ನಮಗೆ ಪಾಕಿಸ್ಥಾನಿ ಸಿನೆಮಾ ನೋಡಲಾಗುತ್ತಿಲ್ಲ, ಬಾಲಿವುಡ್ ಬೇಕು!
Team Udayavani, Jan 22, 2020, 6:11 AM IST
ಕರಾಚಿಯಲ್ಲಿ ಭಾರತದ "ಚೆನ್ನೈ ಎಕ್ಸ್‌ಪ್ರಸ್' ಮತ್ತು ಪಾಕಿಸ್ಥಾನದ "ಆಫ್ರೀದಿ'
ಖುದ್ದು ಪಾಕಿಸ್ತಾನಿ ಸೇನೆಯ ಪಿಆರ್ ವಿಭಾಗವೇ ನಿರ್ಮಾಣ ಮಾಡಿದ “”ಕಾಫ್ ಕಂಗನಾ”ದಂಥ ಅಬ್ಬರದ ದೇಶಭಕ್ತಿಯ ಸಿನೆಮಾವನ್ನೂ ಕೂಡ ಪಾಕಿಸ್ತಾನಿ ಪ್ರೇಕ್ಷಕರು ನಿರಾಕರಿಸಿಬಿಟ್ಟರು. ಆನ್‌ಲೈನ್‌ನಲ್ಲಿ ಮತ್ತು ಡಿವಿಡಿಗಳಲ್ಲಿ ಭಾರತೀಯ ಸಿನೆಮಾಗಳನ್ನು ನೋಡುವ ಪಾಕಿಸ್ತಾನಿ ಪ್ರೇಕ್ಷಕರು, ನಮ್ಮಲ್ಲೇ ತಯಾರಾಗುವ ಸಿನೆಮಾಗಳನ್ನು ನೋಡುವುದಿಲ್ಲ.
ನನ್ನ ದೇಶ ಪಾಕಿಸ್ಥಾನದಲ್ಲಿ ಎರಡು ಸಂಗತಿಗಳು ಮಾತ್ರ ಸದಾ ಚರ್ಚೆಯಲ್ಲಿ ಇರುತ್ತವೆ- ಒಂದು ಕಾಶ್ಮೀರದ ಆಜಾದಿ ಮತ್ತು ಎರಡನೆಯದು ಸ್ಥಳೀಯ ಸಿನೆಮಾದ ಕುಸಿತ-ಏರಿಳಿತ. ಕಾಶ್ಮೀರದ ವಿಚಾರದಲ್ಲಿ ನಾವು ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಎಲ್ಲಾ ಬಾಗಿಲನ್ನೂ ಬಡಿಯುತ್ತಿದ್ದೇವೆ. ಇನ್ನು ಸಿನೆಮಾ ವಿಚಾರಕ್ಕೆ ಬಂದರೆ, ಪಾಕಿಸ್ಥಾನದ ಸಿನೆಮಾ ಇಂಡಸ್ಟ್ರಿಗೆ ಭಾರತೀಯ ಸಿನೆಮಾಗಳೇ ಇಂಧನವಾಗಿದ್ದು, ಯಾವಾಗೆಲ್ಲ ನಮ್ಮಲ್ಲಿ ಭಾರತೀಯ ಸಿನೆಮಾಗಳನ್ನು ನಿಷೇಧಿಸಲಾಗುತ್ತದೋ, ಆಗೆಲ್ಲ ಆರ್ಥಿಕ ವಹಿವಾಟಿಗೆ ಪೆಟ್ಟು ಬೀಳುತ್ತದೆ.
ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಯಂತೂ, “”ಪಾಕಿಸ್ಥಾನಿ ಫಿಲಂಗಳು ಮತ್ತು ಧಾರಾವಾಹಿಗಳ ಮೇಲೆ ಹಣ ಹೂಡಿಕೆ ಮಾಡಿ” ಎಂದು ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ನಂಥ ಅಂತರ್ಜಾಲ ಕಂಪನಿಗಳಿಗೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಫವಾದ್ ಚೌಧರಿ ಮೊದಲು ಕಷ್ಟದಲ್ಲಿರುವ ಸ್ಥಳೀಯ ಇಂಡಸ್ಟ್ರಿಗೆ ಸಹಾಯ ಮಾಡಲಿ.
