Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!
Team Udayavani, Mar 8, 2024, 10:18 AM IST
ಸವಾಲುಗಳಿಗೆ ಸವಾಲಾಗಿ, ಸೋಲುಗಳಿಗೆ ಶರಣಾಗದೆ ಸೋಲಿಗೆ ಸೋಲು ಉಣಿಸುವುದು ಹೇಗೆ ಎಂಬುದಕ್ಕೆ ಈ ನಾರಿಯರು ನಮ್ಮ ಮಧ್ಯೆ ಇದ್ದು ಸದ್ದಿದ್ದಲೇ ಉತ್ತರವಾದವರು. ಬದುಕನ್ನು ಬಂದಂತೆ ಬರಮಾಡಿಕೊಂಡರೂ ವಿಭಿನ್ನವಾದ ಬದುಕನ್ನು ಹೇಗೆ ಗೆಲ್ಲುತ್ತಾ ಬದುಕುವುದು ಎಂಬುದಕ್ಕೆ ಮಾದರಿಯಾದವರು.
ನಮ್ಮೊಡನಿದ್ದೂ ನಮ್ಮಂತಾಗದ ಈ ನಾರಿಯರು ಸಾಮಾನ್ಯರಂತೆ ಕಂಡರೂ ಸಮಾಜದಲ್ಲಿ ಎಲೆ ಮರೆ ಕಾಯಿಯಂತೆ ಯಾರ ಹೊಗಳಿಕೆಯನ್ನೂ ಬಯಸದೆ ತಮ್ಮಷ್ಟಕ್ಕೆ ತಾವು ನಡೆಯುತ್ತಿರುವ ಸಾಧಕ ನಾರಿಯರು. ತಮ್ಮ ತಮ್ಮ ವೃತ್ತಿ-ಬದುಕಿನ ಸಂಘರ್ಷದಲ್ಲಿ ತಮಗೇ ಅರಿವಿಲ್ಲದಂತೆ ಸಾಧಿಸಿ ತೋರಿದವರು.
ಅವರದೇ ದಿನಾಚರಣೆ ದಿನದಂದು ಅವರ ಬದುಕನ್ನು ಅವರಿಗೆ ಸಮರ್ಪಿಸುವುದಕ್ಕಾಗಿ `ಉದಯವಾಣಿ’ ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರನ್ನು ಓದುಗ ದೊರೆಯ ಮುಂದೆ ತಂದು ನಿಲ್ಲಿಸಿದೆ. ಈ ಸಾಧಕ ನಾರಿಯರಿಗೆ ನೀವೂ ಒಂದು ಕರೆ ಮಾಡಿ ಬೆನ್ನುತಟ್ಟಿ, ಮಹಳಾ ದಿನಾಚರಣೆಯ ದಿನ ಶುಭಾಶಯ ಕೋರಿ, ಅವರ ದಿನವನ್ನು ಸ್ಮರಣೀಯವಾಗಿಸಿ…
ಜಿ.ಎಸ್.ಕಮತರ
ವಿಜಯಪುರ
ಸಾವಿರ ಮಕ್ಕಳ ಮಹಾತಾಯಿ ಯಲ್ಲುಬಾಯಿ
ಕಿತ್ತು ತಿನ್ನುವ ಬಡತನ, ಕುಂಟೆಬಿಲ್ಲೆ ಆಡುವ ವಯದಲ್ಲಿ ವಿವಾಹ ಬದುಕಿಗೆ ಕಾಲಿಟ್ಟ ಆಕೆ, ಆನಂತರ ಇಡೀ ಜೀವನ ಮುಡಿಪಾಗಿ ಇರಿಸಿದ್ದೇ ಸಾವಿರಾರು ಮಕ್ಕಳಿಗೆ ಮಮತಾಮಯಿ ತಾಯಿಯಾಗಿ. ಆಕೆಯೇ ಬಾಗಲಕೋಟೆ ರಸ್ತೆಯಲ್ಲಿರುವ ಅನಾಥ ಮಕ್ಕಳ ಆಶ್ರಯ ಕೇಂದ್ರದಲ್ಲಿ ಅಡುಗೆ ತಯಾರಕಿ ಯಲ್ಲುಬಾಯಿ ಚವ್ಹಾಣ.
7ನೇ ತರಗತಿ ಓದಿರುವ ಯಲ್ಲುಬಾಯಿ ಬಾಲ್ಯದಲ್ಲೇ ಮದುವೆಯಾಗಿ, ಪ್ರಾಯಕ್ಕೆ ಬರುವ ಹಂತದಲ್ಲಿ ಎರಡು ಮಕ್ಕಳ ತಾಯಿ ಆಗಿದ್ದಳು. ಕೌಟುಂಬಿಕ ಕಾರಣಗಳಿಂದ ಪತಿ ಅಂಬಾದಾಸನಿಂದ ದೂರವಾದ ಯಲ್ಲುಬಾಯಿ, ಅಜ್ಜಿ ಅಂಜುಬಾಯಿ ಕೆಲಸ ಮಾಡುತ್ತಿದ್ದ ಶಿಶು ಆರೈಕೆ ಕೇಂದ್ರದಲ್ಲಿ ಸಹಾಯಕಿಯಾಗಿ ಸೇರಿದಳು.
ಹೋರಾಟದ ಕಂಕುಳಲ್ಲಿ ಹಾಲು ಕುಡಿಯುವ ಕಂದ ರಾಜುವನ್ನು, ಮತ್ತೊಬ್ಬ ಬಾಲ ಶಿವಾಜಿಯನ್ನು ಕೈಹಿಡಿದುಕೊಂಡೇ 40 ವರ್ಷಗಳ ಹಿಂದೆ ವಿಜಯಪುರ ಆರ್ಫನೇಜ್ ಹೆಸರಿನದ ಸಂಸ್ಥೆಯ ಶಿಶು ಆರೈಕೆ ಕೇಂದ್ರಕ್ಕೆ ಕಾಲಿಟ್ಟಿದ್ದಳು.
ಹೆತ್ತವರೇ ಇಲ್ಲದ, ಹೆತ್ತವರಿಗೇ ಬೇಡವಾಡ ಮಕ್ಕಳೇ ಇರುವ ಕೇಂದ್ರಕ್ಕೆ ಬಂದ ಮೊದಲ ದಿನವೇ ರಸ್ತೆಯಲ್ಲಿ ಸಿಕ್ಕ ಕೇವಲ ಒಂದು ದಿನದ ಮಗುವನ್ನು ಜಿಲ್ಲಾಡಳಿತ ಯಲ್ಲುಬಾಯಿ ಮಡಿಲಿಗೆ ಹಾಕಿತು. ಹೆತ್ತವರಿಗೆ ಬೇಡವಾಗಿ ಬೀದಿಯಲ್ಲಿ ಎಸೆದುಹೋಗಿದ್ದ 3-4 ಮಕ್ಕಳಿಗೂ ತನ್ನ ಮಗನೊಂದಿಗೆ ಆ ಮಕ್ಕಳಿಗೂ ಎದೆಹಾಲಿನ ಅಮೃತ ಉಣಿಸಿ, ಬೆಳೆಸಿದ್ದು ಅಮೃತವರ್ಷಿಣಿ ಯಲ್ಲುಬಾಯಿ.
