ಇದೊಳ್ಳೆ ರಾಮಾಯಣ ಅಲ್ಲ; ಇದುವೇ ನಾನು, ನನ್ನ ಕನಸು
Team Udayavani, Jul 23, 2017, 1:40 AM IST
ಆ ಊರು, ಈ ರಾಜ್ಯ, ಅಲ್ಲಿ ಶೂಟಿಂಗ್, ಇಲ್ಲಿ ಮೇಕಿಂಗ್ ಬಾಂಬೆ ಆಯ್ತು, ಹೈದರಾಬಾದ್ ಮುಗೀತು, ಚೆನ್ನೈ ಪೂರೈಸಿತು, ಕೊನೆಗೆ ಬೆಂಗಳೂರು ಬಂತು ಹೀಗೆ ಸದಾ ಕಾಲಿಗೆ ಗಾಲಿ ಹಾಕಿಕೊಂಡು ಸುತ್ತುತ್ತಿರುತ್ತಾರೆ ಬಹು ಭಾಷಾ ನಟ ಪ್ರಕಾಶ್ ರೈ. ಇದರ ಮಧ್ಯೆಯೂ ಚೆನ್ನೈ ತೋಟದ ಕರಿಬೇವನ್ನು, ಹೈದರಾ ಬಾದ್ ತೋಟದ ದಾಳಿಂಬೆಯನ್ನೂ ಪ್ರೀತಿಸುತ್ತಾರೆ. ಅಲ್ಲಿ ಮಳೆ ಬಂದರೆ ಇವರ ಮನಸ್ಸು ಗಾಂಧೀ ಬಜಾರ್. ಇವರ ಈ ಪಟ್ಟಿಗೆ ಈಗ ಇನ್ನೊಂದು ಸೇರ್ಪಡೆ ನೀರು. ಕೆರೆ ಅಭಿವೃದಿಟಛಿ, ಪುರಾತನ ಕೆರೆಗಳ ಭೇಟಿ ಒಟ್ಟಾರೆ ಜಲಜಾತ ಮಾಡುವ ಯೋಜನೆ ತಲೆಯಲ್ಲಿಟ್ಟುಕೊಂಡು ಇಡೀ ರಾಜ್ಯ ಸುತ್ತುತ್ತಿದ್ದಾರೆ. ಅದುವೇ “ನಾನು ಮತ್ತು ನನ್ನ ಕನಸು’ ಅಂತಲೇ ಮಾತಿಗೆ “ಒಗ್ಗರಣೆ’ ಹಾಕುತ್ತಾ ನೀಡಿದ ಸಂದರ್ಶನ ಇಲ್ಲಿದೆ.
ಈ ಕೃಷಿ, ನೀರು ಏಕೆ ಮುಖ್ಯ ಅನಿಸ್ತಿದೆ?
ಭೂಮಿ ಜೊತೆಗಿನ ಸಂಬಂಧ ಕಡಿದುಕೊಂಡಿದ್ದೀವಿ ಅದಕ್ಕೆ. ಈ ಒಡನಾಟವಿಲ್ಲದೇ ಇದ್ದರೆ ಯಾರ ಜತೆಗೂ ಬದುಕಲು ಆಗಲ್ಲ ಅಂತ ಗೊತ್ತಾಗಿದೆ. ಇವತ್ತು ಸಾವಿಗೆ ಗೌರವ ಇಲ್ಲದಿರುವುದರಿಂದ, ಹುಟ್ಟಿಗೆ ಅರ್ಥವಿಲ್ಲ. ಕಾರಣ ತುಂಡಾದ ಭೂಮಿ ಜೊತೆಗಿನ ಸಂಬಂಧ. ಹೆದ್ದಾರಿ ಆದ ಮೇಲೆ ರಿಂಗ್ ರೋಡುಗಳು ಹುಟ್ಟಿವೆ. ಹಳ್ಳಿಗಳು ಹತ್ತಿರವಾಗಿವೆ. ಸಂಬಂಧಗಳು ದೂರವಾಗಿವೆ. ಹಳ್ಳಿಗಳನ್ನು ಬೇಗ ತಲುಪಿಕೊಳ್ಳುತ್ತೇವೆ. ಆದರೆ ಸಂಬಂಧಗಳನ್ನಲ್ಲ.
ಜಲ ಹೋರಾಟದ ಹಿಂದೆ ಏನಾದರೂ…?
