ಉದಯವಾಣಿ ಮೊದಲ ಸಂಚಿಕೆ
Team Udayavani, Jan 1, 2020, 7:23 AM IST
ಮಣಿಪಾಲದಲ್ಲಿ ಪೈ ಸೋದರರು 1964ರಿಂದಲೇ ಪತ್ರಿಕೆ ಆರಂಭಿಸುವ ಯೋಚನೆ ಮಾಡಿದ್ದರು. ಅದರ ಕುರಿತಾಗಿ ಸಾಕಷ್ಟು ಯೋಜನೆ ರೂಪಿಸಿ, ಹಲವಾರು ಮಂದಿಯೊಂದಿಗೆ ಸಮಾಲೋಚನೆ ನಡೆಸಿ ಕೊನೆಗೆ 1970ರ ಜನವರಿ ಒಂದರಿಂದ ಪತ್ರಿಕೆ ಮುದ್ರಣ ಆರಂಭಗೊಂಡಿತು. ಪತ್ರಿಕೆ ಆರಂಭದ ದಿನಗಳ
ಚಿತ್ರಣ ಇಲ್ಲಿದೆ.
ಪತ್ರಿಕೆ ಆರಂಭಿಸುವ ಆಲೋಚನೆ ಹಿಂದೆ ಇತ್ತಾದರೂ ಸಿದ್ಧತೆ ಎಂಬುದು ನಡೆದಿರಲಿಲ್ಲ. ಜತೆಗೆ ಮಣಿಪಾಲ. ಒಂದು ಪುಟ್ಟ ಹಳ್ಳಿ. ಇಲ್ಲಿ ಯಾವ ಸೌಲಭ್ಯವೂ ಇರಲಿಲ್ಲ, ತಂತ್ರಜಾನದ ಮಾತು ಅನಂತರದ್ದು. ದೇಶ, ವಿದೇಶದ ಸುದ್ದಿಗಳನ್ನು ಪಡೆಯುವುದೇ ದುಸ್ತರವಾಗಿತ್ತು. ಸುದ್ದಿ ಸಂಸ್ಥೆ ಪಿಟಿಐ ಸಹ ಇರಲಿಲ್ಲ.
ಐವತ್ತು ವರ್ಷಗಳ ಹಿಂದೆ ಉದಯವಾಣಿ ಯನ್ನು ಆರಂಭಿಸಿದ ಮೋಹನದಾಸ ಪೈ ಹಾಗೂ ಸತೀಶ್ ಪೈ ಅವರು ತಮ್ಮ ಪತ್ರಿಕಾ ಪ್ರಯಾಣದ ಬಗ್ಗೆ ನೆನಪಿನ ಪಯಣವನ್ನು ಆರಂಭಿಸಿದ್ದು ಹೀಗೆ.
ಐವತ್ತರ ವಿಶೇಷ ಸಂಚಿಕೆಯೊಂದಿಗೆ ಹಂಚಿ ಕೊಂಡ ವಿವರಗಳು ತಾಂತ್ರಿಕತೆ ಇಲ್ಲದ ಆ ಕಾಲಘಟ್ಟವನ್ನು ವಿವರಿಸಿತು.
