ಕ್ಷೀಣವಾಯಿತು ನಕ್ಸಲರ ಆರ್ಭಟ; ನಕ್ಸಲ್ ಚಳವಳಿ ಅವಸಾನದ ಅಂಚಿಗೆ
ಕಾರ್ಯಪಡೆಯ ದಾಳಿಗೆ ನಕ್ಸಲ್ ತತ್ತರಗೊಂಡಿದೆ. ನಕ್ಸಲರಿಗೂ ಹೋರಾಟಕ್ಕೆ ಅಸ್ತ್ರಗಳೇ ಸಿಗುತ್ತಿಲ್ಲ.
Team Udayavani, Dec 24, 2021, 12:55 PM IST
ಅದೊಂದು ಕಾಲ.. ಪಶ್ಚಿಮ ಘಟ್ಟವೆಂದರೆ ಸಾಕು ಥಟ್ಟನೆ ನಕ್ಸಲ್ ಚಳವಳಿಯ ಭಯಾನಕ ದೃಶ್ಯ ಕಣ್ಣಮುಂದೆ ಹಾದು ಹೋಗುತ್ತಿತ್ತು. ಕರ್ನಾಟಕವಷ್ಟೇ ಅಲ್ಲ, ದೇಶಾದ್ಯಂತ ನಕ್ಸಲ್ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಹತ್ತಿದ್ದ ಕಾಲವದು. ಮಲೆನಾಡಿನ ಕಷ್ಟ ಕಾರ್ಪಣ್ಯಗಳನ್ನು ಮುಂದಿಟ್ಟುಕೊಂಡು ನಕ್ಸಲರು ಹೋರಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕಾರ್ಯಪಡೆಯ ದಾಳಿಗೆ ನಕ್ಸಲ್ ತತ್ತರಗೊಂಡಿದೆ. ನಕ್ಸಲರಿಗೂ ಹೋರಾಟಕ್ಕೆ ಅಸ್ತ್ರಗಳೇ ಸಿಗುತ್ತಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ಮೂವರು ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನಕ್ಸಲ್ ಚಳವಳಿ ಅವಸಾನದ ಅಂಚಿಗೆ ಸರಿಯಿತೇ ಎಂಬ ಮಾತುಗಳು ಕೇಳಿ ಬರತೊಡಗಿವೆ..
ಸಾಕೇತ್ ರಾಜನ್ ಪ್ರಭಾವ
ಮೈಸೂರಿನ ಸಿರಿವಂತ ಕುಟುಂಬದಲ್ಲಿ ಜನಿಸಿ, ದಿಲ್ಲಿಯ ಜೆಎನ್‌ಯುನಲ್ಲಿ ವ್ಯಾಸಂಗ ಮಾಡಿದ್ದ ಸಾಕೇತ್ ರಾಜನ್, ನಕ್ಸಲ್ ಚಟುವಟಿಕೆಯನ್ನು ರಾಜ್ಯದಲ್ಲಿ ಬಲಪಡಿಸಿದ ಎಂದರೆ ತಪ್ಪಾಗಲಾರದು. ಅಲ್ಲದೆ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಭಾಗದಲ್ಲಿ ಹೆಚ್ಚು ಸಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆಗಳು 1980ರಲ್ಲಿ ಉತ್ತರ ಕರ್ನಾಟಕದ ಬೀದರ್, ರಾಯಚೂರು, ಕಲಬುರಗಿಯ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಆದರೆ ಅಷ್ಟು ತೀವ್ರವಾಗಿ ಇರಲಿಲ್ಲ. 2002ರಲ್ಲಿ ಅದು ಮತ್ತೂಂದು ಸ್ವರೂಪ ಪಡೆದುಕೊಂಡಿತ್ತು. 1999ರಿಂದ 2001ರ ಅವಧಿಯಲ್ಲಿ ಸಾಕೇತ್ ರಾಜನ್ ಹಾಗೂ ಇತರರ ನೇತೃತ್ವದಲ್ಲಿ ರಾಜ್ಯದ ಆಯ್ದ ಹಳ್ಳಿಗಳು, ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಜತೆ ಸಭೆ ಅಥವಾ ಪಾಠ ಮಾಡುತ್ತಿದ್ದರು.
