ಕ್ಯಾನ್ಸರ್‌: ಭಯ ಬೇಡ; ತ್ವರಿತ ಚಿಕಿತ್ಸೆಯಿಂದ ಉಪಶಮನ  

ಕ್ಯಾನ್ಸರ್‌ ಜಯಿಸಿದವರ ಯಶೋಗಾಥೆ

Team Udayavani, Feb 4, 2022, 6:30 AM IST

ಕ್ಯಾನ್ಸರ್‌: ಭಯ ಬೇಡ; ತ್ವರಿತ ಚಿಕಿತ್ಸೆಯಿಂದ ಉಪಶಮನ   

ಇತ್ತೀಚಿನ ದಶಕಗಳಲ್ಲಿ ವಿಶ್ವಾದ್ಯಂತ ಕ್ಯಾನ್ಸರ್‌ ಕಾಯಿಲೆ ಜನರನ್ನು ಮಾರಣಾಂತಿಕವಾಗಿ ಕಾಡುತ್ತಿದೆ. ಇದಕ್ಕೆ ಕ್ಯಾನ್ಸರ್‌ ಕಾಯಿಲೆಯ ಬಗೆಗಿನ ಅಜ್ಞಾನ, ಜಾಗೃತಿಯ ಕೊರತೆ, ಅನಾರೋಗ್ಯಕರ ಹವ್ಯಾಸಗಳು ಮತ್ತು ಜೀವನಶೈಲಿ ಮುಖ್ಯ ಕಾರಣಗಳಾಗಿವೆ. ಆದರೆ ಕ್ಯಾನ್ಸರ್‌ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಮತ್ತು ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಅತೀ ಆವಶ್ಯಕವಾದ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಕ್ಯಾನ್ಸರ್‌ ಪೀಡಿತರು ಸಹಜ ಜೀವನವನ್ನು ನಡೆಸಲು ಸಾಧ್ಯ. ಕ್ಯಾನ್ಸರ್‌ ಪೀಡಿತರು ಧೈರ್ಯಗುಂದದೆ ತಜ್ಞ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರ ಜತೆಯಲ್ಲಿ ಆರೋಗ್ಯಕರ ಹವ್ಯಾಸವನ್ನು ತಮ್ಮದಾಗಿಸಿಕೊಂಡಲ್ಲಿ ಗುಣಮುಖರಾಗಬಹುದು. ಇವೆಲ್ಲವುಗಳಿಗಿಂತ ಮುಖ್ಯವಾಗಿ ಕ್ಯಾನ್ಸರ್‌ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಕೂಡ ಅತ್ಯಗತ್ಯವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್‌ ದಿನವನ್ನು ಆಚರಿಸಲಾಗುತ್ತಿದೆ. ಕ್ಯಾನ್ಸರ್‌ ಕುರಿತಂತೆ ಕೆಲವೊಂದು ಮಾಹಿತಿ, ತಜ್ಞರ ಕಿವಿಮಾತು ಹಾಗೂ ಕ್ಯಾನ್ಸರ್‌ ಜಯಿಸಿದವರ ಯಶೋಗಾಥೆ ಇಲ್ಲಿದೆ.

