ಸಾಹಿತ್ಯ ಸಮ್ಮೇಳನದ ಉದ್ದೇಶ ಗೌಣವಾಗದಿರಲಿ
Team Udayavani, Nov 3, 2022, 6:15 AM IST
ಇತ್ತೀಚಿನ ವರ್ಷಗಳಲ್ಲಿ ಈ ಸಾಹಿತ್ಯ ಸಮ್ಮೇಳನಗಳಲ್ಲಿ ಏರ್ಪಡಿಸಲಾಗುವ ಗೋಷ್ಠಿಗಳಲ್ಲಿ ವಸ್ತುನಿಷ್ಠ ಮತ್ತು ಪ್ರಚಲಿತ ವಿಷಯಗಳ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯದೇ ಕೇವಲ ಕಾಟಾಚಾರಕ್ಕೆ ಎಂಬಂತೆ ಸಮ್ಮೇಳನಗಳ ಕಾರ್ಯಕಲಾಪಗಳು ಮುಕ್ತಾಯಗೊಳ್ಳುತ್ತಿವೆ. ಈ ಬಾರಿ ಸಾಹಿತ್ಯ ಸಮ್ಮೇಳನಗಳು ಹೀಗಾಗ ದಂತೆ ಸಂಘಟಕರು ಎಚ್ಚರ ವಹಿಸಬೇಕಿದೆ.
ವರ್ಷಾಂತ್ಯವಾಗುತ್ತಿರುವಂತೆ ಕ್ಯಾಲೆಂಡರ್‌ಗಳಲ್ಲಿ ಹಬ್ಬಗಳ ರಜಾದಿನಗಳು ಕೆಂಪು ಬಣ್ಣದಲ್ಲಿ ರಾರಾಜಿಸುತ್ತಾ ಖುಷಿಕೊಡುತ್ತದೆ. ಜಾತ್ರೆ-ಉತ್ಸವ, ಬಲಿ, ನೇಮ, ಯಕ್ಷಗಾನ, ನಾಟಕಗಳ ಪ್ರಚಾರ ಭಿತ್ತಿ ಪತ್ರಗಳು ಗಮನ ಸೆಳೆಯುತ್ತವೆ. ಶಾಲಾಕಾಲೇಜುಗಳ ವಾರ್ಷಿಕೋತ್ಸವ, ಕ್ರೀಡಾಕೂಟ, ಪಂದ್ಯಾಟಗಳು, ಒಟ್ಟಾರೆ ಗೌಜಿ ಗದ್ದಲ. ಇವೆಲ್ಲದರ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಫಲಕಗಳು ಕೆಲವು ಸಭಾಭವನ, ವಿದ್ಯಾಲಯಗಳ ಆವರಣಗಳಲ್ಲಿ ಗಮನ ಸೆಳೆಯುತ್ತವೆ. ತಾಲೂಕು ಸಮ್ಮೇಳನಗಳಾದರೆ ಒಂದೆರಡು ದಿನ, ಜಿಲ್ಲಾ ಸಮ್ಮೇಳನಗಳಾದರೆ ಎರಡು ಮೂರು ದಿನ, ಪ್ರಾಂತ ಮಟ್ಟದ್ದಾದರೆ ಮೂರ್‍ನಾಲ್ಕು ದಿನದ ಜಾತ್ರೆ ಅದ್ದೂರಿಯಿಂದ ನಡೆಯುತ್ತದೆ. ಏಕೆಂದರೆ ಸರಕಾರ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆಂದು ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತದೆ. ಇದೊಂದು ಒಳ್ಳೆಯ ಬೆಳವಣಿಗೆ.
ಸಾಹಿತ್ಯ ಸಮ್ಮೇಳನಗಳೆಂದರೆ ಎಲ್ಲರಿಗೂ ತಿಳಿದಿ ರುವಂತೆ ಒಬ್ಬ ಅಧ್ಯಕ್ಷ, ಒಬ್ಬ ಉದ್ಘಾಟಕ, ಓರ್ವ ಸಮಾರೋಪ ಭಾಷಣಕಾರ ತೀರಾ ಅನಿವಾರ್ಯ. ಅದೇ ರೀತಿ ಕೆಲವು ಮಂದಿ ಹಿರಿ-ಕಿರಿ ಕವಿಗಳು, ಕವಿ ಗೋಷ್ಠಿ-ಗೋಷ್ಠಿಪತಿಗಳು ಬೇಕೇ ಬೇಕು. ಒಂದು ಸ್ವಾಗತ ಸಮಿತಿ, ಅರ್ಥಾತ್ ಸಂಘಟಕರು ಅತೀ ಅಗತ್ಯ. ಎಲ್ಲರ ಉದ್ದೇಶ ಒಂದೇ ಕನ್ನಡದ ಕಾಯಕ-ಭಾಷೆಗೆ ಪ್ರೇರಕ.
ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡದ್ದೇ ಸಾಹಿತಿಗಳ ಸಂಘಟನೆ ಮತ್ತು ಅವರ ಸಾಹಿತ್ಯ ಸೇವೆಗೆ ವಸ್ತುನಿಷ್ಠವಾದ ಗೌರವ ಸಲ್ಲಿಸುವ ಉದ್ದೇಶ ದಿಂದ. ಅದಕ್ಕಾಗಿ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿ ಕೊಳ್ಳುವುದು ಒಂದು ಪೂರಕ ಪದ್ಧತಿ. ಆದರೆ ಇತ್ತೀಚಿನ ಕೆಲವು ಸಮ್ಮೇಳನಗಳನ್ನು ಗಮನಿಸುವಾಗ ಮೂಲ ಉದ್ದೇಶವೇ ಗೌಣವಾಗಿರುವಂತೆ ಭಾಸ ವಾಗುತ್ತದೆ. ತಿರುಳಿಗೆ ಸಲ್ಲಬೇಕಾದ ಮೌಲ್ಯವು ಕರಟಕ್ಕೆ ಸಂದಂತಹ ಭಾವನೆ ಮೂಡುತ್ತದೆ. ಕಾಟಾ ಚಾರದ ಕೆಲವು ಪದ್ಧತಿಗಳಿಗೆ ಜೋತು ಬೀಳುವು ದನ್ನು ಗಮನಿಸುವಾಗ ಅಜ್ಜ ನೆಟ್ಟ ಆಲದ ಮರದ ಗಾದೆಯು ನೆನಪಿಗೆ ಬರುತ್ತದೆ.
ಸಾಹಿತ್ಯಕ್ಕೆ ಪೂರಕವಾದ ಗೋಷ್ಠಿಗಳಿರಲಿ
ಸಾಹಿತ್ಯ ಸಮ್ಮೇಳನಗಳನ್ನು ಸಂಯೋಜಿಸುವಾಗ ಗೋಷ್ಠಿಗಳ ಕುರಿತಾಗಿ ಗಂಭೀರ ಚರ್ಚೆಗಳು ನಡೆದು ಪರಿಸ್ಥಿತಿ ಕೈಮೀರಿದ್ದೂ ಇದೆ. ಈ ಹಂತದಲ್ಲಿ ಭಾಷೆ, ಸಾಹಿತ್ಯ, ಸಾಹಿತಿಗಳಿಗೆ ಪೂರಕವೆನಿಸದ ಕೊನೆಗೆ ಯಾರಿಗೂ ಅರ್ಥವಾಗದಂತಹ ವಿಷಯಗಳಿಗೆ ಕಡತ ಕಟ್ಟಿದ ಉದಾಹರಣೆಗಳಿವೆ. ಕಾಟಾ ಚಾರಕ್ಕಾಗಿ ಹಮ್ಮಿಕೊಳ್ಳುವಂತಹ ಇಂತಹ ಗೋಷ್ಠಿ ಗಳನ್ನು ಯಾರೂ ಗೋಷ್ಠಿಯೇ ಮಾಡುವುದಿಲ್ಲ!. ಅನಾವಶ್ಯಕವಾಗಿ ಕೆಲವು ತಾಸುಗಳು ವ್ಯರ್ಥವಾಗುತ್ತವೆ. ಸಮ್ಮೇಳನಗಳಲ್ಲಿ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಸಂದರ್ಭ ಸಾಹಿತ್ಯ ಪ್ರಕಾರದ ಚೌಕಟ್ಟಿನ ವ್ಯಾಪ್ತಿಗೆ ಒಳಪಡುವಂತಹ ಪ್ರಚಲಿತ ವಿದ್ಯಮಾನ ಗಳು ಮತ್ತು ಸಾಹಿತಿಗಳ ನೋವು-ನಲಿವುಗಳಿಗೆ ಸ್ಪಂದಿಸತಕ್ಕಂತಹ ವಿಚಾರಗಳಿಗೆ ಅವಕಾಶವಾದರೆ ಹೆಚ್ಚು ಅರ್ಥಪೂರ್ಣವೆನಿಸಲು ಸಾಧ್ಯವಲ್ಲವೇ?
