ಮಹಿಳಾ ದಿನಾಚರಣೆ ವಿಶೇಷ: ಸ್ತ್ರೀ ಸಮಾನತೆ ಸಾರಿದ ಬಸವನಾಡಿನ ಪಂಚ ಮಹಿಳೆಯರ ಯಶೋಗಾಥೆ
Team Udayavani, Mar 8, 2022, 10:00 AM IST
ಹೆಣ್ಣಿನಂದಲೆ ಇಹವುಂಟು/ ಹೆಣ್ಣಿನಿಂದಲೇ ಪರವುಂಟು ಹೆಣ್ಣಿನಿಂದ ಸಕಲ ಫಲವುಂಟು-ಮರೆದರೆ ಹೆಣ್ಣಿಂದ ಮರಣ ಸರ್ವಜ್ಞ
ತ್ರಿಪದಿ ವಚನಕಾರ ಸರ್ವಜ್ಞ ತಮ್ಮ ಮೂರು ಸಾಲಿನ ವಚನದಲ್ಲಿ ಇಡೀ ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ಬಣ್ಣಿಸಿದ್ದಾರೆ. ಬದುಕಿನಲ್ಲಿ ಹೆಣ್ಣಿನ ಅಸ್ತಿತ್ವ, ಹೆಣ್ಣಿನ ಹಿರಿಮೆ ಹಾಗೂ ಹೆಣ್ಣಿನಿಂದಲೇ ಅವಸಾನದ ಹಾದಿಯನ್ನೂ ಅರುಹಿದ್ದಾನೆ. ಅಷ್ಟರ ಮಟ್ಟಿಗೆ ಜಗತ್ತಿನ ಮನುಕುಲದ ಸಮಿಷ್ಟಿಯ ಸೃಷ್ಟಿಯಲ್ಲಿ ಸ್ತ್ರೀ ಪಾತ್ರದ ಅಗತ್ಯವನ್ನು ಮನಗಾಣಿಸಿದ್ದಾರೆ.
ನಮ್ಮೊಳಗಿದ್ದೂ ನಮ್ಮಂತಾಗದ, ನಮ್ಮೊಳಗಿನ ಸಾಮಾನ್ಯರಲ್ಲೇ ಸಾಮಾನ್ಯರಂತಿರುವ ಅಸಾಮಾನ್ಯ ಮಹಿಳೆಯರ ಕುರಿತು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಂತದಲ್ಲಿ ವಿಜಯಪುರ ಜಿಲ್ಲಾ ಹಿರಿಯ ವರದಿಗಾರ ಜಿ.ಎಸ್.ಕಮತರ ಸ್ತ್ರೀ ಸಮಾನತೆ ಸಾರಿದ ಬಸವನಾಡಿನ ಹಲವು ಮಾದರಿ ಮಹಿಳೆಯರ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ.
*************
ಸೋಲನ್ನೇ ಸೋಲಿಸಿದ ವಂದನಾ :
ಹುಟ್ಟೂರು ಮಹಾರಾಷ್ಟ್ರದ ಸಾಂಗ್ಲಿ, ಎಸ್ಸೆಸ್ಸಲ್ಸಿ ಓದುತ್ತಲೇ ಮದುವೆಯಾಗಿ ಕೃಷಿ ಕಟುಂಬದ ಹಿನ್ನೆಲೆಯ ತವರಿನಿಂದ ಉದ್ಯಮದ ಸಿರಿತನದ ಹಿನ್ನೆಲೆ ಇರುವ ವಿಜಯಪುರ ನಗರದ ಪತಿ ಪ್ರಕಾಶ ಬಗಲಿ ಕೈಹಿಡಿದಾಗ ಎಲ್ಲವೂ ಸರಿ ಇತ್ತು. ಎರಡು ಮಕ್ಕಳು ಹುಟ್ಟಿ ಶಾಲೆಗೆ ಹೋಗುವ ಹಂತದಲ್ಲಿ ಸಂಭವಿಸಿದ ಪತಿಯ ಅಗಲಿಕೆ ಆಕೆಯನ್ನು ಕಂಗಲಾಗಿಸಿತ್ತು. ಆದರೆ ಅನಿರೀಕ್ಷಿತವಾಗಿ ಎದರಾದ ಬದುಕಿನ ಸೋಲನ್ನು ಸವಾಲಾಗಿ ಸ್ವೀಕರಿಸಿದ್ದರಿಂದ 50 ಜನರಿಗೆ ಉದ್ಯೋಗ ನೀಡಿದ್ದರಿಂದ ವಂದನಾ ಬದುಕು ಇದೀಗ ವಂದನೀಯವಾಗಿದೆ.
