ಆಧುನಿಕ ನವೀಕರಣದ ಕಾವಿಗೆ ಮೂಲ ಸೌಂದರ್ಯ ಮುಕ್ಕಾಗದಿರಲಿ


Team Udayavani, Jan 22, 2023, 7:03 AM IST

ಆಧುನಿಕ ನವೀಕರಣದ ಕಾವಿಗೆ ಮೂಲ ಸೌಂದರ್ಯ ಮುಕ್ಕಾಗದಿರಲಿ

ಒಂದು ಐತಿಹಾಸಿಕ ಸಂರಚನೆ ಬರೀ ಕಲ್ಲು, ಮಣ್ಣಿನ ಕಟ್ಟಡವಲ್ಲ; ಹಲವು ತಲೆಮಾರುಗಳ ಪಾರಂಪರಿಕ ಸಾಕ್ಷ್ಯ. ಅದರಲ್ಲೂ ಸಮುದಾಯಗಳ ಶ್ರದ್ಧಾಲಯಗಳನ್ನು ಸಂದರ್ಶಿಸಿದಾಗ ದಕ್ಕುವ ವಿಶಿಷ್ಟವಾದ ಅನುಭೂತಿ, ಧನಾತ್ಮಕ ಕಂಪನಕ್ಕೂ (ವೈಬ್ರೇಷನ್ಸ್‌) ಸಂರಚನೆಗೂ ಅವಿನಾಭಾವ ಸಂಬಂಧವಿದೆ. ಕಟ್ಟಡವೆಂಬುದು ಭೌತಿಕ ರಚನೆ, ಅದು ಸ್ಥಾವರ. ಆದರೆ ಅದರೊಳಗಿನ ಧನಾತ್ಮಕ ಕಂಪನ ಜಂಗಮ, ಅದೇ ಅದರ ಆತ್ಮ. ಪ್ರಾಚೀನ ನಿರ್ಮಾಣಕಾರರು ಆತ್ಮಕ್ಕೆ ಒಪ್ಪುವ ದಿರಿಸನ್ನು ದೇಹಕ್ಕೆ ಹೊದೆಸಲು ಪ್ರಯತ್ನಿಸುತ್ತಿದ್ದರು. ಆದರೀಗ ನವೀಕರಣದ ರೂವಾರಿಗಳಾದ ನಾವು ದೇಹವನ್ನೇ ಹೆಚ್ಚು ಆಕರ್ಷಕಗೊಳಿಸುವುದಕ್ಕೆ ಆಸ್ಥೆ ವಹಿಸಿದ್ದೇವೆ. ಸೌಂದರ್ಯ ಪ್ರಜ್ಞೆ ದೇಹಕ್ಕಿಂತ ಆತ್ಮಕ್ಕೆ ಹೆಚ್ಚು ಸಂತಸ ತರುವಂಥದ್ದು. ಇಲ್ಲಿ ಲೇಖನಕಾರರು ಜೈನ ಬಸದಿಯ ಕುರಿತಷ್ಟೇ ಚರ್ಚಿಸಿದ್ದರೂ ನಮ್ಮ ವಿಶಿಷ್ಟ ಅನುಭೂತಿಯ ಪಾರಂಪರಿಕ ಸಂರಚನೆಗಳನ್ನೆಲ್ಲಾ ನವೀಕರಣದ ಹೆಸರಿನಲ್ಲಿ ಸಿಮೆಂಟಿನ ಸ್ಮಾರಕಗಳಾಗಿಸು ತ್ತಿರುವುದು ಬಹುತೇಕ ಎಲ್ಲೆಡೆ ನಡೆಯುತ್ತಿದೆ. ಈ ಆಧುನಿಕ ಅವಸರದ ಬೆಳವಣಿಗೆಗೆ ತಡೆ ಹಾಕದಿದ್ದರೆ ಭವಿಷ್ಯದ ತಲೆಮಾರುಗಳಿಗೆ ನಮ್ಮ ಪಾರಂಪರಿಕ ಅನನ್ಯತೆಯ ದರ್ಶನ ಮಾಡಿಸದ ಅಪರಾಧ ನಮ್ಮಿಂದ ಆಗಲಿದೆ.

1999 ರಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಮಣಿಪಾಲಕ್ಕೆ ಆಗಮಿಸಿ ನೆಲೆಸಿದಂದಿನಿಂ ದಲೂ ನಾನು ಈ ಭಾಗದ ಕಾರ್ಕಳ, ಮೂಡುಬಿದಿರೆ ಮತ್ತು ನಲ್ಲೂರಿನ ಜೈನ ಬಸದಿಗಳು ಮತ್ತು ಮಠಗಳನ್ನು ಆಗಾಗ ಸಂದರ್ಶಿಸುತ್ತ ಬಂದಿದ್ದೇನೆ. ಉತ್ತರ ಭಾರತೀಯ ಜೈನ ಸಮುದಾಯದಿಂದ ಬಂದಿರುವ ನನಗೆ ಉತ್ತರದ ರಾಜ್ಯಗಳ ವೈಭವೋ ಪೇತ ಜೈನ ದೇಗುಲಗಳಿಗಿಂತ ಅತ್ಯಂತ ವಿಭಿನ್ನವಾಗಿ ಕಾಣಿಸುವ ಇಲ್ಲಿನ ಸರಳ ಮತ್ತು ಪ್ರಶಾಂತ ಜೈನ ಶ್ರದ್ಧಾ ಕೇಂದ್ರಗಳು ತುಂಬ ಆಕರ್ಷಕ ಎನ್ನಿಸಿತು. ಸರಳತೆ ಮತ್ತು ಅಪರಿ ಗ್ರಹಕ್ಕೆ ಅತ್ಯಂತ ಹೆಚ್ಚು ಮೌಲ್ಯವನ್ನೀಯುವ ಜೈನ ಧರ್ಮದ ಮೂಲತತ್ತಗಳಿಗೆ ಇಲ್ಲಿಯ ಜೈನ ಬಸದಿಗಳು ಮತ್ತು ಮಠಗಳು ನೈಜ ನಿದರ್ಶನ ಎಂಬುದು ಯಾವತ್ತೂ ನನ್ನ ಅನಿಸಿಕೆ. ದಕ್ಷಿಣ ಕನ್ನಡದ ಈ ಪುರಾತನ ಪಾರಂಪರಿಕ ನಿರ್ಮಿತಿಗಳಿಗೆ ಆಧುನಿಕತೆಯ ಬಿಸಿಗಾಳಿ ಸೋಕಲಾರದು ಎಂಬ ನನ್ನ ಈ ಹಿಂದಿನ ಭಾವನೆ ಇಂದು ಸುಳ್ಳೆನಿಸಿದೆ.

