ಅಫ್ಘಾನಿಸ್ಥಾನದಲ್ಲಿ ಕಳೆದ ಆ ದಿನಗಳು…
Team Udayavani, Jul 5, 2017, 1:54 AM IST
ಕೆಲ ದಿನಗಳ ಹಿಂದೆ ಅಫ್ಘಾನಿಸ್ಥಾನದ ಸಲ್ಮಾ ಅಣೆಕಟ್ಟೆಯ ಬಳಿಯ ಚೆಕ್‌ಪೋಸ್ಟ್‌ನ ಮೇಲೆ ತಾಲಿಬಾನಿ ಉಗ್ರರು ದಾಳಿ ಮಾಡಿದ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಭಾರತ-ಅಫ್ಘಾನಿಸ್ಥಾನದ ಸ್ನೇಹ ಸಂಕೇತವೆನಿಸಿರುವ ಈ ಅಣೆಕಟ್ಟೆ ನಿರ್ಮಾಣದಲ್ಲಿ ಆರು ವರ್ಷಗಳ ಕಾಲ ಶ್ರಮಿಸಿದ ಶಿವಮೊಗ್ಗ ಮೂಲದ ಮಹೇಶ್ ಶೆಟ್ಟಿಯವರು, ಈ ಹಿನ್ನೆಲೆಯಲ್ಲಿ ಅಣೆಕಟ್ಟೆ ನಿರ್ಮಾಣದ ದಿನಗಳನ್ನು ನೆನಪಿಸಿಕೊಂಡಿದ್ದಾರೆ…
2009. ಆಗಷ್ಟೇ ಬಿ.ಕಾಂ ಮುಗಿಸಿದ್ದೆ. ಬೆಂಗಳೂರಿನ ಕನ್‌ಸ್ಟ್ರಕ್ಷನ್ ಕಂಪೆನಿಯಲ್ಲಿ ಸಂದರ್ಶನ ಮುಗಿಸಿ ನಂತರ ಹೊರಟಿದ್ದೇ ಅಫ್ಘಾನಿಸ್ಥಾನದ ಸಲ್ಮಾ ಅಣೆಕಟ್ಟೆ ನಿರ್ಮಾಣದ ಹಣಕಾಸು ವಿಭಾಗದ ನಿರ್ವಹಣೆಗೆ. ಅಫ್ಘಾನಿಸ್ಥಾನದ ಆ ಪ್ರದೇಶಗಳ ಬಗ್ಗೆ ಮಾಧ್ಯಮಗಳಲ್ಲಿ ಕಂಡು ಭಯಗೊಂಡಿದ್ದೆ. ಆದರೆ, ಒಂದು ದಿನ ನಾನೇ ಅಲ್ಲಿಗೆ ಹೋಗುವ ಸಂದರ್ಭ ಎದುರಾಗುತ್ತದೆ ಎಂದು ಕನಸುಮನಸಿನಲ್ಲಿಯೂ ಭಾವಿಸಿರಲಿಲ್ಲ. ಹೋಗುವುದು ಅನಿವಾರ್ಯ ಕೂಡ ಆಗಿತ್ತು. ಹೇಗೋ ಧೈರ್ಯ ಮಾಡಿ ಹೊರಟೆ. ನನ್ನಂತೆ ಹತ್ತಾರು ವಿಭಾಗಗಳಲ್ಲಿ ಕೆಲಸ ಮಾಡಲು ಭಾರತದ ವಿವಿಧ ಮೂಲೆಗಳಿಂದ ಸುಮಾರು 120 ಮಂದಿ ಬಂದಿದ್ದರು. ಈ ಪೈಕಿ ಕರ್ನಾಟಕದವರೇ ಸುಮಾರು 20 ಮಂದಿ ಇದ್ದೆವು. ಇಲ್ಲಿಂದ ಅಲ್ಲಿಗೆ ಹೋಗಿದ್ದೇ ಒಂದು ರೋಚಕ ಅನುಭವ. ಬೆಂಗಳೂರಿನಿಂದ ದೆಹಲಿ. ಅಲ್ಲಿಂದ ಕಾಬೂಲ್. ನಂತರ ತಲುಪಿದ್ದು ಹೆರಾತ್ ವಿಮಾನ ನಿಲ್ದಾಣಕ್ಕೆ. ಅಲ್ಲಿಂದ ಸುಮಾರು 180 ಕಿ.