ಇಂದು World Anti-Child Labor Day: ಚಿಗುರಲಿ ಬಾಲ್ಯ, ಅರಳಲಿ ಹರೆಯ
Team Udayavani, Jun 12, 2023, 7:34 AM IST
ಬಾಲ್ಯದಲ್ಲಿನ ಅನುಭವಗಳು ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ನಿರ್ಣಯಿಸುತ್ತವೆ. ಬಾಲ್ಯದಲ್ಲಿ ಸಿಗುವ ಸಾಮಾಜಿಕ ಪರಿಸರ, ಬೆಳೆಯುವ ವಾತಾವರಣ, ಶಿಕ್ಷಣ, ಅನುಭವಗಳು ಬದುಕಿನ ಅಡಿಪಾಯಗಳು. ಆದರೆ ನಮ್ಮ ಸುತ್ತಮುತ್ತ ಅದೆಷ್ಟೋ ಬಾಲ್ಯ ಗಳು ಬೆಳಕು ಕಾಣದೆ ಕಮರಿ ಹೋಗಿವೆ.
ಪ್ರೀತಿ ಸಿಗದ, ಅಸಾಧ್ಯವಾದ ಹೊರೆಯನ್ನು ಹೊರುವ ಸಾವಿರಾರು ಬಾಲ್ಯದ ಮುಖಗಳಿವೆ. ಶಾಲೆಯ ಮೆಟ್ಟಲು ಕಾಣದೆ ವಂಚನೆಗೊಳಗಾದ ಪ್ರತಿಭೆಗಳಿವೆ. ಈ ಮುಖಗಳು ಬೀದಿ, ಹೊಟೇಲ್, ಗಣಿ, ಕಾರ್ಖಾನೆ, ಅಂಗಡಿ, ಬಸ್ ನಿಲ್ದಾಣಗಳಲ್ಲಿ ದುಡಿಯುವ, ಮನೆ ಕೆಲಸ ಮತ್ತು ಭಿಕ್ಷಾಟನೆಗಳಲ್ಲಿ ತೊಡಗಿಕೊಂಡಿರುವ ದೃಶ್ಯಗಳು ಪ್ರತೀದಿನ ಕಾಣ ಸಿಗುತ್ತವೆ. ಇದು ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಲ್ಲ. ಬಾಲ ಕಾರ್ಮಿಕತೆ ಸಮಾಜಕ್ಕೆ ಅಂಟಿದ ಶಾಪ. ಸಶಕ್ತ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಆತಂಕ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾನಿ ಮಾಡುವ ಮೂಲಕ ಭವಿಷ್ಯವನ್ನು ಹಾಳುಮಾಡುತ್ತದೆ. ಅವರನ್ನು ಆಟ-ಪಾಠಗಳಿಂದ ವಂಚಿತರನ್ನಾಗಿಸುತ್ತದೆ. ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ದೈನಂದಿನ ಹಾಗೂ ದೀರ್ಘಾವಧಿ ದುಡಿಮೆಯಲ್ಲಿ ತೊಡಗಿಸಿಕೊಂಡ ನಿಗದಿತ ವಯಸ್ಸಿಗಿಂತ ಅಂದರೆ 14 ವರ್ಷಕ್ಕಿಂತ ಕೆಳಗಿನ, ಹಣಕ್ಕಾಗಿ ದುಡಿಯುವ ಮಕ್ಕಳನ್ನು ಬಾಲಕಾರ್ಮಿಕರು ಎಂದು ಕರೆಯುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಸಂಪೂರ್ಣವಾಗಿ ರೂಪುಗೊಂಡಿರುವುದಿಲ್ಲ. ಅವರು ದೈಹಿಕವಾಗಿ ಕೆಲಸ ಮಾಡಲು ಸಮರ್ಥರಾಗಿರುವುದಿಲ್ಲ. ಸಣ್ಣ ವಯಸ್ಸಿನಲ್ಲಿ ಅತಿಯಾಗಿ ದುಡಿಯುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಹಾಗೂ ಬಾಲ್ಯ ವನ್ನು ಅನುಭವಿಸಲಾರದೆ ಖನ್ನರಾಗುವ ಸಾಧ್ಯತೆ ಗಳಿರುತ್ತವೆ. ಅವರು ಅಪಾಯಕಾರಿ ಪ್ರದೇಶಗಳಲ್ಲಿ ಅಥವಾ ಚಟುವಟಿಕೆಗಳಲ್ಲಿ ಕೆಲಸ ಮಾಡಬೇಕಾದಾಗ ಇದು ಮತ್ತಷ್ಟು ಉಲ್ಬಣಗೊಳ್ಳುತ್ತದೆ.
