ಭಾರತೀಯ ಕ್ರೀಡಾಸಂಸ್ಥೆಗಳಿಗೆ ನಿಷೇಧದ ಭೀತಿ: ಎಐಎಫ್ಎಫ್,ಹಾಕಿ ಇಂಡಿಯಾ,ಐಒಎಗಳು ಎಡವಿದ್ದೆಲ್ಲಿ?
Team Udayavani, Aug 18, 2022, 6:20 AM IST
ವಿಶ್ವ ಕ್ರೀಡಾರಂಗದಲ್ಲಿ ಭಾರತೀಯ ಕ್ರೀಡಾಪಟುಗಳ ಗುಣಮಟ್ಟ ಸುಧಾರಿಸುತ್ತಿರುವ ನಡುವೆಯೇ, ಆತಂಕಕಾರಿ ಸುದ್ದಿಗಳೂ ಶುರುವಾಗಿವೆ. ಫಿಫಾದಿಂದ ಭಾರತೀಯ ಫುಟ್‌ಬಾಲ್ ಸಂಸ್ಥೆ (ಎಐಎಫ್ಎಫ್) ನಿಷೇಧಕ್ಕೊಳಗಾಗಿದೆ. ಹಾಕಿ ಇಂಡಿಯಾವೂ ಆತಂಕದಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯೇ ನಿಷೇಧಕ್ಕೊಳಗಾಗುವ ಭೀತಿಯಲ್ಲಿದೆ. ಇನ್ನು ಟೇಬಲ್ ಟೆನಿಸ್ ಒಕ್ಕೂಟ ಆಡಳಿತಾಧಿಕಾರಿಗಳ ನಿಯಂತ್ರಣದಲ್ಲಿದೆ. ಹಿಂದೆ ಬಿಸಿಸಿಐ ಕೂಡ ಇದೇ ಸನ್ನಿವೇಶವನ್ನು ಎದುರಿಸಿತ್ತು. ಇದು ಹೀಗೆಯೇ ಮುಂದುವರಿದರೆ ಕ್ರೀಡಾಪಟುಗಳು ಅತಂತ್ರ ಸ್ಥಿತಿಗೆ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವ್ಯಾವ ಕ್ರೀಡಾಸಂಸ್ಥೆಗಳ ಸ್ಥಿತಿ ಹೇಗಿದೆಯೆನ್ನುವುದರ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಭೈಚುಂಗ್ ಭುಟಿಯ ಎಐಎಫ್ಎಫ್ ಕೈಹಿಡಿಯುತ್ತಾರಾ?
ಭಾರತ ಫುಟ್ ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರರಲ್ಲಿ ಭೈಚುಂಗ್ ಭುಟಿಯ ಒಬ್ಬರು. ಅವರು ನಿಷೇಧಿತ ಎಐಎಫ್ಎಫ್ (ಭಾರತ ಫುಟ್ ಬಾಲ್ ಸಂಸ್ಥೆ)ನ ಚುಕ್ಕಾಣಿ ಹಿಡಿಯಲಿ ಎನ್ನುವುದು ಫುಟ್ ಬಾಲ್ ಅಭಿಮಾನಿಗಳ ಆಗ್ರಹ. ಇದೇ ತಿಂಗಳು 28ಕ್ಕೆ ಎಐಎಫ್ಎಫ್ ಚುನಾವಣೆ ನಡೆಯಲಿದೆ. ಇಲ್ಲಿ ಯಾರು ಸ್ಪರ್ಧಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ವಸ್ತುಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ದೀರ್ಘಕಾಲದಿಂದ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಭಾರತೀಯ ಕ್ರೀಡಾ ನೀತಿಯ ನಿಯಮಾವಳಿಗಳನ್ನು ಮೀರಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿ ದಿದ್ದರು. 2020ರಲ್ಲೇ ಅವರ ಅವಧಿ ಮುಗಿ ದಿದ್ದರೂ, ಮತ್ತೆ ಚುನಾವಣೆ ನಡೆಸಿರಲಿಲ್ಲ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು. ಕಾಯುವಷ್ಟು ಕಾದ ಬಳಿಕ ಎಐಎಫ್ಎಫ್ ಅಧ್ಯಕ್ಷ ಸ್ಥಾನದಿಂದ ಪ್ರಫುಲ್ ಪಟೇಲ್‌ರನ್ನು ಕಿತ್ತೂಗೆದ ಸರ್ವೋಚ್ಚ ಪೀಠ, ಆಡಳಿತಾಧಿಕಾರಿಗಳನ್ನು ನೇಮಿಸಿತ್ತು.
