ಮೋದಿ ಸಿನೆಮಾದಲ್ಲಿ ಎಲ್ಲವೂ ಇರಲಿದೆ
Team Udayavani, Jul 15, 2017, 2:10 AM IST
ಖ್ಯಾತ ಬಾಲಿವುಡ್ ನಟ, ಬಿಜೆಪಿ ಸಂಸದ ಪರೇಶ್ ರಾವಲ್ ಪ್ರಧಾನಿ ನರೇಂದ್ರ ಮೋದಿ ಜೀವನವನ್ನಾಧರಿಸಿದ ಸಿನೆಮಾ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಬಯೋಪಿಕ್‌ನಲ್ಲಿ ಅವರು ಮೋದಿ ಪಾತ್ರವನ್ನು ಮಾಡಲಿದ್ದಾರೆ. ರೆಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಪರೇಶ್ ರಾವಲ್, ಈ ಸಿನೆಮಾಕ್ಕೆ ಸಿದ್ಧತೆ ಹೇಗೆ ನಡೆದಿದೆ ಎನ್ನುವುದರಿಂದ ಹಿಡಿದು, ಅರುಂಧತಿ ರಾಯ್ ಕುರಿತ ತಮ್ಮ ಇತ್ತೀಚಿನ ವಿವಾದಾತ್ಮಕ ಹೇಳಿಕೆಯ ಬಗ್ಗೆಯೂ ಮಾತನಾಡಿದ್ದಾರೆ…
ಮೋದಿಯವರ ಪಾತ್ರ ಮಾಡುವಲ್ಲಿ ನಿಮಗೆ ಯಾವ ಸವಾಲುಗಳು ಎದುರಾಗಬಹುದು?
ಇದು ಬಹಳ ಚಾಲೆಂಜಿಂಗ್ ಸಂಗತಿ. ಇಂಥ ಪಾತ್ರಗಳನ್ನು ಮಾಡುವಾಗ ನಾವು ಆ ವ್ಯಕ್ತಿಯ ನಕಲು ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಕೇವಲ ಮೋದಿ ಅವರ ಮಿಮಿಕ್ರಿ ಮಾಡಲೇಬೇಕೆಂದರೆ ಅದಕ್ಕೆ ನಾನ್ಯಾಕೆ ಬೇಕು? ಹಾಗೆ ಮಾಡುವವರು ಬಹಳ ಜನ ಸಿಗುತ್ತಾರೆ.
ಈ ಪಾತ್ರಕ್ಕೆ ನಿಮ್ಮ ತಯಾರಿ ಹೇಗಿದೆ?
ಈಗಂತೂ ಸಮಯ ಸಿಕ್ಕಾಗಲೆಲ್ಲ ನಾನು ಅವರನ್ನು(ನರೇಂದ್ರ ಮೋದಿ) ಭೇಟಿಯಾಗುತ್ತಿದ್ದೇನೆ. ಒಬ್ಬ ವ್ಯಕ್ತಿಯನ್ನು ಮೇಲ್ನೋಟಕ್ಕೆ ಗಮನಿಸುವುದರಿಂದ ತಯಾರಿ ಆಗುವುದಿಲ್ಲ. ಅದಕ್ಕೆ ಬಹಳಷ್ಟು ಗಮನ ಮತ್ತು ಏಕಾಗ್ರತೆಯ ಅಗತ್ಯವಿರುತ್ತದೆ.
ಈಗಿನ ರಾಜಕೀಯ ವಾತಾವರಣದಲ್ಲಿ ಇಂಥ ಪ್ರಯತ್ನ ಬೇಕಿತ್ತೇ?
