ಸ್ವಲ್ಪ ಪ್ರತಿಷ್ಠೆ ನುಂಗಿ, ದೃಢ ಮೈತ್ರಿ ಮಾಡಿಕೊಳ್ಳಬೇಕಿದೆ
Team Udayavani, Jun 6, 2019, 6:10 AM IST
ಒಂದು ವಿಷಯವಿಲ್ಲದಿದ್ದರೆ, ಇನ್ಯಾವುದೋ ವಿಷಯ ಹುಡುಕಿಕೊಂಡು ಬಿಜೆಪಿಯವರು ನಮ್ಮನ್ನು ಟೀಕಿಸುತ್ತಾರೆ. ಕಾಂಗ್ರೆಸ್ ಅನ್ನು ಯಾರೇ ಮುನ್ನಡೆಸಿದರೂ ಬಿಜೆಪಿ ಅವರ ಮೇಲೆ ದಾಳಿ ಮಾಡುತ್ತದೆ.
– ಎಲ್ಲರೂ ಈ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು?
ನೋಡಿ, ಇದಕ್ಕೆ ಅನೇಕ ಸಂಗತಿಗಳು ಕಾರಣ. ಯಾವುದೋ ಒಂದು ಅಥವಾ ಎರಡು ಕಾರಣಗಳನ್ನು ಎದುರಿಡುವುದು ಸರಿ ಯಲ್ಲ. ಮೊದಲನೆಯದಾಗಿ, ಪ್ರಧಾನಿ ನರೇಂದ್ರ ಮೋದಿಯವರ ಸುತ್ತ ಸೃಷ್ಟಿಯಾದ ಬೃಹತ್ ವರ್ಚಸ್ಸು. ಅನೇಕ ಮತದಾರರಿಗೆ ಬಿಜೆಪಿ ಅನುಸರಿಸುತ್ತಿದ್ದ ನೀತಿಗಳ ಬಗ್ಗೆಅಷ್ಟಾಗಿ ಅರಿವಿರಲೇ ಇಲ್ಲ. ಬಲಿಷ್ಠ ಮೋದಿ ದೇಶವನ್ನು ಸುರಕ್ಷಿತವಾಗಿಡುತ್ತಾರೆ ಎಂದವರು ಹೇಳಿದರು. ಅತ್ತ ಪುಲ್ವಾಮಾ ಘಟನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿತು.ದೇಶವನ್ನು ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ರಕ್ಷಿಸಬೇಕಿದೆ. ಇದನ್ನು ರಕ್ಷಿಸುವ ಸಾಮರ್ಥ್ಯವಿರುವ ವ್ಯಕ್ತಿಯೆಂದರೆ ಮಿಸ್ಟರ್ ಮೋದಿ ಎಂದು ಬಿಂಬಿಸಲಾಯಿತು. ಅದ್ಹೇಗೋ ಒಟ್ಟಲ್ಲಿ ಬಿಜೆಪಿಯು ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಬಹಳ ಚೆನ್ನಾಗಿ ಮಾರ್ಕೆಟಿಂಗ್ ಮಾಡಿ, ಇದೊಂದೇ ದೇಶವನ್ನು ಕಾಡುತ್ತಿರುವ ಸಮಸ್ಯೆ ಎಂದು ಜನರನ್ನು ನಂಬಿಸಲು ಯಶಸ್ವಿಯಾಯಿತು. ಇನ್ನು ಎರಡನೆಯದಾಗಿ, ಈ ರೀತಿ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ- ಬಿಜೆಪಿ ಕೋಮು ಧ್ರುವೀಕರಣ ಮಾಡಿತು. ತನ್ನ ಬಹುಸಂಖ್ಯಾತವಾದವನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಿಜೆಪಿ ಪ್ರದರ್ಶಿಸಿತು. ದೇಶದಲ್ಲಿ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅಧಿಕವಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ರಫ್ತು ಕುಸಿದಿದೆ, ನೋಟ್ಬಂದಿಯ ನಂತರ ದಾಖಲೆಯ ಪ್ರಮಾಣದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಬಾಗಿಲು ಹಾಕಿವೆ…ಈ ಕಾರಣಕ್ಕಾಗಿಯೇ ಈ ವಿಷಯವನ್ನು ಮುಂದಿಟ್ಟುಕೊಂಡು ನಾವು, ಮೋದಿಗಿಂತಲೂ ಉತ್ತಮವಾಗಿ ಆರ್ಥಿಕತೆಯನ್ನು ನಿಭಾಯಿಸುತ್ತೇವೆ ಎಂದು ಜನರ ಮುಂದೆ ಹೋದೆವು. ಆದರೆ ಅದೇಕೋ ನಾವು ಅಂದುಕೊಂಡ ರೀತಿಯಲ್ಲಿ ನಮ್ಮ ಭರವಸೆಗಳು ಪರಿಣಾಮ ಬೀರಲಿಲ್ಲ. ಸ್ವಚ್ಛ ಭಾರತ್, ಶೌಚಾಲಯ ನಿರ್ಮಾಣ ಮತ್ತು ಉಜ್ವಲಾದಂಥ ಸ್ಕೀಮುಗಳು ಅನೇಕ ಪ್ರದೇಶಗಳಲ್ಲಿ ಜನಜೀವನದ ಮೇಲೆ ಪ್ರಭಾವ ಬೀರಿರುವಂತಿದೆ. ಆದರೆ ಈಗ ನಿರ್ಮಾಣವಾಗಿರುವ 65 ಪ್ರತಿಶತ ಶೌಚಾಲಯಗಳಲ್ಲಿ ನೀರು ಇಲ್ಲ, ಗ್ಯಾಸ್ ಸಿಲಿಂಡರ್ ಫಲಾನುಭವಿಗಳು ಮತ್ತೆ ಸಿಲಿಂಡರ್ ತುಂಬಿಸುವಷ್ಟು ಸಕ್ಷಮರಲ್ಲ ಎಂದು ನಾವು ಹೇಳುತ್ತಿದ್ದೇವೆ.
– ಈಗ ಕಾಂಗ್ರೆಸ್‌ನ ಎದುರಿರುವ ದಾರಿ ಯಾವುದು?
ನನ್ನ ದೃಷ್ಟಿಕೋನವಂತೂ ಸ್ಪಷ್ಟವಾಗಿದೆ. ನಾವು ಮಾಡಬೇಕಿರುವ ಕೆಲಸ ಬಹಳಷ್ಟಿದೆ. ಮೊದಲನೆಯದಾಗಿ, ನಮ್ಮ ನಿಲುವೇನು, ಯಾವುದರ ಪರ ಇದ್ದೇವೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕಿದೆ. ನಮ್ಮ ಬಗ್ಗೆ ಜನರಿಗೂ ಗೊಂದಲವಾಯಿತು. ಉತ್ತರಭಾರತದಲ್ಲಿ ಕೆಲವರು ನಮ್ಮನ್ನು ಬಿಜೆಪಿಯ ಇನ್ನೊಂದು ಚಹರೆ(ಸಾಫ್ಟ್ ಹಿಂದುತ್ವವಾದಿ) ಎಂಬಂತೆ ನೋಡಿದರು, ಇದೊಂದು ದೊಡ್ಡ ತಪ್ಪು. ರಾಹುಲ್ ಗಾಂಧಿ ಮಂದಿರಗಳಿಗೆ ಭೇಟಿ ನೀಡಿದ್ದು, ಎಲ್ಲರನ್ನೂ ಒಳಗೊಂಡ ‘ಹಿಂದುಯಿಸಂ’ ಅನ್ನು ಸಾರುವುದಕ್ಕೇ ಹೊರತು, ‘ಹಿಂದುತ್ವ’ವನ್ನಲ್ಲ. ಹಿಂದುತ್ವಕ್ಕೂ ಹಿಂದುಯಿಸಂಗೂ ವ್ಯತ್ಯಾಸವಿದೆ. ಹಿಂದುತ್ವವೆನ್ನುವುದು ತೀವ್ರ ರಾಜಕೀಯ ಸಿದ್ಧಾಂತವಾಗಿದೆ. ಆದರೆ, ಈ ವ್ಯತ್ಯಾಸವು ಬಹಳಷ್ಟು ಜನರಿಗೆ ಅರ್ಥವಾಗುವುದಿಲ್ಲ.