ಈ ಶ್ರದ್ಧಾಕೇಂದ್ರಗಳನ್ನು ಸಂದರ್ಶಿಸಿದಾಗ ಮತ್ತು ಅವುಗಳ ಒಳಗೆ ಪ್ರವೇಶಿಸಿದಾಗ ಸಿಗುವ ಪ್ರಶಾಂತಿಯ ಅನುಭೂತಿ ಮತ್ತಷ್ಟು ಜನರಿಗೆ ಲಭ್ಯವಾಗಲಿ ಎಂಬ ಕಾರಣಕ್ಕೆ ನಾನು ಅವಕಾಶ ಸಿಕ್ಕಿದಾಗಲೆಲ್ಲ ನನ್ನ ಅತಿಥಿಗಳನ್ನು ಈ ಸ್ಥಳಗಳಿಗೆ ಕರೆದೊಯ್ಯುತ್ತಿರು ತ್ತೇನೆ. ಐದು ತಿಂಗಳುಗಳ ಹಿಂದೆ ಕಾರ್ಕಳದ ಆನೆಕೆರೆ ಪ್ರದೇಶದಲ್ಲಿ ಇರುವ ಬಸದಿಗಳ ಸಮೂಹವನ್ನು ವೀಕ್ಷಿಸುವುದಕ್ಕಾಗಿ ಕೆಲವು ಸ್ನೇಹಿತರನ್ನು ಕರೆದೊಯ್ದಾಗ ನನಗಾದ ಆಘಾತ ವಿವರಿಸಲು ಕಷ್ಟ. ಶ್ರೀ ಆದಿನಾಥ ಸ್ವಾಮಿಯ ಸಣ್ಣ ದೇಗುಲವನ್ನು ಅದಾಗಷ್ಟೇ ನವೀಕರಣಗೊಳಿಸಲಾಗಿತ್ತು. ಇಲ್ಲಿನ ಹೆಗ್ಗುರುತಾದ, ಕೆರೆಯ ನಡುವಿನ ಆನೆಕೆರೆ ಬಸದಿಯನ್ನೂ ನೆಲಸಮ ಮಾಡಿ, ಹೊಸದಾಗಿ ನಿರ್ಮಿಸಲಾಗುತ್ತಿದೆ ಎಂಬ ಅಂಶ ಸ್ಥಳೀ ಯರಿಂದ ತಿಳಿಯಿತು. ಒಂದು ತಿಂಗಳು ಕಳೆದು ಮತ್ತೂಮ್ಮೆ ಭೇಟಿ ನೀಡಿದಾಗ ಕಾರ್ಕಳ ಚತುರ್ಮುಖ ಬಸದಿಯ ಮುಂಭಾಗದಲ್ಲಿರುವ ಜೈನ ಮಠವನ್ನು ನಮ್ಮ ಕಣ್ಮುಂದೆಯೇ ಕ್ರೇನ್‌ ಬಳಸಿ ನೆಲಸಮ ಮಾಡಲಾಗುತ್ತಿತ್ತು. ಹಸುರಾದ ಭತ್ತದ ಗದ್ದೆ ಯ ಮಧ್ಯೆ ಮನ ಸೆಳೆಯುವ ಸುಂದರ ಸಾಂಪ್ರದಾಯಿಕ ಹೆಂಚಿನ ಛಾವಣಿಯ, ಮರದ ಕಿಟಕಿ ಮತ್ತು ಪ್ರವೇಶದ್ವಾರಗಳ ನಿರ್ಮಿತಿ ಬರೀ ಕಲ್ಲು ಮಣ್ಣಿನ ರಾಶಿಯಂತಾಗಿತ್ತು.

ಈ ಹಂತದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಪ್ರಾಮುಖ್ಯ ಮತ್ತು ಅಪೂರ್ವ ಜೈನ ವಾಸ್ತುಶಿಲ್ಪಗಳನ್ನು ಸ್ಥೂಲವಾಗಿ ಪಟ್ಟಿ ಮಾಡುವುದು ಸೂಕ್ತ ಎನಿಸುತ್ತದೆ. ಅವುಗಳೆಂದರೆ:

-ಗೊಮ್ಮಟೇಶ್ವರ: ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳದಲ್ಲಿ ಇರುವ 3 ಬಾಹುಬಲಿ ಗೊಮ್ಮಟ ವಿಗ್ರಹಗಳು
-ಸಾವಿರ ಕಂಬದ ಬಸದಿ: ಈ ಭಾಗದ ಅತ್ಯಂತ ವೈಭವೋಪೇತ ಸ್ಮಾರಕ; ಇದೊಂದು ವಾಸ್ತುವೈಭವ ನಿಜ, ಆದರೆ ಜೈನ ಧರ್ಮದ ತಾತ್ವಿಕ ಸಾರಕ್ಕೆ ತದ್ವಿರುದ್ಧವಾಗಿರುವಂಥದ್ದು.
ಮಾನಸ್ತಂಭ:ಬಸದಿಗಳ ಮುಂಭಾಗದ ಸೂಕ್ಷ್ಮ ಕುಸುರಿ ಕೆತ್ತನೆಗಳುಳ್ಳ ಸ್ತಂಭಗಳು
ಬಸದಿಗಳು:(ಸಾವಿರ ವರ್ಷಗಳಷ್ಟು ಪುರಾತನ): ಕರಾವಳಿ ಮತ್ತು ಅದರ ಒಳನಾ ಡಿನ ಅಲ್ಲಲ್ಲಿ ಇರುವಂಥವು, ಶಿಲೆ ಅಥವಾ ದಾರುಸ್ತಂಭಗಳನ್ನು ಹಾಗೂ ಶುಭ್ರಶ್ವೇತ ವರ್ಣದ ಮಣ್ಣಿನ ಗೋಡೆಗಳನ್ನು ಹೊಂದಿರುವಂಥವು
ಮಠಗಳು (1500 ಎ.ಡಿ.): ಜೈನ ದೇಗುಲದೊಂದಿಗೆ ಸ್ವಾಮೀಜಿಗಳ ವಾಸ್ತವ್ಯಕ್ಕೆ ಇರುವಂಥವು
ಕೆರೆ ಬಸದಿಗಳು (1500 ಎ.ಡಿ.): ಈ ಭಾಗ ದಲ್ಲಿ ವಿಶಿಷ್ಟ ಎನಿಸಿರುವಂಥವು, ಸಮ್ಮಿತಿಯ ಹೆಂಚಿನ ಛಾವಣಿ ಹೊಂದಿದ್ದು, ಸರೋ ವರ ಅಥವಾ ಕೆರೆಯ ಮಧ್ಯೆ ಇವೆ – ಈ ಬಸದಿಗಳ ಪ್ರತಿಫ‌ಲನವನ್ನು ಕೆರೆಯ ನೀರಿನಲ್ಲಿ ಕಾಣಬಹುದು.