ಎಐಎಫ್ಎಫ್ ಸಮಸ್ಯೆಯೇನು? ಪರಿಹಾರ ಹೇಗೆ?
ರಾಷ್ಟ್ರೀಯ ಕ್ರೀಡಾನೀತಿಯ ಪ್ರಕಾರ ಯಾವುದೇ ಭಾರತೀಯ ಕ್ರೀಡಾಸಂಸ್ಥೆಗಳ ಅಧ್ಯಕ್ಷರು 12 ವರ್ಷಗಳ ಕಾಲ ಅಧಿಕಾರದಲ್ಲಿಬಹುದು. ಇನ್ನು ವಯೋಮಿತಿ ಯನ್ನೇ ಪರಿಗಣಿಸಿದರೆ, 70 ವರ್ಷ ದಾಟಿದ್ದರೆ ಪದಾಧಿಕಾರಿಗಳಾಗಿ ಮುಂದುವರಿಯುವಂತಿಲ್ಲ. ಪ್ರಫು ಲ್‌ಗೆ ಇನ್ನೂ 65 ವರ್ಷ. ಈ ವಿಷಯದಲ್ಲಿ ಅವರಿಗೆ ಅರ್ಹತೆ ಯಿದೆ. ಆದರೆ ಅವರು 2020, ಡಿಸೆಂಬರ್‌ನಲ್ಲೇ ಎಐಎಫ್ಎಫ್ ಅಧ್ಯಕ್ಷರಾಗಿ 12 ವರ್ಷ ಪೂರೈಸಿದ್ದಾರೆ. ನಿಯಮಗಳ ಪ್ರಕಾರ ಅವರು ಮುಂದುವರಿಯುವಂತೆಯೇ ಇಲ್ಲ. ಆದ್ದರಿಂದ ಸರ್ವೋಚ್ಚ ನ್ಯಾಯಪೀಠ, ರಾಷ್ಟ್ರೀಯ ಕ್ರೀಡಾನೀತಿ ಯನ್ನು ಬೇಗ ಅಳವಡಿಸಿಕೊಳ್ಳಿ, ಚುನಾವಣೆ ನಡೆಸಿ ಎಂದು ಹೇಳಿತು. ಅದು ವಿವಿಧ ಕಾರಣಗಳಿಗಾಗಿ ಸಾಧ್ಯವೇ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಮೇ 18ರಂದು ಅದು ಆಡಳಿತಾಧಿಕಾರಿಗಳನ್ನು ನೇಮಿಸಿತು.
ಇದು ಎಐಎಫ್ಎಫ್ನ ಮಾತೃಸಂಸ್ಥೆ ಫಿಫಾ ನಿಯಮಾವಳಿಗಳಿಗೆ ವಿರುದ್ಧ. ಅದರ ಅಧೀನದ ಯಾವುದೇ ರಾಷ್ಟ್ರೀಯ ಸಂಸ್ಥೆಯಲ್ಲಿ ಅನ್ಯಶಕ್ತಿಗಳ ಹಸ್ತಕ್ಷೇಪವಿರಬಾರದು. ಸದ್ಯ ಸರ್ವೋಚ್ಚ ಪೀಠದ ಆಡಳಿತಾಧಿಕಾರಿಗಳು ಎಐಎಫ್ಎಫ್ನ ಹೊಣೆ ಹೊತ್ತಿದ್ದಾರೆ. ಆದ್ದರಿಂದ ಫಿಫಾ, ಎಐಎಫ್ಎಫ್ ಅನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಭಾರತದಲ್ಲೇ ನಡೆಯಬೇಕಾಗಿದ್ದ 17 ವಯೋಮಿತಿ ಮಹಿಳಾ ಫುಟ್‌ಬಾಲ್ ವಿಶ್ವಕಪ್ ಮುಂದೂಡಲ್ಪಟ್ಟಿದೆ. ಆ.28ಕ್ಕೆ ನಡೆಯಬೇಕಾಗಿರುವ ಎಐಎಫ್ಎಫ್ ಚುನಾವಣೆ ಸರಿಯಾಗಿ ನಡೆದರೆ, ಅದು ನಿಷೇಧ ಮುಕ್ತವಾಗಲಿದೆ. ಆಗ ಮತ್ತೆ ಭಾರತದಲ್ಲೇ ವಿಶ್ವಕಪ್ ನಡೆಯಬಹುದು!
ಟೇಬಲ್ ಟೆನಿಸ್ ಒಕ್ಕೂಟದ ಸಮಸ್ಯೆಯೇನು?
