Water; ಬನ್ನಿ , ಜಲಮೂಲಗಳನ್ನು ಸಂರಕ್ಷಿಸೋಣ
ಜೀವಜಲವಿಲ್ಲದ ಕ್ಷಣವನ್ನು ಒಮ್ಮೆ ಯೋಚಿಸುವ! ಆ ಬದುಕು ಎಷ್ಟು ಬರ್ಬರ
Team Udayavani, Jan 2, 2024, 5:33 AM IST
ಜೀವಜಲದ ಸಂರಕ್ಷಣೆಗೆ ಜಲಮೂಲಗಳ ಉಳಿವು ಬಲುಮುಖ್ಯ. ವರ್ಷಗಳು ಉರುಳಿದಂತೆಯೇ ತಾಪಮಾನ ಹೆಚ್ಚಳ, ಹವಾಮಾನ ವೈಪರೀತ್ಯ ಮತ್ತಿತರ ಕಾರಣಗಳಿಂದಾಗಿ ಮಳೆ ಕೊರತೆ ತೀವ್ರವಾಗುತ್ತಿದೆ. ನೈಸರ್ಗಿಕ ಜಲಮೂಲ ಗಳಾದ ಬಾವಿ, ಮದಕ, ಕಲ್ಯಾಣಿ, ಕೆರೆ, ಸರೋವರ, ಹಳ್ಳ- ಕೊಳ್ಳ, ತೊರೆ, ಹೊಳೆ, ನದಿಗಳು ಬರಡಾಗಲಾರಂಭಿಸಿವೆ. ವಿಪರ್ಯಾಸವೆಂಬಂತೆ ಕೆಲವೊಮ್ಮೆ ಏಕಕಾಲದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಸ್ಥಿತಿ ನಿರ್ಮಿಸುತ್ತದೆ. ಈ ಎರಡೂ ಪರಿಸ್ಥಿತಿಗಳಿಗೆ ನಮ್ಮ ಸ್ವಯಂಕೃತ ಅಪರಾಧವೇ ಕಾರಣ.
ಮಳೆ ಕೊರತೆಯಾದರೆ, ಪ್ರವಾಹ ಉಂಟಾದರೆ ಅಪಾರ ಆಸ್ತಿಪಾಸ್ತಿಗೆ ಹಾನಿಯುಂಟಾಗುತ್ತದೆ. ಹಾಗೆಂದು ಪ್ರವಾಹ ಕಾಣಿಸಿಕೊಂಡ ವರ್ಷಗಳ ಬೇಸಗೆ ಋತುವಿ ನಲ್ಲಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ತಪ್ಪದು. ಕಾರಣ ಸುರಿದ ಮಳೆ ನೀರೆಲ್ಲ ಸಮುದ್ರ ಸೇರಿತೇ ಹೊರತು ಭೂಮಿಯಲ್ಲಿ ಇಂಗಲಿಲ್ಲ. ಹೀಗಾಗಿ ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಕಳೆದ ಮಳೆಗಾಲದಲ್ಲಿ ದೇಶದೆಲ್ಲೆಡೆ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಬರಗಾಲ ಪರಿಸ್ಥಿತಿ ತಲೆದೋರಿದೆ. ಈ ಬಾರಿ ಕರಾವಳಿಯಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ಬೇಸಗೆಯಲ್ಲಿ ನೀರಿನ ತೀವ್ರ ಅಭಾವ ಕಾಡುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಇದೇ ವೇಳೆ ಮುಂದಿನ ಮಳೆಗಾಲದ ಅವಧಿಯಲ್ಲೂ ಎಲ್-ನಿನೋ ಬಾಧಿಸಲಿದ್ದು ಮಳೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನುತ್ತದೆ ಹವಾಮಾನ ಇಲಾಖೆಯ ಮುನ್ಸೂಚನೆ. ಹೀಗಾಗಿ ಈಗಿನಿಂದಲೇ ನೀರು ಪೋಲಾಗದಂತೆ ನಿರ್ವಹಿಸಬೇಕು. ದುರ್ಬಳಕೆಗೆ ಕಡಿವಾಣ ಹಾಕ ಬೇಕು. ಇವೆಲ್ಲದಕ್ಕಿಂತ ಮುಖ್ಯವಾಗಿ ನೈಸರ್ಗಿಕ ಜಲ ಮೂಲಗಳ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ನಾವೆಲ್ಲ ಸಂಕಲ್ಪ ತೊಟ್ಟು ಕಾರ್ಯಬದ್ಧರಾಗಬೇಕು.