ಭಾರತ ಮತ್ತು ಪಾಕಿಸ್ಥಾನದ ನಡುವಿನ ಪ್ರಕ್ಷುಬ್ಧ ರಾಜಕೀಯ ಸಂಬಂಧಗಳಲ್ಲಿ, ಮೊದಲು ಪೆಟ್ಟು ತಿನ್ನುವುದೇ ಸಿನೆಮಾಗಳು. ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತವು ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿತು. ಆಗ ಪಾಕಿಸ್ತಾನಿ ಸರಕಾರವು ಭಾರತೀಯ ಸಿನೆಮಾಗಳ ಮೇಲೆ ನಿಷೇಧ ಹೇರಿಬಿಟ್ಟಿತು. ಬಾಲಿವುಡ್ ಸಿನೆಮಾಗಳನ್ನೇ ಜೀವನಾಧಾರವಾಗಿಸಿಕೊಂಡಿರುವ ಪಾಕಿಸ್ತಾನಿ ಸಿನೆಮಾ ಥಿಯೇಟರ್ ಓನರ್‌ಗಳಿಗೆ ಈ ನಿಷೇಧದಿಂದಾಗಿ ಯಾವ ರೀತಿ ಪರಿಣಾಮ ಉಂಟಾಗಲಿದೆ ಎನ್ನುವುದರ ಬಗ್ಗೆ ಇಮ್ರಾನ್ ಸರಕಾರ ಯೋಚಿಸಲೇ ಇಲ್ಲ. ಹೌದುಬಿಡಿ, ಇವರಿಗೆಲ್ಲ ಎಷ್ಟಿದ್ದರೂ ಜನರ ಜೀವನೋಪಾಯ ಮತ್ತು ವ್ಯಾಪಾರ ಲಾಭಕ್ಕಿಂತ ದೇಶಭಕ್ತಿ ದೊಡ್ಡದಲ್ಲವೇ!
ಸ್ಥಳೀಯ ಸಿನೆಮಾಗಳಿಗೆ ಇಲ್ಲ ಬೇಡಿಕೆ
2019ರಲ್ಲಿ ಪಾಕಿಸ್ಥಾನದಾದ್ಯಂತ 150 ಸಿನೆಮಾ ಹಾಲ್‌ಗಳಲ್ಲಿ 22 ಉರ್ದು ಸಿನೆಮಾಗಳು ಪ್ರದರ್ಶನ ಕಂಡು, 150 ಕೋಟಿ ರೂಪಾಯಿ ವಹಿವಾಟು ನಡೆಸಿದವು. ಆದರೆ, ದೊಡ್ಡ ನಗರಗಳಲ್ಲಿನ ಸಿನೆಮಾ ಥಿಯೇಟರ್ ಓನರ್‌ಗಳಿಗೆ ಮಾತ್ರ ಇದರಿಂದ ಹೆಚ್ಚೇನೂ ಲಾಭವಾಗಲಿಲ್ಲ. ಮಹಿರಾ ಖಾನ್‌ರ “ಸೂಪರ್ ಸ್ಟಾರ್’, ಮೀರಾರ “ಬಾಜಿ’ ಮತ್ತು ಮಿಕಾಲ್ ಜುಲ್ಫಿàಕರ್‌ರ “ಶೇರ್ದಿಲ್’ ಸಿನೆಮಾಗಳು ಪ್ರಶಂಸೆ ಗಳಿಸಿದ್ದಷ್ಟೇ ಅಲ್ಲದೇ, ಬಾಕ್ಸ್ ಆಫೀಸ್‌ನಲ್ಲೂ ಆರಂಭದಲ್ಲಿ ಚೆನ್ನಾಗಿ ದುಡಿದವು. ಆದರೆ, ಸಿನೆಮಾ ಥಿಯೇಟರ್‌ಗಳಲ್ಲಿ ಹೆಚ್ಚು ದಿನ ಉಳಿಯಲಿಲ್ಲ! ಈಗಂತೂ ಯಾವುದಾದರೂ ಹೊಸ ಸಿನೆಮಾ ಬಿಡುಗಡೆಯಾದರೆ ಸಾಕು, ಥಿಯೇಟರ್‌ಗಳ ಮಾಲೀಕರು, ಜನ ಬರಲಿ ಎಂಬ ಕಾರಣಕ್ಕಾಗಿ ಟಿಕೆಟ್ ದರದಲ್ಲಿ 50 ಪ್ರತಿಶತ ರಿಯಾಯಿತಿ ಕೊಡುತ್ತಾರೆ. ಆದರೆ ಇಷ್ಟು ಮಾಡಿದರೂ ಅವರಿಗೆ ಲಾಭವಾಗುತ್ತಿಲ್ಲ. ಏಕೆಂದರೆ ಚಿಕ್ಕ ಥಿಯೇಟರ್‌ಗಳೆಲ್ಲ, ಆಧುನಿಕ ಮಲ್ಟಿಪ್ಲೆಕ್ಸ್‌ಗಳಾಗಿ ಬದಲಾಗಿವೆ. ಈ ಮಲ್ಟಿಪ್ಲೆಕ್ಸ್‌ಗಳನ್ನು ನಡೆಸುವ ಖರ್ಚು ಅಧಿಕ. ಹೀಗಾಗಿ ಏನೇ ಮಾಡಿದರೂ ನಷ್ಟ ಎದುರಿಸುವಂತಾಗಿದೆ.
