ಎಚ್ಚರ! ಮಾನವನ ದೇಹದಲ್ಲಿ ಸೇರಿಕೊಳ್ಳುತ್ತಿದೆ ಮೈಕ್ರೋಪ್ಲಾಸ್ಟಿಕ್
Team Udayavani, Dec 12, 2021, 7:40 AM IST
ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿ ಮಾರ್ಪಟ್ಟಿದೆ. ದೈನಂದಿನ ಪ್ರತಿಯೊಂದೂ ಕೆಲಸ ಕಾರ್ಯಗಳಿಗೂ ನಾವು ಪ್ಲಾಸ್ಟಿಕ್ ಅನ್ನು ಒಂದಲ್ಲ ಒಂದು ರೂಪದಲ್ಲಿ ಬಳಸುತ್ತಿದ್ದೇವೆ. ಪ್ಲಾಸ್ಟಿಕ್ ಬಳಕೆ ಮಿತಿ ಮೀರಿರುವ ಬಗೆಗೆ ಕಳೆದೆರಡು ದಶಕಗಳಿಂದೀಚೆಗೆ ವಿಶ್ವಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆಯಾದರೂ ಪ್ಲಾಸ್ಟಿಕ್ ರಹಿತ ಜೀವನವನ್ನು ಊಹಿಸಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಗೆ ಬಂದಿದ್ದರೂ ಅದು ಕೇವಲ “ನಾಮ್‌ಕೇ ವಾಸ್ತೆ’ ಎಂಬಂತಾಗಿದೆ. ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಕಂಡುಕೊಳ್ಳಲು ವಿಜ್ಞಾನಿಗಳಿಗೆ ಈವರೆಗೂ ಸಾಧ್ಯವಾಗದಿರುವು ದರಿಂದ ಪ್ಲಾಸ್ಟಿಕ್ ನಿಷೇಧ, ಬಳಕೆ ನಿಯಂತ್ರಣ ಇವೆಲ್ಲವೂ ಕೇವಲ ಆದೇಶ, ಹೇಳಿಕೆಗಳಿಗೆ ಸೀಮಿತವಾಗಿ ದೆಯೇ ಹೊರತು ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.
ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳು
ಪ್ಲಾಸ್ಟಿಕ್‌ಗೆ ಪರ್ಯಾಯವಾದ ಪರಿಸರ ಸ್ನೇಹಿ, ಮತ್ತು ಬಹೂಪಯೋಗಿ ವಸ್ತುವಿನ ಸಂಶೋಧನೆಗಾಗಿ ವಿಜ್ಞಾನಿಗಳು ನಿರಂತರ ಪರಿಶ್ರಮಿಸುತ್ತಿದ್ದರೂ ಪ್ಲಾಸ್ಟಿಕ್ ನಷ್ಟು ಕಡಿಮೆ ಬೆಲೆಯಲ್ಲಿ ಪರ್ಯಾಯ ವಸ್ತುವಿನ ಉತ್ಪಾದನೆ ಸಾಧ್ಯವಾಗಿಲ್ಲ. ಇನ್ನು ಪ್ಲಾಸ್ಟಿಕ್‌ಗೆ ಪರ್ಯಾಯ ಎಂದು ಹೇಳಲಾಗುವ ವಸ್ತುಗಳು ಪ್ಲಾಸ್ಟಿಕ್‌ನಷ್ಟು ಬಹೂಪಯೋಗಿಯಾಗಿಲ್ಲ. ಆದರೆ ಸದ್ಯ ವಿಶ್ವದ ಪಾಲಿಗೆ ಅತೀದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಮರುಬಳಕೆ ಸಾಧ್ಯವಾಗದ ಒಂದು ಬಾರಿ ಬಳಕೆಗಷ್ಟೇ ಸೀಮಿತವಾದ ಪ್ಲಾಸ್ಟಿಕ್ ಉತ್ಪನ್ನಗಳು. ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ಕೈಚೀಲಗಳು, ಲೋಟಗಳು, ವಿವಿಧ ತಿಂಡಿತಿನಿಸುಗಳ ಪ್ಯಾಕೆಟ್‌ಗಳು, ನೀರು ಮತ್ತು ವಿವಿಧ ತೆರನಾದ ಪಾನೀಯ ಬಾಟಲಿಗಳು, ವೈದ್ಯಕೀಯ ಉಪಕರಣಗಳು ಇವೆಲ್ಲವೂ ಏಕ ಬಳಕೆಯ ಬಳಿಕ ತ್ಯಾಜ್ಯಗಳಾಗಿ ಮಾರ್ಪಾಡಾಗುತ್ತಿವೆ. ಇವುಗಳ ನಿರ್ವಹಣೆ, ವಿಲೇವಾರಿಗೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೇ ಇರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ ಇಡೀ ವ್ಯವಸ್ಥೆಗೆ ಸಂಕಷ್ಟವನ್ನು ತಂದೊಡ್ಡಿದೆ. ಇದರಿಂದಾಗಿ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೇ ಕಾಣಸಿಗುತ್ತಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೇ ಇರುವುದರಿಂದ ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆಯಲ್ಲದೆ ಪ್ರಾಣಿಪಕ್ಷಿಗಳ ಸಹಜ ಬದುಕಿಗೆ ಕೊಳ್ಳಿ ಇಡುತ್ತಿದೆ.
