ವಾಮನನಂತೆ ಹುಟ್ಟಿದ ರಜೆ ಭಸ್ಮಾಸುರನಾಗುತ್ತಿದೆ!
Team Udayavani, Sep 27, 2018, 12:30 AM IST
ಈಗ ರಜೆ ಸ್ಥಿತಿ ಹೇಗಾಗಿದೆಯೆಂದರೆ ಕೆಲವಡೆ ವರ್ಷದಲ್ಲಿ ಅರ್ಧಾಂಶ ಅಥವಾ ಗರಿಷ್ಠವೆಂದರೆ ಶೇ.60 ದಿನ ಕೆಲಸ ನಡೆಯುತ್ತಿದೆ. ಇದು ವಿಶೇಷವಾಗಿ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ.
ರವಿವಾರ ರಜೆ ಸೌಲಭ್ಯವನ್ನು ಪಡೆಯುತ್ತಿರುವ ವ್ಯಕ್ತಿಗಳಲ್ಲಿ ತುರ್ತು ಸಂದರ್ಭದಲ್ಲಿಯಾದರೂ ರವಿವಾರ ಕೆಲಸಕ್ಕೆ ಬರಬೇಕು ಎಂದು ವಿನಂತಿ ಮಾಡಿದರೆ ಪ್ರತಿಕ್ರಿಯೆ ಹೇಗಿರ ಬಹುದೆಂದು ಒಂದು ಕ್ಷಣ ಚಿಂತನೆ ಮಾಡಿ. ಇಷ್ಟಾಗಿಯೂ ರವಿವಾರದ ರಜೆಗೆ ಏನಾದರೂ ಅಧಿಕೃತ ಆದೇಶವಿದೆಯೆ
ಎಂದು ಕೇಳಿದರೆ ಅದೂ ಇಲ್ಲ. ಜಮ್ಮುವಿನ ಆರ್‌ಟಿಐ ಕಾರ್ಯಕರ್ತ ರಮಣ್ ಶರ್ಮ 2012ರಲ್ಲಿ ರವಿವಾರದ ರಜೆಗೆ ಅಧಿಕೃತ ಆದೇಶವೇನಾದರೂ ಇದೆಯೆ ಎಂದು ಪ್ರಧಾನಿ ಕಚೇರಿಯನ್ನು ಕೇಳಿದಾಗ “ಲಭ್ಯ ದಾಖಲೆಗಳ ಪ್ರಕಾರ ರವಿವಾರ ರಜೆ ಎಂದು ಘೋಷಿಸಿದ ಮಾಹಿತಿ ಇಲ್ಲ’ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಉತ್ತರಿಸಿತು. ಆದರೆ ನೌಕರರಲ್ಲಿ ದಕ್ಷತೆ ಹೆಚ್ಚಿಸಲು ಕೇಂದ್ರ ಸರಕಾರದ ನಾಗರಿಕ ಆಡಳಿತ ಕಚೇರಿಗಳಲ್ಲಿ ವಾರದಲ್ಲಿ ಐದು ದಿನಗಳ ಕೆಲಸವನ್ನು 1985 ಜೂನ್ 3ರಿಂದ ಜಾರಿಗೊಳಿಸಲಾಗಿದೆ ಎಂದೂ ಇಲಾಖೆ ತಿಳಿಸಿತು. ಇಂತಹ ಸರಕಾರಿ ಕಚೇರಿಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ವಾರದಲ್ಲಿ ಐದು ದಿನ ಕೆಲಸ ನಡೆಯುತ್ತಿದೆ. ಈ ಆದೇಶವೂ ರವಿವಾರವನ್ನು ರಜೆದಿನವೆಂದು ಘೋಷಿಸಿಲ್ಲ.
1843ರಲ್ಲಿ ಬ್ರಿಟಿಷ್ ಸರಕಾರ ರವಿವಾರವನ್ನು ರಜಾ ದಿನವೆಂದು ಘೋಷಿಸಿತು. ಕ್ರೈಸ್ತ ಧರ್ಮದವರಿಗೆ ರವಿವಾರ ಶ್ರೇಷ್ಠವೆಂಬ ಕಾರಣ ಇದರ ಹಿಂದಿತ್ತು. ಬ್ರಿಟಿಷರು ಎಲ್ಲೆಲ್ಲಿ ಆಡಳಿತ ನಡೆಸಿದ್ದರೋ ಅಲ್ಲೆಲ್ಲ ರವಿವಾರದ ರಜೆಯನ್ನು ಜಾರಿಗೆ ತಂದರು. ಇದನ್ನು ಸ್ವತಂತ್ರ ಭಾರತವೂ ಸೇರಿದಂತೆ ವಸಾಹತು ದೇಶಗಳಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಇದು ಮೊದಲು ಜಾರಿಗೊಂಡದ್ದು ಮುಂಬೈಯಲ್ಲಿ. ಈ ಕಾನೂನಿನಿಂದ ತಿಂಗಳಲ್ಲಿ ನಾಲ್ಕು ದಿನಗಳ ವೇತನ ಕಡಿತಗೊಳ್ಳುವ ಭೀತಿ ಎದುರಾದಾಗ ಕೊನೆಗೆ ಅರ್ಧ ದಿನದ ವೇತನ ಕೊಡುವುದೆಂಬ ನಿರ್ಧಾರಕ್ಕೆ ಬರಲಾಯಿತು.
