ಹಾರುವ ಬಾಣಕ್ಕೆ ಸ್ವಾತಂತ್ರ್ಯ ಹಾರೈಸುತ್ತಾ
Team Udayavani, Jun 8, 2018, 10:46 AM IST
ಸುದೀರ್ಘ ರಜೆಯ ಅವಧಿ ಕಡೆಗೂ ಥಟ್ಟನೇ ಮುಗಿದು ಹೋಗಿದೆ. ಸ್ವಾತಂತ್ರ್ಯದ ಪರಮೋಚ್ಚ ಸ್ಥಿತಿಯ ಮರು ಕ್ಷಣ ಮನೋಹರ ಆಲಸ್ಯದಿಂದ ಕಣ್ಣು ಬಿಟ್ಟ ಮಗುವಿಗೆ ಈಗ ಶಾಲೆ. ತೆರೆದ ಬಾಗಿಲು. ಸಮವಸ್ತ್ರದ ಸೋಗಿನಲ್ಲಿಯೇ ಮತ್ತೆ ಈಗ ಶಾಲೆಯ ಆವರಣದಲ್ಲಿ ಹರಿಯತೊಡಗಿದೆ ಜಾತಿ, ಮತ, ಪಂಥಗಳನ್ನು ಮೀರಿದ ವೈವಿಧ್ಯತೆಯ ಜೀವ ಪ್ರವಾಹ. ಅದರ ನಿತ್ಯ ಸಹಚರ್ಯದಲ್ಲಿಯೇ ಬಲವರ್ಧನೆಗೊಳ್ಳಬೇಕಿದೆ. ದಿವ್ಯ
ಸಮಾನತೆಯ ಸತ್ವ. ನಿರೀಕ್ಷೆ, ಜವಾಬ್ದಾರಿ, ಆಕಾಂಕ್ಷೆ – ಇದಾವುದರ ಪರಿವೆಯಿಲ್ಲದೇ ಆ ಬೆಳಕಿನ ಗುತ್ಛದಲ್ಲಿ$ಜಿನುಗುತ್ತಿರುವ ಶುದ್ಧ ಉತ್ಸಾಹದ ಒರತೆಗೆ ಯಶಸ್ಸಿನ ದಡ ಸೇರಿಕೊಂಡು ಬಿಡುವ ಯಾವ ಲಗುಬಗೆಯೂ ಇಲ್ಲ.
ಎಲ್ಲೋ, ಅಲ್ಲೆಲ್ಲೋ ಅಪವಾದವೆನ್ನುವಂತೆ ಕಾಣುವ ಸಂಕಟದ ಸೆಳಕಿಗೆ ಜೀವಂತಿಕೆಯನ್ನು ಹೀರಿಕೊಳ್ಳುವ ಆಕಾಂಕ್ಷೆಯೂ ಇಲ್ಲ. ನೆನಪಿಲ್ಲದ ಲೋಕದ ಆ ಖುಷಿಯ ಹೆಜ್ಜೆಯ ಮುಂದೆ ಬಂದು ನಿಂತ ಪುಟ್ಟ ಗೆಳೆಯನ, ಗೆಳತಿಯ ಮುಖದಲ್ಲಿ ಅರಳಿದ ಸಂಕೋಚದ ಕಿರುನಗೆ ಕಪ್ಪು ಬೋರ್ಡಿನ ಮೇಲೆ ಕೆತ್ತಲಾಗುವ ಕಲಿಕೆಯ ಎಲ್ಲಾ ಸಂಕಟಗಳನ್ನೂ ಒಮ್ಮೆಗೇ ಹೀರಿಕೊಂಡುಬಿಡಬಹುದು ಎಂದರೆ! ಕೇವಲ ತನ್ನ ಸಹಜ ಹಾವಭಾವಗಳಿಂದಲೇ ಮಗುವಿನ ನಿತ್ಯ ಆನಂದಗಳಿಗೆ ನೆಪವಾಗಬಲ್ಲ ಶಿಕ್ಷಕ, ಪೋಷಕರ ಕಣ್ಣಿಗೆ ಸಾಮಾನ್ಯವಾಗಿ ಮಗುವಿನ ಅಂಕ ಕಸಿಯುವ ನಿಷ್ಪ್ರಯೋಜಕ. ದೂರೇ ಇಲ್ಲದ ದಾರಿಯ ಆ ವಿಸ್ಮಯ ನಡಿಗೆಗೆ ಅಂಕಗಳ ಸ್ಪೀಡ್ ಬ್ರೇಕರುಗಳನ್ನು ಜೋಡಿಸಿ ತಾವೂ ಬಿದ್ದು ಮಗುವನ್ನೂ ದಣಿಸಿ ಬೀಳಿಸಿದರಷ್ಟೇ ಅವರಿಗೆ ಅಂದಿನ ಊಟ ಸೇರುವುದು. ಬ್ಲಾಕ್ ಬೋರ್ಡೊ, ಡಿಜಿಟಲ್ ಬೋರ್ಡೊ, ಕಂಪ್ಯೂಟರಿನ ಪರದೆಯೋ ಎಲ್ಲದರ ಮೇಲೂ ಅಂಕಗಳ ಆರ್ತನಾದದ ಸದ್ದು ಅವರಿಗೆ ಅವಶ್ಯವಾಗಿ ಕೇಳಲೇಬೇಕು. ಬುಕ್ಕು ತೆಗೆದರೆ ಅಕ್ಷರಗಳ ಆಕ್ರಂದನ, ಶಾಲೆಗೆ ಜೊತೆಗೆ ಬಂದ ಬುತ್ತಿಯ ಬ್ಯಾಗಿನಲ್ಲಿಯೂ ನುಸುಳಿ ದಾಳಿ ಮಾಡುತ್ತಿದ್ದರಷ್ಟೇ ಅಪ್ಪ-ಅಮ್ಮನಿಗೆ ರಾತ್ರಿ ನೆಮ್ಮದಿಯ ನಿದ್ರೆ !
ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ
ತೊಡಿಸದಿರು ಚಂದ್ರ ಕಿರೀಟವನು
ಕೊರಳಿಗೆ ಭಾರ ನನಗೆ ನಕ್ಷತ್ರ ಮಾಲಿಕೆ
ನಾನೊಲ್ಲೆ ದೊರೆತನವನು
ನರಸಿಂಹಸ್ವಾಮಿಯವರು ಬರೆದ ಈ ಪದ್ಯದ ಸಾಲುಗಳು ಪ್ರತಿ ಮಗುವಿನ ಭಾವ ದಣಿವಿನ ರಾಗವಾಗಿ ಮನಸ್ಸನ್ನು ಮುಟ್ಟಿಕೊಳ್ಳುತ್ತದೆ. ನೆಚ್ಚಿಕೊಂಡ ಕಲೆಯಲ್ಲಿ ಅಪೇಕ್ಷಿಸದೇ ತನ್ಮಯನಾದ, ಇಷ್ಟವಾದ ಆಟದಲ್ಲಿ ಅಪೇಕ್ಷಿಸದೇ ಕೀರ್ತಿ ಪಡೆದ, ಅಪೇಕ್ಷಿಸದೇ ಓದಿನಲ್ಲಿ ಹಿಂದೆ ಬಿದ್ದ ಮಗು, ಚೂರೂ ತಪ್ಪಿಲ್ಲದೇ ಚಿತ್ರ ಬಿಡಿಸದೇ ಅದಕ್ಕೆ ಅನ್ಯ ದಾರಿಯಿಲ್ಲವೆಂದು ಆಸೆಪಟ್ಟ, ಸ್ವರ-ರಾಗ ಲೋಪವಿಲ್ಲದೇ ಹಾಡಿ ಗೆದ್ದೇ ತೀರಬೇಕೆಂದು ತಾಕೀತು ಮಾಡಿ ತನ್ನನ್ನೇ ಎದುರುನೋಡಿದ, ಬೇರಾರನ್ನೂ ಮುಂದಕ್ಕೆ ಬಿಡದೇ ಜೋರಾಗಿ ಓಡಲೇಬೇಕೆಂದು ಅದರ ಮುಂದೆ
ಅಡ್ಡಗೆರೆಯೆಳೆದ, ನೂರಕ್ಕೆ ನೂರರ ಅಂಕ ಬಿಟ್ಟು ಬೇರೇನೂ ತೆಗೆಯಬೇಡವೆಂದು ಅದನ್ನು ಗೋಗರೆದ “ಗುಣಶೀಲ’ ಪೋಷಕರ ಉಪೇಕ್ಷೆಯ ಭಾರಕ್ಕೆ ಕಂಗಾಲಾಗಿ ನಲುಗುತ್ತದೆ.
