾದರೂ ಮೋದಿಯವರು ತಾವಾಗಿಯೇ ಎಂದೂ ಆ ಬಗ್ಗೆ ಮಾತನಾಡಿದವರಲ್ಲ. ಈ ಬಾರಿಯೂ ಪ್ರಚಂಡ ಬಹುಮತ ಪಡೆದ ಬಳಿಕ ಮೋದಿಯವರು, “ನಾವು ಮುಸ್ಲಿಮರನ್ನು ಬಿಟ್ಟು ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅವರನ್ನು ಜೊತೆಗೂಡಿಸಿಕೊಂಡೇ ಹೋಗಬೇಕು, ಅವರು ದೇಶದ ಮುಖ್ಯವಾಹಿನಿಯಲ್ಲಿರುವಂತೆ ನಾವೆಲ್ಲರೂ ಎಚ್ಚರ ವಹಿಸಬೇಕು’ ಎಂದು ಎನ್‌ಡಿಎ ಮಿತ್ರಪಕ್ಷಗಳಿಗೆ ಹೇಳಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡು ಈ ರೀತಿ ಹೇಳುವುದು ಕಷ್ಟವೆನಿಸಿದರೂ ತಮ್ಮ ಕಳಕಳಿಯನ್ನು ಪ್ರದರ್ಶಿಸಿ ಇತರರು ಪಾಲಿಸುವಂತೆ ಪ್ರೇರಣೆ ನೀಡಿದ್ದಾರೆ. ಇದರಲ್ಲಿ ಅವರ ಅಪಾರ ಬದ್ಧತೆ ಕಾಣುತ್ತದೆ. ಪ್ರಧಾನಿ ಮೋದಿಯವರದು ವರ್ಗೀಯ ರಾಜಕಾರಣವಲ್ಲ. ದೇಶದ ಒಟ್ಟಾರೆ ಅಭಿವೃದ್ಧಿಗೆ ಅವರು ಆದ್ಯತೆ ನೀಡುತ್ತಾರೆ. ಜಾತಿ, ಧರ್ಮದ ವಿಚಾರವಾಗಿ ಸಂಘರ್ಷವಿದ್ದರೆ ದೇಶದ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಅವರು ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ಶಾಂತಿ ನೆಲೆಯೂರಬೇಕು. ಎಲ್ಲರೂ ಒಟ್ಟಿಗೆ ಇರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿಯವರು ಪ್ರಧಾನಿಯಾದ ಬಳಿಕ ಮುಂದಿನ ದಿನಗಳು ದೇಶ ಶಾಂತಿಯ ತೋಟವಾಗಿರಲಿ ಎಂದು ಆಶಿಸಿದ್ದರು. ಮೋದಿ ಪ್ರಧಾನಿಯಾದ ಮೇಲೆ ಗಂಭೀರ ಕೋಮುದಂಗೆಗಳೇ ನಡೆದಿಲ್ಲ ಎನ್ನುವಷ್ಟರ ಮಟ್ಟಿಗೆ ಗೌಣವೆನಿಸಿವೆ. ಮೋದಿಯವರು ಗಾಂಧಿ, ನೆಹರು, ಇಂದಿರಾಗಾಂದಿಯವರು ನಡೆದು ಬಂದ ಹಾದಿಯನ್ನು ತೆಗೆದುಕೊಂಡು ಮುಂದೆ ಬಂದಿದ್ದಾರೆ. “ಮುಂದುವರಿಸುವುದು ಹಾಗೂ ಬದಲಾವಣೆ’ (ಕಂಟಿನ್ಯೂ ಆ್ಯಂಡ್ ಚೇಂಜ್) ಎಂಬಂತಹ ನರೇಂದ್ರಮೋದಿಯವರ ದೃಷ್ಟಿಕೋನವು ಭಾರತದಂತಹ ವೈವಿಧ್ಯದ ದೇಶಕ್ಕೆ ಅಗತ್ಯವಿದೆ. ಅದನ್ನು ಮೋದಿಯವರು ಮಾಡಿ ತೋರಿಸಿದ್ದಾರೆ. ಬಿಜೆಪಿ ಈಗಾಗಲೇ ಐದು ವರ್ಷದ ಆಡಳಿತ ಮುಗಿಸಿದೆ. ಮುಂದಿನ ಐದು ವರ್ಷ ಮಹತ್ವದ್ದಾಗಿದೆ. ಐದು ವರ್ಷದಲ್ಲಿ ಮಾಡಿದ್ದು ಅಲ್ಪ, ಮಾಡಬೇಕಾದ್ದು ಬಹಳಷ್ಟಿದೆ ಎಂಬುದು ಮೋದಿಯವರ ಮನೋಭಾವ.