ತನ್ನ 38 ವರ್ಷದ ವೃತ್ತಿ ಬದಕಿನಲ್ಲಿ ಸುಮಾರು 2 ಸಾವಿರ ಮಕ್ಕಳ ಆರೈಕೆಗಾಗಿಯೇ ಜೀವನ ಮುಡಿಪಾಗಿಟ್ಟ ಯಲ್ಲುಬಾಯಿ, ಮೂರು ವರ್ಷದ ಹಿಂದೆ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದರೂ ದೇವರ ಮಕ್ಕಳ ದೇವಾಲಯದಿಂದ ಕದಲಿಲ್ಲ.
ನನ್ನ ಮಕ್ಕಳ ಬದುಕು ಕಟ್ಟಿಕೊಳ್ಳುವಲ್ಲಿ ಅನಾಥಾಲಯದ ಸಾವಿರಾರು ಮಕ್ಕಳಿಗೆ ಅನ್ನಹಾಕಲು ನನ್ನನ್ನು ದೇವರೇ ಕಳಿಸಿಕೊಟ್ಟಿದ್ದಾನೆ. ತಾನು ಮೂರುವರೆ ದಶಕದ ಹಿಂದೆ ಎದೆಹಾಲು ಕುಡಿಸಿ ಬೆಳೆಸಿದ ಮಗು ಈಗ ಅನ್ಯ ಕೇಂದ್ರಕ್ಕೆ ವರ್ಗವಾಗಿ ಹೋದವ ಮರಳಿ ಬಂದಿಲ್ಲ ಎಂಬ ಕೊರಗು ಕಾಡುತ್ತಿದೆ.
ಹೊರ್ತಿಯಲ್ಲಿ ಸಿಕ್ಕಿದ್ದ ಆಕಾಶ, ಕಲಬುರ್ಗಿಯಲ್ಲಿ ಸಿಕ್ಕಿದ್ದ ಶಕೀಲ್ (ಹೆಸರು ಬದಲಿಸಿದೆ) ಇಬ್ಬರಿಗೂ ತನ್ನ ಎದೆಹಾಲಿನ ಅಮೃತ ಉಣಿಸಿ ಅಣ್ಣ-ತಮ್ಮಂದಿರಂತೆ ಬೆಳೆಸಿದ್ದಳು. ಈ ಇಬ್ಬರೂ ಕಲಬುರ್ಗಿಯಲ್ಲಿ ನೆಲೆಸಿದ್ದು, ಬಿಕಾಂ ಓದಿರುವ ಆಕಾಶ ಸಾಕುತಾಯಿ ಯಲ್ಲುಬಾಯಿ ಮಾರ್ಗದರ್ಶನದಂತೆ ಹೈಸ್ಕೂಲ್ ವರೆಗೆ ಮಾತ್ರ ಓದಿರುವ ಶಕೀಲ್ ಆಕಾಶ ಸ್ವಂತ ಉದ್ಯೋಗದಲ್ಲಿ ತೊಡಗಲು ಆಟೋ ಕೊಡಿಸಿದ್ದಾನೆ.
ಸರ್ಕಾರಿ ಆಸ್ಪತ್ರೆಯಲ್ಲಿ ಅನಾಥವಾಗಿ ಸಿಕ್ಕಿದ್ದ ನಾಗಿಣಿಗೂ ಯಲ್ಲುಬಾಯಿ ಎದೆಹಾಲಿನ ಅಮೃತಧಾರೆ ಹೊಸ ಬದುಕನ್ನು ಕಟ್ಟಿಕೊಟ್ಟಿದೆ. ಯಲ್ಲುಬಾಯಿ ಕೈತುತ್ತು ಉಂಡು ಬೆಳೆದ ಸಾವಿರಾರು ಮಕ್ಕಳಲ್ಲಿ ಈಗಲೂ ಹಲವರು ತಮ್ಮ ಮದರ್ ಇಂಡಿಯಾಳನ್ನು ಕಾಣಲು ಬಂದುಹೋಗುತ್ತಾರೆ.
ತನ್ನ ಸಂಘರ್ಷಮಯ ಜೀವನದ ಮಧ್ಯೆ ದೇವರ ಮಕ್ಕಳ ಪಾಲಿನ ಮಹಾತಾಯಿ ಯಲ್ಲುಬಾಯಿ ಅವರ ಸ್ವಂತ ಮಕ್ಕಳಲ್ಲಿ ಮೊದಲ ಮಗ ಶಿವಾಜಿ ಹಿರೇಡಸಲಗಿಯಲ್ಲಿ ಬ್ಯಾಂಕ್ ಅಧಿಕಾರಿ. ಎರಡನೇ ಮಗ ರಾಜು ಬಿಎಂಟಿಸಿ ಚಾಲಕ. ಇಬ್ಬರಿಗೂ ಮದುವೆ ಮಾಡಿದ್ದು, ಅವರ ದುಡಿಮೆಯಲ್ಲಿ ಮನೆಯನ್ನೂ ಕಟ್ಟಿಸಿಕೊಟ್ಟಿದ್ದಾಳೆ.
ದಯವಿಟ್ಟು ನನ್ನ ಬಗ್ಗೆ ಹೊಗಳಿ ಬರೆಯಬೇಡಿ, ನನಗೆ ಪ್ರಚಾರ ಸಿಕ್ಕರೆ ನಾನು ಮಕ್ಕಳಿಗೆ ಮಾಡಿದ ಸೇವೆ ನಿರರ್ಥಕವಾಗುತ್ತದೆ ಎನ್ನುವ ಮಮತಾಮಯಿ ಯಲ್ಲುಬಾಯಿ, ನಿವೃತ್ತಿ ಬಳಿಕ ನಾಮಿನಿ ಹೆಸರು ಯಾರ ಹೆಸರು ಬರೆಯಬೇಕು ಎಂದು ಕೇಳಿದಾಗ ಹೇಳಿದ ಹೆಸರು 40 ವರ್ಷದ ಹಿಂದೆ ತಮ್ಮನ್ನು ತೊರೆದುಹೋದ ಪತಿ `ಅಂಬಾದಾಸ’ ಎಂದು.
