ಪರೀಕ್ಷಾ ಭಯ ನಿವಾರಣೆಗೆ ಸಿದ್ಧತೆಯೇ ಅಸ್ತ್ರ
Team Udayavani, Mar 20, 2022, 6:20 AM IST
ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ಶೈಕ್ಷಣಿಕ ವರ್ಷಗಳು ಗೊಂದಲ, ಗೋಜಲುಗಳ ನಡುವೆಯೇ ಮುಕ್ತಾಯಗೊಂಡಿದ್ದವು. ಆದರೆ ಪ್ರಸಕ್ತ ವರ್ಷ ಒಂದಿಷ್ಟು ಗೊಂದಲಗಳ ಹೊರತಾಗಿಯೂ ಭೌತಿಕ ತರಗತಿಗಳು ನಡೆದು ಈಗ ಅಂತಿಮ ಪರೀಕ್ಷೆಗಳು ಆರಂಭಗೊಂಡಿವೆ. ಈ ಹಿಂದಿನ ಪರೀಕ್ಷೆಗಳಿಗೂ ಈ ಬಾರಿಯ ಪರೀಕ್ಷೆಗೂ ಒಂದಿಷ್ಟು ವ್ಯತ್ಯಾಸ ಇದೆ. ಕಳೆದೆರಡು ವರ್ಷಗಳಲ್ಲಿ ಕೆಲವೊಂದು ತರಗತಿಗಳಿಗೆ ವಿಭಿನ್ನ ಮಾದರಿಯಲ್ಲಿ ಪರೀಕ್ಷೆ ನಡೆದರೆ ಮತ್ತೆ ಕೆಲವೊಂದು ತರಗತಿಗಳ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಎಲ್ಲ ತರಗತಿಗಳಿಗೂ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು ಸಹಜವಾಗಿ ಮಕ್ಕಳಲ್ಲಿ ಪರೀಕ್ಷಾ ಭಯ ಮನೆಮಾಡಿದೆ. ಇದರ ನಡುವೆ ಈ ಬಾರಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಇರುವುದನ್ನು ಅನೇಕ ಅಧ್ಯಯನ, ಸಮೀಕ್ಷೆಗಳು ಸಾಬೀತುಪಡಿಸಿವೆ. ಹಾಗಾದರೆ ಅಧ್ಯಯನ ವರದಿಗಳು ಏನು ಹೇಳುತ್ತವೆ?, ಬಾಕಿ ಉಳಿದಿರುವ ಸಮಯದಲ್ಲಿ ಪರೀಕ್ಷೆ ಎದುರಿಸಲು ಸಜ್ಜಾಗುವುದು ಹೇಗೆ?, ಒತ್ತಡಮುಕ್ತರಾಗಿ ಅಧ್ಯಯನ ನಡೆಸಿ, ಪರೀಕ್ಷೆಯನ್ನು ಹೇಗೆ ಎದುರಿಸಬಹುದು? ಎಂಬೆಲ್ಲ ವಿಷಯಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಪರೀಕ್ಷೆ ಸಮೀಪಿಸುತ್ತಿರುವಾಗ ಉಳಿದಿರುವ ಕಡಿಮೆ ಸಮಯದಲ್ಲಿ ಹೇಗೆ ಇಷ್ಟೆಲ್ಲ ಓದುವುದು ಎಂಬ ಪ್ರಶ್ನೆ ಮಕ್ಕಳನ್ನು ಕಾಡುವುದು ಸಹಜ. ಇದೇ ವೇಳೆ ಹೆತ್ತವರ ಒತ್ತಡವೂ ಮಕ್ಕಳ ಮೇಲೆ ಹೆಚ್ಚತೊಡಗುತ್ತದೆ. ಮತ್ತೂಂದೆಡೆಯಿಂದ ಆನ್‌ಲೈನ್ ತರಗತಿಯ ಕಾರಣ ದಿಂದಾಗಿ ಪಠ್ಯ ವಿಷಯಗಳ ಬಗೆಗಿನ ಕೆಲವೊಂದು ಅನುಮಾನಗಳನ್ನು ಶಿಕ್ಷಕರೊಂದಿಗೆ ಮುಖತಃ ಚರ್ಚಿಸಿ ಪರಿಹರಿಸಲು ಸಾಧ್ಯವಾಗದಿರುವುದರಿಂದ ಮಕ್ಕಳಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ತಮ್ಮ ಶೈಕ್ಷಣಿಕ ಭವಿಷ್ಯದ ಮೇಲೆ ಎಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದೋ ಎಂಬ ಚಿಂತೆ ಮಕ್ಕಳನ್ನು ಕಾಡುತ್ತಿದೆ.