ತನ್ನ ಸೋಲಿನ ನೋವಿಗೆ ಅಭಿವ್ಯಕ್ತಿಯ ಹಾದಿ ಗೊತ್ತಿರದೇ ಅಳುವನ್ನು ಅಪ್ಪಿಕೊಂಡ ಅದಕ್ಕೆ ಕಡೆಗೂ ಸಿಗುವ ಮಡಿಲ ಮೇಲಿನ ವ್ಯಾತ್ಸಲ್ಯದ ಜೋಗುಳಕ್ಕೂ ಇದೆ ದಬ್ಟಾಳಿಕೆಯ ಸಾಂಗತ್ಯ. ಇಡೀ ಜೀವ ಸಂಕುಲದಲ್ಲಿ ಭಾವ ಬಗ್ಗಡದ ಇಂತಹುದೊಂದು ವಿಚಿತ್ರ ಸ್ಥಿತಿಗೆ ಸಾಕ್ಷಿಯಾಗುತ್ತಿರುವುದು ಮಗುವೆಂದರೆ! ಅಪ್ಪನ-ಅಮ್ಮನ ಅಂಕೆ ಪದೇ ಪದೇ ಮಗುವಿನ ಅಂಕಗಳನ್ನೂ ಆಳಿದಲ್ಲಿ ಮಗುವಿನ ಚೈತನ್ಯವು ತಲ್ಲಣಗೊಳ್ಳದೇ ಅನ್ಯ ದಾರಿಯೆಲ್ಲಿ? ಪೋಷಕರ ಕೀಳರಿಮೆಗಳು, ಆತಂಕಗಳು, ಸಂಕಟಗಳೆಲ್ಲವೂ ಮಗುವಿನ ಮನಃಪಟಲದ ಮೇಲೆ ಹಚ್ಚೆ ಹಾಕಿ ಅದರ ಇಡೀ ಜೀವಂತಿಕೆಯನ್ನು ಕುಗ್ಗಿಸುವ ಅಗತ್ಯತೆಯಾದರೂ ಏನು? ಅವರ ಸಂತೃಪ್ತಿ -ಸಂಭ್ರಮಗಳನ್ನು ಸಂಧಿಸಿದರೆ ಮಾತ್ರ
ಮಗುವಿನ ಇಡೀ ಬಾಳಿಗೆ ದಿವ್ಯಾರ್ಥವೊಂದು ದಕ್ಕುವುದೇ? ವಿಧೇಯತೆಯೇ ಮಗುವಿನ ವ್ಯಕ್ತಿತ್ವವನ್ನು ಕಬಳಿಸಿಕೊಂಡುಬಿಡುವ ಭೂತ ಎನ್ನುತ್ತಾನೆ ತತ್ವಜ್ಞಾನಿ ಓಶೋ ರಜನೀಶ್. ಅವಿಧೇಯನಾಗುವುದಕ್ಕೆ ವೈಶಿಷ್ಟ್ಯತೆ ಬೇಕು, ವಿಧೇಯನೆನಿಸಿಕೊಳ್ಳುವುದರಲ್ಲಿ ಹೆಚ್ಚುಗಾರಿಕೆಯೇನು?