ಎರಡನೆಯದಾಗಿ, ಈಗ ಸಂಸತ್ತಿನಲ್ಲಿ ನಮಗೆ 52 ಸ್ಥಾನಗಳಿದ್ದು, ನಾವು ಸ್ವಲ್ಪ ಪ್ರತಿಷ್ಠೆಯನ್ನು ನುಂಗಿ, ಸಂಸತ್ತಿನಲ್ಲಿ ಮತ್ತು ರಾಜ್ಯಗಳಲ್ಲಿ ಗಂಭೀರ ಮೈತ್ರಿಗಳನ್ನು ಮಾಡಿಕೊಂಡರೆ ಒಂದು ರಚನಾತ್ಮಕ ಮತ್ತು ಸದೃಢ ಪ್ರತಿಪಕ್ಷವಾಗಬಲ್ಲೆವು. ಅಲ್ಲದೇ, ನಾವು ಎಲ್ಲೆಲ್ಲಿ ಎಡವಿದೆವು ಎನ್ನುವುದರ ಬಗ್ಗೆ ಗ್ರೌಂಡ್ ರಿಪೋರ್ಟ್ ತರಿಸಿಕೊಂಡು ಗಂಭೀರ ಅವಲೋಕನ ಮಾಡಬೇಕಿದೆ. ಇದನ್ನೆಲ್ಲ ನಾವು ರಾಜ್ಯಮಟ್ಟದಲ್ಲಿ ಮಾಡಬೇಕು. ಈಗ ಜಾರ್ಖಂಡ್, ಹರ್ಯಾಣಾ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆಗಳು ಬರುತ್ತಿವೆ-ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಜನ ತಾವು ಮೋದಿಗೆ ಮತ ಹಾಕಿದ್ದಾಗಿ ಹೇಳುತ್ತಿದ್ದಾರೆ. ಈಗಿನ ಚುನಾವಣೆಯಲ್ಲಿ ಅವರು ಮೋದಿಯವರನ್ನೇನೂ ಆಯ್ಕೆ ಮಾಡುವುದಿಲ್ಲ. ಹೀಗಾಗಿ, ಜನರು ಮನೋಹರ್‌ಲಾಲ್ ಖಟ್ಟರ್, ದೇವೇಂದ್ರ ಫಡ್ನವಿಸ್ ಮತ್ತು ರಘುಬೀರ್‌ದಾಸ್‌ರ ಕಾರ್ಯಶೈಲಿಯ ಮೌಲ್ಯಮಾಪನ ಮಾಡುತ್ತಾರೆ. ನಾವು ಸರಿಯಾಗಿ ಪ್ರಚಾರ ಮಾಡಿದರೆ ಜನರ ತೀರ್ಪು ಭಿನ್ನವಾಗಿ ಬರಬಹುದು.
– ರಾಹುಲ್ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ನಿರಾಕರಿಸುತ್ತಿದ್ದಾರೆ, ಇನ್ನೊಂದೆಡೆ ನಿಮ್ಮ ಪಕ್ಷದ ನಾಯಕರು ರಾಹುಲ್ರನ್ನು ಬಿಟ್ಟುಕೊಡುತ್ತಿಲ್ಲ…ನಿಮ್ಮ ಅಭಿಪ್ರಾಯವೇನು?
ಸದ್ಯಕ್ಕೆ, ಪಕ್ಷದ ಆದ್ಯತೆಯಂತೂ ಸ್ಪಷ್ಟವಾಗಿದೆ-ರಾಹುಲ್ ಇರಬೇಕು. ಒಪ್ಪುವುದು, ಬಿಡುವುದು ರಾಹುಲ್ರಿಗೆ ಬಿಟ್ಟ ವಿಚಾರ. ನವಚೈತನ್ಯದೊಂದಿಗೆ ಅವರು ತಮ್ಮ ಕೆಲಸವನ್ನು ಮುಂದುವರಿಸಲಿ ಎಂದು ನಾನು ಆಶಿಸುತ್ತೇನೆ. ಹಾಗೆಂದು ಈ ಚುನಾವಣೆಯಲ್ಲಿ ಅವರು ಹೆಚ್ಚು ಪ್ರಯತ್ನಿಸಲಿಲ್ಲ ಎಂದು ಯಾರೂ ಹೇಳುತ್ತಿಲ್ಲ. ತುಂಬಾ ಶ್ರಮವಹಿಸಿ ಪ್ರಚಾರ ನಡೆಸಿದರು.
– ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷರು ಬರಬೇಕು ಎಂಬ ವಿಚಾರದ ಬಗ್ಗೆ ಏನನ್ನುತ್ತೀರಿ? ಕಾಂಗ್ರೆಸ್‌ಗೆ ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೇನೂ ಕಾಣುವುದಿಲ್ಲ ಎಂಬ ಬಿಜೆಪಿಯ ನಿರಂತರ ಟೀಕೆಯಿಂದ ಆಗಲಾದರೂ ನಿಮ್ಮ ಪಕ್ಷ ಬಚಾವಾಗಬಹುದು.