ಅಕ್ಷರ ಜ್ಞಾನವಿದ್ದರೂ ವ್ಯವಹಾರ ಜ್ಞಾನವಿಲ್ಲದ ಕಾರಣ ಪತಿಯ ಸಾವಿನ ನಂತರ ಮುಂದೇನು ಎಂಬ ಚಿಂತೆಯಲ್ಲಿದ್ದಾಗಲೇ ಬಂಧುಗಳ ಕೊಂಕು-ಟೀಕೆಗಳ ಮಾತೂ ಕಿವಿಗೆ ಬಿದ್ದಿದ್ದವು. ಆದರೆ ಧೃತಿಗೆಡದ ಧೀರೆ ವಂದನಾ ಪುರುಷ ಪ್ರಧಾನ ಎನಿಸಿರುವ ಉದ್ಯಮಗಳತ್ತ ಚಿತ್ತ ನೆಟ್ಟರು.
ಪುರುಷರದ್ದೇ ಪಾರುಪತ್ಯ ಇರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 18 ವರ್ಷದ ಹಿಂದೆ ಕಮೀಶನ್ ಏಜೆಂಟ್ ಲೈಸೆನ್ಸ್ ಪಡೆದು ಅಡತ್ ( ದಲ್ಲಾಳಿ) ಅಂಗಡಿ ಹೊಂದಿದ್ದಾರೆ. ವಿಜಿಯಪುರ ಜಿಲ್ಲೆ ಮಾತ್ರವಲ್ಲದೇ ನೆರೆಯ ಕಲಬುರ್ಗಿ ಜಿಲ್ಲೆಯಲ್ಲಿ ಉದ್ಯಮ ಬಾಂಧವ್ಯದ ರೈತರನ್ನು ಹೊಂದಿದ್ದಾರೆ. ಇದೀಗ ವಾರ್ಷಿಕ 20 ಕೋಟಿ ವಹಿವಾಟು ನಡೆಸುವ ಸಾಮಥ್ರ್ಯ ಹಂದಿದ್ದಾರೆ. ಕೋವಿಡ್ ಸಂಕಷ್ಟದ ಈ ಹಂತದಲ್ಲಿ ಉದ್ಯಮ ಕುಸಿದರೂ 10 ಕೋಟಿ ವಹಿವಾಟು ಮಾಡಿದ್ದಾರೆ. ಇದಲ್ಲದೇ ತ್ವಿಚಕ್ರ ವಾಹನ ಶೋರೂಂ ಹೊಂದಿರುವ ಅವರು ಅಟೋಮೊಬೈಲ್ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಜೀವನದ ಹೋರಾಟದ ಜೊತೆಗೆ ಮಗ ರೋಹನ್‍ನ್ನು ಎಂಬಿಎ ಶಿಕ್ಷಣ ಕೊಡಿಸಿ, ಮದುವೆ ಮಾಡಿ, ಸ್ವತಂತ್ರವಾಗಿ ದ್ವಿಚಕ್ರ ವಾಹನ ಶೋರೂಂ ಉದ್ಯಮಿಯಾಗಿ ರೂಪಿಸಿದ್ದಾರೆ. ಎಂಜಿನೀಯರಿಂಗ್ ಪದವೀಧರೆ ಮಗಳು ಶ್ರದ್ಧಾಳನ್ನು ಮದುವೆ ಮಾಡಿಕೊಟ್ಟಿದ್ದಾರೆ.
