‘ದೊಡ್ಡ’ ಮನುಷ್ಯರ ‘ಸಣ್ಣ’ತನಗಳು…!
ಮಹಾತ್ಮನ ಸಹವಾಸ ಸಾಕಪ್ಪ ಎಂದಿದ್ದ ಕಸ್ತೂರ್ಬಾ!
Team Udayavani, Feb 11, 2024, 6:20 AM IST
“ದೊಡ್ಡ ಮನುಷ್ಯರು’ ಎಂಬವರೂ ಕೆಲವೊಮ್ಮೆ “ಸಣ್ಣ ಮನುಷ್ಯ’ರಂತೆ ವರ್ತಿಸುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಸಿಗುತ್ತವೆ. ಸಂದರ್ಭಕ್ಕೆ ಸರಿಯಾಗಿ ಒತ್ತಡದಿಂದಾಗಿಯೋ? ದ್ವೇಷವು ಆವೇಶ ಸ್ಥಿತಿಯಲ್ಲಿರುವಷ್ಟು ಹೊತ್ತೋ? ಮಹಾಭಾರತದ ಯಕ್ಷಪ್ರಶ್ನೆಯನ್ನು ರುಜುವಾತುಪಡಿಸು ವಂತೆಯೋ (ನಾವು ಅಜರಾಮರ ಎಂಬ ಭ್ರಮೆ) ನಾವೂ ಎಷ್ಟೋ ಬಾರಿ ಈ ಸಾಲಿಗೆ ಸೇರುವಂತೆ ವರ್ತಿಸಿರಲೂಬಹುದು. ಲೋಕದ ದೋಷವೆಲ್ಲ ತೋರಿದರೂ ನಮ್ಮದೇ ಕುಬುದ್ಧಿ ನಮಗೆ ಸುಲಭದಲ್ಲಿ ಗೋಚರವಾಗಲಾರವು. ಆತ್ಮಾವಲೋಕನದಿಂದ ನಮ್ಮ ನಿಜಸ್ಥಿತಿ ಗೋಚರವಾದರೂ “ಕುಬುದ್ಧಿ’ ಸ್ಥಾನದಲ್ಲಿ “ಸುಬುದ್ಧಿ’ ಸುಲಭದಲ್ಲಿ ಬಾರದು. ಆದರೆ “ಮಾಜಿ ಕುಬುದ್ಧಿ’ ಹಿಂದಿನಷ್ಟು “ಹಾಲಿ ಕುಬುದ್ಧಿ’ ಆಗಲಾರದು.
ಮಹಾತ್ಮನ ಸಹವಾಸ ಸಾಕಪ್ಪ ಎಂದಿದ್ದ ಕಸ್ತೂರ್ಬಾ!
ಗಾಂಧೀಜಿಯವರು ದೇವಸ್ಥಾನಗಳಿಗೆ ಹೋಗದಿದ್ದರೂ ಪ್ರಾರ್ಥನ ಸಭೆಗಳಲ್ಲಿ ಕುರಾನ್, ಬೈಬಲ್, ಪಾರ್ಸಿಗಳ ಝಿನಾ, ಗ್ರಂಥ ಸಾಹಿಬಾ ವಿಚಾರಗಳನ್ನು, ಗೀತಾ ಶ್ಲೋಕಗಳನ್ನು ಹೇಳುತ್ತಿದ್ದರು. ಗಾಂಧೀಜಿ ಒಮ್ಮೆ ಮಧುರೆ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಿದ್ದರು. ಇದಕ್ಕೆ ಕಾರಣ ದಲಿತರನ್ನು ಪ್ರವೇಶಿಸಲು ಬಿಟ್ಟದ್ದು. ಇದಕ್ಕೂ ಮೊದಲೇ ಕಸ್ತೂರ್ಬಾ ಹೋಗಿದ್ದರು. ಇದು