![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 3, 2024, 5:36 AM IST
ಪ್ರಪಂಚದಾದ್ಯಂತ ಸದ್ಯ ಭಾರೀ ಸುದ್ದಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ನಿರ್ವಹಿಸುವ ಆ್ಯಪ್, ಉಪಕರಣಗಳ ಪಟ್ಟಿಗೆ ಇದೀಗ ಹೊಸದಾಗಿ “ಹ್ಯೂಮೇನ್ ಎಐ ಪಿನ್’ ಕೂಡ ಸೇರ್ಪಡೆಯಾಗಿದೆ. ಜಗತ್ತನ್ನೇ ನಿಬ್ಬೆರಗಾಗಿಸುವ ಚಾಟ್ ಜಿಪಿಟಿಯಂತಹ ತಂತ್ರಜ್ಞಾನವನ್ನು ಹೊರತಂದ “ಓಪನ್ ಎಐ’ ಕಂಪೆನಿಯ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ಮಾಲಕತ್ವದ “ಹ್ಯೂಮೇನ್’ ಎಐ ಸ್ಟಾರ್ಟ್‌ಅಪ್ ಈ “ಎಐ ಪಿನ್’ ಅನ್ನು ಅಭಿವೃದ್ಧಿಪಡಿಸಿದೆ. ಕಳೆದ ವರ್ಷದ ನವೆಂಬರ್ ಮಧ್ಯಭಾಗದಿಂದ ಪ್ರೀ ಆರ್ಡರ್ ಸ್ವೀಕರಿಸಲು ಆರಂಭಿಸಿದೆ. ಸಂಪೂರ್ಣವಾಗಿ ಎಐನಿಂದ ನಿರ್ವಹಿಸಲ್ಪಡುವ ವಿಶ್ವದ ಮೊಟ್ಟಮೊದಲ ಧರಿಸಬಹುದಾದ ಗ್ಯಾಜೆಟ್ ಇದಾಗಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಗ್ರಾಹಕರ ಕೈ ಸೇರಲಿದೆ ಎಂದು ಕಂಪೆನಿ ಘೋಷಿಸಿದೆ.
ಆ್ಯಪಲ್ ಕಂಪೆನಿಯ ಮಾಜಿ ಉದ್ಯೋಗಿಗಳಾದ ಬೆಥನಿ ಬೊಂಗಿಯಾನೊì ಮತ್ತು ಇಮ್ರಾನ್ ಚೌಧರಿ ಹ್ಯೂಮೇನ್ ಸ್ಟಾರ್ಟ್‌ಅಪ್‌ನ ಸಹಸಂಸ್ಥಾಪಕರಾಗಿದ್ದು, ಈ ಕಂಪೆನಿ ಎಐ ಪಿನ್ ಅನ್ನು ಸಂಶೋಧಿಸಿದೆ. ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಈ ಗ್ಯಾಜೆಟ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಭವಿಷ್ಯದಲ್ಲಿ ಇದು ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬೆಳವಣಿಗೆಗೆ ನಾಂದಿ ಹಾಡಲಿರುವುದಂತೂ ನಿಶ್ಚಿತ.
ಏನಿದು ಹ್ಯೂಮೇನ್ ಎಐ ಪಿನ್?
“ಹ್ಯೂಮೇನ್ ಎಐ ಪಿನ್’, ನಮ್ಮ ಬಟ್ಟೆಯ ಮೇಲೆ ಸುಲಭವಾಗಿ ಧರಿಸಬಹುದಾದಂತಹ ಒಂದು
ಅತ್ಯಾಧುನಿಕ ಗ್ಯಾಜೆಟ್. ಇದರಲ್ಲಿ ಮಾತಿನ ಮೂಲಕ ಆಜ್ಞೆಗಳನ್ನು ನೀಡಬಹುದು, ಆಡಿಯೋ ಕರೆಗಳನ್ನು
ಮಾಡಬಹುದು, ಮೇಸೆಜ್ ಕಳುಹಿಸಬಹುದು, ಹಿಂದಿ, ಅರೇಬಿಕ್, ಜಪಾನೀಸ್, ಕೊರಿಯನ್, ಚೈನೀಸ್
ಸಹಿತ ವಿವಿಧ ಭಾಷೆಗಳನ್ನು ಅನುವಾದಿಸಬಹುದು ಹಾಗೂ ಗೂಗಲ್ ಹೋಮ್, ಅಲೆಕ್ಸಾ,
ಸಿರಿಗಳಂತಹ ಸ್ಮಾರ್ಟ್ ಹೋಮ್ ಸಾಧನಗಳನ್ನು ಕೂಡ ನಿಯಂತ್ರಿಸಬಹುದು.