ಊಹೆಗೂ ನಿಲುಕದ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಗ್ರೀಸ್‌ನ ಹೆಲೆನಿಕ್ ಸೆಂಟರ್ ಫಾರ್ ಮರೈನ್ ರಿಸರ್ಚ್‌ನ ಸಂಶೋಧಕರ ಪ್ರಕಾರ ಪ್ರತೀ ವರ್ಷ 17,600 ಟನ್ ಪ್ಲಾಸ್ಟಿಕ್ ಅನ್ನು ಸಮುದ್ರದಿಂದ ಮೇಲೆತ್ತಲಾಗುತ್ತದೆ. ಇವು ಗಳಲ್ಲಿ 84 ಪ್ರತಿಶತದಷ್ಟು ಪ್ಲಾಸ್ಟಿಕ್ ಕಡಲತೀರಗಳಿಂದ ಮತ್ತು 16 ಪ್ರತಿಶತದಷ್ಟು ಸಮುದ್ರದ ಆಳದಿಂದ ಮೇಲೆತ್ತಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ ಎಂದಾದರೆ ಒಟ್ಟಾರೆ ಪರಿಸರದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ಊಹಿಸುವುದೂ ಕಷ್ಟಸಾಧ್ಯ.
ಇದನ್ನೂ ಓದಿ:ಒಂಟೆ ಸವಾರಿ ವಿಡಿಯೋ ಹಂಚಿಕೊಂಡ ಸಚಿವ ಕಿರಣ್ ರಿಜಿಜು
ಪ್ರಾಣಿಗಳಿಗೆ ಮಾತ್ರವಲ್ಲ
ಮಾನವನಿಗೂ ಅಪಾಯಕಾರಿ
ಪ್ಲಾಸ್ಟಿಕ್ ತ್ಯಾಜ್ಯಗಳು ಮಾನವನ ನಿತ್ಯ ಜೀವನಕ್ಕೆ ಸವಾಲಾಗಿ ಪರಿಣಮಿಸಿದೆ. ಇಡೀ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ, ನಿಯಂತ್ರಣ ಇಡೀ ಮನುಕುಲಕ್ಕೆ ಶಾಪವಾಗಿ ತಟ್ಟಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆ ಒಂದೆರಡಲ್ಲ. ಇವೆಲ್ಲದರ ನಡುವೆ ಆಘಾತಕಾರಿ ವಿಷಯವೊಂದನ್ನು ಇತ್ತೀಚೆಗೆ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಅವರು ನಡೆಸಿದ ಸಂಶೋಧನೆಯಲ್ಲಿ ಹಸುಗಳು ಮತ್ತು ಹಂದಿಗಳ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಪತ್ತೆಯಾಗಿದೆ. ಮೈಕ್ರೋಪ್ಲಾಸ್ಟಿಕ್ ಕಣಗಳು ಪ್ರಾಣಿಗಳ ಅಂಗಗಳಲ್ಲಿ ಶೇಖರಣೆಗೊಳ್ಳುವ ಅಪಾಯವಿದ್ದು ಇದು ಹಾಲು ಅಥವಾ ಮಾಂಸದ ಮೂಲಕ ಮಾನವನ ಶರೀರವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಇದು ಕೇವಲ ಪ್ರಾಣಿಗಳ ಆರೋಗ್ಯ ಮಾತ್ರವಲ್ಲದೆ ಮಾನವನ ಆರೋಗ್ಯದ ದೃಷ್ಟಿ ಯಿಂದಲೂ ಅತ್ಯಂತ ಅಪಾಯಕಾರಿ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಅಧ್ಯಯನ ವರದಿಯಲ್ಲಿ ಏನಿದೆ?
