ದೇಗುಲ ಚಿನ್ನ ಬ್ಯಾಂಕ್‌ನಲ್ಲಿಡುವ ಅನಿವಾರ್ಯತೆ
Team Udayavani, Sep 15, 2020, 6:58 AM IST
ಸಂದರ್ಶನ: ಎನ್. ವಾಸು, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ
ಕೋವಿಡ್‌ನ ಋಣಾತ್ಮಕ ಪರಿಣಾಮವು ದೇಶಾದ್ಯಂತ ದೇಗುಲಗಳ ಆದಾಯದ ಮೇಲೂ ಕಾಣಿಸಿಕೊಂಡಿದೆ. ಶಬರಿಮಲೆಯಂಥ ದೊಡ್ಡ ದೇವಾಲಯಗಳ ಆಡಳಿತಾತ್ಮಕ ಚಟುವಟಿಕೆಗಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಶಬರಿಮಲೆ ಸೇರಿದಂತೆ ಕೇರಳದಲ್ಲಿ 1,250 ಮಂದಿರಗಳ ನಿರ್ವಹಣೆ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿ, ಪ್ರತಿ ತಿಂಗಳು ಕನಿಷ್ಠ 50 ಕೋಟಿ ರೂಪಾಯಿಯನ್ನು ಉದ್ಯೋಗಿಗಳ ಸಂಬಳ, ಪಿಂಚಣಿ, ಪೂಜೆ, ಆಡಳಿತಾತ್ಮಕ ನಿರ್ವಹಣೆಯ ಮೇಲೆ ವ್ಯಯಿಸುತ್ತದೆ. ಈಗ ಇರುವ ಮೀಸಲು ಫಂಡ್ ಕೂಡ ಖಾಲಿಯಾಗುತ್ತಿದ್ದು, ಖರ್ಚುವೆಚ್ಚಗಳನ್ನು ನಿರ್ವಹಿಸಲು ಚಿನ್ನವನ್ನು ಬ್ಯಾಂಕ್‌ನಲ್ಲಿಡಲು ಮಂಡಳಿ ಯೋಚಿಸುತ್ತಿದೆ. ಈ ವಿಚಾರದಲ್ಲಿ ಭಕ್ತಾದಿಗಳಿಂದ ಹಾಗೂ ಬಿಜೆಪಿಯಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್. ವಾಸು ರೆಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನ ಇಲ್ಲಿದೆ…
ಕೇರಳದ ಮಂದಿರಗಳ ಮೇಲೆ ಕೋವಿಡ್ ಹಾಗೂ ಲಾಕ್‌ಡೌನ್‌ನ ಪರಿಣಾಮ ಯಾವ ಪ್ರಮಾಣದಲ್ಲಿದೆ?
– ಶಬರಿಮಲೆ ಅಯ್ಯಪ್ಪ ದೇಗುಲ ಸೇರಿದಂತೆ ಸುಮಾರು 1,250 ಮಂದಿರಗಳು ತಿರುವಾಂಕೂರು ದೇವಸ್ವಂ ಬೋರ್ಡ್‌ನಡಿ ಬರುತ್ತವೆ. ಕಳೆದ ಆರು ತಿಂಗಳಿಂದ ಈ ಎಲ್ಲ ಮಂದಿರಗಳೂ ಬಾಗಿಲು ಹಾಕಿವೆ. ಶಬರಿಮಲೆಯಲ್ಲೂ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸತ್ಯವೇನೆಂದರೆ, ವಿಶು ಮತ್ತು ವಾರ್ಷಿಕ ಆಚರಣೆಯಷ್ಟೇ ಅಲ್ಲ, ಶಬರಿಮಲೆಯಲ್ಲಿ ತಿಂಗಳ ಪೂಜೆಯನ್ನೂ ನಾವು ನಿಲ್ಲಿಸಿದ್ದೇವೆ. ಇವೆಲ್ಲದರಿಂದಾಗಿ ನಮಗೆ ಸರಿಸುಮಾರು 300 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ.