ನೀವೇಕೋ ಬಿಜೆಪಿ ಬಗ್ಗೆ ಧಾರಾಳತೆ ವಹಿಸುತ್ತಿದ್ದೀರಿ ಎಂದೆನಿಸುತ್ತಿದೆ. ಈ ವಿಷಯವಲ್ಲದಿದ್ದರೆ ಇನ್ಯಾವುದೋ ವಿಷಯ ಹುಡುಕಿಕೊಂಡು ಅವರು ನಮ್ಮನ್ನು ಟೀಕಿಸುತ್ತಾರೆ. ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಬಿಜೆಪಿಯವರು ಅವರನ್ನು ‘ಡೈನೆಸ್ಟಿಯ ಕೈಗೊಂಬೆ’ ಎಂದು ಆರೋಪಿಸಿದರು, ಆದರೆ ಮನಮೋಹನ್ ಸಿಂಗ್ ಆ ಹುದ್ದೆಗೆ ಅರ್ಹ ವ್ಯಕ್ತಿಯಾಗಿದ್ದರು. ಮನಮೋಹನ್‌ಸಿಂಗ್ ಅವರ ಜೀವನಗಾಥೆ ಅಮೋಘವಾಗಿದೆ. ಅವರು ಕಡುಬಡತನದ ಹಿನ್ನೆಲೆಯಿಂದ ಬಂದವರು, ಆದರೆ ಕಠಿಣ ಪರಿಶ್ರಮದ ಮೂಲಕ ಬೆಳೆದು ನಿಂತರು. ಆದರೂ ಅವರ ಮೇಲೆ ಬಿಜೆಪಿ ದಾಳಿ ನಡೆಸಿತು. ಕಾಂಗ್ರೆಸ್ ಅನ್ನು ಯಾರೇ ಮುನ್ನಡೆಸಿದರೂ ಬಿಜೆಪಿ ಅವರ ಮೇಲೆ ದಾಳಿ ಮಾಡುತ್ತದೆ. ಹೀಗಾಗಿ, ನಾವು ನಮ್ಮಲ್ಲಿನ ಬಲಿಷ್ಠ ನಾಯಕರ ಮೂಲಕವೇ ಪಕ್ಷವನ್ನು ಮುನ್ನಡೆಸುತ್ತೇವೆ.
– ಗಾಂಧಿ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರವಾಗಿದ್ದ ಅಮೇಠಿಯಲ್ಲೇ ರಾಹುಲ್ ಸೋತಿದ್ದಾರೆ. ನಿಮಗೇನನ್ನಿಸಿತು?
ಅಚ್ಚರಿಯಾಯಿತು. ತುಂಬಾನೇ ಅಚ್ಚರಿಯಾಯಿತು. ಒಂದು ಕಾರಣ ಏನಿರಬಹುದೆಂದರೆ, ಪಕ್ಷವೊಂದರಲ್ಲಿ ರಾಷ್ಟ್ರ ಮಟ್ಟದ ಜವಾಬ್ದಾರಿ ಇರುವ ಕಾರಣಕ್ಕೆ ಅವರಿಗೆ ಕ್ಷೇತ್ರದತ್ತ ಹೆಚ್ಚು ಗಮನ ಕೊಡಲಿಕ್ಕೆ ಆಗಿರಲಿಲ್ಲ(ಉದ್ದೇಶಪೂರ್ವಕವಾಗಿ ಆ ಕ್ಷೇತ್ರದಲ್ಲಿ ತಮ್ಮ ಪ್ರಸ್ತುತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದವರಿಗೆ ಹೋಲಿಸಿದಾಗ). ಸತ್ಯವೇನೆಂದರೆ, ರಾಹುಲ್ ಏಕೆ ಸೋತರು ಎನ್ನುವುದು ನನಗೆ ತಿಳಿಯದು. ಆಶ್ಚರ್ಯವಂತೂ ಆಯಿತಷ್ಟೇ. ಅದಕ್ಕೆ ಹೋಲಿಸಿದರೆ, ವಯನಾಡ್‌ನಲ್ಲಿ ಅವರು ಎಷ್ಟು ಪ್ರಮಾಣದಲ್ಲಿ ಗೆದ್ದಿದ್ದಾರೋ ಗಮನಿಸಿ.
