ಕನಸು ಎಂಬ ಮಾಯಾಮೃಗದ ಬೆನ್ನಟ್ಟಿ…
Team Udayavani, Jul 29, 2018, 12:30 AM IST
ಹಾಳೆ ಹಿಡಿದುಕೊಂಡು ಹನುಮಂತನಗರದ ಅರವಿಂದ ಸ್ಟುಡಿಯೋಗೆ ಬಂದರೆ ಅಲ್ಲಿ ಸಿ. ಅಶ್ವತ್ಥ್ ಸಿಂಗರ್ ರೂಮಿನಲ್ಲಿ ಏನೋ ಮಾಡುತ್ತಿದ್ದರು. ಕಲಾವಿದರು ವಾದ್ಯಗಳನ್ನು ಹಾಗಾಗೇ ಬಿಟ್ಟು, ಊಟಕ್ಕೆ ಹೋಗಿದ್ದರು. ಅಶ್ವತ್ಥ್ಗೆ ನನ್ನ ಸೀರಿಯಲ್‌ಗೆ ಮ್ಯೂಸಿಕ್ ಮಾಡಿಕೊಡಿ ಅಂತ ಕೇಳಿದೆ. “ಏನ್ ಸೀರಿಯಲ್, ಎಷ್ಟು ಎಪಿಸೋಡ್’ ಅಂದರು. ನಾನು ಒಂದು ಮೂನ್ನೂರು ಅಂದೆ. ಅವರ ಮುಖ ಪಿಂಜುಗೊಂಡಿತು.”ಏನೂ? ಮೂನ್ನೂರ? ಯಾವೋನ್ ನೋಡ್ತಾನೆ. ಅದೂ ಮಧ್ಯಾಹ್ನ ನಾಲ್ಕೂವರೆಗೆ. ಚೊಂಬು, ಚೊಂಬು ಹಿಡ್ಕೊಂಡು ಹೋಗ್ತಿಯ’ ಅಂದುಬಿಟ್ಟರು.
“”ತಟದಲ್ಲಿ ನಿಂತವನ ಮುಂದೆ ನೆನಪುಗಳೇ ಸಾಲು ದೋಣಿ ಎತ್ತರದ ನಿಲುವು, ಅಷ್ಟೇ ಗತ್ತಿನ ಗಂಟಲು. ಹಿಟ್ಲರ್ ಮೀಸೆ, ಕಚ್ಚೆ -ಪಂಚೆ, ಅಪ್ಪ ನಾರಾಯಣರಾವ್ ಎಂದರೆ ಕಣ್ಣ ಮುಂದೆ ಬರುವುದೇ ಈ ಆಕೃತಿ. ಅಪ್ಪನ ಏರು ಗಂಟಲಿನಿಂದ ಹೊರಡುತ್ತಿದ್ದ ಗದುಗಿನ ಭಾರತ ಕಂದಕಗಳು ಕೇಳಬೇಕು. ಕೌಂತೇಯರು ಸುಯೋಧರೆನಗೆ ಬೆಸಗೈವಲ್ಲಿ ಮನವಿಲ್ಲ ಅಂತ 55 ವರ್ಷದ ಹಿಂದೆ ತಾರಕಸ್ಥಾಯಿಯಲ್ಲಿ ಹಾಡಿದ್ದು ಇನ್ನೂ ನನ್ನ ಕಿವಿಯಿಂದ ಎಧ್ದೋಗಿಲ್ಲ.
ಯಡದ ಗಣನದೀ ಕೌರವೇಂದ್ರರು, ಬಲದ ಗಣನದೀ ಪಾಂಡುತನಯರು-
ಅಪ್ಪ ಸ್ವರಗಳ ಏರಿಳಿತದಲ್ಲೇ ಯುದ್ಧದ ಎರಡೂ ಬಣಗಳ ಚಿತ್ರಣವನ್ನು ಬಿಡಿಸುತ್ತಿದ್ದ ರೀತಿ ಇದೆಯಲ್ಲ; ಅದು ಅತ್ಯಾಕರ್ಷಣೀಯ. ಗದುಗಿನ ಭಾರತವನ್ನು ನಮ್ಮಪ್ಪನ ರೀತಿ ಹೇಳ್ಳೋ ವ್ಯಕ್ತೀನ ಈತನಕ ನೋಡೇ ಇಲ್ಲ ಬಿಡಿ. ಹಾಗಾಗಿ, ಚಿಕ್ಕವಯಸ್ಸಿನಲ್ಲಿ ನಮಗೆ ಕರ್ಣ, ಭೀಮ, ದುರ್ಯೋಧನ, ಭೀಷ್ಮ ಇವರೆಲ್ಲಾ ಪಕ್ಕದ ಮನೆಯವರೋ, ಎದುರು ಮನೆಯವರೋ, ಆಗಾಗ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದ ಸಂಬಂಧಿಕರ ರೀತಿಯೋ ಆಗಿಬಿಟ್ಟಿದ್ದರು.
