31 ವರ್ಷದ ಲಾರೆನ್ಸ್ ಬಿಷ್ಣೋಯ್ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್!
ಕಾನೂನು ಕಲಿತವನಿಂದಲೇ ಈಗ ಕಾನೂನು ಸುವ್ಯವಸ್ಥೆಗೆ ಸವಾಲು!
Team Udayavani, Oct 17, 2024, 7:50 AM IST
ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ದೇಶದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಈವರೆಗೆ ತಣ್ಣಗಿದ್ದ ಮುಂಬಯಿ ಭೂಗತಲೋಕ ಮತ್ತೆ ಸಕ್ರಿಯವಾಗಿದೆ. ಆದರೆ, ಇದಕ್ಕೆ ಕಾರಣವಾಗಿದ್ದು ದಾವೂದ್‌ನ “ಡಿ ಕಂಪೆನಿ’ಯಲ್ಲ, ಬದಲಿಗೆ “ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್’. ಉತ್ತರ ಭಾರತದಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್ ಇದೀಗ ಮುಂಬಯಿಗೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಭೂಗತದೊರೆ, ಪಾತಕಿ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಭೂಗತ ಚಟುವಟಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
1990ರ ದಶಕದಲ್ಲಿ ಇಡೀ ಮುಂಬಯಿಯನ್ನು ಭಯದಲ್ಲಿರಿಸಿದ್ದ ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನ ಚಟುವಟಿಕೆಗಳು ಕ್ಷೀಣವಾಗಿವೆ. ಮುಂಬಯಿ ಸರಣಿ ಬಾಂಬ್ ಸ್ಫೋಟ ಬಳಿಕ ದಾವೂದ್ ಇಬ್ರಾಹಿಂ ದೇಶಬಿಟ್ಟು ಪರಾರಿಯಾದ ಬಳಿಕ, ವಿದೇಶದಿಂದಲೇ ಇಲ್ಲಿನ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ವ್ಯವಸ್ಥೆಯು ಡಿ ಕಂಪೆನಿಯ ಭೂಗತ ಚಟುವಟಿಕೆಗಳನ್ನು ಬಹುತೇಕ ಶೂನ್ಯಕ್ಕೆ ಇಳಿಸಿತ್ತು. ಎಲ್ಲವೂ ನಿಯಂತ್ರಣದಲ್ಲಿದೆ ಎನ್ನುವಾಗಲೇ ಮೊನ್ನೆಯಷ್ಟೇ ನಡೆದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯಿಂದ ಮುಂಬೈ ನಗರ ಮತ್ತೆ ಬೆಚ್ಚಿ ಬಿದ್ದಿದೆ. ಮತ್ತೆ ಭೂಗತ ಚಟುವಟಿಕೆಗಳು ಮತ್ತೆ ಶುರುವಾಯಿತಾ ಎಂಬ ಅನುಮಾನಗಳು ಎದ್ದಿವೆ. ದಾವೂದ್ ಇಬ್ರಾಹಿಂ ಬಳಿಕ ತಣ್ಣಗಾಗಿದ್ದ ಮುಂಬಯಿ ಭೂಗತ ಜಗತ್ತಿಗೆ ಮತ್ತೂಬ್ಬ ಪಾತಕಿ ಲಾರೆನ್ಸ್ ಬಿಷ್ಣೋಯ್ ಪ್ರವೇಶ ಪಡೆದಿದ್ದಾನೆ!
ಯಾರಿದು ಲಾರೆನ್ಸ್ ಬಿಷ್ಣೋಯ್?
