ಬೆಳೆಯುವ ವೇಗ ಕಂಡರೆ ಭಯವಾಗುತ್ತದೆ
Team Udayavani, Apr 8, 2017, 1:51 AM IST
ವರ್ತಮಾನದ ಬಿಸಿಲಿಗಿರುವ ಹಪಾಹಪಿ ಏನೆಂಬುದೇ ಕೆಲವೊಮ್ಮೆ ಅರ್ಥವಾಗದು. ನಗರಗಳ ಬೆಳೆಯುವ ವೇಗಕ್ಕೆ ಗಂಟೆ ಕಟ್ಟಬೇಕೋ, ಬೆನ್ನಿನ ಮೇಲೆ ಶಹಭಾಸ್ ಗಿರಿ ಕೊಟ್ಟು ಮತ್ತಷ್ಟು ವೇಗವಾಗಿ ಓಡುವಂತೆ ಹುರಿದುಂಬಿಸಬೇಕೋ ಎಂಬುದು ಅರ್ಥವಾಗದ ಹೊತ್ತಿದು.
ವರ್ತಮಾನದ ಬಿಸಿಲಿಗೆ ಪ್ರಖರತೆಯಷ್ಟೇ ಅಲ್ಲ; ಎಲ್ಲವನ್ನೂ ಕರಗಿಸುವ ಸಾಮರ್ಥ್ಯವಿರುತ್ತದೆ. ಅದು ಉತ್ಸಾಹವೆನ್ನಬೇಕೋ ಅಥವಾ ಭಸ್ಮಾಸುರನಿಗಿದ್ದ ಎಲ್ಲವನ್ನೂ ಜಯಿಸಿಬಿಡಬೇಕೆಂಬ ಅಭೀಪ್ಸೆಯೋ ತಿಳಿಯದು. ಆದರೆ, ನಾವೀಗ ಇರುವುದು ಅಂಥದ್ದೇ ಒಂದು ವರ್ತಮಾನದಲ್ಲಿ. ನಗರಗಳು ಬೆಳೆಯುತ್ತಿರುವ ವೇಗವನ್ನು ಕಂಡರೆ ಸಣ್ಣದೊಂದು ಅಳುಕು ಉಂಟಾಗುವುದು ಸಹಜ. ಹತ್ತು ವರ್ಷಗಳ ಹಿಂದೆ ತನ್ನ ಹಳ್ಳಿಯ ಓದು ಮುಗಿಸಿ ಹತ್ತಿರದ ಸಣ್ಣ ಪಟ್ಟಣಕ್ಕೆ ಕಾಲೇಜಿಗೆಂದು ಬಂದಾಗಲೇ ಅವನು ಅಚ್ಚರಿ ಪಟ್ಟಿದ್ದ. ಅಂಥವನು ಎರಡು ವರ್ಷದ ಬಳಿಕ ಮಹಾನಗರಕ್ಕೆ ಉದ್ಯೋಗ ಅರಸಿಕೊಂಡು ಬಂದಾಗ ಕಂಗಾಲಾಗಿದ್ದೇನೂ ಸುಳ್ಳಲ್ಲ. ಆದರೆ, ಅದಕ್ಕಿಂತಲೂ ಆತ ಗಲಿಬಿಲಿಗೊಂಡದ್ದು ಮಹಾನಗರದಿಂದ ಎರಡು ವರ್ಷಗಳ ಬಳಿಕ ತನ್ನೂರಿಗೆ ವಾಪಸಾದಾಗ. ತನ್ನೂರಿನ ಚಿತ್ರಣವೆಲ್ಲ ಬದಲಾಗಿ ಹೋದದ್ದು ಕಂಡು “ಯಾವುದು ಇದು, ನನ್ನೂರೇ ಅಥವಾ ಮತ್ತೆಲ್ಲೋ ಇಳಿದನೇ?’ ಎಂದು ಪ್ರಶ್ನೆ ಕೇಳಿಕೊಳ್ಳುವಷ್ಟರ ವೇಗದಲ್ಲಿ ಬದಲಾಗುತ್ತಿದೆ. ಈ ನಗರವಾಗುವ ಬಗೆಯಲ್ಲಿ ವೇಗೋತ್ಕರ್ಷ ಹೊರತುಪಡಿಸಿದಂತೆ ಬೇರೇನಾದರೂ ಇರುತ್ತದೆಯೇ ಎಂಬುದು ಅಧ್ಯಯನಕ್ಕೆ ಒಳಗಾಗಬೇಕಾದ ಸಂಗತಿಯೇ.