ಕ್ಯಾನ್ಸರ್‌ ಬಂದರೆ ಸಾವು ಖಚಿತ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಕ್ಯಾನ್ಸರ್‌ ಅನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ರೋಗಿಯನ್ನು ಗುಣಪಡಿಸಲು ಸಾಧ್ಯವಿದೆ. ಕ್ಯಾನ್ಸರ್‌ ರೋಗಿಗಳು ಕೂಡ ಸಾವನ್ನು ಗೆದ್ದು ಎಲ್ಲರಂತೆ ಜೀವನ ನಡೆಸಬಹುದು. ಆದರೆ ಇದೇ ವೇಳೆ  ಕ್ಯಾನ್ಸರ್‌ ಬಾರದ ಹಾಗೆ ತಡೆಯುವುದು ಅತೀ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ತಂಬಾಕು ಸೇವನೆ, ಮದ್ಯಪಾನ ಕ್ಯಾನ್ಸರ್‌ಗೆ ಕಾರಣ ವಾಗುತ್ತಿದೆ. ಇದರ ಅತಿಯಾದ ಸೇವನೆ ಯಿಂದಾಗಿ ಶ್ವಾಸ ಕೋಶದ ಕ್ಯಾನ್ಸರ್‌, ಬಾಯಿ ಮತ್ತು ಗಂಟಲು ಕ್ಯಾನ್ಸರ್‌, ಅನ್ನ ನಾಳ, ಹೊಟ್ಟೆ ಮತ್ತು ಕರುಳು ಕ್ಯಾನ್ಸರ್‌, ಮೂತ್ರಕೋಶ ಕ್ಯಾನ್ಸರ್‌ಗೆ ಒಳ ಗಾಗುವ ಸಂಭವ ಹೆಚ್ಚಿರುತ್ತದೆ. ಮತ್ತೂಂದೆಡೆ ಧೂಮಪಾನದಿಂದಲೂ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಾಗಿದೆ. ಧೂಮಪಾನಿ ಗಳು ಸಿಗರೇಟ್‌-ಬೀಡಿ ಸೇದು ವುದ ರಿಂದ ಸುತ್ತಲಿನ ಮಂದಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಇತ್ತೀಚಿನ  ದಿನಗಳಲ್ಲಿ ನಮ್ಮ ಜೀವನ ಶೈಲಿ ಬದಲಾವಣೆಯಾಗುತ್ತಿದೆ. ಫಾಸ್ಟ್‌  ಫುಡ್‌ ನಿಯಂತ್ರಣದ ಜತೆಗೆ ದೇಹದ ತೂಕವನ್ನು ಮಿತಿಯಲ್ಲಿ ಇಡು ವುದರಿಂದ ಕ್ಯಾನ್ಸರ್‌ ಮಾತ್ರವಲ್ಲದೆ ಇನ್ನಿತರ ರೋಗಗಳನ್ನು ದೂರ  ಮಾಡಬಹುದು. ಕ್ಯಾನ್ಸರ್‌ ಸಹಿತ ವಿವಿಧ ರೋಗಗಳ ನಿಯಂತ್ರಣ ಮತ್ತು ಆರೋಗ್ಯಯುತ ದೇಹಕ್ಕೆ ಮಿತ ಪ್ರಮಾಣದ ವ್ಯಾಯಾಮ ಬಲು ಸಹಕಾರಿ. ಕರುಳಿನ ಕ್ಯಾನ್ಸರ್‌ ತಡೆಯಲು ತರಕಾರಿ ಮತ್ತು ಹಣ್ಣಿನ ಸೇವನೆ ಅತೀ ಮುಖ್ಯ. ಹೆಪಟೈಟಸ್‌ ಬಿ. ಲಸಿಕೆ ಪಡೆದುಕೊಳ್ಳುವ ಮೂಲಕ ಪಿತ್ತಕೋಶದ ಕ್ಯಾನ್ಸರ್‌ ಅನ್ನು ನಿಯಂತ್ರಿಸಬಹುದು. ಹ್ಯುಮನ್‌ ಪ್ಯಾಪಿಲೋಮ ವೈರಸ್‌ (ಎಚ್‌ಪಿವಿ) ಲಸಿಕೆ ಪಡೆಯುವ ಮೂಲಕ ಗರ್ಭಕೋಶದ ಸರ್ವಿಕಲ್‌ ಕ್ಯಾನ್ಸರ್‌ ಅನ್ನು ತಡೆಯಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ವಾಹನಗಳ ಹೊಗೆ ಹೆಚ್ಚಾಗುತ್ತಿದೆ. ಇದು  ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.

……………………………………………………………………………………………………….