ಯಲ್ಲುಬಾಯಿ ಚವ್ಹಾಣ, ಮೊ.9481708923
ವಿಧಿಯ ಸವಾಲಿಗೆ ಸವಾಲಾಗುತ್ತೇನೆಂಬ ಮಾಲತಿ
ಅಂದುಕೊಂಡಂಗೆಲ್ಲ ಜೀವನ ಸಾಗದು ಗೆಳೆಯ… ವಿಧಿಯಾ… ಆ… ಆಟ… ಕನ್ನಡ ಚಲನಚಿತ್ರದ ಹೀಗೊಂದು ಗೀತೆ ದೂರದಲ್ಲಿ ಸಣ್ಣಗೆ ಕೇಳಿ ಬರುತ್ತಿದ್ದರೆ ಆಕೆಯ ಕಣ್ಣಾಲಿಗಳು ತುಂಬಿಕೊಂಡಿದ್ದವು. ಕಣ್ಣ ತುಂಬಿಕೊಂಡು ಹೊರಗೆ ಓಡಿ ಬರುತ್ತಿದ್ದ ಕಣ್ಣೀರನ್ನೂ ಲೆಕ್ಕಿಸದೇ ತನ್ನ ಕರ್ತವ್ಯದಲ್ಲಿ ಮಗ್ನಳಾಗಿದ್ದಳು.
ತಾನು ಕೆಲಸ ಮಾಡುವ ಹೊಟೇಲ್‍ಗೆ ಬರುವ ಅತಿಥಿಗಳಿಗೆ ಉಪಹಾರದ ಸಿದ್ದತೆಯ ಮಧ್ಯೆಯೂ ಕಟ್ಟಿದ ಗಂಟಲಿನಿಂದ ಮಾತು ಹೊರಡದ ನೋವಿನಲ್ಲೂ ಆಕೆ ತನ್ನ ಬದುಕಿನ ಸಾರ್ಥಕತೆಯನ್ನು ತೆರೆದಿಟ್ಟದ್ದು ಹೀಗೆ.
ನನ್ನ ಹೆಸರು ಮಾಲತಿ, ತವರೂರು ಜಮಖಂಡಿ, ಎಸ್‍ಎಸ್‍ಎಲ್‍ಸಿ ಓದಿರುವ ನನಗೆ ಇಲಕಲ್ ಮೂಲದ ಟೇಲರಿಂಗ್ ಕೆಲಸ ಮಾಡುತ್ತಿದ್ದ ವಿಠ್ಠಲ ಎಂಬವರೊಂದಿಗೆ 2007 ರಲ್ಲಿ ಮದುವೆಯಾಗಿದೆ. ನಮ್ಮ ಕುಟುಂಬಕ್ಕೆ ನಿಖಿಲ, ವೈಷ್ಣವಿ ಆಗಮನದಿಂದಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬಂತೆ ನೆಮ್ಮದಿಯ ಜೀವನ ಸಾಗಿತ್ತು.
ಈ ಮಧ್ಯೆ ಐದು ವರ್ಷದ ಹಿಂದೆ ನನಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಹೊಟೇಲ್‍ನಲ್ಲಿ ಗುತ್ತಿಗೆ ಆಧಾರಿತವಾಗಿ ಅಡುಗೆ ತಯಾರಿಸುವ ಕೆಲಸ ಸಿಕ್ಕಿದೆ. ಆಗಂತೂ ಇಡೀ ಕುಟುಂಬದ ಸಂತಸಕ್ಕೆ ಪಾರವೇ ಇರಲಿಲ್ಲ.
ಆದರೆ ವಿಧಿಗೆ ನಮ್ಮ ನಗುವಿನ ಸಂಸಾರದ ಮೇಲೆ ವಕ್ರದೃಷ್ಟಿಬಿತ್ತು. ಮೂರು ವರ್ಷಗಳ ಹಿಂದೆ ಸಕ್ಕರೆ ಕಾಯಿಲೆಯ ಪತಿ ವಿಠ್ಠಲ ಕಾಲಿಗೆ ಚುಚ್ಚಿಕೊಂಡ ಸಣ್ಣ ಮೊಳೆ ನಂಜಿಗೆ ತಿರುಗಿ, ಗ್ಯಾಂಗರಿನ್ ಮಟ್ಟಕ್ಕೆ ಬೆಳೆದು ಅವರ ಕಾಲಿನ ಬೆರಳು ಕತ್ತರಿಸುವ ಸ್ಥಿತಿ ಬಂತು. ವೈದ್ಯಕೀಯ ಚಿಕಿತ್ಸೆಗಾಗಿ 3-4 ಲಕ್ಷ ರೂ. ಸಾಲ ಮಾಡಿ ಪತಿಯನ್ನು ಉಳಿಸಿಕೊಂಡೆ. ಆದರೆ ವಿಠ್ಠಲ ಟೇಲರಿಂಗ ವೃತ್ತಿ ಮಾಡಲು ಸಾಧ್ಯವಿಲ್ಲದಂತಾಗಿದೆ.
ಪರಿಣಾಮ ಪತಿಯ ಶಸ್ತ್ರ ಚಿಕಿತ್ಸೆಗೆ ಮಾಡಿದ ವೈದ್ಯಕೀಯ ಸಾಲ, ನಿತ್ಯದ ಔಷಧಿಯ ನಿರ್ವಹಣೆ, ಮಾಸಿಕ ವೈದ್ಯಕೀಯ ವೆಚ್ಚ ಭರಿಸಬೇಕಿದೆ. ಸಣ್ಣ ಸಂಬಳದಲ್ಲಿ ಇಬ್ಬರು ಮಕ್ಕಳ ಶೈಕ್ಷಣಿಕ ಶುಲ್ಕ, ಮನೆಯ ಬಾಡಿಗೆ ಅಂತೆಲ್ಲ ಲೆಕ್ಕ ಕಳೆದ ಮೇಲೆ ನಾಲ್ವರ ಹೊಟ್ಟೆ ಹೊರೆಯುವಂಥ ಇಡೀ ಸಂಸಾರದ ನೊಗೆ ನನ್ನ ಹೆಗಲೇರಿದೆ.
ಅನಾರೋಗ್ಯ ಪೀಡಿತ ಪತಿಯನ್ನು ಆರೈಕೆಗಾಗಿ ಪ್ರಾಮಾಣಿಕವಾಗಿ ಸತಿಯ ಧರ್ಮ ಪಾಲಿಸಬೇಕಿದೆ. ನಗುಮುಖದ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡುವ ಜವಾಬ್ದಾರಿಯನ್ನು ಓರ್ವ ತಾಯಿಯಾಗಿ ನಾನು ನಿಭಾಯಿಸಬೇಕಿದೆ. ತವರಿನವರ ಬೆಂಬಲ, ಇಲಾಖೆಯಲ್ಲಿ ಮೇಲಾಧಿಕಾರಿಗಳ ಸಹಕಾರವಿದೆ. ಆರ್ಥಿಕ ಸಂಕಷ್ಟಗಳು ಎದುರಾಗಿರುವುದು ನಿಜವೇ ಆದರೂ, ದೇವರ ರೂಪದಲ್ಲಿ ಯಾರಾದರೂ ನೆರವಿಗೆ ಧಾವಿಸುವ ನಿರೀಕ್ಷೆಯಲ್ಲಿದ್ದೇನೆ. ಆದರೆ ನೋವಿಗೆ ಕುಗ್ಗುವುದಕ್ಕಿಂತ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತೇನೆ.
