ಇಂದು ಶಿಕ್ಷಕರ ದಿನ; ಗುರು ಪರಂಪರೆಯ ಜೀವಂತಿಕೆಗೆ ನೀರೆರೆಯುವ ಪುಣ್ಯದಿನ
Team Udayavani, Sep 5, 2022, 6:30 AM IST
ಎಳೆ ಹರೆಯದ ಮಗುವಿನ ಮನದ ಕದ ತೆಗೆದು, ಮುಂದೆ ಬಾಲ್ಯ ಹಾಗೂ ಯೌವ್ವನದ ಹರೆಯದಲ್ಲಿ ವಿಶಾಲ ಜಗದಿರುವಿಕೆ, ಆಗುಹೋಗುಗಳ ಬಗೆಗೆ ಕಣ್ಣು ತೆರೆಸುವ ಮಹಾನ್ ಚೈತನ್ಯದ ಸಾಕಾರವೇ ಗುರು. ಹೆತ್ತ ತಾಯಿಯಂತೆಯೇ ಕೈ ಹಿಡಿದು ನಡೆಸುವ ತಂದೆಯೇ ಮೊದಲ ಗುರುಗಳು ಎನ್ನುವ ತಿಳಿ ಸತ್ಯ ಜನಜನಿತ. ಮನೆಯ ಹೊಸ್ತಿಲಿನಿಂದಾಚೆ ಗುರುಕುಲ, ಕುಲಪತಿ, ದಟ್ಟ ಅರಣ್ಯದ ಹಸಿರು ಉಸಿರಿನ ಕುಟೀರ, ಗಿರಿ ವನಗಳ ಪ್ರಶಾಂತ ಪರಿಸರ- ಇವೆಲ್ಲ ಭಾರತದ ಪುಣ್ಯಭೂಮಿಯ ಗುರು ಪರಂಪರೆಯ ಇತಿಹಾಸದ ಸಾಕ್ಷಿ ಸ್ತಂಭಗಳು.
“ಗುರುಪೂರ್ಣಿಮೆ’ ಅಥವಾ “ವ್ಯಾಸ ಪೂರ್ಣಿಮೆ’ ವೇದಗಳನ್ನು ವಿಂಗಡಿಸಿದ ಹಾಗೂ ಮಹಾಭಾರತ ಮಹಾಕಾವ್ಯ ರಚಿಸಿದ ಮಹರ್ಷಿ ವೇದವ್ಯಾಸರನ್ನು ಸ್ಮರಿಸುವ ಪಾವನ ದಿನ. ಗುರುವೇ ತ್ರಿಮೂರ್ತಿ ಗಳು, ಅಷ್ಟೇಕೆ ಗುರುವೇ “ಸಾಕ್ಷಾತ್ ಪರಬ್ರಹ್ಮ’ ಎಂಬ ಮಟ್ಟಕ್ಕೇರಿಸಿ ಪೂಜನೀಯ ಭೂಮಿಕೆ ಸೃಜಿಸಿದ ನಾಡು ನಮ್ಮ ಭಾರತ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವ ದಾಸೋಕ್ತಿಯವರೆಗೆ, ಗುರುತ್ವವನ್ನು ಉನ್ನತೀಕರಿಸಿದ ಸಂಸ್ಕೃತಿ ನಮ್ಮದು. ಮಾತಾ ಪಿತೃಗಳ ಬಳಿಕ “ಆಚಾರ್ಯ ದೇವೋಭವಃ’ ಎಂಬುದಾಗಿ ಜನಸಾಮಾನ್ಯ ರಿಂದ ಹಿಡಿದು ಮಕುಟಧಾರಿಗಳವರೆಗೆ ಗುರು ನಮನದ ಸುಂದರ ಸಭ್ಯತೆಯ ತಂತು ಹರಿಸಿದ ಭವ್ಯ ಚರಿತ್ರೆ ನಮ್ಮದು.