ತಮ್ಮ ಉದ್ಯಮದಲ್ಲಿ 50 ಜನರಿಗೆ ಉದ್ಯೋಗ ನೀಡಿ ಮಾಸಿಕ ಸರಾಸರಿ 5 ಲಕ್ಷ ವೇತನ ನೀಡಿರುವ ಜೊತೆಗೆ, ಇಎಸ್‍ಐ-ಪಿಎಫ್ ಹಣವನ್ನೂ ಭರಿಸಿ ತಮ್ಮೊಂದಿಗೆ ಇರುವ ಸಿಬ್ಬಂದಿಯನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ. ಬದುಕೇ ದೊಡ್ಡ ಮಟ್ಟದ ಸೋಲುಣಿಸಿದರೂ ಆತ್ಮವಿಶ್ವಾಸ ಕಳೆದಕೊಳ್ಳದೇ ಸೋಲನ್ನೇ ಸೋಲಿಸಿದ ಧೀರತಡೆ ಮೆರೆದಿದ್ದಾರೆ ವಂದನಾ.
*************
ನಟಿಯಾಗೋ ಹುಚ್ಚಿಗೆ ಹುಟ್ಟಿದ ಮನೆ ತೊರೆದ ಸುಭದ್ರಮ್ಮ :
ನಾಟಕದಲ್ಲಿ ನಟಿಸಬೇಕು ಎಂಬ ಬಾಲ್ಯದ ಹುಚ್ಚು ಮನೆಯನ್ನೇ ತೋರೆಯುವಂತೆ ಮಾಡಿದರೂ ಕುಟುಂಬದಲ್ಲಿ ಕಂಡುಂಡ ನೊವು, ಸಮಾಜ ನೀಡಿದ ಅಪಮಾನಗಳನ್ನೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿ, ಗೆದ್ದಾಕೆ ಹಿರಿಯ ರಂಗಕರ್ಮಿ ಸುಭದ್ರಮ್ಮ ಎಸ್. ಖರ್ಜಗಿ.
ಕಲಬುರ್ಗಿ ಮೂಲದ ಸುಭದ್ರಮ್ಮಳಿಗೆ ಬಾಲ್ಯದಲ್ಲಿ ನಾಟಕ, ಸಿನಿಮಾ ನೋಡುವ ಹುಚ್ಚು ಆಕೆಯಲ್ಲಿದ್ದ ಸಹಜ ಕಲಾವಿದೆಗೆ ಪ್ರಚೋದನೆ ನೀಡಿತು. ಗೌರವಯುತ ಕುಟುಂಬದಲ್ಲಿನ ಹೆಣ್ಣು ನಾಟಕಗಳಲ್ಲಿ ನಟಿಸುವುದನ್ನು ಅಪಮಾನ ಎಂದುಕೊಂಡ ಹೆತ್ತವರು, ಒಡಹುಟ್ಟಿದವರು ವಿರೋಧಿಸಿ, ಹಲ್ಲೆ ಮಾಡಿದರು. ಆದರೆ 13 ರ ಬಾಲೆ ಸುಭದ್ರಮ್ಮ ನಟಿಸುವ ಹುಚ್ಚಿಗಾಗಿ ಹುಟ್ಟಿದ ಮನೆಯನ್ನೇ ತೊರೆದು ಹುಬ್ಬಳ್ಳಿಗೆ ಬಂದರು.
