ಅಪ್ಪನ ಹಾದಿಯಲ್ಲಿ ಸಾರ್ಥಕ ಹೆಜ್ಜೆ


Team Udayavani, May 12, 2018, 12:30 AM IST

z-8.jpg

ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಡಾ.ಆಶಾ ಬೆನಕಪ್ಪನವರದು ತುಂಬಾ ದೊಡ್ಡ ಹೆಸರು. ಬೆಂಗಳೂರಿನಲ್ಲಿ ತಂದೆ ಡಾ.ಬೆನಕಪ್ಪ ಅವರು ಸ್ಥಾಪಿಸಿದ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿರುವ ಆಶಾ ಅವರ ಬಗ್ಗೆ ಬರೆದದ್ದಕ್ಕಿಂತ, ಬರೆಯದೆ ಉಳಿಯುವುದೇ ಹೆಚ್ಚು. ಬಡ ರೋಗಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಮಮತೆ. ವೃತ್ತಿಯನ್ನೂ ಮೀರಿದ ಅಕ್ಕರೆ. ಈ ಮಾತೃಹೃದಯಿ ಇನ್ನು ಕೆಲವೇ ತಿಂಗಳುಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಈ ಹೊತ್ತಿನಲ್ಲಿ, ತಮ್ಮ ಮನದ ಮಾತುಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಒಂದು ಸಲ ನಾನು, ಅಪ್ಪಾಜಿ ಇಬ್ಬರೂ “ಥಟ್‌ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ವಿ. ಕಾರ್ಯಕ್ರಮದ ನಿರೂಪಕ ನಾ. ಸೋಮೇಶ್ವರ ಅವರು ನಮ್ಮ ತಂದೆಯ ವಿದ್ಯಾರ್ಥಿ. ಅವರು ತಂದೆಯನ್ನು ಕುರಿತು “ಸರ್‌, ಕರ್ನಾಟಕಕ್ಕೆ ಈಗಾಗಲೇ ಆರೋಗ್ಯ ಸಂಸ್ಥೆಯೊಂದನ್ನು ನೀಡಿದ್ದೀರಿ. ನಿಮ್ಮ ಮುಂದಿನ ಕೊಡುಗೆ ಏನು?’ ಅಂತ ಕೇಳಿದರು. ತಕ್ಷಣ ನಮ್ಮ ತಂದೆ  -“ಕರ್ನಾಟಕದ ಸೇವೆ ಮಾಡೋದಕ್ಕೆ ನನ್ನ ಮಗಳನ್ನೇ ಧಾರೆಯೆರೆದುಕೊಟ್ಟಿದ್ದೇನಲ್ಲ, ಇನ್ನೇನು ಬೇಕು?’ ಎಂದಿದ್ದರು. ಅದನ್ನು ಕೇಳಿ ನನಗೆ ರೋಮಾಂಚನ ವಾಗಿತ್ತು. ಅಪ್ಪನ ಆ ಮಾತನ್ನು ಉಳಿಸಿಕೊಳ್ಳೋಕೆ ಆವತ್ತಿ ನಿಂದ ಜೀವನವನ್ನೇ ತೇದಿದ್ದೇನೆ..

