ರಂಜನೆಯನ್ನು ಮನೆಯೊಳಕ್ಕೆ ತಂದ ಟಿವಿಗೆ ಸ್ಮಾರ್ಟ್‌ ಸವಾಲು

ಇಂದು ಜಾಗತಿಕ ದೂರದರ್ಶನ ದಿನ

Team Udayavani, Nov 21, 2019, 6:00 AM IST

gg-13

ಥಿಯೇಟರ್‌ಗಳಲ್ಲಿ ಸಾಮೂಹಿಕ ವೀಕ್ಷಣೆಯ ವಿಷಯವಾಗಿದ್ದ ಮನೋರಂಜನೆಯನ್ನು ಮನೆಯೊಳಗೆ ಸಾಂಸಾರಿಕ ವೀಕ್ಷಣೆಯ ಮಟ್ಟಕ್ಕೆ ಕರೆತಂದದ್ದು ದೂರದರ್ಶನ ಅಥವಾ ಟೆಲಿವಿಷನ್‌. ಇದರಿಂದಾಗಿ ಅದು ಎಷ್ಟು ಜನಪ್ರಿಯವಾಯಿತೆಂದರೆ ಅನೇಕ ಥಿಯೇಟರ್‌ಗಳು ಬಾಗಿಲು ಮುಚ್ಚಬೇಕಾಯಿತು; ಒಂದು ಸೂರಿನಡಿ ಹಲವು ಆಕರ್ಷಣೆಗಳಿರುವ ಮಲ್ಟಿಪ್ಲೆಕ್ಸ್‌ಗಳಾಗಿ ಬದಲಾಗಬೇಕಾಯಿತು. ಮೊದಲಿಗೆ ಮನೋರಂಜನೆಯ ಮಾಧ್ಯಮ ಮಾತ್ರವಾಗಿದ್ದ ಟಿವಿ ಆ ಬಳಿಕ ಸುದ್ದಿ, ಮಾಹಿತಿಗಳ ಮಾಧ್ಯಮವೂ ಆಗಿ ಮುದ್ರಣ ಮಾಧ್ಯಮಕ್ಕೆ ಸವಾಲು ಹಾಕಿತು. ಅಂಥ ಟೆಲಿವಿಷನ್‌ ಈಗ ಸ್ಮಾರ್ಟ್‌ ಫೋನ್‌ಗಳಿಂದ ಸವಾಲು ಎದುರಿಸುತ್ತಿದೆ.

ಇಂದು ಜಾಗತಿಕ ಟೆಲಿವಿಷನ್‌ ದಿನ. ದೂರದರ್ಶನವು ಸಾಗಿ ಬಂದ ದಾರಿಯನ್ನು ಮೆಲುಕು ಹಾಕಿ ಅದರ ಮುಂದಿನ ಹಾದಿಯನ್ನು ಕಲ್ಪಿಸಿಕೊಳ್ಳುವುದಕ್ಕೆ ಇದೊಂದು ನೆಪ ಮಾತ್ರ.

ಸಮರ್ಥ ಮಾಧ್ಯಮವಾಗಿ ಟೆಲಿವಿಷನ್‌
ಟೆಲಿವಿಷನ್‌ ಪರಿಚಯಿಸಲ್ಪಟ್ಟಾಗ “ಮೂರ್ಖರ ಪೆಟ್ಟಿಗೆ’ ಎಂದು ಮೂಗು ಮುರಿದವರೇ ಅಧಿಕ. ವರ್ಷಗಳುರುಳಿದಂತೆಯೇ ಅದು ಇಲ್ಲದ ಮನೆಯೇ ಇಲ್ಲ ಎಂಬಂತಾಯಿತು. ಕಳೆದ 2-3 ದಶಕಗಳಲ್ಲಿ ಟಿ.ವಿ. ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬಂದಿದೆ.