ಅಂದಿನ ಹಿರಿಯ ರಂಗಕರ್ಮಿ ಪುಷ್ಪಾ ಹುಬ್ಬಳ್ಳಿ 1973 ರಲ್ಲಿ ಮೊದಲ ಬಾರಿಗೆ ಮುಖಕ್ಕೆ ಬಣ್ಣ ಹಚ್ಚಿ ಚಿನ್ನದಗೊಂಬೆ ನಾಟಕದಲ್ಲಿ ಪಾತ್ರ ನೀಡಿದರು. ಅಲ್ಲಿಂದ ಹಿಂದಿರುಗಿ ನೋಡದ ಸುಭದ್ರಮ್ಮ ಸುಮಾರು 20 ಕ್ಕೂ ಹೆಚ್ಚು ಕಂಪನಿ ನಾಟಕಗಳಲ್ಲಿ ನಟಿಸಿದರು. 50 ವರ್ಷದ ವರೆಗೆ ನಟಿಸಿದ ನಾಟಕಗಳಿಗೆ ಲೆಕ್ಕ ಇರಿಸಿಲ್ಲ.
ಅರ್ಧ ಶತಮಾನದ ರಂಗದ ನಂಟು ಏಳುಗೆ ನೀಡಿದೇ ಬೀಳುಗಳನ್ನು ನೀಡಿದ್ದರೂ ವಾಸ್ತವವನ್ನು ನಂಬಿರುವ ಸುಭದ್ರಮ್ಮ ಇದಕ್ಕಾಗಿ ಯಾರನ್ನೂ ನಿಂದಿಸದೇ ನಗುತ್ತಲೇ ನೋವು ಮರೆತಿದ್ದಾರೆ.
ಹಾವೇರಿ ಮೂಲದ ಪತಿ ಶರೀಫ್ ಸಾಹೇಬ್ ಅವರನ್ನು ವಿವಾಹವಾದ ಸುಭದ್ರಮ್ಮ, ಸಂಗಾತಿ ಜೊತೆ ಸೇರಿ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದರು. ಬಳಿಕ ತಮ್ಮದೇ ಸ್ವಂತದ್ದಾದ ರಾಘವೇಂದ್ರ ವಿಜಯ ನಾಟಕ ಕಂಪನಿ ಕಟ್ಟಿ ಒಡತಿಯಾದರು. ಆದರೆ ರಂಗಭೂಮಿ ಎದುರಿಸುವ ಸಾಮಾನ್ಯ ಸಮಸ್ಯೆ-ಸಂಕಷ್ಟಗಳ ಹೊಡೆತದಲ್ಲಿ ಕಂಪನಿ ನಷ್ಟಕ್ಕೆ ಸಿಲುಕಿದಾಗ ಕಂಪನಿ ಮಾರಿ, ನೆಲೆ ನಿಂತದ್ದು ಆದಿಲ್ ಶಾಹಿ ರಾಜಧಾನಿಯಲ್ಲಿ.
ಈ ಹಂತದಲ್ಲೇ ಪತಿಯೂ ಇಹಲೋಕ ತ್ಯಜಿಸಿದ ಹಂತದಲ್ಲಿ ಮಕ್ಕಳಿಲ್ಲದ ಸುಭದ್ರಮ್ಮಗೆ ಬಾಲ್ಯದಲ್ಲೇ ತವರು ಕೂಡ ವೈರುಧ್ಯವಾಗಿದ್ದರಿಂದ ಅಕ್ಷರಶ ಅನಾಥಳಂತೆ ಬರಿಗೈಲಿ ಬೀದಿಯಲ್ಲಿ ನಿಂತಿದ್ದಳು. ಆದರೆ ತಾನು ನಂಬಿದ್ದ ಕಲೆ ಆಕೆಯನ್ನು ಬೀದಿಯಲ್ಲಿ ನಿಲ್ಲಿಸದೇ ದಶಕದಿಂದ ಬೀದಿ ನಾಟಕಗಳ ಮೂಲಕ ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡಿತು.
