ವನ್ಯಜೀವಿಗಳ ಒಡನಾಟ; ಪುರ ಪ್ರವೇಶ’ದ ಕುರಿತು ಸಮಗ್ರ ಚಿತ್ರಣ ಇಲ್ಲಿದೆ…
Team Udayavani, Sep 19, 2022, 6:30 AM IST
ಮಾನವನ ಒತ್ತುವರಿ ಲಾಲಸೆ ಹೆಚ್ಚಿದ ಹಾಗೆಯೇ ರಾಜ್ಯದಲ್ಲಿ ವನ್ಯಜೀವಿಗಳು ಎಗ್ಗಿಲ್ಲದೆ ನಾಡೊಳಗೆ ಪ್ರವೇಶ ಪಡೆಯುತ್ತಿವೆ. ರಾಜ್ಯದಲ್ಲಿ ಕಾಡಾನೆ, ಚಿರತೆ ಹಾಗೂ ಹುಲಿಗಳು ನಾಡಿಗೆ ಪ್ರವೇಶಿಸಿ ದಾಳಿ ನಡೆಸುತ್ತಿರುವ ಘಟನೆಗಳು ದಿನವೂ ವರದಿಯಾಗುತ್ತಿವೆ. ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ ವನ್ಯಜೀವಿಗಳ “ಪುರ ಪ್ರವೇಶ’ದ ಕುರಿತು ಸಮಗ್ರ ಚಿತ್ರಣ ಇಲ್ಲಿದೆ.
ದಕ್ಷಿಣ ಕನ್ನಡ
ಚಿರತೆ, ಆನೆ ದಾಳಿ ನಿರಂತರ
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸುವುದು, ಮನೆಗೆ ಬಂದು ನಾಯಿ, ದನಗಳ ಮೇಲೆ ದಾಳಿ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆೆ. ಹಂದಿ ಬೇಟೆಗೆ ಇಟ್ಟ ಉರುಳಿಗೆ ಬಿದ್ದ ಚಿರತೆಗಳನ್ನು ಅರಣ್ಯ ಇಲಾಖೆಯವರು ಕೊಂಡೊಯ್ದ ಘಟನೆ ವರದಿಯಾಗಿದೆ. ಕಾಡಂಚಿನ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಚಾರ್ಮಾಡಿ, ದಿಡುಪೆ, ತೋಟತ್ತಡಿ, ನೆರಿಯಾ, ಕಳಂಜ, ಶಿಶಿಲ ಈ ಭಾಗದಲ್ಲಿ ವಾರಕ್ಕೆರಡು ಬಾರಿಯಾದರೂ ಆನೆಗಳಿಂದ ದಾಳಿ ನಡೆಯುತ್ತಿದೆ. ತೆಂಗು, ಅಡಿಕೆ, ಬಾಳೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ವಾಗುತ್ತಿದೆ. ಆನೆ ಕಾರಿಡಾರ್ ನಿರ್ಮಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈ ತನಕ ಈಡೇರಿಲ್ಲ.
ಅಷ್ಟೇ ಅಲ್ಲ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ, ನಗರ ಕೇಂದ್ರದಿಂದ ಹೊರ ವಲಯದ ಮರೋಳಿಯಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆ ಕಾಡುಕೋಣ ಜನವಸತಿ ಪ್ರದೇಶದಲ್ಲಿ ಓಡಾಡಿ ಭೀತಿ ಸೃಷ್ಟಿಸಿತ್ತು.
ಬೆಳಗಾವಿ
ಕೈಗೆಟುಕದ ಚಿರತೆ!