ಗುರು ಎಂದೂ ಲಘುವಾಗಬಾರದು. ಗುರು ಎಂದೂ ಸ್ವತಃ ಶಿಷ್ಯವರ್ಗದಿಂದ ಗೌರವಕ್ಕಾಗಿ ಹಾತೊರೆಯಬಾರದು; ಬದಲಾಗಿ ಗೌರವವನ್ನು ಸಂಪಾದಿಸಬೇಕು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸೆ. 5ನ್ನು “ಶಿಕ್ಷಕರ ದಿನಾಚರಣೆ’ ಎಂಬುದಾಗಿ ಆಚರಿಸಲ್ಪಡುತ್ತದೆ. “ರಾಷ್ಟ್ರದ ಭವಿಷ್ಯ ತರಗತಿಯ ಕೊಠಡಿಯೊಳಗೆ ರೂಪುಗೊಳ್ಳುತ್ತದೆ’ ಎಂಬುದಾಗಿ ಈ ಸಂದರ್ಭದಲ್ಲಿ ಅಧ್ಯಾಪಕತ್ವದ ಬಗೆಗೆ ಪ್ರಶಂಸೆಯ ಪುಷ್ಪ ವೃಷ್ಟಿಯಾಗುತ್ತದೆ. ಶಿಕ್ಷಕರ ದಿನಾಚರಣೆ ನಿಜಕ್ಕೂ ಒಂದು ಭಾವನಾತ್ಮಕ ಹಾಗೂ ವಾಸ್ತವಿಕ ಸತ್ಯ ಅನಾವರಣಗೊಳ್ಳುವ ಶುಭ ಘಳಿಗೆ. “ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು; ಅದು ಬಾಲ್ಯವಾಗಿತ್ತು’ ಎಂಬ ಕುವೆಂಪು ವಾಣಿಯ ಕಂಪು, ನೆನಪಿನಂಗಳದಲ್ಲಿ ನವಿರಾಗಿ ಪಸರಿಸುವ ಭಾವನಾದಿನ.
ಕನಸುಗಳನ್ನು ಕಾಣುತ್ತ, ಕಾಣುತ್ತ ನಮ್ಮ ಬದುಕಿನ ಪುಟಗಳಲ್ಲಿ ಅಚ್ಚಳಿಯಿಂದ ಸಹಿ ಹಾಕಿದ, ಹತ್ತಾರು ಮಂದಿ ಅಧ್ಯಾಪಕರ ಮುಖಗಳನ್ನು ಮನದ ಮನದಂಗಳಕ್ಕೆ ಆಹ್ವಾನಿಸುವ ಸುದಿನ. ಕಣ್ಣರಳಿಸಿ, ಕಿವಿ ನಿಮಿರಿಸಿ, ಮನದ ಕದ ತೆರೆದು ಆಸ್ವಾದಿಸಿದ ಕನ್ನಡ ಪಂಡಿತರ ರನ್ನನ ಗದಾಯುದ್ಧ ಇರಬಹುದು; ಸಮಾಜ ವಿಜ್ಞಾನದ ಅಧ್ಯಾಪಕರ ಸ್ವಾತಂತ್ರ್ಯ ಹೋರಾಟದ ಕಥನದ ಪಂಕ್ತಿಗಳಿರಬಹುದು, ಜಗದೀಶಚಂದ್ರ ಬೋಸ್, ಥಾಮಸ್ ಆಲ್ವಾ ಎಡಿಸನ್‌ನಂಥವರು ಪ್ರಚುರ ಪಡಿಸಿದ ವಿಜ್ಞಾನ ಬೋಧಕರ ಅಚ್ಚರಿಯ ವರ್ಣನೆ ಇರಬಹುದು, ಆಟದ ಬಯಲಿನಲ್ಲಿ ದೈಹಿಕ ಶಿಕ್ಷಕರ ವಿಸಿಲ್‌ಲಾಡಿಯ ಬಗೆಗೆ ಭಯಮಿಶ್ರಿತಗೊಂಡು ಕ್ರೀಡಾಂಗಣದಲ್ಲಿ ಬೆವರಿಳಿಸಿದ ನೆನಪುಗಳಿರಬಹುದು- ಇವೆಲ್ಲ ಸುರುಳಿ ಬಿಚ್ಚಿ, ಧುಮ್ಮಿಕ್ಕುವ ಸುದಿನವೇ “ಟೀಚರ್ಸ್ ಡೇ’.