“ಹಗೆವರ ಶಿರಗಳ ತಂದೊಪ್ಪಿಸುವೆನೆಂಬೀ ಭರದಲಿರ್ದೆನು ಕೌರವೇಂದ್ರನ ಕೊಂದೆ ನೀನೆಂದ’ ಅಂತ ಕರ್ಣನ ಬಗ್ಗೆ ಹೇಳುತ್ತಿದ್ದಾಗ ಅಪ್ಪನ ಕಣ್ಣಲ್ಲಿ ನೀರು ಬರೋದು. ಅವರನ್ನೇ ದಿಟ್ಟಿಸುತ್ತಿದ್ದ ನಮ್ಮ ಕಣ್ಣೂ ಕೊಳವಾಗೋದು. ಕರ್ಣ, ದುರ್ಯೋಧನರ ನೆನಪಾದಾಗೆಲ್ಲಾ ಅವರನ್ನು ಆವಾಹಿಸಿಕೊಂಡು ಪಾತ್ರಗಳಾಗಿಬಿಡೋರು. ತಂದೆಗೆ ಈ ನಾಟಕದ ಗೀಳು ಹುಟ್ಟಿದ್ದೇ ಒಂದು ಕಥೆ. ಮನೆಯಲ್ಲಿ ಬಡತನವಿತ್ತು. ಅಪ್ಪ, ಚಿಕ್ಕವಯಸ್ಸಿಗೇ ತಾಯಿಯನ್ನು ಕಳೆದುಕೊಂಡ ತಬ್ಬಲಿ. ಹಾಗಾಗಿ ಬದುಕುವುದಕ್ಕೆ ನಾನಾ ಸರ್ಕಸ್ಸು ಮಾಡುತ್ತಿದ್ದರು. ಅದರಲ್ಲಿ ಈ ನಾಟಕವೂ ಒಂದು. ಮದುವೆಗೆ 6 ತಿಂಗಳು ಮೊದಲೂ ನಾಟಕದ ಕಂಪನಿಯಲ್ಲಿ ಇದ್ದರಂತೆ. ನಂತರ ಮನೆಯ ಜವಾಬ್ದಾರಿ ಹೆಚ್ಚಿ ದೊಡ್ಡಬಳ್ಳಾಪುರಕ್ಕೆ ಬಂದು ಮತ್ತೆ ಕೃಷಿ ಕಡೆ ವಾಲಿಕೊಂಡರು.
ವಿಚಿತ್ರ ಗೊತ್ತೆ?
ಅಲ್ಲೇ ಇರೋದು ನಮ್ಮೂರು ತಳಗವಾರ ಅಂತ. ನಮ್ಮ ಮನೇಲಿ ಮೈಸೂರು ಮಲ್ಲಿಗೆ ಪುಸ್ತಕದ ಹಳೇ ಕಾಪಿ ಇತ್ತು. ಹೀಗಾಗಿ, ಮನೆಯವರೆಲ್ಲರಿಗೂ ಕೆಎಸ್‌ನ ಚಿರಪರಿಚಿತರು. ಅಪ್ಪನ ಬಾಯಲ್ಲಿ ಕುಮಾರವ್ಯಾಸನಷ್ಟೇ ಸಲೀಸಾಗಿ ಕೆಎಸ್‌ನ ಪದ್ಯಗಳು ಬಂದು ಹೋಗುತ್ತಿದ್ದವು. ನಮ್ಮೂರ ಪಟೇಲರು “ರಾಯರು ಬಂದರು ಮಾವನ ಮನೆಗೆ’ ಅಂತ ಹಾಡೋರು. ಹೀಗೆ ನನ್ನೊಳಗಿನ ನಾಟಕ ಪ್ರಪಂಚಕ್ಕೆ ಗುದ್ದಲಿ ಪೂಜೆ ಮಾಡಿದ್ದು, ಸಾಹಿತ್ಯದ ಪ್ರೀತಿ, ಓದುವ ಭಕ್ತಿಯ ಹಣತೆ ಹಚ್ಚಿದ್ದು ಅಪ್ಪನೇ.