ಮೇಲಿನವುಗಳಲ್ಲಿ ಮೊದಲ ಮೂರು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿವೆ. ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡು ವುದು ನಿಷಿದ್ಧ ಮತ್ತು ಶಿಕ್ಷಾರ್ಹ ಅಪ ರಾಧ. ಉಳಿದ ಎಲ್ಲ ಬಸದಿಗಳು ನಲ್ಲೂರು, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿನ ಮೂರು ಪ್ರಧಾನ ಜೈನ ಮಠಗಳ ಅಧೀನಕ್ಕೆ ಒಳಪಟ್ಟವು. ಆಯಾ ಸ್ವಾಮೀಜಿಗಳಿಗೆ ಅವುಗಳ ನಿರ್ವಹಣೆ ಮತ್ತು ಕಾರ್ಯಚಟುವಟಿಕೆಗಳ ಹೊಣೆ. ಕುತೂಹಲದ ಸಂಗತಿ ಎಂದರೆ, ನವೀಕೃತ ಕಾರ್ಕ ಳದ ಆದಿನಾಥ ಸ್ವಾಮಿ ಬಸದಿಯಂತಹ ಕೆಲವು ಬಸದಿಗಳು ಖಾಸಗಿ ಕುಟುಂಬಗಳ ಅಧೀನ ಮತ್ತು ನಿರ್ವಹಣೆಗೆ ಒಳಪಟ್ಟಿವೆ. ಈ ಬಸದಿಗಳ ಆವರಣದಲ್ಲೇ ಈ ಕುಟುಂಬಗಳು ವಾಸವಿವೆ. ಇವುಗಳ ಯಾವುದೇ ನವೀಕರಣವು ಆಯಾ ನಿರ್ಮಿ ತಿಗಳ ಹೊಣೆ ಹೊತ್ತಿರುವ ಮಠಗಳು ಹಾಗೂ ಜೈನ್‌ ಮಿಲನ್‌ಗಳದ್ದಾಗಿರುತ್ತದೆ.

ಇತ್ತೀಚೆಗೆ ನಡೆದಿರುವುದು ಈ ಬಸದಿಗಳ ನವೀಕರಣವೇ ವಿನಾ ಪುನರ್‌ಸ್ಥಾಪನೆ ಯಲ್ಲ ಎಂಬುದು ಎಚ್ಚರಿಕೆಯ ಕರೆಘಂಟೆ. 1,500 ವರ್ಷಗಳು ಅಥವಾ ಅದಕ್ಕಿಂತಲೂ ಹಿಂದೆ ನಿರ್ಮಾಣಗೊಂಡ ಈ ರಚನೆಗಳನ್ನು ಹಾಗೆ ನವೀಕರಿಸಲು ನಮಗೆ ಅಧಿಕಾರ ಇದೆಯೇ ಎಂಬುದೇ ಇಲ್ಲಿನ ಮೂಲ ಪ್ರಶ್ನೆ. ಎರಡನೆಯದಾಗಿ, ಈ ಬಸದಿಗಳು ಹೊಂದಿದ್ದ ಐತಿಹಾಸಿಕ ವಿನ್ಯಾಸ ಭಾಷೆ ಈ ನವೀಕರಣದ ಸಂದರ್ಭದಲ್ಲಿ ನಾಶವಾಗಿದೆ ಮತ್ತು ಪ್ರತೀ ಬಸದಿಯೂ ಇನ್ನೊಂದಕ್ಕಿಂತ ಭಿನ್ನವಾಗಿ ಕಾಣಿಸುತ್ತಿದೆ. ಮೂರನೆಯದಾಗಿ, ಹೊಳೆಯುವಂತೆ ಪಾಲಿಶ್‌ ಮಾಡಲಾದ ಗ್ರಾನೈಟ್‌ನಂಥ ಸಾಮಗ್ರಿಗಳನ್ನು ನವೀಕರಣಕ್ಕೆ ಬಳಸಲಾಗುತ್ತಿದೆ; ಇದಕ್ಕೆ ಕೊಡಲಾಗುವ ಕಾರಣ ಎಂದರೆ ಶುಚಿಗೊಳಿಸಲು ಅನುಕೂಲ ಎಂಬುದು. ಹಿಂದೆ ಮಣ್ಣಿನಿಂದ ನಿರ್ಮಿತ ಆವರಣ ಗೋಡೆಗಳನ್ನು ಈಗ ಸಾಪಾಟಾದ ಕಾಂಕ್ರೀಟ್‌ ಬ್ಲಾಕ್‌ಗಳಿಂದ ನಿರ್ಮಿಸಲಾಗುತ್ತಿದೆ (ಬೇಸಗೆಯಲ್ಲಿ ಇದು ತಾಪಮಾನವನ್ನು ಹೆಚ್ಚಿಸುತ್ತದೆ ಎಂಬ ವಾಸ್ತವಿಕ ಅನನುಕೂಲವೂ ಇದೆ); ಪಾರ್ಕಿಂಗ್‌ಗೆ ಹೆಚ್ಚು ಸ್ಥಳಾವಕಾಶ ಅಗತ್ಯ ಎಂಬುದು ಇದಕ್ಕೆ ನೀಡಲಾಗುವ ಮತ್ತೂಂದು ಕಾರಣ. ಕೊನೆಯಲ್ಲಿ, ಮೂಲ ದಲ್ಲಿದ್ದ ಪುರಾತನ ಸಂರಚನೆಯನ್ನು ತುಸುವೂ ಹೋಲದ ನಿರ್ಮಾಣ ಎದ್ದು ನಿಲ್ಲುತ್ತಿ¤ದೆ ಮತ್ತು ಇದು ಸರ್ವೇ ಸಾಧಾರಣವಾದ ಹೊಸ ದೇಗುಲದಂತೆ ಕಾಣಿಸುತ್ತದೆ.