ಕೆಲವೊಂದು ಅಧ್ಯಯನಗಳಲ್ಲಿ ಪರೀಕ್ಷೆಗಳು ಸಮೀಪಿ ಸುತ್ತಿದ್ದಂತೆಯೇ ಮಕ್ಕಳ ಮೇಲೆ ಒತ್ತಡ ಹೆಚ್ಚಾಗಿ ಅದು ಅವರ ಶೈಕ್ಷಣಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿರುವುದು ಸಾಬೀತಾಗಿದೆ. ಸದ್ಯ ಈ ಸಮಸ್ಯೆ ಅಷ್ಟೊಂದು ಗಂಭೀರವಾಗಿ ಬಾಧಿಸುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಮಸ್ಯೆಯ ಬಗೆಗೆ ಪ್ರಾಥಮಿಕ ಹಂತದಲ್ಲಿಯೇ ಗಮನಹರಿಸಿ ಮಕ್ಕಳು, ಅವರ ಹೆತ್ತವರು ಮತ್ತು ಶಿಕ್ಷಕರಿಗೆ ಅಗತ್ಯ ಸಲಹೆ, ಮಾರ್ಗದರ್ಶನ ನೀಡುವುದು ಒಳಿತು ಎಂಬುದು ಅವರ ಕಿವಿಮಾತು. ಕಲಿಕೆಯಲ್ಲಿ ಸದಾ ಮುಂದಿದ್ದ ಮಕ್ಕಳು ಕೂಡ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಜಾರಿಯ ಬಳಿಕ ಒಂದಿಷ್ಟು ಹಿನ್ನಡೆ ಅನುಭವಿಸುತ್ತಿರುವುದು ಮತ್ತು ಅವರು ತಮ್ಮ ಈ ಹಿಂದಿನ ಲವಲವಿಕೆಯಿಂದ ಕೂಡಿರದೇ ಇರುವುದು ಕೂಡ ಹೆತ್ತವರು ಮತ್ತು ಶಿಕ್ಷಕರ ಮನದಲ್ಲೂ ಭೀತಿ ಮೂಡಿಸಿದೆ.
ಕಳೆದೆರಡು ವರ್ಷಗಳಿಂದ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಶಾಲಾಕಾಲೇಜುಗಳಲ್ಲಿ ಭೌತಿಕ ತರಗತಿಗಳು ಸಮರ್ಪಕವಾಗಿ ನಡೆದಿಲ್ಲ. ಪ್ರಸಕ್ತ ವರ್ಷ ಕೋವಿಡ್ ಅಂಥ ಗಂಭೀರ ಪರಿಸ್ಥಿತಿಯನ್ನು ಉಂಟು ಮಾಡದಿದ್ದರೂ ಅನಾವಶ್ಯಕ ಗೊಂದಲಗಳ ಕಾರಣಗಳಿಂದಾಗಿ ಸಮರ್ಪಕವಾಗಿ ತರಗತಿಗಳು ನಡೆದಿಲ್ಲ. ಸಿಕ್ಕ ಅಲ್ಪ ಸಮಯದಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಭರದಲ್ಲಿ ಶಿಕ್ಷಕರಿಗೂ ಕೂಡ ಪ್ರತೀ ವಿದ್ಯಾರ್ಥಿಯ ಬಗೆಗೆ ಹೆಚ್ಚಿನ ಲಕ್ಷ್ಯ ಹರಿಸಲು ಸಾಧ್ಯವಾಗಿಲ್ಲ. ಇನ್ನು ಆನ್‌ಲೈನ್ ತರಗತಿಗಳ ಸಾಧಕ-ಬಾಧಕಗಳು ಎಲ್ಲರಿಗೂ ತಿಳಿದದ್ದೇ. ಮಕ್ಕಳಿಗೆ ಹಿಂದೆ ಪರೀಕ್ಷೆಯ ಬಗ್ಗೆ ಭಯ ಇರಲಿಲ್ಲ ಎಂದಲ್ಲ. ಅದು ತರಗತಿ ಪರೀಕ್ಷೆಯಾದರೂ ಸರಿಯೇ ಮಕ್ಕಳಿಗೆ ಪರೀಕ್ಷೆ ಎಂದಾಕ್ಷಣ ಒಂದು ತೆರನಾದ ಭಯ ಕಾಡುವುದು ಸಹಜ. ಆದರೆ ಕೊರೊನಾ ವಕ್ಕರಿಸಿದ ಬಳಿಕ ಪರಿಚಯಿಸಲ್ಪಟ್ಟ ಆನ್‌ಲೈನ್ ಶಿಕ್ಷಣದ ಪರಿಣಾಮ ಮಕ್ಕಳ ಮೇಲಿನ ಒತ್ತಡದ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು.