– ನಿಮ್ಮ ಪಕ್ಷದಲ್ಲಿನ ಅನೇಕ ನಾಯಕರು ಇವಿಎಂ ಯಂತ್ರಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ, ಬ್ಯಾಲೆಟ್ ಪೇಪರ್ ಮತದಾನಕ್ಕೆ ಹಿಂದಿರುಗಬೇಕು ಎನ್ನುತ್ತಾರೆ. ಇವಿಎಂನಲ್ಲಿ ಏನಾದರೂ ದೋಷವಿರಬಹುದು ಎಂದು ನಿಮಗೆ ಅನ್ನಿಸುತ್ತದಾ?
ಇವಿಎಂ ಮೇಲೆ ಆರೋಪ ಮಾಡುವ ಅನೇಕರನ್ನು ಮಾತನಾಡಿಸಿದ್ದೇನೆ, ಅವರಿಗೆಲ್ಲ ಆಳವಾದ ಅನುಮಾನಗಳಿವೆ. ಆದರೆ ನಾವು ಈ ವಿಚಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ಎತ್ತುತ್ತಿಲ್ಲ, ಏಕೆಂದರೆ ನಮ್ಮ ಬಳಿ ಪುರಾವೆ ಇಲ್ಲ. ಹೀಗಾಗಿ, ಈ ವಿಷಯದಲ್ಲಿ ನಾವು ಬೇಜವಾಬ್ದಾರಿಯಿಂದ ವರ್ತಿಸಲಾಗದು.
– ಹಾಗಿದ್ದರೆ ಈ ಅನುಮಾನಗಳೇಕೆ ಇವೆ?
ಏಕೆಂದರೆ, ಅನೇಕ ಭಾಗಗಳಲ್ಲಿ ನಮ್ಮ ಅನುಭವಿ ರಾಜಕೀಯ ಕಾರ್ಯಕರ್ತರು ನೀಡುತ್ತಿರುವ ಗ್ರೌಂಡ್ ರಿಪೋರ್ಟುಗಳಿಗೂ ಮತ್ತು ನಿಜವಾದ ಫಲಿತಾಂಶಕ್ಕೂ ಅಜಗಜಾಂತರವಿದೆ. ಅಂದರೆ, ನಮ್ಮ ಅಭ್ಯರ್ಥಿ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಾನೆ ಎಂದು ನಮ್ಮ ರಿಪೋರ್ಟುಗಳು ಹೇಳುತ್ತಿದ್ದರೆ, ನಮ್ಮ ಅಭ್ಯರ್ಥಿ ಮೂರು ಲಕ್ಷ ಮತಗಳ ಅಂತರದಿಂದ ಸೋಲುತ್ತಾನೆ. ಈ ಪ್ರಮಾಣದಲ್ಲಿ ಅದ್ಹೇಗೆ ನಾವು ತಪ್ಪು ಲೆಕ್ಕ ಹಾಕಬಹುದು? ಅಂದರೆ ಬೇರುಮಟ್ಟದಲ್ಲಿರುವ ಭಾವನೆಗಳು ಮತ್ತು ಫಲಿತಾಂಶದ ನಡುವೆ ತಾಳೆಯೇ ಆಗುತ್ತಿಲ್ಲ. ಆದರೆ, ಪುರಾವೆಯಿಲ್ಲದೆ ಈ ವಿಚಾರದಲ್ಲಿ ನಾವು ಹಾಡಿ ಕುಣಿದು ಆರೋಪಿಸಿದರೆ ಅದು ಸೋತವರ ಪ್ರಲಾಪದಂತೆ ಕೇಳಿಸುತ್ತದಷ್ಟೆ.
– ಅಂದರೆ ಮತಪತ್ರಗಳಿಗೆ ಹಿಂದಿರುಗುವ ಅಗತ್ಯವಿಲ್ಲ ಎಂದು ನಿಮಗೆ ಅನ್ನಿಸುತ್ತದಾ?