***
ಜಯಂತ ಕಾಯ್ಕಿಣಿಯವರ “ಬಣ್ಣದ ಕಾಲು’ ಕಥೆಯ ಅಂಶ ಇಲ್ಲಿ ದಾಖಲೆಗೆ ಅರ್ಹ- ಪುಂಡತನ ಆರೇಳೇ ವರ್ಷದ ಚಂದೂ ಪುಟ್ಟನಿಗೆ ಅಪ್ಪಟ ಜೀವಂತಿಕೆಯ ಸಂಕೇತವಾದರೆ ಅವರಪ್ಪಅಮ್ಮನಿಗೆ ಅದು ದುರ್ಭರ ಸಂಕಷ್ಟ. ಮಗನ ಮೇಲಿನ ಮಮಕಾರ ಒಂದು ಕಡೆಯಾದರೆ ಏನಕ್ಕೂ ಬಗ್ಗದೇ ಅಸಾಧ್ಯನಾಗಿ ಬೆಳೆದ ಮಗನ ತುಂಟತನ ಅವರಲ್ಲಿ ಬಿಡದೇ ಸೃಷ್ಟಿಸುತ್ತಿರುವ ವೇದನೆ ಒಂದು ಕಡೆ. ವೈರುಧ್ಯ ಭಾವಗಳ ಹಿಂಸೆಯಿಂದ ಒದ್ದಾಡಿದ ಬಳಿಕ ನರಸಿಂಹ, ತನ್ನ ಮಗ ಚಂದೂ ಪುಟ್ಟನನ್ನು ಬಾಂಬೆಯ ರಿಮ್ಯಾಂಡ್ ಹೋಂಗೆ ಸೇರಿಸಿ ವಿಧೇಯನನ್ನಾಗಿ ಬದಲಾಯಿಸಲು
ಯೋಚಿಸುತ್ತಾನೆ. ಮಗ ದೂರಾಗುತ್ತಾನೆಂದು ಕಣ್ಣೀರು ಹಾಕಿದ ಹೆಂಡತಿಯನ್ನು ತನ್ನ “ಸದುದ್ದೇಶ’ವನ್ನು ವಿವರಿಸಿ ಬಾಯಿ ಮುಚ್ಚಿಸುತ್ತಾನೆ. ಗಮ್ಯವೊಂದೇ ಆದರೂ ಇಲ್ಲಿ ಮತ್ತೆರಡು ಆಸಕ್ತಿದಾಯಕ ಕವಲುಗಳು ಹರಡಿಕೊಳ್ಳುತ್ತವೆ.
ಇಡೀ ಊರೇ ತನ್ನನ್ನು ಹೀನನನ್ನಾಗಿ ನೋಡಿದರೂ ತನ್ನೊಂದಿಗೆ ಖುಷಿಯಿಂದಲಿರುತ್ತಿದ್ದ ಆಪ್ತ ಗೆಳೆಯ ಕುಂಟ ಮಂಗೇಶ ಚಂದುವಿನ ಪುಟ್ಟ ಮನಸ್ಸಿನ ಮೇಲೆ ಕನಸೊಂದನ್ನು ಬಿತ್ತಿದ್ದಾನೆ. ಗೆಳೆಯನ ಮೋಟು ಕಾಲುಗಳಿಗೆ ಬಾಂಬೆಯಿಂದ ಒಂದು ಜೋಡಿ ಬಣ್ಣದ ಕಾಲನ್ನು ತಂದು ಕೊಟ್ಟು ಅವನೊಂದಿಗೆ ಇಚ್ಛೆ ಬಂದ ಹಾಗೆ ಖುಷಿಯಾಗಿ ಹಾರಾಡುವ ಹಂಬಲ ಚಂದೂನದು. ಹಾಗಾಗಿ ಅವನಿಗೆ ಬಾಂಬೆ ತನ್ನ ಗೆಳೆಯನಿಗೆ ಬಣ್ಣದ ಕಾಲೆಂಬ ಜೀವ ಸ್ಥೈರ್ಯವನ್ನು ಕಲ್ಪಿಸಿಕೊಡಲೆಂದೇ ಸೃಷ್ಟಿಯಾಗಿರುವ ಗಂಧರ್ವ ನಗರಿ.
ಹೇಗಾದರೂ ಸರಿ ತಾನು ಅಲ್ಲಿಗೆ ಹೋಗಿ ಅಪ್ಪನನ್ನು ಗೋಗರೆದು ಜೋಡಿ ಬಣ್ಣದ ಕಾಲನ್ನು ಕೊಂಡು ಗೆಳೆಯನ ಕಾಲಿಗೆ ಜೋಡಿಸಿಯೇ ತೀರಬೇಕೆಂದು ಚಂದೂ ಆಲೋಚನೆ. ಆದರೆ ಅವನು ಬಾಂಬೆಗೆ ಹೋಗುತ್ತಿರುವುದು ಅವನಿಗರಿವಿಲ್ಲದ ರಿಮ್ಯಾಂಡ್ ಹೋಮಿನ ಅತಿಥಿಯಾಗಲು.