ಮೋಹನದಾಸ ಪೈ/ಸತೀಶ್ ಪೈ: ಸುದ್ದಿಗಳಿಗೆ ಕನಿಷ್ಠ ಪಿಟಿಐ ಬೇಕಿತ್ತು. ಆದರೆ, ಅವರು ನೀವು ಒಬ್ಬರೇ. ಸಂಪರ್ಕ ಒದಗಿಸಲಾಗದು ಎಂದರು. ಪಿಟಿಐಗೆ ಕನಿಷ್ಠ ಎರಡಾದರೂ ಸಂಸ್ಥೆಗಳು ಬೇಕಿದ್ದವು. ಆಗ ಸಿಂಡಿಕೇಟ್ ಬ್ಯಾಂಕ್ ಅನ್ನೂ ಕೋರಿಕೊಂಡೆವು. ನಾವು ಮತ್ತು ಸಿಂಡಿಕೇಟ್ ಬ್ಯಾಂಕ್-ಇಬ್ಬರು ಗ್ರಾಹಕರಿಗಾಗಿ ಪಿಟಿಐ ಮಣಿಪಾಲಕ್ಕೆ ಬಂದಿತು. ಆಕಸ್ಮಾತ್ ಪಿಟಿಐ ಸಂಪರ್ಕ ಕಡಿತಗೊಂಡರೆ ಸುದ್ದಿಯೇ ಇರುತ್ತಿರಲಿಲ್ಲ. ಈಗಿನಂತೆ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಸರಿ ಹೊಂದುತ್ತಿರಲಿಲ್ಲ;
ಗಂಟೆಗಳು, ದಿನಗಳೂ ತಗಲುತ್ತಿದ್ದವು. ಆ ಸಂದರ್ಭದಲ್ಲಿ ರೇಡಿಯೋವನ್ನು ಆಶ್ರಯಿಸಿ ಸುದ್ದಿ ಮಾಡುತ್ತಿದ್ದೆವು.
ಮೋಹನದಾಸ ಪೈ : ಆಗಿನ್ನೂ ಮಣಿಪಾಲ ಶೈಕ್ಷಣಿಕ ಪ್ರದೇಶವಾಗಿ ಬೆಳೆಯುತ್ತಿತ್ತು. ಆದರೂ ಹೀಗೆಲ್ಲಾ ಇರಲಿಲ್ಲ. ಒಂದು ದಿನ ಪತ್ರಿಕೆ ಮಾಡಲು ನಿರ್ಧರಿಸಿದಾಗ ಅತ್ಯುತ್ತಮ ಸೈನ್ಯವನ್ನು ಹುಡುಕತೊಡಗಿದೆವು. ಪತ್ರಿಕಾ ಭಾಷೆ ಬಗ್ಗೆ ನಾನು ಹೆಚ್ಚು ಗಮನಿಸಿರಲಿಲ್ಲ. ಅದೆಲ್ಲಾ ಬನ್ನಂಜೆ ರಾಮಾಚಾರ್ಯರ ಹೊಣೆಯಾಗಿತ್ತು.
ಎನ್. ಗುರುರಾಜ್: ರಾತ್ರಿ 1.30 ವರೆಗೂ ಕೆಲಸ ಮಾಡುತ್ತಿದ್ದೆವು. ಏನಾದರೂ ದೊಡ್ಡ ಘಟನೆ ಸಂಭವಿಸಿದಾಗಲೆಲ್ಲಾ ಕಾಲದ ಮಿತಿಯೇ ಇರಲಿಲ್ಲ. ಆಗ ನೀವೆಲ್ಲ (ಮಾಲಕರು) ಬಾಜಲ್ ಮತ್ತು ಕೊಕೋಕೋಲಾವನ್ನು ತಂದುಕೊಡುತ್ತಿದ್ದಿರಿ. ಅದೇ ನಮಗೆ ಕೆಲಸ ಮಾಡುವಂತೆ ಪ್ರೇರೇಪಿಸುತ್ತಿತ್ತು.
ಸತೀಶ್ ಪೈ : ನೀವು ಅತ್ಯಂತ ಆಕರ್ಷಕವಾದ ತಲೆಬರಹಗಳನ್ನು ಕೊಡುತ್ತಿದ್ದಿರಿ, ಅದರಲ್ಲೂ ಚುಟುಕಾದ ಮತ್ತು ಆಕರ್ಷಕ ಹೆಡ್ಡಿಂಗ್ ನಿಮ್ಮ ಪ್ರಯತ್ನ. ಮೂರು ವಾಕ್ಯದಲ್ಲಿ ಹೇಳುವುದನ್ನು ಒಂದು ಸಾಲಿನಲ್ಲಿ ಹೇಳಲು ಪ್ರಯತ್ನಿಸುತ್ತಿದ್ದಿರಿ.
ಗುರುರಾಜ್: ನಮ್ಮಿಂದ ಹತ್ತು ತಲೆಬರಹಗಳನ್ನು ಬರೆಸಲಾಗುತ್ತಿತ್ತು. ಅದರಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತಿತ್ತು. ಆಗೆಲ್ಲಾ ಈಗಿನ ಯಾವ ಸೌಲಭ್ಯವೂ ಇರಲಿಲ್ಲ. ಆದರೆ ನಿಷ್ಠೆ ಮತ್ತು ಆಸಕ್ತಿ ಇತ್ತು.
ಮನೋಹರ ಪ್ರಸಾದ್ : ಈ ಕಾಲಘಟ್ಟದಲ್ಲಿ ಮುದ್ರಣ ಮಾಧ್ಯಮ ಸಂಕಷ್ಟದಲ್ಲಿದೆ ಎನ್ನಲಾಗುತ್ತಿದೆ. ಆ ಕಾಲಘಟ್ಟದಲ್ಲಿ ಹೇಗಿತ್ತು?
ಮೋಹನದಾಸ ಪೈ : ಮುದ್ರಣ ಮಾಧ್ಯಮಕ್ಕೆ ಸದ್ಯಕ್ಕೆ ಏನೂ ಆಗುವುದಿಲ್ಲ. ಎಲ್ಲ ಕಡೆಯೂ ಓದುಗರು ಜಾಸ್ತಿಯಾಗುತ್ತಿದ್ದಾರೆ. ವಿದೇಶಗಳಲ್ಲಿ ಕೆಲವು ಪತ್ರಿಕೆಗಳು ಮುಚ್ಚಿರಬಹುದು. ಆದರೆ ಇಲ್ಲಿ (ನಮ್ಮಲ್ಲಿ) ಹಾಗೇನೂ ಇಲ್ಲ. ಜಾಹೀರಾತು ಪ್ರಮಾಣವೂ ವೃದ್ಧಿಯಾಗಿದೆ. ಈಗ ಹೆಚ್ಚು ಜನರು ಜಾಹೀರಾತು ಓದಲೂ ಪತ್ರಿಕೆ ಕೊಳ್ಳುತ್ತಾರೆ.
ಗುರುರಾಜ್: ನಿಜ ಸಾರ್, ಮುಂದಿನ ಒಂದಿಷ್ಟು ವರ್ಷಗಳಿಗೆ ಏನೂ ಆಗದು.
ಮನೋಹರ ಪ್ರಸಾದ್ : ಪತ್ರಿಕೆ ಆರಂಭಿಸಲು ಏನು ಪ್ರೇರಣೆ ಸಾರ್.
ಮೋಹನದಾಸ ಪೈ: ಮೊದಲಿಂದಲೂ ಪತ್ರಿಕೆ ಮಾಡಬಹುದು ಎಂದೆನಿಸಿತ್ತು. ಜತೆಗೆ ರಾಮಾಚಾರ್ಯರು ಬಂದು ಪತ್ರಿಕೆ ಆರಂಭಿಸುವಂತೆ ಸಲಹೆ ನೀಡುತ್ತಿದ್ದರು. ಬಳಿಕ ಒತ್ತಾಯ ಮಾಡತೊಡಗಿದರು. ಆಗ ಆಗಲೆಂದು, ಉತ್ತಮ ಪತ್ರಕರ್ತರ ತಂಡವನ್ನು ರೂಪಿಸಲು ಸಣ್ಣ ಜಾಹೀರಾತು ಕೊಟ್ಟೆವು. ಆ ಬಳಿಕ ರಾಮಾಚಾರ್ಯರೇ ತಂಡದ ಆಯ್ಕೆ, ಅವರನ್ನು ಬಳಸುವ ಎಲ್ಲ ಹೊಣೆಗಾರಿಕೆಯನ್ನು ಹೊತ್ತುಕೊಂಡರು.
ಗುರುರಾಜ್ : ನನ್ನನ್ನೂ ಒಬ್ಬರು ಶಿಫಾರಸು ಮಾಡಿದರು. ಬಳಿಕ ಕರೆಯೋಲೆ ಬಂತು. ಬಂದು ಪರೀಕ್ಷೆ ಬರೆದೆ. ಆಯ್ಕೆಯಾಯಿತು, ಕೆಲಸಕ್ಕೆ ಸೇರಿಕೊಂಡೆ.