ನಗರಗಳ ಪುನರುತ್ಥಾನ: ಕೇಂದ್ರ ಸರಕಾರ ನಗರಗಳ ಪುನರುತ್ಥಾನಕ್ಕೆ ಹೊರಟಿದೆ. ದೇಶದ ನೂರು ನಗರಗಳನ್ನು ಸ್ಮಾರ್ಟ್ ನಗರಗಳನ್ನಾಗಿ ಪುನರೂಪಿಸುವ ಹೊಣೆ ಹೊತ್ತಿದೆ. ಅದಕ್ಕಾಗಿ ಆಯ್ಕೆ ಮಾಡಿದ 98 ನಗರಗಳಲ್ಲಿ 24 ರಾಜಧಾನಿಗಳಾಗಿವೆ. 24 ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರಗಳಾಗಿವೆ. 12 ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಕೇಂದ್ರಗಳಾಗಿವೆ. ಐದು ಬಂದರು ಕೇಂದ್ರಗಳಾದರೆ, ಮೂರು ಶಿಕ್ಷಣ-ಆರೋಗ್ಯ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇರುವಂಥವು. ನಮ್ಮ ರಾಜ್ಯದ ದಾವಣಗೆರೆ, ಬೆಳಗಾವಿ, ಮಂಗಳೂರು, ತುಮಕೂರು, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗಗಳು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಗೊಳ್ಳಲು ಸಿದ್ಧವಾಗಿರುವಂಥವು. ಕೇಂದ್ರ ಸರಕಾರದ ಪ್ರಕಾರ ಐದು ವರ್ಷಗಳಲ್ಲಿ ಈ ನಗರಗಳು ಸ್ಮಾರ್ಟ್ ನಗರಗಳಾಗಿ ಪುನರೂಪಗೊಳ್ಳಲಿವೆ. ಒಟ್ಟೂ 96 ಸಾವಿರ ಕೋಟಿ ರೂ. ಗಳ ಯೋಜನೆಯ ಅರ್ಧದಂಶವನ್ನು ಕೇಂದ್ರ ಸರಕಾರ ಭರಿಸುವುದಾಗಿ ಹೇಳಿದೆ. ಉಳಿದದ್ದನ್ನು ರಾಜ್ಯ ಸರಕಾರಗಳು ಭರಿಸಲು ಸಿದ್ಧತೆ ನಡೆಸಬೇಕು. 2014-ಧಿ15ರ ಬಜೆಟ್‌ನಲ್ಲಿ ಕೇಂದ್ರ ಸರಕಾರ 7 ಸಾವಿರ ಕೋಟಿ ಕೊಟ್ಟರೆ, ಅನಂತರದ ವರ್ಷದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ಕೊಟ್ಟಿತು. ಇತ್ತೀಚಿನ ಬಜೆಟ್‌ನಲ್ಲಿ ಅಮೃತ್ ಮತ್ತು ಸ್ಮಾರ್ಟ್ ಸಿಟಿಗೆ ಸುಮಾರು 9 ಸಾವಿರ ಕೋಟಿ ರೂ. ಗಳನ್ನು ಕೊಟ್ಟಿದೆ. ಹಾಗೆಯೇ ರಾಜ್ಯ ಸರಕಾರವೂ 1,188 ಕೋಟಿ ರೂ. ನೀಡಲು ವ್ಯವಸ್ಥೆ ಮಾಡಿದೆ. ಅದರ ಹಿಂದಿನ ವರ್ಷ 776 ಕೋಟಿ ರೂ. ಗಳನ್ನು ನೀಡಿತ್ತು. ಇಷ್ಟೆಲ್ಲ ಹಣ ಹಂಚಿಕೆಯಾಗುತ್ತಿರುವುದು ನಮ್ಮ ನಗರಗಳನ್ನ ಸುಂದರಗೊಳಿಸಲಿಕ್ಕೆ ಮತ್ತು ಅಲ್ಲಿನ ಬದುಕು ಸಹ್ಯವಾಗಿಸಲಿಕ್ಕೆ.