ಮೊದ ಮೊದಲು ಹರಿಯಾಣ, ಪಂಜಾಬ್‌ಗ ಸೀಮಿತವಾಗಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರು, ಪಂಜಾಬ್‌ನ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆಯ ಮೂಲಕ ಇಡೀ ದೇಶಾದ್ಯಂತ ಪರಿಚಿತವಾಯಿತು. 2010ರಿಂದ ಭೂಗತ ಚಟುವಟಿಕೆಗಳಲ್ಲಿ ತೊಡಗಿರುವ ಲಾರೆನ್ಸ್ ಬಿಷ್ಣೋಯ್ ಮೂಲ ಹೆಸರು ಸತ್ವಿಂದೇರ್ ಸಿಂಗ್. ಈತನಿಗೆ ಈಗ ಕೇವಲ 31 ವರ್ಷವಷ್ಟೇ. ಆದರೆ, ಆಗಲೇ ಆತನ ವಿರುದ್ಧ 24ಕ್ಕೂ ಹೆಚ್ಚಾ ಪ್ರಕರಣಗಳಿವೆ. ಸದ್ಯ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ತನ್ನ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾನೆ.
ವಿದ್ಯಾರ್ಥಿ ದೆಸೆಯಿಂದಲೇ ಭೂಗತ ಲೋಕದ ನಂಟು ಬೆಳೆಸಿಕೊಂಡ ಪಾತಕಿ
1993 ಫೆಬ್ರವರಿ 12ರಂದು ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ದತ್ತರನ್‌ವಾಲಿ ಹಳ್ಳಿಯ ಬಿಷ್ಣೋಯ್ ಸಮುದಾ ಯದ ಕೃಷಿ ಕುಟುಂಬದಲ್ಲಿ ಜನನ. ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಬಿಷ್ಣೋಯಿ ಸಮುದಾಯ ಹರಡಿಕೊಂಡಿದೆ.
ತಂದೆ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರು, ಬಳಿಕ ಕೆಲಸ ತೊರೆದು ಕೃಷಿಯಲ್ಲಿ ತೊಡಗಿ ಸಿಕೊಂಡಿದ್ದಾರೆ. (ದಾವೂದ್ ಇಬ್ರಾಹಿಂ ತಂದೆ ಕೂಡ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದರು). 12ನೇ ತರಗತಿ ಮುಗಿದ ಬಳಿಕ ಬಿಷ್ಣೋಯ್ 2010ರಲ್ಲಿ ಚಂಡಿಗಢಕ್ಕೆ ಬಂದು, ಪಂಜಾಬ್ ವಿವಿಯ ಡಿಎವಿ ಕಾಲೇಜ್‌ನಲ್ಲಿ ಪ್ರವೇಶ ಪಡೆಯುತ್ತಾನೆ. ವಿದ್ಯಾರ್ಥಿ ಸಂಘಟನೆಗಳ ರಾಜಕೀಯಲ್ಲಿ ಪಾಲ್ಗೊಂಡು, 2011-2012ರವರೆಗೆ ಪಂಜಾಬ್ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗುತ್ತಾನೆ. ಆದರೆ, ಈ ಅವಧಿಯಲ್ಲಿ ಆತ ಭೂಗತ ಚಟುವಟಿಕೆಗಳತ್ತ ವಾಲುತ್ತಾನೆ. ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಮೊದಲ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ರೌಡಿ ಗೋಲ್ಡಿ ಬ್ರಾರ್ ಜತೆಗೆ ಸಂಪರ್ಕ ಬೆಳೆಯುತ್ತದೆ. ಜತೆಗೆ, ಕಾನೂನು ಪದವಿ ಎಲ್‌ಎಲ್‌ಬಿಯನ್ನೂ ಪಡೆಯುತ್ತಾನೆ. ಈಗ ಅದೇ ಲಾಯರ್ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದಾನೆ!
ಬಿಷ್ಣೋಯ್ ಗ್ಯಾಂಗಲ್ಲಿ 700 ಶೂಟರ್ಸ್!