ಮಾಲತಿ ಬೊಂಬಳೇಕರ, 886790811
ಅಕ್ಷರದ ಹಂಬಲದಿಂದ ಸಾಹಿತಿಯಾದ ಶೋಭಾ
ತಂದೆ ಶಾಲೆಯ ಶಿಕ್ಷಕ, ಸಹೋದರ ಪಂಜಾಬ್ ರಾಜ್ಯದಲ್ಲಿ ಉಪನ್ಯಾಸಕ, ಆದರೆ ತಾನು ಮಾತ್ರ ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸುವ ಮುನ್ನವೇ ಮದುವೆಯಾಯ್ತು. ಇದರಿಂದ ಓದಿಗೆ ಶರಣು ಹೇಳಿದ್ದೇ ಆಕೆಯಲ್ಲಿ ಅಕ್ಷರದ ಛಲಗಾತಿಯನ್ನು ಹುಟ್ಟಿಹಾಕಿ, ಪ್ರಶಸ್ತಿ ಬಾಚುವ ಗುಣಮಟ್ಟದ ಸಾಹಿತಿಯನ್ನಾಗಿ ರೂಪಿಸಿದೆ. ಇಂಡಿ ತಾಲೂಕ ಹಿರೇಮಸಳಿ ಗ್ರಾಮದ ಶೋಭಾ ತುಕಾರಾಂ ಗುನ್ನಾಪುರ ಓದಿದ್ದು ಕೇವಲ 9 ನೇ ತರಗತಿ. ಕೌಟುಂಬಿಕ ಬದುಕಿನ ಹಳವಂಡದಲ್ಲಿ ಬಡತನ ಆಕೆಯಲ್ಲಿ ಅಕ್ಷರದ ತುಡಿತವಿದ್ದರೂ ಕೃಷಿ ಕಾಯಕವನ್ನು ಬಲವಂತವಾಗಿ ಒಪ್ಪಿಕೊಳ್ಳುವಂತೆ ಮಾಡಿತ್ತು. ಆದರೂ ಆಕೆಯಲ್ಲಿದ್ದ ಅಕ್ಷರ ಕಲಿಯುವ ಧಾವಂತ ನಿಂತಿರಲಿಲ್ಲ.
ಹಗಲು ಕೃಷಿ ಕೂಲಿ ಮಾಡುತ್ತಿದ್ದ ಶೋಭಾ, ರಾತ್ರಿ ವೇಳೆ ಗ್ರಾಮ ಗ್ರಂಥಾಲಯಕ್ಕೆ ತೆರಳಿ ಪುಸ್ತಕಗಳ ರಾಶಿಯಲ್ಲಿ ಕೃತಿಗಳನ್ನು ಹೆಕ್ಕಿ ತರುತ್ತಿದ್ದಳು. ವಿದ್ಯುತ್ ಸಂಪರ್ಕವೇ ಇಲ್ಲದ ಮುರುಕಲು ಮನೆಯಲ್ಲಿ ಸೀಮೆಎಣ್ಣೆಯ ಚಿಮಣಿ ದೀಪದ ಕತ್ತಲಲ್ಲಿ ಸಾಹಿತ್ಯದ ಅಭ್ಯಾಸದಲ್ಲಿ ತೊಡಗುತ್ತಿದ್ದಳು.
ಉನ್ನತ ಶಿಕ್ಷಣ ಪಡೆಯಬೇಕೆಂಬ ಹಂಬಲ ಜೀವನದಲ್ಲಿ ದಕ್ಕದಾದಾಗ ಶೋಭಾ ತನ್ನ ಮಕ್ಕಳ ಮೂಲಕ ತನ್ನ ಸೋಲಿಗೆ ಉತ್ತರ ಕೊಡಲು ಆರಂಭಿಸಿದಳು. ಚಿಮಣಿ ಬೆಳಕಲ್ಲಿ ಮಕ್ಕಳನ್ನು ಓದಿಸಿ, ಮಕ್ಕಳೊಂದಿಗೆ ಗ್ರಂಥಾಲಯದಿಂದ ತರುತ್ತಿದ್ದ ಸಾಹಿತ್ಯದ ಕೃತಿಗಳನ್ನು ತಾನೂ ಓದುತ್ತಿದ್ದಳು.
ಪರಿಣಾಮ ಮಗಳಿಗೆ ಬಿಎಬಿಎಡ್ ಪದವೀಧರೆ, ಎಂಜಿನಿಯರ್ ಓದಿರುವ ಮಗ ಅನಿಲ ಬಾಲಕೋಟೆಯ ಸರ್ವೇಯರ್. ಎಲ್‍ಎಲ್‍ಎಂ ಓದಿರುವ ಮಗ ಸುನಿಲ ಬೆಂಗಳೂರಿನಲ್ಲಿ ಬಡವರ ಪರ ಕಾನೂನು ಹೋರಾಟ ಮಾಡುತ್ತಿದ್ದಾನೆ. ಇನ್ನೋರ್ವ ಮಗ ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ದೆಹಲಿಯಲ್ಲಿ ತರಬೇತಿ ಪಡೆದಿದ್ದಾನೆ. ಸಮಾಜಕ್ಕೆ ಮೌಲಿಕ ಕೊಡುಗೆ ನೀಡುವಂತೆ ಸಂಸ್ಕಾರವಂತರನ್ನಾಗಿ ರೂಪಿಸಿದ್ದಾರೆ.
ಓದುವ ಗೀಳಿನ ಶೋಭಾ ರಚಿಸಿ ಕಳೆದ ವರ್ಷ ಮುದ್ರಣ ಕಂಡಿರುವ ಭೂಮಿಯ ಋಣ ಕಥಾಸಂಕಲನ ಬಿಡುಗಡೆಗೊಂಡ ಕೆಲವೇ ಸಮಯದಲ್ಲಿ ಹಲವು ಪ್ರಶಸ್ತಿ ಬಾಚಿದೆ. ರಾಜ್ಯದ ಲೇಖಕಿಯರ ಸಂಘದ ತ್ರಿವೇಣಿ ಸಾಹಿತ್ಯ ದತ್ತಿನಿಧಿ ಪ್ರಶಸ್ತಿ ಪಡೆದಿದೆ. ಬಿಳಗಿ ಸಾಹಿತ್ಯ ಸಮ್ಮೇಳನದ ದತ್ತಿನಿಧಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪಂಜಾಬ್ ರಾಜ್ಯದ ಸಾಮಾಜಿಕ ಹೋರಾಟಗಾರ್ತಿ ಮಾತಾ ಖೀವಿ ಹೆಸರಿನಲ್ಲಿ ನೀಡುವ ಪ್ರಶಸ್ತಿ ಶೋಭಾ ಪಾಲಾಗಿದೆ.