ಪಾಕಿಸ್ಥಾನದಲ್ಲಿ ಒಳ್ಳೆಯ ಕ್ವಾಲಿಟಿ ಸಿನೆಮಾಗಳ ಕೊರತೆಯೂ ಇರುವುದರಿಂದ ಪರಿಸ್ಥಿತಿಯಂತೂ ಸುಧಾರಿಸುತ್ತಿಲ್ಲ. ಆನ್‌ಲೈನ್‌ನಲ್ಲಿ ಮತ್ತು ಪೈರೇಟ್ ಮಾಡಿದ ಡಿವಿಡಿಗಳಲ್ಲಿ ಭಾರತೀಯ ಸಿನೆಮಾಗಳನ್ನು ನೋಡುವ ಪಾಕಿಸ್ತಾನಿ ಪ್ರೇಕ್ಷಕರಂತೂ, ಪಾಕಿಸ್ತಾನದಲ್ಲೇ ತಯಾರಾದ ಸಿನೆಮಾಗಳನ್ನು ಮೊದಲಿನಿಂದಲೂ ನಿರಾಕರಿಸುತ್ತಲೇ ಇದ್ದಾರೆ. ಖುದ್ದು ಪಾಕಿಸ್ತಾನಿ ಸೇನೆಯು ನಿರ್ಮಾಣ ಮಾಡಿದ “”ಕಾಫ್ ಕಂಗನಾ”ದಂಥ ಅಬ್ಬರದ ದೇಶಭಕ್ತಿಯ ಸಿನೆಮಾವನ್ನೂ ಕೂಡ ಪಾಕಿಸ್ತಾನಿ ಪ್ರೇಕ್ಷಕರು ನಿರಾಕರಿಸಿಬಿಟ್ಟರು.
ಬಾಲಿವುಡ್ ಸಿನೆಮಾಗಳ ನಿಷೇಧದಿಂದಾಗಿ ಪಾಕಿಸ್ಥಾನಿ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆ ಕಡಿಮೆ ಆಗಿ ಸ್ಥಳೀಯ ನಿರ್ಮಾಪಕರು ಬೆಳೆಯುತ್ತಾರೆ ಎಂದಿದ್ದರೆ ಬೇರೆ ಮಾತು. ಆದರೆ ಹಾಗೇನೂಆಗುತ್ತಿಲ್ಲ. ಭಾರತೀಯ ಸಿನೆಮಾ ನಿಷೇಧದಿಂದಾಗಿ, ವಾರಾಂತ್ಯಗಳಲ್ಲಂತೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಈ ಲುಕ್ಸಾನನ್ನು ಭರಿಸಿಕೊಳ್ಳಲು ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ದರವನ್ನು ಹೆಚ್ಚಿಸುತ್ತಿವೆ. ಪಾಕಿಸ್ಥಾನದಲ್ಲಿ ಹಾಲಿವುಡ್ ಸಿನೆಮಾಗಳ ಪ್ರೇಕ್ಷಕರೂ ವಿರಳ. ಪರಿಸ್ಥಿತಿ ಈ ರೀತಿ ಇರುವುದರಿಂದ, ಇಮ್ರಾನ್ ಖಾನ್ ಸರಕಾರ ಒಂದೋ ಭಾರತೀಯ ಸಿನೆಮಾಗಳ ಮೇಲಿನ ನಿಷೇಧವನ್ನು ಹಿಂಪಡೆಯಬೇಕು ಇಲ್ಲವೇ, ಪಾಕಿಸ್ತಾನಿ ಸಿನೆಮಾ ಇಂಡೆಸ್ಟ್ರಿಗೆ ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿ ನೀಡಿ ಸಹಾಯ ಮಾಡಬೇಕು ಎನ್ನುತ್ತಾರೆ ಸಿನೆಮಾ ವಿತರಕರು. ಆದರೆ, ಪಾಕಿಸ್ಥಾನದಲ್ಲಿನ ಸದ್ಯದ ಹಣದುಬ್ಬರವನ್ನು ಪರಿಗಣಿಸಿದರೆ, ಸರ್ಕಾರದಿಂದ ಸಹಾಯವನ್ನಂತೂ ನಿರೀಕ್ಷಿಸಲಾಗದು(ಪಾಕಿಸ್ತಾನಿ ಫಿಲಂ ಇಂಡಸ್ಟ್ರಿಗೆ).
ಇತ್ತ ಫವಾದ್ ಚೌಧರಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಕಂಪನಿಗಳು ಪಾಕಿಸ್ಥಾನದ ಸಿನೆಮಾ, ಧಾರಾವಾಹಿಗಳ ಮೇಲೆ ಹೂಡಿಕೆ ಮಾಡಿ ಎಂದು ಹೇಳುತ್ತಿದ್ದಾರೆ. ಮೊದಲೇ ಪಾಕಿಸ್ತಾನಿ ಸಿನೆಮಾಗಳಿಗೆ ಥಿಯೇಟರ್‌ಗಳನ್ನು ತುಂಬಿಸಲು ಆಗುತ್ತಿಲ್ಲ. ಹೀಗಿರುವಾಗ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನಂಥ ಆನ್‌ಲೈನ್ ಸಂಸ್ಥೆಗಳು ಪಾಕಿಸ್ತಾನಕ್ಕಾಗಿ ಮೇಲೆ ಹಣ ಹೂಡಿಕೆ ಮಾಡಬೇಕಂತೆ. ಫವಾದ್ ನೆಟ್‌ಫ್ಲಿಕ್ಸ್‌ನಲ್ಲಿ ಯಾವ ಧಾರಾವಾಹಿ ನೋಡಿ ಈ ಐಡಿಯಾ ಪಡೆದರೋ ತಿಳಿಯದು.
ಈಗಷ್ಟೇ ಅಲ್ಲ ನಿಷೇಧ
ಪಾಕಿಸ್ಥಾನದಲ್ಲಿ ಬಾಲಿವುಡ್ ಸಿನೆಮಾಗಳ ಮೇಲಿನ ನಿಷೇಧಕ್ಕೆ ದೀರ್ಘ ಇತಿಹಾಸವಿದೆ. 1965ರಲ್ಲಿ, ಅಂದರೆ ಎರಡೂ ರಾಷ್ಟ್ರಗಳ ನಡುವೆ ಎರಡನೇ ಯುದ್ಧದ ನಂತರ ಮಿಲಿಟರಿ ಆಡಳಿತಾಧಿಕಾರಿ ಜನರಲ್ ಆಯುಬ್ ಖಾನ್, ಭಾರತೀಯ ಸಿನೆಮಾಗಳ ಮೇಲೆ ನಿಷೇಧ ಹೇರಿದರು. ಈ ನಿಷೇಧ 40 ವರ್ಷಕ್ಕೂ ಅಧಿಕ ಸಮಯ ಜಾರಿಯಲ್ಲಿತ್ತು. ಕೊನೆಗೆ ಮತ್ತೂಬ್ಬ ಮಿಲಿಟರಿ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಬರುವವರೆಗೂ ನಿಷೇಧ ಜಾರಿಯಲ್ಲಿತ್ತು. 2007ರಲ್ಲಿ ಮುಷರ್ರಫ್, ಭಾರತೀಯ ಸಿನೆಮಾಗಳ ಮೇಲಿನ ನಿಷೇಧವನ್ನು ಹಿಂಪಡೆದರು. ಆ 40 ವರ್ಷಗಳಲ್ಲಿ ಪಾಕಿಸ್ಥಾನದ ಸಿನೆಮಾ ಇಂಡೆಸ್ಟ್ರಿ ನೆಲಕಚ್ಚಿಬಿಟ್ಟಿತ್ತು. ಒಟ್ಟಲ್ಲಿ ಪಾಕಿಸ್ತಾನಿಯರಿಗೂ ಸಿನೆಮಾ ಥಿಯೇಟರ್‌ಗೆ ಹೋಗಬೇಕು ಎನ್ನುವುದು ಒಂದು ಕೌಟುಂಬಿಕ ಅನುಭವವಾಗಿ ಉಳಿದಿರಲೇ ಇಲ್ಲ. ಇನ್ನೊಂದೆಡೆ ತೀರಾ ಸಾಧಾರಣ ಮತ್ತು ಕೀಳು ಅಭಿರುಚಿಯ ಪಂಜಾಬಿ ಭಾಷೆಯ ಸಿನೆಮಾಗಳು ಬರುತ್ತಿದ್ದವಾದರೂ ಅವುಗಳನ್ನು ನೋಡುವವರು ಇರಲಿಲ್ಲ. ಯಾವಾಗ 2007ರಲ್ಲಿ ಭಾರತೀಯ ಸಿನೆಮಾಗಳು ಪಾಕಿಸ್ಥಾನದಲ್ಲಿ ಬರಲಾರಂಭಿಸಿದವೋ, ಆಗ ವರ್ಷಗಳಿಂದ ಬೀಗ ಜಡಿದಿದ್ದ ಲಾಹೋರ್‌ನ ಅನೇಕ ಸಿನೆಮಾ ಥಿಯೇಟರ್‌ಗಳು ಮರುಜೀವಪಡೆದುಬಿಟ್ಟವು. ಅವೆಲ್ಲವೂ ಮಲ್ಟಿಪ್ಲೆಕ್ಸ್‌ಗಳಾಗಿ ಬದಲಾದವು ಮತ್ತು ವ್ಯಾಪಾರವೂ ಬೆಳೆಯಲಾರಂಭಿಸಿತು. ಇದಾದ ಸುಮಾರು ಒಂದು ದಶಕದ ನಂತರ, ಅಂದರೆ, 2016ರಲ್ಲಿ ಮತ್ತೆ ಭಾರತೀಯ ಸಿನೆಮಾಗಳಿಗೆ ನಿಷೇಧ ಹೇರಲಾಯಿತು! 2016ರಲ್ಲಿ ಉರಿ ದಾಳಿಯ ನಂತರ “ಇಂಡಿಯನ್ ಮೋಷನ್ ಪಿಕ್ಚರ್ಸ್’ ನಿರ್ಮಾಪಕರು, ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಸಿನೆಮಾಗಳಲ್ಲಿ ನಟಿಸುವುದರಿಂದ ನಿಷೇಧಿಸಿಬಿಟ್ಟರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಪಾಕಿಸ್ಥಾನದ ಸಿನೆಮಾ ಥಿಯೇಟರ್ ಓನರ್‌ಗಳೂ ಕೂಡ, ಪಾಕಿಸ್ತಾನಿ ಸೇನೆಗೆ ಬೆಂಬಲ ತೋರಿಸುವುದಕ್ಕಾಗಿ ಭಾರತೀಯ ಸಿನೆಮಾಗಳ
ಪ್ರದರ್ಶನವನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸಿಬಿಟ್ಟರು. ಆದರೆ, ಮೂರು ತಿಂಗಳ ನಂತರ ನಿಷೇಧ ಹಿಂಪಡೆದು ಮತ್ತೆ ಭಾರತೀಯ ಸಿನೆಮಾಗಳ ಪ್ರದರ್ಶನ ಆರಂಭಿಸಿದರು.
ಸಂಮಜೋತಾ ಮಾತೇ ಕೇಳಿಸುತ್ತಿಲ್ಲ!