ಎಐ ಪಿನ್, ಆ್ಯಂಡ್ರಾಯ್ಡ ಸ್ಮಾರ್ಟ್ ಫೋನ್‌ಗಳಲ್ಲಿ ಬಳಸುವ “ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್’ ನಿಂದ ಕಾರ್ಯನಿರ್ವಹಿಸುತ್ತವೆಯಾದರೂ ನಿರ್ದಿಷ್ಟವಾಗಿ ಯಾವ ಸರಣಿಯ ಪ್ರೊಸೆಸರ್ ಎಂದು ಎಲ್ಲೂ ಬಹಿರಂಗಪಡಿಸಿಲ್ಲ. ಇದರಲ್ಲಿ ಲೇಸರ್ ಇಂಕ್ ಡಿಸ್‌ಪ್ಲೇ ತಂತ್ರಜ್ಞಾನವನ್ನು ಬಳಸಲಾಗಿದೆ. ಸರಳವಾಗಿ ಹೇಳುವುದಾದರೆ ಪ್ರೊಜೆಕ್ಟರ್‌ಗಳ ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು ಅದೇ ತೆರನಾಗಿ ಕಾರ್ಯ ನಿರ್ವಹಿಸುತ್ತದೆ. ಅದರಂತೆ ಈ ಗ್ಯಾಜೆಟ್‌ನಲ್ಲಿ ಸಮಯ, ದಿನಾಂಕ ಮತ್ತು ಹೆಚ್ಚಿನ ನೋಟಿಫಿಕೇಶನ್‌ಗಾಗಿ ನಮ್ಮ ಅಂಗೈಯನ್ನೇ ಮಿನಿ ಸ್ಕ್ರೀನ್ ಆಗಿ ಪರಿವರ್ತಿಸಬಹುದು. ಇಲ್ಲಿ ವರ್ಚುವಲ್ ಅಸಿಸ್ಟೆಂಟ್ ಮಹತ್ತರ ಪಾತ್ರ ವಹಿಸುತ್ತಿದ್ದು, ಇದಕ್ಕಾಗಿ ಅಸಿಸ್ಟೆಂಟ್ ಚ್ಯಾಟ್ ಜಿಪಿಟಿ, ಓಪನ್ ಎಐ ತಂತ್ರಜ್ಞಾನಗಳನ್ನು ಬಳಸಲಾಗಿದೆ.
ಈ ಎಐ ಪಿನ್‌ಗೆ ಮೈಕ್ರೋಸಾಫ್ಟ್ನ ಕೌÉಡ್ ಕಂಪ್ಯೂ ಟಿಂಗ್ ಶಕ್ತಿಯನ್ನೂ ಪಡೆಯಲಾಗಿದೆ. ಈ ತಂತ್ರಜ್ಞಾನದ ವರ್ಚುವಲ್ ಸಹಾಯಕವು ಬಳಕೆದಾರರ ಧ್ವನಿಯಲ್ಲೇ ಸಂದೇಶಗಳನ್ನು ರೂಪಿಸುವಲ್ಲೂ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಅದರ ಟಚ್ ಪ್ಯಾಡನ್ನು ಒತ್ತಿ ಹಿಡಿದರೆ ಎಐ ಮೂಲಕ ಯಾವುದೇ ಮಾಹಿತಿಗಳನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದು.
ಇದು ಕ್ಯಾಚ್ ಮಿ ಆ್ಯಪ್ ವೈಶಿಷ್ಟ್ಯವನ್ನು ಕೂಡ ಒಳಗೊಂಡಿದ್ದು, ಇ-ಮೇಲ್‌ಗಳನ್ನು ಸ್ಕ್ಯಾನ್ ಮಾಡಿ ಅವುಗಳ ಸಾರಾಂಶವನ್ನು ತತ್‌ಕ್ಷಣ ತಿಳಿಸುತ್ತದೆ. ಅಲ್ಲದೇ ವಿವಿಧ ಭಾಷೆಗಳಿಗೆ ಭಾಷಾಂತರಿಸಲು ನೇರ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತದೆ.