ನನ್ನ ಕತೆ ಹೀಗೆ ಶುರುವಾಗುತ್ತೆ…
ನಾನು ಹುಟ್ಟಿದಾಗ ಅಪ್ಪ ಇಂಗ್ಲೆಂಡ್‌ನ‌ಲ್ಲಿದ್ದರು. ಎಂಟತ್ತು ತಿಂಗಳಾದ ಮೇಲೆ ಅಮ್ಮ ನನ್ನನ್ನು ಊರಲ್ಲಿ ಬಿಟ್ಟು ಅಪ್ಪನನ್ನು ಸೇರಿಕೊಂಡರು. ನಾನು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಲಿಂಗದಹಳ್ಳಿಯ ತಾಯಿ ಮನೆಯಲ್ಲೇ. ನನ್ನ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಯಿತು. ನಾನು 6 ವರ್ಷದವಳಾ ಗಿದ್ದಾಗ ಅಪ್ಪ ಅಮ್ಮ ಇಂಗ್ಲೆಂಡಿನಿಂದ ವಾಪಸಾದರು. ಅವರಿಗೆ ನನ್ನನ್ನು ಕಂಡು ಸಂತೋಷವೇನೋ ಆಯಿತು. ಜೊತೆಗೆ ಆತಂಕವೂ ಆಯಿತು. ಯಾಕೆ ಅಂತೀರಾ? ಅವರೋ ಇಂಗ್ಲಿಷ್‌ ನೆಲದಲ್ಲಿದ್ದು ಬಂದವರು ನನಗೋ ಇಂಗ್ಲಿಷಿನ ಗಂಧ ಗಾಳಿಯೂ ಇರಲಿಲ್ಲ. ಆಮೇಲೆ ಟ್ಯೂಷನ್‌ ಪಾಠ ಹೇಳಿಸಿ ನನ್ನ ನಾಲಗೆ ಮೇಲೂ ಎರಡಕ್ಷರ ಇಂಗ್ಲಿಷ್‌ ಬರಿಸಿದರು ಅನ್ನಿ!

70ರ ದಶಕದ ಗರ್ಲ್ ಗ್ಯಾಂಗ್‌
ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡ ನಂತರ ನನ್ನ ಹೆಚ್ಚಿನ ವಿದ್ಯಾಭ್ಯಾಸ ಆಗಿದ್ದು ಬೆಂಗಳೂರಿನ ಬಸವನಗುಡಿಯಲ್ಲಿ. ಚಿಕ್ಕಂದಿನಿಂದಲೂ ನಾನು ಗಂಡುಬೀರಿ ಅಂತಲೇ ಸ್ನೇಹಿತ ವಲಯದಲ್ಲಿ ಪ್ರಖ್ಯಾತಳಾಗಿದ್ದೆ. ಆದರೆ ಅಷ್ಟೇ ಸಹಾಯ ಜೀವಿಯೂ ಆಗಿದ್ದೆ. ಬಿಡುವು ಮಾಡಿಕೊಂಡು, ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದೆ. ಆ ದಿನಗಳಲ್ಲಿ ಹೆಚ್ಚಿನ ವೇಳೆಯನ್ನು ಮನೆಯಿಂದ ಹೊರಗೇ ಕಳೆಯುತ್ತಿದ್ದೆ. ನಮ್ಮದೇ ಒಂದು ನ್ಯಾಷನಲ್‌ ಕಾಲೇಜ್‌ ಗರ್ಲ್ ಗ್ಯಾಂಗ್‌ ಇತ್ತು. ನಾವು ಕಾಲೇಜು ಮೈದಾನದಲ್ಲಿ ಸಾಫ್ಟ್ಬಾಲ್‌ ಆಡ್ತಿದ್ವಿ, ಪೇಟೆಗೆ ರೌಂಡ್ಸ್‌ ಹೋಗ್ತಿದ್ವಿ, ಸಿನಿಮಾಗೂ ಹೋಗ್ತಿದ್ವಿ. ಕಾಲೇಜು ಮುಗಿಸಿ ಮನೆಗೆ ವಾಪಸ್ಸಾದಾಗ ಅಮ್ಮ ಮಾಡುತ್ತಿದ್ದ ಮೊದಲ ಕೆಲಸ ನನ್ನ ಯೂನಿಫಾರ್ಮ್ ಲಂಗ ಸುಕ್ಕಾಗಿದೆಯೋ ಇಲ್ಲವೋ ಅಂತ ಚೆಕ್‌ ಮಾಡುವುದು. ಇಸ್ತ್ರಿ ಎಲ್ಲಾ ಹೋಗಿ ಸುಕ್ಕು ಸುಕ್ಕಾಗಿದ್ದರೆ ನಾನು ಸಿನಿಮಾ, ಆಟಕ್ಕೆ ಹೋಗಿದ್ದೀನಿ ಅಂತ ಅರ್ಥ!