ಗಾಂಧೀಜಿ ಯವರಿಗೆ ಗೊತ್ತಿರಲಿಲ್ಲ. ಆಗ ಗಾಂಧೀಜಿ “ನನ್ನನ್ನು ಕೇಳದೆ ನೀನೇಕೆ ಹೋದೆ. ನಾನು ಈ ದಿನ ಊಟ ಮಾಡುವುದಿಲ್ಲ’ ಎಂದಿದ್ದರು. ಆಗ ಕಸ್ತೂರ್ಬಾ “ಯಾರಾದರೂ ಆದೀತು, ಈ ಮಹಾತ್ಮರ ಸಹ ವಾಸ ಬಹಳ ಕಷ್ಟ. ಎಂದೆಂದಿಗೂ ಬೇಡ’ ಎಂದು ಗಾಂಧೀಜಿಯವರ ಸುದೀರ್ಘ ನಿಕಟವರ್ತಿಯಾಗಿದ್ದ ಸುಧಾಕರ ಚತುರ್ವೇದಿ ಯವರಲ್ಲಿ ಅಲವತ್ತುಕೊಂಡಿ ದ್ದರು. ಘಟನೆ ಪುರಿಯಲ್ಲಿ ನಡೆದದ್ದು ಎಂಬ ವಾದವೂ ಇದೆ.
‘ನಿನಗೇನು ಹೊಟ್ಟೆಯುರಿ?’
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭ ದಿಲ್ಲಿ ಸುತ್ತಮುತ್ತ, ಜಲಂಧರ, ಅಂಬಾಲ ಮೊದಲಾದ ಕಡೆ “ನೀರು ಹರಿಯುತ್ತಿರಲಿಲ್ಲ, ರಕ್ತ ಹರಿಯುತ್ತಿತ್ತು’. ಲಾಹೋರ್‌ಗೆ ಹೋಗಿದ್ದ ಸ್ವಾತಂತ್ರ್ಯ ಹೋರಾಟಗಾರ ಪಂ| ಸುಧಾಕರ ಚತುರ್ವೇದಿಯವರಿಗೆ ವಲ್ಲಭಭಾಯಿ ಪಟೇಲರು “ಲಕ್ಷಾಂತರ ಜನ ಶರಣಾರ್ಥಿಗಳು ದಿಕ್ಕಿಲ್ಲದೆ ಇದ್ದಾರೆ. ತತ್‌ಕ್ಷಣ ದಿಲ್ಲಿಗೆ ಹೊರಟು ಬಾ’ ಎಂದು ಟೆಲಿಗ್ರಾಂ ಕಳುಹಿಸಿದ್ದರು. ಮಕ್ಕಳನ್ನು ಕತ್ತರಿಸಿದ್ದನ್ನು ಇವರು ಕಣ್ಣಾರೆ ಕಂಡಿದ್ದರು. ಅಲ್ಲಿದ್ದ ಮುಸ್ಲಿಮರೂ “ನಾವು ಪಾಕಿಸ್ಥಾನ ಕೇಳಲಿಲ್ಲ’ ಎನ್ನುತ್ತಿದ್ದರು. ಆ. 31ರಂದು ಗಾಂಧೀಜಿ ದಿಲ್ಲಿಗೆ ಬಂದಾಗ ಚತುರ್ವೇದಿಯವರು ನವಾಬರೆಲ್ಲ ವ್ಯವಸ್ಥೆ ಮಾಡಿಕೊಂಡು ಮುಸ್ಲಿಮರು ಸಂತೋಷವಾಗಿರುವುದನ್ನು ಮತ್ತು ಹಿಂದೂಗಳು ಗಂಜಿಗೆ ಪರದಾಡುತ್ತಿರುವ ಸಮಾಚಾರ ತಿಳಿಸಿದಾಗ ಗಾಂಧೀಜಿ ನಕ್ಕು “ನಿನಗೇನು ಹೊಟ್ಟೆಯುರಿ?’ ಎಂದು ಪ್ರಶ್ನಿಸಿದರಂತೆ.
ಅಂತಿಮ ದರ್ಶನಕ್ಕೂ ತಡೆ!
1950ರಲ್ಲಿ ವಲ್ಲಭಭಾಯಿ ಪಟೇಲರು ಹೃದಯಾಘಾತದಿಂದ ನಿಧನ ಹೊಂದಿದರು. ಆಗ 65 ವರ್ಷವಾಗಿತ್ತಷ್ಟೆ. ಕೆಲಸದ ಒತ್ತಡ ಅವರನ್ನು ಹಣ್ಣು ಮಾಡಿತ್ತು ಎನ್ನುವುದನ್ನು ಸುಧಾಕರ ಚತುರ್ವೇದಿ ಬರೆದುಕೊಂಡಿದ್ದಾರೆ. ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅಂತಿಮ ದರ್ಶನಕ್ಕೆ ಹೊರಟಾಗ “ರಾಜಾಜಿ ಹೋಗುತ್ತಾರೆ ಸಾಕು’ ಎಂದು ಪ್ರಧಾನಿ ಜವಾಹರಲಾಲ್ ನೆಹರೂ ತಡೆದರು ಎಂದು ಚತುರ್ವೇದಿ ಹೇಳಿಕೊಂಡಿದ್ದಾರೆ.
“ಮಗ ಸತ್ತ ಹೌದು, ದೇಶಕ್ಕೇನು ನಷ್ಟ?’
ಸಂಜಯ್ ಗಾಂಧಿಯವರು 1984ರಲ್ಲಿ ವಿಮಾನ ದುರಂತಕ್ಕೆ ಈಡಾದಾಗ ಸುಧಾಕರ ಚತುರ್ವೇದಿ ಸಂತಾಪ ಸೂಚಿಸಲು ಮನೆಗೆ ಹೋಗಿದ್ದರು. ಇಂದಿರಾ ಗಾಂಧಿಯವರು “ನೀವಾದರೂ ಬಂದಿರಲ್ಲ. ಆ ಮೊರಾರ್ಜಿ ಬರಲೇ ಇಲ್ಲ’ ಎಂದರು. ಮುಂಬಯಿಗೆ ಹೋದಾಗ ಚತುರ್ವೇದಿಯವರು ಮೊರಾರ್ಜಿ ದೇಸಾಯಿಯವರಿಗೆ ಕೇಳಿದರು. “ನಾನೇಕೆ ಹೋಗಲಿ? ನಾನು ಈಗ ಸಂತೋಷವಾಗಿದ್ದೀನಿ’ ಎಂದು ಮೊರಾರ್ಜಿ ಉತ್ತರಿಸಬೇಕೆ? ಕೊನೆಗೆ ಬಲವಂತದಿಂದ ಸಂತಾಪಸೂಚಕ ಟೆಲಿಗ್ರಾಂ ಕಳುಹಿಸಿದರು. ಇದು ಹೇಗಿತ್ತೆಂದರೆ “Though you have lost your son, nation has lost nothing” (ನೀವು ಮಗನನ್ನು ಕಳೆದುಕೊಂಡರೂ ದೇಶವೇನೂ ಕಳೆದುಕೊಂಡಿಲ್ಲ).