ಪತಿಗೆ ಬರುತ್ತಿದ್ದ ಕಲಾವಿದರ ಮಾಸಾಶದ ಪೆನ್ಶನ್ 500 ರೂ. ವೃದ್ಧಾಪ್ಯದಲ್ಲಿ ಗಂಜಿಗೆ ಆಸರೆಯಾಗಿದೆ. ತಾವೇ ಕಲಾವಿದರಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೆ 2 ಸಾವಿರ ರೂ. ದೊರೆಯುವ ಅವಕಾಶ ಇದ್ದರೂ, ಹೊಸ ಅರ್ಜಿ ಸಲ್ಲಿಸಿದರೆ ಇದ್ದದ್ದೂ ಕೈ ತಪ್ಪಿದರೆ ಎಂಬ ಭೀತಿ ಅವರ ಕೈಕಟ್ಟಿಹಾಕಿದೆ. ಕಲೆಗಾಗಿ 50 ವರ್ಷಗಳನ್ನೇ ಮುಡುಪಾಗಿಸಿಟ್ಟಿದ್ದರೂ ಲಾಬಿ ಇಲ್ಲದ ಈ ಹಿರಿಯ ಕಲಾವಿದೆಯನ್ನು ಹುಡುಕಿಕೊಂಡು ಯಾವ ಪ್ರಶಸ್ತಿಯೂ ಬಂದಿಲ್ಲ. ನೆಲೆಯೇ ಇಲ್ಲದ ನನಗೆ ಪ್ರಶಸ್ತಿ-ಸಮ್ಮಾನಗಳೆಲ್ಲ ಏಕೆ ಬೇಕು ಬಿಡಿ ಎನ್ನುವ ಮಾತು ಸಮಾಜಕ್ಕೆ ಚುಚ್ಚಿದ ಗುಂಡುಸೂಜಿಯಂತಿತ್ತು.
*************
ಹೆತ್ತವರ ಆರೈಕೆಯಲ್ಲೇ ಆಶಾಭಾವ
ಐಟಿಐ ಓದಿದ್ದ ಆಕೆಗೆ ಬೆಂಗಳೂರಿನ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ಮಗಳನ್ನು ಮದುವೆ ಮಾಡಬೇಕೆಂಬ ಹೆತ್ತವರ ಒತ್ತಾಸೆಗೆ ಬಂಗಾರಗುಂಡ ಗ್ರಾಮದ ಮಾಳಗುಂಡಮ್ಮ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಆದೆಪ್ಪ ಯರಗುಂಟಿ ಅವರನ್ನು ಕೈ ಹಿಡಿದರು. ಹೊಸ ಜೀವನ ರೂಪಿಸಿಕೊಳ್ಳುವ ಅನಿವಾರ್ಯಕ್ಕಾಗಿ ಬೆಂಗಳೂರಿನ ಉದ್ಯೋಗ ತೊರೆದು ನಾಲತವಾಡಕ್ಕೆ ಬಂದಾಕೆಗೆ ಕೃಷಿ ಉದ್ಯೋಗವಾಗಿತ್ತು.
13 ವರ್ಷದ ಹಿಂದೆ ತನ್ನೂರಲ್ಲಿ ಆಶಾ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಕರೆದಾಗ ಆಯ್ಕೆಯಾಗಿ ಸಮಾಜ ಸೇವೆಗೆ ಮುಂದಾದರು. ಕುಟುಂಬಕ್ಕೆ ಆಸರೆಯಾಗಿದ್ದ ಪತಿ ಆದೆಪ್ಪ 6 ವರ್ಷಗಳ ಹಿಂದೆ ನಿಧನರಾದಾಗ ಮಕ್ಕಳಿಲ್ಲದ ಮಾಳಗುಂಡಮ್ಮಗೆ ಸಹಜವಾಗಿ ದಿಕ್ಕೇ ತೋಚಂತಾಯ್ತು. ಆದರೆ ಧೃತಿಗೆಡದ ಆಕೆ ವೃದ್ಧರಾಗಿರುವ ತನ್ನ ಗಂಡನ ತಾಯಿಯಾದ ಅತ್ತೆ ಸಿದ್ದಮ್ಮ, ತನ್ನ ಹೆತ್ತವರಾದ ಸಾಯಿಬಣ್ಣ ಹಾಗೂ ಆದೆಮ್ಮ ಇವರನ್ನು ಆರೈಕೆ ಮಾಡುವಲ್ಲಿ ಜೀವನ ಸಾರ್ಥಕತೆ ಕಂಡುಕೊಂಡಿದ್ದಾಳೆ.