ನೋಡಿ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಅವರ ಸುತ್ತಲಿನ ವಾತಾವರಣ ಚಂಚಲವಾಗಿಯೇ ಇದೆ. ನೀವು ಯಾವ ರಾಜಕೀಯ ವಾತಾವರಣದ ಬಗ್ಗೆ ಮಾತನಾಡುತ್ತಿದ್ದೀರಲ್ಲ. ಅದನ್ನು ಅವರ ವಿರೋಧಿಗಳು ಸೃಷ್ಟಿಸುತ್ತಿದ್ದಾರಷ್ಟೆ. ಉದಾಹರಣೆಗೆ, ಡಿಮಾನಿಟೈಸೇಷನ್ ಸಮಯದಲ್ಲಿ ಇವರೆಲ್ಲ ಭಯ ಸೃಷ್ಟಿಸಿದರು. ಆದರೆ ಆದದ್ದೇನು? ಜನರು ಸಾಲು ಸಾಲು ಕ್ಯೂಗಳಲ್ಲಿ ನಿಂತರೂ ದೊಂಬಿಗಳಾಗಲಿಲ್ಲ. ಸಹನೆ ಕಳೆದುಕೊಂಡದ್ದು ಸಾಮಾನ್ಯ ಜನರಲ್ಲ, ಬದಲಾಗಿ ಮೋದಿ ವಿರೋಧಿಗಳು. ಡಿಮಾನಿಟೈಸೇಷನ್‌ನಿಂದ ತಮ್ಮ ಕಪ್ಪು ಹಣವೆಲ್ಲ ರದ್ದಿ ಹಾಳೆಯಾಗಿದ್ದನ್ನು ನೋಡಿ ಅವರ ಅಸಹನೆ ಹೆಚ್ಚಿತು. ಈ ಕಾರಣಕ್ಕಾಗಿಯೇ ರಾಜಕೀಯ ವಾತಾವರಣವನ್ನು ಹದಗೆಡೆಸಿ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದರು. ಆದರೆ ಜನರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎನ್ನುವುದು ಗೊತ್ತಿದೆ. ಅದಕ್ಕೇ ಅವರು ವಿರೋಧಿಗಳಿಗೆ ಸೊಪ್ಪುಹಾಕಲಿಲ್ಲ.
ಆದರೆ ಮೋದಿಯವರದ್ದು ಧ್ರುವೀಕರಿಸುವ ವ್ಯಕ್ತಿತ್ವ
ಅದರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ? ಸಿನೆಮಾದಲ್ಲಿ ನಾನು, ಹೇಗೆ ಮೋದಿ ತಮಗೆದುರಾದ ಪರಿಸ್ಥಿತಿಯನ್ನು ನಿಭಾಯಿಸಿದರು, ಆ ಘಟನೆಗಳ ಹಿಂದಿನ ಕಾರಣಗಳೇನು? ಎನ್ನುವುದನ್ನು ಎದುರಿಡಲು ಪ್ರಯತ್ನಿಸುತ್ತಿದ್ದೇನೆ.
ಹಾಗಿದ್ದರೆ ಈ ಜೀವನಚರಿತ್ರೆಯಲ್ಲಿ 2002ರ ಗಲಭೆಗಳನ್ನೂ ತೋರಿಸುತ್ತೀರಾ?
ಅದರಲ್ಲಿ ಎಲ್ಲವೂ ಇರುತ್ತದೆ. ಅಷ್ಟೇ ಅಲ್ಲ, ತಾವು ನ್ಯಾಯಾಂಗಕ್ಕಿಂತಲೂ ದೊಡ್ಡವರು ಎಂದು ಭಾವಿಸುತ್ತಾ ಅಡ್ಡಾಡುವವರು ಮತ್ತು ಅವರ ಉದ್ದೇಶಗಳನ್ನೂ ತೋರಿಸುತ್ತೇವೆ.
ಜಿಎಸ್‌ಟಿ ಬಗ್ಗೆ ಏನಂತೀರಿ? ಬಾಲಿವುಡ್‌ನ ಮೇಲೆ ಜಿಎಸ್‌ಟಿ ಪರಿಣಾಮ ಹೇಗಿದೆ?