ಅದು ಅವನ ಅರಿವನ್ನು ಮೀರಿದ ವಿಷಯವಾದ ಕಾರಣ ಅವನದೇ ಖುಷಿ ಕನಸಿನ ನಿತ್ಯ ಸಂಭ್ರಮದಲ್ಲಿ ಈಗಲೂ ಅವನು ಪುಳಕಿತ. ಅಪ್ಪ ನರಸಿಂಹನಿಗೆ ಕಾಣದ ಆ ಬಾಂಬೆಯ ರಿಮ್ಯಾಂಡ್ ಹೋಮು ಚಂದೂವಿನ ತುಂಟತನವನ್ನು ನಿಗ್ರಹಿಸಿಯೇ ತೀರುತ್ತದೆ ಎನ್ನುವ ಹಂಬಲಕ್ಕೆ ಸೃಷ್ಟಿಯಾದ ಆಶಾ ವೇದಿಕೆ.
ಚಂದೂ ಬಾಂಬೆಯಲ್ಲಿದ್ದರೆ ತನ್ನ ಮಾತು ಕೇಳುವ ಹಾಗಾಗಿ ವಿಧೇಯವಂತನಾಗಿ ಹಿಂತಿರುಗುತ್ತಾನೇನೋ ಎನ್ನುವುದು ಅವನ ಆಪ್ತ ಆಕಾಂಕ್ಷೆ. ಆಕಾಂಕ್ಷೆ ಆತಂಕವನ್ನು ಸೃಷ್ಟಿಸಲೇಬೇಕು. ಹಾಗಾಗಿ ಅವನು ಅವನದೇ ಸಂಕಟಕ್ಕೆ ಬಂಧಿತ. ಅಪೇಕ್ಷೆಗಳ ಆಲಾಪಗಳಲ್ಲಿಯೇ ಅದೃಶ್ಯನಾಗಿ ಹೋಗಿರುವ ಅವನು ಬಾಂಬೆಯ ಸ್ನೇಹಿತನ ಮನೆಯಲ್ಲಿ ಮಗನೊಂದಿಗೆ ತಂಗುತ್ತಾನೆ. ಆದರೆ ಅಲ್ಲಿ ಅವನು ಹಾದುಹೋಗುವ ಅಮಾನವೀಯ ಅನುಭವಗಳು ಚಂದೂವಿನೆಡೆಗೆ ಅವನ ಪ್ರೀತಿಯನ್ನು ಇಮ್ಮಡಿಸುತ್ತವೆ. ತನ್ನ ಮಗನ ಒಳನೋಟಗಳಿಗಷ್ಟೇ ಸತ್ಯದ ಕಾಂತಿಯಿದೆ ಎಂಬ ಜ್ಞಾನೋದಯಕ್ಕೆ ಕಾರಣವಾಗುತ್ತವೆ. ಚಂದೂ ಇದಾವುದರ ಪರಿವೆಯಿಲ್ಲದೇ ಕನಸಿನಲ್ಲೂ ಬಣ್ಣದ ಕಾಲು ಕಾಣುತ್ತಾ ತನ್ನೆಲ್ಲಾ ಅವಿಧೇಯತೆಯು ಒದಗಿಸಿದ ಸ್ವರ್ಗ ಸಂಭ್ರಮದ ಖುಷಿಯಲ್ಲಿಯೇ ಉಳಿದುಹೋಗುತ್ತಾನೆ. ಅವಿಧೇಯನೆಂದರೆ ಅವನ ಹಾಗಿರಬೇಕು, ಭ್ರಮೆಯಿಂದ ಜಡವಾದ ನಮ್ಮ ಆಂತರ್ಯಗಳಿಗೆ ಅವನ ಹಾಗೆ ಸತ್ಯದರ್ಶನ ಮಾಡಿಸುವಂತಾಗಬೇಕು ಎನ್ನುವುದನ್ನು ನೆನಪಿಸುತ್ತಾನೆ.
***
ಲೆಬನಾನ್‌ನ “ಪ್ರವಾದಿ’ ಖಲೀಲ್ ಗಿಬ್ರಾನ್ ಹೇಳಿದ್ದು ನೋಡಿ. ಅದನ್ನು ಕನ್ನಡಕ್ಕೆ ಪ್ರಭು ಶಂಕರರವರು ಬಲು ಚೆಂದಾಗಿ ಅನುವಾದಿಸಿದ್ದಾರೆ.
ನಿಮ್ಮ ಮಕ್ಕಳು ಜೀವಂತ ಬಾಣಗಳಂತೆ ಚಿಮ್ಮಲು ಇರುವ ಬಿಲ್ಲುಗಳು ನೀವು.
