ಇಂದಿಗೂ ಪ್ರಸ್ತುತ ಗಾಂಧೀಜಿ ಎಂಬ ರೂಪಕ
Team Udayavani, Oct 2, 2018, 12:30 AM IST
ಗಾಂಧೀಜಿ ಮತ್ತು ಅವರ ಅನುಯಾಯಿಗಳನ್ನು ಒಬ್ಬ ಸೇಠ್ಜಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಆಗ ಅನುಯಾಯಿಗಳಿಗೆ ಬೆಳ್ಳಿ ತಟ್ಟೆ ಹಾಗೂ ಗಾಂಧೀಜಿಗೆ ಬಂಗಾರದ ತಟ್ಟೆ ಇಡಲಾಗುತ್ತದೆ. ಸೇಠ್ಜಿ ಗಾಂಧೀಜಿಯವರು ಬಂಗಾರದ ತಟ್ಟೆಯಲ್ಲಿಯೇ ಭೋಜನ ಸ್ವೀಕರಿಸಬೇಕೆಂದು ಒತ್ತಾಯಿಸಿದಾಗ ಅದನ್ನು ನಯವಾಗಿ ನಿರಾಕರಿಸಿದ ಗಾಂಧೀಜಿಯವರು ತಮ್ಮ ಜೋಳಿಗೆಯಿಂದ ಅಲ್ಯೂಮಿನಿಯಂ ತಟ್ಟೆ ತೆಗೆದು ಮುಂದಿಟ್ಟು ಕೊಳ್ಳುತ್ತಾರೆ.
ಅಕ್ಟೋಬರ್ 2 ಮತ್ತು ಜನವರಿ 30, ವರ್ಷದ ಈ ಎರಡು ದಿನಗಳಲ್ಲಿ ಇಡೀ ಭಾರತ ಗಾಂಧೀಜಿಯವರನ್ನು ನೆನಪಿಸಿಕೊಳ್ಳುತ್ತದೆ. ರಾಜಕಾರಣಿಗಳಂತೂ ಇನ್ನಿಲ್ಲದಂತೆ ಗಾಂಧೀಜಿಯವರ ಗುಣಗಾನ ಮಾಡಿ ಗಾಂಧೀಜಿಯವರ ಫೋಟೋಗೆ ಹಾರ ಸಮರ್ಪಣ ಮಾಡಿ ತಾವು ಗಾಂಧಿ ಭಕ್ತರೆಂಬ ಪೋಸು ನೀಡುತ್ತಾರೆ. ಮತ್ತೆ ಗಾಂಧೀಜಿ ಈ ರಾಜಕಾರಣಿಗಳ ಮನಸ್ಸುಗಳಿಂದ ವರ್ಷಪೂರ್ತಿ ಮರೆಯಾಗುತ್ತಾರೆ.