ಇದೊಂದು ಶಿಕ್ಷಕರ ಸ್ವಯಂ ಆತ್ಮಾವಲೋಕನದ ಹಾಗೂ ಶಕ್ತಿ ಸಂವರ್ಧನೆಯ ಅಮೃತ ಘಳಿಗೆಯೂ ಹೌದು. ಸರಳವಾಗಿ ನಿರೂಪಿಸುವುದಾದರೆ “ಬ್ಯಾಟರಿ ಚಾರ್ಜ್’ ಮಾಡುವ ಶುಭವಸರವೂ ಹೌದು. ಸರಕಾರಿ ಸುತ್ತೋಲೆಗೆ ಅನುಗುಣವಾಗಿ ಎಲ್ಲ ಶಿಕ್ಷಕರು ಪುರಭವನದಲ್ಲಿ ಅಥವಾ ಇನ್ನಾವುದಾದರೂ ನಿಯೋಜಿತ ತಾಣದಲ್ಲಿ ಸೇರಿ ದಿನದ ಉದ್ದಕ್ಕೂ, ಭಾಷಣ, ಒಂದಿನಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸತಕ್ಕದ್ದು ಎಂಬಲ್ಲಿಗೆ ಈ ಶಿಕ್ಷಕ ದಿನಾಚರಣೆಯ ಸೂರ್ಯಾಸ್ತಮಾನ ಆಗುವಿಕೆಯಲ್ಲ, ಬದಲಾಗಿ ಪ್ರತಿಯೋರ್ವ ಶಿಕ್ಷಕನ ಮನದಲ್ಲಿ ಹೊಸಬೆಳಕು ತುಂಬಿಕೊಳ್ಳುವ ಪರ್ವಕಾಲವೂ ಹೌದು. ಸೌಧವೊಂದು ಭದ್ರ ಪಂಚಾಂಗದ ಮೇಲೆ ಆಧರಿಸಿದಂತೆ, ಬೆಳಕು ಇತರರಿಗೆ ನೀಡುವಲ್ಲಿ “ತನ್ನತನದ’ ಗುರುತ್ವ ಸಂವರ್ಧನೆಯ ಸ್ವಯಂ ಪ್ರೇರಣೆಗೆ ಕಾವು ನೀಡುವ ಪುಣ್ಯ ಕಾಲವೂ ಇದೇ. ಇಲ್ಲಿ ಶಿಕ್ಷಕತನದ ಪಂಚಾಂಗ ಅರ್ಥಾತ್ ಐದು ತತ್ವ ಅಥವಾ ಸತ್ವಗಳಾದರೂ ಯಾವುವು? ಇವುಗಳ ಸರಳ ನಿರೂಪಣೆ ಹೀಗೆ ವಿಶದೀಕರಿಸಬಹುದು:
1. ತನ್ನದೇ ಶಿಕ್ಷಕ ವೃತ್ತಿಯ ಬಗ್ಗೆ ಆತ್ಮಾಭಿಮಾನ, ಪ್ರೀತಿ ಹಾಗೂ ಗೌರವ- ಇದು ಶಿಕ್ಷಕರಿಗೆ ಇರಲೇ ಬೇಕಾದ ಪ್ರಾಥಮಿಕ ಅಂಶ.
2. ಎರಡನೆಯದಾಗಿ, “ಜ್ಞಾನತೃಷೆ’ ಉತ್ತಮ ಶಿಕ್ಷಕನ ಇನ್ನೊಂದು ಮೂಲಧಾತು. ತಾನು ಕಲಿಸುವ ಪಠ್ಯದ ಬಗೆಗೆ, ವಿಷಯದ ಬಗೆಗೆ ಪರಿಪೂರ್ಣ ಜ್ಞಾನ ನೂರಕ್ಕೆ ನೂರು ಪ್ರತಿಶತಃ ಯಾರಿಗೂ ಸಾಧ್ಯವಿಲ್ಲ. ಅನೇಕ ಹಿರಿಯ ಪರಂಪರೆಯ ಗುರುಗಳ ನಿರಂತರ ಅಧ್ಯಯನಶೀಲತೆ, ಬೆರಗುಗೊಳಿಸುವಷ್ಟು ಜ್ಞಾನ ಭಂಡಾರ- ಇವೆಲ್ಲವೂ ಕಟ್ಟುಕತೆಗಳಲ್ಲ; ವಾಸ್ತವ!
