“ಉದಯವಾಣಿ’ ಆರಂಭ ಕಾಲದ ರಸ ಪ್ರಸಂಗಗಳು
Team Udayavani, Dec 31, 2022, 6:20 AM IST
ಮಣಿಪಾಲದಲ್ಲಿ 1970ರ ಜನವರಿ 1ರಂದು “ಉದಯವಾಣಿ’ ಆರಂಭಗೊಂಡಿತು. 53 ವರ್ಷಗಳ ಸುದೀರ್ಘ ಪಯಣದ ಬಳಿಕ ನಾಳೆ (ಜ.1) 54ನೆಯ ವರ್ಷಕ್ಕೆ ಕಾಲಿಡುತ್ತಿದೆ. ಇದೇ ವೇಳೆ “ತುಷಾರ’ಕ್ಕೆ 50ನೇ ವರ್ಷ, “ತರಂಗ’ಕ್ಕೆ 40ನೇ ವರ್ಷ, “ಉದಯವಾಣಿ’ ಬೆಂಗಳೂರು ಆವೃತ್ತಿಗೆ 30ನೇ ವರ್ಷದ ಸಂಭ್ರಮದ ಕಾಲವಿದು. 53 ವರ್ಷಗಳ ಹಿಂದೆ ಉದಯವಾಣಿ ಆರಂಭದ ದಿನಗಳ ಕೆಲವು ರಸನಿಮಿಷಗಳು ಇಲ್ಲಿವೆ.
1970ರ ಮುನ್ನ ನಿಜಲಿಂಗಪ್ಪನವರು ಅಭ್ಯರ್ಥಿ ಆಯ್ಕೆ ಕುರಿತು ಉಡುಪಿ ಅಲಂಕಾರ್ ಚಲನಚಿತ್ರ ಮಂದಿರದಲ್ಲಿ ಸಭೆ ಕರೆದಾಗ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಮತ್ತಿತರರು ಮಣಿಪಾಲದ ಮುಂದಾಳು ಟಿ.ಎ.ಪೈ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಲು ಹೋಗಿದ್ದರು. ಅಭ್ಯರ್ಥಿ ಆಯ್ಕೆಗೆಂದು ಸಭೆ ಕರೆದಿದ್ದರೂ, ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡಿತ್ತು. ಸುಮ್ಮನೆ ನಾಮ್‌ಕಾ ವಾಸ್ತೆ ಸಭೆ. ರಾಮಾಚಾರ್ಯರು ಟಿ.ಎ.ಪೈಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕೆಂದು ವಿನಂತಿಸಲು ಹೊರಟಾಗ ನಿಜಲಿಂಗಪ್ಪನವರು ನಿರ್ಲಕ್ಷ್ಯದಿಂದ ಮಾತನಾಡಿದರು. ನಿಜಲಿಂಗಪ್ಪನವರ ಮಾತಿನಿಂದ ಕುಪಿತರಾದ ರಾಮಾಚಾರ್ಯರು ಸಭಾಧ್ಯಕ್ಷರನ್ನುದ್ದೇಶಿಸಿ ಏರುದನಿಯಲ್ಲಿ “…’ ಶಬ್ದ ಸಾಂವಿಧಾನಿಕವೋ? ಅಸಾಂವಿಧಾನಿಕವೋ?’ ಎಂದರು. “ಛೇ ಛೇ ಎಲ್ಲಿಯಾದರೂ ಉಂಟೆ? ಅಸಾಂವಿಧಾನಿಕ’ ಎಂದು ಅಧ್ಯಕ್ಷರು ಹೇಳಿದರು. “ನಾನು ಈ ಶಬ್ದ ಬಳಸಬೇಕೆಂದಿದ್ದೆ. ಇದು ಅಸಾಂವಿಧಾನಿಕವೆಂದು ಹೇಳುವುದಾದರೆ “ವಿಧವಾಪುತ್ರ’ ಎನ್ನುತ್ತೇನೆ’ ಎಂದು ಆಕ್ರೋಶವನ್ನು ಹೊರಹಾಕಿ ಸಭೆಯಿಂದ ಹೊರನಡೆದಿದ್ದರು. ಇಂತಹ ವ್ಯಕ್ತಿತ್ವದ ರಾಮಾಚಾರ್ಯರು ಮುಂದೆ “ಉದಯವಾಣಿ’ಯ ಸಂಪಾದಕೀಯ ಮಂಡಳಿ ಮುಖ್ಯಸ್ಥರಾದರು’ ಎಂದು ವಿಶ್ರಾಂತ ಸಂಪಾದಕ ಎನ್. ಗುರುರಾಜ್ ಬೆಟ್ಟು ಮಾಡುತ್ತಾರೆ.