ಅಚಂತ ಶರತ್ ಕಮಲ್, ಮಣಿಕಾ ಬಾತ್ರಾ, ಜಿ.ಸಥಿಯನ್‌ರಂತಹ ಅದ್ಭುತ ಟೇಬಲ್ ಟೆನಿಸ್ ಆಟಗಾರರು ಭಾರತದಲ್ಲಿದ್ದಾರೆ. ಇವರೆಲ್ಲ ಕಾಮನ್ವೆಲ್ತ್, ಏಷ್ಯಾಡ್‌ಗಳಲ್ಲಿ ರಾಶಿಗಟ್ಟಲೇ ಪದಕಗಳನ್ನು ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ. ಆದರೆ ಈ ಆಟಗಾರರನ್ನು ಸರಿಯಾಗಿ ನಡೆಸಿಕೊಳ್ಳಲು ಟೇಬಲ್ ಟೆನಿಸ್ ಅಧಿಕಾರಿಗಳು ವಿಫಲ ರಾಗಿದ್ದಾರೆಂದು ದಿಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ. ಮಾತ್ರವಲ್ಲ ಆಡಳಿತಾಧಿಕಾರಿಯನ್ನಾಗಿ ಗೀತಾ ಮಿತ್ತಲ್‌ರನ್ನು ನೇಮಿಸಿದೆ. ಇದಕ್ಕೆ ಕಾರಣ ಖ್ಯಾತ ಆಟಗಾರ್ತಿ ಮಣಿಕಾ ಬಾತ್ರಾ ದೂರು. 2021ರಲ್ಲಿ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ತನಗೆ ಕಿರುಕುಳ ನೀಡಲಾಗಿದೆ ಎಂದು ಬಾತ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರೀಯ ತಂಡದ ಅಂದಿನ ಕೋಚ್ ಸೌಮ್ಯದೀಪ್ ರಾಯ್ ತನ್ನ ಆಟಗಾರ್ತಿಯೊಬ್ಬರಿಗಾಗಿ, ಅರ್ಹತಾ ಪಂದ್ಯವನ್ನೇ ಬಿಟ್ಟುಕೊಡುವಂತೆ ತನಗೆ ಒತ್ತಾಯಿಸಿದ್ದರು ಎನ್ನುವುದು ಬಾತ್ರಾ ದೂರು. ನ್ಯಾಯಾಲಯದ ತನಿಖೆಯಲ್ಲೂ ಅದು ಖಚಿತವಾಗಿತ್ತು. ಆದ್ದರಿಂದಲೇ ಕಠಿನ ನಿರ್ಧಾರ ತೆಗೆದುಕೊಂಡ ನ್ಯಾಯಪೀಠ, ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ನಿಯಮಗಳ ಪ್ರಕಾರ ಟೇಬಲ್ ಟೆನಿಸ್ ಒಕ್ಕೂಟ ಸದ್ಯದಲ್ಲೇ ತನ್ನ ತಪ್ಪುಗಳನ್ನು ಸರಿಮಾಡಿಕೊಳ್ಳಬೇಕು. ಹೊಸ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕಾಗಿದೆ.
ಭಾರತೀಯ ಒಲಿಂಪಿಕ್ ಸಂಸ್ಥೆಯೇ ಇಕ್ಕಟ್ಟಿನಲ್ಲಿ!