ಬಾಲ್ಯದಲ್ಲಿನ ದುಡಿಮೆಯು ಮಕ್ಕಳ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕವಾಗಿಯೂ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಅನೇಕ ಬಾರಿ, ಮಕ್ಕಳು ಮಾದಕ ದ್ರವ್ಯ ಮತ್ತು ಮದ್ಯದ ಚಟಗಳಿಗೆ ಬಲಿಯಾಗಿ ಬಾಲಾಪರಾಧಿಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿರುತ್ತವೆ. ಇನ್ನು ಶಾಲೆಗೆ ಹೋಗದೆ, ದುಡಿಯಲು ಹೋಗುವ ಮಕ್ಕಳು ಜೀವನಪೂರ್ತಿ ಅನಕ್ಷರಸ್ತರಾಗಿ, ಕೌಶಲ ರಹಿತ ಅಸಂಘಟಿತ ಕಾರ್ಮಿಕರಾಗಿಯೇ ಉಳಿಯಬೇಕಾಗುತ್ತದೆ.
ಮಕ್ಕಳು ಕಾರ್ಮಿಕರಾಗಲು ಕಾರಣ ಬಡತನ ಮಾತ್ರವಲ್ಲ, ಇದರೊಂದಿಗೆ ಹಲವಾರು ಸಾಮಾಜಿಕ, ಆರ್ಥಿಕ, ನೈಸರ್ಗಿಕ ಕಾನೂನು ಸಂಘರ್ಷ, ಮಕ್ಕಳ ಕಳ್ಳಸಾಗಣೆ, ಅನಕ್ಷರತೆ, ಕೌಶಲ ಮತ್ತು ಶಿಕ್ಷಣದ ಕೊರತೆ ಮುಂತಾದ ಅಂಶಗಳು ಕಾರಣವಾಗುತ್ತವೆ. ಈ ಸಮಸ್ಯೆಗಳಿರುವ ಪೋಷಕರ ಮಕ್ಕಳೇ ಹೆಚ್ಚಾಗಿ ಬಾಲಕಾರ್ಮಿಕರಾಗುವ ಸಾಧ್ಯತೆಗಳಿರುತ್ತವೆ. ಇವರುಗಳಿಗೆ ಈ ಕಾಯ್ದೆ ಕಾನೂನುಗಳ ಕುರಿತು ತಿಳಿವಳಿಕೆ ಇರುವುದಿಲ್ಲ, ಕೆಲವರಿಗೆ ಇದರ ಅರಿವಿದ್ದರೂ ಸಹ ಆರ್ಥಿಕ ಸಂಕಷ್ಟದ ಕಾರಣ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಅನಿವಾರ್ಯತೆ ಇರುತ್ತದೆ. ಪೋಷಕರನ್ನೇ ಹೊಂದಿರದ ಅನಾಥ ಮಕ್ಕಳು, ಬೀದಿಮಕ್ಕಳು, ನೈಸರ್ಗಿಕ ವಿಕೋಪ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗಿ ತಂದೆ ತಾಯಿ ಯನ್ನು ಕಳೆದುಕೊಂಡ ಮಕ್ಕಳು ಬದುಕುವ ಅನಿ ವಾರ್ಯತೆಯಿಂದ ದುಡಿಯಲು ಹೊರಡುತ್ತಾರೆ.
ಬಡತನದಿಂದ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳು ಬಾಲ ಕಾರ್ಮಿಕರಾಗಿ ಮಾರ್ಪಾಡಾಗು ತ್ತಿದ್ದಾರೆ. ಮನೆಗಳಲ್ಲಿನ ಬಡತನವು ಬಾಲ ಕಾರ್ಮಿಕ ಪದ್ಧತಿಗೆ ಒಂದು ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ದುಡಿಯುವ ಮಕ್ಕಳಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಂದ ಬಂದವರು.
ಲಿಂಗ ತಾರತಮ್ಯತೆ ಬಾಲ ಕಾರ್ಮಿಕತೆಯ ಇನ್ನೊಂದು ಕಾರಣ. ಅನೇಕ ದೇಶಗಳಲ್ಲಿ, ಹೆಣ್ಣು ಮಕ್ಕಳನ್ನು ತಮ್ಮ ಸಹೋದರರಿಗಿಂತ ಕೀಳಾಗಿ ಪರಿಗಣಿಸಲಾಗುತ್ತದೆ ಮತ್ತು ಚಿಕ್ಕ ವಯಸ್ಸಿ ನಿಂದಲೂ ಅವರನ್ನು ವಿವಿಧ ಕೆಲಸಗಳಿಗೆ ನಿಯೋಜಿಸ ಲಾಗುತ್ತದೆ. ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಮನೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಮಾತ್ರವಲ್ಲ ಅವರನ್ನು ವೇಶ್ಯಾವಾಟಿಕೆಗಳಂತಹ ದುಷ್ಕೃತ್ಯಗಳಿಗೆ ತಳ್ಳಲಾಗುತ್ತದೆ.
2011ರ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 5-14 ವರ್ಷದೊಳಗಿನ ಒಟ್ಟು ಬಾಲ ಕಾರ್ಮಿಕರ ಸಂಖ್ಯೆ 10.11 ಮಿಲಿಯನ್ ಇದೆ. ಇತ್ತೀಚೆಗಿನ ದಶಕಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಮಾ ಧಾನಕರವಾದ ವಿಷಯವಾದರೂ ಸಂಪೂರ್ಣವಾಗಿ ನಿರ್ಮೂಲನವಾಗಬೇಕಿದೆ.
