ಅಧಿಕಾರಕ್ಕೆ ಅಂಟಿಕೊಳ್ಳದೆ ಇದ್ದರೆ ಎಲ್ಲಿದ್ದರೂ ಹಿತ
Team Udayavani, Mar 18, 2017, 10:20 PM IST
ರಕ್ಷಣಾ ಸಚಿವರಾಗಿದ್ದ ಮನೋಹರ್ ಪಾರೀಕರ್ ಮತ್ತೆ ಮುಖ್ಯಮಂತ್ರಿಯಾಗಿ ಗೋವೆಗೆ ಮರಳಿದ್ದಾರೆ. “ರಾಜಕೀಯ ಕಾರಣಗಳಲ್ಲ; ದಿಲ್ಲಿಯ ಹವಾಮಾನ, ಕಲುಷಿತ ವಾತಾವರಣ ನನ್ನ ಆರೋಗ್ಯವನ್ನು ಬಾಧಿಸಲು ಆರಂಭಿಸಿದ್ದರಿಂದ ತವರಿಗೆ ಮರಳಲು ನಿರ್ಧರಿಸಿದ್ದೆ, ಪರಿಸ್ಥಿತಿ ಅದಕ್ಕೆ ಅನುಕೂಲ ಒದಗಿಸಿತು’ ಅಂದಿದ್ದಾರೆ ಪಾರೀಕರ್ ಇಂಡಿಯಾ ಟುಡೇಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ರಕ್ಷಣಾ ಸಚಿವರಾಗಿದ್ದವರು ಗೋವಾ ಮುಖ್ಯಮಂತ್ರಿಯಾಗಿದ್ದೀರಿ. ಈ ಬದಲಾವಣೆ ಸುಲಭವಾಯಿತೆ?
ಅಧಿಕಾರ ಸ್ಥಾನಕ್ಕೆ ಅಂಟಿಕೊಳ್ಳದೆ ಇದ್ದಾಗ ಯಾವುದೇ ಅಧಿಕಾರ ಗಾದಿಯೂ ಹಿತವಾಗಿಯೇ ಇರುತ್ತದೆ. ಆಗ ಯಾವುದೇ ಬದಲಾವಣೆ ಅಸಮಾಧಾನ, ಅಹಿತ ಉಂಟು ಮಾಡುವುದಿಲ್ಲ.
ನೀವು ಮುಖ್ಯಮಂತ್ರಿಯಾಗಿ ಮರಳಿದರೆ ಮಾತ್ರ ಬಿಜೆಪಿ ಬೆಂಬಲಿಸುವುದಾಗಿ ಹಲವು ಧ್ವನಿಗಳು ಕೇಳಿಬಂದಿದ್ದವಲ್ಲ…
ನಾನು ಗೋವೆಗೆ ಮರಳಬೇಕು ಅನ್ನುವ ಶಾಸಕರ ಆಗ್ರಹವನ್ನು ನಾನು ಒಂದು ಹಾರೈಕೆಯಾಗಿ ಭಾವಿಸುತ್ತೇನೆ. ಅದರಿಂದ ನನಗೆ ವೈಯಕ್ತಿಕವಾಗಿ ಸಂತಸವಾಗಿದೆ. ನಾನು ಹಿಮ್ಮರಳುವುದು ರಾಜ್ಯದ ಅಗತ್ಯವಾದರೂ ಸುಲಭಸಾಧ್ಯವಾದದ್ದಾಗಿರಲಿಲ್ಲ. ರಾಷ್ಟ್ರ ರಾಜಕಾರಣದಲ್ಲಿದ್ದವನಿಗೆ ಗೋವಾದಂತಹ ಪುಟ್ಟ ರಾಜ್ಯಕ್ಕೆ ಮರಳುವುದೆಂದರೆ, ಅವಕಾಶ ಸಂಕುಚನವಾಗುತ್ತದೆ. ದಿಲ್ಲಿಯ ವಾತಾವರಣ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಲು ಆರಂಭಿಸಿದ್ದರಿಂದಾಗಿ ಗೋವಾಕ್ಕೆ ಮರಳಬೇಕು ಎಂಬ ಅನಿಸಿಕೆ ನನ್ನೊಳಗೇ ಶುರುವಾಗಿತ್ತು. ರಾಜ್ಯ ರಾಜಕಾರಣವನ್ನು ನಿಭಾಯಿಸುವ ಹೊಣೆಯನ್ನು ನಾನು ಹೊತ್ತುಕೊಂಡರೆ ಒಳ್ಳೆಯದು ಎಂದು ಪಕ್ಷದ ನಾಯಕತ್ವವೂ ನಿರ್ಧರಿಸಿತು.