ಜಿಎಸ್‌ಟಿ ಬಗ್ಗೆ ನನಗೆ ಇನ್ನೂ ಪೂರ್ಣವಾಗಿ ಅರ್ಥವಾಗಿಲ್ಲ. ಭಾರತೀಯರಿಗೆ ಒಳ್ಳೆಯದಾಗಲಿ ಮತ್ತು ದೇಶದ ಜಟಿಲ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಬೇಕು ಎಂಬ ಉದ್ದೇಶದಿಂದ ಅದನ್ನು ತರಲಾಗಿದೆ. ಜಿಎಸ್‌ಟಿಯಿಂದ ಅಲ್ಪಾವಧಿ ತೊಂದರೆಗಳು ಇರಲಿವೆ. ಮೋದಿಯವರೇ ಹೇಳಿದಂತೆ ಯಾವುದೇ ಹೊಸ ಬದಲಾವಣೆ ಬಂದಾಗಲೂ ಅದಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯುತ್ತದೆ.
ಧರ್ಮದ ಹೆಸರಲ್ಲಿ ಇಂದು ದ್ವೇಷ ಹಬ್ಬಿಸುವ ಕೆಲಸ ಹೆಚ್ಚಾಗುತ್ತಿದೆ. ಧರ್ಮದ ಹೆಸರಲ್ಲಿ ನಡೆಯುವ ಹತ್ಯೆಗಳ ಬಗ್ಗೆ ಏನಂತೀರಿ?
ಅಸಹ್ಯವೆನಿಸುತ್ತದೆ! ಜನರು ಧರ್ಮದ ಹೆಸರಲ್ಲಿ ಹಿಂಸೆಯಲ್ಲಿ ತೊಡಗುವುದನ್ನು ಕಂಡಾಗ ಯಾತನೆಯಾಗುತ್ತದೆ. ಯಾವಾಗ ನಾವು ನಮ್ಮ ಸಮಾಜವನ್ನು ಮಂದಿರವೆಂದುಕೊಳ್ಳುತ್ತೇವೋ, ಜನರೇ ದೇವರು ಎಂದುಕೊಳ್ಳುತ್ತೇವೋ ಆಗ ಯಾವ ಸಮಸ್ಯೆಯೂ ಇರುವುದಿಲ್ಲ.
ಸಾವಿರಾರು ವರ್ಷಗಳಿಂದ ನಾವು ಗೀತೆ, ರಾಮಾಯಣ, ಮಹಾಭಾರತ, ಬೈಬಲ್, ಕುರಾನ್ ಅನ್ನು ಕಲಿಯುತ್ತಾ ಬಂದಿದ್ದೇವೆ. ಈ ಎಲ್ಲಾ ಪವಿತ್ರ ಗ್ರಂಥಗಳೂ ನಮಗೆ ಪ್ರೀತಿ ಮತ್ತು ಶಾಂತಿಯ ಸಂದೇಶ ಕೊಡುತ್ತವೆ. ಹೀಗಿದ್ದರೂ ನಾವೇಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದೇವೆ?
ಈ ಗ್ರಂಥಗಳ ಮೂಲಭೂತ ಸಂದೇಶವನ್ನು ನಾವು ಪರಿಪಾಲಿಸುತ್ತಿದ್ದೇವಾ? ಭಗವಂತ, ಅಲ್ಲಾಹ್, ಏಸುಕ್ರಿಸ್ತನ ಬೋಧನೆಗಳು ಜನರ ಮೇಲೆ(ಹಿಂಸೆಯಲ್ಲಿ ತೊಡಗುವವರ)ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿಲ್ಲವೇಕೆ? ಹಿಂಸೆಗೆ ತುತ್ತಾಗಿ ಸತ್ತವನು ಯಾವುದೇ ಧರ್ಮದವನಾಗಿರಲಿ, ಆತನೂ ಒಬ್ಬ ಮನುಷ್ಯನೇ ಅಲ್ಲವೇ?
ನಿಮ್ಮ ರಾಜಕೀಯ ಜೀವನ ಮತ್ತು ನಟನಾ ವೃತ್ತಿಯ ನಡುವೆ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತೀರಿ?