ಇಂತಹ ನವೀಕರಣವನ್ನು ಕೈಗೊಳ್ಳುತ್ತಿರುವ ಹಲವರ ಪಾಲಿಗೆ ಈ ಶ್ರದ್ಧಾಲಯಗಳು ಹೀಗೆ ಹೊಳೆ ಹೊಳೆಯುವುದು ಎಂದರೆ “ಶ್ರೀಮಂತ ನೋಟ ಪಡೆಯುವುದು’ ಎಂಬ ಭಾವನೆ ಇದೆ. ಪುರಾತನ ಸಂರಚನೆಗಳು ಎಂದೂ ಹೀಗೆ ನವಿರಾದ, ಹೊಳಪು ಮಾಡಿಟ್ಟಂತಹ ನೋಟವನ್ನು ಹೊಂದಿರಲೇ ಇಲ್ಲ ಎಂಬುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ನಿಜ ಹೇಳಬೇಕೆಂದರೆ ಹಿಂದಿನ ಕಾಲದಲ್ಲಿ ಬಳಸಲಾ ಗುತ್ತಿದ್ದ ಮಂಗಳೂರು ಹೆಂಚು, ಜಂಬಿಟ್ಟಿಗೆ ಅಥವಾ ಮುರಕಲ್ಲು ಹಾಗೂ ಕಪ್ಪು ಶಿಲೆ ಕಲ್ಲು ಕೂಡ ದೊರಗಾದ ನೈಸರ್ಗಿಕ ವಿನ್ಯಾಸವನ್ನು ಹೊಂದಿರುತ್ತಿದ್ದವು. ಕಾಲಚಕ್ರ ಉರುಳಿದಂತೆ ವಾತಾವರಣ ಅವುಗಳ ಮೇಲೆ ತನ್ನ ಪ್ರಭಾವವನ್ನು ಬೀರಿ ಅವುಗಳ ಸಹಜ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. ಕಾಲ ಮತ್ತು ವಾತಾವರಣದ ಈ ಪ್ರಭಾವ – ಬೆಂಕಿಯಲ್ಲಿ ಬೆಂದು ಬಂದ ಹೆಂಚು ಕಾಲಾನುಕ್ರಮದಲ್ಲಿ ಕೊಂಚ ಕಪ್ಪಗಾಗುವುದು, ಕಲ್ಲುಗಳ ಮೇಲಿರುವ ಸೂಕ್ಷ್ಮ ರಂಧ್ರಗಳಲ್ಲಿ ಧೂಳು ಸೇರುವುದು, ದೇಗುಲದ ಪ್ರಾಕಾರ ಮತ್ತು ನೆಲದ ಅಲ್ಲಲ್ಲಿ ಹುಲ್ಲು ಹುಟ್ಟಿಕೊಳ್ಳುವುದು-ಇವೆಲ್ಲವೂ ಸಹಜವಾಗಿದ್ದು ಸ್ವೀಕೃತ ಗೊಳ್ಳುವಂಥವು. ವಾಸ್ತವವಾಗಿ, ಇಂತಹ ಕಟ್ಟಡಗಳ ದುರಸ್ತಿ, ಪುನರ್‌ಸ್ಥಾಪನೆ ನಡೆದಿದೆ ಎಂಬುದೇ ಎಲ್ಲೂ ಗೋಚರವಾಗದಂತೆ ಅತ್ಯಂತ ಸೂಕ್ಷ್ಮವಾಗಿ ಇಂತಹ ಕಾರ್ಯಗಳನ್ನು ನಡೆಸಬೇಕು.

ಈ ಭಾಗದ ಚರ್ಚುಗಳ ವಾಸ್ತುಶಿಲ್ಪದ ಬಗ್ಗೆ ವಿಸ್ತೃತವಾಗಿ ಕೆಲಸ ಮಾಡಿರುವ ಮಂಗಳೂರಿನ ಜನರಲ್‌ ಕಾರ್ಪೊರೇಶನ್‌ನ ವಾಸ್ತುಶಿಲ್ಪಿ ದೀಪಕ್‌ ಡಿ’ಸೋಜಾ ತಾನು ವಿದ್ಯಾರ್ಥಿಯಾಗಿದ್ದಾಗ ಜೈನ ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿದ್ದನ್ನು ಸ್ಮರಿಸಿ ಕೊಳ್ಳುತ್ತಾರೆ. ಸರಳತೆಯಲ್ಲಿಯೂ ಸ್ನಿಗ್ಧತೆ ಜೈನ ವಾಸ್ತುಶಿಲ್ಪದ ಪ್ರಧಾನ ಅಂಶ ಎಂದು ಅವರು ವಿವರಿಸುತ್ತಾರೆ. “ಈ ಮೂಲ ತಾಂತ್ರಿಕತೆಯನ್ನೇ ಬಳಸಿ ಅವುಗಳನ್ನು ಪುನರ್‌ಸ್ಥಾಪಿಸಬೇಕಿದೆ. ಈ ಸ್ಮಾರಕಗಳ ಮೂಲ ಅಪೂರ್ವ ಗುಣಲಕ್ಷಣಗಳನ್ನು ಕಾಯ್ದುಕೊಂಡು ವಿಶ್ವಾಸಾರ್ಹ ಮತ್ತು ಯಶಸ್ವಿ ಪುನರ್‌ಸ್ಥಾಪನೆ ನಡೆಸಬೇಕಿದ್ದರೆ ಮೂಲಕ್ಕೆ ನಿಕಟವಾದ ಸಾಮಗ್ರಿಗಳನ್ನೇ ಎಷ್ಟು ಸಾಧ್ಯವೋ ಅಷ್ಟು ಬಳಸಬೇಕು. ಇಂಥದೊಂದು ವಿವೇಕಯುಕ್ತ ಪುನರ್‌ನಿರ್ಮಾಣ ಮತ್ತು ಜೀರ್ಣೋ ದ್ಧಾರದ ವಿಧಾನದಿಂದ ಮಾತ್ರ ಪ್ರಸ್ತುತ ಸಂರಚನೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಉಳಿಸಿಕೊಳ್ಳಬಹುದು. ಪುನರ್‌ ಸ್ಥಾಪನೆಯ ಬಳಿಕ ರಕ್ಷಣಾತ್ಮಕ ನಿರ್ವಹಣೆಯೂ ಮುಖ್ಯ. ಇದರಿಂದ ಸಂರಚನೆಯ ಮೂಲ ಗುಣಗಳು ದೀರ್ಘ‌ಕಾಲ ಬಾಳಿಕೆ ಬರುವಂತೆ ಸಂರಕ್ಷಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು.