“ಕ್ಯಾನ್ಸರನ್ನು ನಾನು ಜಯಿಸಿದ್ದೇನೆ; ಯಾರೂ ಜಯಿಸಬಹುದು’ :

“ಕ್ಯಾನ್ಸರ್‌ ಬಂದಾಗ ಮಾನಸಿಕವಾಗಿ ಕುಗ್ಗಬೇಡಿ. ಧೈರ್ಯ ತಾಳಿ, ಆತ್ಮವಿಶ್ವಾಸದಿಂದ ಇದ್ದು  ವೈದ್ಯರಲ್ಲಿ ನಂಬಿಕೆ ಇಟ್ಟು ಚಿಕಿತ್ಸೆ ಪಡೆಯಿರಿ. ಗೆದ್ದೇ ಗೆಲ್ಲುತ್ತೀರಿ, ಭರವಸೆಯ ಹೊಂಗಿರಣಗಳು ನಿಮ್ಮ ಬಾಳನ್ನು ಮತ್ತೆ ಪ್ರಕಾಶಿಸುವಂತೆ ಮಾಡುತ್ತವೆ…’

ಎಳೆಯ ಪ್ರಾಯದಲ್ಲೇ ಕ್ಯಾನ್ಸರ್‌ಗೆ ತುತ್ತಾದರೂ ಎದೆಗುಂದದೆ   ಆತ್ಮವಿಶ್ವಾಸದಿಂದ ಎದುರಿಸಿ ಇದೀಗ ಯಶಸ್ವಿ ಬದುಕು ಕಟ್ಟಿಕೊಂಡಿರುವ ಜೆಸ್ಸೆಲ್‌ ವಿಯೋಲ ಡಿ’ಸೋಜಾ ಅವರ ಆತ್ಮವಿಶ್ವಾಸದ ಮಾತುಗಳು ಇವು. ಮಂಗಳೂರಿನ ಬೆಂದೂರು ನಿವಾಸಿ ಜೆಸ್ಸೆಲ್‌ ಸಾಮಾಜಿಕ ಜಾಲತಾಣದಲ್ಲಿ ಆ್ಯಂಕರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು  ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

“ನನಗೆ ಆಗ 15 ವರ್ಷ. 10ನೇ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ಗಂಟಲು ನೋವು ಕಾಣಿಸಿಕೊಂಡಾಗ ಅಮ್ಮನಿಗೆ ತಿಳಿಸಿದೆ. ಅಮ್ಮ ನಿರ್ಲಕ್ಷಿಸದೆ ವೈದ್ಯರಲ್ಲಿ ಕರೆದುಕೊಂಡು ಹೋದರು. ವೈದ್ಯರು ತಪಾಸಣೆ ಮಾಡಿ ಗಂಟಲಿನ ಭಾಗದ ಅಂಶವನ್ನು ತೆಗೆದು ಪರೀಕ್ಷೆಗೆ ಕಳುಹಿಸಿದರು. ಅದರ ವರದಿ 2 ದಿನಗಳಲ್ಲಿ ಬಂತು. ಅಲ್ಟ್ರಾಸೌಂಡ್‌ ಮಾಡಿದರು. ನನಗೆ ಗಂಟಲಿನ ಕ್ಯಾನ್ಸರ್‌ ಕಾಣಿಸಿಕೊಂಡಿದ್ದು ಮೂರನೇ ಹಂತದಲ್ಲಿದೆ ಎಂದು ವೈದ್ಯರು ಹೇಳಿದಾಗ  ನನ್ನ ಬದುಕು ಇಲ್ಲಿಗೆ ಮುಗಿದು ಹೋಯಿತು ಎಂದು  ಭಾವಿಸಿ ಮೌನವಾಗಿ ರೋದಿಸಿದೆ.