ನಾನು ಎಲ್ಲಕ್ಕೂ ಸಮಯ ಎತ್ತಿಡುತ್ತೇನೆ. ಅದು ನನ್ನ ರಾಜಕೀಯ ಚಟುವಟಿಕೆಗಳಿಗಾಗಲಿ, ನನ್ನ ಕ್ಷೇತ್ರಕ್ಕೆ ಭೇಟಿಕೊಡುವುದಾಗಲಿ ಅಥವಾ ಸಂಸತ್ತಿನಲ್ಲಿ ಹಾಜರಿರುವ ವಿಷಯದಲ್ಲೇ ಆಗಲಿ. ಸಂಸತ್ತಿನಲ್ಲಿ ನಾವು 100 ದಿನ ಮತ್ತು ನಮ್ಮ ಕ್ಷೇತ್ರದಲ್ಲಿ ತಿಂಗಳಲ್ಲಿ 4 ದಿನ ಇರಬೇಕು ಎಂಬ ನಿಯಮವಿದೆ. ಅಂದರೆ 148 ದಿನವಾಯಿತು. ಉಳಿದ 215 ದಿನಗಳಲ್ಲಿ ಕೆಲ ದಿನಗಳನ್ನು ನಟನೆಗೆ ಎತ್ತಿಡುವುದು ಕಷ್ಟದ ಕೆಲಸವೇನೂ ಅಲ್ಲವಲ್ಲ.
ಒಂದು ವೇಳೆ ನಿಮ್ಮಂತೆ ಆಮಿರ್ ಖಾನ್ ಅಥವಾ ಶಾರೂಖ್ ಖಾನ್ ಏನಾದರೂ “ಪಾಕಿಸ್ತಾನಿ ಟೆಲಿವಿಷನ್ ಶೋಗಳು ಭಾರತೀಯ ಶೋಗಳಿಗಿಂತ ಉತ್ತಮವಾಗಿರುತ್ತವೆ’ ಎಂದು ಹೇಳಿದರೆ, ಕೂಡಲೇ ಇಂಟರ್ನೆಟ್ ಟ್ರೋಲ್‌ಗಳು “ನೀವು ಪಾಕಿಸ್ತಾನಕ್ಕೆ ಹೋಗಿ’ ಎಂದು ಅವರ ವಿರುದ್ಧ ಆರ್ಭಟಿಸಲಾರಂಭಿಸುತ್ತಾರೆ. ಆದರೆ ಇದೇ ಮಾತನ್ನು ನೀವು ಹೇಳಿದಾಗ…..
ಅಯ್ಯೋ ನನ್ನ ಮೇಲೂ ಅವರೆಲ್ಲ ಮುರಿದುಕೊಂಡು ಬೀಳುತ್ತಾರಲಿ. ಆದರೆ 2014ರಲ್ಲೂ ನಾನು ಪಾಕಿಸ್ತಾನಿ ಶೋಗಳು ನನಗಿಷ್ಟ ಎಂದು ಹೇಳಿದ್ದೆ. ಇಮ್ರಾನ್ ಖಾನ್ ಒಳ್ಳೆಯ ಕ್ರಿಕೆಟರ್ ಅಂತ ನಾನು ಹೇಳಿದರೆ, ಅದರರ್ಥ ಸುನಿಲ್ ಗವಾಸ್ಕರ್ ಅವರನ್ನು ಕೆಟ್ಟ ಕ್ರಿಕೆಟರ್ ಅನ್ನುತ್ತಿದ್ದೇನೆ ಎಂದೇನು?
ಹಾಗಿದ್ದರೆ ಇಂಥ ಪರಿಸ್ಥಿತಿಯಲ್ಲಿ ಟ್ರೋಲ್‌ಗಳನ್ನು ಹೇಗೆ ನಿಭಾಯಿಸುತ್ತೀರಿ?
ಅವರನ್ನು ಕಡೆಗಣಿಸಬೇಕಷ್ಟೆ.