ಹಲವು ಜಿಲ್ಲೆಗಳಿಗೂ ವಿಸ್ತಾರ
ಅದೇ ಅವಧಿಯಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು, ಮಡಿಕೇರಿ, ರಾಯಚೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿದ್ಯಾವಂತರು, ಹಿಂದುಳಿದ ಜಾತಿಗಳ ಜನರ ಬಗ್ಗೆ ಅಧ್ಯಯನ ನಡೆಸುತ್ತಿದ್ದರು. ಅನಂತರ ಸಾಮಾಜಿಕ ಅಧ್ಯಯನ ಎಂಬ ಪುಸ್ತಕ ರಚಿಸಿದ್ದರು. ಆ ಪುಸ್ತಕದ ಪ್ರಕಾರವೇ ಎಲ್ಲಡೆ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದವು. ಸಾಕೇತ್ ರಾಜನ್ ರಾಯಚೂರಿನಲ್ಲಿ ಪೀಪಲ್ಸ್ ವಾರ್ ಗ್ರೂಪ್ ಕಟ್ಟಿಕೊಂಡು ಹೋರಾಟ ನಡೆಸುತ್ತಿದ್ದ. ಇದೇ ವೇಳೆ ಕುದುರೆ ಮುಖದಲ್ಲಿ ನ್ಯಾಶನಲ್ ಪಾರ್ಕ್ ಸ್ಥಾಪನೆ ವಿಚಾರದಲ್ಲಿ ಸ್ಥಳೀಯ ಆದಿವಾಸಿಗಳನ್ನು ಒಕ್ಕಲು ಎಬ್ಬಿಸಲಾಗುತ್ತಿತ್ತು. ಅದನ್ನು ವಿರೋಧಿಸಿ ನಕ್ಸಲರು ಸ್ಥಳೀಯರಿಗೆ ಬೆಂಬಲ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿದರು. ಈ ವೇಳೆಯೇ ಹತ್ತಾರು ಮಂದಿ ಸ್ಥಳೀಯರು ನಕ್ಸಲರಾಗಿ ಬದಲಾದರು.
ಅನಂತರ ರಾಜ್ಯದಲ್ಲಿ ನಕ್ಸಲ್ ಹೋರಾಟ ತೀವ್ರಗೊಂಡಿತ್ತು. ಜಮೀನುದಾರರು ಹಾಗೂ ಕಾಡಿನ ಸಮೀಪದ ಮನೆಗಳಿಗೆ ನುಗ್ಗಿ ಆಹಾರ ಪದಾರ್ಥ ಕಳವು ಮಾಡುತ್ತಿದ್ದರು. ಜತೆಗೆ ಕೋವಿ (ರೈಫಲ್)ಗಳನ್ನು ಕಳವು ಮಾಡುತ್ತಿದ್ದರು. 2004ರಲ್ಲಿ ರಾಜ್ಯದ ವಿವಿಧೆಡೆ ಹಂಚಿ ಹೋಗಿದ್ದ ನಕ್ಸಲ್ ತಂಡಗಳನ್ನು ಒಟ್ಟುಗೂಡಿಸಿ ಸಭೆ ನಡೆಸಲಾಗಿತ್ತು. ಅದು ಯಶಸ್ವಿಯಾಗಿತ್ತು. ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿಯಾಗಿದ್ದು, ಜನರನ್ನು ತನ್ನ ಮಾತಿನಿಂದಲೇ ಸಂಘಟಿಸುತ್ತಿದ್ದ ಸಾಕೇತ್ ರಾಜನ್ ಅನ್ನು ರಾಜ್ಯ ನಕ್ಸಲ್ ಸಂಘಟನೆಯ ಮುಖ್ಯಸ್ಥನಾಗಿ ನೇಮಕ ಮಾಡಲಾಗಿತ್ತು. ಜತೆಗೆ ನೀಲಗುಳಿ ಪದ್ಮನಾಭ, ಸಿರಿಮನೆ ನಾಗರಾಜ, ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಅಲಿಯಾಸ್ ಪಾರ್ವತಿ, ಹೊಸಗದ್ದೆ ಶೋಭಾ ಇತರ ಪ್ರಮುಖರು ಸಾಕೇತ್ ರಾಜನ್‌ಗೆ ಕೈಜೋಡಿಸಿದರು.