ನೀವು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು, ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ 5,000 ಉದ್ಯೋಗಿಗಳು ಹಾಗೂ 4,000 ಪಿಂಚಣಿದಾರರಿದ್ದಾರೆ. ಇವರಿಗೆಲ್ಲ ಸಂಬಳ- ಪಿಂಚಣಿ ನೀಡಲು, ನಿತ್ಯ ಪೂಜೆ ಹಾಗೂ ಇತರ ಆಡಳಿತಾತ್ಮಕ ಚಟುವಟಿಕೆಗಳಿಗಾಗಿ ಪ್ರತಿ ತಿಂಗಳೂ ಕನಿಷ್ಠ 50 ಕೋಟಿ ರೂಪಾಯಿಯಾದರೂ ಬೇಕು.
ಹಾಗಿದ್ದರೆ ಕಳೆದ ಆರು ತಿಂಗಳಲ್ಲಿ ಎಲ್ಲ ಉದ್ಯೋಗಿಗಳಿಗೂ ಸಂಬಳ ಹಾಗೂ ಪಿಂಚಣಿ ಕೊಡಲು ಸಾಧ್ಯವಾಗಿದೆಯೇ?
– ನಮ್ಮ ಬಳಿ ರಿಸರ್ವ್ ಫಂಡ್ ಇದ್ದ ಕಾರಣ, ಇಲ್ಲಿಯವರೆಗೂ ಎಲ್ಲರಿಗೂ ಪೂರ್ಣ ಸಂಬಳ, ಪಿಂಚಣಿ ಕೊಟ್ಟಿದ್ದೇವೆ. ಆದರೆ ಇನ್ನೂ ಮೂರು ತಿಂಗಳಿಗೂ ಅಧಿಕ ಸಮಯ ಹೀಗೇ ಮಾಡಲು ನಮಗೆ ಸಾಧ್ಯವಿಲ್ಲ. ಈ ವರ್ಷಾಂತ್ಯಕ್ಕೆ ನಮ್ಮ ಫಂಡ್‌ಗಳೆಲ್ಲ ಖಾಲಿ ಆಗಲಿವೆ.
ದೇವಸ್ವಂ ಮಂಡಳಿಗೆ ಶಬರಿಮಲೆ ದೇಗುಲ ದಿಂದಲೇ ಹೆಚ್ಚು ಆದಾಯ ಬರುತ್ತದೆಯೇ?
– ಹೌದು. 50 ಪ್ರತಿಶತದಷ್ಟು ಆದಾಯ, ಅಂದರೆ ಸುಮಾರು 350 ಕೋಟಿ ರೂಪಾಯಿ ಶಬರಿಮಲೆಯೊಂದರಿಂದಲೇ ಬರುತ್ತದೆ. ಸುಮಾರು 1,000ಕ್ಕೂ ಅಧಿಕ ಮಂದಿರಗಳ ಖರ್ಚು ವೆಚ್ಚವನ್ನು ದೊಡ್ಡ ಮಂದಿರಗಳಿಂದ ಬಂದ ಆದಾಯದಿಂದಲೇ ನೋಡಿಕೊಳ್ಳಲಾಗುತ್ತದೆ.
ಈ ಕಠಿನ ಸಮಯವನ್ನು ಎದುರಿಸಲು ತಿರುವಾಂಕೂರು ಮಂಡಳಿ ಸೇರಿದಂತೆ, ದೇಶದಲ್ಲಿನ ಶ್ರೀಮಂತ ಮಂದಿರಗಳೆಲ್ಲ ತಮ್ಮಲ್ಲಿನ ಚಿನ್ನವನ್ನು ಬ್ಯಾಂಕ್‌ಗಳಲ್ಲಿಡಲು ಯೋಚಿಸುತ್ತಿವೆ ಎಂದು ವರದಿಯಾಗಿತ್ತಲ್ಲ?
– ಹಾಗೆಯೇ ಮಾಡಲು ಯೋಚಿಸುತ್ತಿದ್ದೇವೆ. ಸತ್ಯವೇನೆಂದರೆ, ಕೋವಿಡ್ ಸಂಕಷ್ಟ ಎದುರಾಗುವುದಕ್ಕೂ ಮುನ್ನವೇ, ಅಂದರೆ ಜನವರಿ ತಿಂಗಳಲ್ಲೇ ನಾವು ನಮ್ಮಲ್ಲಿನ ಚಿನ್ನವನ್ನು ರಿಸರ್ವ್ ಬ್ಯಾಂಕ್ ನಲ್ಲಿಟ್ಟು 2.5 ಪ್ರತಿಶತ ಬಡ್ಡಿ ಪಡೆಯುವ ಯೋಚನೆಗೆ ಬಂದಿದ್ದೆವು. ಈ ನಿರ್ಧಾರಕ್ಕೂ ಕೋವಿಡ್ ಸಾಂಕ್ರಾಮಿಕಕ್ಕೂ ಸಂಬಂಧವಿಲ್ಲ.