ಅಂತರ್ಜಾಲದಲ್ಲಿ ನಿಮ್ಮನ್ನು ಟೀಕಿಸುವವರನ್ನು ನಿಭಾಯಿಸುವ ವಿಷಯದಲ್ಲಿ ಒತ್ತಡ ಎದುರಿಸಬೇಕಾಗುತ್ತದಾ?
ಒತ್ತಡಾನಾ? ಟ್ವಿಟರ್ ಮತ್ತು ಟ್ವೀಟ್‌ಗಳಿಂದ? ರೀ, ನನಗೆ ಜೀವನದಲ್ಲಿ ಮಾಡೋಕ್ಕೆ ಬೇರೆ ಕೆಲಸಗಳಿವೆ.
ಅರುಂಧತಿ ರಾಯ್ ಬಗ್ಗೆ ಆ ರೀತಿ ಕಮೆಂಟ್ ಮಾಡಬಾರದಿತ್ತು (“ಅರುಂಧತಿ ರಾಯ್‌ರನ್ನು ಸೇನೆಯ ಜೀಪ್‌ಗೆ ಕಟ್ಟಿ’) ಅಂತ ನಿಮಗೆ ಅನಿಸುತ್ತಿದೆಯಾ?
ಅಂದು ಅವರ ಬಗ್ಗೆ ಏನು ಹೇಳಿದ್ದೆನೋ, ಈಗಲೂ ಅದನ್ನೇ ಪುನರುಚ್ಚರಿಸುತ್ತೇನೆ. ನನ್ನ ದೇಶವನ್ನು, ಸೇನೆಯನ್ನು ಯಾರೇ ಹೀನಾಯಿಸಲು ಮುಂದಾಗಲಿ, ಅದನ್ನು ಸಹಿಸಿಕೊಳ್ಳಲಾಗುವುದಿಲ್ಲ.
ಆದರೆ ನೀವು ಹಾಗೆ ಹೇಳುವುದು ದ್ವೇಷ ಭಾಷಣಕ್ಕೆ ಸಮವಲ್ಲವೇ?
ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ ಇದೆ ಎಂದರೆ, ನನಗೂ ಇದೆ. ಅರುಂಧತಿ ರಾಯ್ ಭಾರತೀಯ ಸೇನೆಯನ್ನು ಅವಮಾನಿಸುವ ಅನೇಕ ವೀಡಿಯೋಗಳಿವೆ. ಅವರು 2002ರ ಗುಜರಾತ್ ಗಲಭೆಯ ಬಗ್ಗೆ ಹೇಗೆ ಸುಳ್ಳು ಸುದ್ದಿ ಹರಡಿದರು ಎನ್ನುವುದನ್ನು ಸಾಕ್ಷಿ ಸಮೇತ ನಾನು ಟ್ವೀಟ್ ಮಾಡಿದ್ದೇನೆ.
ಆದರೆ ಸೇನೆಯು ಕಾಶ್ಮೀರಿ ನಾಗರಿಕನನ್ನು ಜೀಪಿಗೆ ಕಟ್ಟಿದ ವಿಷಯವಾಗಿ ಅರುಂಧತಿ ರಾಯ್ ಮಾತನಾಡಿದ್ದಾರೆನ್ನಲಾದ ವೀಡಿಯೋ ನಿಮ್ಮ ಬಳಿ ಇದೆಯೇ?
ಅರೆ, ಅರುಂಧತಿ ರಾಯ್ ವಿಷ ಮತ್ತು ಆ್ಯಸಿಡ್ ಕಾರುತ್ತಲೇ ಬಂದಿದ್ದಾರೆ. ನೋಡಿ ನಾವು ಮಾತನಾಡಿದರೆ ಅದು ಜನರನ್ನು ಒಡೆಯುವ ಕೆಲಸ ಎನ್ನುತ್ತೀರಿ. ಹಾಗಿದ್ದರೆ ಅವರು ಮಾಡುತ್ತಿರುವುದೇನು? ಸುಮ್ಮನೇ ಅರುಂಧತಿ ರಾಯ್‌ರ ಸಮರ್ಥನೆಗೆ ಪ್ರಯತ್ನಿಸಬೇಡಿ.
