ನಾಳೆ ರಸ್ತೆ ಅಪಘಾತಗಳಿಗೆ ತುತ್ತಾದವರ ವಿಶ್ವ ಸ್ಮರಣೆಯ ದಿನ
ರಸ್ತೆ ಜಾಲದಷ್ಟೇ ಸುರಕ್ಷ ವ್ಯವಸ್ಥೆಯೂ ಬಲಗೊಳ್ಳಲಿ
Team Udayavani, Nov 6, 2024, 6:39 AM IST
ಪ್ರಪಂಚದಾದ್ಯಂತ ಪ್ರತೀ ವರ್ಷ ನವೆಂಬರ್ ತಿಂಗಳ ಮೂರನೇ ರವಿವಾರದಂದು ರಸ್ತೆ ಅಪಘಾ ತಗಳಲ್ಲಿ ಮೃತಪಟ್ಟವರ, ಗಾಯಾಳುಗಳ ಮತ್ತು ಸಂತ್ರಸ್ತರ ಸ್ಮರಣೆಯ ಯಾ ನೆನಪಿನ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ರಸ್ತೆ ಅಪ ಘಾತಗಳಲ್ಲಿ ಮರಣ ಹೊಂದಿದದವರ ಮತ್ತು ಗಾಯಾಳುಗಳ ಹಾಗೂ ಅಂತಹ ಸಂದರ್ಭದಲ್ಲಿ ಮೊದಲು ಅವರಿಗೆ ಪ್ರತಿಸ್ಪಂದನೆ ನೀಡಿದವರು, ತುರ್ತು ಚಿಕಿತ್ಸೆ ನೀಡಿದವರನ್ನು ನೆನಪಿಸಿಕೊಂಡು ಸರಕಾರಗಳು, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರಿಂದ ಸಂತ್ರಸ್ತರಿಗೆ ನಿರಂತರ ಸಹಾಯ ಒದಗಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿ ಈ ತೆರನಾದ ಅಪಘಾತಗಳು ಸಂಭವಿಸದಂತೆ, ಜೀವಹಾನಿಯಾಗದಂತೆ ತಡೆಗಟ್ಟುವ ಕ್ರಮಗಳಿಗಾಗಿ ಸಂಬಂಧಿತರನ್ನು ಒತ್ತಾಯಿಸುವ ದಿನವಾಗಿದೆ.
ರಸ್ತೆ ಅಪಘಾತದಲ್ಲಿ ವಿಶ್ವದಾದ್ಯಂತ ಪ್ರತೀ ವರ್ಷ ಸುಮಾರು 13.5 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆ ಪ್ರಪಂಚದಾದ್ಯಂತ ಕಳೆದ ಒಂದು ದಶಕದಲ್ಲಿ ಕಡಿಮೆಯಾಗುತ್ತಿದ್ದರೂ ಭಾರತದಲ್ಲಿ ಶೇ.15ರಷ್ಟು ಹೆಚ್ಚಾಗಿದೆ. ಭಾರತದ ರಸ್ತೆಗಳಲ್ಲಿ 2023ರಲ್ಲಿ 4.8 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, 1.73 ಲಕ್ಷ ಜನ ಸಾವಿಗೀಡಾಗಿದ್ದಾರೆ ಹಾಗೂ 4.63 ಲಕ್ಷ ಜನ ಗಾಯಗೊಂಡಿದ್ದಾರೆ. ಇವರಲ್ಲಿ ಸುಮಾರು 76 ಸಾವಿರ ಜನ ದ್ವಿಚಕ್ರ ವಾಹನ ಸವಾರರಾಗಿದ್ದು ಕುಟುಂಬಕ್ಕೆ ಆಧಾರವಾಗಿರಬಹುದಾದ 18 ರಿಂದ 34 ವರ್ಷ ವಯೋಮಿತಿಯಲ್ಲಿರುವರು. ಪ್ರತೀ ದಿನ ರಸ್ತೆ ಅಪಘಾತದಲ್ಲಿ ನಮ್ಮಲ್ಲಿ ಸರಾಸರಿ 474 ಜನರು ಅಂದರೆ ಪ್ರತೀ ಮೂರು ನಿಮಿಷಗಳಿಗೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ.