ಬಾಲ ಕಾರ್ಮಿಕ ಪದ್ಧತಿ ತಡೆಗೆ ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ )ಕಾಯ್ದೆ 1986 ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಡಿ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಈ ಕಾಯ್ದೆಯ ಮೂರನೇ ಪರಿಚ್ಛೇದ, ಮಕ್ಕಳು ದುಡಿಯಬಾರದ 18 ಅಪಾಯಕಾರಿ ವೃತ್ತಿಗಳು ಮತ್ತು 65 ಸಂಸ್ಕರಣ ಘಟಕಗಳನ್ನು ಗುರುತಿಸಿದೆ. ಕಾಯ್ದೆ ಉಲ್ಲಂ ಸಿ ಬಾಲ ಕಾರ್ಮಿಕರನ್ನು ನಿಯೋ ಜಿಸಿಕೊಳ್ಳುವ ವ್ಯಕ್ತಿಗಳಿಗೆ ಮೂರು ತಿಂಗಳಿನಿಂದ ಒಂದು ವರ್ಷದ ವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಅಪಾಯಕಾರಿ ಪರಿಸರ ದಲ್ಲಿ ದುಡಿಸಿಕೊಳ್ಳುವುದನ್ನು ನಿಲ್ಲಿಸಲು ಈ ಕಾಯ್ದೆ ಯನ್ನು ಜಾರಿಗೆ ತರಲಾಯಿತು.
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಇಂಟರ್ ನ್ಯಾಶನಲ್ ಲೇಬರ್ ಆರ್ಗನೈಸೇಶನ್) ಬಾಲಕಾರ್ಮಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದನ್ನು ತಡೆಯಲು ಕ್ರಿಯಾತ್ಮಕವಾಗಿ ಕೆಲಸಮಾಡುವ ಉದ್ದೇಶದಿಂದ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ.
ಬಾಲ್ಯ ಮಾನವನ ಜೀವನದಲ್ಲಿ ಬರುವ ಬಹು ಮುಖ್ಯ ಹಂತ. ಮಕ್ಕಳು ಮನುಕುಲದ ಬಹುದೊಡ್ಡ ಕೊಡುಗೆ. ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವುದಲ್ಲದೆ ಅವರ ಸಾಮರ್ಥ್ಯ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ. ಅವರ ದೈಹಿಕ ಮತ್ತು ಮಾನಸಿಕ, ನೈತಿಕ ಬೆಳವಣಿಗೆಯನ್ನು ಹಾನಿಮಾಡುತ್ತದೆ. ಇದರಿಂದ ದೇಶವು ಉತ್ತಮ ಯುವಜನತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಮಗುವು ಉತ್ತಮ ಕೌಟುಂಬಿಕ ವಾತಾವರಣದಲ್ಲಿ ಬದುಕುವ ಮತ್ತು ಬೆಳೆಯುವ ಹಕ್ಕನ್ನು ಪಡೆದಿದೆ. ಅಂದರೆ ಹಿಂಸೆಯಿಂದ ಮುಕ್ತ ವಾದ, ಸಂತೋಷವಾದ ಮತ್ತು ವಾತ್ಸಲ್ಯಪೂರ್ಣ ಕುಟುಂಬದಲ್ಲಿ ಬೆಳೆಯುವುದು ಪ್ರತೀ ಮಕ್ಕಳ ಹಕ್ಕು. ಆದ್ದರಿಂದ ಮಕ್ಕಳ ಜೀವನದಲ್ಲಿ ಬಾಲ್ಯ, ಶಿಕ್ಷಣ, ಆರೋಗ್ಯ, ಉತ್ತಮ ಪರಿಸರ, ರಕ್ಷಣೆ ಮತ್ತು ಭದ್ರತೆ ಬಹಳ ಮುಖ್ಯ. ಇವುಗಳಲ್ಲಿ ಯಾವುದೇ ಕೊರತೆಯಾದರೂ ಅವರ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗುತ್ತದೆ.
ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಯೇ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಸರಕಾರ ಒದಗಿಸಿರುವ ಸೌಲಭ್ಯಗಳನ್ನು ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನವಾಗಬೇಕಿದೆ. ಬಡತನ ನಿವಾರಣೆ, ಸಾರ್ವತ್ರಿಕ ಶಿಕ್ಷಣ, ಉದ್ಯೋಗ ಸೃಷ್ಟಿ, ಸಾರ್ವಜನಿಕರಲ್ಲಿ ಅರಿವು, ಪೋಷಕರ ಮನಃಪರಿವರ್ತನೆ ಮತ್ತಿತರ ಕ್ರಮಗಳ ಮೂಲಕ ಬಾಲಕಾರ್ಮಿಕ ಪದ್ಧತಿಗೆ ಅಂತ್ಯ ಹಾಡಬೇಕಿದೆ.
ವಿದ್ಯಾ ಅಮ್ಮಣ್ಣಾಯ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.