ವೈಯಕ್ತಿಕ ಹೊಣೆಗಾರಿಕೆಗಳು
ಕುಡಿಯುವ ನೀರಿನ ಸದ್ಬಳಕೆ, ಹಲ್ಲುಜ್ಜುವ ಅಥವಾ ಪಾತ್ರೆ ತೊಳೆಯುವ ಸಂದರ್ಭದಲ್ಲಿ ನೀರನ್ನು ವ್ಯರ್ಥ ಮಾಡದಿರುವುದೂ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಎಚ್ಚರ ವಹಿಸಬೇಕು. ಮೇಲ್ನೋಟಕ್ಕೆ ಇದೊಂದು ಚಿಕ್ಕ ವಿಷಯದಂತೆ ಭಾಸವಾದರೂ ಇಂಥ ಸಣ್ಣ ಪುಟ್ಟ ಸಂಗತಿಗಳೇ ಸಾಕಷ್ಟು ನೀರು ಉಳಿತಾಯ ಮಾಡಬಲ್ಲದು.
ಮನೆ, ಕಚೇರಿ, ಕಟ್ಟಡಗಳ ಮುಂಭಾಗದಲ್ಲಿ ಸಣ್ಣಪುಟ್ಟ ಉದ್ಯಾನಗಳಿಗೆ ಕುಡಿಯುವ ನೀರನ್ನು ಹರಿಸುವುದರ ಬದಲಿಗೆ ಸಾಧ್ಯವಾದಷ್ಟು ಪಾತ್ರೆ ಇತ್ಯಾದಿಗಳನ್ನು ತೊಳೆದ (ಒಮ್ಮೆ ಬಳಸಿದ)ನೀರನ್ನು ಬಳಸುವುದು ಸೂಕ್ತ. ವಾಹನ ತೊಳೆಯುವಾಗಲೂ ಕಡಿಮೆ ನೀರನ್ನೇ ಬಳಸಬೇಕು. ಸ್ನಾನಕ್ಕೂ ಸಹ ಅಗತ್ಯವಿದ್ದಷ್ಟೇ ಸಾಕು.
ಸಾಮೂಹಿಕ ಹೊಣೆಗಾರಿಕೆ
ಜಲಮೂಲಗಳ ಸಂರಕ್ಷಣೆಯಲ್ಲಿ ಸಾಮೂಹಿಕ ಸಹಭಾಗಿತ್ವ, ಸಹಯೋಗ ಹಾಗೂ ಸಹಕಾರ ತೀರಾ ಪ್ರಾಮುಖ್ಯ ವಾದುದು. ನಮ್ಮ ಮನೆಯ ಬಾವಿಯಿಂದ ಹಿಡಿದು ಸುತ್ತಮುತ್ತಲಿನ ಸಾರ್ವಜನಿಕ ಬಾವಿಗಳು, ಕೆರೆ, ಸರೋವರಗಳು, ಕಲ್ಯಾಣಿಗಳು, ಹಳ್ಳ, ತೊರೆ, ಹೊಳೆ ಮತ್ತು ನದಿಗಳ ನೈಸರ್ಗಿಕತೆಯನ್ನು ಉಳಿಸುವುದು ನಮ್ಮೆಲ್ಲರ ಹೊಣೆಗಾರಿಕೆ.
ಇಂದು ಬಾವಿ, ಕೆರೆ, ಸರೋವರ, ಮದಗ, ಕಲ್ಯಾಣಿಗಳು ವಿನಾಶದ ಭೀತಿಯನ್ನು ಎದುರಿಸುತ್ತಿವೆ. ಇನ್ನು ಖಾಸಗಿ ಜಲಮೂಲಗಳೂ ನಶಿಸುತ್ತಿವೆ. ಅಂತರ್ಜಲ ಮಟ್ಟವೂ ಪ್ರಪಾತಕ್ಕೆ ಕುಸಿಯುತ್ತಿದೆ. ಈ ಎಲ್ಲ ಪ್ರಾಕೃತಿಕ ಜಲಮೂಲ ಗಳು ಮಳೆ ನೀರನ್ನು ಹಿಡಿದಿಟ್ಟುಕೊಂಡು ಒಂದಿಷ್ಟು ಪ್ರಮಾಣ ವನ್ನು ಭೂಮಿಗೆ ಮರು ಉಣಿಸುತ್ತಿದ್ದವು. ಈಗ ಅವೆಲ್ಲವೂ ಕೈಗಾರಿಕ ತಾಣಗಳಾಗಿಯೋ, ಬಡಾವಣೆ ಗಳಾಗಿಯೋ ಪರಿವರ್ತನೆಯಾಗಿವೆ. ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿದರೂ ನೀರಿನ ಇಂಗುವಿಕೆ ಯಾಗಲೀ, ಹಿಡಿದಿಟ್ಟುಕೊಳ್ಳುವುದಾಗಲೀ ನಮ್ಮ ಆದ್ಯತೆ ಆಗುತ್ತಿಲ್ಲ. ಹೀಗಾಗಿ ಒಂದೆರಡು ತಾಸು ಮಳೆ ಸುರಿದರೂ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಇದಕ್ಕೆಲ್ಲ ಮಿತಿಮೀರಿದ ನಮ್ಮ ಹಸ್ತಕ್ಷೇಪವೇ ಕಾರಣ.