ಅನಂತ ಪಥದ ಮೇಲೆ ತನ್ನ ಗುರಿಯನ್ನು ಬಿಲ್ಲುಗಾರ
ಗಮನಿಸುತ್ತಾನೆ
ಅವನ ಶಕ್ತಿಯಿಂದ ನಿಮ್ಮನ್ನು ಬಾಗಿಸುತ್ತಾನೆ, ಅವನ
ಬಾಣಗಳು
ವೇಗವಾಗಿ ಬಹುದೂರ ಹೋಗುವಂತೆ.
ಆ ಬಿಲ್ಲುಗಾರನ ಕೈಯಲ್ಲಿ ನಿಮ್ಮ ಬಾಗುವಿಕೆ
ಸಂತಸಮಯವಾಗಿರಲಿ,
ಏಕೆಂದರೆ ಹಾರುವ ಅಂಬನ್ನು ಅವನು ಪ್ರೀತಿಸಿದಂತೆಯೇ
ದೃಢವಾದ ಬಿಲ್ಲನ್ನೂ ಪ್ರೀತಿಸುತ್ತಾನೆ
ಈ ಸಾಲುಗಳ ತೆರೆ ನಿಮ್ಮ ಮನಸ್ಸುಗಳನ್ನು ಸುಮ್ಮನೇ ಒಮ್ಮೆ ಸೋಕಿ ಬಿಡಲಿ. ಉಳಿದಿದ್ದು ತನ್ನಂತಾನೇ ಘಟಿಸಲೂಬಹುದು. ಕಂಡ ಜೀವತಂತುಗಳೆಲ್ಲವನ್ನೂ ಮನಸಾರೆ ಚಿವುಟುತ್ತಾ ಚಿರಂತನವಾಗಿ ಚಿಗುರ ಬಯಸುವ ನಾವು ಕೆಳಗೆ ಉಲ್ಲೇಖಿಸಿದ ಅಡಿಗರ ಸಾಲುಗಳನ್ನು ಓದಿಕೊಂಡರೆ ನಮಗೆ ಪ್ರವಾದಿಯ ಸಾಲುಗಳೊಂದಿಗಿನ ದಿವ್ಯ ಸಾಮ್ಯತೆಯ ಅನುಭವವೂ ಆಗಬಹುದು.
ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ
ಆ ಸಸಿಯ ಕೀಳು, ಚಿವುಟೀ ಚಿಗುರ
ಹೂವ ಕಂಡರೆ ಹಿಸುಕಿ ಬಿಸುಡು
ಹುಲ್ಲೆಲ್ಲೆಲ್ಲಿ ಅಲ್ಲಲ್ಲಿ ಕೊಳ್ಳಿ
ಹಿಡಿದಾರು ಲಂಕಾದಹನ
ನೆಲದ ಭಾರ ಕಳೆಯಲು ನೀ
ಹೀಗೆ ಮಾಡು ನೀ ಸರಿ, ಸಹಜ
ಕೆನ್ನೆ ಮೇಲಿನ ಕಂಬನಿ ಆರುವ ಮುನ್ನವೇ ಹೊಸ ನಗುವಿನೊಂದಿಗೆ ಅರಳಿ ನೂರು ದಿಕ್ಕಿಗೆ ಸಿಹಿ ಹಂಚುವ ಪುಟ್ಟ ಮಗುವಿನ ಧೀಶಕ್ತಿ ನಮ್ಮಲ್ಲೂ ಉಕ್ಕಲಿ. ಅದರ ಸಹಜ ಸೊಬಗಿನ ಮುಂದೆ ನಾವು ರೂಪಿಸಿಕೊಂಡ ನಾಗರಿಕ ಮುಖವಾಡಗಳು, ಅರಿವಿನ ಅಹಂಕಾರಗಳು ಒಮ್ಮೆಗೇ ಕಳಚಿ ಬೀಳಲಿ. ಏನೂ ಅರಿಯದ ಸ್ಥಿತಿಯಲ್ಲೇ ಎಲ್ಲವನ್ನೂ ಅಳೆದು ಜಗ ಬೆಳಗುವ ಪುಟಾಣಿಗಳಿಗೆಲ್ಲಾ ಎಂದಿನಂತೆ ಹೊಸ ಕ್ಲಾಸು ಖುಷಿ ತರಲಿ!
*ಫಣಿಕುಮಾರ್ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.