ಭಾರತೀಯ ಒಲಿಂಪಿಕ್ ಸಂಸ್ಥೆ ಅಥವಾ ಐಒಎಯನ್ನು ಎಲ್ಲ ಭಾರ ತೀಯ ಕ್ರೀಡಾಸಂಸ್ಥೆಗಳ ಮಾತೃಸಂಸ್ಥೆ ಎಂಬಂತೆ ನೋಡಲಾಗುತ್ತದೆ. ಅಷ್ಟು ಗೌರವ ಅದಕ್ಕಿದೆ. ಆದರೆ ಅದೇ ಈಗ ಇಕ್ಕಟ್ಟಿನಲ್ಲಿದೆ. ಇದಕ್ಕೆಲ್ಲ ಕಾರಣ ನರೇಂದ್ರ ಬಾತ್ರಾ. ಬಾತ್ರಾ 2014ರಲ್ಲಿ ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2017ರಲ್ಲಿ ಅವರು ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅನಂತರ ಅವರು ಅಂತಾ ರಾಷ್ಟ್ರೀಯ ಹಾಕಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಆದರೆ ಅವರ ಅಧ್ಯಕ್ಷ ಸ್ಥಾನಗಳ ಹಿಂದೆ ಕೆಲವು ನಿಯಮಾವಳಿಗಳ ಅಕ್ರಮ ತಿದ್ದುಪಡಿಯೂ ಇದ್ದವು, ಭ್ರಷ್ಟಾಚಾರದ ಆರೋಪಗಳು ಇದ್ದವು. ಐಒಎ ಅಧ್ಯಕ್ಷರಾಗಿ 35 ಲಕ್ಷ ರೂ. ದುರುಪಯೋಗ ಮಾಡಿಕೊಂಡಿ ದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಅವರು ಐಒಎಯಿಂದ ಹೊರ ನಡೆಯ ಬೇಕೆಂದು ದಿಲ್ಲಿ ಉಚ್ಚ ನ್ಯಾಯಾ ಲಯ ಆದೇಶಿಸಿತ್ತು. ಸದ್ಯ ಅವರು ಎಲ್ಲ ಅಧ್ಯಕ್ಷ ಸ್ಥಾನಗಳನ್ನೂ ತ್ಯಜಿಸಿದ್ದಾರೆ. ಐಒಎಯನ್ನು ನ್ಯಾಯಾಲಯ ನೇಮಿತ ಆಡಳಿತಾಧಿಕಾರಿಗಳು ನಡೆಸುತ್ತಿದ್ದಾರೆ. ಸಕಾಲದಲ್ಲಿ ಚುನಾವಣೆ ನಡೆಯ ದಿದ್ದರೆ, ಐಒಎ ಕೂಡ ನಿಷೇಧಕ್ಕೊಳ ಗಾಗಬಹುದು.
ಹಾಕಿ ಇಂಡಿಯಾಕ್ಕೂ ಸಂದಿಗ್ಧ
ಬುಧವಾರ ಹಾಕಿ ಇಂಡಿಯಾ ಆಡಳಿತಾಧಿಕಾರಿ ಗಳು ಮತ್ತು ಅಂತಾರಾಷ್ಟ್ರೀಯ ಹಾಕಿ ನಿಯೋ ಗದ ನಡುವೆ ಮಾತುಕತೆ ನಡೆದಿದೆ. ಸದ್ಯದ ಮಟ್ಟಿಗೆ ಎಲ್ಲವೂ ಪರವಾಗಿಲ್ಲ ಎನ್ನುವ ವಾತಾ ವರಣವಿದೆ. ಮುಂದೆ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಆದರೆ ಹಾಕಿ ಇಂಡಿಯಾವೂ ಸದ್ಯ ಇಕ್ಕಟ್ಟಿನಲ್ಲಿದೆ. ದಿಲ್ಲಿ ಉಚ್ಚ ನ್ಯಾಯಾಲಯ ಹಾಕಿ ಇಂಡಿಯಾಕ್ಕೆ ಆಡಳಿ ತಾಧಿಕಾರಿಗಳನ್ನು ಮೇ ತಿಂಗಳಲ್ಲಿ ನೇಮಿಸಿದೆ. ಅದು ರಾಷ್ಟ್ರೀಯ ಕ್ರೀಡಾನೀತಿಯನ್ನು ಉಲ್ಲಂಘಿಸಿದೆ ಎನ್ನುವುದು ದಿಲ್ಲಿ ನ್ಯಾಯಾಲಯದ ತೀರ್ಪಿನ ತಿರುಳು. ಇದಕ್ಕೂ ಕಾರಣ ನರೇಂದ್ರ ಬಾತ್ರಾ. ಅವರು 2017ರಲ್ಲಿ ಐಒಎಗೆ ಅಧ್ಯಕ್ಷರಾಗುವಾಗ ಹಾಕಿ ಇಂಡಿ ಯಾದ ಆಜೀವ ಸದಸ್ಯರಾಗಿದ್ದರು. ಇದೇ ಆಧಾರದಲ್ಲಿ ಅವರಿಗೆ ಐಒಎ ಅಧ್ಯಕ್ಷ ಸ್ಥಾನ ಸಿಕ್ಕಿದ್ದು. ಆದರೆ ಈ ನಿಯಮವೇ ತಪ್ಪು ಎಂದು ಅಸ್ಲಾಮ್ ಶೇರ್ ಖಾನ್ ವಾದಿಸಿದ್ದರು. ಅದನ್ನು ದಿಲ್ಲಿ ನ್ಯಾಯಾಲಯ ಪರಿಗಣಿಸಿದೆ. ಅ.9ರೊಳಗೆ ಹಾಕಿ ಇಂಡಿಯಾದ ಚುನಾವಣೆ ನಡೆಯಬೇಕಿದೆ. ನಡೆಯದಿದ್ದರೆ ಅಪಾಯ ಖಚಿತ.