ಹØಹØಹØ… ಗೊತ್ತಾಯ್ತು ನಿಮ್ಮ ಉದ್ದೇಶ. ಖಂಡಿತ ಇಲ್ಲ. ನಾನು ಜಂಗಮ; ಸ್ಥಾವರ ಅಲ್ಲ. ರಾಜಕೀಯಕ್ಕೆ ಇಳಿದರೆ ಯಾವುದೋ ಒಂದು ರಾಜ್ಯಕ್ಕೆ ಸೀಮಿತವಾಗ್ತಿàನಿ. ನೀರಿನಂತೆ ಹರಿಯಬೇಕು ಅನ್ನೋದು ನನ್ನ ಆಸೆ. ಎಲ್ಲಕಡೆ , ಎಲ್ಲರಿಗೂ ಸಿಗಬೇಕು. ಭವಿಷ್ಯದ ಅಪಾಯವನ್ನು ತಿಳಿಸಬೇಕು. ಇವಿಷ್ಟೇ ಉದ್ದೇಶ. ಅದಕ್ಕೆ ಸಿಕ್ಕವರಿಗೆಲ್ಲಾ ನೀರು, ಪ್ರಕೃತಿ ಮಹತ್ವದ ಬಗ್ಗೆ ಹೇಳುತ್ತಿರುತ್ತೇನೆ. 100ಜನರಲ್ಲಿ ಹತ್ತು ಜನಕ್ಕೆ ಅರ್ಥವಾದರೂ ನನ್ನ ಬದುಕು ಸಾರ್ಥಕ.
ಈ ವ್ಯಾಮೋಹಕ್ಕೆ ಕಾರಣ?
ಮೊದಲಿಂದಲೂ ಗಿಡ, ಮರಗಳು ಇಷ್ಟ. ಕಾಡು ಅಂದರೆ ಪ್ರಾಣ. ಕೊಡೈಕೆನಾಲ್‌ನಲ್ಲಿ ಜಾಗ ಇದೆ. ಕಾಡು ಬೆಳೆಯಲಿ ಆ ಹಾಗೇ ಬಿಟ್ಟುಬಿಟ್ಟಿದ್ದೇನೆ. ದಟ್ಟ ಮರಗಳು ಬೆಳೆದಿವೆ. ಪಕ್ಷಿಗಳು ಮನೆ ಮಾಡಿವೆ. ಆಗಾಗ ಆನೆಗಳು ಬರ್ತವೆ. ಹೋಗ್ತವೆ. ದೂರದಲ್ಲಿ ನಿಂತು ನೋಡಿಬರ್ತೀನಿ. ಅದ್ಯಾಕೋ ಹಳ್ಳಿಗಳನ್ನು ನೋಡ್ತಾ ಇಲ್ಲ ಅನಿಸುತ್ತಿದೆ. ಮೊದಲು ಊರಿಗೆ ಹೋಗಬೇಕಾದರೆ ತಿಂಡಿ ಚೆನ್ನಾಗಿದೆ ಅಂತ ಅಲ್ಲೆಲ್ಲೋ ನಿಲ್ಲಿಸುತ್ತಿದ್ದೆವು, ಇನ್ನೊಂದು ಕಡೆ ಎಳನೀರು ಚೆನ್ನಾಗಿದೆ ಕುಡೀತಿದ್ದೆವು. ಜನ ಸಿಗೋರು. ಈಗ ಆಗಾಗುತ್ತಿಲ್ಲ. ಅದಕ್ಕೆ ಎಲ್ಲಿಗೇ ಹೋದರು ಸಾಧ್ಯವಾದಷ್ಟು ರೈಲು, ಬಸ್‌ನಲ್ಲಿ ಪ್ರಯಾಣ ಮಾಡೋಣ ಅಂತ ತೀರ್ಮಾನ ಮಾಡಿದ್ದೀನಿ.
ಕೃಷಿಯಿಂದ ಏನು ಕಲಿತಿರಿ?
ಸಾಮರಸ್ಯ. ಸ್ಪಂದಿಸೋ ಗುಣ. ಬೆರೆಯುವ ಗುಣ.
ಈ ಕ್ಷೇತ್ರದಲ್ಲಿ ಏನು ಮಾಡಬೇಕು ಅಂದು ಕೊಂಡಿದ್ದೀರಿ?