ಅಪೇಕ್ಷೆಗಳು: ದೇಶದ ಕೃಷಿಯಲ್ಲಿ ಶೇ.70- 80ರಷ್ಟು ಇಂದಿಗೂ ಮಳೆ ಆಧಾರಿತವಾಗಿದೆ. ಅಂದರೆ ಬಹುಪಾಲು ಕೃಷಿ ಪದ್ಧತಿ ಪ್ರಕೃತಿ ಅವಲಂಬಿತವಾಗಿದೆ. ಮುಂದಿನ ವರ್ಷಗಳಲ್ಲಿ ಪ್ರಕೃತಿ ನಮಗೆ ಬೇಕಾದಂತೆ ಇರಲಿದೆ ಎಂಬ ವಿಶ್ವಾಸವಿಲ್ಲ. ಅದು ನಮ್ಮ ಕೈಯಲ್ಲೂ ಇಲ್ಲ. ಒಂದಿಷ್ಟು ಸುಧಾರಣೆಗೂ ಪ್ರಯತ್ನಗಳಾಗಬೇಕಿದೆ. ಭಾರತದಲ್ಲಿ ಶೇ.33ರಷ್ಟು ಅರಣ್ಯವಿರಬೇಕೆಂಬ ಪರಿಕಲ್ಪನೆಯನ್ನು ಮೋದಿಯವರು ಸಾಕ್ಷಾತ್ಕರಿಸಬೇಕು. ಮುಂದಿನ ದಿನಗಳಲ್ಲಿ ವಾಡಿಕೆ ಮಳೆ, ಹರಿಯುತ್ತಿರುವ ನೀರು, ಜಲಸಂಪನ್ಮೂಲ ಸಂರಕ್ಷಣೆ, ಪ್ರಾಣಿ, ಪಕ್ಷಿ ಸಂಕುಲಗಳ ಉಳಿವಿಗೆ ಒತ್ತು ನೀಡಬೇಕಿದೆ. ದೇಶದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ.
ಎರಡನೆಯದಾಗಿ ನದಿಗಳು ಶುದ್ಧವಾಗಿರಬೇಕು ಹಾಗೂ ಜೀವಂತವಾಗಿಬೇಕು. ಈಗಾಗಲೇ ವಾರಣಾಸಿಯಲ್ಲಿ ಗಂಗಾ ನದಿ ವಿಚಾರದಲ್ಲಿ ಮೋದಿಯವರು ಇದನ್ನು ಸಾಧಿಸಿ ತೋರಿಸಿದ್ದಾರೆ. ಈ ಕಾರ್ಯ ದೇಶಾದ್ಯಂತ ನಡೆಯಬೇಕಿದೆ. ಅದೇ ರೀತಿ ಕಳೆದು ಹೋದ, ಹೊಲಸಾದ ಹಾಗೂ ಒಣಗಿದ ನದಿಗಳ ಪುನಶ್ಚೇತನ ಕಾರ್ಯಕ್ಕೆ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಜನತೆಗೆ ಜನರ ಸಹಭಾಗಿತ್ವಕ್ಕೂ ಒತ್ತು ನೀಡಬೇಕಿದೆ.