ಹಾಗೆಂದು ಇದೇನೂ ಹೊಸತಲ್ಲ. ಯುಪಿಎ ಸರಕಾರವಿದ್ದಾಗಲೂ ಈ ನಗರಗಳ ಆಧುನೀಕರಣದ ಆಲೋಚನೆ ಆರಂಭವಾಗಿತ್ತು. ಜವಾಹರಲಾಲ್ ನೆಹರೂ ನಗರ ಪುನರುಜ್ಜೀವನ ಯೋಜನೆ ಅಡಿಯೂ ಸುಮಾರು ಏಳು ವರ್ಷಗಳಲ್ಲಿ 67 ನಗರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿತ್ತು. ಈ ಯೋಜನೆಯ ಲಾಭವನ್ನು ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರುಗಳು ಪಡೆದಿದ್ದವು. ನೀರು ಸಮರ್ಪಕ ಪೂರೈಕೆಯಂಥ ಮೂಲ ಸೌಕರ್ಯಗಳ ಕಡೆಗೆ ಗಮನಕೊಟ್ಟಿದ್ದು ಹೆಚ್ಚು. 7 ವರ್ಷಗಳಲ್ಲಿ 66 ಸಾವಿರ ಕೋಟಿ ರೂ.ವೆಚ್ಚ ಮಾಡುವುದಾಗಿ ಹೇಳಿತ್ತು. ಅದರಿಂದ ನಗರಗಳಲ್ಲಿ ಕೆಲ ಪ್ರಮಾಣದ ಅಭಿವೃದ್ಧಿಯಾಗಿದೆ. ಆದರೆ ಸುಸೂತ್ರಗೊಂಡಿಲ್ಲ.
ನಗರಗಳ ಪುನರುತ್ಥಾನವೆಂದರೆ ಹೇಗೆ?: ನಮಗೆ ನಗರಗಳ ಪುನರುತ್ಥಾನವೆಂದರೆ ಹೇಗೆ ಎಂಬ ಕಲ್ಪನೆಯೇ ಸ್ಪಷ್ಟವಾಗಿಲ್ಲ ಎಂದೆನಿಸುತ್ತದೆ. ಎಲ್ಲ ಯೋಜನೆಗಳೂ ನಗರದ ಅಭಿವೃದ್ಧಿಗೆಂದೇ ಹುಟ್ಟಿಕೊಂಡು, ಹಣ ನೀರಿನಂತೆ ಹರಿಯುತ್ತದೆಯೇ ಹೊರತು ನಿಜವಾದ ಅರ್ಥದಲ್ಲಿ ಪ್ರಗತಿಯ ಪಥವನ್ನು ಹಿಡಿದದ್ದು ಕಡಿಮೆಯೇ. ಉದಾಹರಣೆಗೆ ಮಂಗಳೂರನ್ನೇ ತೆಗೆದುಕೊಳ್ಳಿ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ)ನ ನೆರವಿನಡಿ ಸುಮಾರು 306 ಕೋಟಿ ರೂ. ಗಳನ್ನು ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಯ ಮೇಲ್ದರ್ಜೆಗೇರಿಸಲು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ವೆಚ್ಚ ಮಾಡಲಾಯಿತು. ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ಕುಡ್ಸೆಂಪ್) ಕೆಲಸ ಆರಂಭಿಸಿತು. ಕೊನೆಗೆ ಆಗಿದ್ದೇನೆಂದರೆ, ಯಾವ ವ್ಯವಸ್ಥೆಯೂ ಸಮರ್ಪಕವಾಗಲಿಲ್ಲ. ಕೆಲವೆಡೆ ಒಳಚರಂಡಿ ಪೈಪುಗಳ ಅತಂತ್ರದಿಂದ ಜನರು ಪ್ರತಿಭಟನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಸುರತ್ಕಲ್ ಪ್ರದೇಶದಲ್ಲಿ ಇಂದಿಗೂ ಆ ಸಮಸ್ಯೆ ಬಗೆಹರಿದಿಲ್ಲ. ಈಗ ಎರಡನೇ ಹಂತದಲ್ಲಿ ಮತ್ತೆ ಎಡಿಬಿಯಿಂದ ಸಾಲ ತರಲು ಸಿದ್ಧತೆ ಮಾಡಲಾಗಿದೆ. ಹೊಸ ಯೋಜನೆಯಡಿ ಸುಮಾರು 413 ಕೋಟಿ ರೂ. ಗಳಷ್ಟು ಹಣ ಬರಲಿದೆ. ಇದರಲ್ಲಿ 218 ಕೋಟಿ ನೀರಿನ ವ್ಯವಸ್ಥೆಗೆ ಮತ್ತು 195 ಕೋಟಿ ಒಳಚರಂಡಿ ವ್ಯವಸ್ಥೆಗೆ ನಿಯೋಜಿಸಲು ನೀಲನಕ್ಷೆ ತಯಾರಾಗುತ್ತಿದೆ. ಆದರೆ ಈ ಹಣ ಹೊಸ ಮೂಲಸೌಕರ್ಯ ಸೃಷ್ಟಿಸುವುದಕ್ಕಿಂತ ಹಳೆಯದ್ದನ್ನು ದುರಸ್ತಿ ಮಾಡಿ ಸರಿಪಡಿಸಲಿಕ್ಕೇ ಬಳಕೆಯಾಗುವ ಸಾಧ್ಯತೆ ಹೆಚ್ಚು. ಅಲ್ಲಿಗೆ ನಮ್ಮ ಅಭಿವೃದ್ಧಿಯ ಪರಿಕಲ್ಪನೆಯ ಲೆಕ್ಕ ಹಾಕಿಕೊಳ್ಳಿ. ವಿಚಿತ್ರವೆಂದರೆ ಸಾರ್ವಜನಿಕರ ಹಣವನ್ನು ಕಾಯಬೇಕಾದ ಸರಕಾರಿ ಸಂಸ್ಥೆಗಳೇ ಮುತುವರ್ಜಿ ನಡೆಸಿ ವಹಿಸುವ ಕಾಮಗಾರಿಗಳಲ್ಲಿ ಆಗುತ್ತಿರುವ ಸಂಗತಿಯಿದು. ನಮ್ಮ ಲೋಕೋಪಯೋಗಿ ರಸ್ತೆಗಳು ನೋಡಿದರೆ ಗೊತ್ತಾಗುತ್ತದಲ್ಲ. ನರ್ಮ್ನಲ್ಲೂ ಹಣ ಹರಿದು ಹೋದದ್ದು ಹೀಗೆಯೇ. ಇದೇ ಭಯ ಸ್ಮಾರ್ಟ್ ಸಿಟಿಗಳ ಬಗ್ಗೆಯೂ ಆವರಿಸಿದೆ. ಸರಕಾರಗಳು ಬೇರೆ ಇರಬಹುದು; ಆದರೆ ಅದನ್ನು ಅನುಷ್ಠಾನಿಸುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಾಮಾನ್ಯವಾಗಿ ಒಂದೇ ಆಗಿರುತ್ತಾರೆ. ಇದು ಪಂಚಾಯತ್ ಮಟ್ಟದಿಂದ ಹಿಡಿದು ಕೇಂದ್ರ ಸರಕಾರದ ಮಟ್ಟದವರೆಗೂ ಸರಕಾರಿ ಯೋಜನೆಗಳ ಅನುಷ್ಠಾನ ವಿಷಯದಲ್ಲಿ ಕೇಳಿಬರುವ ಮಾತು. ಇದನ್ನು ಆರೋಪವೆಂದೂ ಪರಿಗಣಿಸಬಹುದು. ಸತ್ಯದ ಛಾಯೆಯಿಲ್ಲದ ಆರೋಪ ಎಂದು ಕಡೆಗಣಿಸುವಂತಿಲ್ಲ. ನಮ್ಮ ಪಂಚಾಯತ್, ನಗರಪಾಲಿಕೆಯಂಥ ಸ್ಥಳೀಯ ಸಂಸ್ಥೆಗಳ ವ್ಯವಸ್ಥೆಯಲ್ಲೇ ಹೆಂಡತಿ ಸದಸ್ಯರಾಗಿದ್ದರೆ ಅವರ ಪತಿಯಂದಿರು ಅಲ್ಲಿಯ ಅಧಿಕೃತ ಗುತ್ತಿಗೆದಾರರಾಗಿರುತ್ತಾರೆ. ಆ ಸ್ಥಳೀಯ ಸಂಸ್ಥೆಯ ಯೋಜನೆಗಳೆಲ್ಲ ಸದಸ್ಯರ ಸಂಬಂಧಿಕರಿಗೆ ಹಂಚಿಕೆಯಾಗುವುದೇ ಹೆಚ್ಚು. ಇದು ಇಡೀ ಸಮಾಜಕ್ಕೆ ಗೊತ್ತಿರುವ ಸಂಗತಿ. ನಮ್ಮ ಆಡಳಿತ ವ್ಯವಸ್ಥೆಯ ಜನರೂ ಹೇಗಿರುತ್ತಾರೆಂದರೆ, ಇಂಥ ಅವ್ಯವಹಾರ ನಡೆದು ಬಹಿರಂಗಗೊಂಡರೆ ಅಥವಾ ಬೇರಾವುದಾದರೂ ಆರೋಪಗಳು ಕೇಳಿಬಂದರೆ, ಒಂದು ಸಮಿತಿ ರಚಿಸಿ, ವರದಿ ತರಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ಹೆಚ್ಚು ಬೆನ್ನಿಗೆ ಬಿದ್ದು ನೀವು ಪ್ರಶ್ನಿಸಿದರೆ, “ಬಿಡಿ, ಏನೋ ಮೂರು ಪೈಸೆ ತಿಂದಿರಬಹುದಪ್ಪಾ, ಅವನ ಕುಟುಂಬವೂ ಬದುಕಬೇಕಲ್ವೇ?’ ಎಂದು ಸಾಮಾನ್ಯಿàಕರಿಸಿ ಬಿಡುವ ಪ್ರಸಂಗಗಳು ಬೇಕಾದಷ್ಟಿವೆ. ಆದರೆ ನಾಲ್ಕು ಪೈಸೆಯಲ್ಲಿ ಮೂರು ಪೈಸೆ ತಿಂದರೆ ಉಳಿದದ್ದರ ಕಥೆಯೇನು ?