ವಿಶ್ವ ಟಿ.ವಿ. ದಿನದ ಹಿನ್ನೆಲೆ
1990ರ ದಶಕದಲ್ಲಿ ಟಿ.ವಿ.ಯ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ಇದನ್ನೊಂದು ಮಾಹಿತಿ, ಸಂವಹನದ ಪ್ರಮುಖ ಕೊಂಡಿಯಾಗಿ ಬಳಸಲು ಬಲಾಡ್ಯ ದೇಶಗಳು ಮುಂದಾದವು. 1996ರ ನ. 21 ಮತ್ತು 22ರಂದು ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆದ ಮೊದಲ ವಿಶ್ವ ಟೆಲಿವಿಷನ್‌ ಫೋರಂನಲ್ಲಿ ವಿಶ್ವಾದ್ಯಂತ ಟಿ.ವಿ.ಯನ್ನು ಒಂದು ಮಾಧ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗೆಗೆ ಚರ್ಚೆ ನಡೆಸಲಾಯಿತು. ಈ ಸಭೆಯ ಫ‌ಲಶ್ರುತಿಯಾಗಿ ಅದೇ ವರ್ಷದ ಡಿ.17ರಂದು ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರತಿ ವರ್ಷದ ನ. 21ರಂದು “ವಿಶ್ವ ಟೆಲಿವಿಷನ್‌ ದಿನ’ ಆಚರಿಸುವ ಘೋಷಣೆ ಮಾಡಲಾಯಿತು.

ಟಿ.ವಿ. ಮತ್ತು ಜನಸಾಮಾನ್ಯರು
ವಿವಿಧ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಟಿ.ವಿ.ಯನ್ನು ಒಂದು ಸಮರ್ಥ ಮಾಧ್ಯಮವಾಗಿ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಈ ಮಾಧ್ಯಮವನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಸಂಕಲ್ಪವನ್ನು ತೊಡುವ ಉದ್ದೇಶ ವಿಶ್ವ ಟಿ.ವಿ. ದಿನದ್ದಾಗಿದೆ.

ಟಿ.ವಿ.ಗಿದೆ ಉಜ್ವಲ ಭವಿಷ್ಯ
ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಗಳಾಗುತ್ತಿದ್ದು ಎಲ್ಲರೂ ಡಿಜಿಟಲ್‌ ನತ್ತ ಮುಖ ಮಾಡುತ್ತಿದ್ದರೂ ಟಿ.ವಿ. ಮಹತ್ವ ಕಳೆದುಕೊಂಡಿಲ್ಲ. ಟಿ.ವಿ.ಯೂ ತನ್ನ ರೂಪ, ಗಾತ್ರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಕಂಡಿದೆ. ಒಂದು ಮಾಧ್ಯಮವಾಗಿ ಟಿ.ವಿ.ಗೆ ಇನ್ನೂ ಬಹಳಷ್ಟು ಅವಕಾಶಗಳಿದ್ದು ಅವೆಲ್ಲವನ್ನು ಬಳಸಿಕೊಂಡು ಮುನ್ನಡೆದಲ್ಲಿ ಟಿ.ವಿ. ಮಾಧ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಬಲವಾಗಿ ಬೇರೂರಲಿದೆ.

ಸುದ್ದಿಗಿಂತ ಬ್ರೇಕಿಂಗ್‌, ಪ್ಯಾನೆಲ್‌ ಸಂವಾದಗಳ ಸದ್ದು
ಖಾಸಗಿ ಟಿ.ವಿ. ಚಾನೆಲ್‌ಗ‌ಳು ಬ್ರೇಕಿಂಗ್‌ ನ್ಯೂಸ್‌ಗೆ ನೀಡುತ್ತಿರುವ ಆದ್ಯತೆಯು ಎಷ್ಟೋ ಬಾರಿ ಅವಾಂತರ, ಟೀಕೆಗಳಿಗೆ ಒಳಗಾಗಿದ್ದರೂ ತುರ್ತಾಗಿ ಸುದ್ದಿಯನ್ನು ತಿಳಿದುಕೊಳ್ಳಲು ಟೆಲಿವಿಷನ್‌ ಅತ್ಯಂತ ಪ್ರಮುಖ ಮಾಧ್ಯಮವಾಗಿಯೇ ಇದೆ. ಒಂದೆರಡು ದಶಕಗಳಿಂದೀಚೆಗೆ ಹೆಚ್ಚು ಜನಪ್ರಿಯತೆ ಪಡೆದಿರುವ “ಬ್ರೇಕಿಂಗ್‌ ನ್ಯೂಸ್‌’ ಸಾಕಷ್ಟು ಟೀಕೆಗಳಿಗೂ ಒಳಗಾಗುತ್ತಿದೆ. ಇಂದು ಈ ಕ್ಷಣದ ಸುದ್ದಿಯನ್ನು ಟಿ.ವಿ. ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ ಮತ್ತು ನೇರಪ್ರಸಾರದ ಮೂಲಕವೂ ನಾವು ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಆದ್ದರಿಂದ ಎಷ್ಟು ಟೀಕೆಗಳು ಇದ್ದರೂ ಸುದ್ದಿ ಮಾಧ್ಯಮವಾಗಿ ಟಿ.ವಿ. ಚಾನೆಲ್‌ಗ‌ಳು ಈಗ ಹೆಚ್ಚು ಜನಪ್ರಿಯತೆಯನ್ನು ಉಳಿಸಿಕೊಂಡಿವೆ.

ಸುದ್ದಿ ಚಾನೆಲ್‌ಗ‌ಳು ಇಂದು ಸುದ್ದಿಗಿಂತ ವಿಶ್ಲೇಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ ಎಂಬ ಟೀಕೆಯೂ ಇದೆ. ವಿಶ್ಲೇಷಣೆಯಿಂದ ಸುದ್ದಿ ಅಥವಾ ವಿಷಯದಲ್ಲಿ ಹೆಚ್ಚು ಮಾಹಿತಿಯ ಮಂಥನವಾಗುತ್ತದೆ ಎಂಬುದು ನಿಜ. ಆದರೆ ಪೂರ್ವಗ್ರಹ ಪೀಡಿತ ಮತ್ತು ಪಕ್ಷಪಾತಿ ನೆರಳಿನ ವಿಶ್ಲೇಷಣೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇಂದು ಮುದ್ರಣ ಮಾಧ್ಯಮದ ಮೇಲೂ ಈ ಸುದ್ದಿ ಚಾನೆಲ್‌ಗ‌ಳು ಪರೋಕ್ಷವಾಗಿ ಪ್ರಭಾವ ಬೀರುತ್ತಿದ್ದು, ಅದು ಸುದ್ದಿ ನಿರೂಪಣೆಯ ಶಿಸ್ತಿನ ಮೇಲೆ ನೇರ ಪರಿಣಾಮ ಬೀರಿದೆ ಎಂಬ ಮಾತೂ ಕೇಳಿ ಬರುತ್ತಿದೆ.

ಮನೋರಂಜನೆಯನ್ನೇ ಬದಲಿಸಿದ ಟಿವಿ
ದೂರದರ್ಶನದ ಮೂಲಕ 1959ರಲ್ಲಿ ಟಿವಿ ಭಾರತದಲ್ಲಿ ಕಾಲೂರಿದಾಗ ಮನೋರಂಜನೆಗೆ ಹೊಸ ಆಯಾಮ ದೊರಕಿತು. ಕಪ್ಪು ಬಿಳುಪು ಟಿವಿಯಲ್ಲಿ ಕಾರ್ಯಕ್ರಮ ನೋಡಿ ಜನರು ಹಿಗ್ಗಿದರು. ಮುಂದೆ ವರ್ಣಮಯವಾದಾಗ ಆಶ್ಚರ್ಯಪಟ್ಟರು. 90ರ ದಶಕದಲ್ಲಿ ರಾಮಾಯಣ, ಮಹಾಭಾರತ ಧಾರಾವಾಹಿಗಳ ಮೋಡಿ ವರ್ಣಿಸಲು ಸಾಧ್ಯವಿಲ್ಲ. ಊರಿನ ಒಂದೆರಡು ದೊಡ್ಡವರ ಮನೆಗಳಲ್ಲಿದ್ದ ಟಿವಿ ನೋಡಲು ಜನರು ಸಾಲುಸಾಲಾಗಿ ಹೋಗುವುದು ಸಾಮಾನ್ಯವಾಗಿತ್ತು.

ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗುತ್ತಿದ್ದಂತೆ ಖಾಸಗಿ ಚಾನೆಲ್‌ಗ‌ಳೂ ಆರಂಭವಾದವು. ವೀಕ್ಷಕರಿಗೆ ಆಯ್ಕೆಯ ಅವಕಾಶ ಲಭಿಸಿದವು.  ಮನೋರಂಜನೆಗಾಗಿಯೇ ಟಿವಿ ವೀಕ್ಷಿಸು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಚಾನೆಲ್‌ಗ‌ಳು ಲಭ್ಯವಿರುವುದು ಪ್ರಮುಖ ಕಾರಣ. ಅಲ್ಲದೆ ಆಯ್ಕೆಗೆ ವಿಪುಲ ಅವಕಾಶಗಳಿವೆ. ಈ ಕಾರಣಕ್ಕಾಗಿ ಒಂದಕ್ಕಿಂತ ಹೆಚ್ಚು ಟಿವಿ ಇರುವ ಮನೆಗಳನ್ನೂ ಕಾಣಬಹುದು.

ಟಿವಿಗೆ ಮೊಬೈಲ್‌ ಸವಾಲು
ಒಂದೊಮ್ಮೆ ಶ್ರೀಮಂತರ ಸೊತ್ತು ಆಗಿದ್ದ ಟಿವಿ ಇಂದು ಹೇಗೆ ಎಲ್ಲ ಮನೆಗಳನ್ನು ಸೇರಿಕೊಂಡಿದೆಯೋ ಅದೇ ರೀತಿ ಮೊಬೈಲ್‌ ಎಲ್ಲರ ಕೈಗಳಿಗೂ ದಾಂಗುಡಿ ಇಟ್ಟಿದೆ. ಸಾಕಷ್ಟು ನವ ಮಾಧ್ಯಮ ತಾಣಗಳನ್ನು (ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ ಮೊದಲಾದ ಮೈಕ್ರೋ ತಾಣ ಗಳು) ಹೊಂದಿರುವ ಈ ಮೊಬೈಲ್‌ ಮುಂದೆ ಟಿವಿಗೆ ಸವಾಲು ನೀಡುವ ದಿನಗಳು ದೂರ ಇಲ್ಲ. ಏಕೆಂದರೆ ಮೊಬೈಲ್‌ನಲ್ಲಿ ಟಿವಿಗಿಂತ ಹೆಚ್ಚಿನ ಮಾಹಿತಿ ಸಿಗುತ್ತಿವೆ. ಅದೂ ವೈಯಕ್ತಿಕವಾಗಿ!