ಕಾಲೇಜಿಗೆ ಅಂತ ಬೆಂಗಳೂರಿಗೆ ಬಂದೆ. ಮನದ ಹೆಗಲ ಮೇಲೆ ನಾಟಕದ ಹುಚ್ಚು ಇತ್ತು. ನಾಟಕ ಆಡೋಕೆ ಅವಕಾಶ ಸಿಗಬಹುದು ಅಂತ ನ್ಯಾಷನಲ್ ಕಾಲೇಜ್‌ಗೆ ಸೇರಿದೆ. ಅಲ್ಲಿ ಯಾವ ಪಾತ್ರಗಳೂ ಸಿಗೋದಿಲ್ಲ ಅಂತ ಗೊತ್ತಾಗಿದ್ದೇ ತಡ; ರೇಣುಕಾಚಾರ್ಯ ಕಾಲೇಜಿಗೆ ಜಂಪ್ ಮಾಡಿದೆ. ಅಲ್ಲಿ ಲಂಕೇಶರ ನಾಟಕಗಳ ಲೀಡ್ ರೋಲ್‌ದಕ್ಕಿತು.
“ಬಂಡ್ವಾಳಿಲ್ಲದ ಬಡಾಯಿ’ ನಾಟಕದಲ್ಲಿ ಹೀರೋ ಪಾತ್ರ ಮಾಡಿ ಹೆಸರಾದೆ. ಆಗ ಶೇಷಾದ್ರಿ ರಸ್ತೆಯಲ್ಲಿದ್ದ ಬೊಬ್ಬರಕಮ್ಮಿ ಹಾಸ್ಟೆಲ್‌ನಲ್ಲಿ ನನ್ನ ವಾಸ್ತವ್ಯ. ಅಲ್ಲಿಗೆ ಕೀ.ರಂ. ಬರೋರು. ಅವರು ಲಂಕೇಶ್‌ರಿಗೆ ನನ್ನನ್ನು ಪರಿಚಯಿಸಿದರು. ಅವರ ನಾಟಕಗಳಲ್ಲಿ ಪಾತ್ರ ಮಾಡಿದೆ. ಅಪ್ಪನ ಸಾಹಿತ್ಯ ಪ್ರೀತಿ, ನಾಟಕದ ಒಲವು, ಲಂಕೇಶರ ಸಹವಾಸ ಎಲ್ಲವೂ ಸೇರಿ ನವ್ಯಕಾಲದ ಸಾಹಿತ್ಯ ದಿಗ್ಗಜರಾದ ಅಡಿಗರು, ಪುತಿನ, ಕೆಎಸ್‌ನರಂಥವರನ್ನೆಲ್ಲಾ ಓದಿಕೊಂಡೆ.
ಇಷ್ಟೆಲ್ಲಾ, ಆದ ಮೇಲೆ ಬದುಕೋಕೆ ಏನಾದ್ರು ಮಾಡಬೇಕಲ್ಲ ಅಂತ ಮತ್ತೆ ಊರಿಗೆ ಹೋಗಿ ತಮ್ಮನ ಜೊತೆ ತೋಟದಲ್ಲಿ ಸೆನಿಕೆ ಹಿಡಿದೆ. ಅಷ್ಟೊತ್ತಿಗೆ ಎಲ್ಲೆಡೆ ತುರ್ತುಪರಿಸ್ಥಿತಿ ವಿರೋಧಿಸಿ ಚಳವಳಿ ಶುರುವಾಗಿತ್ತು. ಕೆ.ಆರ್‌ಸರ್ಕಲ್ ನಿಂದ ಟೌನ್‌ಹಾಲ್ ತನಕ ದಿನಕ್ಕೊಂದು ಪ್ರತಿಭಟನೆ ನಡೆಯೋದು. ಕಾಂಗ್ರೆಸ್, ಅರಸು ವಿರುದ್ಧ ಧಿಕ್ಕಾರ ಕೂಗೋರು. ಇದಕ್ಕಾಗಿ ಊರಿಂದ ಬೆಂಗಳೂರಿಗೆ ಬರುತ್ತಿದ್ದೆ. ಜೊತೆ ಜೊತೆಗೆ ದೊಡ್ಡಬಳ್ಳಾಪುರದಲ್ಲಿ ಲಾ ಪ್ರಾಕ್ಟೀಸು ಶುರುಮಾಡಿದ್ದೆ. ಇಂಥ ಹೊತ್ತಲ್ಲೇ ಲಂಕೇಶರು “ಪಲ್ಲವಿ’ ಸಿನಿಮಾಕ್ಕೆ ಕೆಲಸ ಮಾಡಲು ಕರೆದರು.