ಮನೋಹರ್ : ಪತ್ರಿಕೆ ವಿತರಣೆ ಹೇಗಾಯ್ತು?
ಸತೀಶ್ ಪೈ/ಮೋಹನದಾಸ ಪೈ: ಮೊದಲು ಮಂಗಳೂರು, ಉಡುಪಿ, ಕಾರ್ಕಳಕ್ಕೆ ಏಜೆಂಟರುಗಳನ್ನು ಮಾಡಿದೆವು. ಬಳಿಕ ಬೇರೆಡೆಗೆ ವಿಸ್ತರಿಸಿದೆವು. ನಾವು ಪತ್ರಿಕೆ ಆರಂಭಿಸುವಾಗ ನವಭಾರತ ಪತ್ರಿಕೆ 17 ಸಾವಿರ ಪ್ರಸಾರ ಸಂಖ್ಯೆ ಹೊಂದಿತ್ತು. ಉದಯವಾಣಿ ಬಂದ ಬಳಿಕ ಅದರ ಸಂಖ್ಯೆ ಇಳಿಯತೊಡಗಿತು.
ಸತೀಶ್ ಪೈ : ಆಗ ಕೆಲವರು ನಮ್ಮ ಪ್ರಯತ್ನವನ್ನು ಲಘುವಾಗಿ ಕಂಡಿದ್ದರು. “ಮಣಿಪಾಲದಲ್ಲಿ ಎಷ್ಟು ಮಂದಿ ಜನರಿದ್ದಾರೆ ಪತ್ರಿಕೆ ಕೊಳ್ಳಲು?’ ಎಂದು ಪ್ರಶ್ನಿಸಿದ್ದೂ ಇದೆ.
ಮೋಹನದಾಸ ಪೈ : ಪತ್ರಿಕೆ ಹನ್ನೆರಡು ಗಂಟೆಗೆ ಬಂದರೆ ಯಾರು ಕೊಳ್ತಾರೆ? ಹಾಗೆಂದು ತೀರಾ 5 ಗಂಟೆಗೆ ಬಂದರೂ ಕಷ್ಟವೆನ್ನುವಂತಿತ್ತು. ಓದುಗ ಬೆಳಗ್ಗೆದ್ದು ಕಾಫಿ ಕುಡಿಯುವ ಹೊತ್ತಿನಲ್ಲಿ ಅಂದರೆ 6ರ ಹೊತ್ತಿನೊಳಗೆ ಅವನ ಬಳಿ ಪತ್ರಿಕೆ ತಲುಪಿದರೆ ಯಾಕೆ ಓದುವುದಿಲ್ಲ. ಅದನ್ನೇ ನಾವು ಮಾಡಿದ್ದು.
ಸತೀಶ್ ಪೈ : 5 ಸಾವಿರ ಪ್ರಸಾರ ಸಂಖ್ಯೆ ತಲುಪಿದಾಗಲೇ ನಮಗೆ ಮುದ್ರಣದ ಸಮಸ್ಯೆ ಕಾಡತೊಡಗಿತು. ಒಮ್ಮೆ ಯಂತ್ರ ಬ್ರೇಕ್ ಡೌನ್ ಆಯಿತು. ಆಮೇಲೆ ಏನು ಮಾಡುವುದೆಂದು ತೋಚಲಿಲ್ಲ. ಆಗ ಶ್ರೀನಿವಾಸ ಶೆಟ್ಟಿಗಾರ್, ದೇವಾಡಿಗ ಎಂದು ಇದ್ದರು. ಅವರು ಟ್ರೇಸಿಂಗ್ ಪೇಪರ್ ಬಳಸಿ, ಯಾವುದೋ ಪೌಡರ್ ಸಹಾಯದಿಂದ ಫೋಟೋ ಮುದ್ರಣ ಮಾಡುವ ಕೌಶಲವನ್ನು ಶೋಧಿಸಿದರು. ಅದು ನಮ್ಮ ಕೆಲಸವನ್ನು ಬಹಳ ಹಗುರ ಮಾಡಿತು. ಅಷ್ಟೇ ಅಲ್ಲ, ಆಗ ಎಲ್ಲೆಡೆಯೂ ಪಾಸಿಟಿವ್ ಮಾಡಿ ಫೋಟೋ ಬಳಸುವ ತಾಂತ್ರಿಕತೆಯಿತ್ತು. ಅದಾದ ಬಳಿಕ ನಮ್ಮ ಪ್ರಯೋಗ ಕಂಡು ದಿ ಹಿಂದೂ ಅವರೆಲ್ಲಾ ನಮ್ಮಲ್ಲಿಗೆ ಬಂದು ಮಾಹಿತಿ ಪಡೆದರು. ನಾವು ಕಲಿತದ್ದೇ ಪ್ರಯೋಗಶೀಲತೆಯಲ್ಲಿ.