ಸರ್ಕಾರ ನೀಡುವ 6 ಸಾವಿರ ರೂ. ಸಂಭಾವನೆ, ಪತಿ ಕುಟುಂಬದ ಒಂದಷ್ಟು ತುಂಡು ಜಮೀನು ತನ್ನ ಕುಟುಂಬವನ್ನು ಸಾಕದಾದವು. ಹೀಗಾಗಿ ಬಿಡುವಿನ ಅವಧಿಯಲ್ಲಿ ಟೇಲರಿಂಗ್ ಹಾಗೂ ಇತರೆ ಕಸೂತಿ ಕೆಲಸಗಳಿಂದ ಒಂದಷ್ಟು ಆರ್ಥಿಕ ಆಸರೆಯಾಗಿದೆ.
ಪತಿ ಇಲ್ಲ, ಮಕ್ಕಳಿಲ್ಲ ಎಂಬ ಕೊರಗು ನನ್ನನ್ನು ಸೋಲಿಸುವುದಿಲ್ಲ. ಬದಲಾಗಿ ನನ್ನ ಕುಟುಂಬದ ವೃದ್ಧರ ಸೇವೆ ನನಗೆ ದೇವರು ದಯಪಾಲಿಸಿದ ವರ ಎನ್ನುವ ಗುಂಡಮ್ಮ ಇದ್ದುದರಲ್ಲೇ ಎಲ್ಲವನ್ನೂ ಕಾಣುವ ಭಾವ. ಆಶಾ ಕಾರ್ಯಕರ್ತೆಯಾಗಿ ನನ್ನೂರು, ಸಮಾಜಕ್ಕೆ ನನ್ನಿಂದಾಗುವ ಅಳಿಲು ಸೇವೆಯಲ್ಲಿ ನನ್ನ ಜೀವನದ ಸಾರ್ಥಕತೆ ಇದೆ ಎನ್ನುವ ಮಾಳಗುಂಡಮ್ಮ ಸಮಾಜದ ಪಾಲಿಗೆ ಪ್ರೀತಿಯ ಗುಂಡಮ್ಮ ಎಂದೇ ಮಮತೆ ತೋರಲು ಕಾರಣವಾಗಿದೆ.
*************
ಬಿಸಿಯೂಟದ ಶ್ರಮಿಕರ ಶಶಿ :
20 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಬಿಸಿಯೂಟ ತಯಾರಿಕೆ ಕಾಯಕ ಮಾಡುತ್ತಿರುವ ಶಶಿಕಲಾ ಮ್ಯಾಗೇರಿ ಹೋರಾಟಗಾರ್ತಿಯಾಗಿಯೇ ಹೆಚ್ಚು ಚಿರಪರಿಚಿತ. ಬಸನವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಈಕೆ ಪತಿ ಶಿವಶಂಕರ ಮ್ಯಾಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಆರ್ಥಿಕ ಸಮಸ್ಯೆ ಇಲ್ಲ.
ತಮ್ಮ ನಾಲ್ಕು ಮಕ್ಕಳಲ್ಲಿ ಓರ್ವ ಮಗಳಿಗೆ ನರ್ಸಿಂಗ್ ಶಿಕ್ಷಣ ಕೊಡಿಸಿದ್ದು, ಎಂಬಿಎ ಓದಿರುವ ಮಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾನೆ. ಇನ್ನಿಬ್ಬರು ಮಕ್ಕಳು ಹೈಸ್ಕೂಲ್-ಪಿಯು ಕಾಲೇಜಿನಲ್ಲಿ ಓದಿಸುತ್ತಿದ್ದಾರೆ.