ನೋಡಿದ್ರೆ, “ಹೀರೋ ನೀನೇ ಕಣಯ್ನಾ’ ಅಂದು ಬಿಡೋದಾ? ಮೇಷ್ಟ್ರೇ, ನಾನು ಚಾಕೊಲೇಟ್ ಹೀರೋ ಅಲ್ಲ ಅಂದ್ರೆ, “ಈ ಪಾತ್ರಕ್ಕೆ ಹಳ್ಳಿಯವನು, ಸಂಕೋಚ ಇರೋ ನಿನ್ನಂಥವನೇ ಬೇಕು. ಅವನೇ ಭಾರತದ ನಿಜವಾದ ಯುವ ಪ್ರತಿನಿಧಿ’ ಅಂದರು. ಚಿತ್ರಕ್ಕೆ ರಾಜಕೀಯದ ನೆರಳಿತ್ತು. ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಮಾಡಿ ಜೈಲಿನಲ್ಲಿದ್ದವರೆಲ್ಲಾ ಬಿಡುಗಡೆಯ ನಂತರ ಈ ಚಿತ್ರ ನೋಡಿದರು. ಫೇಮಸ್ಸಾದೆ. ದೊಡ್ಡಬಳ್ಳಾಪುರದ ಕಡೆ ಬಂದಾಗೆಲ್ಲ ಎ.ಕೆ. ಸುಬ್ಬಯ್ಯ, ರಾಮಕೃಷ್ಣ ಹೆಗಡೆ ನಮ್ಮ ಮನೆ ಕಡೆಗೆ ಬರೋರು. ಹೀಗಾಗಿ ಊರಲ್ಲಿ ನನಗೆ ಗೌರವ ಹೆಚ್ಚಾಗುತ್ತಾ ಹೋಯ್ತು.
**
ಗೌರಿಬಿದನೂರು ಟೌನ್‌ಗೆ ಅಂಟಿಕೊಂಡಂತೆ ಮಾದನಹಳ್ಳಿ ಅಂತಿದೆ. ಅಲ್ಲಿಂದ ಎರಡು ಕಿ.ಮೀ ಒಳಗೆ ಪಿನಾಕಿನಿ ನದಿ. ಅದರ ದಂಡೆಯ ಮೇಲೆ ಅಪ್ಪನ ಜಮೀನು. ಅಲ್ಲೇ ನಮ್ಮ ಮನೆ. ಗೌರಿಬಿದನೂರಿನಲ್ಲಿ ಆಗತಾನೇ ಕೋರ್ಟ್ ಶುರುವಾಗಿದ್ದರಿಂದ ಮತ್ತೆ ಕರಿಕೋಟು ಧರಿಸುತ್ತಿದ್ದೆ. ಮಧ್ಯೆ ಮಧ್ಯೆ ಕತೆ, ನಾಟಕಗಳನ್ನು ಬರೆಯುವ ಹುಚ್ಚು. ಆ ಹೊತ್ತಿಗೆ ಎರಡು ಸಂತೋಷದ ಸುದ್ದಿ ಬಂದವು.