ಸಾವಿನಲ್ಲೂ ಇಣುಕಿದ ಜಾತೀಯತೆ
1948ರ ಜ. 30ರಂದು ಗಾಂಧೀಜಿಯವರ ಹತ್ಯೆ ನಡೆದಾಗ ವಿಶ್ವಸಂಸ್ಥೆಯಲ್ಲಿ ಎಲ್ಲ ಬಾವುಟಗಳನ್ನು ಕೆಳಗೆ ಇಳಿಸಿದ್ದರು. ಪಾಕಿಸ್ಥಾನವೂ ಮಾಡಬೇಕಾಯಿತು. ಎಲ್ಲ ದೇಶಗಳಿಂದಲೂ ಸಂತಾಪ ಸೂಚಕ ಸಂದೇಶಗಳು ಬರುತ್ತಿದ್ದವು. ಪಾಕಿಸ್ಥಾನದ ಜನಕ ಮಹಮ್ಮದಾಲಿ ಜಿನ್ನಾ “Undoubtedly he was the greatest hindu born” ಎಂದಿದ್ದರು. ಈ ಮಾತಿನಲ್ಲಿ ಅವರು ಶ್ರೇಷ್ಠ ಹಿಂದೂವಾಗಿದ್ದರೂ ನಮಗೇನಲ್ಲ ಎಂಬ ಅರ್ಥವಿದೆ. ಪ್ರಸಿದ್ಧ ರಂಗಕರ್ಮಿ ಜಾರ್ಜ್ ಬರ್ನಾರ್ಡ್ ಶಾ “It is sin to utter the name of Jinna at this moment” (ಜಿನ್ನಾ ಹೆಸರೆತ್ತುವುದು ಪಾಪ) ಎಂದು ಪ್ರತಿಕ್ರಿಯಿಸಿದ್ದರು.
ಮರೆಯಲಾರದ ಅಲ್ಸರ್ ನೋವು!
1984ರ ಅಕ್ಟೋಬರ್ 31. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರು ನಿರಂತರ ಕಾಡುತ್ತಿದ್ದ ಅಲ್ಸರ್ ಚಿಕಿತ್ಸೆಗೆಂದು ಲಂಡನ್‌ಗೆ ಹೋಗಿದ್ದರು. ಡಿಜಿಪಿ ಗರುಡಾ ಚಾರ್ ಅವರಿಂದ ಮುಖ್ಯಮಂತ್ರಿ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣಿ ಯನ್ ಅವರಿಗೆ ಕರೆ ಮಾಡಿ ಇಂದಿರಾಗಾಂಧಿಯವರ ಸಾವಿನ ಸುದ್ದಿ ತಲುಪಿಸಿದರು. ಬಾಲ ಸುಬ್ರಹ್ಮಣಿಯನ್ ಅವರು 10 ಸಾಲಿನ ಶ್ರದ್ಧಾಂಜಲಿ ಬರೆದು ಮುಖ್ಯಮಂತ್ರಿಗಳಿಗೆ ಓದಿ ಹೇಳಿದರು. ಹೆಗಡೆಯವರು ಎಲ್ಲವನ್ನೂ ಕೇಳಿಸಿಕೊಂಡು “ಇಲ್ಲಿ ಮುಖ್ಯವಾಗಿ ಒತ್ತು ಇರಬೇಕಾದದ್ದು ಅವರು ನೆಹರೂರವರಂತಹ ಮಹಾನ್ ನಾಯಕರ ಮಗಳು ಮತ್ತು ದಶಕಕ್ಕೂ ಮೀರಿ ಪ್ರಧಾನಿಯಾಗುವ ಸದವಕಾಶ ಸಿಕ್ಕಿತು’ ಎಂದಷ್ಟೇ ಹೇಳಿದರು. ಹೊಗಳಿಕೆ ಇಲ್ಲ. ಕೇವಲ ಒಂದು ಸಾಲಿನ ಔಪಚಾರಿಕ ವಿಷಾದ! “ತುರ್ತುಪರಿಸ್ಥಿತಿ ಜೈಲಿನಲ್ಲಿ ತಮಗೆ ಸಿಕ್ಕಿದ ಅಲ್ಸರ್ ಕೊಡುಗೆಯ ಕಾರಣಕ್ಕೆ ಹೆಗಡೆಯವರು ಇಂದಿರಾ ಗಾಂಧಿಯವರನ್ನು ಎಂದಿಗೂ ಕ್ಷಮಿಸಲಿಲ್ಲ’ ಎಂದು ಬಾಲಸುಬ್ರಹ್ಮಣಿಯನ್ “ಕಲ್ಯಾಣ ಕೆಡುವ ಹಾದಿ’ ಕೃತಿಯಲ್ಲಿ ತಿಳಿಸಿದ್ದಾರೆ.
