Today Kota Shivaram Karanth ಜನ್ಮದಿನ: ಅಪರಿಮಿತ ಜೀವನೋತ್ಸಾಹದ ಮೇರು ವ್ಯಕ್ತಿ
Team Udayavani, Oct 10, 2023, 6:05 AM IST
ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರೇ ಹಾಗೆ, ಕಾರಂತರು ಒಬ್ಬ ವ್ಯಕ್ತಿಯಲ್ಲ ಬದಲಾಗಿ ಒಂದು ಶಕ್ತಿ. ವಿಮರ್ಶೆಗೆ ನಿಲುಕದಷ್ಟು ಜ್ಞಾನ ಸಂಪತ್ತು ಸಾಹಿತ್ಯ ಕಲೆ, ಸಂಗೀತ, ನೃತ್ಯ, ವಿಜ್ಞಾನ ಪರಿಸರದೊಂದಿಗೆ ಯಕ್ಷ ಗಾನದ ಗೆಜ್ಜೆಯ ಸದ್ದನ್ನು ಕಡಲಾಚೆಗೂ ಕೇಳಿಸಿದ ಕೀರ್ತಿ ಕಾರಂತರದ್ದು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ರಾಜ ಕಾರಣಿಗಳನ್ನು ಕಟುವಾಗಿ ಟೀಕಿಸುತ್ತಿದ್ದ ಕಾರಂತರು ಪ್ರಜಾಪ್ರಭುತ್ವ ದೇಶವೊಂದರಲ್ಲಿ ಸರ್ವಾಧಿಕಾರ ವಿಜೃಂಭಿಸುತ್ತದೆ ಎಂದಾದರೆ ಜನಸಾಮಾನ್ಯರ ಗತಿಯೇನೆಂದು ಕ್ರೋಧ ವ್ಯಕ್ತಪಡಿಸಿ ಅಂದಿನ ಕೇಂದ್ರ ಸರಕಾರ ತನಗೆ ನೀಡಿದ ಪದ್ಮ ಭೂಷಣ ಪ್ರಶಸ್ತಿಯನ್ನು ಹಿಂದಿ ರುಗಿಸಿ, ಜನತಂತ್ರ ವ್ಯವಸ್ಥೆ ಹಳಿ ತಪ್ಪಿದ್ದನ್ನು ಪ್ರತಿಭಟಿಸಿದ್ದರು. ಕಾರಂತರ ನೇರ ನಡೆನುಡಿ ಹಲವು ಬಾರಿ ವಾದ- ವಿವಾದಕ್ಕೂ ಕಾರಣವಾಗಿತ್ತು. ಆದರೆ ಅವರು ಈ ವಾದ-ವಿವಾದಗಳಿಗೆ ಎಂದು ತಲೆಕೆಡಿಸಿಕೊಂಡವರಲ್ಲ. “ನನ್ನ ಪಾಲಿಗೆ ಜೈಕಾರ, ಧಿಕ್ಕಾರಗಳೆರಡೂ ಒಂದೇ’ ಎಂದವರು ಸ್ವತಃ ಹೇಳಿ ಕೊಂಡಿದ್ದರು.