ರಜೆ- ಧಾರ್ಮಿಕ ಕಣ್ಣು
ಬ್ರಿಟಿಷರ ಅವಧಿಯಲ್ಲಿ ಕ್ರೈಸ್ತ ಧರ್ಮದ ಪ್ರಭಾವದಿಂದ ರವಿವಾರದ ರಜೆಯನ್ನು ಜಾರಿಗೆ ತರಲಾಗಿದ್ದರೆ ಮೊಘಲ್ ಆಡಳಿತ ಅವಧಿಯಲ್ಲಿ (1530ರಿಂದ1707) ಶುಕ್ರವಾರ ರಜೆ ಇತ್ತು. ಈಗಲೂ ಮುಸ್ಲಿಂ ರಾಷ್ಟ್ರಗಳಲ್ಲಿ ಶುಕ್ರವಾರ ವಾರದ ರಜೆ ಇದೆ.
ಲೋಖಂಡೆ ಹೋರಾಟ
ಭಾರತದಲ್ಲಿ ವಾರದ ರಜೆ ಘೋಷಣೆಯ ಹಿಂದೆ ನಾರಾಯಣ ಮೇಘಜೀ ಲೋಖಂಡೆಯವರ (1848-1897) ಕೊಡುಗೆ ಇದೆ. ಇವರು ಕಾರ್ಮಿಕ ಚಳವಳಿಯ ಪಿತಾಮಹ ಎಂದು ಬಣ್ಣಿಸಲಾಗುತ್ತಿದೆ. ಇವರ ಕೊಡುಗೆಗಾಗಿ 2005ರಲ್ಲಿ ಭಾರತ ಸರಕಾರ ಅಂಚೆ ಚೀಟಿಯನ್ನು ಹೊರತಂದಿದೆ. 1880ರಲ್ಲಿ “ದೀನಬಂಧು’ ವಾರಪತ್ರಿಕೆಯ ಸಂಪಾದಕರಾಗಿ ಕಾರ್ಮಿಕರ ಸಂಕಷ್ಟಗಳಿಗೆ ಹೋರಾಡಿದ ಲೋಖಂಡೆಯವರ ಸಹಕಾರದಿಂದ ಜ್ಯೋತಿರಾವ್ ಪುಲೆಯವರು ಪ್ರಥಮ ಭಾರತೀಯ ಕಾರ್ಮಿಕರ ಸಂಘಟನೆ ಯಾದ “ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಶನ್’ ಸ್ಥಾಪಿಸಿದರು. ಮಿಲ್ ಕಾರ್ಮಿಕರ ಪರವಾಗಿ ನಡೆಸಿದ ಹೋರಾಟದಲ್ಲಿ ದೊರಕಿದ ಮುಖ್ಯ ಯಶಸ್ಸಿನಲ್ಲಿ ರವಿವಾರದ ವಾರದ ರಜೆ ಪ್ರಮುಖವಾದುದು. ಮುಂಬೈ ಥಾಣೆ ಬಳಿ ಜನಿಸಿದ ಲೋಖಂಡೆಯವರು ಶೈಕ್ಷಣಿಕ, ಸಾಮಾಜಿಕ ಹೋರಾಟಗಾರರಾಗಿಯೂ ಪ್ರಸಿದ್ಧರು. ಲೋಖಂಡೆಯವರು ಶ್ರಮಿಕ ವರ್ಗಕ್ಕೆ ಆ ಕಾಲದಲ್ಲಿ ಆಡಳಿತಗಾರರಿಂದ ಆಗುತ್ತಿದ್ದ ಶೋಷಣೆ ವಿರುದ್ಧ ಹೋರಾಡಿ ವಾರದ ರಜೆಯನ್ನು ಮಂಜೂರಾತಿ ಮಾಡಿಸಿಕೊಂಡದ್ದನ್ನು ಇಂದಿನ ಸ್ಥಿತಿಯೊಂದಿಗೆ ಹೋಲಿಸಿ ನೋಡಬೇಕಾಗಿದೆ.
