ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿದಾಗ
Team Udayavani, Apr 1, 2018, 12:30 AM IST
ಒಬ್ಬ ವ್ಯಕ್ತಿ ನಮ್ಮನ್ನು ನೋಯಿಸಿದಾಗ ತಿರುಗಿ ನಾವು ಅವರ ಪರಿಸ್ಥಿಯನ್ನು ಅರಿತುಕೊಂಡು ಮತ್ತೆ ಅವರನ್ನು ನೋಯಿಸದೆ ಇರುವಂತಹ ಗುಣವೇ ಪ್ರಬುದ್ಧತೆ!
ಗಣ ಹಿಡಿಸುವವರು, ಗುಣ ಪಡಿಸುವವರು, ಗ್ರಹಣ ಬಿಡಿಸುವವರು, ಸೊಕ್ಕು ಮುರಿಯುವವರು, ಬಾಯಿ ಬಡಕೊಳ್ಳುವವರು, ಅತಿ ವಾಸ್ತವದಲ್ಲಿ ಬದುಕುವವರು, ಕಲ್ಪನಾ ಲೋಕದಲ್ಲಿ ವಿಹರಿಸುವವರು, ಜೀವ ವಿರೋಧಿಗಳು, ವೈರಾಗ್ಯ ಮೂರ್ತಿಗಳು, ಬಿಸಿ ನೀರ ಎರಚುವವರು, ನಾನು-ನನ್ನದೆಂಬ ವೃತ್ತದೊಳಗೆ ಗಿರಕಿ ಹೊಡೆಯುವವರು, ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಲು ಇಷ್ಟವಿಲ್ಲದೆ ಅದನ್ನು ಕ್ಲಿಷ್ಟವಾಗಿಸುವವರು, ಫೆಮಿನಿಸ್ಟ್‌ಗಳು, ಮೇಲ್ ಚೋವನೆಸ್ಟ್‌ಗಳು, ವಾದಿಗಳು-ಪ್ರತಿವಾದಿಗಳು, ಮಂಡೂಕವಾದಿಗಳು, ಗಾಳ ಹಾಕುವವರು, ಗುಳೆ ಹೊರಡುವವರು, ಮನೆ ಮುರಿಯುವವರು-ಮನ ಹರಿಯುವವರು, ಬೇಕಾದಾಗ ಬಳಸಿಕೊಳ್ಳುವವರು, ಬೇಡವಾದಾಗ ಒಗೆದು ಬಿಸಾಕುವವರು, ತೀರ್ಪು ಕೊಡುವವರು, ತೀರ್ಪು ತಿರುಚುವವರು, ಹಾಸಿಗೆ ಹಿಡಿಯಲಿ ಎಂದು ಆಶಿಸುವವರು, ಜೀವ ಉಳಿಸುವವರು, ಜೀವ ಹೋಗಲಿಲ್ಲವೆಂದು ಪರಿತಪಿಸುವವರು, ಕದ್ದಾಲಿಸುವವರು, ಮೂರು ಹೊತ್ತಿನ ಬುದ್ಧಿಯವರು, ಹೈಲೆಂದು ಕರೆದು ಫೈನ್ ಆಗ ಬಯಸುವವರು, ಹಿತ ಶತ್ರುಗಳು-ಪರಮ ಮಿತ್ರರು, ಲಾಜಿಕ್ ಆಡುವವರು, ಮ್ಯಾಜಿಕ್ ಮಾಡ ಬಯಸುವವರು, ಸತ್ಯವನ್ನೇ ಹೇಳುತ್ತೇನೆಂದು ಸುಳ್ಳಿನ ಕಥೆಯನ್ನೇ ಹೆಣೆಯುವವರು, ಮಾಡದ್ದನ್ನೆಲ್ಲಾ ಹೇಳುವವರು, ಇನ್ನೊಬ್ಬರನ್ನು ಕೆಟ್ಟವರನ್ನಾಗಿಸಿ ತಾವು ಒಳ್ಳೆಯವರಾಗಬಯಸುವವರು, ತಪ್ಪನ್ನೇ ಹುಡುಕುವ ಕಾಯಕದವರು, ತಪ್ಪನ್ನು ಹುಡುಕುವುದು ಕೂಡ ತಪ್ಪೆಂದು ಅರಿತೂ ಅರಿಯದಂತಿರುವವರು. ಸಂಬಂಧ ಕಟ್ಟುವವರು, ನಂಬಿ ಹೇಳಿದ ಗೌಪ್ಯತೆಯ ವಿಷಯಗಳನ್ನು ಹಿಡಿದು ತಮ್ಮ ಬೇಳೆ ಬೇಯಿಸುವವರು, ವಿಷ ಬೀಜ ಬಿತ್ತುವವರು, ವಿಷವನ್ನು ಕಕ್ಕುವವರು, ವಿಷಕಂಠರಾದವರು, ಸಂಸಾರವೆಂಬ ತಿಳಿ ಕೊಳವನ್ನು ಕಲಕಿದವರು, ಕುಲುಕಿದವರು, ಕೆದಕಿದವರು, ಬೆನ್ನಿಗಿದ್ದುಕೊಂಡೇ ಇರಿಯುವವರು, ಸತ್ಯಾಂಶವನ್ನು ಹೇಳಿದರೆ ದೂರನ್ನೇ ಹೇಳುತ್ತೇವೆಂದು ಹಳಿಯುವವರು, ಒಡ್ಡು ಕಟ್ಟಿದವರು, ವಿರೋಧಿಸಿದವರು, ಮತ್ಸರಿಸಿದವರು, ಅಪಾರ್ಥರು-ಸಮರ್ಥರು, ಹಿಂದಿಂದ ಹೇಳೊರು- ಮುಂದಿಂದ ನಕ್ಕೋರು, ನಮ್ಮೊರು- ನಿಮ್ಮೊರು, ಮೂರನ್ನೂ ಬಿಟ್ಟೋರು, ಅಲ್ಲಿಗೂ ಸಲ್ದವ್ರು-ಇಲ್ಲಿಗೂ ಒಗ್ಗದವ್ರು, ತನ್ನದೇ ಶ್ರೇಷ್ಟ ಎನ್ನೋರು, ಉಗುಳು ನುಂಗೋರು, ಅಗುಳು ಹುಡ್ಕೊರು, ವಿಕೃತರು, ಸುಕೃತರು, ಬಹುಶ್ರುತರು….ಥುತ್…ಏನ್ ಕರ್ಮಾರಿ…! ಹೀಗೆ ಬಯಸಿ ಬಯಸಿ ಬದುಕನ್ನು ಹೈರಾಣಾಗಿಸಿಕೊಳ್ಳುವ ನಾವು, ನಮ್ಮ ನಿತ್ಯದ ಬದುಕಲ್ಲಿ ಬಣ್ಣದ ಓಕುಳಿ ಆಡುವ ಬದಲು ಬದುಕನ್ನೇ ರಣರಂಗವನ್ನಾಗಿಸಿಕೊಂಡಿದ್ದೇವೆ. ಈ ಪ್ರಹಸನದಲ್ಲಿ ನಾವು ಕಳಕೊಂಡ ಸುಂದರ ಬದುಕಿನ ಕಲ್ಪನೆ ನಮಗಿದೆಯೇ? ಜೀವನ ಶೈಲಿ ಬದಲಾಗಬಹುದು ಕಣ್ರೀ ಆದರೆ ಜೀವನ ಬದಲಾಗುವುದಿಲ್ಲ!