“ತಾಳಮದ್ದಳೆ’ ನೆನಪಿದೆಯಾ?
ಇತ್ತೀಚಿಗೆ ಮಣಿಪಾಲದ ಅನ್ನಪೂರ್ಣ ಹೊಟೇಲ್ ನಲ್ಲಿ “ಉದಯವಾಣಿ’ ಆರಂಭದ ಕಾಲದಲ್ಲಿ ಸಂಪಾದಕೀಯ ವಿಭಾಗದಲ್ಲಿದ್ದ ಎನ್.ಗುರುರಾಜ್, ಜಯರಾಮ ಅಡಿಗ, ಜಿ.ಕೆ.ಮಧ್ಯಸ್ಥ, ಡಾ|ರಾಘವ ನಂಬಿಯಾರ್, ಕೆ.ಶಿವಶಂಕರ್ ಅವರು ಸೇರಿದ್ದರು. 1970ರಲ್ಲಿ ಸಂಸ್ಥಾ ಕಾಂಗ್ರೆಸ್ ಮತ್ತು ಇಂದಿರಾ ಕಾಂಗ್ರೆಸ್ ಎಂದು ವಿಭಜನೆಯಾಗಿತ್ತು. ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಭರ್ಜರಿ ಗೆಲುವು ಪಡೆದುಕೊಂಡಿತು. “ನಿಜವಾದ ಕಾಂಗ್ರೆಸ್ ಇಂದಿರಾ ಕಾಂಗ್ರೆಸ್. ಆದ್ದರಿಂದ ಗೆಲುವು ಸಾಧಿಸಿತು’ ಎಂದು ಮಧ್ಯಸ್ಥರು ಅಭಿಪ್ರಾಯಪಟ್ಟರು. ಅದಕ್ಕೆ “ಜನ ಮತ ಹಾಕಿದ್ದಾರೆ. ಅವರು ತಪ್ಪು ತಿಳಿದೂ ಹಾಕಿರಬಹುದು. ಪಕ್ಷವನ್ನು ಅಸಲಿಯೋ? ನಕಲಿಯೋ? ಎಂದು ಗುರುತಿಸುವ ಮಾನದಂಡ ಗೆಲುವು ಅಲ್ಲ’ ಎಂದು ಜಯರಾಮ ಅಡಿಗ ವಾದಿಸಿದರು. ವಾದ ತಾರಕಕ್ಕೇರಿತ್ತು. ಮೊನ್ನೆ ಒಟ್ಟಾದಾಗ ಅಡಿಗರು ಮಧ್ಯಸ್ಥರನ್ನುದ್ದೇಶಿಸಿ ನಮ್ಮ ನಡುವೆ ಆದ “ತಾಳಮದ್ದಳೆ’ ನೆನಪಿದೆಯೆ ಎಂದು ಹೇಳಿದಾಗ ಎಲ್ಲರೂ ಗಹಗಹಿಸಿ ನಕ್ಕರು.