ಚಿನ್ನವು ಒಂದೆಡೆ ಸುಮ್ಮನೆ ಕುಳಿತಿದೆ ಎಂಬ ಕಾರಣಕ್ಕಾಗಿಯೇ?
– ಖಂಡಿತ ಹೌದು. ನಮ್ಮ ಬಳಿ ಮೂರು ರೀತಿಯ ಚಿನ್ನವಿದೆ. ಒಂದು, ನಿತ್ಯ ದೇವರ ವಿಗ್ರಹಗಳಿಗೆ ಅಲಂಕಾರ ಮಾಡಲು ಬಳಸುವಂಥದ್ದು ಅಥವಾ ವಿಶೇಷ ಸಂದರ್ಭಗಳಲ್ಲಿ ಬಳಕೆ ಆಗುವಂಥದ್ದು. ಆ ಚಿನ್ನವನ್ನು ಬ್ಯಾಂಕ್‌ನಲ್ಲಿ ಇಡುವ ಯೋಚನೆ ಇಲ್ಲ. ಅದು ಮಂದಿರದಲ್ಲೇ ಉಳಿಯಲಿದೆ.
ಇವು ಭಕ್ತಾದಿಗಳು ಸಮರ್ಪಿಸಿದ್ದೇ?
– ಹಾಂ. ಈ ಚಿನ್ನದ ಬಿಸ್ಕತ್ತುಗಳು-ನಾಣ್ಯಗಳನ್ನು ಭಕ್ತಾದಿಗಳು ಸಮರ್ಪಿಸಿದ್ದು. ಈ ವಸ್ತುಗಳನ್ನು ಬ್ಯಾಂಕ್‌ನಲ್ಲಿಡಲು ಶಿಫಾರಸು ಮಾಡಿದ್ದೇವೆ. ಈ ವಸ್ತುಗಳು ಯಾವುದೇ ರೀತಿಯ ಆದಾಯ ಸೃಷ್ಟಿಸದೇ ದಶಕಗಳಿಂದ ಮಂದಿರದಲ್ಲೇ ಇವೆ. ನಮ್ಮ ಬೋರ್ಡ್‌ನಡಿ ಬರುವ ಮಂದಿರಗಳಲ್ಲಿ ಎಷ್ಟೆಷ್ಟು ಚಿನ್ನವಿದೆ ಎಂದು ನಾವು ಲೆಕ್ಕಹಾಕುತ್ತಿದ್ದೇವೆ.
ಗೋಲ್ಡ್ ಮಾನಿಟೈಸೇಶನ್ ಪಾಲಿಸಿ ಅಡಿಯಲ್ಲಿ ಬ್ಯಾಂಕ್‌ನಿಂದ 2.5 ಪ್ರತಿಶತದಷ್ಟು ಬಡ್ಡಿ ಪಡೆಯಬಹುದು. ಹತ್ತು ದಿನಗಳ ಹಿಂದೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು ಸಭೆಯೊಂದನ್ನು ಆಯೋಜಿಸಿ, ಸುಮಾರು 24 ದೇವಾಲಯಗಳ ಆಡಳಿತಾಧಿಕಾರಿಗಳನ್ನು ಆಹ್ವಾನಿಸಿದ್ದರು. ಅದರಲ್ಲಿ ನಮ್ಮನ್ನೂ ಒಳಗೊಂಡು ಹತ್ತು ಮಂಡಳಿಗಳು ಭಾಗವಹಿಸಿದ್ದವು. ಇದು ಸ್ವಾಗತಾರ್ಹ ನಡೆ ಎಂಬುದು ನನ್ನ ಭಾವನೆ. ಚಿನ್ನದ ಮೇಲೆ 2.5 ಪ್ರತಿಶತ ಬಡ್ಡಿ ಅಂದರೆ, ವಾರ್ಷಿಕವಾಗಿ ಬಡ್ಡಿಯ ರೂಪದಲ್ಲಿ ನಮಗೆ ಕನಿಷ್ಠ 10 ಕೋಟಿ ರೂಪಾಯಿಗಳಾದರೂ ಸಿಗಬಹುದು.