ಕೆಲವು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯನ್ನು ವನ್ಯಪ್ರಾಣಿಗಳು ಬೆಂಬಿಡದೆ ಕಾಡುತ್ತಿವೆ. ತಿಂಗಳ ಅವ ಧಿಯಲ್ಲಿ ಜಿಲ್ಲೆಯ ಹಲವೆಡೆ ಚಿರತೆ, ಕತ್ತೆ ಕಿರುಬಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ. ಬೆಳಗಾವಿ ನಗರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ ಇನ್ನೂ ಸೆರೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಕೈ ಚೆಲ್ಲಿ ಸುಮ್ಮನೆ ಕೂತುಬಿಟ್ಟಿದೆ. ಕ್ಲಬ್ ರಸ್ತೆಯ ಗಾಲ್ # ಕೋರ್ಸ್ ಪೊದೆಯೊಳಗೆ ಅವಿತು ಕುಳಿತಿರುವ ಚಿರತೆ ಶೋಧಕ್ಕೆ 23 ಟ್ರ್ಯಾಪ್ ಕೆಮರಾ, 9 ಬೋನು, ಎರಡು ಗಂಡಾನೆ, ಬೇಟೆ ನಾಯಿಗಳು, ಹಂದಿ ಹಿಡಿಯುವ ಬಲೆಗಳು, ಜೆಸಿಬಿ, 8 ಜನ ಅರಿವಳಿಕೆ ನೀಡುವ ಶಾರ್ಪ್ ಶೂಟರ್‌ಗಳು ಸೇರಿ 140ಕ್ಕೂ ಹೆಚ್ಚು ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಇನ್ನೂವರೆಗೆ ಚಿರತೆ ಸೆರೆ ಸಿಕ್ಕಿಲ್ಲ. ಜಿಲ್ಲೆಯ ಹಲವೆಡೆ ಚಿರತೆಗಳು ಕಾಣಸಿಗುವುದು ಸಾಮಾನ್ಯ ಎನಿಸಿದೆ. ಒಂದು ತಿಂಗಳ ಅವಧಿಯಲ್ಲಿ ಮೂಡಲಗಿ ತಾಲೂಕಿನ ಧರ್ಮಟ್ಟಿ, ಸವದತ್ತಿ ತಾಲೂಕು, ಚಿಕ್ಕೋಡಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಚಿರತೆ ಕಾಣಿಸಿಕೊಂಡಿದ್ದವು.
ಶಿವಮೊಗ್ಗ
ಕಾಡಾನೆ, ಕಾಡೆಮ್ಮೆ, ಕಾಡು ಕೋಣ, ಚಿರತೆಗಳ ಕಾಟ
ಶಿವಮೊಗ್ಗದಲ್ಲಿ ಹೆಚ್ಚಾಗಿ ಸಮಸ್ಯೆಯಾಗುತ್ತಿರುವುದು ಕಾಡಾನೆಗಳಿಂದ. ಆಗುಂಬೆ ಭಾಗದ ಮಲ್ಲಂದೂರು ವ್ಯಾಪ್ತಿ, ಶಿವಮೊಗ್ಗದ ಮಲೇಶಂಕರ, ಶೆಟ್ಟಿಹಳ್ಳಿ, ಗಾಜನೂರು, ಪುರದಾಳು, ಉಂಬ್ಳೆಬೈಲು ಭಾಗದ ಹತ್ತಾರು ಗ್ರಾಮಗಳಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ತಿಂದು ನಾಶ ಮಾಡುತ್ತಿವೆ. ಆಗುಂಬೆ ಭಾಗದಲ್ಲಿ ಒಂಟಿ ಸಲಗ ಹಿಡಿಯಲು ದಶಕದಿಂದ ಸಾಧ್ಯವಾಗಿಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿರುವ ಕಾಡಾನೆಗಳು ಆಗಾಗ್ಗೆ ಗ್ರಾಮಗಳ ಕಡೆ ನುಗ್ಗುತ್ತವೆ. ಹೊಸನಗರದ ಬೆಳ್ಳೂರು ಭಾಗದಲ್ಲೂ ಆನೆ ಕಾಣಿಸಿಕೊಂಡಿತ್ತು. ಈಚೆಗೆ ಕುವೆಂಪು ವಿವಿ ಆವರಣಕ್ಕೂ ಆನೆ ಬಂದಿತ್ತು. ಇನ್ನು ಸಾಗರ, ಹೊಸನಗರ ತಾಲೂಕಿನಲ್ಲಿ ಕಾಡೆಮ್ಮೆ, ಕಾಡುಕೋಣಗಳ ಉಪಟಳ ನಿರಂತರವಾಗಿದೆ. ಉಂಬ್ಳೆಬೈಲು, ಮಲೆಶಂಕರ ಭಾಗದಲ್ಲಿ ಚಿರತೆಗಳು ಕಾಣಿಸಿಕೊಂಡು ದನಕರುಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.