ನವೀಕೃತ ಈ ಸಂರಚನೆಗಳು ದೀರ್ಘ‌ಕಾಲ ಬಾಳುವಂಥವು ಎಂಬುದಾಗಿ ಈಗಿನ ನವೀಕರಣ ಮಾದರಿಯನ್ನು ಕೆಲವರು ಸಮರ್ಥಿಸಿ ಕೊಳ್ಳುತ್ತಾರೆ; ಆದರೆ ಇದನ್ನೂ ಬಲವಾಗಿ ಅಲ್ಲಗಳೆಯಬಹುದು. ಪುರಾತನ ವಾಸ್ತುಶಿಲ್ಪಗಳಲ್ಲಿ ಒಂದು ಖಚಿತ ಮತ್ತು ನಿರ್ದಿಷ್ಟವಾದ “ವಿನ್ಯಾಸ ಭಾಷೆ’ ಇದ್ದಿತ್ತು. ಬಳಕೆ ಮಾಡಲಾದ ಸಾಮಗ್ರಿಗಳು, ಕಟ್ಟಡದ ವಾಸ್ತು ಮತ್ತು ಇನ್ನೂ ಅನೇಕ ಅಂಶಗಳು ಇದನ್ನು ಅನುಸರಿಸಿದ್ದವು. ಹಾಗಾಗಿ ಈ ಎಲ್ಲ ಜೈನ ಬಸದಿಗಳದ್ದು ಸಮಾನ ಸ್ವರೂಪ. ಕೆಲವು ವರ್ಷಗಳ ಹಿಂದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನಿಂದ ಪುನರ್‌ಸ್ಥಾಪಿತ ಬೆಳ್ತಂಗಡಿಯ ಜೈನ ದೇಗುಲವು ಈ ಭಾಗದಲ್ಲಿ ಇಂತಹ ಕಾರ್ಯವನ್ನು ಅತ್ಯಂತ ಸೂಕ್ಷ್ಮಜ್ಞತೆಯಿಂದ ನಡೆಸಿ ದ್ದಕ್ಕೆ ಒಳ್ಳೆಯ ಉದಾಹರಣೆ. ಅದು ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ.
ಈಗಿನ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯುವ ಹೊಣೆಯನ್ನು ಹೆಗಲ ಮೇಲೆ ಹೊತ್ತುಕೊಳ್ಳುತ್ತಿರುವ ಹಾಗೆಯೇ ಭವಿಷ್ಯದ ಪೀಳಿಗೆಗಳೂ ಇದೇ ಕಾರ್ಯವನ್ನು ಮುಂದುವರಿಸುತ್ತವೆ. ಹೀಗಾಗಿ ಪ್ರತೀ 50 ವರ್ಷಗಳಿಗೆ ಒಮ್ಮೆ ಪುರಾತನ ಕಟ್ಟಡವೊಂದನ್ನು ಪುನರ್‌ಸ್ಥಾಪಿಸಬೇಕಾದೀತು ಎಂದಾದರೆ ಅದು ತಪ್ಪಲ್ಲ – ಆದರೆ ಅದು ಎಷ್ಟು ಕಾಲ ಬಾಳಿಕೆ ಬರುವುದೋ ಎಂಬ ಚಿಂತೆಯಲ್ಲಿ ನಾವು ಸುಖಾಸುಮ್ಮನೆ ಅದರ ಪ್ರಾಚೀನ ವಿನ್ಯಾಸ ಭಾಷೆಯನ್ನು ಬದಲಾಯಿಸುವುದು ಸರ್ವಥಾ ಸಲ್ಲದು. ಈ ಲೇಖನವನ್ನು ಬರೆಯುವ ಹೊತ್ತಿಗೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಾರ್ಕಳ ಮಠದ ವಿನ್ಯಾಸ ನಕಾಶೆಯನ್ನು ಪಡೆಯಲು ನನಗೆ ಸಾಧ್ಯವಾಗಲಿಲ್ಲ; ಆದರೆ ಈಗ ಏನು ನಡೆಯುತ್ತಿದೆಯೋ ಅದನ್ನು ಗಮನಿಸುವುದಾದರೆ ಹಳೆಯ ಮಠದ ಸ್ಥಾನದಲ್ಲಿ ಹೊಸ ಸಾಮಾನ್ಯ ಆಧುನಿಕ ಕಟ್ಟಡವೊಂದು ತಲೆಯೆತ್ತುವ ಸಾಧ್ಯತೆಯೇ ಅಧಿಕ. ಇಲ್ಲಿನ ಜೈನ ಸಮುದಾಯ ತನ್ನ ಅಮೂಲ್ಯ ಪರಂಪರೆಯ ಬಗೆಗೆ ಹೊಸ ಅರಿವು ಮತ್ತು ನಿಲುವು ತಾಳುವ ನಿಟ್ಟಿನಲ್ಲಿ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕು ಮತ್ತು ಕರಾವಳಿ ಕರ್ನಾಟಕದಾದ್ಯಂತ ಜೈನ ವಾಸ್ತು ಶಿಲ್ಪಕ್ಕೆ ಆಘಾತವಾಗುವುದನ್ನು ತಡೆಯಬೇಕು ಎಂಬುದೇ ಎಂಬುದೇ ನನ್ನ ಆಶಯ.

ಕೆಲವು ನೈತಿಕ ಪ್ರಶ್ನೆಗಳು
ಮೂಲ ರಚನೆಯಲ್ಲಿ ಬಳಕೆಯಾದ ಸಾಮಗ್ರಿ (ಹೆಂಚುಗಳು, ಮಣ್ಣಿನ ಗೋಡೆಗಳು)ಗಳು ಈಗಲೂ ಮಾರುಕಟ್ಟೆಯಲ್ಲಿ ಲಭ್ಯವಿರುವಾಗ ಅವುಗಳಿಗೆ ಬದಲಾಗಿ ಹೊಸ (ಕಾಂಕ್ರೀಟ್‌ ಮತ್ತು ಗ್ರಾನೈಟ್‌) ಸಾಮಗ್ರಿಗಳನ್ನು ಬಳಸುವ ಔಚಿತ್ಯವಾದರೂ ಏನು? ಹಾಗೂ ಆ ಸ್ವಾತಂತ್ರ್ಯ ನಮಗೆ ಇದೆಯೇ?