ಆಮ್‌ಸ್ಟರ್‌ಡಂ ಬ್ರಿಡ್ಜ್ ವಿವಿ ನಡೆಸಿದ ಸಂಶೋಧನೆಯ ವೇಳೆ 12 ಹಸುಗಳು ಮತ್ತು 6 ಹಂದಿಗಳ ರಕ್ತದ ಮಾದರಿ ಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಆ ಎಲ್ಲ ಪ್ರಾಣಿಗಳ ರಕ್ತದಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಕಂಡುಬಂದಿವೆ. ಇದು ಪ್ರಾಣಿಗಳಿಗೆ ಎಷ್ಟು ಅಪಾಯವೋ ಅಷ್ಟೇ ಮನುಷ್ಯನಿಗೂ ಕೂಡ. ಇದೊಂದು ರೀತಿಯ ಸರಪಳಿ ಇದ್ದ ಹಾಗೇ. ಆಹಾರದ ಮೂಲಕ ಪ್ಲಾಸ್ಟಿಕ್‌ನ ಈ ಸೂಕ್ಷ್ಮ ಕಣಗಳು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಗೊಳ್ಳಬಹುದಾಗಿದ್ದು ಇದು ಪ್ರಾಣಿಗಳು ಮತ್ತು ಮಾನವನ ಅಂಗಗಳಲ್ಲಿ ಶೇಖರಣೆಯಾಗಿ ವಿವಿಧ ತೆರನಾದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದಾಗಿದೆ.
ಹೇಗೆ ರೂಪುಗೊಳ್ಳುತ್ತದೆ?
ಮೈಕ್ರೋಪ್ಲಾಸ್ಟಿಕ್ ಕಣಗಳು 5 ಮಿ.ಮೀ. ಅಥವಾ ಅದಕ್ಕಿಂತ ಕಡಿಮೆ ಗಾತ್ರವನ್ನು ಹೊಂದಿರುತ್ತವೆ ಎಂಬುದು ಸಂಶೋಧಕರ ಅಭಿಪ್ರಾಯ. ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳು ಚಿಂದಿಯಾದಾಗ ಅಥವಾ ಹಾನಿ ಗೊಳಗಾದಾಗ ಮೈಕ್ರೋಪ್ಲಾಸ್ಟಿಕ್ ಕಣಗಳು ರೂಪುಗೊಳ್ಳುತ್ತವೆ. ಇದು ಎಲ್ಲೆಡೆಯೂ ಹರಡುತ್ತದೆ. ಸಾಮಾನ್ಯವಾಗಿ ನೀರು, ಆಹಾರ ಹೀಗೆ ಎಲ್ಲ ಕಡೆಯಲ್ಲಿ ಸೇರಿಕೊಳ್ಳುತ್ತದೆ. ನಾವು ಸೇವಿಸುವ ಆಹಾರ, ನೀರಿನ ಮೂಲಕ ಇದು ಸುಲಭವಾಗಿ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಲಂಡನ್ ಕಿಂಗ್ಸ್ ಕಾಲೇಜಿನ ಅಧ್ಯಯನ ವರದಿಗಳ ಪ್ರಕಾರ ಮೈಕ್ರೋಪ್ಲಾಸ್ಟಿಕ್ ಕಣಗಳು ಉಸಿರಾಟದ ವೇಳೆ ಶ್ವಾಸನಾಳದ ಮೂಲಕ ರಕ್ತಕ್ಕೆ ಸೇರ್ಪಡೆಯಾಗಿ ದೇಹದ ವಿವಿಧ ಭಾಗಗಳನ್ನು ತಲುಪುತ್ತವೆ. ಇದರಲ್ಲಿರುವ ರಾಸಾಯನಿಕ ಮನುಷ್ಯರನ್ನು ಅಸ್ವಸ್ಥರನ್ನಾಗಿಸುವುದರ ಜತೆಗೆ ಶ್ವಾಸಕೋಶದ ಉರಿಯೂತಕ್ಕೂ ಕಾರಣವಾಗುತ್ತದೆ.
