ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮಾನವೀಯ ಮೌಲ್ಯ ತುಂಬಿದ ದಾರ್ಶನಿಕ


Team Udayavani, Apr 29, 2018, 12:30 AM IST

13.jpg

ಮೂಲ್ಕಿ ಸುಂದರರಾಮ ಶೆಟ್ಟಿ ಅವರು ಹೆಸರಿಗೆ ತಕ್ಕಂತೆ ಆಕರ್ಷಕ ವ್ಯಕ್ತಿತ್ವದವರಾಗಿದ್ದರು. ದಾರ್ಶನಿಕ ಸ್ವರೂಪದ ಚಿಂತನೆಯೊಂದಿಗೆ ಸಮಾಜ ಮುಖೀಯಾದರು. ಅವರು ಸವಾಲುಗಳನ್ನು ಅವಕಾಶಗಳೆಂದು ಸ್ವೀಕರಿಸಿದರು. ಈ ಅವಕಾಶಗಳನ್ನು ಯಶಸ್ವಿ ಸಾಧನಗಳನ್ನಾಗಿಸಿದರು. ಈ ಎಲ್ಲಾ ಹಿನ್ನೆಲೆಗಳೊಂದಿಗೆ ಅವರು ವಸ್ತುಶಃ ಪ್ರಾತಃ ಸ್ಮರಣೀಯರ ಸಾಲಿನಲ್ಲಿ ಈಗ ರಾರಾಜಿಸುತ್ತಿದ್ದಾರೆ. ಕೋಟ್ಯಂತರ ಯುವ ಜನತೆಗೆ ಪ್ರತ್ಯಕ್ಷ-ಪರೋಕ್ಷ ಉದ್ಯೋಗದಾತರಾದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುಟ್ಟ ಸ್ವರೂಪದಲ್ಲಿ ಜನ್ಮತಾಳಿದ ವಿಜಯಾ ಬ್ಯಾಂಕನ್ನು ಅಂತಾರಾಷ್ಟ್ರೀಯ ಪ್ರತಿಷ್ಠೆಯ ವಿತ್ತೀಯ ಸಂಸ್ಥೆಯನ್ನಾಗಿ ರೂಪಿಸಿದರು. ಮೂಲ್ಕಿಯ ಕಕ್ವಗುತ್ತಿನಲ್ಲಿ ಅವರು ಜನಿಸಿದ್ದು ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ; ಅಂದರೆ 30-4-1915ರಂದು.

ವಿಜಯಾ ಬ್ಯಾಂಕಿನ ಅಧ್ಯಕ್ಷರಾಗಿ ಅವರು ಬ್ಯಾಂಕನ್ನು ಬೆಳೆಸಿದ ರೀತಿ ಆ ಕಾಲಘಟ್ಟದ ಹಿನ್ನೆಲೆಯಲ್ಲಿ ನಿಜ ಅರ್ಥದ ಅದ್ಭುತ ಎಂದರೆ ಅತಿಶಯವಲ್ಲ. ಹಿರಿಯಡ್ಕ ಬೊಮ್ಮರಬೆಟ್ಟು ದೊಡ್ಡಮನೆ ಮುದ್ದಣ್ಣ ಶೆಟ್ಟಿ- ಕಕ್ವಗುತ್ತು ಸೀತಮ್ಮ ಶೆಡ್ತಿ ಅವರ ಪುತ್ರ ಸುಂದರರಾಮ ಶೆಟ್ಟಿ ಓದಿದ್ದು ಮೂಲ್ಕಿಯಲ್ಲಿ ಮತ್ತು ಮಂಗಳೂರು ಸೈಂಟ್‌ ಎಲೋಸಿಯಸ್‌ ಪ್ರೌಢಶಾಲೆಯಲ್ಲಿ. 1930ರಲ್ಲಿ ಓದನ್ನು ಮೊಟಕುಗೊಳಿಸಿ ಅವರು 1932ರಲ್ಲಿ ಏಶ್ಯಾಟಿಕ್‌ ಎಂಬ ವಿಮಾ ಕಂಪೆನಿಯ ಮೂಲಕ ವೃತ್ತಿ ಜೀವನ ಆರಂಭಿಸಿದರು. ಮುಂದೆ ವಾರ್ಡನ್‌ ವಿಮಾ ಕಂಪೆನಿ, ಕ್ರೆಸೆಂಟ್‌ ವಿಮಾ ಕಂಪೆನಿ, ಮದ್ರಾಸಿನ ಜೈ ಭಾರತ್‌ ವಿಮಾ ಕಂಪೆನಿ, ಆಗಿನ ಕಲ್ಕತ್ತದ ಟ್ರೆಟನ್‌ ಆ್ಯಂಡ್‌ ಎಟ್ಲಾಸ್‌ ವಿಮಾ ಸಂಸ್ಥೆಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿದರು.