ಆದರೆ ಸಮಾಜಕ್ಕೆ ನನ್ನಿಂದಲೂ ಏನಾದರೂ ಸೇವೆ ಮಾಡೋಣ ಎಂದು ಶಾಲೆ ಕಲಿಯುವ ಊರಿನ ಮಕ್ಕಳಿಗೆ ಬಿಸಿಯೂಟದ ಮಾಡಿ ಬಡಿಸುವ ಶಶಿಕಲಾ, ತನ್ನ ಸಹವರ್ತಿಗಳಿಗೆ ವೃತ್ತಿಯಲ್ಲಿ ಸಮಸ್ಯೆ ಎದುರಾದಾಗ ನೇರವಾಗಿ ಮುಂದೆ ನಿಂತು ಪರಿಹಾರ ಕಂಡುಕೊಡುತ್ತಾಳೆ.
ಈಕೆಯಲ್ಲಿರುವ ನಾಯಕತ್ವದ ಗುಣದಿಂದಾಗಿ ಬಿಸಿಯೂಟ ತಯಾರಿಕ ನೌಕರರ ಸಂಘದ ಜಿಲ್ಲಾ ಸಂಚಾಲಕಿಯೂ ಆಗಿದ್ದು, ಗ್ರಾಮದಲ್ಲಿ ಕಾವೇರಿ ಸ್ವಸಹಾಯ ಸಂಘವನ್ನೂ ಮುನ್ನಡೆಸುತ್ತಿದ್ದಾಳೆ. ಸಾಲದ್ದಕ್ಕೆ ಭೀಮ ಘರ್ಜನೆ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿಯಾಗಿ ಶೋಷಿತರ ಧ್ವನಿಯಾಗುತ್ತಿದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರು ದೇಶಾಧ್ಯಂತ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ಮುಂದಾಗಿರುವ ಶಶಿಕಲಾ, ಇದಕ್ಕಾಗಿ ಜಾರ್ಖಂಡ, ದೆಹಲಿ ಅಂತೆಲ್ಲ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಓಡಾಡುತ್ತಲೇ ಇರುತ್ತಾಳೆ. ನನಗೆ ಬಿಸಿಯೂಟ ನೌಕರಳಾಗಿ ಸಿಗುವ ಸಂಬಳ ಕಡಿಮೆಯಾದರೂ ನನ್ನೊಂದಿಗೆ ಸೇವೆ ಸಲ್ಲಿಸುವವರ ಸಮಸ್ಯೆಗೆ ಸ್ಪಂದಿಸುವ ಧ್ವನಿಯಾಗುವ ಅವಕಾಶ ಸಿಕ್ಕಿರಿವುದು ದೊಡ್ಡದು. ಹೀಗೆನ್ನುವ ಮೂಲಕ ಶಶಿಕಲಾ ಸಮಾಜಕ್ಕೆ ತನ್ನದೂ ಅಳಿಲು ಸೇವೆ ಸಿಗಲೆಂಬ ಹಂಬಲ ನಿಜಕ್ಕೂ ದೊಡ್ಡದೇ.
*************
ಅಕ್ಕನ ಮಕ್ಕಳಿಗೂ ತಾಯಿಯಾದ ಸಾವಿತ್ರಿ:
ಮುದ್ದೇಬಿಹಾಳ ತಾಲೂಕಿ ಹಿರೇಮುರಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಬಸವಂತ್ರಾಯ ನಾಗರತ್ತಿಗೆ ಹಸಿವಿನ ಬೆಲೆ ಗೊತ್ತು. ಕೂಲಿ ಮಾಡಿ ತನ್ನನ್ನು ಸಾಕಿ, ಶಿಕ್ಷಣ ಕೊಡಿಸಿದ ಅಪ್ಪನ ಬೆವರಿನ ಮೌಲ್ಯವೂ ಗೊತ್ತು.