ಒಂದು-ಪಲ್ಲವಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದದ್ದು. ಇನ್ನೊಂದು, ನನ್ನ “ಆಸ್ಫೋಟ’ ನಾಟಕ ಮದರಾಸಲ್ಲಿ 100ನೇ ಪ್ರದರ್ಶನ ಕಂಡದ್ದು. ಆಗ ಪುಟ್ಟಣ್ಣ ಕಣಗಾಲ್ ಅಲ್ಲೇ ಇದ್ದರು. ನಾಟಕ ನೋಡಿದ್ದೇ ತಡ, ಮಾರನೇ ದಿನಕ್ಕೆ ಮಾದನಹಳ್ಳಿ ತೋಟದ ಮನೆಯ ಬಾಗಿಲು ತಟ್ಟಿದರು. ಅಲ್ಲಿಗೆ ಬರೋದಕ್ಕೆ ಸ್ವತಂತ್ರವಾದ ದಾರಿ ಕೂಡ ಇರಲಿಲ್ಲ. ಜಮೀನಿನ ಬದುವಿನ ಮೇಲೆ ಸಾವರಿಸಿ ಕೊಂಡು ತಲುಪಬೇಕಿತ್ತು. ಆದರೂ ಹುಡುಕಿ ಬಂದರು ಪುಟ್ಟಣ್ಣ. “ನಿಮ್ಮ ನಾಟಕ ನೋಡಿದೆ. ಬಹಳ ಚೆನ್ನಾಗಿದೆ. ನೀವು ನನ್ನ ಸಿನಿಮಾಕ್ಕೆ ಏಕೆ ಕೆಲಸ ಮಾಡಬಾರದು’ ಅಂತ ಮುಕ್ತ ಆಹ್ವಾನವಿತ್ತರು. “ಸರಿ ಸಾರ್’ ಅಂತ ಕೋಟು ಬಿಚ್ಚಿಟ್ಟು ಅವರ ಹಿಂದೆ ಹೊರಟೇ ಬಿಟ್ಟೆ. ಅದುವೇ ಮಾನಸ ಸರೋವರ ಸಿನಿಮಾ.
ಹೀರೋಯಿನ್ ಈಸ್ ದ ಹೀರೋ ಅಂತ ತೋರಿಸೋದು ಪುಟ್ಟಣ್ಣನವರಂಥವರಿಗೆ ಮಾತ್ರ ಸಾಧ್ಯ. ಹೆಣ್ಣಿನ ಭಾವ ಲೋಕವನ್ನು ಚಿತ್ರಿಸುವ ಪರಿ ಕಲಿತದ್ದು ಅವರಿಂದ. ಆಮೇಲೆ ನಾಗಾಭರಣರ “ಬ್ಯಾಂಕರ್ ಮಾರ್ಗಯ್ಯ’,”ಪಂಚಮವೇದ’ಕ್ಕೆ ಕೆಲಸ ಮಾಡಿದೆ, ಪ್ರಶಸ್ತಿಬಂತು. ಎಸ್. ರಾಮಚಂದ್ರ ಅವರು ಕೈಲಾಸಂರ ಬರಹ ಇಟ್ಟುಕೊಂಡು ಧಾರಾವಾಹಿ ಮಾಡುತ್ತಿದ್ದರು. ಅದಕ್ಕೆ ಜೊತೆಯಾದೆ. ನನ್ನ “ಆಸ್ಫೋಟ’ ನಾಟಕವನ್ನ ದೂರದರ್ಶನಕ್ಕೆ ಧಾರಾವಾಹಿಯನ್ನಾಗಿಸಿದೆ. ಮುಖಾಮುಖೀ ಅನ್ನೋ ಧಾರಾವಾಹಿ ನಿರ್ದೇಶಿಸಿ, ಅದರಲ್ಲಿ ಪಾತ್ರ ಮಾಡಿದೆ. ಹೆಸರು ಬಂತು.