ಪ್ರಧಾನಿ ಮೋದಿ ಅವರನ್ನು ಹೇಗೆ ಒಪ್ಪಿಸಿದಿರಿ?
ಪ್ರಧಾನಿ ಮೋದಿ ಗೋವಾದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಗೋವಾ ದುರಾಡಳಿತ ನೀಡುವವರ ಕೈಗೆ ಹೋಗಬಾರದು ಎಂಬ ಕಾರಣಕ್ಕಾಗಿಯೇ ಅಧಿಕಾರ ಹಿಡಿಯುವುದಕ್ಕಾಗಿ ಇತರ ಪಕ್ಷಗಳ ಮತ್ತು ಪಕ್ಷೇತರರ ಬೆಂಬಲ ಪಡೆಯುವ ಸಾಹಸಕ್ಕೆ ಅವರು ಕೈಹಾಕಿದರು.
ಮುಖ್ಯಮಂತ್ರಿಯಾಗಿದ್ದಿರಿ, ರಕ್ಷಣಾ ಸಚಿವರಾದಿರಿ, ಈಗ ಮತ್ತೆ ಮುಖ್ಯಮಂತ್ರಿ. ಈ ಗುರುತರ ಜವಾಬ್ದಾರಿಗಳು ಸೃಷ್ಟಿಸುವ ಒತ್ತಡದಿಂದ ಪಾರಾಗಲು ಏನು ಮಾಡುತ್ತೀರಿ?
ದಿಲ್ಲಿಗೆ ಹೋದ ಬಳಿಕ ಸ್ಥಗಿತಗೊಂಡಿದ್ದ ವ್ಯಾಯಾಮಗಳನ್ನು ಪುನರಾರಂಭಿಸುತ್ತೇನೆ. ಅಂತಿಮವಾಗಿ ನಾನು “ಕರ್ಮಣ್ಯೇ ವಾಧಿಕಾರಸ್ತೇ’ ಎಂಬುದರಲ್ಲಿ ನಂಬಿಕೆ ಹೊಂದಿರುವವನು. ಇದಲ್ಲದೆ, ಮಾನಸಿಕವಾಗಿ ನಾನು ಅಧಿಕಾರ ಅಥವಾ ಐಹಿಕ ಸುಖಭೋಗಗಳು ಹಿಗ್ಗು ಅಥವಾ ಕುಗ್ಗು ತಾರದ ಸ್ಥಿತಿಯಲ್ಲಿದ್ದೇನೆ. ಹೀಗಾಗಿ ನಾನು ಒತ್ತಡಕ್ಕೆ ಒಳಗಾಗುವ ಸನ್ನಿವೇಶಗಳು ಬೆರಳೆಣಿಕೆಯವು. ರಕ್ಷಣಾ ಸಚಿವನಾಗಿ, ಎರಡು ಸರ್ಜಿಕಲ್ ದಾಳಿಗಳು ನಡೆದಾಗಲೂ 10-12 ತಾಸುಗಳ ಕಾಲ ಒತ್ತಡವನ್ನು ಅನುಭವಿಸಿದ್ದೆ ಅಷ್ಟೆ.
ಸರ್ಜಿಕಲ್ ದಾಳಿಯ ಸನ್ನಿವೇಶವನ್ನು ಹೇಗೆ ನಿಭಾಯಿಸಿದಿರಿ?
ಓದು ಒತ್ತಡ ನಿವಾರಣೆಗೆ ಒಂದು ಒಳ್ಳೆಯ ಉಪಾಯ. ನನ್ನ ಆಲೋಚನೆಗಳನ್ನು ಖಚಿತವಾಗಿ ವಿಭಾಗಿಸಿಕೊಳ್ಳುವ ಸಾಮರ್ಥ್ಯವನ್ನು ಎಳೆಯ ವಯಸ್ಸಿನಿಂದಲೇ ಬೆಳೆಸಿಕೊಂಡಿದ್ದೇನೆ. ಆಲೋಚನೆಗಳನ್ನು ಖಚಿತವಾಗಿ ವಿಭಾಗಿಸಿಕೊಳ್ಳುವ ನನ್ನ ಈ ಸಾಮರ್ಥ್ಯದಿಂದಾಗಿಯೇ ಒತ್ತಡ ಒಂದು ವಿಭಾಗದಿಂದ ಇನ್ನೊಂದಕ್ಕೆ ತುಳುಕುವುದಿಲ್ಲ.
ದಿಗ್ವಿಜಯ್ ಸಿಂಗ್ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು ಎಂದು ಭಾವಿಸುತ್ತೀರಾ?