ವಿಶೇಷ ಎಂದರೆ, ಬಿಷ್ಣೋಯ್ ಇದುವರೆಗೆ ನೇರವಾಗಿ ಯಾವುದೇ ಕೊಲೆಯಲ್ಲೂ ಭಾಗಿಯಾಗಿಲ್ಲ! ಎಲ್ಲವನ್ನೂ ಆತ ತನ್ನ ಸಹಚರರಿಂದಲೇ ನಡೆಸುತ್ತಾನೆ. ಈ ಕಾರ್ಯಾಚರಣೆಯು ದಾವೂದ್ ಇಬ್ರಾಹಿಂ ನಡೆಸುತ್ತಿದ್ದ ಭೂಗತ ಚಟುವಟಿಕೆ ರೀತಿಯಲ್ಲೇ ಇದೆ ಎನ್ನುತ್ತಾರೆ ದಿಲ್ಲಿ ಪೊಲೀಸರು. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪ್ರಕಾರ, ಶಾರ್ಪ್ ಶೂಟರ್ಸ್ ಸೇರಿದಂತೆ ದೇಶಾದ್ಯಂತ ಸುಮಾರು 700 ಶೂಟರ್ಸ್ ಬಿಷ್ಣೋಯ್ ಗ್ಯಾಂಗ್‌ನಲ್ಲಿದ್ದಾರೆ. ಈ ಪೈಕಿ 300 ಶೂಟರ್ಸ್ ಪಂಜಾಬ್‌ನವರಿದ್ದಾರೆ. ಈತನಿಗೆ ಕುಖ್ಯಾತ ಪಾತಕಿಗಳಾದ ಗೋಲ್ಡಿ ಬ್ರಾರ್, ಸಚಿನ್ ಥಾಪಾ, ಅನ್ಮೋಲ್ ಬಿಷ್ಣೋಯ್(ಲಾರೆನ್ಸ್ ಸಹೋದರ), ವಿಕ್ರಮ್‌ಜಿತ್ ಸಿಂಗ್, ಕಾಲಾ ಜಥೇರಿ, ಕಾಲಾ ರಾಣಾ ಸೇರಿ ಮತ್ತಿತರು ಸಾಥ್ ನೀಡುತ್ತಾರೆ. ಪಂಜಾಬ್, ಹರಿಯಾಣ, ರಾಜಸ್ಥಾನ, ದಿಲ್ಲಿ, ಹಿಮಾಚಲ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಗ್ಯಾಂಗ್ ಹರಡಿದೆ. ವಿದೇಶದಲ್ಲೂ, ಅಂದರೆ ಕೆನಡಾದಲ್ಲಿ ಜಾಲ ವಿಸ್ತರಿಸಿದೆ.
ಜೈಲಿಂದಲೇ ಭೂಗತ ಕಾರ್ಯಾಚರಣೆ!
ದಿಲ್ಲಿಯ ತಿಹಾರ್ ಇರಲಿ ಇಲ್ಲವೇ ಗುಜರಾತ್‌ನ ಸಬರಮತಿ ಜೈಲೇ ಇರಲಿ. ಬಿಷ್ಣೋಯ್ ಭೂಗತ ಚಟುವಟಿಕೆಗೆ ಯಾವುದೇ ಅಡ್ಡಿಯಾಗಿಲ್ಲ. ಮೊಬೈಲ್ ಫೋನ್ ಮೂಲಕವೇ ಇಡೀ ಗ್ಯಾಂಗ್ ನಿಯಂತ್ರಿಸುತ್ತಾನೆ ಮತ್ತು ಸುಲಿಗೆ, ಹತ್ಯೆಗೆ ಸ್ಕೆಚ್ ಹಾಗುತ್ತಾನೆ ಬಿಷ್ಣೋಯ್. ಈ ಕಾರಣಕ್ಕೆ ಆತನನ್ನು ಜೈಲಿನಿಂದ ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಈತನಿಗೆ ಪಾಕಿಸ್ಥಾನ ಗ್ಯಾಂಗ್‌ಸ್ಟರ್‌ಗಳ ಸಂಪರ್ಕವೂ ಇದೆ. ತನ್ನ ಕಾರ್ಯಾಚರಣೆಗೆ ಮೊಬೈಲ್ ಮಾತ್ರವಲ್ಲದೆ, ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್‌ಗ ಳನ್ನು ಗ್ಯಾಂಗ್ ಸದಸ್ಯರ ಜತೆಗಿನ ಸಂವಹನಕ್ಕೆ ಬಳಸುತ್ತಾನೆ. ಬಡ ತರುಣರನ್ನೇ ಗ್ಯಾಂಗ್‌ಗೆ ಸೇರಿಸಿಕೊಳ್ಳಲಾಗುತ್ತದೆ. ವಿಶೇಷ ಎಂದರೆ ಇವರಿಗೆ ತಾವು ಯಾರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ! ಟಾರ್ಗೆಟ್ ನೀಡಿ, ಅವರಿಂದ ಹತ್ಯೆ ಮಾಡಿಸಲಾಗುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ದಾವೂದ್ ರೀತಿಯಲ್ಲಿ ಬಿಷ್ಣೋಯ್ ಕೂಡ ಕಾರ್ಪೊರೇಟ್ ಶೈಲಿಯಲ್ಲಿ ಭೂಗತ ಚಟುವಟಿಕೆ ನಡೆಸುತ್ತಾನೆ.