ನೀವು ಹಾಗೆ ಮಾತನಾಡುವುದರಿಂದ ಹಿಂಸೆಗೆ ಪ್ರಚೋದನೆ ಕೊಟ್ಟಂತಲ್ಲವೇ?
ಅದ್ಯಾವ ಆ್ಯಂಗಲ್‌ನಿಂದ ನಿಮಗೆ ನನ್ನ ಮಾತು ಹಿಂಸೆಗೆ ಪ್ರಚೋದನೆ ಕೊಡುವಂತೆ ಕಾಣಿಸುತ್ತದೆ? ಶೀಲಾ ರಶೀದ್ ಈ ರೀತಿ ಇನ್ನೊಬ್ಬ ವ್ಯಕ್ತಿಯನ್ನು ಜೀಪ್‌ಗೆ ಕಟ್ಟಬೇಕೆಂದು ಮಾತನಾಡಿದಾಗ ಯಾರೂ ಅದರ ಬಗ್ಗೆ ತಕರಾರು ಎತ್ತುವುದಿಲ್ಲ, ದಿಗ್ವಿಜಯ್ ಸಿಂಗ್ ಅವರು ಇದೇ ರೀತಿಯ ಹೇಳಿಕೆ ನೀಡಿದಾಗ ಅದು ವಿವಾದವಾಗುವುದಿಲ್ಲ.
ಶೀಲಾ ರಶೀದ್, ದಿಗ್ವಿಜಯ್ ಮಾತಿಗೆ ಜನರು ಪ್ರತಿಕ್ರಿಯೆ ತೋರಿಸಲಾರರೇನೋ, ಆದರೆ ಅವರು ಪರೇಶ್ ರಾವಲ್‌ರನ್ನು ಫಾಲೋ ಮಾಡಬಹುದಲ್ಲ?
ನೋಡಿ ಹೀಗೆ ವಿವಾದ ಸೃಷ್ಟಿಸುವರೆಲ್ಲರೂ ವೈಫಲ್ಯ ಅನುಭವಿಸಿದವರು. ಇವೆಲ್ಲ ಅವರುಗಳ ಸೃಷ್ಟಿಸಿದ ಅಜೆಂಡಾಗಳು. ಮೋದೀಜಿಯನ್ನು ಸೋಲಿಸಲು ಇವರೆಲ್ಲ ಬಯಸುತ್ತಿದ್ದಾರೆ, ಆದರೆ ಮೋದಿ ಒಂದಾದ ನಂತರ ಒಂದರಂತೆ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಹಾಗಿದ್ದಾಗ ಈ ವಿರೋಧಿಗಳೆಲ್ಲ ಏನು ಮಾಡಬೇಕು?ಈ ಕಾರಣ ಕ್ಕಾಗಿಯೇ ಅವರಲ್ಲಿ ಅಸಹನೆ ಹೆಚ್ಚುತ್ತಿದೆಯಷ್ಟೆ. ಈ ಅಸಹನೆಯಿಂದಾಗಿಯೇ ಅವರು ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.
ನೋಡಿ ಇನ್ನೊಬ್ಬರನ್ನು ಜೀಪಿಗೆ ಕಟ್ಟಿ ಎಂದು ಮಾತನಾಡುವಂಥ ವ್ಯಕ್ತಿ ನಾನಲ್ಲ. ಆದರೆ ಅರುಂಧತಿ ರಾಯ್ “ನಾಗಾಲ್ಯಾಂಡ್ ಮತ್ತು ಮಿಜೋರಾಮ್ ಭಾರತೀಯ ಆಕ್ರಮಣದಲ್ಲಿದೆ’ ಎಂದು ಹೇಳುವುದು ಸರಿಯೇ? ಅರುಂಧತೀಜಿ ಹೀಗೆ ಹೇಳಿದ ವೀಡಿಯೋ ನನ್ನ ಬಳಿ ಇದೆ.
ಪರೇಶ್ ರಾವಲ್, ನಟ, ರಾಜಕಾರಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.