ಕನ್ನಡವನ್ನು ಕಬ್ಬಿಣದ ಕಡಲೆಯಾಗಿಸಬೇಕೇ?
Team Udayavani, Oct 31, 2021, 6:48 AM IST
ಕನ್ನಡದಲ್ಲಂತೂ ಶೇ. 10-20ರಷ್ಟು ಶಬ್ದಗಳು ಸಂಸ್ಕೃತದ್ದೇ ಆಗಿವೆ. ಈ ಶಬ್ದಗಳನ್ನು ಕನ್ನಡದಿಂದ ಬೇರ್ಪಡಿಸಿದರೆ ಲಾಭಕ್ಕಿಂತ ಹಾನಿಯೇ ಜಾಸ್ತಿಯಾಗಬಹುದೇನೋ. ಸಂಸ್ಕೃತ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಹಿಂದಿಯ ಶಬ್ದಗಳೂ ನವ್ಯಕನ್ನಡದಲ್ಲಿ ಬೇರ್ಪಡಿಸಲಾಗದಷ್ಟು ಅಂಟಿಕೊಂಡಿವೆ. ಈ ಇಂಗ್ಲಿಷ್ ಮತ್ತು ಹಿಂದಿ ಭಾಷಾ ಶಬ್ದಗಳು ಹಳೆಗನ್ನಡದಲ್ಲಿ ಕಾಣಲು ಸಿಗುವುದಿಲ್ಲ. ಹೊಸಗನ್ನಡದ ಮೇಲೆ ಬ್ರಿಟಿಷರ ಪ್ರಭಾವದಿಂದಾಗಿ ಇಂಗ್ಲಿಷಿನ ಅನೇಕ ಶಬ್ದಗಳು ಸೇರ್ಪಡೆಯಾಗಿ ನಾವು ಅವುಗಳನ್ನು ಒಪ್ಪಿಕೊಂಡು ಉಪಯೋಗಿಸುತ್ತಿದ್ದೇವೆ.
ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ, ತನ್ನದೇ ಲಿಪಿಯನ್ನು ಹೊಂದಿರುವ, ಕೇಳಲು ಇಂಪಾಗಿರುವ ಭಾಷೆ ನಾವಾಡುವ ಕನ್ನಡ. ಕನ್ನಡ ಮಾತನಾಡುವವರು ವಿಶ್ವಾದ್ಯಂತ ನೋಡಲು ಸಿಗುತ್ತಾರೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ಗದ್ಯ, ಪದ್ಯ, ಛಂದಸ್ಸು, ಕಾವ್ಯಗಳನ್ನು ಹಳೆಗನ್ನಡವು ಜಗತ್ತಿಗೆ ಕೊಟ್ಟಿದ್ದರೆ ನವ್ಯ ಕವನ, ಕಾದಂಬರಿ, ಕತೆ, ಕವಿತೆಗಳನ್ನು ಹೊಸಗನ್ನಡವು ಕೊಟ್ಟಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡಪರ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸಲು ಒಂದು ತರಹದ ಆಂದೋಲನವನ್ನೇ ಕೈಗೊಂಡಿವೆ. ಕರ್ನಾಟಕದಲ್ಲಿ ಎಲ್ಲವೂ ಕನ್ನಡದಲ್ಲೇ ಇರಬೇಕೆಂದು, ಹಿಂದಿ ಹೇರಿಕೆ ಮಾಡಬಾರದೆಂದು ಹೋರಾಡುವವರೂ ಇದ್ದಾರೆ. ಕನ್ನಡವನ್ನು ಉಳಿಸುವುದು ಮತ್ತು ಅದಕ್ಕಾಗಿ ಕನ್ನಡವನ್ನು ಮಾತನಾಡುವುದು ಮತ್ತು ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಕನ್ನಡವನ್ನು ಬೆಳೆಸಬೇಕು ಅಥವಾ ಶುದ್ಧೀ ಕರಿಸಬೇಕು ಎನ್ನುವ ಗುಂಗು ಅತಿಯಾದರೆ ಅದು ಒಳ್ಳೆಯ ಫಲಿತಾಂಶವನ್ನು ಕೊಡಲಾರದು. ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾಯಕಕ್ಕೆ ಇಳಿಯುವ ಮುನ್ನ ಕೆಲವೊಂದು ವಿಷಯಗಳ ಬಗ್ಗೆ ಆತ್ಮಾವಲೋಕನ ಅಗತ್ಯ.
ಕನ್ನಡದ ಸೃಷ್ಟಿಕರ್ತನಾರು? ಕನ್ನಡವು ದೋಷಪೂರಿತ ಭಾಷೆಯೇ?, ಅದರ ಶುದ್ಧೀಕರಣ ಅಗತ್ಯವಿದೆಯೇ?, ಶುದ್ಧೀಕರಣ ಹೇಗೆ? ಕನ್ನಡಕ್ಕೆ ಕ್ಲಿಷ್ಟಕರವಾದ ಹೊಸ ಹೊಸ ಶಬ್ದಗಳ ಸೇರ್ಪಡೆಯ ಆವಶ್ಯಕತೆ ಇದೆಯೇ? ಸೇರ್ಪಡೆಯಾದ ಶಬ್ದಗಳನ್ನು ಜನರು ಉಪಯೋಗಿಸಬಹುದೇ? ಇವೆಲ್ಲವನ್ನೂ ಮೊದಲು ಯೋಚಿಸಬೇಕಾಗುತ್ತದೆ.