ಚಿಕ್ಕಮಗಳೂರು
ವಿದ್ಯುತ್ ಸ್ಪರ್ಶಕ್ಕೆ 15 ಆನೆಗಳ ಸಾವು
ಕಾಫಿನಾಡಿನಲ್ಲಿ ಕಾಡುಪ್ರಾಣಿ ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಕಾಡುಪ್ರಾಣಿಗಳು ಕಾಫಿತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಲ್ಲದೆ, ಪ್ರಾಣಹಾನಿಯೂ ಸಂಭವಿಸಿದೆ. ಕಳೆದ 10 ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಅಂದಾಜು 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದೇ ವೇಳೆ ವಿದ್ಯುತ್ ಅವಘಡಕ್ಕೆ ಸಿಲುಕಿ ಅಂದಾಜು 10ರಿಂದ 15 ಆನೆಗಳು ಮೃತಪಟ್ಟಿವೆ. ಇತ್ತೀಚೆಗಷ್ಟೇ ಕೆಂಜಿಗೆ ಗ್ರಾಮದ ಹಾರಗೋಡು ಆನಂದ ದೇವಾಡಿಗ ಎಂಬವರು ಆನೆದಾಳಿಗೆ ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಫಿತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು, ಮೂರು ತಿಂಗಳ ಹಿಂದಷ್ಟೇ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆನೆ ತುಳಿತದಿಂದ ಮೃತಪಟ್ಟಿದ್ದಾರೆ. 2021ರಲ್ಲಿ ಕಾಡಾನೆಯನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಆಲ್ದೂರಿನ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಡಿಗೆ ತೆರಳಿದ್ದ ಹಸುವನ್ನು ಹುಡುಕಲು ಹೋದ ವ್ಯಕ್ತಿ ಆನೆ ತುಳಿತದಿಂದ ಮೃತಪಟ್ಟ ಘಟನೆ ಇತ್ತೀಚೆಗೆ ವರದಿಯಾಗಿದೆ. ಹಾಗೆಯೇ, ಚಿರತೆ, ಹುಲಿಗಳ ಕಾಟವೂ ಇದೆ.
ಉಡುಪಿ
ಸಾಕುಪ್ರಾಣಿಗಳು ಟಾರ್ಗೆಟ್
ಜಿಲ್ಲೆಯ ನಗರ, ಹೊರವಲಯದಲ್ಲಿ ಚಿರತೆ ಹಾವಳಿ ಇದ್ದರೆ, ಗ್ರಾಮೀಣ ಪ್ರದೇಶದಲ್ಲಿ ಕಾಡುಕೋಣ, ಕಾಡೆಮ್ಮೆ, ಮಂಗ ಮತ್ತು ಕಾಡುಹಂದಿಗಳಿಂದ ನಿರಂತರ ಬೆಳೆಹಾನಿಯಾಗುತ್ತಿದೆ. ಚಿರತೆಗಳು ಮನೆಯಂಗಳಕ್ಕೆ ನುಗ್ಗಿ ಸಾಕು ಕೋಳಿ, ನಾಯಿಗಳ ಮೇಲೆ ದಾಳಿ ಮಾಡುತ್ತಿವೆ. ಕುಂದಾಪುರ ತಾಲೂಕಿನ ಮಾಲಾಡಿ ಅರೆಬೈಲು ತೋಳಾರ್ ಮಾವಿನ ತೋಪಿನಲ್ಲಿ ಆಗಾಗ್ಗೆ ಚಿರತೆ ಸಂಚರಿಸುತ್ತಿರುತ್ತವೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ 2018ರಿಂದ ಈಚೆಗೆ 5 ಚಿರತೆಗಳನ್ನು ಹಿಡಿದು ಕಾಡಿಗೆ ಬಿಟ್ಟಿದೆ. ಕಾರ್ಕಳ ತಾಲೂಕಿನಲ್ಲಿ ಕಾಡುಕೋಣ, ಕಾಡೆಮ್ಮೆ, ಚಿರತೆ ದಾಳಿ ಹೆಚ್ಚಿದೆ. ಬೈಲೂರಿನಲ್ಲಿ ಇತ್ತೀಚೆಗೆ ಒಂದು ಕಾಡೆಮ್ಮೆಯನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಕಾಡು ಹಂದಿಯಿಂದ ಭತ್ತ ಮೊದಲಾದ ಬೆಳೆ ಹಾನಿಯಾದರೆ ಮಂಗಗಳಿಂದ ತೆಂಗು, ಬಾಳೆ, ಅಡಿಕೆ ಸಹಿತ ತೋಟಗಾರಿಕೆ ಕೃಷಿಗೆ ಹೆಚ್ಚು ಹಾನಿಯಾಗುತ್ತಿದೆ.