ಪ್ರಿಯರೇ, ಇಲ್ಲಿ ಕನಸು ಕಾಣುವುದು ನಿಷಿದ್ಧ, ಸಂತೋಷ ಪಡುವುದು ಅಬದ್ಧ ಎಂದಾದ ಮೇಲೆ ಮುಂದಿರುವ ದಾರಿಯಾದರೂ ಯಾವುದು ? ಬದುಕಿಗೆ ಅಗತ್ಯವಾಗಿ ಬೇಕಾಗಿರುವ ಈ ಎರಡು ಬಹುಮುಖ್ಯ ಸಲಕರಣೆಗಳೇ ಬೇಡವೆಂದಾದ ಮೇಲೆ ಬದುಕನ್ನು ಕಟ್ಟುವುದಾದರೂ ಹೇಗೆ? ನಮ್ಮ ಸಮಸ್ಯೆ ಏನೆಂದರೆ, ನಾವು ವಸ್ತುಗಳನ್ನು ಹಾಗೂ ವಿಷಯಗಳನ್ನು ಇದ್ದಂತೆ ನೋಡುವುದಿಲ್ಲ. ನಾವು ಅವುಗಳನ್ನು ಇದ್ದಂತೆ ಅವಲೋಕಿಸುತ್ತೇವೆ. ಆದ್ದರಿಂದ ನಮ್ಮ ಚಿಂತನಾ ರೀತಿಗಳು ಭಿನ್ನವಾಗಿ ಪ್ರವಹಿಸುತ್ತವೆ. ನಾವು ಸತ್ಯವನ್ನು ಕಂಡುಕೊಂಡೆವು ಎನ್ನುತ್ತೇವೆ. ಆದರೆ ಅದೇ ಸತ್ಯವಾಗಿರುವುದಿಲ್ಲ. ನಾವು ಕೇವಲ ಸತ್ಯದ ತುಣುಕೊಂದನ್ನು ಕಂಡುಕೊಂಡಿದ್ದೇವೆ ಅಷ್ಟೇ. ಹಾಗಾಗಿ ಅದನ್ನೇ ಸತ್ಯವೆಂದು ಘೋಷಿಸುವುದು ಸಲ್ಲ. ನನಗೆ ತೋಚಿದ, ಕಂಡ ಸತ್ಯವು ಮತ್ತೂಬ್ಬನ ದೃಷ್ಟಿಯಲ್ಲಿ ಅಸತ್ಯವಾಗಿರುತ್ತದೆ. ಹಾಗಿರುವಾಗ ಇದೇ ಸತ್ಯ ಎಂದು ಘಂಟಾಘೋಷವಾಗಿ ಸಾರಿ ಬಿಡುವುದು ಸಮಂಜಸವಲ್ಲ. ಪಾರಮಾರ್ಥಿಕ ಲೋಕದೊಳಗೆ ಇನ್ನೂ ಸತ್ಯದ ಹುಡುಕಾಟದಲ್ಲಿರುವವರಿದ್ದಾರೆ. ಅವರಿಗೂ ಅಷ್ಟು ಸುಲಭದಲ್ಲಿ ಸತ್ಯದ ದರ್ಶನವಾಗಿರುವುದಿಲ್ಲ ಅಂದ ಮೇಲೆ ನಾವೇನು ಮಹಾ! ಆದರೂ ಇದೇ ಸತ್ಯವೆಂದು ಹೂಂಕರಿಸುತ್ತೇವೆ. ಸತ್ಯವನ್ನು ಕಂಡುಕೊಳ್ಳಲಾರದೆ ಹೋದರೂ ಪರವಾಗಿಲ್ಲ ಸತ್ಯವನ್ನು ಕಂಡುಕೊಳ್ಳುವ ಹಾದಿಯಲ್ಲಿ ನಡೆಯುವುದು ಮುಖ್ಯವೆನಿಸಿಕೊಳ್ಳಬೇಕು. ಅಂತಹ ದಾರಿಗಳು ನಮ್ಮ ನಡೆ-ನುಡಿಯಲ್ಲಿ ಇರಲಿ. ನಮ್ಮ ನಡುವೆಯೇ ನಡೆಯುವ ಕೆಲವೊಂದು ಘಟನಾವಳಿಗಳು ಇದಕ್ಕೆ ಸಾಕ್ಷಿ. ನಮ್ಮ ಸಭ್ಯತೆಯ ಕಲ್ಪನೆ ನಮಗೆ ಸರಿ. ಇನ್ನಿತರರಿಗೆ ಸಭ್ಯತೆಯ ಬಗ್ಗೆ ಇತರ ಕಲ್ಪನೆಗಳಿವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ. ಸಭ್ಯತೆ ಸಾಮಾನ್ಯರಿಗೆ ಮಾತ್ರ. ಸುಶಿಕ್ಷತರಿಗೆ ಸಭ್ಯತೆ ಎಂದರೆ ಬಾಯಿ ತೆರೆಯದೆ ಆಕಳಿಸುವ ಕೌಶಲ ಮಾತ್ರ. ಈ ಚಿಂತನೆ, ತರ್ಕಗಳಿಗೆ ನೂರು ನೂರು ರಂಗುಗಳಿರುತ್ತವೆ ಎಂಬುದನ್ನು ನಾವು ಅರಿಯದೆ ತರ್ಕಿಸುತ್ತೇವೆ ಮತ್ತು ವರ್ತಿಸುತ್ತೇವೆ. ಗಂಡ ಹೆಂಡತಿಯನ್ನು ಸಂಪ್ರೀತಿಗೊಳಿಸಲು ಕೆಲವೊಮ್ಮೆ ಇಷ್ಟವಾದವುಗಳನ್ನು ತರುತ್ತಾನೆ. ಹೆಂಡತಿಗೆ ಕೂಡಲೇ ಸಂಶಯದ ರೇಡಿಯೇಷನ್. ಏನೋ ಯಡವಟ್ಟು ಮಾಡಿಕೊಂಡು ಬಂದಿ¨ªಾನೆ ಅದಕ್ಕಾಗಿ ಈ ನಾಟಕ. ಅಪರಾಧಿ ಪ್ರಜ್ಞೆ ಇ¨ªಾಗ ಮಾತ್ರ ಗಂಡ ಈ ಎಲ್ಲವುಗಳನ್ನು ತರುತ್ತಾನೆ, ಪ್ರೀತಿಯ ಸುಧೆಯನ್ನು ಹರಿಸುತ್ತಾನೆ ಎನ್ನುವುದು ಹೆಂಡತಿಯ ತರ್ಕ. ಹಾಗಲ್ಲ ಎಂದು ಸಾಬೀತುಪಡಿಸಲು ಗಂಡ ಹೆಣಗಾಡುತ್ತಾನೆ ಆದರೆ ಅವನ ಪ್ರಯತ್ನ ನಿಷ#ಲವಾಗುತ್ತದೆ. ಅಷ್ಟಕ್ಕೂ ಈ ಸಂಶಯ ಯಾಕಾದ್ರೂ ಬರುತ್ತದೆ ಹೇಳಿ? ಯಾವಾಗ ನಮಗೆ ನಮ್ಮ ಬಗ್ಗೆ ಧೈರ್ಯವಿರುವುದಿಲ್ಲವೋ ಆವಾಗೆಲ್ಲ ಸಂಶಯದ ಹುಳು ಹರಿದಾಡುತ್ತಲೇ ಇರುತ್ತದೆ. ನಮ್ಮ ಕ್ರಿಯೆ- ಪ್ರತಿಕ್ರಿಯೆಗಳಿಂದ ಹುಟ್ಟಿದ ತಪ್ಪುಗಳನ್ನು ಮರೆ ಮಾಚಲು ಸಂಶಯದ ಡ್ರೋಣ್ ಅನ್ನು ಆಗಾಗ ಪ್ರಯೋಗಿಸುತ್ತಿರುತ್ತೇವೆ. ಒಟ್ಟಲ್ಲಿ ಆಗಾಗ ಸಂಶಯದ ರೇಡಿಯೇಷನ್ ಪ್ರಯೋಗವಾಗುತ್ತಿರುತ್ತದೆ. ಆವಾಗೆಲ್ಲ ಗಂಡನೆಂಬ ಇಲಿಯು ಬಾಳೆಂಬ ಪ್ರಯೋಗಾಲಯದಲ್ಲಿ ಇಂತಹ ಪ್ರಯೋಗಗಳಿಗೆ ತುತ್ತಾಗುತ್ತಿರುತ್ತಾನೆ. ಈ ಪ್ರಯೋಗವು ಎಲ್ಲಾ ಕಾಲಧರ್ಮದ ಗಂಡಸರು ಅನುಭವಿಸಿದ್ದು, ಅನುಭವಿಸುವುದು ಮತ್ತು ಅನುಭವಿಸಲಿರುವುದಾಗಿದೆ. ನಮ್ಮೊಳಗಣ ಶುದ್ಧಿಯೊಂದೇ ಇದಕ್ಕೆ ಪರಿಹಾರ. ಮೊದಲು ನಮ್ಮನ್ನು ನಾವು ನಂಬಬೇಕು. ಬೆಳೆದ ಮನಸ್ಸು ಮತ್ತು ಬೆಳೆಯುತ್ತಿರುವ ಮನಸ್ಸುಗಳು ಒಂದರ ಮೇಲೊಂದು ಸವಾರಿ ಮಾಡದೆ ತಿಳಿಯಾಗಿ ಜೊತೆಯಾಗಿ ಹರಿಯಬೇಕು.