ರಾಜ್ಯ ಸರಕಾರದ ರಜೆ
ಈಗ ರಾಜ್ಯ ಸರಕಾರಿ ನೌಕರರಿಗೆ ಒಂದು ತಿಂಗಳು ಸಂಪಾದಿತ ರಜೆ (ಅರ್ನ್ಡ್ ಲೀವ್- ಇಎಲ್), 15 ದಿನ ಸಾಂದರ್ಭಿಕ ರಜೆ (ಕ್ಯಾಜುವಲ್ ಲೀವ್- ಸಿಎಲ್), ಎರಡು ನಿರ್ಬಂಧಿತ/ಪರಿಮಿತ ರಜೆ (ರಿಸ್ಟ್ರಿಕ್ಟೆಡ್ ಹಾಲಿಡೇಸ್- ಆರ್‌ಎಚ್), 20 ಅರ್ಧ ಪಾವತಿ ರಜೆ (ಹಾಫ್ ಪೇ ಲೀವ್=ಎಚ್‌ಪಿಎಲ್- 10 ದಿನದ ರಜೆ. ಅನಾರೋಗ್ಯ ಇತ್ಯಾದಿ ಸಂದರ್ಭ ತೆಗೆಯುವ ರಜೆ) ಇದೆ. ಇದಲ್ಲದೆ ರಾಜ್ಯ ಸರಕಾರ 24 ಸಾರ್ವತ್ರಿಕ ರಜೆಗಳನ್ನು ಘೋಷಿಸಿದೆ. ಇದರಲ್ಲಿ ಕೆಲವು ದಿನ ರವಿವಾರ ಬರುವ ಸಾಧ್ಯತೆ ಇದೆ. ಆರ್‌ಎಚ್ ಸಾರ್ವತ್ರಿಕ ಅಲ್ಲ. ನೌಕರರು ತೆಗೆಯಬಹುದಾದ ಈ ರಜೆಗಳಲ್ಲಿ 17 ದಿನಗಳಲ್ಲಿ ಆಯ್ಕೆ ಮಾಡ ಬಹುದಾಗಿದೆ. ಇದಲ್ಲದೆ ವರ್ಷದಲ್ಲಿ 52 ರವಿವಾರದ ರಜೆ, ಎರಡನೆಯ ಶನಿವಾರದ ಒಟ್ಟು 12 ರಜೆ ಬೇರೆ.
ಬ್ಯಾಂಕ್‌ಗಳಿಗೆ ರಜೆ
ಬ್ಯಾಂಕ್‌ನವರಿಗೆ ಹಕ್ಕಿನ ರಜೆ (ಪ್ರಿವಿಲೆಜ್ ಲೀವ್- ಪಿಎಲ್) 33 ದಿನ, ಸಿಎಲ್ 12, ಒಟ್ಟು ಸೇವೆಯಲ್ಲಿ ಏಳು ತಿಂಗಳು ಸಿಕ್ ಲೀವ್‌ಗಳಿವೆ. ರವಿವಾರ ಹೊರತುಪಡಿಸಿ ಎರಡನೆ, ನಾಲ್ಕನೆಯ ಶನಿವಾರ ಪೂರ್ತಿ ರಜೆಯಿಂದಾಗಿ ವರ್ಷದಲ್ಲಿ 26 ರಜೆ ಇದೆ. ಕೇಂದ್ರ ಸರಕಾರಿ ಆಡಳಿತಾತ್ಮಕ ಕಚೇರಿ ನೌಕರರಿಗೆ, ಜನರಲ್ ಇನ್ಶೂರೆನ್ಸ್ ಕಂಪೆನಿಗಳಿಗೆ ಶನಿವಾರ ಪೂರ್ತಿ ರಜೆ ಇದ್ದು ಇವರಿಗೆ ರವಿವಾರ, ಶನಿವಾರದ ರಜೆಗಳೇ ವರ್ಷದಲ್ಲಿ 104 ರಜೆಗಳು ಸಿಗುತ್ತವೆ. ಅಂಚೆ ಇಲಾಖೆ ನೌಕರರಿಗೆ 30 ಇಎಲ್, 8 ಸಿಎಲ್ ರಜೆ, ಎರಡು ಆರ್‌ಎಚ್, 20 ವೈದ್ಯಕೀಯ ರಜೆಗಳು, ಎಲ್‌ಐಸಿಯವರಿಗೆ 30 ದಿನ ಪಿಎಲ್, 15 ಸಿಎಲ್, 365 ದಿನ ಸಿಕ್ ಲೀವ್ ಒಟ್ಟು ಸೇವಾವಧಿಯಲ್ಲಿ ಇವೆ. ಎಲ್‌ಐಸಿಯವರಿಗೆ ವಾರದಲ್ಲಿ ಐದು ದಿನಗಳ ಕೆಲಸದ ಪ್ರಸ್ತಾವ ವಿತ್ತ ಸಚಿವಾಲಯದಲ್ಲಿದೆ.