ಮೋಹನದಾಸ ಪೈ : ಆಗ ಇಷ್ಟೆಲ್ಲಾ ಹೊಸತನವನ್ನು ಬೇರೆ ಯಾರೂ ಕೊಡುತ್ತಿರಲಿಲ್ಲ. ನನಗೆ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇರಲಿಲ್ಲ. ಓದುತ್ತಿದ್ದೆ ಅಷ್ಟೇ, ಒಬ್ಬ ಓದುಗ. ಆಗ ನಮಗೆ ದಿ ಹಿಂದೂ ಪತ್ರಿಕೆ ಬರ್ತಾ ಇದ್ದದ್ದೇ ಮರುದಿನ ರಾತ್ರಿಗೆ. ಕಾದು ಓದುತ್ತಿದ್ದೆವು. ಜತೆಗೆ ಪತ್ರಿಕೆ ತಲುಪಿಸುವ ಬಗ್ಗೆ ನಾವು ಹೆಚ್ಚು ಯೋಚಿಸಿ ಕ್ರಿಯಾಶೀಲರಾದೆವು. ಮೊದಲು ಮಂಗಳೂರನ್ನು ಹೆಚ್ಚು ಕೇಂದ್ರೀಕರಿಸಿದೆವು. ಬಳಿಕ ಮೂಲ್ಕಿ ಮತ್ತಿತರ ಕಡೆಗೂ ವಿಸ್ತರಿಸಿದೆವು.
ಸತೀಶ್ ಪೈ : ಆಗ ಹಲವರ ಸಹಕಾರವಿತ್ತು. ಅರವಿಂದ ಮೋಟಾರ್ನವರ ಸಹಕಾರವೂ ಚೆನ್ನಾಗಿತ್ತು. ಬಹಳ ತಡವಾದರೆ ನಾವು ಕಾರಿನಲ್ಲಿ ತೆಗೆದುಕೊಂಡು ಹೋಗಿ ತಲುಪಿಸುತ್ತಿದ್ದೆವು.
ಮನೋಹರ ಪ್ರಸಾದ್ : ನೀವು ಇಷ್ಟೊಂದು ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದು ಏಕೆ?
ಮೋಹನದಾಸ ಪೈ: ನಮಗೆ ಪತ್ರಿಕೆ ಮಾಡಬೇಕು ಅನ್ನಿಸ್ತಾ ಇತ್ತು. ಆ ಸಂದರ್ಭದಲ್ಲಿ ಅಮೆರಿಕ, ಯೂರೋಪ್ ಕಡೆಯೆಲ್ಲಾ ಮುದ್ರಣಕ್ಕೆ ಸಂಬಂಧಿಸಿದ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದೆವು.