33 ತಿಂಗಳ ಕಾಲ ಬಿಸಿಸಿಐಗೆ ಆಡಳಿತಾಧಿಕಾರಿಗಳು!
ಭಾರತೀಯ ಕ್ರೀಡಾವಲಯವೇನು, ವಿಶ್ವ ಕ್ರೀಡಾವಲಯ ದಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಗಳಲ್ಲಿ ಬಿಸಿಸಿಐ ಒಂದು. ಅದು ಇಡೀ ವಿಶ್ವ ಕ್ರಿಕೆಟನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದೆ. ಅಂತಹ ಸಂಸ್ಥೆಯ ಅಧ್ಯಕ್ಷರು ಸ್ವಹಿತಾಸಕ್ತಿಯಲ್ಲಿ ನಿರತರಾಗಿದ್ದಾರೆ, ಬೇರೆ ಬೇರೆ ತಪ್ಪುಗಳನ್ನು ಎಸಗಿದ್ದಾರೆಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ದೀರ್ಘಕಾಲ ಸರ್ವೋಚ್ಚ ನ್ಯಾಯಾಲ ಯದಲ್ಲಿ ವಿಚಾರಣೆ ನಡೆದು, ಸಂಪೂರ್ಣ ಬಿಸಿಸಿಐನ ಸಂವಿಧಾನವನ್ನೇ ಬದಲಿಸಿತ್ತು. ಇದರಲ್ಲಿ ಕೆಲವು ತಿದ್ದುಪಡಿ ಮಾಡಬೇಕೆಂದು ಸದ್ಯ ಸೌರವ್ ಗಂಗೂಲಿ, ಜಯ್ ಶಾ ಸರ್ವೋಚ್ಚ ನ್ಯಾಯಾಲ ಯದ ಮೆಟ್ಟಿಲೇರಿದ್ದಾರೆ. ಅದರ ತೀರ್ಪಿನ್ನೂ ಬರಬೇಕಾಗಿದೆ.
2017, ಜನವರಿಯಲ್ಲಿ ಸರ್ವೋಚ್ಚ ನ್ಯಾಯಾಲಯ ನಾಲ್ವರು ಆಡಳಿತಾಧಿಕಾರಿಗಳನ್ನು ಬಿಸಿಸಿಐಗೆ ನೇಮಿಸಿತ್ತು. 2019, ಅಕ್ಟೋಬರ್‌ನಲ್ಲಿ ವಿನೋದ್ ರಾಯ್ ನೇತೃತ್ವದ ಸಮಿತಿ ಅಧಿಕಾರವನ್ನು ಬಿಟ್ಟುಕೊಟ್ಟಿತ್ತು. ಅದಾದ ಮೇಲೆ ಸೌರವ್ ಗಂಗೂಲಿ ಬಿಸಿಸಿಐಗೆ ಅಧ್ಯಕ್ಷರಾಗಿದ್ದು. ಅಂದರೆ ಒಟ್ಟು 33 ತಿಂಗಳು ಬಿಸಿಸಿಐಯನ್ನು ನಡೆಸಿದ್ದು ಸರ್ವೋಚ್ಚ ಪೀಠದ ಆಡಳಿತಾಧಿಕಾರಿಗಳು! ಆಗ ಇಡೀ ಬಿಸಿಸಿಐ ಗೊಂದಲದ ಗೂಡಾಗಿತ್ತು. ಈಗಲೂ ಹೊಸ ಸಂವಿಧಾನದಿಂದ ಪಟ್ಟಭದ್ರ ಹಿತಾಸಕ್ತಿಗಳು ತೊಂದರೆ ಅನುಭವಿಸುತ್ತಿವೆ. ಆದರೆ ಬಿಸಿಸಿಐನಲ್ಲಿ ಆಡಳಿತಾತ್ಮಕವಾಗಿ ಬಹಳ ಸುಧಾರಣೆ ಯಾಗಿದೆ. ಅದೇನೇ ಇದ್ದರೂ, ಬಿಸಿಸಿಐನೊಳಗೆ ಆರ್ಥಿಕ ಸದೃಢತೆಯಿದ್ದಿದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ಅದು ನೆಲಕಚ್ಚಲಿಲ್ಲ ಎನ್ನುವುದನ್ನು ಮರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.