ಅದನ್ನು ನಿರ್ಧರಿಸಬೇಕಾದದ್ದು ಕಾಂಗ್ರೆಸ್. ಗೋವಾದಲ್ಲಿ ಕಾಂಗ್ರೆಸ್‌ನ ಅಧಃಪತನಕ್ಕೆ ಕಾರಣವಾದದ್ದು ಅದರೊಳ ಗಿರುವ ಬೂಟಾಟಿಕೆ ಮತ್ತು ಕೌಟುಂಬಿಕ ಆಧಿಪತ್ಯ. ಅವರಿಗೆ ಈಗ ಬೇಕಾಗಿರುವುದು ಪ್ರಧಾನಿ ಮೋದಿ ಅವರಂಥ ಒಬ್ಬ ದೂರದೃಷ್ಟಿಯುಳ್ಳ ವರ್ಚಸ್ವಿ ನಾಯಕ.
ಸರ್ಜಿಕಲ್ ದಾಳಿಯ ಸಂದರ್ಭದಲ್ಲಿ ಅನೇಕ ಟೀಕೆ ಟಿಪ್ಪಣಿಗಳು ಎದುರಾದವು. ಹೇಗೆ ನಿಭಾಯಿಸಿದಿರಿ?
ಸರ್ಜಿಕಲ್ ದಾಳಿಯ ಸಂಪೂರ್ಣ ಯಶಸ್ಸು ಸಲ್ಲಬೇಕಾದದ್ದು ಸೇನೆಗೆ. ಸರ್ಜಿಕಲ್ ದಾಳಿಯ ಬಗ್ಗೆ ಚರ್ಚೆ, ಟೀಕೆ ಟಿಪ್ಪಣಿ ಮಾಡುವವರು ಒಂದು ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ: ಅಕಸ್ಮಾತ್ ದಾಳಿ ವಿಫಲವಾಗಿದ್ದರೆ, ಸೇನೆಯನ್ನು ಅವರು ಟೀಕಿಸುತ್ತಿದ್ದರೇ? ಇಲ್ಲ, ಆಗ ಖಂಡಿತವಾಗಿ ನಾನು ತೆಗಳಿಕೆಗೆ ಗುರಿಯಾಗುತ್ತಿದ್ದೆ. ಸೇನೆಯ ವೈಫಲ್ಯಕ್ಕೆ ನಾನು ನಿಂದೆ ಪಡೆದುಕೊಳ್ಳಬಹುದಾದರೆ, ಕಾರ್ಯಾಚರಣೆಯ ಯಶಸ್ಸಿನ ಪಾಲನ್ನು ನಾನು ಆ ನಿರ್ಧಾರ ತೆಗೆದುಕೊಂಡ ನಾಯಕತ್ವಕ್ಕೆ ಸಲ್ಲಿಸುವುದು ನ್ಯಾಯವಲ್ಲವೆ? ಹೀಗಾಗಿ ಸರ್ಜಿಕಲ್ ದಾಳಿಗೆ ಸಮ್ಮತಿ ನೀಡಿ, ನಮ್ಮ ಜತೆಗಿದ್ದು ಹುರಿದುಂಬಿಸಿದ ಪ್ರಧಾನಿ ಮೋದಿ ಕೂಡ ಶ್ಲಾಘನೆಗೆ ಅರ್ಹರು. ಕಳೆದ ಎರಡೂವರೆ ವರ್ಷಗಳಲ್ಲಿ ಸೇನೆಯ ಛಾತಿ ವರ್ಧಿಸಿದ್ದರಿಂದ ಇದು ಯಶಸ್ವಿಯಾಗಿ ನಡೆಯಿತು. ನನ್ನ ಕೊಡುಗೆ ಅಷ್ಟು ಮಾತ್ರ.
ರಕ್ಷಣಾ ಸಚಿವರಾಗಿ ನಿಮ್ಮ ಅಧಿಕಾರಾವಧಿಯ ಬಳಿಕ, ನಮ್ಮ ಸೇನೆಯಲ್ಲಿ ಎಷ್ಟರಮಟ್ಟಿಗಿನ ಯುದ್ಧ ಸನ್ನದ್ಧತೆ ಇದೆ?
ನಮ್ಮ ಸನ್ನದ್ಧತೆಯನ್ನು ನಮ್ಮ ಅನನುಕೂಲತೆಗಳ ಎದುರಿಗಿಟ್ಟು ತುಲನೆ ಮಾಡಿ ನೋಡಬೇಕು. ಇತ್ತೀಚೆಗಿನ ವರ್ಷಗಳಲ್ಲಿ ನಮ್ಮ ಸೇನೆಯ ಸ್ಥಿತಿ ಉತ್ತಮಗೊಂಡಿದೆ. ಇನ್ನುಳಿದ ಕೊರತೆಗಳನ್ನು ತುಂಬಿಕೊಳ್ಳಬೇಕಿದೆ. ರಕ್ಷಣಾ ಸಚಿವನಾಗಿ ನನ್ನ ಕಾರ್ಯನಿರ್ವಹಣೆಯಿಂದ ಸಂತೃಪ್ತನಾಗಿದ್ದೇನೆ.