ಮೀಟರ್ ದೂರವಿರುವ ಚಿಸ್ತ್-ಇ-ಷರೀಫ್ ಜಿಲ್ಲೆಯ ಸಲ್ಮಾ ಅಣೆಕಟ್ಟೆಗೆ ವಾಹನದಲ್ಲಿ ಕರೆದೊಯ್ದರು. ಆ ವೇಳೆ ನಮ್ಮ ಹಿಂದೆ ಮತ್ತು ಮುಂದಿನ ವಾಹನಗಳಲ್ಲಿ ಭಾರೀ ಪ್ರಮಾ ಣದ ಶಸ್ತ್ರಾಸ್ತ್ರಗಳೊಂದಿಗೆ ಸೈನಿಕರಿದ್ದರು. ಒಂದೇ ರೀತಿಯ ಹತ್ತಾರು ವಾಹನಗಳ ಪೈಕಿ ಒಂದರಲ್ಲಿ ನಮ್ಮನ್ನು ಕರೆದೊಯ್ದರು. ನಾಲ್ಕೈದು ವಾಹನಗಳು ಖಾಲಿ ಇದ್ದಿರಬಹುದು. ಯಾವ ವಾಹನ ಖಾಲಿ ಎಂಬುದೇ ತಿಳಿಯುತ್ತಿರಲಿಲ್ಲ. ನಮ್ಮ ಮುಂದೆ ಅಫ್ಘಾನಿಸ್ಥಾನದ ಸೇನಾ ವಾಹನ ಇತ್ತು. ರಸ್ತೆಯ ಎರಡೂ ಕಡೆಗಳಲ್ಲಿ ನೂರಾರು ಸೇನಾ ವಾಹನಗಳು, ಸಾವಿರಾರು ಸೈನಿಕರು ನಿಂತಿದ್ದರು. ಇದನ್ನೆಲ್ಲ ನೋಡಿ ಒಂದು ಕ್ಷಣ ಭಯವಾಯಿತು. ವಾಪಸ್ ಭಾರತಕ್ಕೆ ಹೋಗುವುದಿಲ್ಲ ಎಂದುಕೊಂಡೆವು!
40 ವರ್ಷಗಳ ಹಿಂದೆಯೇ ರಷ್ಯಾ ಈ ಅಣೆಕಟ್ಟೆ ನಿರ್ಮಾಣ ಮಾಡಲು ಮುಂದಾಗಿತ್ತು ಎಂಬುದು ಯೋಜನೆಯ ಸ್ಥಳಕ್ಕೆ ಹೋದಾಗ ತಿಳಿಯಿತು. ಆ ಸಂದರ್ಭದಲ್ಲಿ ನಾಗರಿಕ ಯುದ್ಧ ನಡೆದಿದ್ದರಿಂದ ಕೆಲಸ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಕಾಲುವೆ ಕೆಲಸ ಮಾತ್ರ ಮುಕ್ತಾಯಗೊಂಡಿತ್ತು. ಆ ಕಾಲದಲ್ಲೇ ರಷ್ಯಾ ಅತ್ಯಾಧು ನಿಕ ಯಂತ್ರಗಳು, ವಾಹನಗಳನ್ನು ಬಳಕೆ ಮಾಡಿಕೊಂಡಿತ್ತು ಎನ್ನುವುದಕ್ಕೆ ನಮಗೆ ಅಲ್ಲಿ ಕಂಡ ಕುರುಹುಗಳೇ ಸಾಕ್ಷಿ.