ಜನಸಾಮಾನ್ಯರು ಗಾಂಧೀಜಿಯವರನ್ನು ನೆನಪಿಸಿಕೊಳ್ಳುವುದು ಜೀವನಪೂರ್ತಿ ಗಾಂಧೀಜಿ ನಂಬಿಕೊಂಡು ಬಂದ ಅವರ ಮಾನವೀಯ ಕಾಳಜಿ, ಸರಳತೆ, ಸತ್ಯ ಸಂಧತೆ, ಅಹಿಂಸೆ ಇತ್ಯಾದಿ ಗುಣಗಳಿಂದಾಗಿ ಎಂಬುದು ನಿರ್ವಿವಾದ. ತೀರಾ ಇತ್ತೀಚೆಗೆ ಇಳಕಲ್ ಗ್ರಾಮದ ಕಾಡಗಿ ಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಅಪಘಾತಕ್ಕೀಡಾಗಿ ಮಗುಚಿ ಬಿದ್ದಿತು. ಟ್ಯಾಂಕರ್‌ನಿಂದ ಸೋರುತ್ತಿದ್ದ ತೈಲವನ್ನು ಸಂಗ್ರಹಿಸಲು ಆಸುಪಾಸಿನ ಜನರೆಲ್ಲ ಬಕೇಟು, ಕೊಡಗಳನ್ನು ಹಿಡಿದು ಪೈಪೋಟಿ ನಡೆಸುತ್ತಿದ್ದಾಗ ಪ್ರಾಣಾಂತಿಕ ಸ್ಥಿತಿಯಲ್ಲಿದ್ದ ಟ್ಯಾಂಕರ್ ಚಾಲಕ ರಕ್ಷಣೆಗಾಗಿ ಚೀರಾಟ ಮಾಡುತ್ತಿದ್ದರೂ ಜನರಿಗೆ ಅವನ ಚೀರಾಟ ಕೇಳುವ ವ್ಯವಧಾನವಿರಲಿಲ್ಲ. ಕೊನೆಯ ಪಕ್ಷ ಒಂದು ಗುಟುಕು ನೀರನ್ನೂ ಅವನಿಗೆ ಕುಡಿಯಲು ಯಾರೂ ಕೊಡಲಿಲ್ಲ. ಅಪಘಾತದ ಸುದ್ದಿ ತಿಳಿದು ಪೊಲೀಸರು ಅಲ್ಲಿ ಬರುವಷ್ಟರಲ್ಲಿ ಅವನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಎಣ್ಣೆ ಸಂಗ್ರಹಿಸುವ ಧಾವಂತದಲ್ಲಿದ್ದ ಈ ಜನರ ದುರಾಸೆಯ ಪ್ರವೃತ್ತಿ, ಅವರ ಅಮಾನವೀಯತೆಯ ಒಂದು ಸ್ಪಷ್ಟ ನಿದರ್ಶನ. ಗಾಂಧೀಜಿ ಈಗ ಬದುಕಿದ್ದರೆ ಈ ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು?
ಇನ್ನೊಂದು ಘಟನೆ ಹೀಗಿದೆ. ಶ್ರೀಮಂತರ ಅನುಕೂಲಕ್ಕೆಂದೇ ಮುಂಬಯಿ – ಅಹ್ಮದಾಬಾದ್ ನಡುವೆ ಓಡಿಸಲು ಉದ್ದೇಶಿಸಲಾದ ಬುಲೆಟ್ ಟ್ರೈನ್ ಯೋಜನೆಯಿಂದ ಭೂಮಿ ಕಳೆದುಕೊಂಡು ಸಂಕಷ್ಟಕ್ಕೀಡಾಗಲಿರುವ ಸುಮಾರು ಒಂದು ಸಾವಿರ ರೈತರು ಯೋಜನೆಯ ವಿರುದ್ಧ ಗುಜರಾತ್ ಹೈಕೋರ್ಟಿನಲ್ಲಿ ಅಫಿದವಿತ್ ಸಲ್ಲಿಸಿರುವುದು ವರದಿಯಾಗಿದೆ. ಸುಮಾರು ಒಂದು ಶತಮಾನದಷ್ಟು ಹಿಂದೆ ಉತ್ತರಭಾರತದ ಚಂಪಾರಣ ಪ್ರದೇಶದಲ್ಲಿ ನೀಲಿ ಬೆಳೆಸುವ ರೈತರು ಆಂಗ್ಲರ ದಬ್ಟಾಳಿಕೆಗೆ ಒಳಗಾಗಿ ಬವಣೆ ಪಡುತ್ತಿದ್ದಾಗ ಅವರ ಸಂಕಷ್ಟಕ್ಕೆ ನೆರವಾಗಲು ಗಾಂಧೀಜಿಯವರು ಚಂಪಾರಣಕ್ಕೆ ಹೋಗಿದ್ದರು. ಆದರೆ ಅವರ ನೆರವಿಗೆ ಗಾಂಧೀಜಿ ಧಾವಿಸದಂತೆ ಮಾಡಿ ರೈತರನ್ನು ಬಗ್ಗು ಬಡಿಯುವ ಇರಾದೆಯಿಂದ ಬ್ರಿಟಿಷರು ಗಾಂಧೀಜಿಯನ್ನು ಬಂಧಿಸುವ ಹುನ್ನಾರ ಮಾಡಿದರೂ ಅದರಿಂದ ಮುಂದಾಗಬಹುದಾದ ರಾದ್ಧಾಂತ ಎಣಿಸಿಯೇ ಬಂಧನದ ಯೋಚನೆ ಕೈ ಬಿಡಲಾಯಿತು. ಅದೆಲ್ಲ ಈಗ ಇತಿಹಾಸ. ಆದರೆ ಬುಲೆಟ್ ಟ್ರೈನ್ ಕಾರಣದಿಂದಾಗಿ ಸಂಕಷ್ಟಕ್ಕೀಡಾಗಿರುವ ರೈತರ ವಿಷಯದಲ್ಲಿ ಗಾಂಧೀಜಿ ಎಂಥ ಕ್ರಮ ಕೈಗೊಳ್ಳಬಹುದು ಎಂಬ ಜಿಜ್ಞಾಸೆ ಎಲ್ಲರ ಮನಸ್ಸಿನಲ್ಲಿ ಮೂಡುವುದು ಸಹಜವೇ ಆಗಿದೆ. ತಮ್ಮನ್ನು ಸತ್ಯಾನ್ವೇಷಿ ಎಂದು ಹೇಳಿಕೊಳ್ಳುತ್ತಿದ್ದ ಗಾಂಧೀಜಿಯವರು ಯಾವಾಗಲೂ ಪ್ರಯೋಗಶೀಲರಾಗಿದ್ದರು. ತಾವು ನಂಬಿಕೊಂಡು ಬಂದ ನೈರ್ಮಲ್ಯ, ಅಸ್ಪೃಶ್ಯತಾ ನಿವಾರಣೆ, ಪಾನ ನಿಷೇಧ, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಮತೀಯ ಸಾಮರಸ್ಯ ಇತ್ಯಾದಿ ಅಂಶಗಳು ಭಾರತವನ್ನು ಏಕತೆಯೆಡೆಗೆ ಕೊಂಡು ಹೋಗಲು ಸಹಾಯಕವಾಗುತ್ತವೆ ಎಂಬುದನ್ನು ಅವರು ಪ್ರಬಲವಾಗಿ ನಂಬಿದ್ದರು.