ಸಲ್ಮಾನ್ ಖಾನ್ ಬೆಂಬಿಡದೆ ಕಾಡುತ್ತಿರುವ “ಬಿಷ್ಣೋಯ್’
ಕೃಷ್ಣ ಮೃಗ ಮತ್ತು ಬಿಷ್ಣೋಯ್ ಸಮುದಾಯಕ್ಕೆ ಅವಿನಾಭಾವ ಸಂಬಂಧವಿದೆ, ಆಧ್ಯಾತ್ಮಿಕ ಹಿನ್ನೆಲೆ ಯಿದೆ. ಇಂಥ ಕೃಷ್ಣ ಮೃಗ ವನ್ನು ಕೊಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್‌ಗೆ 2018 ರಲ್ಲಿ ರಾಜಸ್ಥಾನದ ಸ್ಥಳೀಯ ಕೋರ್ಟ್ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸಲ್ಮಾನ್ ಸದ್ಯ ಜಾಮೀನು ಮೇಲೆ ಹೊರಗಿದ್ದಾರೆ. ಕೃಷ್ಣ ಮೃಗ ಕೊಂದ ಕಾರಣಕ್ಕೆ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ವಿರುದ್ಧ ಹಗೆ ಸಾಧಿಸುತ್ತಿದೆ. ಕೊಂದೇ ಹಾಕುವ ಬೆದರಿಕೆ ಹಾಕಿದೆ. ಅಲ್ಲದೇ, ಸಲ್ಮಾನ್ ಜತೆಗಿದ್ದವರಿಗೆ ಬಾಬಾ ಸಿದ್ದಿಕಿ ಗಾದ ಗತಿ ಕಾಣಿಸುವುದಾಗಿಯೂ ಎಚ್ಚರಿಸಿದೆ.
ಬಿಷ್ಣೋಯ್ ಗ್ಯಾಂಗ್ ಬಳಕೆ: ಕೆನಡಾ ಆರೋಪ
ಕೆನಡಾದಲ್ಲಿ ಸಂಘಟಿತ ಅಪರಾಧ ನಡೆಸುವುದಕ್ಕಾಗಿ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಬಿಷ್ಣೋಯ್ ಗ್ಯಾಂಗ್ ಬಳಸಿಕೊಳ್ಳುತ್ತಿದ್ದಾರೆಂದು ಕೆನಡಾ ಒಟ್ಟಾವೋ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಕೆನಡಾದಲ್ಲಿರುವ ಖಲಿಸ್ಥಾನಿ ನಾಯಕರನ್ನು ಹತ್ಯೆಗೆ ಈ ಗ್ಯಾಂಗ್ ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಕೂಡಇದೇ ಆರೋಪವನ್ನು ಮಾಡಿದ್ದಾರೆ. ವಾಷಿಂಗ್ಟನ್ ಪೋಸ್ಟ್‌ನಲ್ಲಿ ಪ್ರಕಟವಾದ ವರದಿಯಲ್ಲೂ ಈ ಮಾಹಿತಿ ಆರೋಪವಿದೆ.