ವಿಜಯಾ ಬ್ಯಾಂಕಿಗೆ…
ಆ ಸಂದರ್ಭದಲ್ಲಿ ವಿಜಯಾ ಬ್ಯಾಂಕ್‌ ವಿತ್ತೀಯ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಪರಂಪರೆಯನ್ನು ಪಡೆದಿತ್ತು. ಈ ಬ್ಯಾಂಕನ್ನು 23-10-1931ರಂದು ಮಂಗಳೂರಿನಲ್ಲಿ ಪ್ರಸಿದ್ಧ ರಾಜಕೀಯ – ಸಾಮಾಜಿಕ ನಾಯಕ ಅತ್ತಾವರ ಬಾಲಕೃಷ್ಣ ಶೆಟ್ಟಿ (ಎ. ಬಿ. ಶೆಟ್ಟಿ) ಅವರು ಬಂಟರ ಸಮಾಜದ ಸಮಾನಮನಸ್ಕ 14 ಮಂದಿ ಗಣ್ಯರ ಜತೆಗೆ ಸ್ಥಾಪಿಸಿದ್ದರು. ಗ್ರಾಮೀಣ ಆರ್ಥಿಕ ಪುನಶ್ಚೇತನ, ರೈತರು ಕೃಷಿಕರಿಗೆ ಸಕಾಲಿಕ ಆರ್ಥಿಕ ನೆರವು, ಶಿಕ್ಷಣಕ್ಕೆ ಬೆಂಬಲ, ಯುವ ಜನತೆಗೆ ಉದ್ಯೋಗಾವಕಾಶದ ಆಶಯದೊಂದಿಗೆ ಬ್ಯಾಂಕ್‌ ಸ್ಥಾಪಿಸಿದರು. ವಿಜಯ ದಶಮಿಯಂದು ಆರಂಭವಾದ್ದರಿಂದ ವಿಜಯಾ ಬ್ಯಾಂಕ್‌ ಎಂಬ ನಾಮಕರಣವಾಯಿತು. 5 ಲಕ್ಷ ರೂ. ಅಧಿಕೃತ ಬಂಡವಾಳವನ್ನು ಬ್ಯಾಂಕ್‌ ಹೊಂದಿತ್ತು. 1958ರಲ್ಲಿ ಶೆಡ್ನೂಲ್ಡ್‌ ಬ್ಯಾಂಕ್‌ ಆಗಿ ವಿಸ್ತಾರವಾಯಿತು.

ಮೂಲ್ಕಿ ಸುಂದರರಾಮ ಶೆಟ್ಟಿ ಅವರು 1946ರಿಂದ ವಿಜಯಾ ಬ್ಯಾಂಕಿನ ನಿರ್ದೇಶಕರಾದರು. 1962ರಲ್ಲಿ ಅವರು ಬ್ಯಾಂಕಿನ ಗೌರವಾಧ್ಯಕ್ಷರಾದರು. 1969ರವರೆಗೆ ಅವರು ಈ ಹುದ್ದೆಯಲ್ಲಿದ್ದು ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಕಾರಣರಾದರು. 1969ರಿಂದ ಒಂದು ದಶಕಗಳ ಕಾಲ ಅವರು ಬ್ಯಾಂಕಿನ ಚೇರನ್‌ ಮತ್ತು ಮೆನೇಜಿಂಗ್‌ ಡೈರೆಕ್ಟರ್‌ ಆಗಿ ಸೇವೆ ಸಲ್ಲಿಸಿ, ಬ್ಯಾಂಕನ್ನು ಯಶಸ್ಸಿನ ಉತ್ತುಂಗಕ್ಕೇರಿಸಲು ಕಾರಣಕರ್ತರಾದರು.

ಶೆಟ್ಟಿ ಅವರ ಜೀವನ ಸಾಧನೆಯ ದಾಖಲೆಗಳ ಪ್ರಕಾರ: “60ರ ದಶಕದಲ್ಲಿ ಬ್ಯಾಂಕಿಗೆ ಆರ್ಥಿಕವಾದ ಅನೇಕ ಸವಾಲುಗಳು ಎದುರಾದವು. ಆದರೆ, ಅವೆಲ್ಲವನ್ನೂ ತನ್ನ ವಿತ್ತೀಯ ಜ್ಞಾನದಿಂದ, ಸಮಯ ಪ್ರಜ್ಞೆಯಿಂದ, ಮುಂದಾಲೋಚನೆಯಿಂದ ಶೆಟ್ಟಿ ಅವರು ನಿಭಾಯಿಸಿದರು. 9 ಸಣ್ಣ ಬ್ಯಾಂಕ್‌ನ್ನು ವಿಜಯಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿದರು. ಬ್ಯಾಂಕಿಗೆ ಕರಾವಳಿ- ಕೃಷಿ- ಸ್ಥಳೀಯ ಎಂಬ ವ್ಯಾಖ್ಯಾನವಿದ್ದುದನ್ನು ಉದ್ಯಮರಂಗ ಸಹಿತ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದರು. ಜಗತ್ತಿನ ಅರ್ಥಶಾಸ್ತ್ರಜ್ಞರೇ ಈ ಬೆಳವಣಿಗೆಗಳನ್ನು ಬೆರಗು ಗಣ್ಣುಗಳಿಂದ ನೋಡುವಂತಾಯಿತು. ಇತರ ಬ್ಯಾಂಕ್‌ಗಳು ಪ್ರವೇಶಿಸಲು ಮರುಚಿಂತನೆ ನಡೆಸುತ್ತಿದ್ದ ಈಶಾನ್ಯ ಭಾರತದಲ್ಲೂ ವಿಜಯಾ ಬ್ಯಾಂಕಿನ ಶಾಖೆಗಳು ಸ್ಥಾಪನೆಯಾದವು. ಬ್ಯಾಂಕಿನ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಬ್ಯಾಂಕಿಗೆ ಲಾಂಛನ ಒದಗಿಸಿದರು’.

ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು- ಒಂದೇ ದಿನ ದೇಶಾದ್ಯಂತ 27 ಶಾಖೆಗಳನ್ನು ತೆರೆದು, 105 ಮಂದಿಗೆ ಉದ್ಯೋಗ ನೀಡಿದರು. ಅವರ ಸೇವಾವಧಿಯಲ್ಲಿ ವಿಜಯಾ ಬ್ಯಾಂಕಿನ ಶಾಖೆಗಳ ಸಂಖ್ಯೆ 114ರಿಂದ 571ಕ್ಕೇರಿತು. ಉದ್ಯೋಗಿಗಳ ಸಂಖ್ಯೆ 571ರಿಂದ 1160ಕ್ಕೇರಿತು!

ಔದ್ಯೋಗಿಕ ಕ್ರಾಂತಿ
60ರ ದಶಕದ ಕೊನೆ ಮತ್ತು 70ರ ದಶಕದ ಆರಂಭದಲ್ಲಿ ದೇಶದಲ್ಲಿ ಅನೇಕ ಸಾಮಾಜಿಕ ಬದಲಾವಣೆಗಳಾದವು. ಈಗಿನ ಉಡುಪಿ ಜಿಲ್ಲೆ ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರ ಪ್ರಭಾವ ನೇರವಾಗಿ ತಟ್ಟಿತು. ಆ ಸಂದರ್ಭದಲ್ಲಿ ದಿಟ್ಟತನದ ನಿರ್ಧಾರದಿಂದ ಜನತೆಯ ನೆರವಿಗೆ ಬಂದರು ಸುಂದರರಾಮ ಶೆಟ್ಟಿ ಅವರು. ವಿಜಯಾ ಬ್ಯಾಂಕಿನಲ್ಲಿ ಅವರು ಈ ಕುಟುಂಬದ ಅರ್ಹ ಯುವಕ- ಯುವತಿಯರಿಗೆ ಉದ್ಯೋಗ ನೀಡಿದರು. ಮಾನವೀಯ ಮೌಲ್ಯವನ್ನು ಮೆರೆದರು. ಹೀಗೆ, ಅವರು ಉದ್ಯೋಗ ನೀಡಿದ್ದರಿಂದ ಸಹಸ್ರಾರು ಮಂದಿ ಮತ್ತು ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವಂತಾಯಿತು. 1980ರ ಏಪ್ರಿಲ್‌ 15ರಂದು ವಿಜಯಾ ಬ್ಯಾಂಕ್‌ ರಾಷ್ಟ್ರೀಕರಣಗೊಂಡಿತು.

ಎ. ಬಿ. ಶೆಟ್ಟಿ ಅವರ ಸಹಿತ ಸ್ಥಾಪಕರ ದೂರದೃಷ್ಟಿ, ಸುಂದರರಾಮ ಶೆಟ್ಟಿ ಅವರ ಅಪೂರ್ವ ಕಾರ್ಯವೈಖರಿಯ ಫಲವಾಗಿ ದೇಶದ ಪ್ರಬಲ ಆರ್ಥಿಕ ಸಂಸ್ಥೆಯಾಗಿ ವಿಜಯಾ ಬ್ಯಾಂಕ್‌ ರೂಪುಗೊಂಡಿದೆ. ಕಳೆದ ಆರ್ಥಿಕ ವರ್ಷದ ಅಂತ್ಯದ ನಂತರ ಬ್ಯಾಂಕಿನ ವ್ಯವಹಾರ 2,75,000 ಕೋಟಿ ರೂ. ದಾಟಿದೆ 2160 ಶಾಖೆಗಳಿವೆ. ಉದ್ಯೋಗಿಗಳ ಸಂಖ್ಯೆ 15700 ದಾಟಿದೆ.