ಸಮಾಜದ ಅಂಚಿನಲ್ಲಿರುವ ಜನರ ಪರವಾಗಿದ್ದ ಗಾಂಧೀಜಿಯವರ ಕಾಳಜಿಯ ಒಂದು ಸಣ್ಣ ಉದಾಹರಣೆ ಇದು. ಗಾಂಧೀಜಿಯವರ ಹುಟ್ಟುಹಬ್ಬದಂದು ಒಮ್ಮೆ ಕಸ್ತೂರ್‌ಬಾ ತುಪ್ಪದ ದೀಪ ಹಚ್ಚಿದಾಗ ಗಾಂಧೀಜಿ ಅದನ್ನು ಆಕ್ಷೇಪಿಸುತ್ತಾರೆ. ಜನರಿಗೆ ಒಂದು ಹೊತ್ತಿನ ಹೊಟ್ಟೆಗಾಗಿ ಎಣ್ಣೆ ಕೂಡಾ ಸಿಗದಿರುವಾಗ ತಮ್ಮ ಸಲುವಾಗಿ ತುಪ್ಪದ ದೀಪ ಏಕೆ ಎಂಬುದು ಅವರ ಅಭಿಮತ. ಸರಳ ಜೀವನದಲ್ಲಿ ಸಾರ್ಥಕತೆ ಇದೆ ಎಂದು ನಂಬಿದ ಅವರು ವಿಲಾಸಿ ಜೀವನವನ್ನು ಇಷ್ಟ ಪಡುತ್ತಿರಲಿಲ್ಲ. ಒಮ್ಮೆ ಇಂದೋರಿನಲ್ಲಿ ನಡೆದ ಒಂದು ಸಾಹಿತ್ಯ ಸಮಾವೇಶಕ್ಕೆ ಗಾಂಧೀಜಿ ಅಧ್ಯಕ್ಷರಾಗಿದ್ದರು. ಗಾಂಧೀಜಿ ಮತ್ತು ಅವರ ಅನುಯಾಯಿಗಳನ್ನು ಅಲ್ಲಿನ ಒಬ್ಬ ಸೇs…ಜಿ ತಮ್ಮಲ್ಲಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಆಗ ಗಾಂಧೀಜಿಯವರ ಅನುಯಾಯಿಗಳಿಗೆ ಬೆಳ್ಳಿ ತಟ್ಟೆ ಹಾಗೂ ಗಾಂಧೀಜಿಗೆ ಬಂಗಾರದ ತಟ್ಟೆ ಇಡಲಾಗುತ್ತದೆ. ಸೇs…ಜಿ ಗಾಂಧೀಜಿಯವರು ಬಂಗಾರದ ತಟ್ಟೆಯಲ್ಲಿಯೇ ಭೋಜನ ಸ್ವೀಕರಿಸಬೇಕೆಂದು ಒತ್ತಾಯಿಸಿದಾಗ ಅದನ್ನು ನಯವಾಗಿ ನಿರಾಕರಿಸಿದ ಗಾಂಧೀಜಿಯವರು ತಮ್ಮ ಜೋಳಿಗೆಯಿಂದ ಅಲ್ಯೂಮಿನಿಯಂ ತಟ್ಟೆ ತೆಗೆದು ಮುಂದಿಟ್ಟು ಕೊಳ್ಳುತ್ತಾರೆ. ಭಾರತದ ಬಹಳಷ್ಟು ಜನರಿಗೆ ಒಂದು ಹೊತ್ತಿನ ಊಟ ಸಿಗದಿರುವಾಗ ತಾನು ಬಂಗಾರದ ತಟ್ಟೆಯಲ್ಲಿ ಉಣ್ಣುವುದು ಅಕ್ಷಮ್ಯ ಎಂದು ಸೇs…ಜಿಗೆ ಅವರು ವಿವರಿಸುತ್ತಾರೆ. ಶ್ರೀಮಂತಿಕೆಯ ಪ್ರದರ್ಶನ ತಪ್ಪು ಎಂದು ಆಗ ಸೇs…ಜಿಗೆ ಅರ್ಥವಾಗುತ್ತದೆ.
ಗಾಂಧೀಜಿಯವರ ದೃಷ್ಟಿಯಲ್ಲಿ ದುಂದುಗಾರಿಕೆ ಒಂದು ಪಿಡುಗು ಎಂಬ ಭಾವನೆಯಿತ್ತು. ಅದು ಭಷ್ಟಾಚಾರದ ಮೂಲ ಎಂದವರು ಭಾವಿಸುತ್ತಿದ್ದರು. ಸರಳ ಜೀವನ ವಿಧಾನವನ್ನು ಜೀವನದಲ್ಲಿ ಒಂದು ವ್ರತದಂತೆ ಆಚರಿಸುತ್ತಿದ್ದರು. ಆಗಾಖಾನ್ ಜೈಲಿನಲ್ಲಿದ್ದಾಗ ಅವರು ಸಹವರ್ತಿ ಮನುಬೆನ್‌ಗೆ ರೇಖಾಗಣಿತವನ್ನು ಹೇಳಿಕೊಡುತ್ತಿದ್ದರು. ಅದಕ್ಕಾಗಿ ಎಕ್ಸರ್‌ಸೈಜ್ ಪುಸ್ತಕದ ಬದಲು ಹಳೆಯ ಕ್ಯಾಲೆಂಡರ್‌ಗಳ ಹಿಂಭಾಗದ ಖಾಲಿ ಜಾಗವನ್ನು ಅವರು ಬಳಸುತ್ತಿದ್ದುದು ಅವರ ಮಿತವ್ಯಯಕ್ಕೆ ಸಾಕ್ಷಿ . ಬೇರೆಯವರಿಗೆ ಪತ್ರ ಬರೆಯಲು ಅವರು ಉಪಯೋಗಿಸುತ್ತಿದ್ದುದು ತನಗೆ ಬಂದ ಪತ್ರಗಳ ಖಾಲಿ ಜಾಗವನ್ನು . ಹೊಸ ಲಕೋಟೆಯ ಬದಲು ಹಳೆಯ ಲಕೋಟೆಯ ವಿಳಾಸದ ಜಾಗದಲ್ಲಿ ಚೂರು ಖಾಲಿ ಕಾಗದ ಅಂಟಿಸಿ ಅಲ್ಲಿ ಪತ್ರ ರವಾನಿಸಬೇಕಾದ ವ್ಯಕ್ತಿಯ ವಿಳಾಸವನ್ನು ಬರೆದು ಪತ್ರವನ್ನು ಅಂಚೆಗೆ ಹಾಕುತ್ತಿದ್ದರು. ಗಾಂಧೀಜಿಯವರು ಅನುಸರಿಸುತ್ತಿದ್ದ ಮಿತವ್ಯಯದ ಮಾರ್ಗ ಸಣ್ಣ ಪುಟ್ಟ ಸಮಾರಂಭಗಳಿಗೂ ಸರಕಾರಿ ಹಣ ಪೋಲು ಮಾಡುವ ರಾಜಕಾರಣಿಗಳಿಗೆ ಮಾದರಿಯಾಗಬೇಕು.
ಒಮ್ಮೆ ದೊಡ್ಡ ಪೇಟವನ್ನು ತಲೆಗೆ ಸುತ್ತಿದ ವ್ಯಕ್ತಿಯೊಬ್ಬರು ಗಾಂಧೀಜಿಯನ್ನು ನೋಡಲು ಬಂದರು. ಗಾಂಧೀಜಿಯವರ ಕಾಲೆಳೆಯುವ ಹುಮ್ಮಸ್ಸಿನಲ್ಲಿ ಆ ವ್ಯಕ್ತಿ ಹೇಳಿದರು.” ನಿಮ್ಮ ಹೆಸರಿನ ಟೋಪಿ ಎಷ್ಟೊಂದು ಪ್ರಸಿದ್ಧವಾಗಿದೆ. ಆದರೆ ನಿಮ್ಮ ತಲೆಯ ಮೇಲೆ ಗಾಂಧಿ ಟೋಪಿ ಇಲ್ಲವಲ್ಲ.’ ಆ ವ್ಯಕ್ತಿಯ ಮಾತಿನಿಂದ ಒಂದಿಷ್ಟೂ ವಿಚಲಿತರಾಗದೆ ಗಾಂಧೀಜಿ ಅದೇ ಧಾಟಿಯಲ್ಲಿ ನಗುತ್ತಾ, “ಅದಕ್ಕೆ ನೀವೇ ಕಾರಣ. ಇಪ್ಪತ್ತು ಜನರ ಟೋಪಿಗಾಗುವಷ್ಟು ಬಟ್ಟೆಯನ್ನು ನಿಮ್ಮ ಪೇಟವೊಂದೇ ತಿಂದು ಹಾಕಿದೆ. ಹಾಗಾಗಿ ಇಪ್ಪತ್ತು ಜನರಿಗೆ ಟೋಪಿ ಇಲ್ಲದಂತಾಗಿದೆ.ಆ ಇಪ್ಪತ್ತು ಜನರಲ್ಲಿ ನಾನೂ ಒಬ್ಬ’ ಎಂದು ಗಾಂಧೀಜಿ ಕಟಕಿಯಾಡಿದಾಗ ವ್ಯಕ್ತಿ ಗಪ್‌ಚುಪ್.