ಶಬ್ದ ಚಲಾವಣೆಯ ಕ್ರೆಡಿಟ್
ಶಬ್ದಗಳ ಸರಿ, ತಪ್ಪುಗಳ ಬಗೆಗೆ, ವಿಚಾರಗಳ ಬಗೆಗೆ ಸಂಪಾದಕೀಯ ವಿಭಾಗದಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಇದರಲ್ಲಿ “ಪ್ರಿನ್ಸಿಪಾಲ್’ ಎಂಬ ಬದಲು ಚಲಾವಣೆಗೆ ತಂದ “ಪ್ರಾಂಶುಪಾಲ’ ಶಬ್ದವೂ ಒಂದು. ಇದರ ಸಲಹೆ ಬಂದದ್ದು ಸಂಪಾದಕೀಯ ವಿಭಾಗದಲ್ಲಿದ್ದ ಡಾ|ನಿಟಿಲಾಪುರ ಕೃಷ್ಣಮೂರ್ತಿಯವರಿಂದ. ಇದಕ್ಕೆ ಸಾಹಿತಿ ಪ್ರೊ|ಕು.ಶಿ.ಹರಿದಾಸ ಭಟ್ ಆಕ್ಷೇಪಿಸಿದ್ದರು. “ಪ್ರಾಂಶುಪಾಲ ಎನ್ನುವುದು ಕನ್ನಡ ಭಾಷಾಂತರ ಶಬ್ದವಲ್ಲ, ಇದು ಸಂಸ್ಕೃತದ ಶಬ್ದ’ ಎಂದು ಮನಗಾಣಿಸಿದರೂ ಅವರು ಒಪ್ಪಿರಲಿಲ್ಲ. ಕಾಲಕ್ರಮೇಣ ಹರಿದಾಸ ಭಟ್ಟರೇ ನಿವೃತ್ತ ಪ್ರಾಂಶುಪಾಲ ಎಂದು ಕಳುಹಿಸುತ್ತಿದ್ದರು ಎಂದು ನಿವೃತ್ತ ಹಿರಿಯ ಉಪಸಂಪಾದಕ ಕೆ. ಶಿವಶಂಕರ್ ಹೇಳುತ್ತಾರೆ.
100 ರೂ. ನೋಟಿನ ಮೊದಲ ದರ್ಶನ!
1969ರ ಡಿಸೆಂಬರ್ ನಲ್ಲಿ ಎನ್. ಗುರುರಾಜ್ ಉದ್ಯೋಗಕ್ಕೆ ಸೇರಿದ್ದರು. ಗುರುರಾಜರ ತಮ್ಮ ಸುಂದರರಾಜ್ ಪದವಿ ಓದಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು. ತಮ್ಮನಿಗೆ ಕೆಲಸವಿಲ್ಲದ ಕಾರಣ ಸತೀಶ್ ಪೈಯವರು “ಬ್ಯಾಂಕ್ ಕೆಲಸಕ್ಕೆ ಪ್ರಯತ್ನ ಮಾಡಲಿ. ಅಲ್ಲಿಯವರೆಗೆ ಇಲ್ಲಿ ಕೆಲಸಕ್ಕೆ ಬರಲಿ’ ಎಂದರು. ಸುಂದರರಾಜ್ ಸಹಾಯಕನಾಗಿ ಆರು ತಿಂಗಳ ಕಾಲ ಕೆಲಸ ಮಾಡಿದರು. ವಾಸ್ತವದಲ್ಲಿ 50 ರೂ., ಪದವೀಧರನಾದ ಕಾರಣ 50 ರೂ. ಹೆಚ್ಚಿಗೆ ಕೊಡುತ್ತಿದ್ದರು. ಸುಂದರರಾಜ್ ಅದುವರೆಗೆ ನೂರು ರೂ. ನೋಟೇ ನೋಡಿರಲಿಲ್ಲವಂತೆ.
“ಚಾತ್ತಾರ್’ ಅಡ್ಡ ಹೆಸರು
ಕೃಷ್ಣಯ್ಯನವರನ್ನು ಯಾರೇ ಭೇಟಿಯಾಗಲು ಬಂದರೂ “ಲೆಟ್ ಅಸ್ ಹ್ಯಾವ್ ಎ ಟೀ’ ಎಂದು ಉಪಚರಿಸುತ್ತಿದ್ದರು. ಅವರು ಸುಂದರರನ್ನು ಉದ್ದೇಶಿಸಿ “ಮಾಣಿ, ಚಾ ತಾ’, “ಮಾಣಿ ಚಾ ತಾರಾ’ ಎಂದು ಹೇಳುತ್ತಿದ್ದ ಕಾರಣ ಅವರಿಗೆ “ಚಾ ತಾ’, “ಚಾತ್ತಾರ್’ ಎಂಬ ಅಡ್ಡ ಹೆಸರು ಬಂತು. “ಕೃಷ್ಣಯ್ಯನವರು ಎಸೆಸೆಲ್ಸಿ ಓದಿದ್ದರೂ ಅದ್ಭುತವಾದ ಇಂಗ್ಲಿಷ್. ಯಾವುದೇ ರೆಫರೆನ್ಸ್ ಗಳಿಲ್ಲದೆ, ಯಾವುದೇ ತಿದ್ದುಪಡಿಗಳಿಲ್ಲದೆ ಹಾಲ್ಡಾ ಟೈಪ್ ರೈಟಿಂಗ್ ಯಂತ್ರದಲ್ಲಿ ನಿರರ್ಗಳವಾಗಿ ಟೈಪ್ ಮಾಡುತ್ತಿದ್ದರು’ ಎನ್ನುವುದನ್ನು ಸುಂದರ್ ನೆನಪಿಸಿಕೊಳ್ಳುತ್ತಾರೆ.