ಸಾಕೇತ್ ಎನ್‌ಕೌಂಟರ್ ಬಳಿಕ ತೀವ್ರ
ನಕ್ಸಲ್ ಚಟುವಟಿಕೆಗಳು ತೀವ್ರಗೊಂಡ ಬಳಿಕ ವೀರಪ್ಪನ್ ಅನ್ನು ಎನ್‌ಕೌಂಟರ್ ಮಾಡಿದ ತಂಡವನ್ನೇ 2005ರಲ್ಲಿ ನಕ್ಸಲ್ ನಿಗ್ರಹ ಪಡೆಯಾಗಿ ರಚಿಸಲಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿ(ಮೃತ) ಮಧುಕರ್ ಶೆಟ್ಟಿ ಮೊದಲ ಎಸ್ಪಿಯಾಗಿ ನೇಮಕಗೊಂಡಿದ್ದರು. ಈ ತಂಡ ಅದೇ ವರ್ಷ ಚಿಕ್ಕಮಗಳೂರು ಜಿಲ್ಲೆಯ ಮೆಣಸಿನಹಾಡ್ಯದಲ್ಲಿ ಸಾಕೇತ್ ರಾಜನ್ ಹಾಗೂ ಶಿವು ಎಂಬಾತನನ್ನು ಎನ್‌ಕೌಂಟರ್ ಮಾಡಿತ್ತು. ಈ ಎನ್‌ಕೌಂಟರ್‌ಗೆ ಪ್ರತಿಯಾಗಿ ನಕ್ಸಲರು ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ನಡೆಸಿ 8 ಪೊಲೀಸರನ್ನು ಹತ್ಯೆಗೈದರು. ಸಾಕೇತ್ ರಾಜನ್ ಬಗ್ಗೆ ಮಾಹಿತಿ ನೀಡಿದ ಆರೋಪದ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಹಾಕಿ ಕೊಂದಿದ್ದರು. ಅನಂತರ ರಾಜ್ಯದಲ್ಲಿ ಹಂತ-ಹಂತವಾಗಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದರು. ಹೀಗೆ ಸುಮಾರು 7 ವರ್ಷಗಳ ಕಾಲ ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಉಡುಪಿ, ಚಾಮರಾಜನಗರ, ಕೊಡಗು ಹಾಗೂ ಇತರ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದರು. ಅಲ್ಲದೆ ಸಾಕೇತ್ ರಾಜನ್ ಹತ್ಯೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ನಕ್ಸಲ್ ಮುಖಂಡರು ಹತ್ತಾರು ಮಂದಿ ಯುವಕರನ್ನು ಸಂಘಟನೆಗೆ ನೇಮಿಸಿಕೊಂಡರು. ಜತೆಗೆ ಬಿ.ಜಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ಪಶ್ಚಿಮ ಘಟ್ಟ ವಲಯ ಸಮಿತಿ ರಚನೆಯಾಗಿತ್ತು. ಈ ಮೂಲಕ ನಕ್ಸಲ್ ಚಟುವಟಿಕೆಯನ್ನು ಇನ್ನಷ್ಟು ಬಲಪಡಿಸಲಾಗಿತ್ತು.