ನದಿಗಳ ಮೇಲಿನ ದೌರ್ಜನ್ಯ
ನದಿಗಳ ಮೇಲಂತೂ ನಮ್ಮ ಅವಲಂಬನೆ ಮಿತಿ ಮೀರಿದೆ. ಹಾಗೆಯೇ ದೌರ್ಜನ್ಯವೂ ಸಹ. ನಮಗೆ ನದಿಗಳು ತ್ಯಾಜ್ಯಗಳನ್ನು ಎಸೆಯುವ ಗುಂಡಿ (ಡಂಪಿಂಗ್ ಯಾರ್ಡ್)ಗಳಾಗಿವೆ. ಇದರ ಪರಿಣಾಮ ನದಿ ಪಾತ್ರದಲ್ಲಿ ಜನರ ಜೀವನ ದುಸ್ತರವಾಗಿದ್ದರೆ ಜಲಚರಗಳು ಅಳಿವಿನಂಚಿಗೆ ತಲುಪಿವೆ.ಅಲ್ಲದೇ ನದಿ ಪಾತ್ರಗಳನ್ನೂ ಅತಿಕ್ರಮಿಸಿ ಕೊಳ್ಳುತ್ತಿರುವ ಕಾರಣದಿಂದ ನದಿಗಳು ತಮ್ಮ ಹರಿವನ್ನೇ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಅಕ್ರಮ ಮರಳುಗಾರಿಕೆಯ ಪರಿಣಾಮ ನದಿಗಳ ಒಡಲು ಬರಿದಾಗಿ ಕೆಲವೆಡೆ ಅಮಾಯಕರ ಪ್ರಾಣಕ್ಕೇ ಸಂಚಕಾರ ಒದಗುತ್ತಿದೆ. ದಶಕಗಳ ಹಿಂದೆ ನದಿಯ ಇಕ್ಕೆಲಗಳಲ್ಲಿ ಹಸುರುನಿಂದ ಕಂಗೊಳಿಸುತ್ತಿದ್ದ ಭತ್ತದ ಗದ್ದೆಗಳ ಸ್ಥಾನವನ್ನು ಒಂದಿಷ್ಟು ವಾಣಿಜ್ಯ ಬೆಳೆಗಳನ್ನು ಆಕ್ರಮಿಸಿವೆ. ಇದಕ್ಕೂ ಬೇಸಗೆಯಲ್ಲಿ ನೀರು ಸಾಕಾಗುತ್ತಿಲ್ಲ. ಉಳಿದ ಪ್ರದೇಶಗಳು ಬೃಹತ್ ಕಟ್ಟಡಗಳು, ವಿವಿಧ ತೆರನಾದ ಕೈಗಾರಿಕೆಗಳ ಪಾಲಾಗಿವೆ. ಇವೆಲ್ಲದರ ತ್ಯಾಜ್ಯವೂ ನದಿಗೆ ಸೇರಿ ನೀರನ್ನು ಮಲಿನಗೊಳಿಸುತ್ತಿವೆ.