ಶೆಟ್ಟಿ ಅವರು 1937ರಲ್ಲಿ ಕುಸುಮಾವತಿಯವರನ್ನು ವಿವಾಹವಾದರು. ನಾಲ್ವರು ಪುತ್ರರು, ಮೂವರು ಪುತ್ರಿಯರು.
ನಿರ್ದಿಷ್ಟ ಬ್ಯಾಂಕಿನ ಅಧ್ಯಕ್ಷರು ಎಂಬ ನೆಲೆಯಲ್ಲಿ ಶೆಟ್ಟಿ ಅವರ ಸಾಧನೆಗೆ ಸರಿಸಾಟಿ ಯಾರೂ ಇಲ್ಲ. ಸರ್ವ ಸಮಾಜದ ಕಡುಬಡವರು, ವಿಧವೆಯರು, ಅಂಗವೈಕಲ್ಯ ಹೊಂದಿದವರು ಮುಂತಾದವರಿಗೆ ಆದ್ಯತೆ ಮತ್ತು ಮಾನವೀಯ ನೆಲೆಯಲ್ಲಿ ಉದ್ಯೋಗ ನೀಡಿದವರು ಅವರಾಗಿದ್ದರು. ಕ್ರೀಡಾಪಟುಗಳಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸಿದ ಧೀಮಂತ ಅವರು.

ಮಾನವತಾವಾದಿ
ಮೂಲ್ಕಿ ಸುಂದರರಾಮ ಶೆಟ್ಟಿ ಅವರು ನೇರ ನಡೆನುಡಿಯ ಮಾನವತಾವಾದಿ ಎಂದು ಅವರನ್ನು ನಿಕಟವಾಗಿ ಬಲ್ಲವರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಜೀವನ ಸಾಧನೆ, ಸ್ಮರಣ ಸಂಚಿಕೆಗಳು, ಪತ್ರಿಕೆಗಳು, ಮ್ಯಾಗಸಿನ್‌ಗಳಲ್ಲಿ ಅವರ ಕುರಿತಾಗಿ ಬರಹಗಳಿವೆ. ಅವರ ಜನ್ಮಶತಮಾನೋತ್ಸವದ ಅಂಗವಾಗಿ ವಿಜಯಾ ಬ್ಯಾಂಕ್‌ ವರ್ಕರ್ ಆರ್ಗನೈಸೇಷನ್‌ ಮತ್ತು ಆಫೀಸರ್‌ ಯೂನಿಯನ್‌ ಸಂಯೋಜನೆಯಲ್ಲಿ ಪ್ರತೀ ವರ್ಷ ಕಾರ್ಯಕ್ರಮ ನಡೆಯುತ್ತಿದೆ. ಶಿರ್ವದಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಕಾಲೇಜು ಸಹಿತ ಅವರ ಹೆಸರಲ್ಲಿ ಅನೇಕ ಯೋಜನೆಗಳು ದೇಶಾದ್ಯಂತವಿದೆ. ಅವರ ಹೆಸರಿನ ಟ್ರಸ್ಟ್‌ ಸತತವಾಗಿ ಸಾಮಾಜಿಕ ಪ್ರಸ್ತುತಿಯ ಕಾರ್ಯ ನಡೆಸುತ್ತಿದೆ. 

ಬ್ಯಾಂಕ್‌ ರಾಷ್ಟ್ರೀಕರಣದ ಬಳಿಕ ಶೆಟ್ಟಿ ಅವರು 1981ರಲ್ಲಿ ಅಮೆರಿಕದ ಬಾಸ್ಟನ್‌ ನಗರದಲ್ಲಿನ ಪುತ್ರನ ಮನೆಗೆ ತೆರಳಿದರು. ಅಲ್ಲಿ ಅವರು 1-11-1981ರಂದು ಅಸ್ತಂಗತರಾದರು. ಅಳಿಯುವುದು ಕಾಯ- ಉಳಿಯುವುದು ಕೀರ್ತಿ ಎಂಬ ಹಾಗೆ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರದ್ದು ನಿಜ ಅರ್ಥದ ಬದುಕು.

ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.