ನಿತ್ಯದ ಬದುಕಲ್ಲಿ ನಾಟಕದ ಮುಖವಾಡ ಹಾಕಿಕೊಂಡು ಆತ್ಮವಂಚನೆ ಮಾಡುವ ಅದೆಷ್ಟೋ ಬಂಧಗಳು ನಮ್ಮ ನಡುವೆಯೇ ಇವೆ. ಮಾಡುತ್ತಿರುವುದು, ಆಡುತ್ತಿರುವುದು ಅಷ್ಟೂ ನಾಟಕ ಎಂಬುದರ ಅರಿವು ಅವರಿಗಿದೆ. ಎದುರಿನವರಿಗೆ ಅದರ ಅರಿವಿಲ್ಲ ಎಂಬ ಗ್ರಹಿಕೆ ಮಾತ್ರ ಅವರದ್ದು. ಎದುರಿನ ವ್ಯಕ್ತಿಗೂ ಆ ಬಂಧ ಆಡುತ್ತಿರುವುದು ನಾಟಕವೆಂಬುದು ಚೆನ್ನಾಗಿಯೇ ಗೊತ್ತಿರುತ್ತದೆ. ಆದರೆ ಏನು ಮಾಡೋಣ? ಸಂಸಾರ ಎಂಬ ತೆಪ್ಪ ಸಾಗಬೇಕಲ್ಲ, ಹಾಗಾಗಿ ತೆಪ್ಪಗಿರಲೇಬೇಕಲ್ಲ! ಬಹಳಷ್ಟು ಬಾರಿ ಅಜ್ಞಾನಿ ಆಗಿರುವುದು ಜ್ಞಾನಿಯಾಗಿರುವುದಕ್ಕಿಂತ ಹೆಚ್ಚಿನ ನೆಮ್ಮದಿಯನ್ನು ತಂದುಕೊಡುತ್ತದೆ. ಕೆಲವೊಮ್ಮೆ ನಮ್ಮ ಪ್ರಬುದ್ಧªತೆಯೇ ನಮ್ಮ ಸಂತಸಗಳನ್ನು ಕಿತ್ತುಕೊಂಡುಬಿಡುತ್ತವೆಯೋ ಎಂದೆನ್ನಿಸತೊಡಗುತ್ತದೆ. ಹಾಗಾಗಿ ನಿತ್ಯದ ಬದುಕಲ್ಲಿ ನೆಮ್ಮದಿಯನ್ನು ಕರುಣಿಸುವಷ್ಟರ ಮಟ್ಟಿನ ಪ್ರಬುದ್ಧತೆ ನಮಗಿದ್ದರೆ ಸಾಕಲ್ಲವೇ? ಅಷ್ಟಕ್ಕೂ ನಾವು ಇನ್ನೊಬ್ಬರ ಪ್ರಬುದ್ಧತೆಯನ್ನು ಅಳೆಯುವ ಮಾಪನಗಳಾಗಬಾರದು. ನಮ್ಮೊಳಗೆ ಅಡಕಗೊಂಡ ಪೂರ್ವಗ್ರಹಗಳು ಮತ್ತು ನಮ್ಮ ಜಡ್ಗ್ಮೆಂಟ್ಲ್ ಮೈಂಡ್ ಎದುರಿನವರನ್ನು ಕ್ಷಣಾರ್ಧದಲ್ಲಿ ಅಳೆದು ಬಿಡುವಂತೆ ಮಾಡುತ್ತದೆ. ಆದರೆ ಅಂತಹ ಯೋಚನೆಗಳು ನಮ್ಮದಾಗದಿರಲಿ. ನಮಗೆ ಬೇಕಾಗಿರುವುದು ಪ್ರೀತಿ ಮತ್ತು ಪ್ರೀತಿ ಮಾತ್ರ. ಮಿಕ್ಕೆಲ್ಲವೂ ನಮ್ಮ ಪಾಲಿಗೆ ನಗಣ್ಯವಾಗಬೇಕು ಮತ್ತು ನಾವು ಆ ಮಟ್ಟಕ್ಕೇರಬೇಕು.