90% ಬಂದರೂ ಮೆರಿಟ್‌ ಸೀಟಿಲ್ಲ
ಮೆರಿಟ್‌ ಸೀಟ್‌ ಬರದೇ ಇದ್ದರೆ ಮನೆಯಲ್ಲಿ ಇರಬೇಕಾಗುತ್ತೆ ಎಂಬ ಭಯದಿಂದ ಹಠ ಹಿಡಿದು ಕಠಿಣ ಅಭ್ಯಾಸ ಮಾಡಿ ಸೆಕೆಂಡ್‌ ಪಿಯುಸಿಯಲ್ಲಿ ಶೇ. 90 ಅಂಕ ತೆಗೆದೆ. ಕಡೆಗೂ ಮೆರಿಟ್‌ ಸೀಟ್‌ ಸಿಕ್ಕೇ ಬಿಡು¤ ಅಂತ ಖುಷಿಪಟ್ಟೆ. ನನ್ನ ದುರಾದೃಷ್ಟಕ್ಕೆ ಸರ್ಕಾರ ಆ ವರ್ಷ ಪ್ರಥಮ ಮತ್ತು ದ್ವಿತೀಯ ಎರಡೂ ವರ್ಷಗಳ ಅಂಕಗಳನ್ನು ಪರಿಗಣಿಸಿ ಮೆರಿಟ್‌ ಜಾರಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ನನ್ನದು ಕಡಿಮೆ ಅಂಕ. ಮೆರಿಟ್‌ ಸೀಟ್‌ ತಪ್ಪಿದ್ದಕ್ಕೆ ನನಗೆ ಮನೆ ಸೀಟು ಖಾಯಂ ಆಯ್ತು ಅಂದುಕೊಂಡೆ. ಆದರೆ ನನ್ನ ಮುಂದಿನ ನಡೆಯನ್ನು ತಿಳಿದರೆ ನೀವು ಹೌಹಾರುವುದು ಖಂಡಿತ. ಮೆಡಿಕಲ್‌ ಸೀಟ್‌ ಸಿಗದಿದ್ದರೆ ಸುಸೈಡ್‌ ಮಾಡಿಕೊಳ್ಳುತ್ತೇನೆ ಅಂತ ಅಪ್ಪಾಜಿಗೆ ಪತ್ರ ಬರೆದೆ. ಪಾಪ, ಆ ಜೀವ ಅದೆಷ್ಟು ನೊಂದಿತೋ ಏನೋ ನನ್ನ ಪತ್ರ ಓದಿ. ಕಂಡ ಕಂಡ ಮಂತ್ರಿಗಳಿಗೆಲ್ಲಾ ನನಗೆ 
ಸೀಟು ಕೊಡಿಸಲು ದುಂಬಾಲು ಬಿದ್ದರು. ಕಡೆಗೆ ಶ್ಯಾಮನೂರು ಶಿವಶಂಕರಪ್ಪ ಅವರು ನನಗೆ ಸೀಟು ಕೊಡಿಸಿದರು. ಅವರನ್ನು ನಾನು ಎಷ್ಟು ನೆನೆದರೂ ಸಾಲದು. ಮೆಡಿಕಲ್‌ ಓದುವಾಗ ನಾನು ಹೊಸದೊಂದು ಲೋಕಕ್ಕೆ ಕಾಲಿಟ್ಟೆ.

“ನಿರ್ಮಲ’ ಮನಸ್ಸಿನ ಗುರು
ಅಪ್ಪಾಜಿಯವರನ್ನು ಹೊರತುಪಡಿಸಿ ನನ್ನ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಮೆಡಿಕಲ್‌ ಕಾಲೇಜಿನಲ್ಲಿ ಗುರುಗಳಾಗಿದ್ದ ಡಾ. ನಿರ್ಮಲಾ ಕೇಸರಿ ಮೇಡಂ. ಏನೇ ತೊಂದರೆಗಳಿದ್ದರೂ ಅವರ ಬಳಿ ಹೇಳಿ ಕೊಳ್ಳುತ್ತಿದ್ದೆ. ಅವರು ಮಾರ್ಗದರ್ಶಕರಂತಿದ್ದರು. ಬರೀ ಪಠ್ಯ ಮಾತ್ರವಲ್ಲ, ಲೈಫಿನ ಕುರಿತು ನಾನು-ಅವರು ಮಾತಾಡುತ್ತಿದ್ದೆವು. ಎಲ್ಲವನ್ನೂ ಸ್ನೇಹಿತೆಯರ ಥರ ಹಂಚಿಕೊಳ್ಳುತ್ತಿದ್ದೆವು. ನಿರ್ಮಲಾ ಮೇಡಂ ಕಡೆಯವರೆಗೂ ಅವಿವಾಹಿತರಾಗಿಯೇ ಉಳಿದರು. ನನಗೆ ಅವರಂಥ ಗುರುಗಳು ಸಿಕ್ಕಿದ್ದಕ್ಕೆ ಅಪ್ಪಾಜಿ ತುಂಬಾ ಖುಷಿ ಪಟ್ಟಿದ್ದರು. ನಾನು ಅವರಿಂದ ಜೀವನ ಪಾಠಗಳನ್ನು ಕಲಿತಿದ್ದೇನೋ ಸರಿ, ಆದರೆ ಒಂದು ಸಂದರ್ಭದಲ್ಲಿ ನಿರ್ಮಲಾ ಅವರಂತೆಯೇ ನಾನು ಕೂಡಾ ಮದುವೆಯಾಗದೆ ಇದ್ದುಬಿಡುತ್ತೇನೆ ಎಂದು ನಿಶ್ಚಯಿಸಿದಾಗ ಮಾತ್ರ ಮನೆಯಲ್ಲಿ ರಾದ್ದಾಂತ ಆಗಿತ್ತು. ಅಪ್ಪಾಜಿ ನಿರ್ಮಲಾ ಅವರನ್ನು ಭೇಟಿ ಮಾಡಿ “ನನ್ನ ಮಗಳಲ್ಲಿ ಅಂಥಾ ಯೋಚನೆಗಳನ್ನು ಮಾತ್ರ ತುಂಬಬೇಡಿ’ ಎಂದು ಎಚ್ಚರಿಸಿದ್ದೂ ನಡೆಯಿತು. 

ಆಮೇಲೂ ನಾನು-ನಿರ್ಮಲಾ ಮೇಡಂ ಆತ್ಮೀಯರಾಗಿಯೇ ಇದ್ದೆವು. ಅವರು “ಯಾವ ಕಾಯಿಲೆ ಬಂದರೂ ಪರವಾಗಿಲ್ಲ ಆದರೆ ಆಲ್‌ಝೈಮರ್(ಮರೆವಿನ ಖಾಯಿಲೆ) ಮಾತ್ರ ಬೇಡ.’ ಎನ್ನುತ್ತಿದ್ದರು. ವಿಪರ್ಯಾಸ ಏನು ಅಂದರೆ ಯಾವುದನ್ನು ಬೇಡ ಎನ್ನುತ್ತಿದ್ದರೋ ಮುಂದೆ ಅದಕ್ಕೇ ತುತ್ತಾದರು. ಆ ದಿನಗಳಲ್ಲಿ ಅವರನ್ನು ನೋಡಲು ಹೋದಾಗ ನನ್ನನ್ನೇ ಯಾರು ಅಂತ ಕೇಳಿದರು. ಆಘಾತವಾಯಿತು. ಆತ್ಮೀಯವಾಗಿದ್ದ ಆ ಜೀವ ನನ್ನನ್ನು ಅಪರಿಚಿತೆಯಂತೆ ನೋಡಿದಾಗ ಆ ಖಾಯಿಲೆಯ ಕುರಿತು ಅವರೇಕೆ ಹೆದರಿದ್ದರು ಅನ್ನೋದು ಅರ್ಥವಾ ಯಿತು. ಕೆಲವು ಖಾಯಿಲೆಗಳು ರೋಗಿಯನ್ನು ನರಳಿಸಿ ದರೆ, ಇನ್ನು ಕೆಲವು ಅವರ ಆತ್ಮೀಯರನ್ನು ನರಳಿಸುತ್ತವೆ! 