ದೋಷಪೂರಿತ ರಸ್ತೆಗಳ ವಿನ್ಯಾಸ, ಅವೈಜ್ಞಾನಿಕ ರಸ್ತೆ ಕಾಮಗಾರಿಗಳು, ವಾಹನಗಳ ಅಪರಿಮಿತ ವೇಗ, ನಿರ್ಲಕ್ಷ್ಯದ ಚಾಲನೆ, ವಾಹನಗಳಲ್ಲಿ ತಾಂತ್ರಿಕ ದೋಷಗಳು, ಮದ್ಯ ಸೇವಿಸಿ ವಾಹನ ಚಾಲನೆ, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ, ರಸ್ತೆಯಲ್ಲಿ ಪ್ರಾಣಿಗಳ ಹಾವಳಿ, ವಾಹನ ಚಾಲನೆ ವೇಳೆ ನಿದ್ರೆಗೆ ಜಾರುವುದು, ಜನರಲ್ಲಿ ರಸ್ತೆ ಸುರಕ್ಷ ಪ್ರಜ್ಞೆಯ ಕೊರತೆ, ಪ್ರತಿಬಂಧಕ ಕಾನೂನುಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅಪಘಾತ ನಡೆದ ಅನಂ ತರ ಗಾಯಾಳುಗಳಿಗೆ ಹೆಚ್ಚಿನ ಕಡೆ ತುರ್ತು ಚಿಕಿತ್ಸೆ ಸಿಗದೇ ಇರುವುದು ಸಹ ಅಪಘಾತಗಳಲ್ಲಿ ಸಾಯು ವವರ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ.
ಅಪಘಾತ ಸಂತ್ರಸ್ತರಿಗೆ ಆರೋಗ್ಯ ಸೇವೆಗಳ ಅನಂತರ ಗಾಯಾಳುಗಳಿಗೆ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ನ್ಯಾಯ, ಪರಿಹಾರ ಪಡೆ ಯಲು ಕಾನೂನು ಸೇವೆಗಳ ಅಗತ್ಯವಿರುತ್ತದೆ. ಪ್ರತೀ ವರ್ಷ ಅಪಘಾತ ಪರಿಹಾರಕ್ಕಾಗಿ ಸುಮಾರು 10-12 ಸಾವಿರ ಕೋ. ರೂ. ಗಳ ಮೊತ್ತದ ಹಕ್ಕು ಪ್ರತಿ ಪಾದನೆಯಾದರೆ, ವಿಮಾ ಕಂಪೆನಿಗಳು ಸರಿಸುಮಾರು 5 ಸಾವಿರ ಕೋ.ರೂ. ಗಳಷ್ಟನ್ನು ಪರಿಹಾರವಾಗಿ ನೀಡುತ್ತಿವೆ. ಉಳಿದ ಪರಿಹಾರ ಹಣಕ್ಕಾಗಿ ಸಂತ್ರಸ್ತರು ವರ್ಷಾನುಗಟ್ಟಲೆ ಕೋರ್ಟ್, ಕಚೇರಿ ಅಲೆದಾಡ ಬೇಕಾಗುತ್ತದೆ. ಅಪಘಾತ ವಿಮೆ ಪರಿಹಾರ ಪಡೆ ಯುವುದು ನಮ್ಮಲ್ಲಿ ಅತೀ ಸಂಕೀರ್ಣ ಪ್ರಕ್ರಿಯೆ ಯಾಗಿದೆ. ಶೇ. 85ರಷ್ಟು ಸಂತ್ರಸ್ತರಿಗೆ ಪರಿಹಾರ ಪಡೆ ಯುವಲ್ಲಿ ಸರಾಸರಿ 5 ವರ್ಷಗಳು ಕಾಯ ಬೇಕಾಗುತ್ತದೆಂದು ಸಮೀಕ್ಷೆ ವರದಿಗಳು ಹೇಳಿವೆ. ವಿಮಾ ಪರಿಹಾರ ಪಡೆಯುವಲ್ಲಿನ ಈ ಎಲ್ಲ ತೊಡಕು ಗಳನ್ನು ನಿವಾರಿಸಬೇಕಾಗಿದೆ ಹಾಗೂ ಶೀಘ್ರವಾಗಿ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ದೊರಕಿ ಸಿಕೊಡಬೇಕಾಗಿದೆ.