ಶಾಲಾ ಕಾಲೇಜುಗಳ ರಜೆ
ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ 30 ಇಎಲ್ ರಜೆ, 20 ಅರ್ಧ ಎಚ್‌ಪಿಎಲ್ (10 ದಿನ) ಇದೆ. ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರಿಗೆ ಅಕ್ಟೋಬರ್‌ನಲ್ಲಿ 20 ದಿನ, ಏಪ್ರಿಲ್, ಮೇಯಲ್ಲಿ 50 ದಿನಗಳ ರಜೆಯಲ್ಲಿ ಶಾಲೆಗೆ ಬರಬೇಕೆಂದಿಲ್ಲ. ಈ ರಜೆ ಅವಧಿಯಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕೇತರರು ಕಚೇರಿಗೆ ಬರಬೇಕು. ಮಿಕ್ಕಂತೆ ಇವರೆಲ್ಲರಿಗೂ 15 ಸಿಎಲ್, 10 ಇಎಲ್, 2 ಆರ್‌ಎಚ್, ರವಿವಾರದ ರಜೆ, ಶನಿವಾರ ಅರ್ಧ ದಿನ ರಜೆ ಇದೆ. ಪ.ಪೂ.ಕಾಲೇಜುಗಳಿಗೆ 10 ಇಎಲ್, 15 ಸಿಎಲ್, 2 ಆರ್‌ಎಚ್, ಅಕ್ಟೋಬರ್‌ನಲ್ಲಿ 20 ದಿನ, ಏಪ್ರಿಲ್ ಮೇಯಲ್ಲಿ ಪರೀಕ್ಷೆ, ಮೌಲ್ಯಮಾಪನ ಹೊರತುಪಡಿಸಿ 40 ದಿನ, 24 ಸಾರ್ವತ್ರಿಕ ರಜೆ, 52 ರವಿವಾರ, 26 ಶನಿವಾರದ ಅರ್ಧ ದಿನ ರಜೆಗಳಿವೆ. ಪದವಿ ಕಾಲೇಜುಗಳಿಗೆ ಅ. 20ರಿಂದ ಡಿ. 15ರವರೆಗೆ 55 ದಿನ, ಎಪ್ರಿಲ್ ಮೇಯಲ್ಲಿ 60 ದಿನ, ಸಿಎಲ್ 15 ದಿನ, ಆರ್‌ಎಚ್ 2, ಸಾರ್ವತ್ರಿಕ ರಜೆ 24 ಇದೆ. ವಿ.ವಿ. ಮತ್ತು ಸ್ನಾತಕೋತ್ತರ ವಿಭಾಗಕ್ಕೆ ಡಿ. 17ರಿಂದ ಜ. 16ರವರೆಗೆ 30 ದಿನ, ಮೇ, ಜೂನ್‌ನಲ್ಲಿ 60 ದಿನ, ಸಿಎಲ್ 15, ಆರ್‌ಎಚ್ 2, ಸಾರ್ವತ್ರಿಕ ರಜೆ 24 ಇವೆ. ಪದವಿ, ವಿ.ವಿ., ಸ್ನಾತಕೋತ್ತರ ಶಿಕ್ಷಕರಿಗೆ ಈ ರಜೆ ಅವಧಿಯಲ್ಲೇ ಮೌಲ್ಯಮಾಪನ, ಪರೀಕ್ಷಾ ಕೆಲಸಗಳಿರುತ್ತವೆ. ಪರೀಕ್ಷಾ ಕೆಲಸಗಳು 6ರಿಂದ 8 ದಿನಗಳಿದ್ದರೆ, ಮೌಲ್ಯಮಾಪನ ಒಂದೊಂದು ವಿಷಯಕ್ಕೆ ಒಂದೊಂದು ರೀತಿ ಇರುತ್ತದೆ.
ಉದಾಹರಣೆಗೆ ವಾಣಿಜ್ಯ ವಿಷಯಕ್ಕೆ 20-25 ದಿನಗಳಿದ್ದರೆ, ವಿಜ್ಞಾನ, ಭಾಷೆ, ಕಲಾ ವಿಭಾಗಗಳಿಗೆ ಸುಮಾರು ಹತ್ತು ದಿನ ಗಳಿರುತ್ತದೆ. ಮೌಲ್ಯಮಾಪನದ ಈ ವಿಶೇಷ ಕರ್ತವ್ಯಕ್ಕೆ ದಿನಕ್ಕೆ 750 ರೂ. ಭತ್ತೆ ಸಿಗುತ್ತದೆ, ಮೆನೇಜೆಟ್ ಸಿಬ್ಬಂದಿಯಾಗಿದ್ದರೆ ಈ ಭತ್ತೆಯಲ್ಲದೆ ಒಂದು ಉತ್ತರ ಪತ್ರಿಕೆಗೆ 20 ರೂ. ಹೆಚ್ಚುವರಿಯಾಗಿ ಸಿಗುತ್ತದೆ. ಪ್ರಾಂಶುಪಾಲರು, ಶಿಕ್ಷಕೇತರ ಸಿಬ್ಬಂದಿಗಳಿಗೆ ಸುದೀರ್ಘ ರಜೆ ಇರುವುದಿಲ್ಲ. ಇದರ ಬದಲು ಇಎಲ್ ಇರುತ್ತದೆ. ಭುಗಿಲೆದ್ದ ಸಂದರ್ಭ ಒಂದಿಷ್ಟು