ಗೋವಾಕ್ಕೆ ಮರಳಿರುವುದರ ಬಗ್ಗೆ ನಿಮ್ಮ ಕುಟುಂಬದ ಅನಿಸಿಕೆಯೇನು?
ನನ್ನ ಕುಟುಂಬ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದೇನೋ ರಕ್ಷಣಾ ಸಚಿವನಾಗಿದ್ದೇನೋ ಎಂಬುದು ಅವರಿಗೆ ಮುಖ್ಯವಲ್ಲ. ಎಲ್ಲ ಜನಸಾಮಾನ್ಯರಂತೆ ಅವರು ಈಗಲೂ ಬಿಗುಮಾನವಿಲ್ಲದೆ ಓಡಾಡುತ್ತಾರೆ. ನನ್ನ ರಾಜಕೀಯ ನನ್ನ ವೈಯಕ್ತಿಕ ವಿಚಾರವಷ್ಟೇ ಆಗಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಒಬ್ಬ ಒಳ್ಳೆಯ ಮುಖ್ಯಮಂತ್ರಿಯಾಗುವುದಕ್ಕೆ ನಿಮ್ಮ ಮಂತ್ರವೇನು?
ಯಶಸ್ವೀ ರಾಜಕಾರಣಿಯಾಗಲು ಬುದ್ಧಿಮತ್ತೆ, ಆಡಳಿ ತಾನುಭವಗಳ ಜತೆಗೆ ಉತ್ತಮ ಮನುಷ್ಯನಾಗಿರುವುದೂ ಮುಖ್ಯ. ಮುಖ್ಯಮಂತ್ರಿಯಾದವನಿಗೆ ಇರಲೇಬೇಕಾದ ಒಂದು ಗುಣವೆಂದರೆ, ಸಹಾನುಭೂತಿ. ರಕ್ಷಣಾ ಸಚಿವನಾಗಿದ್ದಾಗ, ದಿನಕ್ಕೆ 300 ಇಮೈಲ್‌ಗಳು ಬರುತ್ತಿದ್ದರೂ ಅವೆಲ್ಲವನ್ನೂ ಓದಿ ಉತ್ತರಿಸುತ್ತಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಅನೇಕ ನಿವೃತ್ತ ಸೇನಾಧಿಕಾರಿಗಳು 20-30 ವರ್ಷಗಳ ಬಳಿಕ ಲಕ್ಷಾಂತರ ರೂ.ಗಳಲ್ಲಿ ಪೆನ್ಶನ್ ಬಾಕಿ ಪಡೆದರು. ಒಂದು ಪ್ರಕರಣ ನನಗಿನ್ನೂ ನೆನಪಿದೆ, 1971ರ ಯುದ್ಧದಲ್ಲಿ ಹುತಾತ್ಮರಾದ ಸೇನಾನಿಯೊಬ್ಬರ ಪತ್ನಿಗೆ ಬ್ಯಾಂಕ್ ತಡೆಹಿಡಿದು ನಿಲ್ಲಿಸಿದ್ದ 36 ಲಕ್ಷ ರೂ. ಪೆನ್ಶನ್ ಬಾಕಿ ಸಿಕ್ಕಿತು. ಅತ್ಯಂತ ಮುಖ್ಯವಾದದ್ದೆಂದರೆ, ಈ ಅಧಿಕಾರ ಕುರ್ಚಿಯ ಮಾಲಕ ನಾನಲ್ಲ ಎಂಬುದು ಸದಾ ನೆನಪಿನಲ್ಲಿರಬೇಕು. ಜನತೆ ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ, ಆದ್ದರಿಂದ ಈ ಅಧಿಕಾರ ನನಗೆ ಹೊರೆ ಅನ್ನಿಸುವುದಿಲ್ಲ. ಅಧಿಕಾರದ ಈ ಗದ್ದುಗೆ ಜನರಿಗೆ ಸೇರಿದ್ದು, ಹೀಗಾಗಿ ಉತ್ತಮ ಆಡಳಿತವನ್ನು ನಾನು ಅವರಿಗೆ ಒದಗಿಸಬೇಕು. ಇದು ನಾನು ಅನುಸರಿಸುವ ತಣ್ತೀ. ಯಾವಾಗ ಇದು ಸಾಧ್ಯವಾಗುವುದಿಲ್ಲವೋ ಆಗ ನಾನು ಮನೆಯ ಹಾದಿ ಹಿಡಿಯುತ್ತೇನೆ.
ಮನೋಹರ್ ಪಾರೀಕರ್ ಗೋವಾ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.