ಅನ್ಯಾಯದ ವಿರುದ್ಧ ಗಾಂಧೀಜಿಯವರು ಬಳಸುತ್ತಿದ್ದುದು ಸತ್ಯಾಗ್ರಹದ ಮಾರ್ಗವನ್ನು. ತಮ್ಮ ಅನುಯಾಯಿಗಳಿಗೆ ಅವರು ಉಪದೇಶಿಸುತ್ತಿದ್ದುದು ಕೂಡಾ ಇದನ್ನೇ. ಸತ್ಯಾಗ್ರಹಿಗಳಿಗೆ ಜೀವನ ನಿರ್ವಹಣೆ ಕಷ್ಟವಾದಾಗ ಜೆಮ್‌ಶೇಟ್‌ಜಿ ಟಾಟಾ ಅವರಿಂದ ದೇಣಿಗೆಯಾಗಿ ಪಡೆದ 25 ಸಾವಿರ ರೂಪಾಯಿಗಳಲ್ಲಿ 1910ರಲ್ಲಿ “ಟಾಲ್‌ಸ್ಟಾಯ್ ಫಾರ್ಮ್ ಹೌಸ್’ ತೆರೆದು ಅಲ್ಲಿ ಸತ್ಯಾಗ್ರಹಿಗಳಿಗೆ ನೈರ್ಮಲ್ಯ, ಶಿಸ್ತು ಸಹಬಾಳ್ವೆ ಅಹಿಂಸೆ ಇತ್ಯಾದಿಗಳ ಕುರಿತಾಗಿ ಪಾಠ ಮಾಡುತ್ತಿದ್ದರು. ಬದುಕಿಗೆ ಪೂರಕವಾಗುವಂತೆ ತಂತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಎಂಬ ಉಪದೇಶದೊಡನೆ ಶೌಚಾಲಯವನ್ನು ತಾನೇ ಸ್ವತ್ಛ ಮಾಡಿ ತೋರಿಸುವ ಮೂಲಕ ಇತರರಿಗೆ ಮಾದರಿ ಹಾಕಿಕೊಟ್ಟರು. ಅಹಿಂಸೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಾ ಗಾಂಧೀಜಿ ಒಂದು ಶಕ್ತಿಯಾಗಿ ಬೆಳೆದದ್ದು ತಮ್ಮಲ್ಲಿ ಅಂತರ್ಗತವಾದ ಆತ್ಮಬಲದಿಂದ. ಇದೇ ಆತ್ಮಬಲ ಯಾವುದೇ ಅನ್ಯಾಯವನ್ನು ಧೈರ್ಯವಾಗಿ ಎದುರಿಸುವ ನೈತಿಕತೆಯನ್ನು ಅವರಲ್ಲಿ ಉಂಟು ಮಾಡಿತ್ತು. ಹಿಟ್ಲರನ ಯುದ್ಧ ಪಿಪಾಸು ಪ್ರವೃತ್ತಿಯನ್ನು ವಿರೋಧಿಸುತ್ತಾ ಒಂದೊಮ್ಮೆ ಹಿಟ್ಲರನಿಗೆ ಬರೆದ ಪತ್ರದಲ್ಲಿ “If you attain success in the war it will not prove that you are right. It will only prove that your power of destruction is greater” ಎಂಬ ಒಕ್ಕಣೆ ಇದಕ್ಕೆ ಸಾಕ್ಷಿಯಾಗಿದೆ. ಗಾಂಧೀಜಿಯವರ ಜೀವನವೇ ಒಂದು ವಿಶ್ವಕೋಶ. ಅದರಲ್ಲಿ ಬಗೆದಷ್ಟೂ ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ಸಮಾಜದಲ್ಲಿ ಆರ್ಥಿಕ ಸಮಾನತೆ ತರುವ ನ್ಯಾಶ ಪದ್ಧತಿ ಇವುಗಳಲ್ಲಿ ಮುಖ್ಯವಾದುದು.
ಕೆ. ಶಾರದಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.