ಹಂಚಿಹೋದ ನಕ್ಸಲರು
ಸಾಕೇತ್ ರಾಜನ್ ಹತ್ಯೆ ಬಳಿಕ ಸುಮಾರು 7 ವರ್ಷಗಳ ಕಾಲ ಸಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆಗಳು ಹಂತ-ಹಂತವಾಗಿ ಕ್ಷೀಣಿಸಿತು. ಕೆಲವರು ಸ್ಥಳೀಯ ಪೊಲೀಸರು ಅಥವಾ ನಕ್ಸಲ್ ನಿಗ್ರಹ ಪಡೆಯಿಂದ ಎನ್‌ಕೌಂಟರ್ ಆದರು. ಕೆಲವರು ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡರು. ಇನ್ನು ಕೆಲವರು ಸರಕಾರದ ಸಲಹೆ ಮೇರೆಗೆ ಮುಖ್ಯವಾಹಿನಿಗೆ ಬಂದರು. ಇದೇ ನ.9ರಂದು ಕೇರಳದಲ್ಲಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅಲಿಯಾಸ್ ರೆಜಿತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದರು. ಈಗ ಹೊಸಗದ್ದೆ ಪ್ರಭಾ ಕೂಡ ಶರಣಾಗತಿಯಾಗಿದ್ದು, ಇನ್ನುಳಿದ ನಕ್ಸಲರಿಗೆ ದಿಕ್ಕು ತೋಚದಂತಾಗಿದೆ.
ಅವನತಿಗೆ ಏನು ಕಾರಣ?
ರಾಜ್ಯದ ನಕ್ಸಲರ ಸಂಘಟನೆಗೆ ಸಾಕಷ್ಟು ತೊಡಕು ಉಂಟಾಗಿದೆ. ಮೊಬೈಲ್‌ಗಳು ಇರುವುದರಿಂದ ನಕ್ಸಲ್ ಚಟುವಟಿಕೆಗಳ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಮತ್ತೂಂದೆಡೆ ಇತ್ತೀಚೆಗೆ ಕೇರಳದಲ್ಲಿ ನಕ್ಸಲ್ ಸಭೆ ನಡೆದಿತ್ತು. ಒಂದು ವೇಳೆ ಈ ಸಭೆ ಯಶಸ್ವಿಯಾಗಿದ್ದರೆ, ಹಣ ಬಂದಿದ್ದರೆ, ಕರ್ನಾಟಕದಲ್ಲಿ ಸಂಘಟನೆ ವಿಸ್ತರಣೆಗೆ ಪ್ಲಾನ್ ಮಾಡಿದ್ದರು. ಆದರೆ ಸಂಘಟನೆ ಮಾಡುವ ವ್ಯಕ್ತಿಗಳು ಇಲ್ಲ. ಮತ್ತೂಂದೆಡೆ ಅರಣ್ಯ ಪ್ರದೇಶಗಳ ಪ್ರಮಾಣ ಕಡಿಮೆಯಾಗಿದೆ. ಒತ್ತುವರಿ ಹೆಚ್ಚಾಗಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ಹೆಚ್ಚಳ ಮಾಡಿದ್ದಾರೆ. ಜನರ ಬಳಿ ಹೋಗಲು ಸೂಕ್ತ ವಿಚಾರಗಳಿಲ್ಲ. ಮುಖ್ಯವಾಗಿ ಇತ್ತೀಚಿನ ಯುವಕರು ನಕ್ಸಲ್ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಎಲ್ಲ ಕಾರಣಗಳಿಂದ ನಕ್ಸಲ್ ಚಟುವಟಿಕೆಗಳು ಅವನತಿಯತ್ತ ಸಾಗಿದೆ.