ಹಾಸನ
ಆನೆಗಳದ್ದೇ ಹೆಚ್ಚು ದಾಳಿ
ಕಾಡಾನೆಗಳು ಹಾಗೂ ಚಿರತೆಗಳ ಉಪಟಳದಿಂದ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಕಾಡಾನೆಗಳು ಹಾಡಹಗಲೇ ಮನೆ ಬಾಗಿಲಿಗೇ ಬಂದು ನಿಲ್ಲುತ್ತಿವೆ. ಆಲೂರು, ಅರಕಲಗೂಡು, ಸಕಲೇಶಪುರ, ಬೇಲೂರು ತಾಲೂಕಿನಲ್ಲಿ 80 ಕಾಡಾನೆಗಳ ಹಿಂಡು ಸಂಚರಿಸುತ್ತಾ ಕಾಫಿ, ಬಾಳೆ ತೋಟಗಳಲ್ಲಿ ಬೀಡು ಬಿಡುತ್ತಿವೆ. ಭತ್ತದ ಗದ್ದೆಗಳನ್ನು ಹಾಳು ಮಾಡುತ್ತಿವೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಕಾಡಾನೆಗಳ ದಾಳಿಯಿಂದ ಮೂವರು ಜೀವ ಕಳೆದುಕೊಂಡಿದ್ದಾರೆ. ಪ್ರತೀ ವರ್ಷ ಸರಾಸರಿ 2 ಕೋಟಿ ರೂ. ಬೆಳೆ ಪರಿಹಾರವನ್ನು ಇಲಾಖೆ ನೀಡುತ್ತಾ ಬಂದಿದೆ. 2000ದಿಂದ ಈಚೆಗೆ ಕಾಡಾನೆಗಳ ದಾಳಿಗೆ ಹಾಸನ ಜಿಲ್ಲೆಯಲ್ಲಿ 67 ಜನ ಬಲಿಯಾಗಿದ್ದಾರೆ. 74 ಆನೆಗಳನ್ನು ಹಿಡಿದು ಅಭಯಾರಣ್ಯಗಳಿಗೆ ಸಾಗಿಸಲಾಗಿದೆ. ಆದರೂ ಇನ್ನೂ 80 ಆನೆಗಳು ರೈತರ ಹಿಡುವಳಿ ಪ್ರದೇಶಗಳಿಗೆ ನುಗ್ಗಿ ಜೀವ ಮತ್ತು ಬೆಳೆ ಹಾನಿ ಮಾಡುತ್ತಿವೆ.
ರಾಮನಗರ
ಆನೆಗಳ ಕಾಟ ಹೆಚ್ಚು
ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರದಲ್ಲೂ ಆನೆಗಳ ಕಾಟ ಹೆಚ್ಚಾಗಿಯೇ ಇದೆ. ಕಾಡಂಚಿನ ಗ್ರಾಮಗಳಲ್ಲಿ ಇವುಗಳ ಕಾಟ ಹೆಚ್ಚಾಗಿದೆ. ಚನ್ನಪಟ್ಟಣ, ಕನಕಪುರ ಗಡಿ ಗ್ರಾಮಗಳಲ್ಲಿ 30ಕ್ಕೂ ಹೆಚ್ಚು ಆನೆಗಳು ಕಾಟ ಕೊಡುತ್ತಿವೆ. ಹೊಲದಲ್ಲಿ ಫಸಲು ಬೆಳೆದಿರುವ ರೈತರು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುವ ಘಟನೆಗಳೂ ನಡೆದಿವೆ.
ದಾವಣಗೆರೆ
ಮಹಿಳೆ ಸಾವು
ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಕಮಲಾಬಾಯಿ ಎಂಬ ಮಹಿಳೆ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಇಲ್ಲಿನ ಫಲವನಹಳ್ಳಿ ಎಂಬಲ್ಲಿ ಹೊಲಕ್ಕೆ ಹೋಗಿದ್ದ ಮಹಿಳೆ ಮೇಲೆ ಚಿರತೆ ಎಗರಿತ್ತು. ಸದ್ಯ ಈ ಚಿರತೆ ಸೆರೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ಕೊಪ್ಪಳ ಜನತೆಗೆ ಚಿರತೆ, ಕರಡಿ ಭಯ
ಜಿಲ್ಲೆಯ ಅಂಜನಾದ್ರಿ, ಆನೆಗೊಂದಿ ಸಮೀಪದ ಬೆಟ್ಟಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸುತ್ತಿವೆ. ಕಳೆದ ವರ್ಷ ಚಿರತೆಯ ಮರಿಯೊಂದನ್ನು ಅಂಜನಾದ್ರಿಯ ಸಮೀಪ ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಇದಲ್ಲದೇ ಕರಡಿಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿವೆ. ಕೊಪ್ಪಳ ತಾಲೂಕಿನ ಚಾಮಲಾಪುರ ಸಮೀಪದ ಗುಡ್ಡದ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿಯ ವೇಳೆ ಕರಡಿಗಳು ಹೊಲಗಳಲ್ಲಿ ಸುತ್ತಾಡುತ್ತವೆ. ಫಸಲು ಕಾಯಲು ಹೊಲಕ್ಕೆ ತೆರಳುವ ರೈತರ ಮೇಲೆ ದಾಳಿ ಮಾಡುತ್ತಿವೆ. ರೈತರ ಮೇಲೆ ಕರಡಿಗಳು ದಾಳಿ ಮಾಡಿದ ಘಟನೆ ಹಲವು ಬಾರಿ ನಡೆದಿವೆ. ಅರಣ್ಯ ಇಲಾಖೆ ಅಧಿ ಕಾರಿಗಳು, ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಕರಡಿಗಳ ಹಿಂಡನ್ನು ಹಿಡಿದು ಬೇರೆಡೆ ಸಾಗಿಸುತ್ತಿಲ್ಲ ಎನ್ನುವ ರೈತರ ಆರೋಪ ನಿಂತಿಲ್ಲ.
ಮೈಸೂರು
ಕಾಡಾನೆಗಳು, ಹುಲಿ ಕಾಟ
ರಾಜ್ಯದ ಎರಡು ಪ್ರಮುಖ ಅಭಯಾರಣ್ಯಗಳನ್ನು ತನ್ನ ಬಳಿಯೇ ಹೊಂದಿರುವ ಮೈಸೂರು ಜಿಲ್ಲೆಯಲ್ಲೂ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚು. ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದಾಗಿ ರೈತರು ರೋಸಿ ಹೋಗಿದ್ದಾರೆ. ಬೆಳೆದ ಬೆಳೆಯನ್ನು ನಾಶ ಮಾಡುತ್ತಿವೆ ಎಂಬುದು ಇವರ ನೋವು. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದೂ ಮನವಿ ಮಾಡಿದ್ದಾರೆ.
ಈ ಮಧ್ಯೆ ಕಳೆದ ಜನವರಿಯಲ್ಲಿ ಎಚ್.ಡಿ.ತಾಲೂಕು ಕೋತನಹಳ್ಳಿಯಲ್ಲಿ ಹುಲಿ ದಾಳಿ ನಡೆಸಿ ರೈತರೊಬ್ಬರು ಬಲಿಯಾಗಿದ್ದರು. ಹಸು ಮೇಯಿಸಲು ಹೋಗಿದ್ದಾಗ ಈ ಘಟನೆ ನಡೆದಿತ್ತು. ಹುಣಸೂರಿನಲ್ಲಿ ಚಿರತೆ ಮತ್ತು ಹುಲಿಗಳ ದಾಳಿ ನಿರಂತರ ಎನಿಸಿದೆ. ಈಚೆಗೆ ಹಾಡಹಗಲೇ ಕಪ್ಪನಕಟ್ಟೆ ಹಾಡಿಗೆ ನುಗ್ಗಿದ ಚಿರತೆ ಮೇಕೆಯನ್ನು ಕೊಂದು ಹಾಕಿದೆ. ಭಯಾನಕ ಘಟನೆಯೊಂದರಲ್ಲಿ, ನಂಜನಗೂಡು ತಾಲೂಕಿನ ಹಾದನೂರ ಒಡೆಯನಪುರ ಗ್ರಾಮದಲ್ಲಿ ತಂಬಾಕು ಬೆಳೆ ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿಯೊಂದು ದನಗಾಹಿಯೊಬ್ಬರನ್ನು ಕೊಂದು ಹಾಕಿದೆ. ಈ ಘಟನೆಯಿಂದ ನಾಗರಿಕರು ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದರು.
ಚಾಮರಾಜನಗರ
ಕಾಡಂಚಿನ ಊರಲ್ಲಿ ನಿತ್ಯಭಯ
ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾಗೂ ಹುಲಿಗಳ ದಾಳಿ ಆಗಾಗ ನಡೆಯುತ್ತಿರುತ್ತದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ, ಆನೆಗಳ ಉಪಟಳ ನಿರಂತರವಾಗಿ ನಡೆಯುತ್ತಿದ್ದು, ರೈತರ ಫಸಲು ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇವೆ. ಎರಡು ತಿಂಗಳ ಹಿಂದೆ ಶಿವಪುರ ಗ್ರಾಮದಲ್ಲಿ ರೈತನೊಬ್ಬನನ್ನು ಆನೆ ತುಳಿದು ಸಾಯಿಸಿತ್ತು. ಹುಲಿ ಮತ್ತು ಚಿರತೆ ಹಾವಳಿಯೂ ಸಹ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ರೀತಿಯಲ್ಲಿದೆ. ಗೋಪಾಲಪುರ ಗ್ರಾಮದಲ್ಲಿ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿತ್ತು. ಮಡಹಳ್ಳಿ ಗ್ರಾಮದ ಸುತ್ತಮುತ್ತಲು ಹುಲಿ, ಚಿರತೆ ಉಪಟಳ ಹೆಚ್ಚಿನ ರೀತಿಯಲ್ಲಿದ್ದು, ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ತಿಂದು ಹಾಕಿದೆ. ಬಾಳೆ, ಕಬ್ಬು ಮತ್ತಿತರ ಬೆಳೆಗಳು ಆನೆಗಳ ದಾಳಿಗೆ ನಾಶವಾಗುತ್ತವೆ. ಉಮ್ಮತ್ತೂರು ಗ್ರಾಮದ ಹೊರ ವಲಯದಲ್ಲಿ ಗುಡ್ಡಗಾಡು ಪ್ರದೇಶವಿದ್ದು, ಕೃಷ್ಣ ಮೃಗ, ನವಿಲುಗಳಿವೆ. ಇವು ಜಮೀನುಗಳಿಗೆ ನುಗ್ಗಿ ಫಸಲನ್ನು ನಾಶ ಮಾಡುತ್ತವೆ.
ವಿಜಯಪುರ
ಚಿರತೆ, ಮೊಸಳೆ, ಹೈನಾ ಹಾವಳಿ
ಅರಣ್ಯ ಪ್ರದೇಶವೇ ಗೌಣವಾಗಿರುವ ವಿಜಯಪುರ ಜಿಲ್ಲೆಯಲ್ಲೂ ವನ್ಯಜೀವಿಗಳ ಹಾವಳಿ ಕಾಣಿಸಿಕೊಂಡಿದೆ. ಒಂದೂವರೆ ವರ್ಷದ ಹಿಂದೆ ಬಬಲೇಶ್ವರ ತಾಲೂಕಿನಲ್ಲಿ ಹಾವಳಿ ಮಾಡುತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಈಗ ಮತ್ತೆ ಚಿರತೆ ಹಾವಳಿ ಕಾಣಿಸಿಕೊಂಡಿದೆ. ಜಿಲ್ಲೆಯ ಕೃಷ್ಣಾ-ಭೀಮಾ ನದಿಗಳ ತೀರದಲ್ಲಿ ಬಹುತೇಕ ರೈತರು ಕಬ್ಬು ಬೆಳೆಯುತ್ತಿದ್ದು, ಕಬ್ಬಿನ ಗದ್ದೆಗಳಲ್ಲಿ ಮೊಸಳೆ ಹಾವಳಿ ಹೆಚ್ಚಿದೆ. ಮಾನವ ಜೀವಕ್ಕೂ ಅಪಾಯ ತಂದೊಡ್ಡಿರುವ ಮೊಸಳೆ, ಹಲವರನ್ನು ಬಲಿ ಪಡೆದಿವೆ. ಬಬಲೇಶ್ವರ ತಾಲೂಕಿನಲ್ಲಿ ಮೊಸಳೆ ಮಾತ್ರವಲ್ಲ ಚಿರತೆ, ಹೈನಾ ಹೀಗೆ ವಿವಿಧ ವನ್ಯಜೀವಿಗಳು ವಲಸೆ ಬಂದು ಆಶ್ರಯ ಪಡೆಯುತ್ತಿವೆ. ಜಿಲ್ಲೆಯ ಕೆಲವೆಡೆ ಚಿರತೆ ಹಾವಳಿ ಜತೆಗೆ, ಈಚೆಗೆ ಈ ಪ್ರದೇಶದಲ್ಲಿ ಹೈನಾ ಹಾವಳಿಯೂ ಹೆಚ್ಚಿದ್ದು ರೈತರು ಸಾಕಿದ ನಾಯಿ, ಆಕಳು, ಎಮ್ಮೆ, ಕುರಿ, ಕೋಳಿಗಳನ್ನು ಹೊತ್ತೂಯ್ಯುತ್ತಿದೆ.