3. ತಮಗೆ ಅನ್ನ ನೀಡುವ, ಬೋಧನೆ, ಸಾಧನೆಯ ತಾಣ ಎನಿಸುವ ತಂತಮ್ಮ ವಿದ್ಯಾಸಂಸ್ಥೆಗಳ ಬಗೆಗೆ ನಿಷ್ಠೆ ತೀರಾ ಅತ್ಯಗತ್ಯ. ಅವು ಖಾಸಗಿ ಇರಬಹುದು, ಸರಕಾರೀ ಶಾಲೆ, ಕಾಲೇಜುಗಳಿರಬಹುದು. ಅದರ ಸರ್ವಾಂಗೀಣ, ಉನ್ನತಿಗೆ ಯತ್ನಿಸುವ, ಅದನ್ನು ಪ್ರೀತಿಸುವ ವಿಶಾಲ ಹೃದಯವಂತಿಕೆ ಶಿಕ್ಷಕರು ಆರ್ಜಿಸಬೇಕಾದ ಗುಣ. ಎಷ್ಟೋ ವಿದ್ಯಾ ಸಂಸ್ಥೆಗಳ ಅಧ್ಯಾಪಕರ ನಿರಂತರ ಯತ್ನದಿಂದ ಗ್ರಂಥಾಲಯ, ಪ್ರಯೋಗ ಶಾಲೆಯಿಂದ ಹಿಡಿದು ಆಟದ ಬಯಲು, ಸುಂದರ ತೋಟದವರೆಗೆ, ಪ್ರಶಸ್ತಿ ಪತ್ರಗಳಿಂದ ಹಿಡಿದು ಸಾಲು ಸಾಲು ಪದಕ, ಪಾರಿತೋಷಕದ ವರೆಗೆ ಅಂತೆಯೇ ಶಿಸ್ತಿನ ಒಪ್ಪ ಓರಣದ ಬಗೆಗೆ ಶಿಕ್ಷಕರ ಪಾತ್ರ ಬಹಳಷ್ಟು ಹಿರಿದು.
4. ತಾವು ಕಲಿಸುವ ಮಕ್ಕಳ ಬಗೆಗೆ ಅಕ್ಕರೆ, ಪ್ರೀತಿ ಹಾಗೂ ಶಿಷ್ಯವಾತ್ಸಲ್ಯ ಇವೆಲ್ಲ ಅಕ್ಷರ ಗಳಲ್ಲಿ ತುಂಬಲಾರದ, ಶಿಕ್ಷಕ ಸಂಪನ್ಮೂಲದ ಮೂಲಧಾರೆ. ಮಕ್ಕಳ ಬಾಳಹೊತ್ತಗೆಯಲ್ಲಿ ಗುರುಗಳ ಸುಂದರ ಹಸ್ತಾಕ್ಷರ ಮೂಡಿ ಬರುವಲ್ಲಿ ಶಿಕ್ಷಕರ ದಿನಾಚರಣೆಯ ನೈಜ ಮಕರಂದ ತುಂಬಿ ನಿಂತಿದೆ.