1980ರ ದಶಕದಲ್ಲಿ ಕೈಗಾ ಅಣುಸ್ಥಾವರದ ಬಗ್ಗೆ ತೀವ್ರ ಚರ್ಚೆಯಾಗುತ್ತಿತ್ತು. ಇಡೀ ಉತ್ತರ ಕನ್ನಡ ಜಿಲ್ಲೆ ಪರಿಸರದ ಪ್ರಶ್ನೆ ಮುಂದಿಟ್ಟುಕೊಂಡು ಹೋರಾಟದ ಕಣಕ್ಕಿಳಿದಿತ್ತು. ಡಾ| ಕುಸುಮಾ ಸೊರಬರಂತಹ ವ್ಯಕ್ತಿಗಳ ನೇತೃತ್ವದಲ್ಲಿ ಬುಡಕಟ್ಟು ಜನಾಂಗ ಸಿಡಿದೆದ್ದಿತ್ತು. ಅಂತಹ ಸಂದರ್ಭ ಕಾರಂತರು ಸರಕಾರಕ್ಕೆ ಬುದ್ಧಿ ಹೇಳಿದ್ದರು. ಜತೆಯಲ್ಲಿ ಕೈಗಾ ಅಣು ಸ್ಥಾವರದಿಂದ ಜನಜೀವನದ ಮೇಲಾಗಲಿರುವ ಪರಿಣಾಮಗಳ ಕುರಿತು ಹಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಅಂದಿನ ಕೇಂದ್ರ ಸರಕಾರ ಅಣುಸ್ಥಾವರದಿಂದ ಯಾವುದೇ ಬಾಧಕ ವಿಲ್ಲವೆಂದು ಖ್ಯಾತ ಅಣುವಿಜ್ಞಾನಿ ಡಾ| ರಾಜಾರಾಮಣ್ಣ ಮೂಲಕ ಹೇಳಿಕೆ ಕೊಟ್ಟು ಬಿಟ್ಟಿತು. ಇದರಿಂದ ತೃಪ್ತರಾಗದ ಕಾರಂತರು, ತನಗಿರುವ ಸಂದೇಹಗಳನ್ನು ಸರಕಾರ ನಿವಾರಿಸಬೇಕು. ಅದನ್ನು ಬಿಟ್ಟು ಹೇಳಿಕೆಯ ಮೂಲಕ ಹೋರಾಟ ನಿಯಂತ್ರಿಸಲು ವಿಜ್ಞಾನಕ್ಕೊಬ್ಬನೇ ರಾಜಾರಾಮಣ್ಣ ಅಲ್ಲ ಎಂದು ಗುಡು ಗಿದ್ದರು. ಕಾರಂತರ ಒಂದೇ ಒಂದು ಹೇಳಿಕೆಯಿಂದ ಮೌನಕ್ಕೆ ಶರಣಾಗಿದ್ದ ಕೈಗಾ ವಿರೋಧಿ ಹೋರಾಟ ಮತ್ತೆ ಮರುಜೀವ ಪಡೆದುಕೊಂಡಿತು.
ಕರ್ನಾಟಕದ ಸಾರ್ವಜನಿಕ ಜೀವನದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಅನಂತರ ಜನಸಾಮಾನ್ಯರ ಸಹಭಾಗಿತ್ವದಲ್ಲಿ ಸ್ವಾರ್ಥ ರಹಿತ ಹೋರಾಟವಾಗಿ ಕೈಗಾ ವಿರೋಧಿ ಹೋರಾಟ ಮೂಡಿ ಬಂದಿತು.ಕೈಗಾ ಪರ ಮತ್ತು ವಿರುದ್ಧ ಹೋರಾಟ ನಡೆಯುತ್ತಿರುವಾಗಲೇ 1989ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಕಾಂಗ್ರೆಸ್‌ನಿಂದ ದೇವರಾಯ ನಾಯಕ್ ಚುನಾವಣೆಗೆ ಕಣಕ್ಕಿಳಿದಿದ್ದರೆ ಆಗ ದೇಶದ ಗಮನ ಸೆಳೆದ ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಗಳಾಗಿದ್ದರು. ಕೆನರಾ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣತೊಟ್ಟ ಹೆಗಡೆ ಅವರು ತನ್ನ ನೀಲಿ ಕಣ್ಣಿನ ಹುಡುಗ, ಜನಪ್ರಿಯ ನಟ ಅನಂತನಾಗ್‌ರನ್ನು ಜನತಾದಳದ ಅಭ್ಯರ್ಥಿಯಾಗಿ ನಿಲ್ಲಿಸಿದ್ದರು.