ಕ್ಯಾನ್ಸರ್‌ ಎಂದಾಕ್ಷಣ ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಈ ಸ್ಥಿತಿ ಎದುರಾಗುತ್ತದೆ. ನನ್ನ ಅಮ್ಮ, ಸಂಬಂಧಿಕರು, ಸಹಪಾಠಿಗಳು, ಶಿಕ್ಷಕರು, ವೈದ್ಯರು ನನಗೆ ಧೈರ್ಯ ತುಂಬಿದರು. ವರದಿ ಬಂದ ಎರಡು ದಿನಗಳಲ್ಲೇ ನನಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ರೋಗ ಬಂದಿರುವ ವಿಚಾರ ತಿಳಿದದ್ದು ಫೆಬ್ರವರಿಯಲ್ಲಿ. ಎಪ್ರಿಲ್‌ನಲ್ಲಿ ಪರೀಕ್ಷೆ ಇತ್ತು. ಹಾಸಿಗೆಯಲ್ಲಿ ಮಲಗಿದ್ದೆ. ಎಸೆಸೆಲ್ಸಿ ಪರೀಕ್ಷೆ ಬರೆಯಬೇಕು ಎಂಬ ನನ್ನ ಮನದಾಸೆಗೆ ಎಲ್ಲರೂ ಒತ್ತಾಸೆಯಾದರು. ಶಿಕ್ಷಕರು, ಸಹಪಾಠಿಗಳು ಓದಿ ಹೇಳುತ್ತಿದ್ದುದನ್ನು ನಾನು ಮನನ ಮಾಡಿ ಕೊಳ್ಳುತ್ತಿದ್ದೆ. ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ’ ಎಂದು ವಿವರಿಸುತ್ತಾರೆ ಅವರು.

“ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ ಪದವಿ ಮುಗಿಸಿ ಎಂಬಿಎ ಮಾಡಿದೆ. ಮದುವೆಯಾಗಿ 7 ವರ್ಷಗಳಾಗಿವೆ. ನೆಮ್ಮದಿಯ ಬದುಕು ಸಾಗಿಸುತ್ತಿದ್ದೇನೆ. ಇದರ ಜತೆಗೆ 2019ರ ಮನಪಾ ಚುನಾವಣೆಯಲ್ಲಿ ನಗರದ ಬೆಂದೂರು ವಾರ್ಡ್‌ ನಿಂದ ಚುನಾವಣೆಗೂ ಸ್ಪರ್ಧಿಸಿದ್ದೆ’ ಎಂದು ತನ್ನ ಬಾಳ ಪಯಣವನ್ನು ಬಿಚ್ಚಿಡುತ್ತಾರೆ ಜೆಸ್ಸೆಲ್‌.

ಕ್ಯಾನ್ಸರ್‌ ಬಗೆಗೆ ಜನರಲ್ಲಿರುವ ಭಯವನ್ನು ನಿವಾರಿಸಬೇಕು. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಹೊಸ ಜೀವನದತ್ತ ಮುಖ ಮಾಡಬೇಕು. ಚೇತರಿಸಿ ಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಬೇಕು. ಇದಕ್ಕಾಗಿ ನನ್ನಂತೆ ಕ್ಯಾನ್ಸರ್‌ ಜಯಿಸಿದ ಅನೇಕರ ಯಶೋಗಾಥೆ ಗಳ ಮೂಲಕ ಅವರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ದೇನೆ. -ಜೆಸ್ಸೆಲ್‌ ಡಿ’ಸೋಜಾ

……………………………………………………………………………………………………….