ಪ್ರಪಂಚದಲ್ಲಿಯೇ ಅತೀ ಹೆಚ್ಚು ರಸ್ತೆ ಅಪಘಾತ ಸಂಭವಿಸುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಆದರೆ ರಸ್ತೆ ಅಪಘಾತಗಳಲ್ಲಿ ಅತೀ ಹೆಚ್ಚು ಮಂದಿ ನಮ್ಮ ದೇಶದಲ್ಲಿ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳ ಅನಂತರ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಲಭ್ಯತೆ, ಗುಣಮಟ್ಟದ ಆ್ಯಂಬುಲೆನ್ಸ್ ಸೇವೆಗಳ ಕೊರತೆ ಹಾಗೂ ಸನಿಹದಲ್ಲಿ ಟ್ರಾಮಾ ಸೇವೆಗಳ ಕೊರತೆ ನಮ್ಮಲ್ಲಿ ಕಂಡುಬರುತ್ತಿದೆ. ತರಬೇತಿ ಹೊಂದಿದ ವೈದ್ಯ ಕೀಯ, ಅರೆ ವೈದ್ಯಕೀಯ ಸಿಬಂದಿ, ಜೀವರಕ್ಷಕ ಯಂತ್ರಗಳು, ಸುಸಜ್ಜಿತ ಆ್ಯಂಬುಲೆನ್ಸ್ ಹಾಗೂ ಟ್ರಾಮಾ ಸಂಟರ್‌ಗಳನ್ನು ಪ್ರತೀ ಟೋಲ್‌ಗೇಟ್‌ಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡುವುದು, ಅಲ್ಲದೇ ಹೆದ್ದಾರಿಯ ಪ್ರತೀ 40 ರಿಂದ 50 ಕಿ. ಮೀ. ದೂರದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಸರಕಾರದ ಒಡಂಬಡಿಕೆಯೊಂದಿಗೆ ಗಾಯಾಳುಗಳಿಗೆ ಕ್ಯಾಶ್‌ಲೆಸ್ ಚಿಕಿತ್ಸೆಗೆ ಸನ್ನದ್ಧ ವಾಗಿರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ಆ್ಯಂಬ್ಯುಲೆನ್ಸ್‌ಗಳು ಅಪಘಾತ ಸಂದರ್ಭಗಳಲ್ಲಿ, ತುರ್ತು ವೈದ್ಯಕೀಯ ಅಗತ್ಯತೆಗಳು ಇರುವ ಸಂದರ್ಭಗಳಲ್ಲಿ, ಗಾಯಾಳುಗಳನ್ನು, ರೋಗಿಗಳನ್ನು ಕೇವಲ ಆಸ್ಪತ್ರೆಗೆ ಕೊಂಡೊಯ್ಯುವ ವಾಹನವಾಗಿರದೇ ಆ ಸಮಯದಲ್ಲಿ ಗಾಯಾಳುಗಳಿಗೆ ಜೀವರಕ್ಷಕ ಸೇವೆ ನೀಡಲು ತರಬೇತಿ ಹೊಂದಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬಂದಿಯಿಂದ, ಅಗತ್ಯ ಯಂತ್ರೋ ಪಕರಣಗಳಿಂದ, ಜೀವರಕ್ಷಕ ಔಷಧಗಳಿಂದ ಸನ್ನದ್ಧವಾ ಗಿರಬೇಕಾಗಿದೆ. ಗಾಯಾಳುಗಳನ್ನು ಅಪಘಾತ ನಡೆದ 10-15 ನಿಮಿಷಗಳೊಳಗೆ ತುರ್ತು ಚಿಕಿತ್ಸೆ ನೀಡಿ ಸಮೀಪದ ನಿಗದಿತ ಆಸ್ಪತ್ರೆಗೆ ವೈದ್ಯಕೀಯ ನೆರವಿನೊಂದಿಗೆ ಸಾಗಿಸುವ ವ್ಯವಸ್ಥೆ ಹಾಗೂ ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ಚಿಕಿತ್ಸೆಗಾಗಿ ಸರಕಾರಗಳಿಂದ ವಾಹನಗಳ ಅಪಘಾತ ನಿಧಿ ಸ್ಥಾಪಿಸಬೇಕಿದೆ.
ನಮ್ಮ ದೇಶವು ಅಮೆರಿಕದ ಅನಂತರ ಅತೀ ದೊಡ್ಡ ರಸ್ತೆಗಳ ಜಾಲ ಹೊಂದಿದ ದೇಶವಾಗಿದೆ. ಕಳೆದ ದಶಕ ದಲ್ಲಿ ಹೆದ್ದಾರಿಗಳ ಆಧುನೀಕರಣ, ವಿಸ್ತರಣೆ ಅತೀ ವೇಗದಿಂದ ನಡೆಯುತ್ತಿದೆ. ಆದರೆ ಕೆಲವೆಡೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ದಟ್ಟ ಜನವಸತಿಗಳಿರುವ ಪ್ರದೇಶಗಳಲ್ಲಿ ಹೆದ್ದಾರಿಗಳು ಚತುಷ್ಪಥಗೊಂಡು