ಸಾಂಪ್ರದಾಯಿಕ ಶಿಕ್ಷಣ ಪದವಿ-ಪ್ರಮಾಣ ಪತ್ರಗಳನ್ನು ಪಡೆಯುವಲ್ಲಿ ವಿಫಲವಾದರೂ ಜೀವನ ಪಾಠ ಶಾಲೆಯಲ್ಲಿ ಪಿಎಚ್‍ಡಿ ಮೀರಿದ ಸಾಧನೆ ಮಾಡಿದ್ದಾರೆ. ಅಕ್ಷರ ಕಲಿಕೆಯ ಹಂಬಲದಿಂದಾಗಿ ಸಾಹಿತ್ಯದ ಗೀಳು ಹಚ್ಚಿಕೊಂಡ ಶೋಭಾ ತಾಳಿದವಳು ಬಾಳಿಯಾಳು ಎಂದು ತಮ್ಮ ಆತ್ಮಕಥೆ ಬರೆದಿದ್ದು, ಮುದ್ರಣಕ್ಕೆ ಕಾದಿದಿದೆ.
ಇದೀಗ ಹೆಸರಿಡದ ಕಾದಂಬರಿ ರಚನೆಯಲ್ಲಿ ತೊಡಗಿದ್ದು, ಮುಕ್ತಾಯದ ಹಂತದಲ್ಲಿದೆ. ಗ್ರಾಮೀಣ ಬದುಕಿನಲ್ಲಿ ತಾನೂ ಸೇರಿದಂತೆ ಮಹಿಳೆಯರು, ಶೋಷಿತರು ಅನುಭವಿಸುವ ನೋವುಗಳು, ಜೀವನದ ಸಂಕಷ್ಟಗಳು, ಕೃಷಿ ಬದುಕಿನ ಕಾಳಜಿಗಳನ್ನು ಕಾದಂಬರಿಯಲ್ಲಿ ಪಾತ್ರವಾಗಿಸುಲು ಮುಂದಾಗಿದ್ದಾರೆ. ಗಮನೀಯ ಅಂಶ ಎಂದರೆ ಆಧುನಿಕ ತಂತ್ರಜ್ಞಾನದ ಮೊಬೈಲ್-ವಾಟ್ಸಾಪ್ ಸಾಫ್ಟವೇರ್‍ಗಳನ್ನು ಬಳಸಿಕೊಂಡು ಮೊಬೈಲ್‍ನಲ್ಲೇ ಸಾಹಿತ್ಯದ ಕೃತಿಗಳನ್ನು ಬರೆಯಲು ಮುಂದಾಗಿದ್ದಾರೆ. ರಚನಾತ್ಮಕ ಕೆಲಸಗಳಿಗೆ ಮೊಬೈಲ್ ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದಕ್ಕೂ ಶೋಭಾ ಸಾಕ್ಷಿಯಾಗಿದ್ದಾರೆ.
ಗ್ರಾಮೀಣ ಜನರ ಬದುಕು, ಸ್ತ್ರೀ ಸಂವೇದಿ ಅಂಶಗಳನ್ನು ಆಧರಿಸಿ ಕಥೆ, ಕಾದಂಬರಿ, ಆತ್ಮಕಥೆಯಂಥ ಸಾಹಿತ್ಯ ಸೃಷ್ಟಿಗೆ ಮುಂದಾಗಿರುವ ಹೈಸ್ಕೂಲ್ ಓದು ಮುಗಿಸದ ಶೋಭಾ, ತನ್ನ ಮಕ್ಕಳಲ್ಲೂ ಸಾಹಿತ್ಯ ರಚನೆಗೆ ಸ್ಪೂರ್ಥಿ ತುಂಬಿದ್ದಾರೆ. ಪರಿಣಾಮ ಪುತ್ರ ಅನಿಲ ಕಥೆ, ಕವನ ಸಂಕಲನ ಹೊರ ತಂದಿದ್ದು, ಆತನ ಕೃತಿಗಳೂ ಪ್ರಶಸ್ತಿ ಬಾಚಿವೆ.
ಪದವಿ ಶಿಕ್ಷಣ ಪಡೆದವರು ಮಾತ್ರ ಸಾಹಿತ್ಯ ರಚಿಸಲು ಸಾಧ್ಯ ಎಂಬ ಭ್ರಮೆಯಲ್ಲಿ ಇರುವ ಮಂದಿಗೆ ಶೋಭಾ ಉತ್ತರವಾಗಿದ್ದಾಳೆ. ಜೀವನ ಶಿಕ್ಷಣದಲ್ಲಿ ಗೆಲ್ಲುವುದಕ್ಕೆ ಅಕ್ಷರ ಹಾಗೂ ಸಾಹಿತ್ಯವನ್ನು ಸಮೃದ್ಧ ಬದುಕು ಕಟ್ಟಿಕೊಳ್ಳಲು ಹೇಗೆ ಮೆಟ್ಟಿಲಾಗಿಸಿಕೊಳ್ಳಬಹುದು ಎಂಬುದಕ್ಕೆ ಭೀಮಾ ತೀರ ಎಂದು ಮೂದಲಿಸುವ ನೆಲದಲ್ಲೇ ಸಾಕ್ಷಿಯಾಗಿ ಶೋಭಾ ಶೋಭಾಯಮಾನವಾಗಿದ್ದಾರೆ.
ಶೋಭಾ ಗುನ್ನಾಪುರ, ಮೊ. 78998 10377, 7406481629
ಬಹುಮುಖ ಕಾಯಕಜೀವಿ ಗಂಗೂಬಾಯಿ
ಪಿಯುಸಿ ವರೆಗೆ ಓದಿದ್ದರೂ ಈಕೆ ಅಕ್ಷರಲೋಕಕ್ಕೆ ಬರುವ ಮಕ್ಕಳಿಗೆ ಶಿಕ್ಷಕಿಯಾಗುತ್ತಾಳೆ, ಶಾಲೆಯಲ್ಲಿ ಹಸಿದ ಮಕ್ಕಳ ಹೊಟ್ಟೆ ತುಂಬಿಸಲು ಬಿಸಿಯೂಟ ತಯಾರಿಸುವ ಅನ್ನದಾತೆಯಾಗುತ್ತಾರೆ. ಅಕ್ಷರ ದಾಸೋಹದಲ್ಲಿ ಕಡಿಮೆ ಸಂಬಳ ಇರುವುದರಿಂದ ಕೃಷಿ ಕೂಲಿಗೂ ಹೋಗುತ್ತಾರೆ. ಬಸವನಬಾಗವಾಡಿ ತಾಲೂಕಿನ ಮಸೂತಿ ಗ್ರಾಮದ ಗಂಗೂಬಾಯಿ ಸುಭಾಶ ಉಳ್ಳಾಗಡ್ಡಿ ಹೆಸರಿನ ಮಹಿಳೆಯೇ ಈ ಬಹುಮುಖ ಪ್ರತಿಭಾವಂತೆ. ಪಿಯುಸಿ ಓದಿದ ಬಳಿಕ ಮಸೂತಿ ಗ್ರಾಮದಲ್ಲೇ ಇರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಶುವಿಹಾರದಲ್ಲಿ ಶಿಕ್ಷಕಿಯಾಗಿದ್ದರು.