2019ರ ಆಗಸ್ಟ್‌ನಲ್ಲಿ. ಅಂದರೆ, ಭಾರತವು ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಹಿಂಪಡೆದ ಮೇಲೆ ಮತ್ತೂಮ್ಮೆ ಭಾರತೀಯ ಸಿನೆಮಾಗಳನ್ನು ನಿಷೇಧಿಸಲಾಗಿದೆ. ಈ ಹೊಸ ನಿಷೇಧವನ್ನು
ಹಿಂಪಡೆಯುವ ವಿಚಾರದಲ್ಲಿ ಇಮ್ರಾನ್ ಖಾನ್ ಸರ್ಕಾರವಂತೂ ತಲೆಕೆಡಿಸಿಕೊಂಡಿಲ್ಲ. “”ಈ ನಿರ್ಧಾರವು ಬ್ಯುಸಿನೆಸ್‌ಗೆ ಹಾನಿ ಮಾಡುತ್ತಿರಬಹುದು, ಆದರೂ ಇದು ರಾಷ್ಟ್ರದ ವ್ಯಕ್ತಿತ್ವದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ” ಎಂದೇ ನಮಗೆ ಹೇಳಲಾಗುತ್ತಿದೆ. ಸಿನೆಮಾಗಳನ್ನು ಮತ್ತು ಇತರೆ ರಾಷ್ಟ್ರಗಳ ಕಲಾವಿದರನ್ನು ನಿಷೇಧಿಸುವ ಕೆಲಸಗಳ ನಡುವೆಯೇ, ಮತ್ತೂಂದು ಸಂಗತಿಯ ಸೇರ್ಪಡೆಯೂ ಆಗಿದೆ. ಈಗ ಭಾರತವು ಸಮೊjàತಾ ಎಕ್ಸ್‌ಪ್ರಸ್ ರೈಲಿನ ಬೋಗಿಗಳನ್ನು ಹಿಂದಿರುಗಿಸುವಂತೆ ಪಾಕಿಸ್ಥಾನಕ್ಕೆ ಕೇಳುತ್ತಿದೆ. ಈ ಬೋಗಿಗಳು ಕಳೆದ ಐದು ತಿಂಗಳಿಂದ ವಾಘಾದಲ್ಲಿ ನಿಂತಿವೆ.
ಒಟ್ಟಲ್ಲಿ ಎಲ್ಲಿಯವರೆಗೂ ಸಿನೆಮಾ ನಿಷೇಧದ ವಿಚಾರದಲ್ಲಿ ಸಂಮಜೋತಾ(ರಾಜಿ-ಒಪ್ಪಂದ) ಆಗುವುದಿಲ್ಲವೋ, ಅಲ್ಲಿಯವರೆಗೂ ಪಾಕಿಸ್ತಾನಿಯರಿಗೆ “ಧಾಯ್ ಛಾಲ್’ನಂಥ ಪಾಕಿಸ್ತಾನಿ ಸಿನೆಮಾಗಳೇ ಗತಿ. ಈ ಸಿನೆಮಾದಲ್ಲಿ ಕುಲಭೂಷಣ್ ಜಾಧವ್ ಬಲೋಚಿಸ್ತಾನದಲ್ಲಿ ಓಡಾಡುತ್ತಾ, ಹೇಗೆ ಚೀನಾ-ಪಾಕಿಸ್ತಾನ್ ಆರ್ಥಿಕ್ ಕಾರಿಡಾರ್‌ಗೆ ಅಡ್ಡಿಮಾಡಲು ಪ್ರಯತ್ನಿಸುತ್ತಾನೆ ಎಂಬ ಕಥೆಯಿದೆ. ಏನು? ನಿಮಗೆ ಈಗಲೇ ಕಥೆ ಹೇಳಬಾರದಾ? ಹಾಗಿದ್ದರೆ ಕಥೆಯನ್ನು ತಿಳಿದುಕೊಳ್ಳಲು ಸಿನೆಮಾ ರಿಲೀಸ್ ಆಗುವವರೆಗೂ ನೀವು ಕಾಯಬೇಕಾಗುತ್ತದೆ…ಅಥವಾ ಕಾಯಬೇಕಿಲ್ಲ!
(ಕೃಪೆ-ದಿ ಪ್ರಿಂಟ್)
– ನಾಯ್ಲಾ ಇನಾಯತ್ ಪಾಕಿಸ್ಥಾನಿ ಪತ್ರಕರ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.