ಪ್ರಮುಖ ಪಾತಕ ಕೃತ್ಯಗಳು
2013ರಿಂದಲೇ ಬಿಷ್ಣೋಯ್ ಗ್ಯಾಂಗ್ ಪಂಜಾಬ್, ಹರಿಯಾಣದಲ್ಲಿ ಕೊಲೆ ಯತ್ನ, ಸುಲಿಗೆ, ಮಾದಕ ದ್ರವ್ಯ ಕಳ್ಳ ಸಾಗಣೆ ಇತ್ಯಾದಿ ಅಪರಾಧದಲ್ಲಿ ತೊಡಗಿಸಿಕೊಂಡಿದೆ.
2018ರಲ್ಲಿ ಬಿಷ್ಣೋಯ್ ಸಾಥಿ ಸಂಪತ್ ನೆಹ್ರಾ ಮುಂಬಯಿಯ ಸಲ್ಮಾನ್ ಖಾನ್ ಮುಂದೆ ದಾಳಿ ನಡೆಸಿದ. ಜತೆಗೆ, ಸಲ್ಮಾನ್ ಖಾನ್ ನನ್ನು ಜೋಧಪುರದಲ್ಲಿ ಕೊಲ್ಲುವೆ ಎಂದು ಸ್ವತಃ ಲಾರೆನ್ಸ್ ಬಿಷ್ಣೋಯ್ ಧಮ್ಕಿ ಹಾಕಿದ್ದ.
2022 ಮೇ 29. ಪಂಜಾಬ್ ಗಾಯಕ ಸಿಧು ಮೂಸೆ ವಾಲ ಹತ್ಯೆಯನ್ನು ಗೋಲ್ಡಿ ಬ್ರಾರ್ ಗ್ಯಾಂಗ್ ಬಿಷ್ಣೋಯಿ ಗ್ಯಾಂಗ್ ಜತೆ ಸೇರಿ ನಡೆಸಿತು.
2023ರಲ್ಲಿ ಕೆನಡಾದಲ್ಲಿರುವ ಸಲ್ಮಾನ್ ಸಂಗಡಿಗ ಜಿಪ್ಪಿ ಗ್ರೇವಾಲ್ ಮನೆ ಹೊರೆಗೆ ಗುಂಡಿನ ದಾಳಿ.
2023 ಸೆಪ್ಟೆಂಬರ್ 21. ಖಲಿಸ್ಥಾನಿ ಪ್ರತ್ಯೇಕತಾ ವಾದಿ ಸುಖೂಲ್ ಸಿಂಗ್ ಗಿಲ್ ಅಲಿಯಾಸ್ ಸುಖಾ ಡಂಕಿ ಹತ್ಯೆ.
2023 ಡಿಸೆಂಬರ್ 5. ರಾಜಸ್ಥಾನದ ಕರಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗ್‌ಮೇಡಿ ಗುಂಡಿಟ್ಟು ಹತ್ಯೆ.
2024 ಸೆಪ್ಟಂಬರ್ 1.
ಹಣ ನೀಡಲು ಒಪ್ಪದ ಆಫ್ಘನ್ ಮೂಲದ ಜಿಮ್ ಓನರ್, ದಿಲ್ಲಿಯ ನಾದಿಶ್ ಶಾನನ್ನು ಗಂಡಿಟ್ಟು ಕೊಂದ ಬಿಷ್ಣೋಯ್ ಗ್ಯಾಂಗ್.
2024 ಅಕ್ಟೋಬರ್ 12. ಸಲ್ಮಾನ್ ಜತೆ ಸಖ್ಯ ಹೊಂದಿದ್ದಾರೆಂಬ ಕಾರಣಕ್ಕೆ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ.
-ಮಲ್ಲಿಕಾರ್ಜುನ ತಿಪ್ಪಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.