ರಜೆಗಳು ಸಿಗುವುದಿದ್ದರೂ ಆ ದಿನಗಳನ್ನು ಮತ್ತೆ ಹೊಂದಾಣಿಕೆ ಮಾಡಬೇಕು. ಸೆಮಿಸ್ಟರ್ ಪದ್ಧತಿ ಬಂದ ಬಳಿಕ ರಜೆಗಳ ಸಂಖ್ಯೆ ಹೆಚ್ಚಾಗಿದೆ. ಒಂದು ಸೆಮಿಸ್ಟರ್‌ನಲ್ಲಿ ನಾಲ್ಕು ತಿಂಗಳಂತೆ ಒಟ್ಟು ಎರಡು ಸೆಮಿಸ್ಟರ್‌ನಲ್ಲಿ ಎಂಟು ತಿಂಗಳು ಪಾಠದ ಅವಧಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಪಾಠ ನಡೆಯುವ ದಿನಗಳು ಸುಮಾರು 180. ಈ ದಿನಗಳಲ್ಲಿ ಬಂದ್ ಇತ್ಯಾದಿ, ಶಿಕ್ಷಕರ ರಜೆ ಹೊರತುಪಡಿಸಿ ಪಾಠ ನಡೆಯುತ್ತವೆ. ಉಳಿದ ನಾಲ್ಕು ತಿಂಗಳಲ್ಲಿ ದೀರ್ಘ ರಜೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟ ಇತ್ಯಾದಿಗಳಿವೆ.
ರೈಲ್ವೆ ರಜೆ
ರೈಲ್ವೆ ಸಿಬ್ಬಂದಿಗಳಿಗೆ 11 ರಾಷ್ಟ್ರೀಯ ರಜೆಗಳು (ಕೆಲಸ ಮಾಡಿದರೆ ಪಾವತಿ ಸೌಲಭ್ಯ), 2 ಆರ್‌ಎಚ್, 10 ಸಿಎಲ್, 26 ಇಎಲ್, 7 ಲೀವ್ ಅವರೇಜ್ ಪೇ, 7 ಮೆಡಿಕಲ್ ಲೀವ್‌ಗಳಿವೆ. ಆಡಳಿತ ಕಚೇರಿಗಳಿಗೆ ಶನಿವಾರ, ರವಿವಾರ ರಜೆ ಇದೆ.
ಕಾರ್ಮಿಕರ ರಜೆ
ಕಾರ್ಮಿಕ ಕಾನೂನು ಪ್ರಕಾರ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಮತ್ತು ಫ್ಯಾಕ್ಟರೀಸ್ ಆ್ಯಂಡ್ ಬಾಯ್ಲರ್ ಸಂಸ್ಥಾಪನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ 10 ಹಬ್ಬಗಳ ರಜೆ (ರಾಜ್ಯೋತ್ಸವ, ಮೇ ದಿನ, ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ಗಾಂಧೀ ಜಯಂತಿ ಕಡ್ಡಾಯ. ಉಳಿದಂತೆ ಆಯ್ದುಕೊಳ್ಳಬಹುದು), ಪ್ರತಿ 11 ದಿನಗಳಿಗೊಮ್ಮೆ 1 ದಿನ ಇಎಲ್ ಒಟ್ಟು 21 ದಿನ, ಆರೋಗ್ಯ ವಿಲ್ಲದಿದ್ದರೆ ಇಎಸ್‌ಐ ಕೊಡುವ ರಜಾ ಸೌಲಭ್ಯ ಮತ್ತು ವಾರದಲ್ಲಿ ಒಂದು ದಿನ ವಾರದ ರಜೆ ಇದೆ. ಆದರೆ 50 ಕಾರ್ಮಿಕರಿಗಿಂತ ಹೆಚ್ಚು ನೌಕರರು ಇರುವ ಸಂಸ್ಥೆಗಳಲ್ಲಿ ಎಂಪ್ಲಾಯೆ¾ಂಟ್ ಸ್ಟಾಂಡಿಂಗ್ ಆರ್ಡರ್ ಆ್ಯಕ್ಟ್ ಪ್ರಕಾರ ಉಪ ಕಾರ್ಮಿಕರ ಆಯುಕ್ತರು, ಕಾರ್ಮಿಕರ ಪ್ರತಿನಿಧಿಗಳು, ಮಾಲಕರು ಜೊತೆಗೂಡಿ ಪ್ರಮಾಣೀಕರಿಸುವಾಗ ಸಾಮಾನ್ಯವಾಗಿ ವರ್ಷಕ್ಕೆ 12 ಸಿಎಲ್, 30 ಇಎಲ್, ಇಎಸ್‌ಐ ಅನ್ವಯವಾಗದೆ ಇದ್ದರೆ 15 ಸಿಕ್ ಲೀವ್, ವಾರದ ರಜೆ ಒಂದು ದಿನ ಅನ್ವಯಿಸುತ್ತಾರೆ. ಇದಲ್ಲದೆ ರಾಷ್ಟ್ರೀಯ ಹಬ್ಬದ ರಜೆ ಕಾಯಿದೆಯನುಸಾರ 10 ರಜೆ ಕಡ್ಡಾಯ.
ಹೆರಿಗೆ ರಜೆ
ಇತ್ತೀಚಿಗೆ ಮಹಿಳಾ ಕಾರ್ಮಿಕರಿಗೆ ಇದ್ದ ಹೆರಿಗೆ ರಜೆ ಮೂರು ತಿಂಗಳಿಂದ ಆರು ತಿಂಗಳಿಗೆ ಏರಿದೆ. ಈ ಸೌಲಭ್ಯ ಮಾತ್ರ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ, ಬ್ಯಾಂಕ್‌ನಂತಹ ಸಾಮಾಜಿಕ ಉನ್ನತ ಸ್ತರದಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಸಮಾನ. ಕೆಲಸದ ಅವಧಿಯೂ ಸಾಮಾಜಿಕ ಉನ್ನತ ಸ್ತರದಲ್ಲಿರುವ ಕಚೇರಿ ನೌಕರರಿಗೂ ಶ್ರಮಿಕ ವರ್ಗದವರಿಗೂ ಅಂತರವಿರುವುದನ್ನು ನೋಡಬಹುದು. ವೈಟ್ ಕಾಲರ್ ಮತ್ತು ಶ್ರಮಿಕ ವರ್ಗದವರಿಬ್ಬರೂ ಟ್ರೇಡ್ ಯೂನಿಯನ್ ಹೆಸರಿನಲ್ಲಿ ಚಟುವಟಿಕೆ ನಡೆಸುತ್ತಿದ್ದರೂ ರಜೆ, ವೇತನ, ಕೆಲಸದ ಅವಧಿ ಸೌಲಭ್ಯಗಳಲ್ಲಿ ಎಷ್ಟೊಂದು ವ್ಯತ್ಯಾಸವಿದೆ ನೋಡಿ.
ಕೆಲಸ ಎಷ್ಟು ದಿನ?
ಇಷ್ಟನ್ನೆಲ್ಲ ಒಟ್ಟಿಗೆ ಸೇರಿಸಿದರೆ ವರ್ಷದ 365 ದಿನಗಳಲ್ಲಿ ಎಷ್ಟು ದಿನ ಕೆಲಸ ನಡೆಯುತ್ತವೆ? ರಾಜ್ಯ ಸರಕಾರಿ ನೌಕರರಿಗೆ ಸುಮಾರು 145 ರಜೆಗಳು, ಬ್ಯಾಂಕ್‌ನವರಿಗೆ 145 (ಸಿಕ್ ಲೀವ್ ಹೊರತುಪಡಿಸಿ), ಅಂಚೆ ಇಲಾಖೆಯವರಿಗೆ 136 ರಜೆಗಳಿವೆ (ಆಡಳಿತಾತ್ಮಕ ಕಚೇರಿಗೆ 188 ದಿನಗಳು ರಜೆ), ಪ್ರಾ., ಪ್ರೌಢ ಶಾಲೆ ಶಿಕ್ಷಕರಿಗೆ 199, ಪ.ಪೂ.ಕಾಲೇಜುಗಳಿಗೆ 189, ಕಾಲೇಜುಗಳಿಗೆ 248 ರಜೆ, ವಿ.ವಿ., ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಿಗೆ 219 ರಜೆಗಳು ಇವೆ. ಶನಿವಾರ ಅರ್ಧ ದಿನ ಮತ್ತು ರವಿವಾರದ ಲೆಕ್ಕ ಹಾಕಿದರೆ ಇವುಗಳೇ ವರ್ಷಕ್ಕೆ 78 ದಿನಗಳಾಗುತ್ತವೆ. ಕೇಂದ್ರ ಸರಕಾರಿ ಆಡಳಿತಾತ್ಮಕ ಕಚೇರಿಗಳು, ಶಿಕ್ಷಕರಿಗೆ ಕೆಲಸದ ದಿನಗಳಿಗಿಂತ ರಜೆಗಳ ದಿನಗಳೇ ಹೆಚ್ಚಿಗೆ ಇವೆ. ಐದು ದಿನಗಳ ಕೆಲಸದವರಿಗೆ ಬೆಳಗ್ಗೆ 9.30ರಿಂದ ಸಂಜೆ 5.45 ರವರೆಗೆ ಕೆಲಸದ ಅವಧಿ ನಿಗದಿಯಾಗಿದೆ. ಹೀಗೆ ಮಾಡಿದರೂ ಊಟದ ಅವಧಿ ಹೊರತುಪಡಿಸಿದರೆ ಕೆಲಸದ ಅವಧಿ ಎಂಟು ಗಂಟೆ. ಎಲ್ಲ ಸಿಬ್ಬಂದಿಗಳಿಗೆ ಇಎಲ್‌ಗೆ ವೇತನ ಪಾವತಿ ಸೌಲಭ್ಯವಿರುವುದರಿಂದ ಖಾಸಗಿ ವಲಯವೂ ಸೇರಿದಂತೆ ಬಹುತೇಕರು ರಜೆ ಪಡೆಯದೆ ಪ್ರತ್ಯೇಕ ವೇತನ ಪಡೆಯುತ್ತಾರೆ.