ಸುತ್ತಲೂ ಯಾವ ಸ್ಥಳೀಯ ಭಾಷೆಯನ್ನು ಮಾತನಾಡ ಲಾಗುತ್ತಿದೆ ಎಂಬುದನ್ನು ಇದು ಸ್ವತಃ ಪತ್ತೆ ಹಚ್ಚಿ ಸ್ಥಳೀಯ ಭಾಷೆಗೆ ಸಂದೇಶಗಳನ್ನು ಭಾಷಾಂತರಿಸುತ್ತದೆ. ಇದು ಹಲವು ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಇತರ ಭಾಷೆ ಅರಿಯದವರಿಗೂ ತಮ್ಮ ಸ್ಥಳೀಯ ಭಾಷೆಯಲ್ಲಿ ಸಂದೇಶ ತಲುಪಿಸುತ್ತದೆ. ಇದರಲ್ಲಿ ಟೈಪ್ ಹಾಗೂ ಸ್ವೆ„ಪ್ ಮಾಡುವ ಮೂಲಕ ಕರೆ ಸ್ವೀಕಾರ, ಧ್ವನಿ ನಿಯಂತ್ರಣ ಸಹಿತ ಇನ್ನಿತರ ಕಾರ್ಯಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಮಾತಿನಲ್ಲೇ ಕಮಾಂಡ್ ನೀಡಿ ಅಥವಾ ಎರಡು ಬೆರಳುಗಳಲ್ಲಿ ಡಬಲ್ ಟ್ಯಾಪ್ ಮಾಡಿ ನಮ್ಮ ಅಥವಾ ಇತರರ ಫೋಟೋ ತೆಗೆದುಕೊಳ್ಳಬಹುದು. ಕಮಾಂಡ್ ಮೂಲಕವೇ ಹಾಡುಗಳನ್ನೂ ಕೇಳಬಹುದಾಗಿದೆ. ಆದರೆ ಈ ಗ್ಯಾಜೆಟ್‌ನ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಗುಣಮಟ್ಟದ ಇಂಟರ್‌ನೆಟ್ ಸೌಲಭ್ಯ ಅತ್ಯವಶ್ಯವಾಗಿದೆ.
ಹ್ಯೂಮೇನ್ ಎಐ ಪಿನ್ ಗ್ಯಾಜೆಟ್ ಕೇವಲ ಸುಮಾರು 34 ಗ್ರಾಂ ತೂಕವಿದ್ದು, ಇದು 20 ಗ್ರಾಂನ ಬ್ಯಾಟರಿ ಬೂಸ್ಟರ್ ಅನ್ನು ಒಳಗೊಂಡಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಕೆಮರಾವಿದ್ದು, ಫೋಟೋ ಹಾಗೂ ಸೆಲ್ಫಿ ಜತೆಗೆ ಸಾಫ್ಟ್ವೇರ್ ಅಪ್‌ಡೇಟ್‌ನ ಬಳಿಕ ವೀಡಿಯೋ ಚಿತ್ರೀಕರಣವನ್ನೂ ಮಾಡಬಹುದಾಗಿದೆ.
ಸ್ಮಾರ್ಟ್‌ಫೋನ್‌ನ ಎಲ್ಲ ಸೌಲಭ್ಯಗಳೂ ಇವೆ
ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಒಂದು ಸ್ಮಾರ್ಟ್ ಫೋನ್ ಅನ್ನು ಗ್ರಾಹಕರು ಅಥವಾ ಬಳಕೆದಾರರು ಯಾವ ಕಾರಣಗಳಿಗೆಲ್ಲ ಉಪಯೋಗಿಸುತ್ತಾರೋ ಅವುಗಳಲ್ಲಿ ಬಹುತೇಕ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವಂತಹ ಸಾಮರ್ಥ್ಯ ಈ ಎಐ ಪಿನ್ ಗ್ಯಾಜೆಟ್‌ಗೆ ಇರುವುದರಿಂದ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ನ ಬದಲು ಇದನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೂ ಅಚ್ಚರಿಯೇನಿಲ್ಲ ಎಂಬುದು ತಂತ್ರಜ್ಞಾನ ವಿಶ್ಲೇಷಕರ ಅಭಿಪ್ರಾಯ. ಜನರು ಹೆಚ್ಚು ಬಯಸುವ ಹಾಗೂ ಬಳಸುವ ಕೆಮರಾ ಕೂಡ ಈ ಗ್ಯಾಜೆಟ್‌ನಲ್ಲಿದ್ದು, ಸೆಲ್ಫಿಗಳನ್ನು ಸುಲಭವಾಗಿ ಕ್ಲಿಕ್ಕಿಸಿಕೊಳ್ಳ ಬಹುದಾಗಿದೆ. ಅಸಿಸ್ಟಂಟ್ ಫೀಚರ್‌ಗಳೂ ಇರುವುದರಿಂದ ಮುಂಬರುವ ದಿನಗಳಲ್ಲಿ ಎಐನ ಇನ್ನಷ್ಟು ಸುಧಾರಿತ ತಂತ್ರಜ್ಞಾನಗಳನ್ನೂ ಇದಕ್ಕೆ ಅಳವಡಿಸಿದ್ದೇ ಆದಲ್ಲಿ ಇದು ಗಾತ್ರದಲ್ಲಿ ಚಿಕ್ಕದಾದ ಆದರೆ ಸಾಮರ್ಥ್ಯದಲ್ಲಿ ದೊಡ್ಡದಾದ ಗ್ಯಾಜೆಟ್ ಆಗಿ ಹೊರಹೊಮ್ಮಲಿದೆ.