ಇಂತಹ ಸನ್ನಿವೇಶದಲ್ಲಿ ಮಕ್ಕಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದು ಹೇಗೆ, ಎಲ್ಲ ಗೊಂದಲಗಳ ಹೊರತಾಗಿಯೂ ಇರುವ ಕಡಿಮೆ ಸಮಯದಲ್ಲಿ ಹೇಗೆ ಓದಿ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂಬೆಲ್ಲ ಪ್ರಶ್ನೆಗಳು ಮಕ್ಕಳು, ಮತ್ತವರ ಹೆತ್ತವರನ್ನು ಕಾಡುವುದು ಸಾಮಾನ್ಯ. ತಜ್ಞರ ಅಭಿಪ್ರಾಯದ ಪ್ರಕಾರ ಈ ಕೆಳಗಿನ ಕೆಲವೊಂದು ತಯಾರಿ ನಡೆಸಿಕೊಂಡರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯ.
ಕಡಿಮೆ ಸಮಯದಲ್ಲಿ ಪರೀಕ್ಷೆ ತಯಾರಿ ಹೇಗೆ? :
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಅಥವಾ ನಿಮ್ಮ ತಯಾರಿಗೆ ಅನುಗುಣವಾಗಿ ಅಂಕಗಳನ್ನು ಗಳಿಸಲು ಓದಿದ್ದನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಇದು ಪರೀಕ್ಷೆ ವೇಳೆ ನಿಮಗೆ ಸಹಾಯ ಮಾಡುತ್ತದೆ. ಅದರಲ್ಲಿಯೂ ಆನ್‌ಲೈನ್ ತರಗತಿಗಳಲ್ಲಿ ಶಿಕ್ಷಕರು ಹೇಳಿದ್ದನ್ನು ಆಗಲೇ ಬರೆದಿಟ್ಟುಕೊಂಡಿದ್ದರೆ ಅದು ಕೇವಲ ನಿಮ್ಮ ಪುಸ್ತಕದಲ್ಲಿ ಮಾತ್ರವಲ್ಲದೆ ಮಸ್ತಕದಲ್ಲಿಯೂ ಉಳಿಯುತ್ತದೆ.
ಪರೀಕ್ಷೆಗೆ ಓದುವಾಗ ಅಥವಾ ಅಭ್ಯಾಸ ಮಾಡುವಾಗ ನಿಮ್ಮದೇ ಆದ ವೇಳಾಪಟ್ಟಿ ರಚಿಸಿಕೊಂಡು ಅದರಂತೆ ಪ್ರತೀ ದಿನ ಕೆಲವು ಗಂಟೆಗಳ ಕಾಲ ಅಧ್ಯಯನ ಮಾಡಿ. ಇದರಿಂದ ಪರೀಕ್ಷೆ ಸಂದರ್ಭದಲ್ಲಿ ನಿಮಗೆ ಭಯ ಕಾಡಲಾರದು.
ಪರೀಕ್ಷೆಗಾಗಿ ಅಭ್ಯಸಿಸುವಾಗ ಕೆಲವು ಪ್ರಶ್ನೆಗಳನ್ನು ನೀವೇ ಸಿದ್ಧಪಡಿಸಿಕೊಂಡು ಅದಕ್ಕೆ ಇಂತಿಷ್ಟು ಸಮಯ ನಿಗದಿ ಮಾಡಿ ಉತ್ತರ ಬರೆಯಿರಿ. ಇದರಿಂದ ಪರೀಕ್ಷೆಯ ದಿನ ನಿಮ್ಮ ಉತ್ತರಗಳನ್ನು ಬರೆಯಲು ತುಂಬಾ ಸಮಯ ಬೇಕಾಗುವುದಿಲ್ಲ. ಅದಲ್ಲದೆ ಬರವಣಿಗೆ ನಿಧಾನವಾಗುವುದಿಲ್ಲ.