ಮತಪತ್ರ/ಬ್ಯಾಲೆಟ್ ಪೇಪರ್‌ಗೆ ಹಿಂದಿರುಗಬೇಕು ಎಂದು ಪ್ರತಿಪಕ್ಷಗಳ ಕ್ಯಾಂಪುಗಳಲ್ಲಿ ಒತ್ತಡ ಹೆಚ್ಚುತ್ತಿದೆ. ವೈಯಕ್ತಿಕವಾಗಿ, ಈ ವಿಚಾರದಲ್ಲಿ ನನಗೆ ಬೇಸರವಿದೆ. ಏಕೆಂದರೆ, ಮತದಾರರ ಸಂಖ್ಯೆ ಅಧಿಕವಾಗುತ್ತಿದೆ, ಒಂದೊಂದೇ ಮತಪತ್ರವನ್ನು ಎಣಿಸುತ್ತಾ ಕೂತರೆ ಎಷ್ಟೋ ಸಮಯ ತಗುಲುತ್ತದೆ. ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ಮತಯಂತ್ರದ ಬದಲು ಮತಪತ್ರ ಬಳಸಬೇಕು ಎಂಬ ಬೇಡಿಕೆ ಎದುರಾಗಬಹುದು. ಆದರೆ, ಈ ರೀತಿ ಮಾಡುವುದು, ಎಷ್ಟೋ ಹಿಂದಕ್ಕೆ ಹೋದಂತೆ ಎನ್ನುವ ಚುನಾವಣಾ ಆಯೋಗದ ಅನಿಸಿಕೆಯೂ ಸತ್ಯವಾದದ್ದು.
– ಈ ಚುನಾವಣೆಯ ಮೇಲೆ ಶಬರಿಮಲೆ ವಿವಾದದ ಪ್ರಭಾವವಿತ್ತೇ?
ಪ್ರಭಾವವಂತೂ ಇತ್ತು, ಆದರೆ ಅದು ಬಿಜೆಪಿಯ ನಿರೀಕ್ಷೆ ಮತ್ತು ಕಾಂಗ್ರೆಸ್‌ನ ಹೆದರಿಕೆಗೆ ತಕ್ಕಂತೆ ಇರಲಿಲ್ಲ. ಹಿಂದೂ ಮತಗಳನ್ನು ಕ್ರೋಡೀಕರಿಸಲು ಬಿಜೆಪಿಯು ನಾಚಿಕೆಯಿಲ್ಲದೇ ಈ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ ಎಂಬ ಭಯ ನಮಗಿತ್ತು. ಆದರೆ, ಮುಂದೆ ನಡೆದದ್ದು ಕುತೂಹಲಕರವಾಗಿದೆ. ಅತ್ತ ಬಿಜೆಪಿಯು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾಗ, ಹಿಂದೂ ಶ್ರದ್ಧಾಳುಗಳೆಲ್ಲ ‘ನೀವೇ ಕೇಂದ್ರದಲ್ಲಿ ಇದ್ದೀರಿ, ಈ ವಿಚಾರದಲ್ಲಿ ಏನೂ ಮಾಡಲಿಲ್ಲವೇಕೆ?’ ಎಂದು ಬಿಜೆಪಿಯನ್ನು ಪ್ರಶ್ನಿಸಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಸುಪ್ರೀಂ ಕೋರ್ಟ್ ತೀರ್ಪು ಹೊರಬಿತ್ತು. ಹಾಗಿದ್ದರೆ ಅದು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿತೇ? ಇಲ್ಲ. ಸಂಸತ್ತಿನಲ್ಲಿ ಬಿಜೆಪಿಗೆ ಬಹುಮತವಿತ್ತು, ಹಾಗಿದ್ದರೆ ಈ ವಿಚಾರದಲ್ಲಿ ಕಾನೂನು ತಂದಿರಾ? ಇಲ್ಲ. ಅಧಿಕಾರದಲ್ಲಿದ್ದರೂ ಇವರೇನೂ ಮಾಡಲಿಲ್ಲ, ಈಗ ಯಾವ ಆಧಾರದಲ್ಲಿ ನಮ್ಮ ಮತ ಕೇಳುತ್ತಿದ್ದಾರೆ ಎನ್ನುವ ಪ್ರಶ್ನೆ ಮತದಾರರ ಮನದಲ್ಲಿ ಮಾರ್ದನಿಸಿತು. ಆದರೆ ಒಂದಂತೂ ಸತ್ಯ, ಎಡಪಕ್ಷದ ಮತಗಳ ಮೇಲಂತೂ ಶಬರಿಮಲೆ ವಿಚಾರ ಪ್ರಭಾವ ಬೀರಿತು.
(ಕೃಪೆ: ಡೆಕ್ಕನ್ ಕ್ರೋನಿಕಲ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.