ಇನ್ನೂ ಇದ್ದಾರೆ ನಕ್ಸಲರು
ಕೇರಳದಲ್ಲಿ ತಲೆಮರೆಸಿಕೊಂಡಿರುವ ನಕ್ಸಲರು ಮತ್ತೆ ಸಕ್ರಿಯರಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. 12 ನಕ್ಸಲರ ಪೈಕಿ ಬಿ.ಜಿ.ಕೃಷ್ಣಮೂರ್ತಿ, ಈತನ ಪತ್ನಿ ಹೊಸಗದ್ದೆ ಪ್ರಭಾ ಹಾಗೂ ಸಾವಿತ್ರಿ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ. ಆದರೆ ಉಡುಪಿ ಮೂಲದ ವಿಕ್ರಂ ಗೌಡ ತಲೆಮರೆಸಿಕೊಂಡಿದ್ದಾನೆ. ಈತ ಸಾಕೇತ್ ರಾಜನ್ ಬಳಿಕ ನಕ್ಸಲರಲ್ಲೆ ಹೆಚ್ಚು ಪ್ರಭಾವ ಶಾಲಿ ಎಂದು ಹೇಳಲಾಗಿದೆ. ಈತನೊಂದಿಗೆ ಸುಂದರಿ, ಜಾನ್ ಅಲಿಯಾಸ್ ಜಯತ್, ಕೋಟೆ ಹೊಂಡ ರವೀಂದ್ರ, ಶ್ರೀಮತಿ, ಮಡಗಾಲ ಲತಾ, ನೆಲಸೂರ ಶೋಭಾ, ಅಂಗಡಿ ಪ್ರದೀಪ ಹಾಗೂ ವನಜಾಕ್ಷಿ ಸಕ್ರಿಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎನ್‌ಕೌಂಟರ್ ಹೆಜ್ಜೆಗಳು..
2002, ನ.6
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮೊದಲಿಗೆ ನಕ್ಸಲ್ ಅಟ್ಟಹಾಸ ಆರಂಭವಾಯಿತು. ಚೀರಮ್ಮ ಎಂಬ ಮಹಿಳೆಗೆ ಗುಂಡೇಟು.
2003, ನ.17
ಶಂಕಿತ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಎನ್‌ಕೌಂಟರ್
2004, ಅ.21
ಹೆಮ್ಮಿಗೆಯ ರೈತ ಚಂದ್ರಕಾಂತ್ ಎಂಬಾತನ ಮೇಲೆ ಪೊಲೀಸ್ ಬಾತ್ಮೀದಾರ ಎಂದು ಶಂಕಿಸಿ ನಕ್ಸಲರಿಂದ ಮಾರಣಾಂತಿಕ ಹಲ್ಲೆ
2005, ಫೆ.6
ಮೆಣಸಿನಹಾಡ್ಯದ ಬಳಿಗೆಗುಡ್ಡದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಮತ್ತು ಆತನ ಸಹಾಯಕ ಶಿವಲಿಂಗು ಎನ್‌ಕೌಂಟರ್
2005, ಮೇ 17
ನಕ್ಸಲರಿಂದ ಬುಡಕಟ್ಟು ಮುಖಂಡ ಶೇಷಯ್ಯನ ಹತ್ಯೆ
2005, ಮೇ 26
ಎಎನ್‌ಎಫ್ – ಪೊಲೀಸ್ ಪಡೆಗಳಿಂದ ಕಾರ್ಯಾಚರಣೆ ಶುರು
2005, ಜೂ.23
ದೇವರಬಾಳುವಿನಲ್ಲಿ ಅಜಿತ್ ಕುಸುಬಿ, ಉಮೇಶ್ ಎನ್‌ಕೌಂಟರ್
2007, ಮಾ.13
ಶಂಕಿತ ನಕ್ಸಲ್ ಚೆನ್ನಮ್ಮ ಬಂಧನ
2007, ಜೂ.3