ಸಂಸ್ಥೆ ಕಟ್ಟುವುದಕ್ಕೆ ಪ್ರೇರಣೆ
ಅಪ್ಪ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾಗ ಒಂದು ದಿನ ನರ್ಸ್‌ ಒಬ್ಬಳು ಅಪ್ಪನನ್ನು ಕಾಣಲು ಬಂದಳು. ಪೇಶಂಟ್‌ಗೆ ಹೆಚ್ಚು ಬಾರಿ ಇಂಜೆಕ್ಷನ್‌ ಕೊಡಲು ಸಹಾಯವಾಗುವಂತೆ ನರಕ್ಕೆ ಚುಚ್ಚುವ ಕ್ಯಾನುಲಾ ಎನ್ನುವ ಉಪಕರಣದಿಂದಾಗಿ ಪುಟ್ಟ ಹುಡುಗನೊಬ್ಬ ಒಂದೇ ಸಮನೆ ಅಳುತ್ತಿದ್ದಾನೆ ಎನ್ನುವುದು ಆಕೆಯ ದೂರು. ಅಪ್ಪ ಹೋಗಿ ನೋಡಿದರೆ ಆ ಉಪಕರಣ ತೀರಾ ಕಳಪೆ ಗುಣಮಟ್ಟದ್ದಾಗಿದ್ದು ತಿಳಿಯಿತು. ಈ ಕುರಿತು ಆಸ್ಪತ್ರೆಯ ನಿರ್ದೇಶಕರಿಗೆ ವಿಷಯ ಮುಟ್ಟಿಸಿ ದರೂ ಪ್ರಯೋಜನವಾಗಲಿಲ್ಲ. ಬಡವರಿಗೇನೂ ಗೊತ್ತಾ ಗು ವುದಿಲ್ಲ, ಅವರನ್ನು ಯಾಮಾರಿಸೋದು ಸುಲಭ ಅಂತೆಲ್ಲಾ ಅಂದುಕೊಂಡು ತೋರಿದ ಅಸಡ್ಡೆಯನ್ನು ಅಪ್ಪಾಜಿ ಸಹಿಸದಾದರು. ಬಡವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಕೇಂದ್ರ ತೆರೆಯಬೇಕೆಂಬ ಪ್ರೇರಣೆ ಅಪ್ಪನಿಗೆ ಆಗಿದ್ದೇ ಆವಾಗ.  

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಂಥ ಸಂಸ್ಥೆಯನ್ನು ಕಟ್ಟುವುದು ಅಷ್ಟೊಂದು ಸಲೀಸಾಗಿರಲಿಲ್ಲ. ಅಪ್ಪಾಜಿ ಮಕ್ಕಳ ತಜ್ಞರೆಂದು ರಾಜ್ಯ, ದೇಶ ವಿದೇಶಗಳೆಲ್ಲೆಲ್ಲಾ ಹೆಸರು ಮಾಡಿದ್ದರೂ ಸಂಸ್ಥೆ ಕಟ್ಟುವಾಗ ಅದೆಷ್ಟೋ ಪಡಿಪಾಟಲುಗಳನ್ನು ಪಟ್ಟಿದ್ದಾರೆ, ಅವಮಾನವನ್ನು ನುಂಗಿದ್ದಾರೆ. ಎಚ್‌. ಕೃಷ್ಣಪ್ಪ ಅನ್ನೋರು ಶಿಕ್ಷಣ ಮಂತ್ರಿಗಳಾಗಿದ್ದರು. ಅವರ ಮನೆಗೆ ಹೋಗಿದ್ದಾಗ ಎಷ್ಟು ಜಾಗ ಬೇಕಾಗುತ್ತೆ ಅಂತ ಕೇಳಿದರು. ಅಪ್ಪಾಜಿಯವರದು ತುಂಬಾ ಸಂಕೋಚದ ಸ್ವಭಾವ, “ಒಂದೂವರೆ ಎಕರೆ’ ಎಂದು ಕಡಿಮೆ ಹೇಳಿದರು. ಮಂತ್ರಿಗಳು “ಏನ್‌ ಬೆನಕಪ್ಪನೋರೇ, ಬರೀ ಒಂದೂವರೆ ಎಕರೆ ಎಲ್ಲಿ ಸಾಕಾಗುತ್ತೆ?’ ಅಂತ ಹೇಳಿ, ಏಳೂವರೆ ಎಕರೆ ಸ್ಯಾಂಕ್ಷನ್‌ ಮಾಡಿಸಿದರು. ಅಪ್ಪನ ಸಂಕೋಚವನ್ನು ಅರ್ಥ ಮಾಡಿಕೊಂಡು ತಾವಾಗಿಯೇ ಅಗತ್ಯವಿದ್ದಷ್ಟು ಭೂಮಿ ಕೊಟ್ಟಿದ್ದು ಅವರ ದೊಡ್ಡತನ. ಇಂಥ ಅನೇಕ ಮಹನೀಯರ ಸಹಾಯ ಸಿಕ್ಕಿದ್ದರಿಂದಲೇ ಸಾರ್ವಜನಿಕ ಸೇವೆಗೆಂದೇ ಮುಡಿಪಾದ ಇಂಥದ್ದೊಂದು ಆರೋಗ್ಯ ಕೇಂದ್ರ ಏಳಲು ಸಾಧ್ಯವಾಗಿದ್ದು. 

ಬಡವರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಿಸುವ ಧ್ಯೇಯ ನನ್ನದು. ನಮ್ಮ ಆಸ್ಪತ್ರೆ ತಲೆಯೆತ್ತಿ ನಿಲ್ಲುವಂತೆ ಸುಧಾರಣೆ ಗೊಳಿಸಿದ್ದೇನೆ ಎಂದೇ ನಾನು ತಿಳಿದಿದ್ದೇನೆ. ಇಷ್ಟು ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ನೋವು, ಕಾಟ, ಕುತಂತ್ರ ಎಲ್ಲವನ್ನೂ ನೋಡಿದ್ದೇನೆ. ಇವೆಲ್ಲಾ ಬೇಕಾಗಿತ್ತಾ? ಮನಸ್ಸು ಮಾಡಿದ್ದರೆ ಹೆಚ್ಚಿನ ಸಂಬಳಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಬಹುದಿತ್ತಲ್ಲಾ ಅನ್ನೋ ಪ್ರಶ್ನೆ ಒಂದೊಂದ್ಸಲ ಮೂಡುತ್ತೆ. ಒಡನೆಯೇ “ಸಾರ್ವಜನಿಕ ಸೇವೆಗೆ ನನ್ನ ಮಗಳ ಜೀವನ ಮುಡಿಪು’ ಅಂತ ಅಂದಿದ್ದ ಅಪ್ಪನ ಮಾತುಗಳು ನೆನಪಾಗುತ್ತವೆ. ನಮ್ಮಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಮಂದಹಾಸ ಕಣ್ಮುಂದೆ ಬರುತ್ತೆ. ಈ ಬದುಕು ಸಾರ್ಥಕ ಅನ್ನಿಸುತ್ತೆ. ಇದಕ್ಕಿಂತ ಇನ್ನೇನೂ ಬೇಡ. ಇನ್ನಷ್ಟು ಸವಾಲುಗಳು ಬರಲಿ, ಎದುರಿಸುತ್ತೇನೆ ಎಂದು ಮನಸ್ಸು ಯುದ್ಧಕ್ಕೆ ತಯಾರಾಗುತ್ತದೆ.

ನಿರೂಪಣೆ: ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

After Kohli-Rohit, Jadeja’s place is also up for grabs: BCCI to take tough decision

ಕೊಹ್ಲಿ-ರೋಹಿತ್‌ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ

11-alnavar

Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು

6

Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ

5

Bajpe: ಇನ್ಮುಂದೆ ದೀಪಗಳಿಂದ ಬೆಳಗ‌ಲಿದೆ ವಿಮಾನ ನಿಲ್ದಾಣ ರಸ್ತೆ

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.