ಎಲ್ಲೆಲ್ಲಿ ಲಭ್ಯವಿದೆ ಈ ಗ್ಯಾಜೆಟ್?
ಪ್ರಸ್ತುತ ಕಂಪೆನಿಯು ಕೇವಲ ಅಮೆರಿಕದ ವಿಳಾಸಗಳಿಂದ ಮಾತ್ರ ಮುಂಗಡ ಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ. ಇದು 2024ರ ಮೊದಲಾರ್ಧದಲ್ಲಿ ಗ್ರಾಹಕರ ಕೈ ಸೇರಲಿದೆ ಎಂದು ಹೇಳಲಾಗಿದೆ. ಆ ಬಳಿಕ ಹಂತಗಳಲ್ಲಿ ವಿದೇಶಗಳಿಂದಲೂ ಮುಂಗಡ ಆರ್ಡರ್‌ಗಳನ್ನು ಸ್ವೀಕರಿಸಿ, ಎಐ ಪಿನ್ ಪೂರೈಕೆ ಮಾಡಲು ಕಂಪೆನಿ ಚಿಂತನೆ ನಡೆಸಿದೆ.
ಬೆಲೆ ಎಷ್ಟು?
ಎಐ ಪಿನ್ ಗ್ಯಾಜೆಟ್ ಅನ್ನು ಖರೀ ದಿಸುವ ಸಂದರ್ಭ ಗ್ರಾಹಕರಿಗೆ ಎಕ್ಲಿಪ್ಸ್, ಲೂನಾರ್ ಮತ್ತು ಈಕ್ವಿನಾಕ್ಸ್ ಎಂಬ ಮೂರು ಆಯ್ಕೆಗಳು ಲಭ್ಯವಿರಲಿವೆ. ಎಕ್ಲಿಪ್ಸ್ ನ ಬೆಲೆ 699 ಡಾಲರ್(58 ಸಾವಿರ ರೂ.)ಹಾಗೂ ಲೂನಾರ್ ಮತ್ತು ಈಕ್ವಿನಾಕ್ಸ್ ಬೆಲೆ 799 ಡಾಲರ್( 66 ಸಾವಿರ ರೂ .)ಗಳೆಂದು ಕಂಪೆನಿ ಸದ್ಯ ನಿಗದಿಪಡಿಸಿದೆ. ಸೆಲ್ಯು ಲರ್ ಡೇಟಾ ಹಾಗೂ ಫೋನ್ ನಂಬರ್ ಪಡೆಯಲು ವಾರ್ಷಿಕ ಚಂದವಾಗಿ 24 ಡಾಲರ್(2000 ರೂ.) ಇಲ್ಲಿ ಪಾವತಿಸಬೇಕಾಗುತ್ತದೆ. ಈ ಸೇವೆಯು ಅಮೆರಿಕದಲ್ಲಿ ಗ್ರಾಹಕರಿಗೆ ವೈರ್‌ಲೆಸ್ ಡೇಟಾ ಮತ್ತು ಕರೆ ಸೌಲಭ್ಯವನ್ನು ಒದಗಿಸುತ್ತಿರುವ T&Mobile ಕಂಪೆನಿಯ ಮೂಲಕ ಲಭ್ಯವಿರುತ್ತದೆ.
ಅವನೀಶ್ ಭಟ್, ಸವಣೂರು
ಪೂಜಾ ಆರ್. ಹೆಗಡೆ, ಮೇಲಿನಮಣ್ಣಿಗೆ
You seem to have an Ad Blocker on.
To continue reading, please turn it off or whitelist Udayavani.