ಮಾಯಾಮೃಗ ಹಿಡಿದ ಕಥೆ
ಈ ಹೊತ್ತಿಗೆ ಮೆಗಾ ಧಾರಾವಾಹಿಯೊಂದು ದೂರದರ್ಶನದಲ್ಲಿ ಶುರುವಾಗಿತ್ತು. ಇದೇ ಥರ ನಾವೇಕೆ ಮಾಡಬಾರದು ಅಂತ ಯೋಚನೆ ಮೊದಲೇ ಬಂದಿತ್ತು. ಅದಕ್ಕೆ ಮಾಯಾಮೃಗ ಅಂಥ ಟೈಟಲ್ ಇಟ್ಟದ್ದೂ ಆಗಿತ್ತು. ಆದರೆ ಕಥೆಯ ಒಂದು ಎಳೆ ಪಿ. ಶೇಷಾದ್ರಿ, ನಾಗೇಂದ್ರ ಶಾ ಹಾಗೂ ನನ್ನೊಳಗೆ ಹರಿದಾಡುತ್ತಿತ್ತು. ಇಂಥ ಸಂದರ್ಭದಲ್ಲಿ ಇರಲಿ ಅಂತ, ಕೆಎಸ್‌ನ ಅವರಿಗೆ ಹಾಡು ಬರೆದು ಕೊಡುವಂತೆ ದುಂಬಾಲು ಬಿದ್ದೆ. ಆ ಕಾಲಕ್ಕೆ ಕೆಎಸ್‌ನ ಯಾರಿಗೂ ಹಾಡು ಬರೆಯುತ್ತಿರಲಿಲ್ಲ. ಬದಲಾಗಿ ಇರೋದನ್ನೇ ಬಳಸಿಕೊಳಿÅà ಅನ್ನೋರು. ನನಗೆ ಅವರ ಡಾಕ್ಯುಮೆಂಟರಿ ಮಾಡಿದ ಸಲುಗೆ ಇತ್ತು. ಅದನ್ನೇ ಬಳಸಿಕೊಂಡು ಬರೆದುಕೊಡಲು ಕೇಳಿದ್ದೆ. ಅವರು, ಸರಿ ಕಥೆ ಹೇಳಿ ಅಂದರು. ಕೇಳಿದ ಮೇಲೆ, ನಾಳೆ ಬೆಳಗ್ಗೆ ಬಂದು ವಿಷದವಾಗಿ ಹೇಳಬೇಕು ಅಂತಲೂ ಅಂದಿದ್ದರು.
ಹೀಗಾಗಿ ಆವತ್ತು ಪಿ. ಶೇಷಾದ್ರಿ, ನಾಗೇಂದ್ರ ಶಾ ಮತ್ತು ನಾನು- ಮೂರು ಜನ ಸೇರಿ ಗಟ್ಟಿ ಕಥೆ ಮಾಡಿಬಿಡೋಣ ಅಂತ ತೀರ್ಮಾನಿಸಿ, ಇದಕ್ಕೆ ನಂದಿಬೆಟ್ಟದ ಏಕಾಂತವನ್ನು ಬಳಿಸಿಕೊಳ್ಳುವುದು ಅಂತಲೂ ಹೊರಟೆವು. ಅಲ್ಲಿ ನೋಡಿದ್ರೆ ಜಾತ್ರೆ. ನಿಲ್ಲೋದಕ್ಕೂ ಜಾಗವಿಲ್ಲ. ತಕ್ಷಣ ಚಿಕ್ಕಬಳ್ಳಾಪುರದಲ್ಲಿದ್ದ ಗೆಳೆಯರಿಗೆ ಪೋನ್ ಮಾಡಿದೆ- ಐಬಿ ಬುಕ್ ಆಯ್ತು. ಖುಷಿಯಿಂದ ಹೋಗಿ ಕೂತಾಗ ಮಧ್ಯಾಹ್ನ 12 ಗಂಟೆ. ಸಂಜೆ 4ರ ಹೊತ್ತಿಗೆ ಕಥೆ ರೆಡಿ. ಮಾರನೆ ದಿನ ಕೆಎಸ್‌ನಗೆ ವಿಷದವಾಗಿ ಕಥೆ ಹೇಳಲು ಹೋದರೆ ಮನೆ ಗೇಟಿನ ಬಳಿ ನಿಂತಿದ್ದರು. “ಬಾರಪ್ಪ, ತಗೋ’ ಅಂತ ಕೈಯಲ್ಲಿದ್ದ ಹಾಳೇನ ಗೇಟಲ್ಲೇ ಕೊಟ್ಟರು. ಆ ಹಾಳೆ ಹಿಡಿದುಕೊಂಡು ಹನುಮಂತ ನಗರದ ಅರವಿಂದ ಸ್ಟುಡಿಯೋಗೆ ಬಂದರೆ ಅಲ್ಲಿ ಸಿ. ಅಶ್ವತ್ಥ್ ಸಿಂಗರ್‌ರೂಮಿನಲ್ಲಿ ಏನೋ ಮಾಡುತ್ತಿದ್ದರು. ಕಲಾವಿದರು ವಾದ್ಯಗಳನ್ನು ಹಾಗಾØಗೇ ಬಿಟ್ಟು, ಊಟಕ್ಕೆ ಹೋಗಿದ್ದರು. ಅಶ್ವತ್ಥ್ಗೆ, ನನ್ನ ಸೀರಿಯಲ್‌ಗೆ ಮ್ಯೂಸಿಕ್ ಮಾಡಿಕೊಡಿ ಅಂತ ಕೇಳಿದೆ.