ಹೊಕ್ಕುಳು ಬಳ್ಳಿಯಲ್ಲಿ ಪ್ಲಾಸ್ಟಿಕ್ ಕಣ
ಇತ್ತೀಚೆಗೆ ಇಟಲಿಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಅಚ್ಚರಿಯ ವಿಷಯ ಬಹಿರಂಗವಾಗಿದ್ದು ಗರ್ಭಿಣಿಯೊಬ್ಬರ ಹೊಕ್ಕುಳು ಬಳ್ಳಿಯಲ್ಲೂ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕಣಗಳು ಭವಿಷ್ಯದಲ್ಲಿ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ವರದಿ-2018-19ರ ಪ್ರಕಾರ 3.3 ಮಿಲಿಯನ್ ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಅಂದರೆ ದಿನಕ್ಕೆ ಸರಿಸುಮಾರು 9,200 ಟನ್ ಪ್ಲಾಸ್ಟಿಕ್ ತ್ಯಾಜ್ಯ ದೇಶದಲ್ಲಿ ಸಂಗ್ರಹವಾಗುತ್ತಿದೆ.
-ಪುರಸಭೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಒಟ್ಟು ಘನತ್ಯಾಜ್ಯದ ಪ್ರಮಾಣ: 55-65 ಮಿಲಿಯನ್ ಟನ್
– ದೇಶದಲ್ಲಿ ರಾಶಿ ಬೀಳುವ ಒಟ್ಟು ಘನತ್ಯಾಜ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸರಿಸುಮಾರು 5-6 ಪ್ರತಿಶತದಷ್ಟಿದೆ.
– ಗೋವಾದಲ್ಲಿ ವ್ಯಕ್ತಿಯೋರ್ವ ದಿನಕ್ಕೆ ಸರಾಸರಿ 60 ಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸಿದರೆೆ ದೇಶದ ರಾಜಧಾನಿ ದಿಲ್ಲಿಯಲ್ಲಿ ವ್ಯಕ್ತಿಯೋರ್ವ ದಿನಕ್ಕೆ ಸರಾಸರಿ 37 ಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುತ್ತಾನೆ.
– ದೇಶದಲ್ಲಿ ಸುಮಾರು 25,940 ಟಿಪಿಡಿ (ವಾರ್ಷಿಕ ಅಂದಾಜು 9.4 ಮಿಲಿಯನ್ ಟನ್) ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತದೆ. (ಟಿಪಿಡಿ: ಟನ್ ಪರ್ ಡೇ)
-ಪ್ರತೀ ವರ್ಷ ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ 1 ಮಿಲಿಯನ್ ಸೀಬರ್ಡ್ಸ್ ಸಾಯುತ್ತವೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಸುಮಾರು 1,00,000 ಸಾಗರ ಜಲಚರಗಳು ಸಾಯುತ್ತವೆ.
-ಅಮೆರಿಕನ್ನರು ಪ್ರತೀ ವರ್ಷ 35 ಬಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುತ್ತಾರೆ.
-ವಿಶ್ವದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮರುಬಳಕೆ ಮಾಡುವ ದೇಶ ಟರ್ಕಿ.
-ಪ್ರತೀ ವರ್ಷ ಅಂದಾಜು 2 ಬಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ.
- ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತು
- ಪ್ರಾಣಿಗಳ ರಕ್ತದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆ
- ನೀರು, ಆಹಾರ ಮಾತ್ರವಲ್ಲದೆ ಉಸಿರಾಟದ ಮೂಲಕವೂ ಮಾನವ ದೇಹ ಪ್ರವೇಶ
- ಜಲಚರಗಳಿಗೆ ಮಾರಣಾಂತಿಕ ವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ತ್ಯಾಜ್ಯಗಳು
- ಮಾನವ ದೇಹದಲ್ಲೂ ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆ
- ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಮಾನವನ ಪ್ರಾಣಕ್ಕೇ ಸಂಚಕಾರ ಬಂದೊದಗುವ ಸಾಧ್ಯತೆ
ಇವು ನಿಮಗೆ ತಿಳಿದಿರಲಿ
– ವಿಶ್ವಾದ್ಯಂತ ವರ್ಷಕ್ಕೆ 300ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ.
– ವಿಶ್ವದಲ್ಲಿ ಒಟ್ಟು ಉತ್ಪಾದನೆಯಾಗುವ ಪ್ಲಾಸ್ಟಿಕ್‌ನಲ್ಲಿ ಶೇ.9 ರಷ್ಟು ಮಾತ್ರವೇ ಮರುಸಂಸ್ಕರಣೆ ಯಾ ಮರುಬಳಕೆಯಾಗುತ್ತದೆ.