ಚಿನ್ನವನ್ನು ಬ್ಯಾಂಕ್‌ನಲ್ಲಿಡುವ ಪ್ಲ್ರಾನ್ ಅನ್ನು ಜನವರಿಯಲ್ಲೇ ಮಾಡಲಾಗಿತ್ತು ಅಂತೀರಿ, ಹಾಗಿದ್ದರೆ ಈಗ ತುಂಬಾ ಅನಿವಾರ್ಯ ಎದುರಾಗಿದೆಯೇ?
– ತ್ವರಿತವಾಗಿ ನಮ್ಮ ಸಿಬಂದಿಗೆ ಸಂಬಳ ನೀಡಬೇಕಿರುವುದರಿಂದ, ಅನಿವಾರ್ಯವಾಗಿದೆ. ಫಂಡ್‌ಗಳ ಕೊರತೆ ಇರುವ ಕಾರಣ ಮಂದಿರಗಳ ರಿಪೇರಿ ಮಾಡಲು ಕೂಡ ನಮಗೆ ಸಾಧ್ಯವಾಗಿಲ್ಲ. ಆರಂಭದಲ್ಲಿ ಚಿನ್ನವನ್ನು ಬ್ಯಾಂಕ್‌ನಲ್ಲಿಡುವ ಯೋಚನೆ ಬಂದಿದ್ದಾಗ, ಅದರಿಂದ ಬರುವ ಹಣದ ಬಹುಪಾಲನ್ನು ಮಂದಿರಗಳಿಗೇ ಬಳಸಿಕೊಳ್ಳುವ ಯೋಚನೆಯಿತ್ತು. ಆದರೆ, ಪ್ರಸಕ್ತ ಪರಿಸ್ಥಿತಿಯು ಆ ಹಣವನ್ನು ಆಡಳಿತಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಮಾಡಿದೆ.
ಈ ಪ್ರಕ್ರಿಯೆಗೆ ಹೈಕೋರ್ಟ್‌ನ ಅನುಮತಿ ಪಡೆಯುವುದು ಕಡ್ಡಾಯವೇ?
– ಸತ್ಯವೇನೆಂದರೆ, ತಿರುವಾಂಕೂರು ದೇವಸ್ವಂ ಬೋರ್ಡ್‌ನ ಲೆಕ್ಕಪರಿಶೋಧನೆಯ ಮೇಲ್ವಿಚಾರಣೆ ಯನ್ನೂ ಹೈಕೋರ್ಟ್ ನೋಡಿಕೊಳ್ಳುತ್ತದೆ. ಹಾಗಾಗಿ, ಇಂಥ ನಿರ್ಧಾರಕ್ಕೆ ಬರುವ ಮುನ್ನ ಹೈಕೋರ್ಟ್ ಅನುಮತಿ ಪಡೆಯುತ್ತೇವೆ. ಹಾಗೆಂದು, ಹೈಕೋರ್ಟ್‌ನ ಬಳಿ ಹೋಗಬೇಕೆಂದು ಎಲ್ಲೂ ಬರೆದಿಲ್ಲ. ಆದರೆ, ವಿವಾದಗಳು ಸೃಷ್ಟಿಯಾದಾಗೆಲ್ಲ ಎಲ್ಲವೂ ಸ್ಪಷ್ಟವಾಗಿರಲಿ ಎಂಬ ಕಾರಣಕ್ಕಾಗಿ ನಾವು ಹೈಕೋರ್ಟ್ ಬಳಿ ಹೋಗುತ್ತೇವೆ. ಎಲ್ಲ ಪಾರದರ್ಶಕವಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶ.