ಸಂಸ್ಕೃತದಿಂದಾದಿಯಾಗಿ ಯಾವುದೇ ಭಾಷೆಗಳ ಸೃಷ್ಟಿಕರ್ತ, ಭಾಷಾ ಬ್ರಹ್ಮ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಯೋಚಿಸಿ ನೋಡಿದರೆ ಭಾಷೆ ಮತ್ತು ಅದರಲ್ಲಿ ಬಳಸುವ ಶಬ್ದಗಳು ಯಾರ ಸ್ವತ್ತೂ ಅಲ್ಲ, ಅಥವಾ ಅದು ಸಾರ್ವಜನಿಕ ಸ್ವತ್ತು ಎನ್ನುವುದರ ಅರಿವಾಗುತ್ತದೆ. ಯಾವುದೇ ಭಾಷೆಯ ಸೃಷ್ಟಿ ಹೇಗಾಯಿತು ಮತ್ತು ಯಾವಾಗ ಆಯಿತು ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ. ದೇವಭಾಷೆಯೆಂದು ಕರೆಯಲ್ಪಡುವ ಸಂಸ್ಕೃತವನ್ನು ಅತೀ ಪುರಾತನ ಭಾಷೆ ಮತ್ತು ಇತರ ಭಾಷೆಗಳ ಜನಕನೆಂದು ಅನೇಕರು ಒಪ್ಪಿಕೊಂಡಿದ್ದಾರೆ. ಏಕೆಂದರೆ ಜಗತ್ತಿನ ಹೆಚ್ಚಿನ ಭಾಷೆಗಳಲ್ಲಿ ಅನೇಕ ಸಂಸ್ಕೃತ ಶಬ್ದಗಳು ಆಯಾ ಭಾಷೆಯ ಬೇರ್ಪಡಿಸಲಾಗದ ಅಂಗವಾಗಿ ಹೋಗಿವೆ. ಕನ್ನಡದಲ್ಲಂತೂ ಶೇ. 10-20ರಷ್ಟು ಶಬ್ದಗಳು ಸಂಸ್ಕೃತದ್ದೇ ಆಗಿವೆ. ಈ ಶಬ್ದಗಳನ್ನು ಕನ್ನಡದಿಂದ ಬೇರ್ಪಡಿಸಿದರೆ ಲಾಭಕ್ಕಿಂತ ಹಾನಿಯೇ ಜಾಸ್ತಿಯಾಗಬಹುದೇನೋ. ಸಂಸ್ಕೃತ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಹಿಂದಿಯ ಶಬ್ದಗಳೂ ನವ್ಯಕನ್ನಡದಲ್ಲಿ ಬೇರ್ಪಡಿಸಲಾಗದಷ್ಟು ಅಂಟಿ ಕೊಂಡಿವೆ. ಈ ಇಂಗ್ಲಿಷ್ ಮತ್ತು ಹಿಂದಿ ಭಾಷಾ ಶಬ್ದಗಳು ಹಳೆಗನ್ನಡದಲ್ಲಿ ಕಾಣಲು ಸಿಗುವುದಿಲ್ಲ. ಹೊಸಗನ್ನಡದ ಮೇಲೆ ಬ್ರಿಟಿಷರ ಪ್ರಭಾವದಿಂದಾಗಿ ಇಂಗ್ಲಿಷಿನ ಅನೇಕ ಶಬ್ದಗಳು ಸೇರ್ಪಡೆಯಾಗಿ ನಾವು ಅವುಗಳನ್ನು ಒಪ್ಪಿಕೊಂಡು ಉಪಯೋಗಿಸುತ್ತಿದ್ದೇವೆ.
ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ
ಹಾಗಾದರೆ ಕನ್ನಡವು ದೋಷಪೂರಿತ ಭಾಷೆಯೇ?, ಅದರ ದೋಷ ನಿವಾರಣೆ ಮಾಡಬೇಕೇ? ಅದಕ್ಕಾಗಿ ಅದರಲ್ಲಿರುವ ಸಂಸ್ಕೃತ, ಇಂಗ್ಲಿಷ್, ಹಿಂದಿ ಶಬ್ದಗಳನ್ನು ತೆಗೆದು ಅಲ್ಲಿಗೆ ನಾವೇ ಹೊಸದಾಗಿ ಸೃಷ್ಟಿಸಿರುವ ಶಬ್ದಗಳನ್ನು ಕಸಿ ಕಟ್ಟಬೇಕೇ? ಹೀಗೆ ಮಾಡಿದರೆ ಏನಾದೀತು?