ಪರಿಸರ ಪ್ರಶ್ನೆಯನ್ನು ಮುಂದಿಟ್ಟು ಕಡಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು ಕಾರವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿಯೇ ಬಿಟ್ಟಿದ್ದರು. ಪ್ರಜಾಪ್ರಭುತ್ವದ ಚುನಾವಣ ಹಬ್ಬದ ರಣಕಹಳೆಗೆ 90 ವರ್ಷದ ವಯೋವೃದ್ಧ ಒಂಟಿ ಸಲಗ ಏಕಾಂಗಿಯಾಗಿ ಮುನ್ನುಗ್ಗಿತ್ತು. ವಿಚಿತ್ರವೆಂದರೆ ಸಂಸದ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಮರುದಿನವೇ ಕಾರಂತರು ಪೂರ್ವ ನಿರ್ಧರಿತ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ದೇಶದ ರಾಜಕಾರಣದಲ್ಲಿ ಅಭ್ಯರ್ಥಿ ಇಲ್ಲದೆ ನಡೆದ ಪ್ರಥಮ ಚುನಾವಣೆಯೊಂದು ನಡೆದು ಹೋಯಿತು. ಪರಿಸರವಾದಿಗಳು ಸೇರಿದಂತೆ ಕಾರಂತರ ಅಭಿಮಾನಿಗಳ ಶ್ರಮಕ್ಕೆ ಅಚ್ಚರಿಯೆಂಬಂತೆ ಶಿವರಾಮ ಕಾರಂತರಿಗೆ 52,000ಕ್ಕೂ ಹೆಚ್ಚು ಮತಗಳು ಬಂದಿದ್ದು ಕುತೂಹಲ. ಗೆಲ್ಲು ತ್ತಾರೆ ಎಂದು ತಿಳಿದ ಅನಂತನಾಗ್ ಸೋತು ಕಾಂಗ್ರೆಸ್‌ನ ದೇವರಾಯ ನಾಯಕ್ ಗೆದ್ದಿದ್ದರು.
ವಿದೇಶದಿಂದ ಬಂದು ಚುನಾವಣೆಯಲ್ಲಿ ಸೋಲಿನ ಸುದ್ದಿ ತಿಳಿದ ಕಾರಂತರು ಹೇಳಿದರಂತೆ ಲೇಖಕನಾದ ನನಗೆ ದೇಶ-ವಿದೇಶಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಒಂದೇ ಗ್ರಾಮದಲ್ಲಿ ವಾಸ್ತವ್ಯವಿದ್ದರೆ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾನು ಗೆಲ್ಲಬಹುದೇನೋ ಎಂದು ಉದ್ಗರಿಸಿ ದ್ದರು. ಕಾರಂತರ ನಡೆ ನುಡಿಯೇ ಹಾಗೆ. ಎಲ್ಲ ಕ್ಷೇತ್ರಗಳಲ್ಲೂ ಕಾರಂತರಿಗೆ ಕುತೂಹಲವಿತ್ತು. ಒಟ್ಟಾರೆ ಕಾರಂತರು ಕೈಯಾಡಿಸಿದ ಪ್ರತೀ ವಿಷಯದಲ್ಲೂ ಅವರತನ ಎದ್ದು ಕಾಣುತ್ತಿತ್ತು. ಅದೇಕೋ ಕಾರಂತರಿಗೆ ಇರುವ ಜೀವನೋತ್ಸಾಹ ಮತ್ತೂಬ್ಬ ಮನುಷ್ಯರಲ್ಲಿ ಕಾಣಸಿಗುವುದು ಸಾಧ್ಯವೇ ಇಲ್ಲ ಎಂಬಂತಿದೆ.
ಕಂಡದ್ದು ಕಂಡಂತೆ ಹೇಳುವ ಕಾರಂತರ ಶೈಲಿ ಅವರ ಕಾದಂಬರಿಗಳಲ್ಲೂ ಎದ್ದು ಕಾಣುತ್ತದೆ. ಬದುಕಲ್ಲಿ ತುಂಡು ಭೂಮಿಗಾಗಿ ಹಪಹಪಿಸುವ ಚೋಮನ ಬದುಕು ಇಂದೂ ಜನಮಾನಸದಲ್ಲಿ ಹಸುರಾಗಿದೆ. ಚೋಮನ ದೈವನಂಬಿಕೆ, ಮಗಳು ಬೆಳ್ಳಿಯ ಬದುಕಿನ ಬಗ್ಗೆ ಮರುಕ, ಮಗ ಗುರುವನ ದುಡುಕು, ಚೋಮನ ಸಾಲ, ಚೋಮನ ಬದುಕಿನ ಬಿರುಕುಗಳೆಲ್ಲ ಕಾರಂತರ ಅಸಾಧ್ಯ ಅನುಭವಗಳನ್ನು ಬಿಚ್ಚಿಕೊಳ್ಳುತ್ತವೆ. ಮೂಕಜ್ಜಿಯ ಕನಸುಗಳನ್ನು ಕಾರಂತರು ಹೆಣೆದಿರುವ ರೀತಿಯೇ ಕುತೂಹಲಕಾರಿ. ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಅತೀಂದ್ರಿಯ ಅನ್ನುವುದಕ್ಕಿಂತ ಒಂದು ಅಚ್ಚರಿಯ ಶಕ್ತಿ ಇರುತ್ತದೆ. ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅದರ ಅಥವಾ ಅವರ ಬಗ್ಗೆ ಮನದಲ್ಲಿ ಕನಸುಗಳು ಮೂಡುತ್ತವೆ. ಅದು ನಿದ್ದೆಯ ಕನಸಲ್ಲ, ಜ್ಞಾನಪೀಠ ಪಡೆದ ಕಾದಂಬರಿ. ಮೂಕಜ್ಜಿಯ ಕನಸುಗಳನ್ನು ಕಾರಂತರು ತೆರೆದಿಟ್ಟ ರೀತಿಯೇ ಅದ್ಭುತ.