ಕುಗ್ಗಿದ ಕೃಷಿ ಚಟುವಟಿಕೆಗಳು
ಕರಾವಳಿಯಲ್ಲಿ ಬೇಸಾಯ ಕಡಿಮೆಯಾದ ಪರಿಣಾಮ ನದಿಯಲ್ಲಿ ನೀರಿನ ಹರಿವೂ ಕಡಿಮೆ ಆಗುತ್ತಿದೆ. ತತ್ಪರಿ ಣಾಮವೇ ಬೇಸಗೆ ಅವಧಿಯಲ್ಲಿ ನದಿಗಳು ಬತ್ತುತ್ತಿರುವುದು. ಅತಿಯಾದ ಲಾಭಕ್ಕಾಗಿ ನಾವೂ ಸಾವಯವ ಕೃಷಿಯಿಂದ ವಿಮುಖರಾಗಿ ರಾಸಾಯನಿಕ ಕೃಷಿಯತ್ತ ವಾಲಿದ್ದೇವೆ. ಇದರ ಪರಿಣಾಮವೂ ನದಿಗಳ ಮೇಲಾಗುತ್ತಿದ್ದು, ಮಣ್ಣನ್ನು ಬರಡಾಗಿಸುತ್ತಿದೆ. ಇದು ನೀರಿನ ಇಂಗುವಿಕೆಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪರಿಸರದ ಮೇಲಣ ಹಸುರು ಹೊದಿಕೆಯನ್ನೆ ಬಲಿಗೊಡುತ್ತಿದ್ದೇವೆ. ಒಂದು ಕಾಲದಲ್ಲಿ ನದಿಗಳ ಇಕ್ಕೆಲಗಳಲ್ಲಿ ಬೃಹತ್ ಮರಗಳು ತುಂಬಿದ್ದರೆ ಈಗ ಅಲ್ಲೆಲ್ಲ ಕಟ್ಟಡಗಳು, ರಸ್ತೆಗಳು, ರೆಸಾರ್ಟ್ ಗಳು ಕಾಣಸಿಗುತ್ತವೆ. ಮರಗಳ ಮಾರಣಹೋಮದ ನೇರ ಪರಿಣಾಮ ಮಳೆ ಕೊರತೆ ಹಾಗೂ ನದಿಗಳ ಒಳ ಹರಿವು ಕುಸಿಯಲು ಕಾರಣವಾಗುತ್ತಿರುವುದು ಸುಳ್ಳಲ್ಲ.
ಜಲಮೂಲಗಳ ಸಂರಕ್ಷಣೆ ಹೇಗೆ?
ನೈಸರ್ಗಿಕ ಜಲಮೂಲಗಳನ್ನು ಪುನರುಜ್ಜೀವನ ಅಥವಾ ಪುನಶ್ಚೇತನಗೊಳಿಸುವ ಕಾರ್ಯವನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕಿದೆ. ನಮ್ಮ ಬಾವಿ, ಕೆರೆಗಳಲ್ಲಿನ ಹೂಳನ್ನು ತೆಗೆದು, ಬೇರೆ ಯಾವುದೇ ತೆರನಾದ ತ್ಯಾಜ್ಯ ಸೇರದಂತೆ ಎಚ್ಚರ ವಹಿಸಬೇಕು. ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಬಾವಿ, ಕೆರೆಗಳಿಗೆ ಬಿಡುವ ಮೂಲಕ ಮತ್ತು ಇಂಗುಗುಂಡಿಗಳ ಮೂಲಕ ಭುವಿಗೆ ಮರು ಉಣಿಸಬೇಕು. ಮಳೆಕೊಯ್ಲು ಅನುಷ್ಠಾನದ ಮೂಲಕ ನೀರು ಉಳಿತಾಯ ಮಾಡಬೇಕು. ಇದರಿಂದ ನಮ್ಮ ಬಾವಿ, ಕೆರೆಗಳು, ಸುತ್ತಲಿನ ಜಲಮೂಲಗಳ ಬಲ ವರ್ಧನೆ ಯಾಗಿ, ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ.
ಪುನರುಜ್ಜೀವನ ಮತ್ತು ವ್ಯವಸ್ಥಿತ ನಿರ್ವಹಣೆ
ಕೆರೆ, ಸರೋವರ, ಮದಗ, ಕಲ್ಯಾಣಿ, ನದಿಗಳ ಪುನರು ಜ್ಜೀವನಕ್ಕಾಗಿ ಕ್ರಿಯಾಯೋಜನೆ ರೂಪಿಸಿ, ಸಾಮೂಹಿಕ ಭಾಗೀದಾರಿಕೆಯಲ್ಲಿ ಅನುಷ್ಠಾನಗೊಳಿಸಬೇಕು. ಈ ದಿಸೆ ಯಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದು. ಅಷ್ಟು ಮಾತ್ರವಲ್ಲದೆ ಹೀಗೆ ಪುನರುಜ್ಜೀವನಗೊಳಿಸಲಾದ ಜಲಮೂಲಗಳ ವ್ಯವಸ್ಥಿತ ನಿರ್ವಹಣೆಗೂ ಹೆಚ್ಚು ಗಮನ ನೀಡಬೇಕು.