ಸದರಿ ಸಂಸ್ಥೆಯ ಪ್ರಾಥಮಿಕ ಶಾಲೆ ಸರ್ಕಾರದ ಅನುದಾನದ ವಾಪ್ತಿಗೆ ಒಳಪಟ್ಟಾಗ, ಶಾಲೆಯವರ ಮಾರ್ಗದರ್ಶನದಂತೆ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಕೆಲಸಕ್ಕೂ ಮುಂದಾದರು. ನಿತ್ಯವೂ ತಮ್ಮ 3-4 ಸಹವರ್ತಿಗಳೊಂದಿಗೆ ಅಕ್ಷರ ದಾಸೋಹ ಯೋಜನೆಯಲ್ಲಿ ಸುಮಾರು 300 ಮಕ್ಕಳಿಗೆ ಬಿಸಿಯೂಟ ತಯಾರಿಕೆ ಕೆಲಸ ಮಾಡುತ್ತಾರೆ. ಶಿಕ್ಷಕರು ಕೊರತೆ ಇದ್ದಾಗ ಬಿಸಿಯೂಟದ ಮಾಡಿದ ಬಳಿಕ ಮಕ್ಕಳಿಗೆ ಪಾಠವನ್ನೂ ಮಾಡುವ ಗಂಗೂಬಾಯಿ, ಮನೆಯ ಆರ್ಥಿಕ ಪರಿಸ್ಥಿತಿ ಸುದಾರಿಸಲೆಂದು ಮಧ್ಯಾಹ್ನದ ಬಳಿಕ ಕೃಷಿ ಕೂಲಿ ಕೆಲಸಕ್ಕೂ ಹೋಗುತ್ತಾರೆ.
ಸರ್ಕಾರ ಅಕ್ಷರ ದಾಸೋಹ ಯೋಜನೆಯ ಸಿಬ್ಬಂದಿಗೆ ನೀಡುವ 3700 ರೂ. ಗೌರವ ಸಂಭಾವನೆಯಿಂದ ಕೌಟುಂಬಿಕ ಆರ್ಥಿಕ ಪರಿಸ್ಥಿತ ನಿರ್ವಹಿಸುವುದು ಕಷ್ಟದ ಕೆಲಸ. ಹೀಗಾಗಿ ಮಧ್ಯಾಹ್ನ ಬಿಸಿಯೂಟದ ಕೆಲಸ ಮುಗಿದ ಮೇಲೆ ಕೃಷಿ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯ ಎನ್ನುವುದು ಗಂಗೂಬಾಯಿ ಮಾತು.
ಮಕ್ಕಳಾದ ಸಮರ್ಥ ಹಾಗೂ ಮದನ ಇವರನ್ನು ಶೈಕ್ಷಣಿಕವಾಗಿ ದೊಡ್ಡ ಸ್ಥಾನದಲ್ಲಿ ನೋಡಬೇಕೆಂಬ ಹಂಬಲದಿಂದಾಗಿ ನನ್ನ ದುಡಿಮೆಯ ಹಣವನ್ನು ಅವರ ಓದಿಗಾಗಿ ಬಳಸುತ್ತಿದ್ದೇನೆ. ಸರ್ಕಾರ ಕಡಿಮೆ ಸಂಬಳಕ್ಕೆ ನಮ್ಮನ್ನು ದುಡಿಸಿಕೊಳ್ಳುತ್ತದೆ ಎಂಬ ಕೊರಗಿನ ಮಧ್ಯೆಯೂ ನಿತ್ಯವೂ ಶಾಲೆಯಲ್ಲಿ ನೂರಾರು ಮಕ್ಕಳು ತಮ್ಮ ಕೈ ರುಚಿಗೆ ಕಾಯುತ್ತವೆ. ಈದಿನ ಸ್ಪೇಶಲ್ ಏನು ಕೇಳುತ್ತವೆ, ನಾಳೆ ಇದನ್ನೇ ಮಾಡಿ ಎಂದು ಕಾಡುತ್ತವೆ, ರುಚಿ ಹೆಚ್ಚಾದಾಗ ಇನ್ನಷ್ಟು ಬಡಿಸಿ ಎಂದು ಕೇಳುತ್ತವೆ.
ಮಕ್ಕಳು ಖುಷಿಯಿಂದ ಊಟ ಮಾಡುವ ಕಾರಣಕ್ಕೆ ಸಂಬಳ ಕಡಿಮೆ ಇದ್ದರೂ ಕುಟುಂಬದ ಸಲಹದಿದ್ದರೂ ಕಳೆದ 12 ವರ್ಷಗಳಿಂದ ಮಕ್ಕಳಿಗೆ ಬಿಸಿಯೂಟ ತಯಾರಿಕೆ ಕೆಲಸ ಬಿಟ್ಟಿಲ್ಲ. ಈಗಂತೂ ಶಿಕ್ಷಕರ ಕೊರತೆ ಇಲ್ಲವಾದರೂ ಅಗತ್ಯ ಬಿದ್ದರೆ ಶಿಕ್ಷಕರು ಇಲ್ಲದ ಸಂದರ್ಭದಲ್ಲಿ ಅಕ್ಷರ ಹೇಳಿಕೊಡುವ ಕೆಲಸವೂ ಸಂತೃಪ್ತಿ ನೀಡುತ್ತದೆ ಎನ್ನುತ್ತಾರೆ ಗಂಗೂಬಾಯಿ.
ಗಂಗೂಬಾಯಿ ಉಳ್ಳಾಗಡ್ಡಿ. ಮೊ.91488 16218
ಬಣ್ಣದ ಪ್ರೀತಿಗೆ ರುಕ್ಮಿಣಿಯಾದ ರಂಗನಾಯಕಿ
ರಂಗಭೂಮಿಯ ಬಣ್ಣದ ಬದುಕಿನ ಪ್ರೀತಿಗಾಗಿ ಆಕೆ ಏನೆಲ್ಲವನ್ನು ತ್ಯಾಗ ಮಾಡಿದಳು, ಅದಕ್ಕಾಗಿ ಆಕೆ ಕಳೆದುಕೊಂಡುದೇನು, ಪಡೆದುದೇನು ಎಂದು ಸಿಂಹಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಒಂದನ್ನು ಕಳೆದಕೊಂಡರೆ ಮಾತ್ರವೇ ಮತ್ತೊಂದು ಸಿಗುವುದು ಎಂಬ ಸತ್ಯದ ಅರಿವಾದಾಗ ಆಕೆ ಮತ್ತೆ ಮೌನಿಯಾಗುತ್ತಾಳೆ.