ವಿಶ್ವವನ್ನೇ ಬೆರಳ ತುದಿಯಲ್ಲಿ ಕಾಣುವ ಇಂದಿನ ದಿನಗಳಲ್ಲಿ ಪತ್ರಿಕೆ, ಮುದ್ರಣ ಮಾಧ್ಯಮ, ಕಥಾ-ಕವನ ಸಂಕಲನಗಳು, ಕಾದಂಬರಿಗಳು ಗೌಣ ವೆನಿಸುತ್ತಿರುವುದು ಕಳವಳಕಾರಿ ವಿಚಾರ. ಇಂತಹ ವಿದ್ಯಮಾನಗಳನ್ನು ಆಧರಿಸಿ ಒಂದು ಸಮ್ಮೇಳನವನ್ನೇ ನಡೆಸಲು ಸಾಧ್ಯವಿದೆ. ಒಂದೆರಡು ಸಂದರ್ಭಗಳ ಹೊರತಾಗಿ ಈ ಗಂಭೀರ ವಿಷಯಕ್ಕೆ ಸಮ್ಮೇಳನಗಳಲ್ಲಿ ಒಂದೇ ಒಂದು ಗೋಷ್ಠಿಯೂ ಮೀಸಲು ಇರಲಿಲ್ಲ!. ಅದರ ಬದಲು ಸಂವೇದನಾಶೀಲ ರಹಿತವಾದ ಕೆಲವು ಚರ್ಚೆಗಳು ನಡೆದುದು ಬಹುಶಃ ಶ್ರೋತೃಗಳ ಗಮನವನ್ನೂ ಸೆಳೆಯದೆ ಬಿಸಿಲಿನ ನಾಲ್ಕು ಹನಿ ಮಳೆಯಂತಾದುದು ಸ್ವಯಂ ವೇದ್ಯ ವಿಚಾರ.
ಕವಿಗೋಷ್ಠಿ-ಕಿವಿಗೋಷ್ಠಿಗಳಾಗಲಿ
ಸಮ್ಮೇಳನಗಳಲ್ಲಿ ಕವಿಗೋಷ್ಠಿ ಎನ್ನುವುದು ಊಟದ ಎಲೆಯ ಪಾಯಸದಂತೆ. ಕುತೂಹಲ ದಿಂದ ಕಾಯುವ ಸಂದರ್ಭವದು. ಹಳೆತಣ್ತೀಕ್ಕೆ ಒಡಗೂಡುವ ಹೊಸ ಉಕ್ತಿಗಳು ಹಲವು ಕವಿಗಳ ಸಂದೇಶಗಳಾಗಿ ಜನರಿಗೆ ತಲುಪುತ್ತವೆ. ಮತ್ತೆ ಕೆಲವು ಕವಿಗಳು ಶಬ್ದಗಳ ಜಾಲಾಟ-ಒಸರಾಟಕ್ಕೆ ಮಹತ್ವ ನೀಡಿ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿಸಿ ಬಿಡುತ್ತಾರೆ. ಕವನಗಳೆಂದರೆ ಜೀವನದ ಮಗ್ಗುಲುಗಳನ್ನು ಚಿವುಟುವಂತಿರಬೇಕು ಎಂದು ಖ್ಯಾತ ಕವಿ ಶಿವರುದ್ರಪ್ಪನವರು ಒಂದೆಡೆ ನುಡಿದ ನೆನಪು. ಕವಿಗಳಿಗೆ ಸಮಾಜದ ಅಂಕು-ಡೊಂಕು ಗಳನ್ನು ಕ್ಷ-ಕಿರಣದ ಮೂಲಕ ಬಿಂಬಿಸುವ ಶಕ್ತಿ ಇದೆ.