ಬಾಗಲಕೋಟೆ
ಮೊಸಳೆಗಳ ಕಾಟ
ಮೂರು ನದಿಗಳು, 236 ಕೆರೆಗಳು, ಅಪಾರ ನೈಸರ್ಗಿಕ ಸಂಪತ್ತು ಹೀಗೆ ಹಲವು ವಿಶೇಷತೆ ಹೊಂದಿರುವ ಜಿಲ್ಲೆಯಲ್ಲಿ ಮೊಸಳೆ ಹಾವಳಿ ಮಾತ್ರ ನಿರಂತರವಾಗಿದೆ. ಜಿಲ್ಲೆಯ ಘಟಪ್ರಭಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಮೊಸಳೆ ಹಾವಳಿ ಹೆಚ್ಚು. ಅದರಲ್ಲೂ ಮುಧೋಳ, ಬೀಳಗಿ, ಜಮಖಂಡಿ ಹಾಗೂ ಬಾಗಲಕೋಟೆ ತಾಲೂಕಿನ ಸುಮಾರು 67 ಹಳ್ಳಿಗಳ ನದಿ ಪಾತ್ರದಲ್ಲಿ ಈ ಹಾವಳಿ ಇದೆ. ಅರಣ್ಯ ಇಲಾಖೆಯ ಒಂದು ಅಂದಾಜಿನ ಪ್ರಕಾರ, ಜಿಲ್ಲೆಯ ಎರಡೂ ನದಿ ಮತ್ತು ಹಿನ್ನೀರಿನಲ್ಲಿ ಸುಮಾರು 1500ಕ್ಕೂ ಹೆಚ್ಚು ಮೊಸಳೆಗಳಿವೆ. ನದಿಯಲ್ಲಿ ನೀರು ಕಡಿಮೆಯಾದಾಗ, ಪ್ರವಾಹ ಬಂದಾಗ, ಆ ಮೊಸಳೆಗಳು ನದಿ ಪಕ್ಕದ ಹೊಲ-ಗದ್ದೆ ಸೇರಿಕೊಳ್ಳುತ್ತವೆ. ರೈತರು ಹೊಲದಲ್ಲಿ ಕೆಲಸ ಮಾಡಲು ಹೋದಾಗ ದಾಳಿ ಮಾಡಿದ ಘಟನೆ ಹಲವು ಬಾರಿ ನಡೆದಿವೆ. ಈಚೆಗಷ್ಟೇ, ಬೀಳಗಿ ತಾಲೂಕಿನ ಚಿಕ್ಕಾಲಗುಂಡಿಯ ರೈತನೊಬ್ಬ ಮೊಸಳೆಗೆ ಬಲಿಯಾಗಿದ್ದಾನೆ.
ರಾಯಚೂರು
8 ತಿಂಗಳು ಕಾಡಿದ ಚಿರತೆ
ಜಿಲ್ಲೆಯಲ್ಲಿ ದಟ್ಟಾರಣ್ಯವಿಲ್ಲದಿದ್ದರೂ ವನ್ಯಜೀವಿಗಳ ಹಾವಳಿ ಮಾತ್ರ ಇದೆ. ಮಾನ್ವಿ ತಾಲೂಕಿನ ನೀರಮಾನ್ವಿ ಯಲ್ಲಿ ಚಿರತೆಯೊಂದು ಜನರನ್ನು ಸುಮಾರು ಎಂಟು ತಿಂಗಳು ಕಾಡಿತ್ತು. ಹಾಡಹಗಲಲ್ಲೇ ಓಡಾಡುತ್ತಿದ್ದ ಚಿರತೆ ಕಂಡು ಜನ ಬೆಚ್ಚಿ ಬಿದ್ದಿದ್ದರು. ಆರಂಭದಲ್ಲಿ ಗುಡ್ಡಗಾಡಿನಲ್ಲಿ ಕೋತಿ, ನವಿಲುಗಳಂಥ ಪ್ರಾಣಿಗಳನ್ನು ತಿಂದು ಜೀವಿಸುತ್ತಿದ್ದ ಚಿರತೆ,ಆಮೇಲೆ ಅಕ್ಕಪಕ್ಕದ ಊರುಗಳಿಗೆ ಬಂದು ಕುರಿ, ದನಕರು ತಿನ್ನಲು ಆರಂಭಿಸಿತು. ಅರಣ್ಯ ಇಲಾಖೆ ಚಿರತೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದರೂ ಪ್ರಯೋಜನ ವಾಗಿರಲಿಲ್ಲ. ಇದು ಸಂತಾನೋತ್ಪತ್ತಿಗಾಗಿ ಬಂದಿದ್ದು. ಹೆಚ್ಚು ದಿನ ಇರುವುದಿಲ್ಲ ಎಂದಿದ್ದರು ತಜ್ಞರು. ಆದರೂ 8 ತಿಂಗಳಿಗೂ ಅ ಧಿಕ ಕಾಲವಾದರೂ ಚಿರತೆ ಇಲ್ಲಿಯೇ ಇತ್ತು. ಕೊನೆಗೆ ಆ. 9ರಂದು ಚಿರತೆ ಬೋನಿಗೆ ಬೀಳುವ ಮೂಲಕ ಜನ ನಿಟ್ಟುಸಿರು ಬಿಟ್ಟರು. ಇನ್ನೂ ತಾಲೂಕಿನ ವಿವಿಧೆಡೆ ನೂರಾರು ಜಿಂಕೆಗಳ ಹಿಂಡು ರೈತರನ್ನು ಪ್ರತೀ ವರ್ಷ ಕಾಡುತ್ತಲೇ ಇರುತ್ತವೆ.