ನಿಮ್ಮ ದೈನಂದಿನ ವೇಳಾಪಟ್ಟಿ ಕೇವಲ ಓದುವುದು, ಬರೆಯುವುದಕ್ಕೆ ಮಾತ್ರ ಸೀಮಿತವಾಗಿರದೆ ಒಂದಿಷ್ಟು ಸಮಯವನ್ನು ಆಟ, ಹವ್ಯಾಸಗಳಿಗೂ ಮೀಸಲಿಡಬೇಕು. ಆಗ ನಿಮ್ಮ ಮನಸ್ಸು ನಿರಾಳವಾಗಿ ಅಧ್ಯಯನದ ವೇಳೆ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ಕಲಿಕೆಯಲ್ಲಿಯೇ ತಲ್ಲೀನಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನೀವು ಓದಿದ ಮತ್ತು ಬರೆದ ವಿಷಯಗಳನ್ನು ಆದಷ್ಟು ಬೇಗ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಅತ್ಯುತ್ತಮ ಉತ್ತರ ನಿಮ್ಮದಾಗಬೇಕೆಂದರೆ? :
ಯಾವುದೇ ಪ್ರಶ್ನೆಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಉತ್ತರ ಬರೆಯಲು ನೀವು ಮುಂಚಿತವಾಗಿ ಸಿದ್ಧತೆ ಮಾಡಿಕೊಂಡಿರಬೇಕು. ಇಲ್ಲಿ ಶಿಕ್ಷಕರ ಬೋಧನೆಯ ಅನಂತರ ಸ್ವಯಂ ಅಧ್ಯಯನ ಮುಖ್ಯವಾಗುತ್ತದೆ. ನೀವು ಸಂಪೂರ್ಣ ಪಠ್ಯವನ್ನು ನಿಮ್ಮದೇ ರೀತಿಯಲ್ಲಿ ಅಭ್ಯಸಿಸಿದರೆ ನೀವು ಯಾವುದೇ ರೀತಿಯ ಒತ್ತಡ ಎದುರಿಸಬೇಕಾಗಿಲ್ಲ. ಆನ್‌ಲೈನ್ ಶಿಕ್ಷಣದಲ್ಲಿ ಇದು ಬಹುಮುಖ್ಯವಾಗಿರುತ್ತದೆ. ನೀವು ಪರೀಕ್ಷೆಗೆ ಮೊದಲು ಹಿಂದಿನ ವರ್ಷಗಳ ಕೆಲವು ಪ್ರಶ್ನೆಪತ್ರಿಕೆಗಳನ್ನು ನೋಡಿ, ಅವುಗಳಿಗೆ ಉತ್ತರಗಳನ್ನು ಬರೆದು ಪರೀಕ್ಷೆಗೆ ಸಿದ್ಧರಾಗಬೇಕು. ಆಗ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಎಂಬುದನ್ನು ತಿಳಿಯಲು ಸಾಧ್ಯ.
ಸಮಯ ಹೊಂದಾಣಿಕೆ ಮುಖ್ಯ :
ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ವಾಚ್ ಕಟ್ಟಿಕೊಳ್ಳುವುದು ಸೂಕ್ತ. ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳ ಸಂಖ್ಯೆಗೆ ಅನುಗುಣವಾಗಿ ನಿಮ್ಮ ಮೂರು ಗಂಟೆಗಳನ್ನು ವಿಂಗಡಿಸಿ ಯಾವ ಪ್ರಶ್ನೆಗೆ ಎಷ್ಟು ಸಮಯ ಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಒಂದು ಪ್ರಶ್ನೆಗೆ ಪುಟಗಟ್ಟಲೆ ಬರೆದು ಇನ್ನೊಂದು ಪ್ರಶ್ನೆಗೆ ಉತ್ತರ ಬರೆಯಲು ಸಮಯ ಸಿಗದೆ ಹೋಗಬಹುದು. ಹಾಗಾಗಿ ಮೊದಲೇ ಸಮಯವನ್ನು ವಿಂಗಡಿಸಿಕೊಂಡಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯ. ಅದಲ್ಲದೆ ಯಾವ ಪ್ರಶ್ನೆಗೆ ಎಷ್ಟು ಅಂಕವಿದೆ ಎಂಬುದರ ಆಧಾರದ ಮೇಲೆ ನಿಮ್ಮ ಪರೀಕ್ಷಾ ಸಮಯ ವಿಂಗಡಣೆಯಾಗಬೇಕು. ಹಾಗೆಂದು ಪರೀಕ್ಷಾ ಕೊಠಡಿಯಲ್ಲಿ ಸಮಯ ವಿಂಗಡಣೆಗಾಗಿಯೇ ಅರ್ಧ ತಾಸು ತೆಗೆದುಕೊಂಡರೆ ಉತ್ತರ ಬರೆಯಲು ಸಮಯ ಸಿಗಲಾರದು!