ಸತೀಶ್ ಪೈ : ಒಮ್ಮೆ ಲಾಸ್ ಏಂಜಲೀಸ್ ಟೈಮ್ಸ್‌ನವರು ಅವರ ಕಚೇರಿಗೆ ಆಹ್ವಾನಿಸಿದ್ದರು. ನಾವಿಬ್ಬರೂ (ಮೋಹನದಾಸ ಪೈ ಮತ್ತು ನಾನು) ಅಲ್ಲಿಗೆ ಹೋದೆವು. ಪ್ರತಿ ಕೌಂಟಿಗೂ (ಒಂದೊಂದು ಪ್ರದೇಶ) ಪ್ರತ್ಯೇಕ
ಆವೃತ್ತಿಯಿತ್ತು. ನೋಡಿದಾಗ ವಿಶಿಷ್ಟ ಎನಿಸಿತು. ಮಣಿಪಾಲಕ್ಕೆ ವಾಪಸಾದ ಬಳಿಕ ಮಂಗಳೂರು, ಉಡುಪಿ ಎಂದು ಯೋಚಿಸಿ ಕ್ರಿಯಾಶೀಲರಾದೆವು.
ಮೋಹನದಾಸ ಪೈ : ರಾಮಾಚಾರ್ಯರಲ್ಲಿ ಹೆಸರು ಕೊಡಿ ಎಂದು ಕೇಳಿದೆವು. ಜತೆಗೆ ಜನರಿಂದಲೂ ಅಭಿಪ್ರಾಯ ಕೋರಿ ಸಣ್ಣದೊಂದು ಜಾಹೀರಾತು ಕೊಟ್ಟೆವು. ಅದರಂತೆ ಹಲವಾರು ಸಲಹೆಗಳು ಬಂದವು, ಆ ಪೈಕಿ ಉದಯವಾಣಿಯನ್ನು ಆಯ್ಕೆ ಮಾಡಿದೆವು.
ಗುರುರಾಜ್ : ಇನ್ನೂ ಹಲವು ಆಯ್ಕೆಗಳಿದ್ದವಲ್ಲ ಸಾರ್.
ಮೋಹನದಾಸ ಪೈ : ಹೌದು, ಇದ್ದವು.
ಸತೀಶ್ ಪೈ: ಬೇರೆ ಬೇರೆ ಇತ್ತು, ವಿಜಯವಾಣಿ ಎಂದಿತ್ತು… ನಾವೆಲ್ಲ ನಮ್ಮ ಹಿತೈಷಿಗಳೊಂದಿಗೂ ಸುದ್ದಿ ಆಯ್ಕೆ ಮತ್ತು ಪ್ರಾಮುಖ್ಯತೆ ಕುರಿತು ಚರ್ಚಿಸುತ್ತಿದ್ದೆವು.
ಮನೋಹರ ಪ್ರಸಾದ್ : ಕುಗ್ರಾಮದ ಸರಣಿ ಯೋಚನೆ ಬಂದಿದ್ದು ಹೇಗೆ?
ಮೋಹನದಾಸ ಪೈ : ಅದು ಕಲೆಕ್ಟಿವ್ ಎಫರ್ಟ್. ಈಶ್ವರ ಭಟ್ ಮತ್ತು ನಾವೆಲ್ಲ ಯೋಚಿಸಿ ಜಾರಿಗೊಳಿಸಿದೆವು.
ಸತೀಶ್ ಪೈ : ನಿಜ, ಈಶ್ವರ ಅವರ ಆಲೋಚನೆಯನ್ನು ನಾವೆಲ್ಲಾ ಬೆಂಬಲಿಸಿದೆವು. ಅದು ಜನಪ್ರಿಯವಾಯಿತು.
ಮೋಹನದಾಸ ಪೈ: ಜನರ ಅಭಿರುಚಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು, ಬದಲಾವಣೆಗಳನ್ನೂ ಗ್ರಹಿಸಬೇಕು. ಅದಕ್ಕೆ ತಕ್ಕಂತೆ ನಾವು ಪತ್ರಿಕೆ ರೂಪಿಸಿದರೆ ಜನ ಖರೀದಿಸಿ ಓದಿ ಪ್ರೋತ್ಸಾಹಿಸು ತ್ತಾರೆ. ಅದರಲ್ಲಿ ಸಂಶಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.