ಪ್ರತೀ ವರ್ಷ ತಪಾಸಣೆ ಅಗತ್ಯ :

ಕ್ಯಾನ್ಸರ್‌ ಸೇರಿದಂತೆ ಯಾವುದೇ ರೋಗವನ್ನು ಪ್ರಾಥಮಿಕ ಹಂತದಲ್ಲಿ ಗುಣಪಡಿಸಲು ಸಾಧ್ಯವಿದೆ. 40 ವರ್ಷದ ಮೇಲಂತೂ ಪ್ರತೀ ವರ್ಷ ಇಡೀ ದೇಹದ ತಪಾಸಣೆ ಮಾಡಿಸಬೇಕು. ಇದರಿಂದ ದೇಹದಲ್ಲಿ ಯಾವುದೇ ರೀತಿಯ ತೊಂದರೆ ಇದ್ದರೆ ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯ. ಕ್ಯಾನ್ಸರ್‌ ಸಂಬಂಧಿತ ಯಾವುದೇ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಬೇಕು. ಧೈರ್ಯದಿಂದ ಎದುರಿಸಿದರೆ ಯಾವುದೇ ರೋಗ ಅರ್ಧಕ್ಕರ್ಧ ಗುಣವಾಗುತ್ತದೆ. ಕ್ಯಾನ್ಸರ್‌ ತಡೆಗಟ್ಟಿ ಸ್ವಸ್ಥ  ಸಮಾಜವನ್ನು ರೂಪಿಸೋಣ. – ಡಾ| ವೆಂಕಟರಮಣ ಕಿಣಿ, ರೇಡಿಯೇಶನ್‌ ಆಂಕಾಲಜಿ ತಜ್ಞರು, ಮಂಗಳೂರು

……………………………………………………………………………………………………….

“ಸಾವಿನ ಭಯ ಇರಲಿಲ್ಲ, ಕ್ಯಾನ್ಸರ್‌ ಗೆಲ್ಲುತ್ತೇನೆಂಬ ವಿಶ್ವಾಸವಿತ್ತು’ :

“ಆತ್ಮವಿಶ್ವಾಸ ಮತ್ತು ಧೈರ್ಯ ಇದ್ದರೆ ಯಾವುದೇ ರೋಗವನ್ನು ಗೆಲ್ಲಬಹುದು ಎನ್ನುವುದಕ್ಕೆ ನಾನು ಉದಾಹರಣೆ. ಕಳೆದ ಮೂರು ವರ್ಷಗಳ ಹಿಂದೆ ಬಾಯಿಯ ಕ್ಯಾನ್ಸರ್‌ಗೆ ಒಳ ಗಾಗಿದ್ದ ನಾನು ಈಗ ಶೇ.90ರಷ್ಟು ಗುಣಮುಖ ನಾಗಿದ್ದೇನೆ. ಇದಕ್ಕೆ ಮುಖ್ಯ ಕಾರಣ ನಾನು ಕ್ಯಾನ್ಸರ್‌ನಿಂದ ಗೆದ್ದೇ ಗೆಲ್ಲುತ್ತೇನೆ’ ಎಂಬ ವಿಶ್ವಾಸ ಎನ್ನುತ್ತಾರೆ ವಾಸ್‌ಲೇನ್‌ನ ಧರ್ಮೇಂದ್ರ ಶೆಟ್ಟಿ.

2018ರ ಜೂನ್‌ ತಿಂಗಳಿನಲ್ಲಿ ನನ್ನ ಬಾಯಲ್ಲಿ ಸಣ್ಣ ಹುಣ್ಣು ಕಾಣಿಸಿಕೊಂಡಿತ್ತು. ಬಯೋಸ್‌ ಚೆಕ್‌ಅಪ್‌ ಮಾಡಿದಾಗ ಬಾಯಿ ಕ್ಯಾನ್ಸರ್‌ ಎಂದು ತಿಳಿದು ಬಂತು. ಸಾಮಾನ್ಯ ವಾಗಿ ಗುಟ್ಕಾ ಸೇವನೆ, ಧೂಮ ಪಾನ ಇದ್ದವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನನಗೂ ಈ ಹಿಂದೆ ಆ ಅಭ್ಯಾಸ ಇತ್ತು. ಆದರೆ ಸದ್ಯ ಈ ರೀತಿಯ ಯಾವುದೇ ಚಟ ಇಲ್ಲ. ಕಾನ್ಸರ್‌ ಎಂದು ತಿಳಿದ ಬಳಿಕ ಖಚಿತ ಪಡಿಸಿ ಕೊಳ್ಳಲು ಪೆಟ್‌ ಸ್ಕ್ಯಾನ್‌ ಮಾಡಿಸ ಲಾಯಿತು. ಆಗಲೂ ಪಾಸಿಟಿವ್‌ ರಿಪೋರ್ಟ್‌ ಬಂತು. ಬಳಿಕ ವೈದ್ಯರು ಸರ್ಜರಿ ಮಾಡಲು ಸೂಚಿಸಿದರು.

