ಪ್ರಕಾಶಿಸಲು ಪ್ರಚೋದನೆಯ ಹಂಗೇಕೆ?
Team Udayavani, May 4, 2018, 12:30 AM IST
ಜಾತಿಗಳನ್ನು ವಿಭಜಿಸುವ ಮೂಲಕ ಧರ್ಮವೊಂದರ ಜೀವಸತ್ವವನ್ನು ಕ್ಷೀಣಗೊಳಿಸುತ್ತಿರುವ ಇಂದಿನ ಶಕ್ತಿ ರಾಜಕೀಯ ವ್ಯವಸ್ಥೆಯ ಜಾತ್ಯತೀತ ನಿಲುವುಗಳ ಬಗ್ಗೆ ಕಣ್ಣು ಹಾಯಿಸಿ ನೋಡಬೇಕಾದ ಪ್ರಮುಖ ಅವಶ್ಯಕತೆಯೂ ಇದೆ. ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳದೇ ಪೂರ್ವಗ್ರಹಗಳೊಂದಿಗೆ ವಿರೋಧಿಸುವುದೇ ನಮ್ಮ ಧ್ಯೇಯ ಎಂದು ಹೊರಟಾಗ ಕಾಲ ನಮ್ಮನ್ನು ಕಸ ಮಾಡುತ್ತದೆಯಷ್ಟೆ.
ಘಜ್ನಿ ಮೊಹಮ್ಮದ್ 11ನೇ ಶತಮಾನದಲ್ಲಿ ನಮ್ಮ ಭವ-ಭಾವಗಳನ್ನು ಆಕ್ರಮಣ ಮಾಡಿದಾಗ ನಮ್ಮಲ್ಲಿ ಯಾರೂ ಕ್ರಾಂತಿಕಾರಿಗಳು ಹುಟ್ಟಿ ಅವನನ್ನು ವಿರೋಧಿಸಿ ನಮ್ಮ ತನವನ್ನು ಉಳಿಸುವ ಧೈರ್ಯ ಮಾಡಲೇ ಇಲ್ಲ. ನಮ್ಮ ತಲೆಗಳು ಕೆಡವಿಬಿದ್ದಾಗ ಉಳಿದ ಕೊರಳುಗಳ ಪಸೆಯ ಸಾಂದ್ರತೆಯನ್ನು ಅಳೆಯುತ್ತಾ ನಮಗಾಗಿ ನೋವ ನುಂಗಲು ಯಾವ ವೀರರೂ ಅಂದು ಜನಿಸಲಿಲ್ಲ. 17 ಬಾರಿ ಘಜ್ನಿ ಮೊಹಮ್ಮದ್ ಈ ನೆಲದ ಸತ್ವವನ್ನು ನಲುಗಿಸಿ ಹೋದ. ನಮ್ಮ ಬದುಕುಗಳ ಬಣ್ಣವನ್ನೇ ಬದಲಾಯಿಸಿಹೋದ. ನಮ್ಮಂತರಾಳಕ್ಕೆ ನೋವಾಯಿತು. ನಡುಗಿದರೂ ನೆಪ ಹೇಳಿಕೊಂಡು ಮೌನವಾದೆವು. ಮೊಹಮ್ಮದನ ಭಾರತ ದಂಡಯಾತ್ರೆಯ ಬಹುಪಾಲು ಸಂದರ್ಭಗಳಲ್ಲಿ ಅವನ ಜೊತೆಯಾಗಿ ಬಂದಿದ್ದ ಆಲೆºರೂನಿ ಎಂಬ ವಿದ್ವಾಂಸ ಘಜ್ನಿ ಮೊಹಮ್ಮದನ ದಾಳಿಗೆ ಹಿಂದೂಗಳು ನಾಲ್ಕೂ ದಿಕ್ಕಿಗೆ ಚದುರಿಹೋದ ಧೂಳಿನ ಕಣಗಳಾದರು. ಆ ಭಾವನಾತ್ಮಕ ದಾಳಿಗಳೇ ದಿಕ್ಕಾಪಾಲಾದ ಹಿಂದೂಗಳ ಮನಸ್ಸುಗಳಲ್ಲಿ ಮುಸಲ್ಮಾನರೆಡೆಗೆ ನೆಲೆನಿಂತು ಹೋದ ವಿಮುಖತೆಗೆ ಕಾರಣವಾಯಿತು ಎಂದು ದಾಖಲಿಸಿರುವುದು ಇಂದೂ ವಿದಿತ. ಅವನ ಬರ್ಬರತೆ ನಮ್ಮ ಭಾವನೆಗಳನ್ನೇ ಕಸಿದುಕೊಂಡಿತು. ನಿರಂತರವಾದ ನಿಗ್ರಹ ನಮ್ಮನ್ನು ನರಳಿಸಿತು. ಮುಂದೆಂದೋ ಔರಂಗಜೇಬ ಬಂದು ಪುನಃ ನಮ್ಮ ನಂಬಿಕೆಗಳ ಮೇಲೆ ಭಯದ ಕೊಡಲಿಯ ಪ್ರಹಾರ ಮಾಡಿದ. ನಮ್ಮ ದೇವಸ್ಥಾನಗಳನ್ನು ಛಿದ್ರಗೊಳಿಸುವ ಮೂಲಕ ನಮ್ಮ ಅಂತಃಸತ್ವವನ್ನು ಮತ್ತೆ ಉಡುಗಿಸಿದ. ಹರಕಲು ಬಟ್ಟೆ ಹೊದ್ದ ನಾವು ಅವನ ಸೈನ್ಯ ಮುನ್ನಡೆಸಲೆಂದು ಅವನಿಗೆ ಜೆಝಿಯಾ ತೆರಿಗೆ ನೀಡಿದೆವು.
ಇನ್ನು ಟಿಪೂ ಸುಲ್ತಾನನ ಖಡ್ಗದ ಗುರುತುಗಳು ಮಲಬಾರಿನ ಅದೆಷ್ಟೋ ದೇವಾಲಯಗಳ ಹೃದಯಹಾಳೆಗಳ ಮೇಲೆ
ಈಗಲೂ ಹುದುಗಿ ಕುಳಿತಿವೆ. ಒಬ್ಬರೇ, ಇಬ್ಬರೇ ನಮ್ಮನ್ನು ನಲುಗಿಸಿದವರು? ಬ್ರಿಟಿಷರು ಬಂದರು. ತಮ್ಮ ಆಳ್ವಿಕೆಯಲ್ಲಿ ಮೊದಲೇ ಬತ್ತಿಹೋಗುತ್ತಿದ್ದ ನಮ್ಮ ಅಳಿದುಳಿದ ಅಂತರ್ಜೀವವನ್ನು ಮತ್ತೆ ಅಲುಗಾಡಿಸಿ ಹಿಂಸಿಸಿದರು. ಯಾರೋ ಯಾವುದೋ ಕಾರಣಕ್ಕೆ ನಡೆಸಿದ ವಿಶ್ವ ಮಹಾಯುದ್ಧದಲ್ಲಿ ಅವರ ಪರವಾಗಿ ಹೋರಾಡ ಬೇಕಾದ ಅನಿವಾರ್ಯತೆಗೆ ನಾವು ಯೋಧರಾಗಿ ಲಕ್ಷಸಂಖ್ಯೆಯಲ್ಲಿ ಹತರಾದೆವು. ನಮ್ಮ ಹತಾಶೆ ಅವರ ಹೃದಯಕ್ಕೆ ತಟ್ಟಿತೆಂಬಂತೆ ನಾವು ಬಯಸಿಯೇ ಇರದ ನಮ್ಮ ಮೇಲಿನ ಅನುಕಂಪದ ನೆಪದಲ್ಲಿ ಕ್ರೆ„ಸ್ತ ಮಿಷನರಿಗಳು ನಮ್ಮನ್ನು ಮತ್ತಷ್ಟು ನಿರ್ಗತಿಕರನ್ನಾಗಿ ಮಾಡಿದವು. ಅವರು ನಮ್ಮ ಓದನ್ನು ಬದಲಿಸಿದರು. ನಮ್ಮ ನಡೆಯನ್ನು ಬದಲಾಯಿಸಿದರು. ಕಡೆಗೆ ಇಂದಿನ ನಮ್ಮ ಸಂವಿಧಾನದ ಸೊಗಸಿಗೂ ಅವರ ಸಂಸ್ಕೃತಿಯ ಸೆರಗು ಜೊತೆಯಾಯಿತು. ನಮ್ಮೊಳಗಿನ ದ್ವಂದ್ವಗಳು ನೂರು ಪಟ್ಟಾದವು. ಆದರೆ ಇವೆಲ್ಲವನ್ನೂ ಅನುಭವಿಸಿದಾಗ ಪ್ರತಿಬಾರಿಯೂ ನಮ್ಮನ್ನು ನಾವು ಅನುಕಂಪಕ್ಕೀ ಡುಮಾಡಿಕೊಂಡೆವು. ಬದುಕಬೇಕಾದ ಅನಿವಾರ್ಯತೆಯ ಭೀತಿ ಯಲ್ಲಿ, ಮನೋಸಹಜವಾದ ಹೊಸ ಜೀವಾಕರ್ಷಣೆಗಳ ನೆಪದಲ್ಲಿ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಅನ್ಯ ಧರ್ಮಗಳನ್ನು ಅಪ್ಪಿಕೊಂಡೆವು.