ಮೂರನೆಯದಾಗಿ ಗ್ರಾಮೀಣ ಭಾಗದ ಪ್ರದೇಶದಲ್ಲಿ ಕುಡಿಯಲು ಹಾಗೂ ಕೃಷಿಗೆ ಶುದ್ಧ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಆಹಾರಕ್ಕಿಂತಲೂ ತೀವ್ರ ಕೊರತೆಯಿರುವುದು ಶುದ್ಧ ಕುಡಿಯುವ ನೀರಿನದ್ದು. ಹಾಗಾಗಿ ಮುಂದಿನ ಐದು ವರ್ಷಗಳಲ್ಲಿ ಕೃಷಿ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ವಿಶೇಷ ಒತ್ತು ನೀಡುವ ನಿರೀಕ್ಷೆ ಇದೆ. ಅವರ ಮನಸ್ಸಿನಲ್ಲೂ ಈ ವಿಚಾರವಿದ್ದಂತಿದೆ.
ಗ್ರಾಮೀಣ ಪ್ರದೇಶದ ಜನರು ನಗರಗಳಿಗೆ ವಲಸೆ ಹೋಗುವಂತಾಗಬಾರದು. ಗ್ರಾಮೀಣ ಭಾಗದ ಜನರ ಜೀವನ ಆರ್ಥಿಕ ಪ್ರಗತಿಯತ್ತ ಸಾಗಬೇಕು. ಗ್ರಾಮೀಣ ಪ್ರದೇಶಗಳನ್ನು ಸಾಂಸ್ಕೃತಿಕವಾಗಿ ಎಂದರೆ ಗ್ರಂಥಾಲಯ ನಿರ್ಮಾಣ, ಕಲಾತಂಡಗಳು, ಭವ್ಯ ಧಾರ್ಮಿಕ ವ್ಯವಸ್ಥೆಗಳಿರುವಂತೆ ರೂಪಿಸಬೇಕು. ಸುಂದರ ಮಂದಿರ ಹಾಗೂ ಮಠಗಳು ಹೋರಾಟ- ಹೊಡೆದಾಟದ ಕೇಂದ್ರಗಳಾಗದೆ ನಿಜವಾದ ಬದುಕಿನ ಕೇಂದ್ರಗಳಂತೆ ರೂಪುಗೊಳ್ಳಬೇಕು. ಅದರಲ್ಲಿ ಮಸೀದಿ, ಚರ್ಚ್ ಇದ್ದರೂ ತಪ್ಪೇನೂ ಇಲ್ಲ. ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಎಲ್ಲರನ್ನು ಒಳಗೊಳ್ಳುವ ಹಳ್ಳಿಯ ಪುನರುಜ್ಜೀವನದ ಗಾಂಧಿ ಕನಸನ್ನು ಮೋದಿ ಸಾಕಾರಗೊಳಿಸಬೇಕು.
ಶಿಕ್ಷಣದಲ್ಲಿ ಕೆಲ ಬದಲಾವಣೆ ಅಗತ್ಯವಿದೆ. ಸತ್ಯ ಹೇಳುವುದು ಮತ್ತು ಆನಂದ ನೀಡುವ ಅಂಶಗಳು ಶಿಕ್ಷಣದಲ್ಲಿ ಹೆಚ್ಚುವರಿ ಗುರಿಗಳಾಗಬೇಕು. ಇಂದು ಶಿಕ್ಷಣವೆಂದರೆ ನೌಕರಿ, ಕೌಶಲ್ಯ ಕೇಂದ್ರಿತವಾಗಿದ್ದು, ಅದಕ್ಕಿಂತಲೂ ಹೆಚ್ಚಾಗಿ ಒಂದಿಷ್ಟು ಮೌಲ್ಯಗಳು ಬರಬೇಕಿದೆ. ಮೌಲ್ಯಗಳೆಂದರೆ ಹಿಂದು ಧರ್ಮದ ಮೌಲ್ಯಗಳಷ್ಟೇ ಅಲ್ಲ. ಜಗತ್ತಿನಾದ್ಯಂತ ಯಾವುದನ್ನು ಎಲ್ಲರೂ ಸೇರಿ ಒಪ್ಪಿಕೊಂಡಿದ್ದಾರೋ ಅಂತಹ ನಾಗರಿಕ ಮೌಲ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಬೇಕು. ಸುಂದರ ನಾಗರಿಕತೆ ಕಟ್ಟುವ ಹಾಗೂ ಭಾರತಕ್ಕೆ ಹೊಂದುವ ಮೌಲ್ಯಗಳನ್ನು ಶಿಕ್ಷಣದಲ್ಲಿ ತರುವ ಪ್ರಯತ್ನವನ್ನು ಮೋದಿಯವರು ಮಾಡಬೇಕು. ಉಳಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಈಗಾಗಲೇ ಚಾಲನೆ ನೀಡಿದ್ದಾರೆ. ವಿದೇಶಗಳಲ್ಲಿ ಭಾರತ ಹಿರಿಮೆ ಹೆಚ್ಚಿಸುವ, ಶಿಸ್ತು, ಸ್ವತ್ಛತೆಗೆ ಆದ್ಯತೆ ನೀಡುವ ಕಾರ್ಯವೂ ನಡೆದಿದೆ. ಮುಂದಿನ 5- 10 ವರ್ಷಗಳಲ್ಲಿ ಭಾರತದ ಜನ ಶಾಂತವಾಗಿ ಬದುಕಬೇಕಿದೆ. ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನ ಪಡೆಯುವುದಕ್ಕಿಂತ ಶಾಂತಿ, ಸಹಬಾಳ್ವೆಯಿಂದ ಎಲ್ಲರೂ ಎಲ್ಲ ಅನುಕೂಲಗಳ ಜೊತೆಗೆ ಬದುಕುವಂತಾಗಬೇಕು. ಶ್ರೀಮಂತಿಕೆಯೊಂದೇ ದಾರಿಯಲ್ಲ.
ಜಗತಿನಲ್ಲೆ ಎರಡನೇ ಅತಿ ದೊಡ್ಡ ರಾಷ್ಟ್ರ, ಅಮೆರಿಕ ಆಗಬೇಕೆಂಬ ಹುಚ್ಚು ಇರಬಾರದು. ನಾವಿಂದು ಪ್ರತಿಕೂಲ ಪರಿಸ್ಥಿತಿಯಲ್ಲಿದ್ದೇವೆ. 130 ಕೋಟಿ ಜನಸಂಖ್ಯೆ ಇದೆ. ಭೌಗೋಳಿಕ ವೈವಿಧ್ಯದ ಜತೆಗೆ ಪ್ರಕೃತಿ ನಮಗೆ ಕೈಕೊಡುತ್ತಿದೆ. ಇಂತಹ ಸ್ಥಿತಿಯಲ್ಲಿ ಶಾಂತಿಯುತವಾಗಿ ಪ್ರಕೃತಿಯನ್ನು ಸಹಜ
ಸ್ಥಿತಿಗೆ ತರುವ ಮಾದರಿ ರಾಷ್ಟ್ರವಾಗಬೇಕು. ಮೋದಿಯವರು ಕಳೆದ ಅವಧಿಯಲ್ಲಿ ದೇಶದ ರಕ್ಷಣೆ, ಆರ್ಥಿಕ ಸುಧಾರಣೆ ಹಾಗೂ ಜನರಿಗೆ ತಕ್ಷಣ ಕಲ್ಪಿಸಬೇಕಾದ ಸೌಲಭ್ಯಗಳಿಗೆ ಒತ್ತು ನೀಡಿದ್ದರು. ಇದನ್ನೆಲ್ಲಾ ಜನ ಮೆಚ್ಚಿದ್ದಾರೆ. ಮುಂದೆ ಕೈಗೊಳ್ಳುವ ಕ್ರಮಗಳು ಜನರಿಗೆ ಇಷ್ಟವಾಗುವುದೋ ಇಲ್ಲವೋ,
ಆದರೆ ಭವಿಷ್ಯದಲ್ಲಿ ಉತ್ತಮ ದಿನಗಳಿಗೆ ಇದು ಅಗತ್ಯ. ಮುಂದಿನ 30, 50 ವರ್ಷಗಳಿಗೆ ಬೇಕಾದ ಪ್ರಗತಿಯ ಬೇರೆ ದಾರಿಯನ್ನು ಕೂಡಬೇಕಿದೆ.