ರುಖಿಯಾ ರುಕ್ಮಿಣಿಯಾದ ಕಥೆಯೇ ರೋಮಾಂಚನ ಮೂಡಿಸುತ್ತದೆ. ಓದಿನಲ್ಲಿ ಜಾಣೆಯಾಗಿದ್ದ ಆಕೆ ಕನ್ನಡ ಮಾತ್ರವಲ್ಲದೇ ಇಂಗ್ಲೀಷ, ಹಿಂದಿ, ಮರಾಠಿ ಅಂತೆಲ್ಲ ಹಲವು ಭಾಷೆ ಬಲ್ಲವಳಾಗಿದ್ದ ರುಖಿಯಾ ಕಾರಣದಿಂದ ಹೆತ್ತವರು ಆಕೆಯನ್ನು ಐಎಎಸ್ ಅಧಿಕಾರಿಯಾಗಿ ರೂಪಿಸುವ ಕನಸು ಕಂಡಿದ್ದರು.
ಯಕ್ಷಗಾನದ ಹಿರಿಯ ಚೇತನ ಶಂಭು ಹೆಗಡೆ ಅವರ ಹೊನ್ನಾವರ ಮೂಲದ ಶಿಷ್ಯ ವೆಂಕಟೇಶ ಹೆಗಡೆ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ವೆಂಕಟೇಶ ಹೆಗಡೆ ಅವರ ನಾಟಕ ನೋಡುತ್ತಲೇ ರಂಗಭಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡ ರುಖಿಯಾ, ತಾನೊಬ್ಬ ರಂಗನಾಯಕಿ ಆಗಬೇಕೆಂಬ ಹಂಬಲದಿಂದ ಪದವಿ ಶಿಕ್ಷಣ ಮುಗಿಸಲೂ ಸಾಧ್ಯವಾಗಲಿಲ್ಲ.
ಒಂದೆಡೆ ರಂಗಭೂಮಿ ಸೆಳೆತ, ಮತ್ತೊಂದೆಡೆ ಹೆತ್ತವರ ಕನಸು, ಶೈಕ್ಷಣಿಕ ಸಾಧನೆ ಮಾಡುವ ತುಡಿತ. ಆದರೆ ಅಂತಿಮವಾಗಿ ಹಾದಿಯಲ್ಲಿ ಕೊಂಡೊಯ್ಯದೇ ಬಣ್ಣ ಬದುಕಿನತ್ತ ಸೆಳೆದೊಯ್ಯಿತು. ಪರಿಣಾಮ ಹೆತ್ತವರ ವಿರೋಧದ ಮಧ್ಯೆ ಆಕೆ ಬಣ್ಣದ ಬದುಕಿನ ರಂಗನಾಯಕಿ ಕನಸನ್ನೇ ಆಯ್ಕೆ ಮಾಡಿಕೊಂಡರು.
ಇದರ ಪರಿಣಾಮ ರುಖಯಾ ಇದ್ದವರು ರುಕ್ಮಿಣಿಯಾದರು, ರಂಗಭೂಮಿಯಲ್ಲಿನ ವೆಂಕಟೇಶ ಹೆಗಡೆ ಅವರ ಕಲಾಸಾಧನೆ ರುಕ್ಮಿಣಿ ಅವರನ್ನು ರುಕ್ಮಿಣಿ ವೆಂಕಟೇಶ ಹೆಗಡೆ ಆಗುವ ಹಂತದ ಪ್ರೀತಿಯ ಸೆಳೆತದವರೆಗೂ ಕೊಂಡೊಯ್ಯಿತು. ಇದಕ್ಕಾಗಿ ಆಕೆ ಹೆತ್ತವರ ವಿರೋಧ ಕಟ್ಟಿಕೊಂಡಳು.
ತನ್ನ ಕನಸುಗಳನ್ನು ಬಲಿಕೊಟ್ಟು, ರಂಗದೆಡೆ ಪ್ರೀತಿ ಬೆಳೆಸಿಕೊಂಡ ರುಕ್ಮಿಣಿ ಅವರಿಗೆ ವೆಂಕಟೇಶ ಬಣ್ಣದ ಬದುಕಿನಲ್ಲಿ ಅಭಿನಯಕ್ಕೆ ಇರುಬೇಕಾದ ಭಾವ-ಭಂಗಿಗಳನ್ನು ಕಲಿಸಿಕೊಟ್ಟರು. ರಂಗಗೀತೆಗಳಿಗೆ ಧ್ವನಿಯಾಗುವ ವಿಧಾನ ಹೇಳಿಕೊಟ್ಟರು.
ಅಂತಿಮವಾಗಿ ಬಣ್ಣದ ಪ್ರೀತಿಗಾಗಿ ಧರ್ಮಾಂತರಕ್ಕೂ ಸಿದ್ಧಳಾಗಿ ಬಂದ ರುಕ್ಮಿಣಿ ನಾಡಿನ ಹೆಮ್ಮೆಯ ರಂಗಕಲಾವಿದೆಯಾಗಿ ಹೆಸರು ಮಾಡಿದರು. ಸುಮಾರು 5 ಶತಕಕ್ಕೂ ಹೆಚ್ಚು ರಂಗ ಪ್ರದರ್ಶನ ನೀಡಿದರು. ವೃತಿ ರಂಗಭೂಮಿ, ಹವ್ಯಾಸಿ ಎರಡರಲ್ಲೂ ತಮ್ಮ ಪ್ರತಿಭೆ ಅನಾವರಣ ಮಾಡಿ, ಸೈ ಎನಿಸಿಕೊಂಡರು.
ಇಷ್ಟಾದರೂ ಸಮಾಜದಲ್ಲಿ ರಂಗ ಕಲಾವಿದರನ್ನು ಸಮಾಜ ನೋಡುವ ದೃಷ್ಟಿಕೋನ, ಗೌರವ ಕೊಡದ ಮೂದಲಿಕೆ ಕೇಳಿ ಕನಲುತ್ತಾರೆ. ರಂಗಭೂಮಿ ನೆಚ್ಚಿಕೊಂಡು ಅನುಭವಿಸಿದ ನೋವು, ಸಂಕಷ್ಟಗಳನ್ನೆಲ್ಲ ನೆಸಿಕೊಂಡಾ ರುಕ್ಮಿಣಿ ಹೃದಯ ಭಾರವಾಗಿ ನಿಟ್ಟುಸಿರು ಬಿಡುತ್ತಾರೆ.