ನಾವು ಅಲ್ಲಿ ಸಿಕ್ಕ ಎಷ್ಟೋ ಉಪಕರಣಗಳನ್ನು ಅಣೆಕಟ್ಟೆ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡೆವು. ಹೇಗೋ ಅಮೆರಿಕ ಮತ್ತು ಸ್ಥಳೀಯ ಭದ್ರತಾ ಪಡೆಗಳ ಭಾರೀ ಬಂದೋಬಸ್ತ್ ನಡುವೆ ಭಾರತದ ಕನಸನ್ನು ನನಸು ಮಾಡಿದೆವು. ಸಲ್ಮಾ ಎಂಬುದು ಒಂದು ಹಳ್ಳಿ. ಇದೇ ಹೆಸರನ್ನು ಜಲಾಶಯಕ್ಕೆ ಇಡಲಾಗಿದೆ. ನಮ್ಮ ಸಂಸ್ಥೆಯ ಮುಖ್ಯ ಕಚೇರಿಯನ್ನು ಜಲಾಶಯ ದಿಂದ ಕೆಲವೇ ಕಿಲೋಮೀಟರ್ ದೂರಲ್ಲಿರುವ ಚಿಸ್ತ್- ಇ-ಷರೀಫ್ನಲ್ಲಿ ತೆರೆಯಲಾಗಿತ್ತು. ಇದು ಕೂಡ ರಷ್ಯಾದವರು ನಿರ್ಮಿಸಿ ಕೊಂಡಿದ್ದ ಕಟ್ಟಡ. ಅದನ್ನೆ ಮರು ನಿರ್ಮಾಣ ಮಾಡಿ ಬಳಕೆ ಮಾಡಿಕೊಂಡಿದ್ದೆವು. ಇನ್ನು ಜಲಾಶಯದಿಂದ ಸುಮಾರು 100 ಮೀಟರ್ ದೂರದಲ್ಲಿ ನಮ್ಮ ಕ್ವಾಟ್ರರ್ಸ್‌ಗಳಿದ್ದವು.
ಪ್ರಮುಖವಾಗಿ ಪಾಕಿಸ್ತಾನ ಮತ್ತು ಇರಾನ್‌ಗೆ ಜಲಾಶಯ ನಿರ್ಮಾಣ ಆಗುವುದು ಇಷ್ಟವಿರಲಿಲ್ಲ. ಹಾಗಾಗಿ ಆಗಾಗ ದಾಳಿಗೆ ಸಂಚು ರೂಪಿಸುತ್ತಿದ್ದವು. ಆದರೆ, ಸ್ಥಳೀಯರ ಬೆಂಬಲ ನಮಗಿತ್ತು. ಈ ಜಲಾಶಯದಿಂದ ವಿದ್ಯುತ್, ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುತ್ತಿತ್ತು. ನಮ್ಮೊಂದಿಗೆ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದರು. ಇದರಲ್ಲಿ ರೈತರು ಸಹ ಇದ್ದರು. ಇವರೆಲ್ಲ ಉಗ್ರರ ಬಗ್ಗೆ ಒಂದು ಸಣ್ಣ ಮಾಹಿತಿ ಸಿಕ್ಕರೂ ಭದ್ರತಾ ಪಡೆಗಳಿಗೆ ಕೂಡಲೇ ಮಾಹಿತಿ ನೀಡುತ್ತಿದ್ದರು. ಆ ಪ್ರದೇಶದಲ್ಲಿ ತಾಲಿಬಾನಿಗಳ ಕಿತ್ತಾಟಕ್ಕಿಂತ ಸ್ಥಳೀಯ ಸಂಘಟನೆಗಳ ಒಳ ಜಗಳವೇ ಅಧಿಕವಾಗಿತ್ತು. ನಿತ್ಯ ಗುಂಡಿನ ಸದ್ದು, ರಾಕೆಟ್, ಶೆಲ್‌ಗಳ ಸಿಡಿತ ಕೇಳುತ್ತಿತ್ತು. ಕೆಲವೊಮ್ಮೆ ಕಣ್ಣ ಮುಂದೆಯೇ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಬಹುತೇಕ ಬಾರಿ ಹೆರಾತ್ ಮತ್ತು ಸಲ್ಮಾ ನಡುವಿನ ಒಬೆ ಎಂಬಲ್ಲಿ ಹೆಚ್ಚಾಗಿ ಉಗ್ರರ ಹತ್ಯೆ-ದಾಳಿಯಾಗುತ್ತಿದ್ದವು. ಈ ಸುದ್ದಿಯನ್ನೆಲ್ಲ ನಾವು ಸ್ಥಳೀಯ ಟುಲೋ ಮತ್ತು ತಕ್ವಾಜ್ ಎಂಬ ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತಿದ್ದೆವು. ಕೆಲವೊಮ್ಮೆಯಂತೂ ಬುಲೆಟ್‌ಗಳು ನಾವು ಕೆಲಸ ಮಾಡುವ ಸ್ಥಳದಲ್ಲೇ ಸಿಗುತ್ತಿದ್ದವು! ಅದನ್ನೇ ಒಡೆದು ಅದರೊಳಗಿನ ಪುಡಿಯಿಂದ ಬೆಂಕಿ ಹಾಕಿಕೊಂಡು ರಾತ್ರಿ ಕಳೆದದ್ದು ನೆನಪಿದೆ. ಸ್ಥಳೀಯ ಸಂಘಟನೆಯೊಂದರ ಮುಖಂಡ ಮುಲ್ಲಾ ಮುಸ್ತಫಾ ಎಂಬ ವ್ಯಕ್ತಿ ಆಗಾಗ್ಗೆ ದಾಳಿ ನಡೆಸುತ್ತಿದ್ದ. ಸಾಕಷ್ಟು ಬಾರಿ ಹುತಾತ್ಮರಾದ ಯೋಧರ ಶವವನ್ನು ವಾಹನಗಳಲ್ಲಿ ಹಾಕಿಕೊಂಡು ಹೋಗುವುದನ್ನು ನೋಡಿದ್ದೇವೆ. ಇದನ್ನೆಲ್ಲ ಕಂಡು ಬಹಳ ನೋವು ಮತ್ತು ಅದರ ಜೊತೆಗೆ ಭಯವೂ ಆಗುತ್ತಿತ್ತು.