-ವಿಶ್ವಾದ್ಯಂತ ಪ್ರತೀ ಸೆಕೆಂಡಿಗೆ 2 ಮಿಲಿಯನ್ ಪ್ಲಾಸ್ಟಿಕ್ ಚೀಲಗಳು ಬಳಕೆಯಾಗುತ್ತವೆ.
-ವಿಶ್ವದ ಕೆಲವೊಂದು ದೇಶಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಮಾತ್ರವಲ್ಲದೆ ಇಂತಹ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುತ್ತದೆ.
-ಪ್ರತೀ ನಿಮಿಷ ಒಂದು ಟ್ರಕ್ ಲೋಡ್‌ನಷ್ಟು ಪ್ಲಾಸ್ಟಿಕ್ ಅನ್ನು ಸಮುದ್ರಕ್ಕೆ ಎಸೆಯಲಾಗುತ್ತಿದೆ.
-ವಿಶ್ವಾದ್ಯಂತ ಕಡಲ ತೀರದಲ್ಲಿ ಸಂಗ್ರಹವಾಗುವ ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್‌ನ ಪ್ರಮಾಣ ಶೇ. 73ರಷ್ಟಾಗಿದೆ.
-ಪ್ರತೀ ನಿಮಿಷ ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳು ಮಾರಾಟವಾಗುತ್ತದೆ.
-ಸದ್ಯದ ಅಂಕಿಅಂಶಗಳನ್ನು ಪರಿಗಣಿಸಿದಲ್ಲಿ 2050ರ ವೇಳೆಗೆ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್‌ಗಳೇ ತುಂಬಿರಲಿವೆ.
-ಸಮುದ್ರವನ್ನು ಮಾಲಿನ್ಯಗೊಳಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಶೇ. 95ರಷ್ಟನ್ನು 10 ನದಿಗಳಿಂದ ಸಮುದ್ರ ಸೇರುತ್ತವೆ.
-2050ರ ವೇಳೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಶೇ. 99ರಷ್ಟು ಸೀಬರ್ಡ್ಸ್ ಹೊಟ್ಟೆ ಸೇರಲಿವೆ.
-ಪ್ರತೀ ವ್ಯಕ್ತಿ ವರ್ಷಕ್ಕೆ ಸರಾಸರಿ 70,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ.
-ಪ್ರತೀ ಪ್ಲಾಸ್ಟಿಕ್ ಬ್ಯಾಗ್‌ಗಳ ಸರಾಸರಿ ಬಳಕೆಯ ಅವಧಿ ಕೇವಲ 12 ನಿಮಿಷಗಳು.
-ಕಳೆದ 50 ವರ್ಷಗಳ ಅವಧಿಯಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಪ್ರಮಾಣ ದುಪ್ಪಟ್ಟಾಗಿದೆ.
ಕಡಿವಾಣ ಅನಿವಾರ್ಯ
ತಿನ್ನಬಹುದಾದ ವಸ್ತುಗಳಿಂದ ಹಿಡಿದು ವೈದ್ಯಕೀಯ ಉಪಕರಣಗಳ ತನಕವೂ ನಾವು ಪ್ಲಾಸ್ಟಿಕ್ ಬಳಸುತ್ತಿದ್ದೇವೆ. ಹಾಗಾಗಿ ನಾವು ಪ್ಲಾಸ್ಟಿಕ್ ನಿರ್ವಹಣೆಯನ್ನು ಕೂಡ ಪ್ರಜ್ಞಾವಂತಿಕೆಯಿಂದ ಮಾಡಬೇಕಾಗಿದೆ. ಮೊದಲಾಗಿ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಯಂತ್ರಿಸುವುದು ಅತ್ಯಗತ್ಯ. ಅನಂತರ ಗ್ರಾಹಕರು ಅಂದರೆ ನಾವು ನಮ್ಮ ಮನೆಗಳಲ್ಲಿ ಯಾವ ರೀತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬಹುದು ಎಂಬುದನ್ನು ಯೋಚಿಸಬೇಕು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾಗಿ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಇದರಿಂದ ಹಸಿತ್ಯಾಜ್ಯಗಳೊಂದಿಗೆ ಪ್ಲಾಸ್ಟಿಕ್ ಸೇರುವುದನ್ನು ತಡೆಗಟ್ಟಬಹುದಾಗಿದೆ.
-ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.