“ಏನ್ ಸೀರಿಯಲ್, ಎಷ್ಟು ಎಪಿಸೋಡ್’ ಅಂದರು. ನಾನು ಒಂದು ಮೂನ್ನೂರು ಅಂದೆ. ಅವರ ಮುಖ ಪಿಂಜುಗೊಂಡಿತು. “ಏನೂ, ಮೂನ್ನೂರ? ಯಾವೋನ್ ನೋಡ್ತಾನೆ. ಅದೂ ಮಧ್ಯಾಹ್ನ ನಾಲ್ಕೂವರೆಗೆ. ಚೊಂಬು, ಚೊಂಬು ಹಿಡ್ಕೊಂಡು ಹೋಗ್ತಿàಯ’ ಅಂದುಬಿಟ್ಟರು.
“ಇಲ್ಲ, ಕಥೆ ಮಾಡಿದ್ದೀವಿ. ಕೆಎಸ್‌ನ ಸಾಹಿತ್ಯ…’ ಅಂದನಷ್ಟೇ. ಈ ಹೆಸರು ಕಿವಿಗೆ ಬಿದ್ದಾಕ್ಷಣ ಮುಖ ಅರಳಿ, “ಎಲ್ಲಿ ಕೊಡು’ ಅಂತ ಬೆಳಗ್ಗೆ ಅವರು ಕೊಟ್ಟ ಹಾಳೆ ಇಸಿದುಕೊಂಡು, ಅಲ್ಲೇ ಮಲಗಿದ್ದ ಹಾರ್ಮೋನಿಯಂ ಬಾಯಿಬಿಚ್ಚಿ, ಏನೋ ಓದಿಕೊಂಡಂತೆ ಮಾಡಿ- ಮಾಯಾಮೃಗ, ಮಾಯಾಮೃಗ ಮಾಯಾಮೃಗವಿಲ್ಲೀ… ಅಂತ ಗುನುಗಿ “ಸರೀನಾ. ಇರಲಾ? ಹೀಗೆ’ ಅಂದರು. ನಾವು ಮೂರೂ ಜನ ಒಟ್ಟೊಟ್ಟಿಗೇ ತಲೆ ಆಡಿಸಿದೆವು. ಇವತ್ತೂ ಆ ಟ್ಯೂನ್‌ಗೆ ಇಡೀ ಜಗತ್ತೇ ತಲೆಯಾಡಿಸುತ್ತಿದೆ. ಹೀಗೆ ಹುಟ್ಟಿದ “ಮಾಯಾಮೃಗ’ ನನ್ನ ಬದುಕಿನ ಮೈಲಿಗಲ್ಲಾಗಿ, ಜನಪ್ರಿಯತೆಯ ತುತ್ತತುದಿಗೆ ನಿಲ್ಲಿಸಿದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದು.
ಲಂಕೇಶ್, ಲೋಹಿಯಾ ಪ್ರಭಾವ ಇದ್ದುದರಿಂದ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬಹುದು ಅನ್ನೋ ಹುಚ್ಚಿತ್ತು. ಹೀಗಾಗಿ ಗೌರಿಬಿದನೂರಿನಿಂದ ಚುನಾವಣೆಗೆ ನಿಂತೆ; ಘನವಾಗಿ ಸೋತೆ. ಇದರಿಂದ ಅತೀವ ಸಂತಸವಾಗಿದ್ದು ನನಗೇ. ಏಕೆಂದರೆ, ಪ್ರತಿ ದಿನ ಆ ಕೆಲಸ, ಈ ಕೆಲಸ ಮಾಡಿಸಿಕೊಡಿ ಅಂತೆಲ್ಲಾ ಜನ ಬರೋರು. ನನಗೋ, ಇನ್ನೊಬ್ಬರ ಹತ್ತಿರ ಹಲ್ಲುಗಿಂಜುತ್ತಾ ನಿಲ್ಲೋಕೆ ಆಗ್ತಿರಲಿಲ್ಲ. ಇದನ್ನು ಅವರಿಗೆ ಹೇಳ್ಳೋಕೂ ಆಗ್ತಿರಲಿಲ್ಲ. ಚುನಾವಣೆಯಲ್ಲಿ ಸೋತ ನಂತರ ಮನೆ ಹತ್ರ ಯಾರೂ ಸುಳಿಯಲಿಲ್ಲ. ಹಾಗಾಗಿ ಪರಮಸಂತೋಷಿಯಾದೆ.