ಪರೀಕ್ಷಾ ಆತಂಕ: ಸಮೀಕ್ಷಾ ವರದಿಗಳ ಸಾರ :
- ಪರೀಕ್ಷಾ ಸಮಯದಲ್ಲಿ ಬಾಲಕರಿಗಿಂತ(ಶೇ.10.3) ಬಾಲಕಿಯರಲ್ಲಿ (ಶೇ.22.5)ಆತಂಕ ಗಣನೀಯವಾಗಿ ಹೆಚ್ಚಾಗಿರುತ್ತದೆ.
- ಮನುಷ್ಯನಿಗೆ ಹೆಚ್ಚಾಗಿ ಮಾನಸಿಕ ಸಮಸ್ಯೆ ಶುರುವಾಗುವುದೇ 14ನೇ ವಯಸ್ಸಿನ ಅನಂತರ.
- ವರದಿಗಳ ಪ್ರಕಾರ ಶೇ.16.4ರಷ್ಟು ಪೌಢಶಾಲಾ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಹೆಚ್ಚು ಆತಂಕ ಹೊಂದಿರುತ್ತಾರೆ.
- ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.81 ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಒತ್ತಡದಿಂದಾಗಿ ತಮ್ಮನ್ನು ತಾವು ದಂಡಿಸಿಕೊಳ್ಳುತ್ತಾರೆ.
- ಆತಂಕದಿಂದಾಗಿ ವಿದ್ಯಾರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ.56) ಮಕ್ಕಳಲ್ಲಿನ ಮಾನಸಿಕ ಸಮಸ್ಯೆ ಮತ್ತು ಅದರಿಂದ ಸ್ವಯಂ ಗಾಯಕ್ಕೆ ಕಾರಣವಾಗುತ್ತದೆ. ಶೇ.45 ವಿದ್ಯಾರ್ಥಿಗಳಿಗೆ ಅತೀ ಹೆಚ್ಚು ತಿನ್ನುವ ಸಮಸ್ಯೆ ಕಾಡಬಹುದು. ಶೇ.48 ವಿದ್ಯಾರ್ಥಿಗಳಿಗೆ ಪ್ಯಾನಿಕ್ ಅಟ್ಯಾಕ್ ಆಗುವ ಸಂಭವವಿರುತ್ತದೆ.
- ಸಮೀಕ್ಷೆಗೊಳಪಟ್ಟ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.82 ವಿದ್ಯಾರ್ಥಿಗಳು ಪರೀಕ್ಷೆಗಳಿಂದಲೇ ಆತಂಕ ಹೆಚ್ಚಾಗುತ್ತದೆ ಎಂದಿದ್ದಾರೆ.
- ಶಿಕ್ಷಕರ ವರದಿಯ ಪ್ರಕಾರ ಇ- ಲೆವೆಲ್ ಪರೀಕ್ಷೆಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ(ಶೇ.24.55)ಮೇಲೆ ಪರಿಣಾಮ ಬೀರುತ್ತಿವೆ.
- ವೈದ್ಯಕೀಯ ವಿಜ್ಞಾನ ಪ್ರಾಧ್ಯಾಪಕರ ಪ್ರಕಾರ ಮೂರನೇ ಒಂದು ಭಾಗದಷ್ಟು ವಿದ್ಯಾರ್ಥಿಗಳಲ್ಲಿ ಇ- ಪರೀಕ್ಷೆಗಳು ಹೆಚ್ಚು ಒತ್ತಡ ಉಂಟು ಮಾಡುತ್ತವೆ.
– ಪ್ರೀತಿ ಭಟ್, ಗುಣವಂತೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.