ಕೊಡಗು
ಹುಲಿ, ಕಾಡಾನೆ ದಾಳಿಗೆ ಸುಸ್ತು
ಜಿಲ್ಲೆಯಲ್ಲಿ ಹುಲಿ ಮತ್ತು ಕಾಡಾನೆಗಳ ಕಾಟವೇ ಹೆಚ್ಚು. ಇತ್ತೀಚೆಗಷ್ಟೇ ಬೇಳೂರಿನಲ್ಲಿ ಶ್ರೀಕಂಠ ಎಂಬವರ ತೋಟಕ್ಕೆ ನುಗ್ಗಿದ್ದ ಆನೆ, ಇವರ ಮೇಲೂ ದಾಳಿಗೆ ಯತ್ನಿಸಿತ್ತು. ಅದೃಷ್ಟವಶಾತ್ ಪಾರಾಗಿದ್ದರು. ಹಾಗೆಯೇ, ನಗು ವನ್ಯಜೀವಿ ವಲಯದ ವ್ಯಾಪ್ತಿಯ ಹಾದನೂರು ಗ್ರಾಪಂನ ಎತ್ತಿಗೆ ಗ್ರಾಮದಲ್ಲಿ ಕೇರಳದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿದೆ. ಅಷ್ಟೇ ಅಲ್ಲ, ಜಿಲ್ಲೆಯಲ್ಲಿ ಹುಲಿಗಳ ದಾಳಿಯೂ ಮುಂದುವರಿದಿದೆ. ಅದರಲ್ಲೂ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಾಡಾನೆಗಳ ದಾಳಿ ಹೆಚ್ಚುತ್ತಲೇ ಇದೆ. ಕಳೆದ ವರ್ಷ ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಮೂವರು ಸಾವಿಗೀಡಾಗಿದ್ದರು. ಈ ವರ್ಷದ ಮಾರ್ಚ್‌ನಲ್ಲೂ ಒಬ್ಬರು ಬಲಿಯಾಗಿದ್ದಾರೆ. ಜೂನ್ 21ರಂದು ತಿತಿಮತಿಯಲ್ಲಿ ಆನೆದಾಳಿಯಿಂದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದರು.
ಈಗ ಚೆನ್ನಯ್ಯನಕೋಟೆ ಗ್ರಾಮ ಪಂಚಾಯತ್‌ನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿಯೊಂದು ನಿರ್ಭಿಡೆಯಿಂದ ಓಡಾಡುತ್ತಿದ್ದು, ಹಸುಗಳನ್ನು ಕೊಂದಿದೆ. ಅರಣ್ಯ ಇಲಾಖೆ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದೆಯಾದರೂ ಇನ್ನೂ ಸಫಲವಾಗಿಲ್ಲ. ಕಳೆದ ಮಾರ್ಚ್‌ನಲ್ಲಿ ಬಿಟ್ಟಂಗಾಲ ಗ್ರಾಮದಲ್ಲಿ ಕಾರ್ಮಿಕರೊಬ್ಬರನ್ನು ಹುಲಿಯೊಂದು ಕೊಂದಿದೆ. ಕೊಡಗಿನಲ್ಲಿ ನಿತ್ಯವೂ ಇಂಥ ಘಟನೆ ನಡೆಯುತ್ತಿದ್ದರೂ, ಸರಕಾರ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ
ಚಿರತೆಯಿಂದ ನೆಮ್ಮದಿ ಭಂಗ
ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಚಿರತೆಗಳು ಪ್ರತ್ಯಕ್ಷವಾಗಿ ರೈತರು ಮತ್ತು ಗ್ರಾಮಸ್ಥರ ನೆಮ್ಮದಿಯನ್ನು ಭಂಗ ಮಾಡಿದೆ ಜಿಲ್ಲೆಯ ಗೌರಿ ಬಿದನೂರು ತಾಲೂಕಿನ ಮೀಸಲು ಅರಣ್ಯ ಪ್ರದೇಶದ ಸುತ್ತಮುತ್ತ ಬೇವಿನಹಳ್ಳಿ,ಕಂಬಾಲ ಹಳ್ಳಿ ಹಾಗೂ ಹಳೇಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಕುರಿ, ಮೇಕೆ, ಹಸುಗಳನ್ನು ಆಹಾರ ಮಾಡಿಕೊಂಡಿವೆ. ಜಿಲ್ಲೆಯ ಗುಡಿಬಂಡೆ-ಬಾಗೇ ಪಲ್ಲಿ ಮಾರ್ಗದಲ್ಲಿದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಅಲ್ಲಿಯೂ ಸಹ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತೇಕಲಾಹಳ್ಳಿ ಗ್ರಾಮದಲ್ಲಿ ಈಚೆಗೆ ಚಿರತೆಯೊಂದನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.