ಯಾವುದನ್ನು ಪಡೆದುಕೊಳ್ತಿವೋ ಹಾಗೇ ಕೊಡುವ ಜವಾಬ್ದಾರಿಯೂ ನಮ್ಮ ಮೇಲೆ ಇದೆ. ನಾವು ಬರೀ ಪಡೀತಾ ಇದ್ದೀವಿ. ಕೊಡ್ತಾ ಇಲ್ಲ. ಜನ ದೀಪಕ್ಕೆ ನಮಸ್ಕಾರ ಮಾಡಿದರೆ, ಕವಿಯೊಬ್ಬರು ಬೆಂಕಿ ಕಡ್ಡಿಗೆ ನಮಸ್ಕಾರ ಮಾಡಿದರು. ಏಕೆ ಅಂತ ಕೇಳಿದರೆ ಹೊತ್ತುವುದಕ್ಕಿಂತ, ಹೊತ್ಸೋದು ದೊಡ್ಡದಲ್ಲವಾ ಅಂದರು. ಎಂಥಾ ಮಾತು ! ನಾವು ಕೂಡ ಹೊತ್ತಿಸುವ ಹಣತೆಗಳಾಗಬೇಕು. ಆ ಕೆಲ್ಸ ಮಾಡೋಕೆ ಹೊರಟಿದ್ದೀನಿ ಅಷ್ಟೇ. ನಮ್ಮಲ್ಲಿ ಬೇಂದ್ರೆ, ಕಾರಂತರು, ಲಂಕೇಶ್, ತೇಜಸ್ವಿ ಹೀಗೆ ಅನೇಕರು ಹಣತೆಗಳಂತೆ ಬದುಕಿದರು. ದೀಪ ಹೊತ್ತಿಸಿ ಹೋದರು. ಅವೆಲ್ಲ ಈಗ ಬೆಳಗುತ್ತಿವೆ.
ತೇಜಸ್ವಿ ನಿಮ್ಮ ಮೇಲೆ ಪ್ರಭಾವ ಬೀರಿದಿರಾ?
ಇರುವುದೆಲ್ಲವೂ ತೊರೆದು ಬದುಕಿದವರು ತೇಜಸ್ವಿ. ಹೈದರಾಬಾದ್, ಚೆನ್ನೈನಲ್ಲಿ ನನ್ನ ಮನೆಗಳಿವೆ. ಎಲ್ಲವೂ ನಗರ ಒಳಗಡೆ ಇಲ್ಲ. ಹೊರಗಡೆಯೇ. ತೇಜಸ್ವಿಗೆ ಸಾಧ್ಯವಾದದ್ದು ನಮಗೇಕೆ ಆಗೋದಿಲ್ಲ? ಪ್ರಯತ್ನ ಮಾಡಬೇಕು. ಅಲ್ವೇ !
ಬದುಕಿನ ಗುರಿ ಏನು?
ಹೋಗುವುದರೊಳಗೆ ಪ್ರಕೃತಿ ಈ ತನಕ ಪುಕ್ಕಟ್ಟೆ ಕೊಟ್ಟ ಆಕ್ಸಿಜನ್ ವಾಪಸ್ಸು ಕೊಟ್ಟು ಹೋಗ್ತಿàನಿ. ಅದಕ್ಕೆ ಲಕ್ಷ ಮರಗಳನ್ನು ಬೆಳೆಸಿದ್ದೀನಿ. ಇನ್ನೊಂದಷ್ಟು ಎಕರೆಗಳಷ್ಟು ಭೂಮಿಯನ್ನು ಫಲವತ್ತಾಗಿಸಬೇಕು. ಅದನ್ನು ಮಾಡಿ ಹೋಗ್ತಿàನಿ. ಒಟ್ಟಾರೆ ನಮ್ಮನ್ನು ಕಾಪಾಡಿದ ಪ್ರಕೃತಿಗೆ ನಮ್ಮ ಋಣಸಂದಾಯ ಮಾಡಬೇಕು ಅಷ್ಟೇ! ಎಲ್ಲರೂ ಹೀಗೆ ಮಾಡಿದರೆ ಚನ್ನ ಅಲ್ವೇ!
ಇಲ್ಲಿಗೆ ಮಾತು ಸಾಕು. ಪ್ರತಿ ಭಾನುವಾರ ಸಂಪಾದಕೀಯ ಪೇಜಿಗೆ ಬನ್ನಿ. ಸಿಕ್ತೀನಿ. ಹೊಸ ವಿಚಾರ, ಹೊಸ ಆಲೋಚನೆಯೊಂದಿಗೆ ಹಾಜರಾಗ್ತಿನಿ. ಒಂದಷ್ಟು ವಾರಗಳ ಕಾಲ “ಇರುವುದೆಲ್ಲವ ಬಿಟ್ಟು’ ಹೊಸತೇನಾದರು
ಮಾತಾಡೋಣ. ಏನಂತೀರಿ…?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.