ಕ್ಷರ್ಣಾರ್ಧದಲ್ಲಿ ಬಚಾವ್: ಆರಂಭದ ಎರಡು ವರ್ಷ ಸಲ್ಮಾದಿಂದ ಹೆರಾತ್‌ಗೆ ರಸ್ತೆ ಮಾರ್ಗವಾಗಿಯೇ ಸಂಚರಿಸುತ್ತಿದ್ದೆವು. ಆದರೆ, ವಿರೋಧಿಗಳ ದಾಳಿ ಹೆಚ್ಚಾಗುತ್ತಿದ್ದಂತೆ ನಮಗೆ ಭಾರೀ ಭದ್ರತೆ ಕೊಡಲಾಗಿತ್ತು. ಕಾರ್ಯನಿಮಿತ್ತ ಹೆರಾತ್‌ಗೆ ಹೋಗಬೇಕಾದರೂ ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಹೋಗುತ್ತಿದ್ದೆವು. ಒಮ್ಮೆ ನಮ್ಮ ಸಿಬ್ಬಂದಿ ಪೈಕಿ ಒಬ್ಬರಿಗೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆದರೆ ಮಾರ್ಗ ಮಧ್ಯೆ ಉಗ್ರರು ದಾಳಿ ನಡೆಸಿದರು. ನಮ್ಮ ಭದ್ರತಾ ಸಿಬ್ಬಂದಿ ಮರು ದಾಳಿ ನಡೆಸಿ ನಮ್ಮನ್ನೆಲ್ಲ ರಕ್ಷಣೆ ಮಾಡಿದರು. ಆಗ ಕಾರಿನ ನಾಲ್ಕೈದು ಕಡೆ ಗುಂಡುಗಳು ಹೊಕ್ಕಿದ್ದವು. ನಾನು ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದೆ. ಭಾರತದಿಂದ ಕಳುಹಿಸುತ್ತಿದ್ದ ಹಣವನ್ನು ಹೆರಾತ್‌ನಲ್ಲಿ ಬದಲಿಸಿಕೊಂಡು ಡಾಲರ್ ಅಥವಾ ಅಫ್ಘಾನಿ ರೂಪದಲ್ಲಿ ಪಡೆದುಕೊಳ್ಳುತ್ತಿದ್ದೆ. ಹೆರಾತ್‌ನಲ್ಲಿ ಹಣ್ಣು ಅಥವಾ ಮಾರುಕಟ್ಟೆಗೆ ಹೋಗಬೇಕಾದರೆ ಭದ್ರತಾ ಪಡೆಗಳು ಭಾರೀ ಭದ್ರತೆ ಮೂಲಕ ಕರೆದೊಯ್ಯುತ್ತಿದ್ದರು. ನಾಲ್ಕು ಮಂದಿ ಎ.ಕೆ.47 ಗನ್ ಹಿಡಿದ ಯೋಧರು ನಮ್ಮೊಂದಿಗೆ ಬರುತ್ತಿದ್ದರು. ನಂತರದ ದಿನಗಳಲ್ಲಿ ಗಣ್ಯರಂತೆ ನಮಗೂ ರಕ್ಷಣೆ ನೀಡಲಾರಂಭಿಸಿದರು. ನಮ್ಮ ವಾಹನದೆದುರು ಇರುತ್ತಿದ್ದ ಜೀಪ್‌ಗೆ ಗನ್ ಫಿಕ್ಸ್ ಮಾಡಲಾಗಿತ್ತು. ಅದು 2011 ಇರಬಹುದು. ಭಾರತ-ಇಂಗ್ಲೆಂಡ್ ಕ್ರಿಕೆಟ್ ನಡೆಯುತ್ತಿದ್ದ ಸಂದರ್ಭವೆನಿಸುತ್ತದೆ. ಭದ್ರತಾ ಮುಖ್ಯಸ್ಥ ಗುಲುಖಾನ್ ಅವರ ಮೇಲಿನ ವೈಯಕ್ತಿಕ ದ್ವೇಷದಿಂದಾಗಿ ಉಗ್ರರು ನಮ್ಮ ಕ್ವಾಟ್ರರ್ಸ್‌ಗಳತ್ತ ರಾಕೆಟ್ ದಾಳಿ ನಡೆಸಿದರು. ಒಂದು ರಾಕೆಟ್ ಕ್ವಾಟ್ರರ್ಸ್ ಪಕ್ಕದ ಟ್ಯಾಂಕರ್‌ವೊಂದಕ್ಕೆ ಬಿತ್ತು. ಮತ್ತೂಂದು ಗೋಡೆಗೆ ಬಿತ್ತು. ಒಂದು ಕ್ಷಣಕ್ಕೆ ಪ್ರಾಣ ಹೋದಂಥ ಅನುಭವ ನಮಗೆಲ್ಲ! ಈ ಮಧ್ಯೆ ಮೇಘಸ್ಫೋಟವೂ ಸಂಭವಿಸಿ ನಿರ್ಮಿಸಿದ್ದ ಅರ್ಧ ಡ್ಯಾಂ ಕೂಡ ನಾಶಗೊಂಡಿತ್ತು…
30 ವರ್ಷ ನಿರ್ವಹಣೆ: ಅಫ್ಘಾನಿಸ್ಥಾನ -ಭಾರತದ ಸ್ನೇಹ ಸಂಬಂಧವಾಗಿ ನಿರ್ಮಿಸಿರುವ ಸಲ್ಮಾ ಜಲಾಶಯವನ್ನು 30 ವರ್ಷಗಳ ಕಾಲ ಭಾರತೀಯರೇ ನಿರ್ವಹಿಸಬೇಕೆಂಬ ಒಪ್ಪಂದವಾಗಿದೆ. ಈಗಲೂ ಸುಮಾರು 20ಕ್ಕೂ ಅಧಿಕ ಮಂದಿ ಜಲಾಶಯದ ಹತ್ತಿರದಲ್ಲೇ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ದಾಳಿಯ ಮೂನ್ಸೂಚನೆ ಅರಿಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿರಬಹುದು. ಹೀಗಾಗಿ, ಅಣೆಕಟ್ಟಿನ ಸನಿಹದ ಪ್ರದೇಶದಲ್ಲಿ ದಾಳಿಯಾಗಿದೆ. ಒಟ್ಟಾರೆ ನಾವು ನಿರ್ಮಿಸಿದ ಜಲಾಶಯ ಸಾವಿರಾರು ವರ್ಷ ಸುರಕ್ಷಿತವಾಗಿರಲಿ ಎಂದು ಹಾರೈಸುತ್ತೇನೆ.
ಅಡುಗೆ ಭಟ್ಟರ ನೆನಪು: 2009ರಲ್ಲಿ ನಮ್ಮೊಂದಿಗೆ ಉಡುಪಿ ಮೂಲದ ಅಡುಗೆ ಭಟ್ಟರಾದ ರತ್ನಾಕರ್ ಶೇರಿಗಾರ್ ಎನ್ನುವವರು ಬಂದಿದ್ದರು. ಆದರೆ, ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಒಂದು ನೋವು ನಮಗೆ ಕೊನೆವರೆಗೂ ಕಾಡುತ್ತದೆ.
(ನಿರೂಪಣೆ: ಮೋಹನ್ ಭದ್ರಾವತಿ)
ಮಹೇಶ್ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.