ವರಂಗ ಕೆರೆ ಬಸದಿಯ ಪುರಾತನ ಸರಳ ಬಾಹ್ಯ ಗೋಡೆಗಳನ್ನು ಕೆಲವು ವರ್ಷಗಳ ಹಿಂದೆ ಗ್ರಾನೈಟ್‌ನಿಂದ ನಿರ್ಮಿಸಿದಾಗ ಅದರ ಪ್ರಾಕ್ತನ ನೋಟ ಸಂಪೂರ್ಣವಾಗಿ ನಾಶವಾಯಿತು. ವಿನ್ಯಾಸ ಕ್ಷೇತ್ರದಲ್ಲಿ “ಅಪಶ್ರುತಿ’ ಎಂಬ ಒಂದು ಪರಿಕಲ್ಪನೆ ಇದೆ – ನಿರ್ಮಿತಿಯು ಕಟು ಮತ್ತು ಕ್ಷೋಭೆಕಾರಕ ಪರಿಣಾಮ ಉಂಟು ಮಾಡಿದಾಗ ಅಪಶ್ರುತಿ ಎನ್ನುತ್ತಾರೆ. ನಿಶ್ಚಲ ನೀರು ಮತ್ತು ಅಲೆಗಳೇಳುತ್ತಿರುವ ನೀರನ್ನು ಇದಕ್ಕೆ ಉದಾಹರಿಸಬಹುದು. ಮೊದಲನೆಯದು ಕಣ್ಣುಗಳು ಮತ್ತು ಮೆದುಳಿಗೆ ಪ್ರಶಾಂತಿಯ ಅನುಭೂತಿ ಯನ್ನು ನೀಡಿದರೆ ಎರಡನೆಯದು ಗೊಂದಲಕ್ಕೀಡು ಮಾಡು ತ್ತದೆ. ದುಃಖದ ಅಂಶವೆಂದರೆ, ವರಂಗ ಬಸದಿ ಈ ಅಕ್ಷಮ್ಯ ಪ್ರಮಾದಕ್ಕೆ ಒಂದು ಉದಾಹರಣೆ. ಕೋಟೇಶ್ವರ ಮೂಲದವ ರಾದ, ಭಾರತದ ಮುಂಚೂಣಿಯ ಸಮಕಾಲೀನ ಕಲಾವಿದ ರಲ್ಲಿ ಒಬ್ಬರಾದ ಎಲ್‌.ಎನ್‌. ತಲ್ಲೂರು ಕೂಡ ವರಂಗ ಬಸದಿಗೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದಾಗ ಇದೇ ಪರಿಣಾಮವನ್ನು ಅನುಭವಿಸಿದರು. “850 ವರ್ಷಗಳಷ್ಟು ಹಳೆಯ ಸೌಂದರ್ಯ ಪ್ರಜ್ಞೆ ಇನ್ನೂ ನೂರು ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಕಾಲ ತಲೆಯೆತ್ತಿ ನಿಲ್ಲುವುದಕ್ಕಾಗಿ ಅದಕ್ಕೊಂದು ಊರುಗೋಲು ನೀಡುವಷ್ಟು ಸ್ವಾತಂತ್ರ್ಯ ಮಾತ್ರ ನಮಗಿದೆ. ಅ ಪುರಾತನವಾದ ಆ ಸೌಂದರ್ಯಪ್ರಜ್ಞೆಗೆ ಸವಾಲೆಯುವ ಕೆಚ್ಚು ಇರುವಂಥವರು ಮೂಲ ಕಟ್ಟಡವನ್ನು ಕೆಡವದೆ ಹೊಸದನ್ನು ಇನ್ನೊಂದು ಕಡೆ ನಿರ್ಮಿಸಬೇಕು. ಆ ಕಾಲದ ಸೌಂದರ್ಯಪ್ರಜ್ಞೆಯ ನೈಜ ಆರಾಧಕರು ಅದನ್ನು ಯಂತ್ರಗಳಿಂದ, ಆಧುನಿಕ ಕಟ್ಟಡ ನಿರ್ಮಾಣ ಸಾಮಗ್ರಿ ಗಳಿಂದ ಪುನಾರಚಿಸಲಾರರು. ಪುರಾತನ ಕಟ್ಟಡದ ಸುಂದರ ಸಲ್ಲಕ್ಷಣಗಳಲ್ಲಿ ಐವತ್ತು ಪ್ರತಿಶತ ಈಗಾಗಲೇ ನಷ್ಟವಾಗಿ ಹೋಗಿದೆ’ ಎನ್ನುತ್ತಾರೆ ಎಲ್‌. ಎನ್‌. ತಲ್ಲೂರು.