ಮಿಲಿಟರಿ ಶಿಸ್ತಿನ ಪರಾಕಾಷ್ಠೆ
ಫೀಲ್ಡ್ ಮಾರ್ಷಲ್ ಕಾರಿಯಪ್ಪನವರಲ್ಲಿಗೆ ಹಿರಿಯ ಛಾಯಾಚಿತ್ರಗ್ರಾಹಕ ಟಿ.ಎಸ್. ಸತ್ಯನ್ ಹೋಗಿದ್ದರು. ಕಾರಿಯಪ್ಪನವರ ತಮ್ಮ ಬೋಪಯ್ಯ ಸತ್ಯನ್ ಅವರನ್ನು ಮಡಿಕೇರಿ ಅತಿಥಿಗೃಹದಿಂದ ಕರೆತರುವವರಿದ್ದರು. ಸತ್ಯನ್ ಮಿತ್ರ ಸೋಮಶೇಖರ್ ಜತೆ ಇರಲು ಕಾರಿಯಪ್ಪನವರ ಸಮ್ಮತಿ ಇತ್ತು. ದಾರಿಯಲ್ಲಿ ಸತ್ಯನ್ ಅವರಿಗೆ ಛಾಯಾಗ್ರಾಹಕ ಗೆಳೆಯ ಕೆಂಪಣ್ಣ ಸಿಕ್ಕಿ ಬರುವುದಾಗಿ ಹೇಳಿದರು. ಬೋಪಯ್ಯನವರು “ನೋಡೋಣ’ ಎಂದರು. ನಾಲ್ವರೂ ಮನೆಗೆ ಹೋದಾಗ ರಾಜಠೀವಿ ಯಲ್ಲಿ ಕಾರಿಯಪ್ಪ ಬಾಗಿಲು ತೆರೆದರು. ಏರಿದ ದನಿಯಲ್ಲಿ “ನೀವು ಅರ್ಧ ಗಂಟೆ ಮೊದಲೇ ಬಂದಿದ್ದೀರಿ. ಐದು ಗಂಟೆಗೆ ಬನ್ನಿ’ ಎಂದು ಬಾಗಿಲು ಹಾಕುವಷ್ಟರಲ್ಲಿ ಬೋಪಯ್ಯನವರು “ಈಗ ಐದು ಗಂಟೆ. ನೆನಪು ನಿಮಗೆ ಕೈಕೊಡುತ್ತ ಇದೆ’ ಎಂದಾಗ ಕಾರಿಯಪ್ಪನವರು ತಪ್ಪಾಯಿತೆಂದು ಬಾರಿಬಾರಿ ಹೇಳಿ ಒಳಗೆ ಕರೆದರು. ಮೊದಲು ಸತ್ಯನ್, ಬಳಿಕ ಬೋಪಯ್ಯ, ಸೋಮಶೇಖರ್ ಹಿಂಬಾಲಿಸಿದರು. ಕೆಂಪಣ್ಣರಿಗೆ ಮಾತ್ರ ಕಾರಿಯಪ್ಪ ಊರುಗೋಲನ್ನು ಅಡ್ಡ ಹಿಡಿದು “ಐ ಆ್ಯಮ್ ಸಾರಿ. ನಿಮ್ಮನ್ನು ಕರೆದಿರಲಿಲ್ಲ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು. ಕೆಂಪಣ್ಣ ವಿಷಣ್ಣವದನರಾಗಿ ತೋಟದ ಮರದ ಬುಡದಲ್ಲಿ ಕುಳಿತುಕೊಳ್ಳಬೇಕಾಯಿತು. ಕಾರಿಯಪ್ಪರ ಶಿಸ್ತಿನ ಪರಾಕಾಷ್ಠೆಯೇ ಇದಕ್ಕೆ ಕಾರಣ.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.