ಬೆಳೆಯುತ್ತಿರುವ ವಾತ್ಸಲ್ಯದ ಬಂಧಗಳ ಮೇಲೆ ನಮ್ಮ ಪೂರ್ವಗ್ರಹಗಳನ್ನು ಹೇರುವುದಿದೆ ನೋಡಿ, ಅದು ನಮಗೆ ನಾವೇ ಮಾಡಿಕೊಳ್ಳುವ ಅತಿ ದೊಡ್ಡ ಆತ್ಮವಂಚನೆ. ಹೀಗೆ ವ್ಯವಹರಿಸುವುದು ನಮಗೆ ನಿಂತ ಭೂಮಿ ಕುಸಿಯುತ್ತಿದೆ ಎಂಬುದರ ಸ್ಪಷ್ಟ ಲಕ್ಷಣವಲ್ಲವೇ? ವೈಯಕ್ತಿಕ ಲಾಲಸೆಗಾಗಿ ಮತ್ತು ಆಸರೆಗಾಗಿ ಕಂಡುಕೊಂಡ ಇಂತಹ ಕ್ಷಣಿಕ ಪರಿಹಾರಗಳು ಮುಂದೆ ತಂದೊಡ್ಡಲಿರುವ ಅಪಾಯಗಳ ಅರಿವಾದರೂ ನಮಗಿರಬೇಕಾದುದು ಅವಶ್ಯ. ಬಂಧಗಳು ನಮ್ಮಿಂದ ದೂರವಾಗಿಬಿಡುತ್ತದೆಯೋ ಎನ್ನುವ ಭಯ, ಆತಂಕ ನಮಗೆ ಯಾಕೆ? ಅಷ್ಟಕ್ಕೂ ಅಭದ್ರತೆಯು ನಮ್ಮನ್ನು ಯಾಕೆ ಕಾಡಬೇಕು? ತಾಯಿ ಎಂಬ ಅದ್ಭುತ ಶಕ್ತಿಯು ಸರಿಯಾದ ಹಾದಿಯಲ್ಲಿ ಪ್ರವಹಿಸಿದಾಗ ಮಾತ್ರ ಒಂದು ಬಂಧವು ಇನ್ನೊಂದು ಬಂಧದ ಬಗ್ಗೆ ಸುಮಧುರ ಭಾವನೆಯನ್ನು ಬಾಲ್ಯಾವಸ್ಥೆಯಿಂದಲೇ ಹೊಂದಲು ಸಾಧ್ಯ. ಅದೇ ಗುಣಾತ್ಮಕ ಅಂಶಗಳು ಬೆಳೆಯುತ್ತಿದ್ದಂತೆ ಇತರ ಬಂಧಗಳತ್ತ ಚಾಚಲು ಸಾಧ್ಯವಾಗುವುದು. ಬಂಧದ ಒಳಿತು- ಕೆಡುಕು ಅಡಗಿರುವುದು ತಾಯಿ ಎಂಬ ಮಹಾತ್ಯಾಗಿಯ ತೋರು ಬೆರಳಲ್ಲಿ. ಹಾಗಾದಲ್ಲಿ ಜನ್ಮ ಸಾರ್ಥಕ.
ಸಂತೋಷ್ ಅನಂತಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.