ಮೂಲ ವಾಸ್ತುಶಿಲ್ಪಿಯ ಅಂತರ್‌
ದೃಷ್ಟಿಯನ್ನು ನಾವು ಗೌರವಿಸಿದ್ದೇವೆಯೇ?
ಆನೆಕೆರೆ ಕೆರೆ ಬಸದಿಯ ನವೀಕರಣ ವಿಷಯ ದಲ್ಲಿ ನೈತಿಕ ಮತ್ತು ಸೌಂದರ್ಯಪ್ರಜ್ಞೆಗೆ ಸಂಬಂಧಿ ಸಿದ ಹಲವು ಸಂಗತಿಗಳಿವೆ. ನವೀಕರಣಕ್ಕೆ ಮುನ್ನ ಅದರಲ್ಲಿ ಪಾಲ್ಗೊಳ್ಳುವ ಆಡಳಿತ, ಯೋಜನಾ ಸಮಿತಿಯಿಂದ ತೊಡಗಿ ವಾಸ್ತುಶಿಲ್ಪಿಗಳ ವರೆಗೆ ಎಲ್ಲರೂ ಮೂಲ ವಾಸ್ತುಶಿಲ್ಪಿಯ ಮಿದುಳಿ ನೊಳಕ್ಕೆ (ಚಿಂತನೆಯೊಳಗೆ) ಪರಕಾಯ ಪ್ರವೇಶ ಮಾಡಬೇಕಿದೆ. ಆ ಮೂಲ ಶಿಲ್ಪಿಯು ಈ ರಚನೆಯ ನಿರ್ಮಾಣದ ವೇಳೆ ಮಣ್ಣಿಗೆ ನಿಕಟವಾದ ಸಾಮಗ್ರಿ ಮತ್ತು ಬಣ್ಣದ, ದೂರದಿಂದಲೇ ಗೋಚರ ವಾಗುವಂತಹ, ನೋಡುಗರ ನೋಟಕ್ಕೆ ಭಂಗ ತಾರದ; ತಾಯಿಯೊಬ್ಬಳು ತನ್ನ ಮಗುವನ್ನು ತೆರೆದ ಬಾಹುಗಳಿಂದ ಸ್ವಾಗತಿಸುವಂತಹ ಕಲ್ಪನೆಯನ್ನು ಹೊಂದಿದ್ದರು ಎಂದು ಅನ್ನಿಸುವುದಿಲ್ಲವೇ? ಇದಕ್ಕೆ ತದ್ವಿರುದ್ಧವಾಗಿ ಈಗ ನಿರ್ಮಿತ ಗ್ರಾನೈಟ್‌ ನಿರ್ಮಿತಿಯು ಕೆರೆಯ ನೀರಿನ ಮೇಲೆ ಬಹು ಭಾರದ, ಘನ ರಚನೆಯಾಗಿ ಆಭಾಸಕರ ಎನಿಸುವು ದಿಲ್ಲವೇ? ಕಾಲ ಸರಿದಂತೆ ಗ್ರಾನೈಟ್‌ ಕಪ್ಪುಗಟ್ಟಿ ನಿಸರ್ಗಸಹಜ ನೋಟದೊಳಗೆ ಬೆರೆತುಹೋಗ ಬಹುದು; ಆದರೆ ಆವರೆಗೆ ಆನೆಕೆರೆ ಬಸದಿಯು ಉಗುರು ಸುತ್ತಾದ ಹೆಬ್ಬೆ ರಳಿನ ಹಾಗೆ ಕಾಣಿಸುವುದು ನಿಶ್ಚಿತ. ಈ ಬಸದಿಯಲ್ಲಿ ಬಹುವಾಗಿ ಛಾಯಾ ಗ್ರಹಣಗೊಳ್ಳುವ ಅಂಶವಾಗಿರುವ ಕೆರೆಯ ನೀರಿನಲ್ಲಿ ಬಸದಿಯ ಪ್ರತಿಫ‌ಲನದ ಬಗ್ಗೆ ಯಾರೂ ತಲೆಕೆಡಿಸಿಕೊಂಡ ಹಾಗಿಲ್ಲ. ನಿಜ ಹೇಳಬೇಕೆಂದರೆ, ಎದುರು ಭಾಗದಲ್ಲಿ ನಿರ್ಮಿಸಲಾದ ಉದ್ದವಾದ ಗೋಡೆ ದೃಷ್ಟಿಗೆ ತಡೆಯಾಗುತ್ತದೆ ಮತ್ತು ಅದರಿಂ ದಾಗಿ ಆ ಭಾಗದ ಪ್ರತಿಫ‌ಲನ ಸಾಧ್ಯವೇ ಆಗದು ! ಈ ಹಿಂದಿನ ಕಟ್ಟಡದ ಸಂಪೂರ್ಣ ಸಮ್ಮಿತಿಗೆ ಕೂಡ ಈ ಗೋಡೆ ಭಂಗ ತರುತ್ತಿದೆ.
ಒಪೊಲಿಸ್‌ ಆರ್ಕಿಟೆಕ್ಚರ್‌ ಪಾಲುದಾರರೂ ಆಗಿ ರುವ, ಪ್ರಶಸ್ತಿ ಪುರಸ್ಕೃತ ಮುಂಬಯಿಯ ವಾಸ್ತು ಶಿಲ್ಪಿ ಸೊನಾಲ್‌ ಸಂಚೇತಿ ಹೊಸ ವಿನ್ಯಾಸದ ಬಗ್ಗೆ ಹೀಗೆ ಹೇಳುತ್ತಾರೆ, “ಇಡೀ ದೇಗುಲದ ಮೂಲ ಸಂರಚನಾ ಪ್ರಜ್ಞೆ, ಅದರ ಸಂದರ್ಭ, ಸಾಮಗ್ರಿ ಶಾಸ್ತ್ರಜ್ಞತೆಗಳನ್ನು ಹಾಗೆಯೇ ಕಾಯ್ದುಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಮೂಲ ಅನುಭವ ಮತ್ತು ಸಾಮಗ್ರಿಗಳನ್ನು ಸಂರಕ್ಷಿಸಿ ಕೊಳ್ಳಲೇಬೇಕು; ಮೂಲ ಸಂರಚನೆಯ ಸಹಜ ಸೌಂದರ್ಯ ಮತ್ತು ಬೇರು ಭಾವಕ್ಕೆ ಯಾವುದೇ ಧಕ್ಕೆ ಮಾಡಬಾರದು. ನಾವು ಸಂರಕ್ಷಿಸಿ ನಿರ್ವಹಣೆಗೆ ಒಳಪಡಿಸುವ ಯಾವುದೇ ನಿರ್ಮಾಣದ ಮೂಲ ಗುಣ ಲಕ್ಷಣಗಳಿಗೆ ನಿಷ್ಠರಾಗಿರುವುದು ವಾಸ್ತು ಶಿಲ್ಪಿಗಳಾದ ನಮ್ಮ ಹೊಣೆಯೂ ಆಗಿದೆ. ಪ್ರಸ್ತಾವಿತ ಹೊಸ ರಚನೆಯು ತಾನಿರುವ ಸಂದರ್ಭ- ಪ್ರದೇಶಕ್ಕೆ ಸಂಪೂರ್ಣವಾಗಿ ಹೊರಗಿನದು ಎಂಬಂತೆ ಭಾಸವಾಗುತ್ತದೆ’.

ಹೀಗೊಂದು ಪರಿಹಾರ
ಕರ್ನಾಟಕದ ಕರಾವಳಿಯಲ್ಲಿರುವ ಜೈನ ಸಮುದಾಯ ತುಲನಾತ್ಮಕವಾಗಿ ಸಣ್ಣದು ಮತ್ತು ನಿಕಟವಾಗಿ ಹಾಸು ಹೊಕ್ಕಾಗಿರುವುದೂ ಆಗಿರುವುದರಿಂದ ಅದರ ಪುರಾತನ ಪರಂಪರೆಗೆ ಇನ್ನಷ್ಟು ನಷ್ಟ ಉಂಟಾಗುವುದನ್ನು ಈಗಲೂ ತಡೆಯಬಹುದು. ಜೈನ್‌ ಮಿಲನ್‌ನಿಂದ ನವೀಕರ ಣದ ನಿರ್ಧಾರಗಳನ್ನು ತತ್ಸಂಬಂಧಿ ಸ್ವಾಮೀಜಿಗಳ ಜತೆಗೆ ಸಮಾಲೋಚಿಸಿದ ಬಳಿಕವೇ ಕೈಗೊಳ್ಳಲಾ ಗುತ್ತದೆ; ಅವರೆಂದರೆ – ಕಾರ್ಕಳದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅಥವಾ ಮೂಡುಬಿದಿರೆಯ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ (ನಲ್ಲೂರಿನ ಮಠವೂ ಪ್ರಸ್ತುತ ಇವರ ವ್ಯಾಪ್ತಿಯಲ್ಲಿದೆ). ಬಹುತೇಕ ಇಂತಹ ಪ್ರಮುಖ ಸಂದರ್ಭಗಳಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಯವರಿಗೂ ಮಾಹಿತಿ ಇರುತ್ತದೆ ಅಥವಾ ಅವರೂ ಒಳಗೊಂಡಿರುತ್ತಾರೆ.