ಪಾರದರ್ಶಕತೆ ವರವೇ?: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂದಿಷ್ಟು ಪಾರದರ್ಶಕ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಲಾಗಿದೆ. ಯೋಜನೆ ಪ್ರತಿ ಹಂತದಲ್ಲೂ ಸಾರ್ವಜನಿಕರ ಸಹಭಾಗಿತ್ವಕ್ಕೆ ಅವಕಾಶ ಕೊಡುವ ಕ್ರಮಗಳೂ ಇವೆ. ಆದರೆ, ಅದು ಎಷ್ಟರಮಟ್ಟಿಗೆ ಪ್ರಾಮಾಣಿಕ ಉದ್ದೇಶವನ್ನು ಹೊಂದಿರುತ್ತವೆಂಬುದು ಕಾದು ನೋಡಬೇಕು ನಿಯಮಗಳೆಲ್ಲ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕವಾಗಿರುತ್ತವೆ. ಆದರೆ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳೂ ಹವಾನಿಯಂತ್ರಿತ ಕೋಣೆಗಳಲ್ಲಿ ಗಣ್ಯರ ನಡುವೆ ನಡೆಯುವುದರಿಂದ ಈ ಹಂತದಲ್ಲಿ ಕಾದುಕೊಳ್ಳುವ ಪಾರದರ್ಶಕತೆ ಎಷ್ಟೆಂಬುದರ ಆಧಾರದ ಮೇಲೆ ಅಭಿವೃದ್ಧಿಯ ಪ್ರಮಾಣವನ್ನು ಲೆಕ್ಕ ಹಾಕಬಹುದಷ್ಟೇ. ಹಾಗಾಗಿ ಡಿಜಿಟಲ್ ಇಂಡಿಯಾದಲ್ಲಿ ಪಾರದರ್ಶಕತೆ ಎಂಬುದು ವರವಾದೀತೆ ಎಂಬ ಪ್ರಶ್ನಾರ್ಥಕ ನೆಲೆಯಲ್ಲೇ ವ್ಯವಹರಿಸಬೇಕಾದ ಸ್ಥಿತಿ ಇನ್ನೂ ಇದೆ.
ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಿಗೆ ಯೋಜನೆ ಅನುಷ್ಠಾನದಲ್ಲಿನ ಪ್ರಾಮಾಣಿಕತೆ ಮಾತ್ರ ವರವಾದಾವು; ಇಲ್ಲದಿದ್ದರೆ ಅದು ಶಾಪವಲ್ಲದೇ ಮತ್ತೇನೂ ಅಲ್ಲ. ನಗರಗಳ ಬೆಳೆಯುವ ವೇಗಕ್ಕೆ ಗಂಟೆ ಕಟ್ಟಬೇಕೋ, ಬೆನ್ನಿನ ಮೇಲೆ ಶಹಭಾಸ್ ಗಿರಿ ಕೊಟ್ಟು ಮತ್ತಷ್ಟು ವೇಗವಾಗಿ ಓಡುವಂತೆ ಹುರಿದುಂಬಿಸಬೇಕೋ ಎಂಬುದು ಅರ್ಥವಾಗದ ಹೊತ್ತಿದು.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.