ದೇಶದ ನಾಯಕತ್ವದ ಗುಣ ಮೊದಲೇ ಇತ್ತು: ಗುಜರಾತ್‌ನಲ್ಲಿ ನಡೆದ ದಂಗೆ ಕಾರಣಕ್ಕೆ ನರೇಂದ್ರ ಮೋದಿಯವರು ರಾಜಕೀಯ ಏಳ್ಗೆ ಸಾಧಿಸಿದರೆಂಬ ಭಾವನ ಬಹಳಷ್ಟು ಜನರಲ್ಲಿದೆ. ಆದರೆ ವಾಸ್ತವ ಹಾಗಿಲ್ಲ. ಅದಕ್ಕೆ ಉದಾಹರಣೆ ಹೇಳುವುದಾದರೆ, ಈ ಹಿಂದೆ ನಾನು ದೆಹಲಿಯಲ್ಲಿದ್ದಾಗ ಚುನಾವಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಮೋದಿಯವರು ಮುಂದೆ ಪ್ರಧಾನಿಯಾಗುತ್ತಾರೆ ಎಂಬ ಯಾವ ಸುಳಿವೂ ಇರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರನ್ನು ಮಹಾರಾಷ್ಟ್ರದ ಇಚ್ಚಲ್‌ಕಾರಂಜಿ, ಕೊಲ್ಹಾಪುರ ಭಾಗಗಳಿಗೆ ಚುನಾವಣಾ ಪ್ರಚಾರಗಳಿಗೆ ನಿಯೋಜಿಸಲಾಗಿತ್ತು. ಆಗ ತಮ್ಮನ್ನು ಯಾವ ಕಾರಣಕ್ಕೆ ಕೊಲ್ಹಾಪುರ, ಸಾಂಗ್ಲಿ, ಇಚ್ಚಲ್‌ಕಾರಂಜಿಗೆ ನಿಯೋಜಿಸಲಾಗಿದೆ ಎಂದು ಮೋದಿ ಪ್ರಶ್ನಿಸಿದ್ದರು. ಆಗ ಆ ಭಾಗದಲ್ಲಿ ಹಿಂದೂ- ಮುಸ್ಲಿಂ ಸಂಘರ್ಷವಿರುವ ಕಾರಣ ಪ್ರವಾಸ ಉಪಯುಕ್ತವಾಗಬಹುದು ಎಂದು ಹೇಳಲಾಯಿತು. ಆಗ ಮೋದಿಯವರು, ಆ ರೀತಿ ಯೋಚಿಸಬೇಡಿ. ನಾನು ಹೋಗುವುದಿಲ್ಲ ಎಂದು ಹೇಳಿದ್ದರು. ಇದು ಆ ಹೊತ್ತಿಗಾಗಲೇ ಅವರಿಗೆ ಇಡೀ ದೇಶದ ಸರ್ವಸಮ್ಮತ ನಾಯಕತ್ವ ವಹಿಸುವ ಮನಸ್ಥಿತಿ ಇದ್ದುದನ್ನು ತೋರಿದಂತಿತ್ತು. ತಮಗೆ ಹಿಂದೂ ನಾಯಕ, ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಬೇಡ ಎಂಬುದನ್ನು ಅವರು ಪ್ರಜ್ಞಾಪೂರ್ವಕವಾಗಿಯೇ ಚಿಂತಿಸಿ ನಿರ್ಧರಿಸಿದ್ದರು. ನಂತರವೂ ಅದೇ ರೀತಿ ನಡೆದುಕೊಂಡು ಯಾವುದೇ ಒಂದು ಜಾತಿ, ಧರ್ಮದ ಪರವಾಗಿರದೆ ಎಲ್ಲರಿಗೂ ಒಳಿತಾಗುವುದನ್ನು ಮಾಡುತ್ತಾ ಬಂದಿದ್ದಾರೆ.
ಡಾ. ವಾಮನ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.