ನೈಸರ್ಗಿಕ ಜಲಮೂಲಗಳ ಜಾಗದ ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ನದಿಮೂಲಗಳಿಗೆ ತ್ಯಾಜ್ಯಗಳನ್ನು ಎಸೆಯುವುದು, ವಾಹನಗಳನ್ನು ತೊಳೆಯುವುದು, ಸಂಸ್ಕರಿಸದ ಕೈಗಾರಿಕ ತ್ಯಾಜ್ಯಗಳನ್ನು ಬಿಡುವುದು, ಅಕ್ರಮ ಮರಳುಗಾರಿಕೆ, ರಾಸಾಯನಿಕಗಳನ್ನು ಬಳಸಿ ಮೀನುಗಾರಿಕೆ ನಡೆಸುವುದು, ಜಲಚರಗಳ ನಾಶಕ್ಕೆ ಕಾರಣವಾಗುವ ಎಲ್ಲ ಕೃತ್ಯಗಳಿಗೂ ನಿಷೇಧ, ಜಲಮೂಲಗಳ ಸುತ್ತಲಿನ ಗಿಡಮರಗಳ ಸಂರಕ್ಷಣೆ, ಪ್ರಾಣಿ-ಪಕ್ಷಿಗಳ ಆವಾಸಸ್ಥಾನಗಳ ರಕ್ಷಣೆಯಂತಹ ಕ್ರಮಗಳನ್ನು ಅನುಸರಿಸಬೇಕು. ಹಾಗಾದರೆ ಜಲಮೂಲಗಳನ್ನು ರಕ್ಷಿಸಲು ಸಾಧ್ಯ. ಈ ಕಾರ್ಯಕ್ಕೆ ಸರಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ.
ಇಚ್ಛಾಶಕ್ತಿ, ಬದ್ಧತೆ ಮುಖ್ಯ
ನೈಸರ್ಗಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸಿ, ಸಂರಕ್ಷಿಸಿದ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಅದೆಷ್ಟೋ ಮಂದಿ ಜಲಸಾಧಕರು ನಮ್ಮೊಡನಿದ್ದಾರೆ. “ನಮಾಮಿ ಗಂಗೇ’ ಯೋಜನೆಯ ಪ್ರಯತ್ನ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರಗಳು, ಸೇವಾ ಸಂಸ್ಥೆಗಳು ಮತ್ತು ನಾಗರಿಕರಿಗೆ ಪ್ರೇರಣಾ ದಾಯಕ. ಜಲಮೂಲಗಳ ಬಗೆಗೆ ಒಂದಿಷ್ಟು ಆಸಕ್ತಿ, ಜಲಸಂರಕ್ಷಣೆ ಬಗ್ಗೆ ಇಚ್ಛಾಶಕ್ತಿ ಹಾಗೂ ಅದನ್ನು ಕಾರ್ಯರೂಪ ಗೊಳಿಸುವ ಬದ್ಧತೆ ತೋರಿದರೆ ಯಶಸ್ಸು ಖಚಿತ.
ಮುಂದಿನ ದಿನಗಳಲ್ಲಿ ಮತ್ತಷ್ಟು ಬರದ ದಿನಗಳು ಖಚಿತ ಎನ್ನಿಸುತ್ತಿರುವ ಈ ಸಂದರ್ಭದಲ್ಲಿ ಜಲ ಸಂರಕ್ಷಣೆಯ ಸಂಕಲ್ಪ ನಮ್ಮೆಲ್ಲರದಾಗಲಿ. ಜೀವಜಲವಿಲ್ಲದ ಕ್ಷಣವನ್ನು ಒಮ್ಮೆ ಯೋಚಿಸುವ! ಆ ಬದುಕು ಎಷ್ಟು ಬರ್ಬರವಾಗಿ ಕಾಣಿಸುತ್ತದೆ ಅಲ್ಲವೇ? ಇಂತಹ ಸನ್ನಿವೇಶ ಸೃಷ್ಟಿಯಾಗ ದಿರಲು ಈಗಿನಿಂದಲೇ ನಮ್ಮ ಕೈಲಾದಷ್ಟು, ಸಾಧ್ಯವಾದ ರೀತಿಯಲ್ಲಿ ಜಲಮೂಲಗಳ ಸಂರಕ್ಷಣೆಗೆ ಮುಂದಾಗಬೇಕು. ನೈಸರ್ಗಿಕ ಜಲಮೂಲಗಳ ಸಂರಕ್ಷಣೆಗೆ ಮುಂದಾಗೋಣ. ನೀರನ್ನು ಉಳಿಸೋಣ, ಬದುಕನ್ನು ಉಳಿಸೋಣ. ಇದುವೇ ನಮ್ಮೆಲ್ಲರ ಹೊಸವರ್ಷದ ಧ್ಯೇಯ, ಸಂಕಲ್ಪವಾಗಲಿ.
ಹರೀಶ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.