ಕಾರಂತರಿಗೆ 90 ವರ್ಷ ತುಂಬಿದಾಗ ಅವರು ಹುಟ್ಟೂರಾದ ಕೋಟದ ವಿವೇಕ ಕಾಲೇಜಿನಲ್ಲಿ “ಕಾರಂತ ಕೊಂಗಾಟ’ ಎಂಬ ಹೆಸರಿನ ಕಾರ್ಯಕ್ರಮವಿತ್ತು. 90 ತುಂಬಿದ ಕಾರಂತರು ಸಮ್ಮಾನ ಸ್ವೀಕರಿಸಿ ಅಭಿಮಾನಿಗಳ ಆಗ್ರಹಕ್ಕೆ ಮಣಿದು ಕಾಲಿಗೆ ಗೆಜ್ಜೆ ಕಟ್ಟಿ ಸೊಂಟಕ್ಕೆ ದಟ್ಟಿ ಬಿಗಿದು ಬಿಟ್ಟ ಮೈಯಲ್ಲಿ ಕುಣಿಯಲು ಬಂದಿದ್ದರು. ಕಾರಂತರು ಶೃಂಗಾರ, ರೌದ್ರ, ಭೀಭತ್ಸ ರಸವೂ ಸೇರಿದಂತೆ ವಿವಿಧ ಭಾವಾಭಿನಯದೊಂದಿಗೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದಾಗ ಇಡೀ ಸಭೆ ನಿಬ್ಬೆರಗಾಗಿತ್ತು. ಕಾರಂತರ ಕುಣಿತದ ಭಂಗಿಗೆ ಎದ್ದು ನಿಂತು ಕೈ ಮುಗಿದು ಕಾರಂತರಿಗೆ ಅಭಿನಂದನೆ ಹೇಳಿತ್ತು. 90 ತುಂಬಿದ ಕಾರಂತರ ಕುಣಿತವನ್ನು ಕಂಡು ಅವರ ಜೀವನೋತ್ಸಾಹಕ್ಕೆ ಸರ್ವರೂ ಮಾರುಹೋಗಿದ್ದರು.
ವಿದ್ಯಾಭೂಷಣರಿಗೆ ಪ್ರಶಸ್ತಿ
ಶಿವರಾಮ ಕಾರಂತರ ಹುಟ್ಟೂರಾದ ಕೋಟತಟ್ಟು ಗ್ರಾಮ ಪಂಚಾಯತ್ 19ನೇ ವರ್ಷದ ಕಾರಂತೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ “ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ಸಂಗೀತ ಮಾಂತ್ರಿಕ ಡಾ| ವಿದ್ಯಾಭೂಷಣ ಅವರಿಗೆ ಪ್ರದಾನ ಮಾಡುತ್ತಿದೆ. ಒಂದು ಗ್ರಾಮ ಪಂಚಾಯತ್ ಕೊಡುವ ಪ್ರಶಸ್ತಿಯನ್ನು ರಾಜ್ಯದ ರಾಜ್ಯಪಾಲರು ಪ್ರದಾನ ಮಾಡುತ್ತಿರುವುದೇ ಪಂಚಾಯತ್‌ರಾಜ್ ವ್ಯವಸ್ಥೆಗೆ ಬಲುದೊಡ್ಡ ಗೌರವ. ತನ್ಮೂಲಕ ಹುಟ್ಟೂರ ಜನತೆ ಶಿವರಾಮ ಕಾರಂತರನ್ನು ಗೌರವಾದರಗಳೊಂದಿಗೆ ಸ್ಮರಿಸಿಕೊಳ್ಳುತ್ತಿದೆ.
-ಕೋಟ ಶ್ರೀನಿವಾಸ ಪೂಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.