ಮೇಲ್ದರ್ಜೆಗೇರಿದರೂ ಅಲ್ಲಿ ಸ್ಥಳೀಯರಿಗೆ ಸಂಚರಿ ಸಲು ಅಗತ್ಯವಾಗಿರುವ ಸರ್ವೀಸ್ ರಸ್ತೆ, ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಇಲ್ಲದಿರುವುದರಿಂದ ಪಾದ ಚಾರಿಗಳ ಸಾವು-ನೋವು ಪ್ರತಿನಿತ್ಯ ವರದಿಯಾಗುತ್ತಿದೆ. ಸರ್ವೀಸ್ ರಸ್ತೆ ಇಲ್ಲದ ಕಾರಣ ಸಣ್ಣ ವಾಹನಗಳಾದ ಬೈಕ್, ಆಟೋ, ಕಾರುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಹೆದ್ದಾರಿಗಳ ಅಲ್ಲಲ್ಲಿ ಅವೈಜ್ಞಾನಿಕವಾಗಿ ಡಿವೈಡರ್‌ಗಳನ್ನು ತುಂಡರಿಸಿ ಅಲ್ಲಿ ಅಗತ್ಯವಾಗಿರಬೇಕಾದ ಮೂರು ಲೇನ್‌ಗಳ ಅವಕಾಶ ಮಾಡಿಕೊಡದೇ ತಿರುವು ನೀಡಲಾಗುತ್ತಿದ್ದು ಅಲ್ಲಿ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಟ್ರಾಫಿಕ್ ಸಂದಣಿ ಹೆಚ್ಚಿರುವ ಸಂದರ್ಭದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಎಲೆಕ್ಟ್ರಾನಿಕ್ ಮಾನಿಟರಿಂಗ್ ವ್ಯವಸ್ಥೆ, ಸ್ಪೀಡ್ ಕೆಮರಾ ಗಳು, ಕ್ಲೋಸ್ ಸರ್ಕ್ನೂಟ್ ಕೆಮರಾ ಹಾಗೂ ಸಂಚಾರಿ ಪೊಲೀಸರಿಗೆ ದೇಹದಲ್ಲಿ ಧರಿಸುವ ಕೆಮರಾಗಳು ಹಾಗೂ ಇತರ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿ ಸಿಕೊಳ್ಳಬೇಕಾಗಿದೆ.
ರಸ್ತೆ ನಿರ್ಮಾಣ ಮತ್ತು ರಸ್ತೆಗಳಲ್ಲಿ ಅಪಘಾತಗಳು ಹಾಗೂ ಅವುಗಳನ್ನು ನಿರ್ವಹಿಸುವ, ತಡೆಗಟ್ಟುವ, ನೊಂದವರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ, ಪೊಲೀಸ್, ಸಾರಿಗೆ, ಆರೋಗ್ಯ, ಕಂದಾಯ, ಮುನ್ಸಿ ಪಾಲಿಟಿಗಳು, ವಿಮಾ ಕಂಪೆನಿಗಳು, ನ್ಯಾಯಾಲಯಗಳ ಭಾಗೀದಾರಿಕೆ ಇದೆ. ಆದ್ದರಿಂದ ಈ ಎಲ್ಲ ಇಲಾಖೆಗಳ ಪ್ರತಿನಿಧಿಗಳಿರುವ ಒಂದು ನೋಡಲ್ ಏಜೆನ್ಸಿ ಸ್ಥಾಪನೆ ಮಾಡಿ ಅದಕ್ಕೆ ರಸ್ತೆ ನಿರ್ಮಾಣ, ನಿರ್ವಹಣೆ, ಅಪಘಾತ-ಜೀವಹಾನಿ ತಡೆ ಕ್ರಮಗಳು, ಪರಿಹಾರ ನೀಡುವಿಕೆ, ಉಸ್ತುವಾರಿ ಮೇಲ್ವಿಚಾರಣೆ ನೀಡಿದರೆ ಸಾರ್ವಜನಿಕರ ಕುಂದುಕೊರತೆ ನಿರ್ವಹಣೆಯಲ್ಲಿ ಸಮನ್ವಯತೆ ಸಾಧಿಸಲು ಸಾಧ್ಯ. ಹೆದ್ದಾರಿಗಳ ನಿರ್ಮಾಣದ ಹಂತದಲ್ಲಿಯೇ ಸರಕಾರ ಸ್ಥಳೀಯರ ನ್ನೊಳಗೂಡಿಸಿಕೊಂಡು ತಜ್ಞರ ತಂಡದಿಂದ ವಿಸ್ತೃತವಾದ ಯೋಜನಾ ವರದಿಯನ್ನು ರೂಪಿಸಿ, ಅನುಷ್ಠಾನ ಗೊಳಿಸಬೇಕು. ರಸ್ತೆ ಸುರಕ್ಷ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆಗಳಲ್ಲಿ ಅಪಘಾ ತಗಳಿಂದ ಉಂಟಾಗುವ ಸಾವು-ನೋವುಗಳನ್ನು ತಡೆಯುವ ಗ್ಯಾರಂಟಿಯನ್ನು ಸಹ ಸರಕಾರಗಳು ಜನರಿಗೆ ನೀಡಬೇಕಾಗಿದೆ.
ಡಾ| ಅಶ್ವಿನಿ ಕುಮಾರ್ , ಗೋಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.