ರಂಗನಾಯಕ ವೆಂಕಟೇಶ ಕೆಲ ವರ್ಷಗಳ ಹಿಂದೆ ಕಾಲವಾದಾಗ ಒಂಟಿಯಾಗಿರುವ ರುಕ್ಮಿಣಿ ಹೆಗಡೆ, ಇದೀಗ ಮಗ ಶಶಿಧರ ಹೆಗಡೆ ಉತ್ತಮ ಭವಿಷ್ಯ ರೂಪಿಸಿ ಕೊಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇನೆ. ಕಳೆದುಕೊಂಡ ಬದುಕಿನ ಬಗ್ಗೆ ವಿಷಾದಿಸಿ ಫಲವಿಲ್ಲ, ಆಯ್ಕೆ ಮಾಡಿಕೊಂಡ ಬದುಕು ಹೆಸರು, ಕೀರ್ತಿ ತಂದುಕೊಟ್ಟಿದ್ದು, ಸಂತೃಪ್ತಿ ಇದೆ ಎನ್ನುವಾಗ ಮೊಗದಲ್ಲಿ ನಗು, ಹೃದಯದಲ್ಲಿ ವಿಷಾದ ಎರಡೂ ಜೊತೆಯಾಗಿದ್ದವು.
ರುಕ್ಮಿಣಿ ಹೆಗಡೆ, ಮೊ.9740972406
ಪತಿಯ ಒತ್ತಾಸೆಯ ಸಾಧಕ ಚಿತ್ರಕಲಾವಿದೆ
ಅಪ್ಪ ಪೊಲೀಸ್ ಇಲಾಖೆಯಲ್ಲಿದ್ದರೂ ಮಗಳು ಮಾತ್ರ ಸಾಂಸ್ಕೃತಿಕ ಮನಸ್ಥಿತಿಯಲ್ಲೇ ಬೆಳೆದಳು. ಬಾಲ್ಯದಲ್ಲಿ ಸೀಸ್ ಪೆನ್ಸಿಲ್‍ನಿಂದ, ವಾಟರ್ ಕಲರ್ ಗಳಿಂದ ಬಿಡಿಸುತ್ತಿದ್ದ ಚಿತ್ರಗಳಿಗೆ ಜೀವ ತುಂಬುತ್ತಿದ್ದಳು. ಹೈಸ್ಕೂಲ್ ಶಿಕ್ಷಣ ಮುಗಿಸುತ್ತಲೇ ಮದುವೆಯಾಗಿ ಗಂಡನ ಮನೆ ಸೇರಿದ್ದಳು.
ಆದರೇನು ಆಕೆಯಲ್ಲಿ ಅಡಗಿದ್ದ ವರ್ಣಚಿತ್ರಕಲಾವಿದೆ ಸುಮ್ಮನೇ ಕೂಡಲಿಲ್ಲ. ಪತ್ನಿಯಲ್ಲಿದ್ದ ಕಲಾವಿದೆಯನ್ನು ಗುರುತಿಸಿದ ಪತಿ ನೀಡಿದ ಪ್ರೋತ್ಸಾಹದಿಂದಾಗಿ ರಾಜೇಶ್ವರಿ ಆಲಕುಂಟೆ ಈಗ ಚಿತ್ರಕಲೆಯಲ್ಲಿ ಮಾಸ್ಟರ್ ಪದವೀಧರೆಯಾಗಿ ಹೊರಹೊಮ್ಮಿದ್ದಾರೆ.
ಕಲೆ, ಸಾಹಿತ್ಯ ಅಂತೆಲ್ಲ ಸಾಂಸ್ಕೃತಿಕ ಮನಸ್ಥಿತಿಯ ರಚನಾತ್ಮಕ ಮನೋಭಾವದ ಮಹದೇವ ಮೋಪಗಾರ ಅವರನ್ನು ರಾಜೇಶ್ವರಿ ಕೈಹಿಡಿದ್ದರು. ಪತ್ನಿಯಲ್ಲಿರುವ ಕಲಾವಿದೆಯನ್ನು ಗುರುತಿಸಿದ ಪತಿ, ರಾಜೇಶ್ವರಿ ಅವರನ್ನು ಚಿತ್ರಕಲೆಯಲ್ಲಿ ಪದವಿ, ಸ್ನಾತಕೋತ್ತರ ಪದಿವ ಪಡೆಯುವಂತೆ ಮಾಡಿತು.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅವರಿಗೆ ನಿರಾಸೆಯಾಯ್ತು. ಆದರೆ ತಾವು ಓದಿದ ಇಲಕಲ್ ಪಟ್ಟಣದ ಚಿತ್ರಕಲಾವಿದ ಖಾಸೀಂ ಕಣಸಾವಿ ಅವರು ರಾಜೇಶ್ವರಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು.
ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಚಿತ್ರಕಲೆಯ ಶಿಬಿರಗಳು, ಕಾರ್ಯಾಗಾರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಪರಿಚಯಿಸಿ, ಅವಕಾಶ ಕಲ್ಪಿಸಿದರು. ಇದರಿಂದಾಗಿ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಇವರ ಚಿತ್ರಕಲಾ ಕಾರ್ಯಾಗಾರ ನಡೆದವು.
ಇವರ ಕುಂಚದಲ್ಲಿ ಅರಳಿದ ವೈವಿಧ್ಯಮಯ ಚಿತ್ರ ಕಲಾಕೃತಿಗಳು ಕರ್ನಾಟಕ ಮಾತ್ರವಲ್ಲದೇ ಹಲವು ರಾಜ್ಯಗಳಲ್ಲಿ ಪ್ರದರ್ಶನ ಕಂಡವು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಬಾಚಿದವು. ಹಲವು ಪ್ರಶಸ್ತಿ-ಸನ್ಮಾನಗಳು ರಾಜೇಶ್ವರಿ ಅವರ ಮುಡಿಗೇರಿವೆ.
ಹೈಸ್ಕೂಲ್‍ಗೆ ಶಿಕ್ಷಣ ಮುಗಿಸಿದ್ದ ರಾಜೇಶ್ವರಿ ಅವರಿಗೆ ತಮ್ಮಲ್ಲಿರುವ ಪ್ರತಿಭೆ ಗುರುತಿಸಿ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಪತಿ, ಹಿರಿಯ ಕಲಾವಿದರಾದ ಖಾಸೀಂ ಅವರ ಬಗ್ಗೆ ಕೃತಜ್ಞತೆಯಿಂದ ಸ್ಮರಿಸುವ ಮೂಲಕ ತಮ್ಮಲ್ಲಿರುವ ಸೌಜನ್ಯ ಪ್ರದರ್ಶಿಸುತ್ತಾರೆ ಹಮ್ಮು-ಬಿಮ್ಮುಗಳಿಲ್ಲದ ಕಲಾವಿದೆ.
ರಾಜೇಶ್ವರಿ ಮೋಪಗಾರ :ಮೊ. 99450 37074
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.