ಮೊಬೈಲ್‌ನಲ್ಲಿ ಆಗುತ್ತಿರುವ ಕ್ರಾಂತಿ ಯುವ ಜನರನ್ನು ಸೂಜಿಗಲ್ಲಿ ನಂತೆ ಆಕರ್ಷಿಸುತ್ತಿದೆ. ಈಗಾಗಲೇ ಟಿವಿಯಲ್ಲಿ ಸಿಗುವ ಬಹುತೇಕ ಎಲ್ಲ ಮನರಂಜನೆ, ಸುದ್ದಿ ಮಾಹಿತಿಗಳು ಮೊಬೈಲ್‌ನಲ್ಲಿಯೂ ಸಿಗುತ್ತದೆ. ಟಿವಿಯಾದರೆ ಎಲ್ಲರೂ ಜತೆಯಾಗಿ ಕುಳಿತು ವೀಕ್ಷಿಸಬೇಕು. ಮೊಬೈಲ್‌ನ ದೊಡ್ಡ ಪ್ಲಸ್‌ ಪಾಯಿಂಟ್‌ ಅಂದರೆ ವೈಯಕ್ತಿಕವಾಗಿ ವೀಕ್ಷಣೆ. ಇನ್ನು 5ಜಿಯಂತಹ ಸೂಪರ್‌ ವೇಗದ ಇಂಟರ್‌ನೆಟ್‌ ಸೌಲಭ್ಯ ದೊರೆತರಂತೂ ಅನ್ನ, ನೀರಿನ ಗೊಡವೆಯೂ ಇಲ್ಲದಾಗಬಹುದು. ಆದುದರಿಂದ ಟಿವಿಗೆ ಭವಿಷ್ಯತ್‌ಕಾಲದಲ್ಲಿ ಮೊಬೈಲ್‌ ಎಂಬುದು ಮಗ್ಗುಲ ಮುಳ್ಳಾಗುವುದು ಖಚಿತ.

ಟಿವಿಗಿಂತಲೂ ವೇಗ
ಸಾಮಾಜಿಕ ಜಾಲ ತಾಣಗಳ ಮಾಹಿತಿ ಮಹಾಪೂರ ಕಲ್ಪನೆಗೆ ನಿಲುಕದಷ್ಟಿದೆ. ಕ್ಷಣ ಕ್ಷಣಕ್ಕೆ ಸಾವಿರಾರು ಅಪ್‌ಡೇಟ್‌ಗಳು ಅಂಗೈಗೆ ಬಂದು ಬೀಳುತ್ತಿವೆ. ಎಲ್ಲಿಯೋ ಅಪಘಾತ, ಪ್ರಕೃತಿ ವಿಕೋಪ, ಉಗ್ರಗಾಮಿ ಕೃತ್ಯಗಳು ಘಟಿಸಿದರೆ, ಅಷ್ಟೇ ಏಕೆ ರಸ್ತೆಯಲ್ಲಿ ದೊಡ್ಡ ಹೊಂಡ ಬಿದ್ದರೂ, ಕೆಲವೇ ಕ್ಷಣಗಳಲ್ಲಿ ಸಿಡಿಲು, ಮಿಂಚು, ಮಳೆ ಬರುವುದಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕವೇ ತಿಳಿಯುವುದರಿಂದ ಟಿವಿಯ ಅಗತ್ಯವಾದರೂ ಏನಿದೆ?

ಮಕ್ಕಳು ಮತ್ತು ಟಿವಿ
ಅನಿಯಂತ್ರಿತ ವೀಕ್ಷಣೆಯಿಂದ ಹಾನಿಯೇ ಹೆಚ್ಚು
ಟಿವಿ ಚಾನೆಲ್‌ಗ‌ಳು ಎಲ್ಲ ರೀತಿಯ ಕಾರ್ಯ ಕ್ರಮಗಳನ್ನೂ ಬಿತ್ತರಿಸುತ್ತಿದ್ದು, ಅವು ಮಕ್ಕಳ ಮೇಲೆ ಸತ್ಪರಿಣಾಮ, ದುಷ್ಪರಿಣಾಮಗಳೆರಡನ್ನೂ ಬೀರುತ್ತವೆ. ಅತಿ ವೀಕ್ಷಣೆಯಿಂದ ಕೆಡುಕೇ ಅಧಿಕ. ನಿಯಮಿತ ವೀಕ್ಷಣೆ ಜ್ಞಾನಶಕ್ತಿ ವೃದ್ಧಿಗೆ ಪೂರಕ.