ಬದಲಾವಣೆಯ ಗಾಳಿ ಬೀಸುವ ಪಂಕದ ಗುಂಡಿ ಒತ್ತಲು ಸಾಧ್ಯವಿದೆ. ಜನಮನದ ರೂಢಿಗಳ ಶಕ್ತಿ- ಸತ್ವಗಳನ್ನು ಉಕ್ಕಿಸುವ ಸಾಮರ್ಥ್ಯ ಕವಿಗಳಿಗೆ ಇದೆ. ಸಮ್ಮೇಳನದ ಒಂದು ಕವಿಗೋಷ್ಠಿ ಮುಗಿ ದಾಗ ಏನೋ ಒಂದು ಪರಿಮಳ ಎಲ್ಲೆಡೆ ವ್ಯಾಪಿಸಿ ಜನ ತಲೆ ತೂಗಬೇಕು. ಕವಿಗೋಷ್ಠಿ- ಕಿವಿಗೋಷ್ಠಿ ಯಾಗಬೇಕು. ಅಂತಹ ಒಂದೆರಡು ವಿಷಯಾ ಧಾರಿತ ಕವನಗಳು ಸಮಗ್ರ ಸಮ್ಮೇಳನದ ಮುಕುಟ ಮಣಿಗಳಾಗಲು ಸಾಧ್ಯವಿದೆ ಅಲ್ಲವೇ? ಅದರ ಬದಲು ಗೋಷ್ಠಿಗಾಗಿ ಒಂದು ಕವಿಗೋಷ್ಠಿ ಎಂಬ ರೀತಿ ಯಲ್ಲಿ ನಡೆದರೆ ಹೊಸ ಚಿಗುರೂ ಹುಟ್ಟುವು ದಿಲ್ಲ, ಹಳೆ ಬೇರೂ ಬಾಳುವುದಿಲ್ಲ ಅಲ್ಲವೇ?.ಸಮ್ಮೇಳನಾಧ್ಯಕ್ಷರ ಭಾಷಣಕ್ಕೆ ಸಮಯ ನಿಗದಿ ತಪ್ಪೇ? ಬಹುಶಃ ಹಲವಾರು ವರ್ಷಗಳ ಈ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರವೇ ಸಿಕ್ಕಿಲ್ಲ. ಸಮ್ಮೇಳನಾಧ್ಯಕ್ಷರು ಸಮಯಾತೀತರೇನೋ?. ಇತ್ತೀಚೆಗೆ ಒಂದು ಜಿಲ್ಲಾ ಸಮ್ಮೇಳನದಲ್ಲಿ ಓರ್ವ ಅಧ್ಯಕ್ಷರು ತನ್ನ ಭಾಷಣಕ್ಕಾಗಿ ಬೆಳಗಿನ ಅವಧಿಯ ಒಂದೆರಡು ಗೋಷ್ಠಿ ಯನ್ನೇ ಸ್ವಾಹಾ ಮಾಡಬಿಟ್ಟರು! ಪಾಪ ಸಂಬಂಧಿತ ಗೋಷ್ಠಿಯನ್ನು ಊಟದ ಅವಧಿಯಲ್ಲಿ ನಡೆಸಬೇಕಾಯಿತು. ಇಂತಹ ಮುಜುಗರದ ಪರಿಸ್ಥಿತಿ ಒದಗದ ರೀತಿಯಲ್ಲಿ ಸಮ್ಮೇಳನಾಧ್ಯಕ್ಷರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದು ತೀರಾ ಅನಿವಾರ್ಯ. ಆ ರೀತಿಯ ನಿಯಂತ್ರಣಕ್ಕಾಗಿ ಒಂದು ಅವಧಿಯನ್ನು ಸೂಕ್ಷ್ಮವಾಗಿ ಸೂಚಿಸಿದರೆ ತಪ್ಪಾಗಲಾರದೇನೋ? ಬಹುಜನ ಹಿತಾಯ, ಬಹು ಜನ ಸುಖಾಯ ಎಂಬ ತಣ್ತೀವನ್ನು ಸಮ್ಮೇಳನಾಧ್ಯಕ್ಷರು ಪಾಲಿಸಲು ಯತ್ನಿಸುವುದರ ಜತೆಗೆ ಮಾದರಿಯೆನಿಸಿದರೆ ಸಮ್ಮೇಳನಗಳು ಯಶಸ್ವಿಯಾಗುವುದು ಖಚಿತ.
ಕಾಟಾಚಾರ ರಹಿತವಾದ ಗೋಷ್ಠಿಗಳು, ಹಿತವಾದ ನಾಲ್ಕು ನುಡಿಗಳು, ಭಾಷೆಯ ಉದ್ದೀಪನದಲ್ಲಿ ಸಹಕಾರಿಯಾಗುವಂತಹ ಗೊಂದಲರಹಿತವಾದ ಪ್ರಗತಿಪರ ಚಿಂತನೆಯ ಆಶಯ ಹೊತ್ತ ಸಮ್ಮೇಳನ ಗಳನ್ನು ಸಂಘಟಿಸುವತ್ತ ಕನ್ನಡ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಲಿ.
-ಮೋಹನದಾಸ್,
ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.