01ಈ ಬಸದಿಗಳು ಮತ್ತು ಮಠಗಳನ್ನು ಮೂಲಕ್ಕೆ ಎಷ್ಟು ಸಾಧ್ಯವೋ ಅಷ್ಟು ನಿಕಟವಾಗಿ ಸಂರಕ್ಷಿಸಬೇಕು ಎಂಬುದನ್ನು ಮೊತ್ತಮೊದಲನೆಯದಾಗಿ ಜೈನ್‌ ಮಿಲನ್‌ ಸ್ಪಷ್ಟವಾಗಿ ಮನದಟ್ಟು ಮಾಡಿಕೊಳ್ಳಬೇಕು. ಅವರ ಪ್ರಸ್ತುತ ಉದ್ದೇಶಗಳು ಒಳ್ಳೆಯವೇ. ಆದರೆ ಅರಿವಿನ ಕೊರತೆಯಿಂದಾಗಿ ಇತಿಹಾಸ ವನ್ನು ಹಾಳುಗೆಡವಲಾಗುತ್ತಿದೆ.
02 ಜೈನ್‌ ಮಿಲನ್‌ ತನ್ನ ನಿಯಮಿತ ಸಭೆಗಳಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಈ ಕುರಿತಾಗಿ ಅರಿವನ್ನು ವಿಸ್ತರಿಸಬೇಕು. ಸ್ವಾಮೀಜಿಗಳೂ ಸಾರ್ವಜನಿಕ ಸಭೆಗ ಳಲ್ಲಿ ತಿಳಿಹೇಳಬೇಕು. ಯಾರೇ ಆದರೂ ಅನುಮತಿ ಪಡೆಯದೆ ಯಾವುದೇ ಐತಿಹಾಸಿಕ ಕಟ್ಟಡದ ದುರಸ್ತಿ ಅಥವಾ ನವೀಕರಣಕ್ಕೆ ಮುಂದಾಗುವುದು ಇನ್ನಾದರೂ ಸ್ಥಗಿತಗೊಳ್ಳಬೇಕು.
03 ವಿನ್ಯಾಸ ಯೋಜನಾ ಸಮಿತಿಯೊಂದು ಈ ಕೂಡಲೇ ರಚನೆಯಾಗಬೇಕು. ಇದರಲ್ಲಿ ಈ ಪ್ರದೇಶದ ಜೈನ ವಾಸ್ತುಶಿಲ್ಪದ ಬಗ್ಗೆ ಆಳವಾದ ಅಧ್ಯಯನ, ಅರಿವು ಹೊಂದಿರುವ, ನುರಿತ ಕೆಲವು ವಾಸ್ತುತಜ್ಞರು ಮತ್ತು ಉತ್ತಮ ವಿನ್ಯಾಸ ಪ್ರಜ್ಞೆಯನ್ನು ಹೊಂದಿರುವ, ಇತಿಹಾಸ ದಲ್ಲಿ ನೈಜ ಆಸಕ್ತಿಯುಳ್ಳ ಗಣ್ಯರು ಈ ಸಮಿತಿಯ ಸದಸ್ಯರಾಗಿರಬೇಕು. ಸ್ಥಳೀಯ ವಾಸ್ತುಶಿಲ್ಪಿ ಗಳು ಮತ್ತು ಗುತ್ತಿಗೆದಾರರಿಗೆ ಈ ಸಮಿತಿಯು ವಿನ್ಯಾಸ ಮಾರ್ಗದರ್ಶನ ಮತ್ತು ನಿರ್ದೇಶನ ವನ್ನು ಒದಗಿಸಬೇಕು. ಉತ್ತಮ ವಿನ್ಯಾಸ ಸಹಾಯ ಒದಗಿಸು ವುದು ಸಾಧ್ಯವಾದರೆ ಭಾರತೀಯ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟ ಸ್ಮಾರಕಗಳ ದುರಸ್ತಿ, ಪುನರ್‌ಸ್ಥಾಪನೆ ಗಳು ಕೂಡ ಉತ್ತಮ ಅಭಿ ರುಚಿಯೊಂದಿಗೆ ನಡೆಯುವಂತೆ ಆಗಿಸಬಹುದು. ಇತ್ತೀಚೆಗೆ ಮೂಡುಬಿದಿರೆಯ ಸಾವಿರ ಕಂಬದ ಬಸದಿಯಲ್ಲಿ ಸ್ತಂಭಗಳ ಮೇಲೆ ಸ್ಪಾಟ್‌ಲೆçಟ್‌ಗಳನ್ನು ಅಳ ವಡಿಸಲಾಯಿತು. ಉತ್ತಮ ವಿನ್ಯಾಸಕಾರರೊಬ್ಬರನ್ನು ಈ ಕಾರ್ಯದಲ್ಲಿ ಬಳಸಿದ್ದರೆ ಖರೀದಿ ಸಲಾದ ತಾಮ್ರದ ದೀಪಗಳು ಅಲ್ಲಿಗೆ ಹೊಂದಿಕೊಳ್ಳವು; ಬದಲಾಗಿ ಉಕ್ಕಿನ ಅಳವಡಿಕೆ ಗಳು ಬೂದು ಬಣ್ಣದ ಸ್ತಂಭಗಳ ಜತೆಗೆ ಹೆಚ್ಚು ಚೆನ್ನಾಗಿ ಒಗ್ಗಿಕೊಳ್ಳುತ್ತವೆ ಎಂಬುದಾಗಿ ಸಲಹೆ ನೀಡುತ್ತಿದ್ದರು.
04 ಯಾವುದೇ ಪುರಾತನ ನಿರ್ಮಿತಿಯ ನವೀಕರಣಕ್ಕೆ ಮುನ್ನ ಸ್ವಾಮೀಜಿಗಳು ಮತ್ತು ಜೈನ್‌ ಮಿಲನ್‌ ಈ ಸಮಿತಿಯನ್ನು ಸಂಪರ್ಕಿಸಿ ಸಮಾಲೋಚಿಸ ಬೇಕು. ಮಾತ್ರವಲ್ಲದೆ ಸಮಿತಿಯ ಅಂಗೀಕಾರವನ್ನು ಪಡೆಯಬೇಕು. ಹೀಗಾದಾಗ ಮಾತ್ರ ಜೈನ ಪರಂಪರೆಯ ಈ ಪುರಾತನ ಕಟ್ಟಡಗಳ ಸಮಾನ ವಿನ್ಯಾಸ ಭಾಷೆ ಮತ್ತು ಘನತೆಯನ್ನು ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾದೀತು ಮತ್ತು ಆಗ ಮಾತ್ರ ಪ್ರತೀ ಕಟ್ಟಡವೂ ಸ್ವತಂತ್ರವಾಗಿ ವಿನ್ಯಾಸಗೊಂಡದ್ದು ಎಂಬಂತಹ ಆಭಾಸ ಸೃಷ್ಟಿಯಾಗುವುದು ತಪ್ಪೀತು.

-ವನಿತಾ ಜೈನ್‌ ಪೈ

ಟಾಪ್ ನ್ಯೂಸ್

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.