ಇಷ್ಟಾಗಿ ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ನಾವು ಯಾರನ್ನೋ ದಂಡೆತ್ತಿ ಹೋದ ಉದಾಹರಣೆಗಳೇ ಸಿಕ್ಕಲಿಲ್ಲ. ಧರ್ಮಯುದ್ಧದ ನೆಪದಲ್ಲಿ ಯಾರ ಮೇಲೂ ನಾವು ಜಿಹಾದ್ ಹೇರಲಿಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದಕರನ್ನು ನಾವು ಹುಟ್ಟು ಹಾಕಲಿಲ್ಲ. ಯಾವುದೋ ದೇಶದ ಜನರನ್ನು ನಾವು ಒತ್ತಾಯವಾಗಿ ಆಳಲಿಲ್ಲ. ಯಾರದೋ ಧರ್ಮದ ಶ್ರದ್ಧಾ ಕೇಂದ್ರಗಳನ್ನು ನಾವು ಸುಖಾಸುಮ್ಮನೇ ಹಾಳುಗೆಡವಲಿಲ್ಲ. ಹಿರೋಶಿಮಾ ನಾಗಸಾಕಿಯ ರೀತಿಯಲ್ಲಿ ಮಾನವ ಮಾರಣಹೋಮಗಳನ್ನು ನಾವು ನಡೆಸಲಿಲ್ಲ. ಅನುಭವಿಸಿದೆವು.ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಯತ್ನಿಸಿದೆವು. ನಿಗ್ರಹತೆಯೇ ನಮ್ಮ ನಿಲುವಾಗಿ ಹೋಯಿತು.
ಆಸಕ್ತಿದಾಯಕವಾದ ಸಂಗತಿಯೆಂದರೆ ಶತಮಾನಗಳ ಸತ್ಯಾಗ್ರಹಗಳ ಬಳಿಕ ನಾವು ಪಡೆದುಕೊಂಡ ಸ್ವಾತಂತ್ರ್ಯಕ್ಕೆ ಇಂದಿಗೂ ಸಹನೆಯ ಸಾಂಗತ್ಯವಿದೆ. ಇದರ ಕುರುಹಾಗಿ ನಾವು ಜಾತ್ಯತೀತ ತತ್ವದ ಮೇಲೆ ಒಪ್ಪಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಇಷ್ಟು ದಿನವೂ ಯಶಸ್ವಿಯಾಗಿಯೇ ಇದೆ. ಇಂದೂ ಚುನಾವಣೆಗಳು ನ್ಯಾಯ ಯುತವಾಗಿ ನಡೆಯುತ್ತಿವೆ. ಗೆದ್ದ ಪಕ್ಷಗಳು ಅಧಿಕಾರದ ಗದ್ದುಗೆ ಯನ್ನೇರಿ ಆಡಳಿತ ನಡೆಸಿದರೆ, ಸೋತ ಪಕ್ಷಗಳು ವಿರೋಧ ಪಕ್ಷಗಳಾಗಿ ಆಡಳಿತ ಯಂತ್ರಗಳ ನಿರಂಕುಶ ಪ್ರಭುತ್ವದ ಮೇಲೆ ಅಂಕೆ ಹೇರುತ್ತಾ ವ್ಯವಸ್ಥೆಗೆ ವೈಶಿಷ್ಟ್ಯತೆಯನ್ನು ಕಲ್ಪಿಸಿಕೊಡುತ್ತಿವೆ. ಪರ-ವಿರೋಧದ ಚರ್ಚೆಗಳು ಸಾಮಾನ್ಯವಾಗಿ ನೈಜ ಪ್ರಜಾಸತ್ತೆಯ ಪ್ರೌಢಿಮೆಯನ್ನೂ ಗಳಿಸಿಕೊಳ್ಳುತ್ತಿವೆ. ಸಂವಿಧಾನದ ಆಶಯದಂತೆ ನ್ಯಾಯಾಲಯಗಳೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿವೆ. ನಾಗರಿಕ ಹಕ್ಕುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ. ಮಾಧ್ಯಮಗಳು ತಮಗೆ ಬೇಕೆನಿಸಿದ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಎಷ್ಟೋ ಪ್ರತಿಭಟನೆಗಳಿಗೆ ಸಕಾರಗಳು ಮಣಿದಿದ್ದಿದೆ. ಬಹುಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಯಾರು ಏನು ಮಾತನಾಡಿದರೂ ಯಾರೂ ಯಾರನ್ನೂ ಪ್ರಶ್ನಿಸದೇ ಮಾತಿನ ತೆವಲಿಗೂ ಮಾನ್ಯತೆ ದೊರಕುತ್ತಿದೆ. ವೈವಿಧ್ಯಯುತವಾದ ಸಂಸ್ಕೃತಿಯನ್ನು ಹೊಂದಿರುವ, ಶತಶತಮಾನಗಳ ನಿರಂತರ ಆಕ್ರಮಣಗಳ ನೋವುಗಳನ್ನು ನಿಗ್ರಹಿಸಿಕೊಂಡು ನಲುಗಿದ ದೇಶವೊಂದು 70 ವರ್ಷಗಳಲ್ಲಿ ಇಂತಹ ಸಮಗ್ರ ಭಾವದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದುವ ನಿಟ್ಟಿನಲ್ಲಿ ಕ್ರೋಢೀಕೃತ ಗೊಳ್ಳುತ್ತಿರುವುದು ಒಂದು ದೇಶದ ಜೀವಪ್ರಜ್ಞೆಯ ಯಶಸ್ಸಲ್ಲವೇ?
ಸಂಚಲನವನ್ನು ಹುಟ್ಟುಹಾಕುವುದೇ ಯಶಸ್ಸಿನ ಮಾನ ದಂಡವೆನ್ನುವುದಾದರೆ ಪ್ರಕಾಶ್ ರೈ ಇಂದಿನ ಅತಿ ಯಶಸ್ವಿ ಪುರುಷರಲ್ಲಿ ಒಬ್ಬರಾಗಿದ್ದಾರೆ. ಹಿಂದೂಗಳೇ ಇಲ್ಲಿ ಬದುಕಬೇಕಾದರೆ ಉಳಿದವರು ಎಲ್ಲಿಹೋಗಬೇಕು ಎಂದಿರುವ ಅವರು ಮೊನ್ನೆ ತಮ್ಮ ಸತ್ಯ ಪ್ರತಿಪಾದನೆಯ ಹಾದಿಯಲ್ಲಿ ಕಾಗೆ, ನವಿಲುಗಳನ್ನೂ ರೂಪಕಗಳನ್ನಾಗಿ ಬಳಸಿಕೊಂಡರು. ಬಹುಸಂಖ್ಯಾತವೆನ್ನುವುದೇ ಹೆಗ್ಗಳಿಕೆಯಾಗಿದ್ದರೆ ಕಾಗೆ ರಾಷ್ಟ್ರ ಪಕ್ಷಿಯಾಗಬೇಕಿತ್ತು, ನವಿಲಲ್ಲ ಎಂದ ಅವರ ಆಕ್ರೋಶದ ತೆರೆಗಳಿಗೆ ಸಂವಾದಿಯಾಗಿ ಕಾಗೆಗಳ ಧಿಕ್ಕಾರದ ಧ್ವನಿಗಾಗಿ ನಾನಂತೂ ಕಾದದ್ದೇ ಬಂತು. ಆ ಪ್ರಯತ್ನದ ಫಲವಾಗಿ ಅವುಗಳ ರೆಕ್ಕೆ ಸದ್ದೂ ನನಗೆ ಕೇಳಿಸಿದ್ದು ಯಾವುದೋ ಧ್ಯಾನಸ್ಥ ಸ್ಥಿತಿಗೆ ನಾನು ಸಾಕ್ಷಿಯಾದಂತೆನಿಸಿತು. ಗುಡ್ಡದ ಮೇಲೆ ಎಲ್ಲಿಯೋ ನೋಟ ನೆಟ್ಟು ಸುಮ್ಮನೇ ಕೂತಿದ್ದ ರಾಷ್ಟ್ರಪಕ್ಷಿ ನವಿಲಿನ ಅಂತರಂಗಕ್ಕೆ ಪ್ರಕಾಶ್ ರೈ ಯಾವ ಸಂವೇದನೆಯನ್ನಾದರೂ ಮೂಡಿಸಿದ್ದಾರಾ ಎಂದು ಕಾದೆ. ಆ ಗಂಡುನವಿಲು ತನ್ನ ರಾಷ್ಟ್ರ ಪಕ್ಷಿಯ ಸ್ಥಾನ ಭದ್ರವಾಯಿತೆಂಬುದನ್ನು ಜಾnಪಿಸಿಕೊಂಡು ಗರಿಬಿಚ್ಚಿ ನರ್ತನವೇನಾದರೂ ಮಾಡುತ್ತದೆಯಾ ಎಂಬ ನನ್ನ ನಿರೀಕ್ಷೆಗೆ ನಾನು ಅಲ್ಲಿ ನಿಂತಷ್ಟು ಹೊತ್ತೂ ಯಾವ ರೀತಿಯ ಸಂವೇದನೆಯೂ ಸಿಕ್ಕಲಿಲ್ಲ.
ನಿಸರ್ಗವೆಲ್ಲವೂ ತನ್ನ ಎಂದಿನ ರಮಣೀಯ ಭಾವದಲ್ಲಿ ರಾರಾಜಿಸುತ್ತಲೇ ಇದ್ದ ಸತ್ಯದ ಪುನರ್ದರ್ಶನಕ್ಕಾಗಿ ಯಾರಿಗೆ ಅಭಿನಂದನೆ ಸಲ್ಲಿಸಬೇಕೆಂಬ ಆಹ್ಲಾದಕಾರಿಯಾದ ಗೊಂದಲ ವೊಂದು ಮೂಡಿದಾಗ ಮೌನಸಂಭ್ರಮಕ್ಕೆ ನಾನು ಸಾಕ್ಷಿಯಾದೆ. ಪ್ರಕಾಶ್ ರೈ ಪ್ರತಿಪಾದನೆಗೆ ಈ ನೆಲದ ಪರಂಪರೆಯ ಹಿರಿಮೆಯಷ್ಟೇ ಉತ್ತರಿಸಲು ಸಾಧ್ಯ. ಬುದ್ಧ, ಮೊಹಮ್ಮದ್ ಪೈಗಂಬರ್, ಜೀಸಸ್, ಝರಾತುಷ್ಟ್ರ, ಮಹಾವೀರ – ಹೀಗೆ ಯಾವ ಇತಿಹಾಸ ಪುರುಷರ ನಾಯಕತ್ವವೂ ಇಲ್ಲದ, ಈ ನೆಲದ ಜೀವನ ಕ್ರಮವಾದ ಧರ್ಮವೊಂದು ಅದು ತನ್ನದಲ್ಲದ ತಪ್ಪಿಗೆ ಹಾದುಹೋದ ಹಿಂಸಾತ್ಮಕ ಅನುಭವಗಳ ನೆಲೆಗಟ್ಟಿನಲ್ಲಿ ತಾನು ಎದುರುಗೊಂಡ ಪ್ರಚೋದನೆಗಳಿಗೆ ಕೇವಲ ಪ್ರತಿಕ್ರಿಯಾತ್ಮಕವಾದ ಸಹಜ ನಡವಳಿಕೆಯನ್ನು ತೋರಿದ್ದನ್ನೇ ಅತ್ಯಂತ ದೊಡ್ಡ ಅಪರಾಧ ಎಂದು ಖಂಡಿಸುವ ಪ್ರಕಾಶ್ ರೈ ಹಾಗೂ ಅವರಂತಹವರು ವಿವಿಧ ರಾಷ್ಟ್ರಗಳ ಧರ್ಮ ದ್ವೇಷಗಳ ಉದಾಹರಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಲೇ ತಮ್ಮ ನಿಲುವುಗಳನ್ನು ಸ್ವಯಂ ಪರಾಮರ್ಶೆಗೊ ಳಿಸಿಕೊಳ್ಳಬೇಕಾದ ಮುಖ್ಯ ಅಗತ್ಯವಿದೆ. ಜಾತಿಗಳನ್ನು ವಿಭಜಿಸುವ ಮೂಲಕ ಧರ್ಮವೊಂದರ ಜೀವಸತ್ವವನ್ನು ಕ್ಷೀಣಗೊಳಿಸುತ್ತಿರುವ ಇಂದಿನ ಶಕ್ತಿ ರಾಜಕೀಯ ವ್ಯವಸ್ಥೆಯ ಜಾತ್ಯತೀತ ನಿಲುವುಗಳ ಬಗ್ಗೆ ಕಣ್ಣು ಹಾಯಿಸಿ ನೋಡಬೇಕಾದ ಪ್ರಮುಖ ಅವಶ್ಯಕತೆಯೂ ಇದೆ. ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳದೇ ಪೂರ್ವಗ್ರಹ ಗಳೊಂದಿಗೆ ವಿರೋಧಿಸುವುದೇ ನಮ್ಮ ಧ್ಯೇಯ ಎಂದು ಹೊರಟಾಗ ಕಾಲ ನಮ್ಮನ್ನು ಕಸ ಮಾಡುತ್ತದೆಯಷ್ಟೆ.
ಸಿನಿಮಾ ಬದುಕು ಅವರಿಗೆ ಕಲ್ಪಿಸಿದ್ದ ವಿಶಿಷ್ಟ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪ್ರಕಾಶ್ ರೈರವರಿಗೆ ಆಯ್ಕೆಗಳು ದೊಡ್ಡವಿದ್ದವು. ಜೀವಕೇಂದ್ರಿತ ದೃಷ್ಟಿಕೋನದ ಪಂಪನ ಪ್ರಭುತ್ವ ವಿರೋಧಿ ನಿಲುವಿಗೆ ಅವರು ಅಂಟಿಕೊಂಡಿದ್ದರೆ ಅವರನ್ನು ವಿಚಾರಶೀಲರನ್ನಾಗಿ ಪರಿಗಣಿಸುವ ಪ್ರಮೇಯ ನಮ್ಮ ಸಮಾಜಕ್ಕೆ ಖಂಡಿತ ಉದ್ಭವವಾಗುತ್ತಿತ್ತು.
ಭಿನ್ನತಾತ್ವಿಕ ನೆಲೆಗಳ ಅಲ್ಲಮ, ಬಸವ ಇಬ್ಬರೂ ನಮ್ಮ ಅವಶ್ಯ ಎಂದು ಅವರು ಬಗೆದು ತಮ್ಮ ಸತ್ಯ ಪ್ರತಿಪಾದನೆಯ ಕಡೆಗೆ ಹೆಜ್ಜೆ ಹಾಕಿದ್ದರೆ ಅವರ ಬಗ್ಗೆ ಸಮಾಜ ಒಂದಷ್ಟು ಗೌರವ ಭಾವವನ್ನಾದರೂ ಬೆಳೆಸಿಕೊಳ್ಳುತ್ತಿತ್ತು. ಚಿಕಿತ್ಸಕವಾದ ಸಮಚಿತ್ತದ ಮನೋದೃಷ್ಟಿಯಿಂದ ಜಾತಿ-ಧರ್ಮಗಳ ನಡುವಿನ ಅಸಹನೆಯ ಕಳೆಯನ್ನು ಕೀಳುವ ಕಾಯಕಯೋಗಿಯ ಕೆಲಸಕ್ಕೆ ಅವರು ಕೈಹಾಕಬಹುದಿತ್ತು. ಕಾಲದ ದೃಷ್ಟಿಯಲ್ಲಿ ಸಮಾನತೆಯೆನ್ನುವುದು ಅಂತರ್ಗತವಾಗಿದೆ ಎನ್ನುವುದನ್ನು, ಜೀವನ ಪ್ರೀತಿಗಿಂತ ದೊಡ್ಡ ಧರ್ಮವಿಲ್ಲ ಎಂಬುದನ್ನು ಅವರು ಪ್ರತಿಪಾದಿಸಬಹುದಿತ್ತು. ಕಡೆಗೆ ಮತ ಗಳೆಲ್ಲವೂ ಮನುಜಪಥಗಳೇ ಎಂದೂ ಅವರು ಹೋರಾಡಬಹುದಿತ್ತು.