ಬಿಡುವು-ಬಿಡುವಿಲ್ಲದ ಇಲಾಖೆಗಳು
ಸರಕಾರದ ನೀತಿಯಲ್ಲಿ ಬಿಡುವಿರುವ ಮತ್ತು ಬಿಡುವಿಲ್ಲದ ಇಲಾಖೆಗಳು ಎಂಬ ವರ್ಗೀಕರಣಗಳಿವೆ. ಶಿಕ್ಷಣ ಇಲಾಖೆಗಳನ್ನು ಬಿಡುವಿರುವ ಇಲಾಖೆ ಎಂದು ಪರಿಗಣಿಸಿದೆ. ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳನ್ನು ಬಿಡುವಿಲ್ಲದ ಇಲಾಖಾ ಸಿಬ್ಬಂದಿಯಾಗಿ ಪರಿಗಣಿಸಿ ಅವರಿಗೆ ವರ್ಷಕ್ಕೆ ಒಂದು ತಿಂಗಳು ಇಎಲ್ ಕೊಡಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಅವರು ಸಂಶೋಧನೆ, ಪ್ರವಾಸ ಮಾಡಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಂಡು ಅದರ ಲಾಭವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು ಎನ್ನುವುದು ಕಾಲೇಜು, ವಿ.ವಿ. ಶಿಕ್ಷಕರಿಗೆ ಇಷ್ಟು ರಜೆ ಕೊಡುವ ಹಿಂದಿನ ಉದ್ದೇಶ. ಇದು ವಿದೇಶದ ಕಲ್ಪನೆ. ವಿದೇಶಗಳಲ್ಲಿ ಈ ತೆರನಾಗಿ ಮಾಡುತ್ತಾರೆ. ಕಾಳಿಂಗ ಸರ್ಪದ ಅಧ್ಯಯನಕ್ಕಾಗಿ ಆಗುಂಬೆಗೆ ಬಂದ ಒಬ್ಬ ವಿದೇಶೀ ಶಿಕ್ಷಕ ತಿಂಗಳುಗಟ್ಟಲೆ ಕಾಡಿನಲ್ಲಿಯೇ ಬದುಕಿದ್ದ. ಆದರೆ ಭಾರತದ ಸ್ಥಿತಿ ಹೇಗಿದೆ ಎನ್ನುವುದನ್ನು ಓದುಗರೇ ನಿರ್ಧರಿಸಿ. ಇವರು ಭಾರೀ ಕಲಿತದ್ದಕ್ಕೆ ಇಷ್ಟು ವೇತನ, ರಜೆ ಕೊಟ್ಟದ್ದಲ್ಲ.
ರಜೆಗೆ 24, ಕೆಲಸಕ್ಕೆಷ್ಟು ಗಂಟೆ?
ರಜೆಯಾದರೂ, ಕೆಲಸದ ದಿನವಾದರೂ ನಾವು ಎಣಿಸುವುದು ದಿನಗಳ ಲೆಕ್ಕದಲ್ಲಿ. ಆದರೆ ನಿಖರವಾಗಿ ಕೆಲಸ ಮಾಡುವುದು ಸಾಮಾನ್ಯವಾಗಿ ಗರಿಷ್ಠವೆಂದರೆ ಎಂಟು ಗಂಟೆ. ಕಾರ್ಮಿಕ ಕಾಯಿದೆ ಅನ್ವಯವಾಗುವಲ್ಲಿ ಇದು ನಿಖರ. ಎಂಟು ಗಂಟೆಗಿಂತ ಹೆಚ್ಚಿಗೆ ಕೆಲಸ ಮಾಡಿದರೆ ಓವರ್‌ಟೈಮ್ ಲೆಕ್ಕ ಹಾಕಿ ಪ್ರತ್ಯೇಕ ವೇತನ ಪಡೆಯಲಾಗುತ್ತದೆ. ರಜೆಯನ್ನು ಪಡೆಯುವಾಗ 24 ಗಂಟೆ ಬಳಸುವ ಭಾವನೆ ಇದೆ. ವೈಟ್ ಕಾಲರ್x ಜಾಬ್‌ನಲ್ಲಿ ಸಾಮಾನ್ಯವಾಗಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೆಲಸದ ಅವಧಿ ಇರುತ್ತದೆ. ಇದರಲ್ಲಿ ಅರ್ಧ/ ಒಂದು ಗಂಟೆ ಊಟದ ಸಮಯವೆಂದು ನಿಗದಿಯಾಗಿರುತ್ತದೆ. ಶಾಲೆಗಳಲ್ಲಿ ಸಮಯದಲ್ಲಿ ಸ್ವಲ್ಪ ಬದಲಾವಣೆ ಇದೆ. ಪ.