ಜೆಓಡಿಸಿ ಶಿಕ್ಷಣ ಪಡೆದಿರುವ ಸಾವಿತ್ರಿ ಬಡತನದ ಕಾರಣಕ್ಕೆ ತಡವಾಗಿ ಮದುವೆಯಾಗಿದ್ದಾರೆ. ಖಾಸಗಿ ಕಾರು ಚಾಲಕನಾಗಿರುವ ಪತಿ ಸಂಗಮೇಶಗೆ ಸಿಗುವ 5-6 ಸಾವಿರ ರೂ. ಸಂಬಳದ ಜೊತೆಗೆ ತನಗೆ ಸಿಗುವ 10 ಸಾವಿರ ರೂ. ಗೌರವ ಧನ ಬರುತ್ತದೆ. ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ಕನ ನಾಲ್ಕು ಮಕ್ಕಳ ಬದುಕು ರೂಪಿಸಿಕೊಡುವ ಹೊಣೆ ಹೊತ್ತು, ದೊಡ್ಡದು ಮಾಡಿಕೊಂಡ ಕುಟುಂಬದ ನಿರ್ವಹಣೆಗೆ ಹೆಣಗುತ್ತಿದ್ದಾಳೆ.
ತನಗಿಂತ ಆರ್ಥಿಕ ದುಸ್ಥಿತಿಯಲ್ಲಿರುವ ಅಕ್ಕನ ನಾಲ್ವರು ಮಕ್ಕಳನ್ನು ಬಾಲ್ಯದಲ್ಲೇ ತನ್ನೊಂದಿಗೆ ತಂದಿರಿಸಿಕೊಂಡಿರುವ ಸಾವಿತ್ರಿ, ಇಬ್ಬರಿಗೆ ಈಗಾಗಲೇ ಪದವಿ ಹಂತದ ವರೆಗೆ ಶಿಕ್ಷಣ ಕೊಡಿಸಿದ್ದಾರೆ. ಪದವಿ-ಪದವಿ ಪೂರ್ವ ಪ್ರಥಮ ವರ್ಷದಲ್ಲಿ ಓದುತ್ತಿರುವ ಇನ್ನಿಬ್ಬರಿಗೆ ಶಿಕ್ಷಣ ಕೊಡಿಸುವ ಹೊಣೆಯನ್ನೂ ಹೊತ್ತಿದ್ದಾರೆ.
ಇದರೆ ಹೊರತಾಗಿಯೂ ಅಂಗನವಾಡಿ ಕಾರ್ಯಕರ್ತೆಯಾಗಿ ತನಗೆ ಸಿಕ್ಕಿಸುವ ಅವಕಾಶವನ್ನು ಊರಿನ ಮಕ್ಕಳ ಪೌಷ್ಠಿಕತೆ, ಶಿಕ್ಷಣ ಕೊಡುವ ಸೇವೆಯ ಜೊತೆಗೆ ಗ್ರಾಮದಲ್ಲಿ ಸಾಕ್ಷಕರತೆ ಹೆಚ್ಚಿಸಲು ಸಾವಿತ್ರಿ ಶ್ರಮಿಸಿದ್ದಾರೆ. ಈ ಕಾರಣಕ್ಕೆ ತನ್ನ ಮಕ್ಕಳಿಗೆ ಅಕ್ಕರೆಯ ತಾಯಿಯಾಗಿ, ಅಕ್ಕನ ಮಕ್ಕಳಿಗೆ ಮಮತಾಮಯಿಯಾಗಿ, ಅಂಗನವಾಡಿ ಮಕ್ಕಳಿಗೆ ಅಕ್ಷರದ ತಾಯಿಯಾಗಿ ಕುಟುಂಬದ ಹಾಗೂ ಸಮಾಜದಲ್ಲಿ ತನಗೆ ಸಿಕ್ಕಿರುವ ಜೀವನ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾಳೆ.
-ಜಿ.ಎಸ್.ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.