“ಬೀಡ ಕನಲ್ಲ’, “ಪುಡಿ ಕನಲ್ಲ’
ಪ್ರಧಾನ ಉಪ ಸಂಪಾದಕ ಬನ್ನಂಜೆ ಗೋವಿಂದಾಚಾರ್ಯರ ಬಳಿ ಕುಳಿತುಕೊಳ್ಳುತ್ತಿದ್ದಾಗ ಅವರು “ಮಾಣಿ, ಬೀಡ ಕನಲ್ಲ’, “ಮಾಣಿ, ಪುಡಿ (ನಶ್ಯ) ಕನಲ್ಲ’ ಎಂದು ತುಳುವಿನಲ್ಲಿ ಹೇಳುತ್ತಿದ್ದರು. ಆಗ ಸುಂದರರಿಗೆ ತುಳು ಬರುತ್ತಿರಲಿಲ್ಲ. ಬನ್ನಂಜೆ ಗೋವಿಂದಾಚಾರ್ಯರಿಗೆ ಹುಷಾರಿಲ್ಲದ ಸಮಯ ಮನೆಗೆ ನೋಡಲು ಹೋದಾಗ ಮಗನ ಬಳಿ “ಬೀಡ, ಪುಡಿ ತರಲು ಹೇಳುತ್ತಿದ್ದುದನ್ನು ನೆನಪಿಸಲೇ’ ಎಂದು ಕೇಳಿದರು. “ಬೇಡಾ ಮಾರಾಯ, ಈಗೆಲ್ಲಿಯಾದರೂ ತಂದು ಕೊಡು ಎಂದು ಹೇಳಿದರೆ ಕಷ್ಟ’ ಎಂದು ಹಾಸ್ಯ ಚಟಾಕಿ ಹಾರಿಸಿದರಂತೆ.
ಸಂಸ್ಥಾಪಕರ ಡೈಲಿ ರೌಂಡ್ಸ್
ಉದಯವಾಣಿ ಸಂಸ್ಥಾಪಕರಾದ ಟಿ. ಮೋಹನದಾಸ್ ಪೈಯವರು ಸಂಜೆ ಬಂದರೆ ಮಧ್ಯರಾತ್ರಿ ವರೆಗೆ, ಟಿ. ಸತೀಶ್ ಪೈಯವರು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ನಾಲ್ಕು ಬಾರಿ ಮುದ್ರಣಾಲಯದ ಪ್ರತೀ ವಿಭಾಗಕ್ಕೆ ಭೇಟಿ ನೀಡಿ ಕುಂದುಕೊರತೆಗಳನ್ನು ಗಮನಿಸಿ ಆಯಾ ವಿಭಾಗ ಮುಖ್ಯಸ್ಥರಿಗೆ ಸೂಚನೆ ಕೊಟ್ಟು ಮರುದಿನ ಅದು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳುತ್ತಿದ್ದರು ಎಂಬುದನ್ನು ಪ್ರಸ್‌ನ ಮೆನೇಜರ್ ಆಗಿದ್ದ ಬೈಕಾಡಿ ಕೃಷ್ಣಯ್ಯನವರ ಮಗ ಪ್ರಸ್ತುತ ಸೀನಿಯರ್ ಜನರಲ್ ಮೆನೇಜರ್ ಬಿ. ನರಹರಿ ನೆನಪಿಸಿಕೊಳ್ಳುತ್ತಾರೆ.