ಈ ಹಿಂದೆ ದೇವಸ್ವಂ ಮಂಡಳಿ ಮಂದಿರಗಳಿಗೆ ಸೇರಿದ ಕೆಲವು ದೀಪಗಳನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಟೀಕೆ ಎದುರಾಗಿತ್ತಲ್ಲ…
– ಮಂದಿರದ ದೀಪಗಳನ್ನು ಮಾರುವ ವಿಚಾರಕ್ಕೆ ಬರುವುದಾದರೆ, ಈ ನಿರ್ಧಾರವನ್ನು ಮಂಡಳಿ ಜನವರಿಯಲ್ಲಿ ತೆಗೆದುಕೊಂಡಿತು. ಕೆಲವು ಮಂದಿರಗಳಲ್ಲಿ ದೊಡ್ಡ ದೊಡ್ಡ ದೀಪಗಳು ಹಾಗೂ ಬಳಕೆಯಾಗದ ಅಂಥದ್ದೇ ಹಲವು ವಸ್ತುಗಳಿವೆ. ಅವುಗಳನ್ನು ಸುರಕ್ಷಿತವಾಗಿ ಇಡುವಷ್ಟು ಜಾಗ ಇಲ್ಲ. ಹಾಗಾಗಿ, ಮಂದಿರದ ನಿತ್ಯ ಬಳಕೆಗೆ ಅಗತ್ಯವಿಲ್ಲದ ಈ ವಸ್ತುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಬೇಕು ಎಂದು ನಾವು ಯೋಚಿಸಿದೆವು. ಈ ನಿರ್ಧಾರಕ್ಕೆ ಬರುವ ಮುನ್ನವೂ ನಾವು ಹೈಕೋರ್ಟ್‌ನ ಅನುಮತಿ ಪಡೆದಿದ್ದೆವು. ಇನ್ನು ಚಿನ್ನವನ್ನು ಬ್ಯಾಂಕ್‌ನಲ್ಲಿಡುವ ವಿಚಾರದಲ್ಲೂ ನಾವು ಹೈಕೋರ್ಟ್ ಬಳಿ ಹೋಗಿದ್ದೆವು.
ಲಾಕ್‌ಡೌನ್ ನಿರ್ಬಂಧಗಳು ಸಡಿಲವಾದ ನಂತರದಿಂದ ನಿಧಾನಕ್ಕೆ ಭಕ್ತಾದಿಗಳು ಮಂದಿರಗಳಿಗೆ ಬರಲಾರಂಭಿಸಿದ್ದಾರೆ. ಎಲ್ಲವೂ ಸಹಜ ಸ್ಥಿತಿಗೆ ಯಾವಾಗ ಮರಳಬಹುದು?
– ಸದ್ಯಕ್ಕಂತೂ ಯಾವುದರ ಬಗ್ಗೆಯೂ ಭವಿಷ್ಯ ನುಡಿಯಲು ನಮಗೆ ಸಾಧ್ಯವಿಲ್ಲ. ಮಲಯಾಳಂ ಮಾಸವಾಗಿರುವ ಮೊದಲ ಚಿಂಗಂನಿಂದ, ಶಬರಿಮಲೆ ಹೊರತುಪಡಿಸಿ ಉಳಿದ ಮಂದಿರ ಗಳನ್ನು ಭಕ್ತಾದಿಗಳ ಪ್ರವೇಶಕ್ಕೆ ತೆರೆದಿದ್ದೇವೆ. ಆದರೆ ಇದಕ್ಕೂ ಕಟ್ಟುನಿಟ್ಟಾದ ನಿಯಮಗಳಿವೆ. 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳು ಪ್ರವೇಶಿಸುವಂತಿಲ್ಲ. ಗಮನಿಸಬೇಕಾದ ಅಂಶವೆಂದರೆ, ಬಹುತೇಕ ಭಕ್ತಾದಿಗಳ ವಯಸ್ಸು 65 ವರ್ಷಕ್ಕೂ ಅಧಿಕವಿದೆ. ಸದ್ಯಕ್ಕೆ ಒಂದು ಬಾರಿಗೆ ಕೇವಲ 5 ಭಕ್ತರನ್ನಷ್ಟೇ ಒಳಗೆ ಬಿಡಲಾಗುತ್ತಿದೆ. ದೀಪಾರಾಧನೆಯ ಸಮಯದಲ್ಲಿ ಯಾರಿಗೂ ಅನುಮತಿಯಿಲ್ಲ.
ಸಂದರ್ಶನ: ಎನ್. ವಾಸು, ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.