ಆದರೆ ಅವರು ಸತ್ಯವೊಂದರ ಚುಂಗು ಹಿಡಿದು ದೂರ ಸಾಗಿಹೋಗಿದ್ದಾರೆ. ಒಂದು ಸತ್ಯವನ್ನು ಬೆಂಬಲಿಸುತ್ತೇನೆಂದು ಹೊರಟಿರುವ ಅವರಿಗೆ ಇನ್ನೊಂದು ಸತ್ಯವನ್ನು ಹೀಗಳೆಯುವ ಅನಿವಾರ್ಯತೆ ಬಿಟ್ಟರೆ ಇಂದು ಪರ್ಯಾಯವೇ ಇಲ್ಲ. ವರ್ತಮಾನದ ಆಗುಹೋಗುಗಳನ್ನು ಭೂತದ ಕನ್ನಡಿಯಲ್ಲಿ ಭ್ರಮಿಸಿ ಧಿಕ್ಕಾರ ಕೂಗುತ್ತಾ ನಿಂತಿರುವ ಅವರಿಗೆ ಎಂದೋ ಒಂದು ದಿನ ತಾನು ಹಾಕಿದ ಹೆಜ್ಜೆಗಳೆಲ್ಲವೂ ಧರ್ಮ ಸರಳುಗಳ ಸಾಂಗತ್ಯದಲ್ಲೇ ಎಂದು ಅರ್ಥವಾಗದೇ ವಿಧಿಯಿಲ್ಲ. ಯಾವುದೋ ಧರ್ಮವನ್ನು ತೆಗಳುವ ಭರದಲ್ಲಿ ಇನ್ನೊಂದು ಧರ್ಮದ ಜನರನ್ನೂ ವಿನಾಕಾರಣ ಪ್ರಚೋದಿಸಿ ಜೀವ ವಿರೋಧಿಯಾಗುತ್ತಿದ್ದೇನೆಂಬ ಕನಿಷ್ಠ ಸತ್ಯ, ಸಾಹಿತ್ಯ ಓದಿಕೊಂಡಿರುವ ಪ್ರಕಾಶ್ ರೈರವರಿಗೆ ಇಂದಲ್ಲ ನಾಳೆ ಅನಿವಾರ್ಯವಾಗಿ ಅರ್ಥವಾಗುತ್ತದೆ ಎನ್ನುವುದು ನಿರೀಕ್ಷೆ. ಇಲ್ಲದಿದ್ದಲ್ಲಿ ಅವರು ಓದಿಕೊಂಡ ಸಾಹಿತ್ಯಕ್ಕೆ ಯಾವುದೇ ಮೌಲ್ಯವಿರಲಾರದು. ಈ ನೆಲದ ಜೀವನಧರ್ಮದಂತೆ ಕಡೆಗೆ ಅವರೂ ಅನುಕಂಪಕ್ಕೆ ಅರ್ಹರಾಗಿ ಸಾಗಿಹೋಗುತ್ತಾರೆ. ಬದುಕು ಮುನ್ನಡೆಯುತ್ತದೆ.
ಕಡೆಗೆ: ಸಾಮಾಜಿಕ ಸತ್ಯವಾದರೆ ಜಗತ್ತಿನ ಸೌಂದರ್ಯ ವೃದ್ಧಿಸುವ ಜೆನ್‌ಸಾಲು: Spring comes and the grass grows by itself. Better, we just not ask.
ಫಣಿಕುಮಾರ್ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.