ಮೋಹನದಾಸ್ ಪೈ ಅವರು ಸಂಜೆಯಿಂದಲೇ ಸಂಪಾದಕೀಯ ವಿಭಾಗದವರ ಜತೆ ಚರ್ಚೆ ನಡೆಸಿ ಮುಂಜಾವ ಪ್ರಥಮ ಮುದ್ರಣದ ಪ್ರತಿಯನ್ನು ನೋಡಿ ಮನೆಗೆ ಹಿಂದಿರುಗುತ್ತಿದ್ದರು. ಸತೀಶ್ ಪೈ ಯವರು ಪತ್ರಿಕೆಯ ಬಂಡಲ್‌ಗಳನ್ನು ಹೊತ್ತ ವಾಹನದಲ್ಲಿ ಉಡುಪಿ ವರೆಗೆ ಹೋಗಿ ಅಲ್ಲಿ ವಿತರಣೆ ಸರಿಯಾಗಿದೆಯೋ ಎಂದು ಗಮನಿಸಿ ಕಲ್ಸಂಕದಲ್ಲಿದ್ದ ಜಗನ್ಮೋಹನ ಹೊಟೇಲ್ ನಲ್ಲಿ ಕಾಫಿ ಕುಡಿದು ಬೆಳಗ್ಗೆ 9 ಗಂಟೆಗೆ ಮನೆಗೆ ಬರುತ್ತಿದ್ದರು. ಮೋಹನದಾಸ್ ಪೈಯವರು ವಿದೇಶಗಳಲ್ಲಿರುವ ಮುದ್ರಣ ಯಂತ್ರ ಮತ್ತು ಪತ್ರಿಕೆಗಳನ್ನು ಅವಲೋಕಿಸಿ ಇಲ್ಲಿನ ಓದುಗರಿಗೆ ಆ ಗುಣಮಟ್ಟದ ಸುದ್ದಿ ನೀಡಲು ಮಾರ್ಗದರ್ಶನ ನೀಡುತ್ತಿದ್ದರು. ಇಂತಹ ಪರಿಶ್ರಮದಿಂದ ಪತ್ರಿಕೆ ರಾಜ್ಯ ಸ್ತರದಲ್ಲಿ ಮುಂಚೂಣಿಯಲ್ಲಿದೆ.
“ಕಾಲ್ಲಿಂಗ್ ಬೆಲ್ ’
ಸುದ್ದಿ ಸಂಪಾದಕರಾಗಿದ್ದ ಅಣ್ಣ ಗುರುರಾಜರಿಗೆ ತಮ್ಮ ಸುಂದರರಾಜ್ ಪಿಟಿಐ ಕಾಪಿಗಳನ್ನು ಕಟ್ ಮಾಡಿ ಕೊಡುತ್ತಿದ್ದರು. ಮಧ್ಯೆ ಮಧ್ಯೆ ಮಾಲಕರಾದ ಸತೀಶ್ ಪೈಯವರು ಕಾಲಿನಿಂದ ಒತ್ತುವ ಕಾಲಿಂಗ್ (ಕಾಲ್ಲಿಂಗ್- ಕಾಲಿನಲ್ಲಿ ಕಾಲ್ ಮಾಡುವ) ಬೆಲ್ ಒತ್ತಿ ಕರೆ ಕಳುಹಿಸುತ್ತಿದ್ದರು. ಸುಂದರ್ ಹೋಗಿ ಅವರೆದುರು ನಿಂತಾಗ ಅವರು ಕೆಲವು ಬಾರಿ ಕೊಂಕಣಿಯಲ್ಲಿ ಹೇಳುತ್ತಿದ್ದುದು ಸುಂದರ್ ರಿಗೆ ಅರ್ಥವಾಗುತ್ತಿರಲಿಲ್ಲ. ಮೆನೇಜರ್ ಬೈಕಾಡಿ ಕೃಷ್ಣಯ್ಯನವರಲ್ಲಿ ಹೋಗಿ ಅರ್ಥವಾಗಲಿಲ್ಲ ಎಂದು ಹೇಳುತ್ತಿದ್ದಾಗ ಅವರು ಸತೀಶ್ ಪೈಯವರಲ್ಲಿ ಹೋಗಿ “ಕಸನೆ ಸತೀಶು, ಕಸನ್ ಸಂಗ್ಲಾ’ ಎಂದು ಕೇಳಿ ಸುಂದರರಿಗೆ ಕನ್ನಡದಲ್ಲಿ ಹೇಳುತ್ತಿದ್ದರು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.