ಬಾಯಿಯ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ಅಂದರೆ ಅನೇಕರಲ್ಲಿ ಸಾಮಾನ್ಯವಾಗಿ ಭಯ ಇರುತ್ತದೆ. ಮುಖದ ಅಂದ ಕೆಡುತ್ತದೆ ಎಂಬ ಭಾವನೆಯೂ ಇರುತ್ತದೆ. ಆದರೆ ನಾನು ಯಾವುದೇ ರೀತಿಯಲ್ಲಿ ಎದೆಗುಂದಲಿಲ್ಲ. ಸಾವಿನ ಭಯ ನನಗಿರಲಿಲ್ಲ. ಕ್ಯಾನ್ಸರ್‌ನಿಂದ ಗುಣಮುಖನಾಗುತ್ತೇನೆ ಎಂಬ ದೃಢ ವಿಶ್ವಾಸ ಇತ್ತು. ವೈದ್ಯರು ಕೂಡ ನನ್ನಲ್ಲಿ ನಂಬಿಕೆ ಹುಟ್ಟಿಸಿದರು. ಕೊನೆಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು. ಈಗ ಶೇ.90ರಷ್ಟು ಗುಣಮುಖನಾಗಿದ್ದೇನೆ. ಸದ್ಯ ಪ್ರತೀ ಆರು ತಿಂಗಳಿಗೊಮ್ಮೆ  ವೈದ್ಯರಿಂದ ಚೆಕ್‌ಅಪ್‌ ಮಾಡಿಸಿಕೊಳ್ಳುತ್ತಿದ್ದೇನೆ. ನಾನು ಕೂಡ ಎಲ್ಲರಂತೆ ಬದುಕು¤ದ್ದೇನೆ.

……………………………………………………………………………………………………….

ಐದು ವರ್ಷ ಡೆಡ್‌ಲೈನ್‌ :

ಒಮ್ಮೆ ಕ್ಯಾನ್ಸರ್‌ ತಗಲಿ ಶಸ್ತ್ರಚಿಕಿತ್ಸೆಯ ಬಳಿಕ ಐದು ವರ್ಷಗಳ ಕಾಲ ಮತ್ತೆ ಯಾವುದೇ ಕ್ಯಾನ್ಸರ್‌ ಲಕ್ಷಣ ಇಲ್ಲದಿದ್ದರೆ ಮತ್ತೆ ಅವರು ಕ್ಯಾನ್ಸರ್‌ ಮುಕ್ತರಾದಂತೆ. ನಾನು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೂರು ವರ್ಷಗಳಿಂದ ಈ ರೀತಿಯ ಯಾವುದೇ ಲಕ್ಷಣಗಳಿಲ್ಲ. ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖನಾಗುತ್ತೇನೆ ಎಂಬ ವಿಶ್ವಾಸ ಇದೆ. ಇದಕ್ಕೆ ಕುಟುಂಬ ಸದಸ್ಯರು, ಸ್ನೇಹಿತರು ಕೂಡ ಸಾಥ್‌ ನೀಡುತ್ತಿದ್ದಾರೆ. ಕ್ಯಾನ್ಸರ್‌ ಬಂದರೆ ಯಾರು ಕೂಡ ಭಯ ಪಡಬೇಕಿಲ್ಲ. ಈಗ ತಂತ್ರಜ್ಞಾನ ಬದಲಾಗಿದೆ. ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಇದ್ದು, ರೋಗ ಗುಣಪಡಿಸಬಹುದು. ಆದರೆ ನಮ್ಮ ಯೋಚನೆ ಧನಾತ್ಮಕವಾಗಿರಬೇಕು.