ಜ್ಞಾನ ವೃದ್ಧಿ
ಸುದ್ದಿ ವಾಹಿನಿಗಳು ಕ್ಷಣಕ್ಷಣದ ಆಗು ಹೋಗು ಗಳನ್ನು ಬಿತ್ತರಿಸುವುದರಿಂದ ಜಗದಗಲದ ವರ್ತಮಾನಗಳನ್ನು ಮನೆಯಲ್ಲಿ ಕುಳಿತುಕೊಂಡೇ ತಿಳಿದುಕೊಳ್ಳಬಹುದು. ಪೌರಾಣಿಕ, ಚಾರಿತ್ರಿಕ ಧಾರಾವಾಹಿ, ಸಿನೆಮಾ ವೀಕ್ಷಣೆಯಿಂದ ಮಾಹಿತಿಯೊಂದಿಗೆ ಮಕ್ಕಳಲ್ಲಿ ಧರ್ಮಾಭಿಮಾನ, ದೇಶಪ್ರೇಮ ಬೆಳೆಯುತ್ತವೆ. ವಿವಿಧ ಭಾಷಾ ಚಾನೆಲ್‌ಗ‌ಳ ವೀಕ್ಷಣೆಯಿಂದ ಮಕ್ಕಳ ಭಾಷಾ ಕೌಶಲ ವೃದ್ಧಿಸುತ್ತದೆ.

ಉತ್ತಮ ಸಂದೇಶಗಳ ಕೊರತೆ
ಇಂದು ಹೆಚ್ಚಿನ ಟಿವಿ ಧಾರಾವಾಹಿಗಳು ಕೌಟುಂಬಿಕ ಕಲಹಗಳನ್ನೇ ಬಿಂಬಿಸುತ್ತವೆ. ಟಿವಿ ವೀಕ್ಷಣೆಯ ಚಟ ಪಾಠ-ಪ್ರವಚನದ ಮೇಲೂ ಪರಿಣಾಮ ಬೀರುವುದರಿಂದ ಶೈಕ್ಷಣಿಕ ಪ್ರಗತಿಗೂ ಮಾರಕವಾಗುತ್ತದೆ.

ದಾರಿ ತಪ್ಪುವ ಭೀತಿ
ಟಿವಿಯಿಂದ ಲಭಿಸುವ ಸಮಗ್ರ ಮಾಹಿತಿಗಳಿಂದಾಗಿ ಪ್ರಪಂಚ ಕಿರಿದಾಗುತ್ತಿದೆ ಎನ್ನುತ್ತಾರೆ. ಆದರೆ ಇದೇ ವೇಳೆ “ಮಕ್ಕಳ ಪ್ರಪಂಚ’ವೂ ಕಿರಿದಾಗುತ್ತಿದೆ. ಅತಿಯಾದ ಟಿವಿ ವೀಕ್ಷಣೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿಯಂತ್ರಣ ಅಗತ್ಯ ಹೆತ್ತವರು ಮಕ್ಕಳನ್ನು ನಿಯಂತ್ರಿಸುವುದರ ಜತೆಗೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಉತ್ತಮ. ಯಾವ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ಪೂರಕ ಎಂಬುದನ್ನು ತೀರ್ಮಾನಿಸಿ ಅವುಗಳನ್ನಷ್ಟೇ ವೀಕ್ಷಿಸಲು ಅವಕಾಶ ಕಲ್ಪಿಸುವುದು ಸೂಕ್ತ.

ಶೇ.34 ಮನೆಗಳಲ್ಲಿ ಟಿವಿ ಇಲ್ಲ
ದೇಶದಲ್ಲಿ ಶೇ.34 ರಷ್ಟು ಕುಟುಂಬಗಳು ಇನ್ನೂ ಟಿವಿಯನ್ನು ಹೊಂದಿಲ್ಲ ಎಂದು ವರದಿ ತಿಳಿಸುತ್ತದೆ.

ಟಾಪ್ ನ್ಯೂಸ್

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.