ಆಮೇಲೆ ನೋಡಿದರೆ-ನಾನೊಬ್ಬನೇ ಅಲ್ಲ ಸೋಲುಂಡಿದ್ದು. ಇತ್ತ ಚಾಮರಾಜಪೇಟೆಯಲ್ಲಿ ಗೆಳೆಯ ಅನಂತನಾಗ್ ಅತ್ತ ಮುಖ್ಯಮಂತ್ರಿ ಚಂದ್ರು ಕೂಡ ಸೋತಿದ್ದರು. ಸಮಾನ ಮನಸ್ಕರೆಲ್ಲಾ ಹೀಗೆ ಒಂದೇ ಸಲ ಸೋತಿರುವಾಗಲೇ ನಿರ್ಮಾಪಕ ನಾರಾಯಣ ಸಿಕ್ಕರು. ಇವರ ವಿಶೇಷ ಹೇಳಲೇಬೇಕು. ಒಂದು ಬೀಡಿ ಕಟ್ಟು ಮುಗಿಯುವ ಹೊತ್ತಿಗೆ ಕಾದಂಬರಿಯನ್ನು ಸೋಸಿ ಬಿಡುತ್ತಿದ್ದರು. ಅವರು ನನ್ನ ಮಾಯಾಮೃಗ ಸೀರಿಯಲ್ ನೋಡುತ್ತಿದ್ದರು. ಹಾಗಾಗಿ, ಸೀತಾರಾಮ್‌ರೇ ಒಂದು ಸಿನಿಮಾ ಮಾಡೋಣ ಅಂದರು. ಯಾವುದು ಅಂದರೆ ಹೇಗೂ ಚುನಾವಣೆಯಲ್ಲಿ ಸೋತು ಒಳ್ಳೇ ಅನುಭವಗಳಿಸಿದ್ದೀರಿ. “ಮತದಾನ’ ಮಾಡೋಣ ಅಂದರು. ಸರಿ ಅಂತ, ಸೋತಿದ್ದ ನಾವೆಲ್ಲಾ ಸೇರಿ ಸಿನಿಮಾ ಮಾಡಿದೆವು. ಆ ಚುನಾವಣೆಯಲ್ಲಿ ಮುಗ್ಗರಿಸಿದವರೆಲ್ಲಾ ಈ ಮತದಾನದಲ್ಲಿ ಗೆದ್ದೆವು. ಹೆಸರು, ಪ್ರಶಸ್ತಿಗಳು ಬಂದವು. ಆಮೇಲೆ ತಿರುಗಿ ನೋಡಿದ್ದೇ ಇಲ್ಲ…ಮನ್ವಂತರ, ಮುಕ್ತಮುಕ್ತಾ ಎಲ್ಲ ಮಿಂಚಾದವು.
ಈಗ ಕಣ್ಣ ಮುಂದೆ “ಮಗಳು ಜಾನಕಿ’ ನಿಂತಿದ್ದಾಳೆ. ಅವಳನ್ನು ಚೆನ್ನಾಗಿ ಬೆಳೆಸುವ ಜವಾಬ್ದಾರಿ ಇದೆ. ಹೀಗೇ, ಬದುಕಿನ ದಿಗಂತಗಳನ್ನು ದಿಟ್ಟಿಸುತ್ತಿರುವಾಗಲೇ ನದಿಯ ತಟದಲ್ಲಿ ನಿಂತವನ ಮುಂದೆ ಹಾದು ಹೋಗುವ ಸಾಲು ದೋಣಿಯಂತೆ ಈ ಹಳೆಯ ನೆನಪುಗಳು ಇಣುಕಿಹೋಗುತ್ತವೆ.
ನಿರೂಪಣೆ: ಕಟ್ಟೆ ಗುರುರಾಜ್
– ಟಿ.ಎನ್.ಸೀತಾರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.