ಪೂ.ಕಾಲೇಜು, ಪದವಿ ಕಾಲೇಜು, ವಿ.ವಿ.ಗಳಲ್ಲಿ ಇನ್ನಷ್ಟು ವ್ಯತ್ಯಾಸಗಳಿವೆ. ಕೇವಲ ಒಂದೆರಡು ಗಂಟೆ ಕೆಲಸ ಮಾಡಿ ಐಶಾರಾಮಿ ವೇತನ ಪಡೆಯುವ ನೌಕರಿಯೂ ದೇಶದಲ್ಲಿದೆ. ಕೆಲಸದ ವೇಳೆ ಕೆಲವೆಡೆಗಳಲ್ಲಿ ಪತ್ರಿಕೆಗಳ ಓದು- ಟಿವಿ ನೋಡು, ವಾಕಿಂಗ್, ವೈದ್ಯರ ಭೇಟಿ, ಮನೆ ಸಾಮಾನು ತರುವುದು, ಟೆಲಿಫೋನ್ – ವಿದ್ಯುತ್- ಗ್ರಾ.ಪಂ. ಬಿಲ್ ಕಟ್ಟುವುದು, ವಿವಿಧ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ಗಣ್ಯರ, ಮೇಲಧಿಕಾರಿಗಳ ಸಂಪರ್ಕದ ಪೋಸು ಕೊಟ್ಟು ಕಡಿಮೆ ಕೆಲಸ ಮಾಡುವವರೂ ಇದ್ದಾರೆ. ಚಾಚೂ ತಪ್ಪದೆ ಕೆಲಸ ಮಾಡುವವರೂ ಇದ್ದಾರೆ. ಎಷ್ಟೋ ನೌಕರರಿಗೆ ರಜೆಗಳು ಲುಪ್ತವಾಗಿ ಹೋಗುವುದಿದೆ. ಕೆಲವು ನೌಕರರು ಒಂದು ರಜೆಯನ್ನೂ ಪೋಲು ಮಾಡದೆ ಹಕ್ಕನ್ನು ತಪ್ಪದೆ ಚಲಾಯಿಸುತ್ತಾರೆ. ಕೆಲವರಿಗೆ ತಮಗೆ ಮಾತ್ರ ರಜೆ ಬೇಕು, ಇತರರಿಗೆ ಬೇಡವೆಂಬ ಭಾವನೆಯೂ ಇರುತ್ತದೆ.
“”ಎಷ್ಟು ರಜೆಗಳು ಇವು? ಜಪಾನ್‌ನಲ್ಲಿ ಮುಷ್ಕರ ಹೂಡುವುದಿದ್ದರೂ ದಿನಕ್ಕೆ ಎರಡು ಗಂಟೆ ಹೆಚ್ಚಿಗೆ ಕೆಲಸ ಮಾಡಿ ತೋರಿಸುತ್ತಾರೆ. ಉತ್ಪಾದನೆ ಕಡಿಮೆಯಾಗಿ ರಾಷ್ಟ್ರಕ್ಕೆ ನಷ್ಟವಾಗಬಾರದು ಎಂಬುದು ಅವರ ನೀತಿ. ನಮ್ಮಲ್ಲಿ ಆ ಜಯಂತಿ, ಈ ಜಯಂತಿ ಎಂದು ರಜೆಗಳು ಹೆಚ್ಚುತ್ತಲೇ ಹೋಗುತ್ತಿವೆ. ಇದನ್ನು ನಾನು ಉದ್ಯೋಗದಲ್ಲಿರುವಾಗಲೇ ವಿರೋಧಿಸಿದ್ದೆ. ಕೆಲವರು ನನ್ನನ್ನು ವಿರೋಧಿಸಿದ್ದರು. ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವ, ಗಾಂಧಿ ಜಯಂತಿ ಇತ್ಯಾದಿ ಮುಖ್ಯ ದಿನಗಳಂದು ರಜೆ ಕೊಟ್ಟು ಉಳಿದಂತೆ ಅವರವರಿಗೆ ಬೇಕಾದರೆ ಆರ್‌ಎಚ್ ಹಾಕುವಂತೆ ಮಾಡಿದರೆ ಕಚೇರಿ ನಡೆದಂತೆ ಆಗುವುದಿಲ್ಲವೆ?” ಎನ್ನುತ್ತಾರೆ ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿ ಬ್ರಹ್ಮಾವರದ ಟಿ.ಭಾಸ್ಕರ ರೈ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.