5. “ನಾವು ರಾಷ್ಟ್ರ ಕಟ್ಟುವ ಭಾವೀ ಪ್ರಜೆಗಳ ನಿರ್ಮಾತೃಗಳು’ ಎಂಬ ಔನ್ನತ್ಯದ ಮನೋ ಭೂಮಿಕೆ, ರಾಷ್ಟ್ರೀಯ ಪರಿಕಲ್ಪನೆ, ಅಂತಃಸತ್ವ ಶಿಕ್ಷಕರ ಮೈಮನ ಅರಳಿಸುವಂತಿರಬೇಕು. “ತಮ್ಮ ಜೀವಿತ ಕಾಲದಲ್ಲೇ ಭಾರತ ಸ್ವತಂತ್ರವಾದರೆ ತಾವು ಯಾವ ಮಂತ್ರಿ ಆಗಬೇಕೆಂದು ಬಯಸುವಿರಿ?’ ಇದು ಬಾಲಗಂಗಾಧರ ತಿಲಕರಿಗೆ ಅಭಿಮಾನಿಯೋರ್ವರ ಪ್ರಶ್ನೆಯಾಗಿತ್ತು. ಆಗ ಥಟ್ಟನೆ “ನಾನು ಗಣಿತ ಅಧ್ಯಾಪಕ ನಾಗುವ ಬಯಕೆ ಹೊಂದಿದ್ದೇನೆ’ ಎಂದು ಉತ್ತರ ಅವರಿಂದ ಪುಟಿಯಿತು. ಮೈಸೂರು ವಿಶ್ವ ವಿದ್ಯಾನಿಲಯ ದಲ್ಲಿನ ತತ್ತÌಶಾಸ್ತ್ರ ಪ್ರಾಧ್ಯಾಪಕರಾದ ಡಾ| ರಾಧಾಕೃಷ್ಣನ್ ರಾಷ್ಟ್ರಪತಿ, ಉಪರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೇ ಗೇರುವಲ್ಲಿ ಅವರ ರಾಷ್ಟ್ರಭಕ್ತಿಯೇ ಶಕ್ತಿಧಾತುವಾದುದು ಒಂದು ಜ್ವಲಂತ ಉದಾಹರಣೆ: ಮೈಸೂರಿನ ಮಹಾ ರಾಜ ಕಾಲೇಜಿನಲ್ಲಿ ಅವರ ವಿದಾಯ ಕೂಟದ ಬಳಿಕ ರೈಲ್ವೇ ಸ್ಟೇಶನ್‌ಗೆ ತೆರಳಲು ಬಂದ ಕುದುರೆಗಾಡಿಯ ಕುದುರೆಗಳನ್ನು ಬಿಚ್ಚಿ ಸ್ವತಃ ವಿದ್ಯಾರ್ಥಿಗಳೇ ಎಳೆದುಕೊಂಡು ಹೋದ ಸಂದರ್ಭ- ಆ ಗುರು-ಶಿಷ್ಯರ ಮನದ ಮನೋಭೂಮಿಕೆ ಹೇಗಿರಬಹುದು ಅದು ಊಹನೆಗೆ ನಿಲುಕದಂತಹದು!
ಹೀಗೆ ಭದ್ರ ಪಂಚಾಂಗದ ಮೇಲೆ ಶಿಕ್ಷಕರನನ್ನು ಇರಿಸಿ, ಸಮಗ್ರ ರಾಷ್ಟ್ರ ಚಿಂತನೆಯ ಪರಿಧಿಯಲ್ಲಿ ಗುರು ಪರಂಪರೆಯ ಜೀವಂತಿಕೆಗೆ ನೀರೆರೆಯುವ ಪುಣ್ಯದಿನ ವಿದು. ಈಗಲೂ ನಾಟ್ಯ, ಯಕ್ಷಗಾನ, ಸಂಸ್ಕೃತಾಭ್ಯಾಸ ಹೀಗೆ ಹಲವು ರಂಗಗಳಲ್ಲಿ ಯಥಾವತ್ತಾಗಿ ಮುಂದು ವರಿಯುತ್ತಿರುವ ಗುರು ಪರಂಪರೆಯ ಗಮನಾರ್ಹ. ನಾಡಿನ ಏಳಿಗೆಯಲ್ಲಿ ಪ್ರಧಾನ ಭೂಮಿಕೆಯ ವಿದ್ಯಾರ್ಜನೆಯ ಚೇತನ ಸಂವರ್ಧನೆಯ ಪೂರಕ, ಪ್ರೇರಕ ಶುಭಗಳಿಗೆಯೇ ಶಿಕ್ಷಕರ ದಿನಾಚರಣೆ.
-ಡಾ| ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.