ಡಾಕ್ಟರ್, ಎಂಜಿನಿಯರ್, ಸೈಕಲ್, ಕೆಮರಾ, ಮೊಬೈಲ್ ಫೋನ್, ಬಸ್ ಇತ್ಯಾದಿ ಇಂಗ್ಲಿಷ್ ಶಬ್ದಗಳೂ ಸೂರ್ಯೋದಯ, ಸೋಮವಾರ, ಪಕ್ಷಾಂತರ, ತಂತ್ರಜ್ಞಾನ ಇತ್ಯಾದಿ ಸಂಸ್ಕೃತ ಶಬ್ದಗಳಿಂದ ಕನ್ನಡಕ್ಕೆ ಯಾವ ತೊಂದರೆಯೂ ಇಲ್ಲ. ಚಹಾದೊಳಗಿನ ಸಕ್ಕರೆ, ಹಾಲು, ನೀರುಗಳನ್ನೂ ಹೇಗೆ ಬೇರ್ಪಡಿಸಲಾಗದೋ ಅದೇ ರೀತಿ ಇವುಗಳನ್ನು ಸುಲಭವಾಗಿ ಕನ್ನಡದಿಂದ ಬೇರ್ಪಡಿಸಲಾಗದು. ಇಂತಹ ಹಲವು ಶಬ್ದಗಳು ಕನ್ನಡದಲ್ಲಿ ರಕ್ತಗತವಾಗಿವೆ ಮತ್ತು ಅವುಗಳು ಹಾಗೆಯೇ ಇದ್ದರೇ ಚೆನ್ನ ಹಾಗೂ ರಾಜ್ಯದ ಅನಕ್ಷರಸ್ಥರೂ ಕೂಡ ಈ ಶಬ್ದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ. ಕೇವಲ ಶುದ್ಧೀಕರಣದ ಹೆಸರಿನಲ್ಲಿ ಯಾರೂ ಕೇಳಿರದ ಶಬ್ದಗಳನ್ನು ತುರುಕತೊಡಗಿದರೆ ಅದೊಂದು ಹೊಸ ಭಾಷೆಯಾದೀತು. ಈಗ ಜನಸಾಮಾನ್ಯರು ಮಾತನಾಡುವ, ಬರೆಯುವ ಕನ್ನಡವು ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಹದವಾದ ಮಿಶ್ರಣವಾಗಿದ್ದು ನೂರಕ್ಕೆ ತೊಂಬತ್ತೈದು ಜನ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಬೇಕಾದರೆ ಕೇವಲ ಶೇ. 5 ಜನರಿಗಾಗಿ ಈ ಹೊಸ ಶಬ್ದಗಳ ಶಬ್ದಕೋಶದ ರಚನೆಯಾಗಲಿ. ಆದರೆ ಹೆಚ್ಚಿನ ಕನ್ನಡಿಗರು ಆ ಹೊಸ ಶಬ್ದಗಳನ್ನು ಒಪ್ಪಿ, ಕಲಿತು ಬಳಸಲು ಒಪ್ಪಲಾರರು. ಅದೊಂದು ತರಹದ ಹೊಸಕನ್ನಡದ ಹೇರಿಕೆಯಾದೀತು.
ಭಾಷೆ ಎನ್ನುವುದು ಒಂದು ಸಂವಹನ ಮಾಧ್ಯಮ ವಷ್ಟೇ. ನಮ್ಮ ಭಾವನೆ, ಅಭಿಪ್ರಾಯ, ಸಲಹೆ, ತರ್ಕಗ ಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ವ್ಯಕ್ತಪಡಿ ಸುವುದಕ್ಕೋ ಇತರರು ಹೇಳುತ್ತಿರುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೋ ಇರುವ ಮಾಧ್ಯಮ. ಇದು ಎಷ್ಟು ಸುಲಭವಾಗಿರುತ್ತದೋ ಅಷ್ಟು ಪರಿಣಾಮಕಾರಿ ಯಾಗಿರುತ್ತದೆ. ಹೆಚ್ಚು ಹೆಚ್ಚು ಜನ ಅದನ್ನು ಕಲಿತು ಮಾತ ನಾಡುತ್ತಾರೆ. ಆದುದರಿಂದ ಭಾಷೆಯನ್ನು ಸರಳೀಕರಿಸಿ, ಜನಪ್ರಿಯ, ಲೋಕಪ್ರಿಯಗೊಳಿಸುವತ್ತ ಪ್ರಯತ್ನ ಅಗತ್ಯ. ಈಗ ಚಲಾವಣೆಯಲ್ಲಿದ್ದು ಜನರು ಆಡುತ್ತಿರುವ ಕನ್ನಡವು ಸಿಹಿಯಾಗಿದ್ದು ಸುಲಭವಾಗಿ ಜೀರ್ಣವಾಗುವಂಥ ಕಬ್ಬಿನ ಹಾಲಿನಂತಿದೆ. ಇದನ್ನು ಕಠಿನಗೊಳಿಸಿ ಕಬ್ಬಿಣದ ಕಡಲೆಯಾಗಿಸುವ ಆವಶ್ಯಕತೆ ಇದೆಯೇ?
– ಡಾ| ಸತೀಶ ನಾಯಕ್, ಅಲಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.