ಶೃಂಗೇರಿಯ ಕಿಗ್ಗಾ ಬಳಿ ನಕ್ಸಲರು ಅಂಗಡಿ ಮಾಲಕ ವೆಂಕಟೇಶ ಹತ್ಯೆ. ಅದೇ ದಿನ ಆಗುಂಬೆ ಸಮೀಪದ ತಲ್ಲೂರು ಅಂಗಡಿಯಲ್ಲಿ ಒಂಬತ್ತು ಮಂದಿಯ ನಕ್ಸಲರ ತಂಡದಿಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ
2007, ಜು. 10
ಕೊಪ್ಪ ತಾಲೂಕಿನ ಗುಡ್ಡೆತೋಟದ ಒಡೆಯರ ಮಠದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರ ಹತ್ಯೆ
2008, ನ.13
ಶಿವಮೊಗ್ಗದಲ್ಲಿ ಶಂಕಿತ ನಕ್ಸಲ್ ಜನಾದìನ್ ಹತ್ಯೆ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
2008, ನ.20
ಹೊರನಾಡು ಬಳಿಯ ಮಾವಿನಹೊಳ್ಳದಲ್ಲಿ ಮೂವರ ಎನ್‌ಕೌಂಟರ್
2008, ಡಿ.7
ಕುಂದಾಪುರ ಸಮೀಪದ ಹಳ್ಳಿಹೊಳೆಯಲ್ಲಿ ರೈತ ಕೇಶವ ಯಡಿಯಾಲ ಕೊಲೆ
2009, ನ.11
ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಉಡುಪಿ, ಶಿವಮೊಗ್ಗ ಮತ್ತು ದ.ಕ.ದಲ್ಲಿ ತಂತ್ರ ಜ್ಞಾನದ ಮೂಲಕ ಸುಮಾರು 1,500 ಪೊಲೀಸರಿಂದ ಕೂಂಬಿಂಗ್.
2009, ನ.20
ಶಂಕಿತ ನಕ್ಸಲ್ ಮಲ್ಲೇಶ್ ಬಂಧನ
2010 ಮಾ.1
ಮುಟ್ಲುಪಾಡಿಯಲ್ಲಿ ಕುತ್ಲೂರು ವಸಂತ್ ಅಲಿಯಾಸ್ ಆನಂದನ ಎನ್‌ಕೌಂಟರ್
2011, ಅ.9
ಪೊಲೀಸ್ ಕಾನ್‌ಸ್ಟೆಬಲ್ ಮಹಾದೇವ ಮಾನೆ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ನಕ್ಸಲರಿಂದ ಹತ್ಯೆ.
17 ಮಂದಿ
ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯಿಂದ 2003ರಿಂದ 2012ರ ವರೆಗೆ 17 ನಕ್ಸಲರನ್ನು ಹತ್ಯೆ ಮಾಡಲಾಗಿದೆ.
70%ದಷ್ಟು ಶಸ್ತ್ರಾಸ್ತ್ರ ಪೊಲೀಸರದ್ದು
ನಕ್ಸಲರು ದಾಳಿ ನಡೆಸಲು ಜಮೀನಾªರ್ ಮನೆಗಳಲ್ಲಿದ್ದ ಕೋವಿಗಳನ್ನು ಕಳವು ಮಾಡುತ್ತಿದ್ದರು. ಜತೆಗೆ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಎಲ್ಲ ಮಾದರಿಯ ಶಸ್ತ್ರಾಸ್ತ್ರಗಳನ್ನು ಕಳವು ಮಾಡುತ್ತಿದ್ದರು. ಪೊಲೀಸ್ ಮೂಲಗಳ ಪ್ರಕಾರ ನಕ್ಸಲರ ಬಳಿ ಪತ್ತೆಯಾದ ಶೇ.70 ರಷ್ಟು ಶಸ್ತ್ರಾಸ್ತ್ರಗಳು ಪೊಲೀಸರದ್ದು.
*ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.