“ಗುಣಮುಖನಾಗುತ್ತೇನೆ ಎನ್ನುವ ಆತ್ಮಸ್ಥೈರ್ಯ ಇರಲಿ’ :

“ಕ್ಯಾನ್ಸರ್‌ ಒಂದು ಮಾರಕ ಕಾಯಿಲೆ ಆಗಿರಬಹುದು, ಆದರೆ ಅದರ ಬಗ್ಗೆ  ಚಿಂತೆ  ಮಾಡುವುದನ್ನು ಬಿಡಿ. ತಾನು ಗುಣಮುಖನಾಗುತ್ತೇನೆ ಎಂಬ ಧೈರ್ಯ ಇರಲಿ. ಜತೆಗೆ ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಿ, ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ…’

ಇದು ಕ್ಯಾನ್ಸರ್‌ ಕಾಯಿಲೆಯಿಂದ ಗುಣಮುಖ ಹೊಂದುತ್ತಿರುವ ಕಾಸರಗೋಡು ಜಿಲ್ಲೆಯ 58 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಹಿತನುಡಿ.

ಅವರಿಗೆ 2021 ನವೆಂಬರ್‌ನಲ್ಲಿ ಗಂಟಲಿನಲ್ಲಿ  ಸಣ್ಣ ಬಾವು ಕಂಡು ಬಂದಿತ್ತು. ಕ್ರಮೇಣ ಕಾಲಿನ ಭಾಗದಲ್ಲಿಯೂ ಅದೇ ರೀತಿಯ ಬಾವುಗಳು ಕಂಡು ಬಂದು ಅಲ್ಲಿ  ನೋವಿನ ಅನುಭವವಾಗುತ್ತಿತ್ತು. ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಚುಚ್ಚು ಮದ್ದು ಕೊಟ್ಟರು. ಇದರಿಂದ ನೋವು ಕಡಿಮೆಯಾದರೂ ಬಾವು ಹಾಗೆಯೇ ಇತ್ತು. ಮತ್ತೆ ವೈದ್ಯರಿಗೆ ತೋರಿಸಿದಾಗ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಿದರು. ಹಾಗೆ ಅಲ್ಲಿನ ಆಸ್ಪತ್ರೆಯಲ್ಲಿಯೇ ಎರಡೂ ಬಾವುಗಳ ಶಸ್ತ್ರ ಚಿಕಿತ್ಸೆ  ನಡೆಸಲಾಯಿತು. ಈ ಸಂದ‌ರ್ಭದಲ್ಲಿ ಒಂದು ಬಾವು ಸಮಸ್ಯಾತ್ಮಕವಾಗಿರುವುದನ್ನು ವೈದ್ಯರು ಗಮನಿಸಿದರು. ಇದರ ಮಾದರಿ ಯನ್ನು ದಿಲ್ಲಿಯ ಆಸ್ಪತ್ರೆಗೆ  ಕಳು ಹಿಸಿಕೊಡಲಾಯಿತು. ಅಲ್ಲಿನ ತಜ್ಞ ವೈದ್ಯರು ನೀಡಿದ ವೈದ್ಯಕೀಯ ವರದಿಯಲ್ಲಿ  ಇದು ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಬಾವು ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರ ಗೋಡಿನ ವೈದ್ಯರ ಶಿಫಾರಸಿನಂತೆ ಮಂಗಳೂರಿನ ಆಸ್ಪತ್ರೆಯಲ್ಲಿ  ದಾಖಲಾಗಿ ಒಂದು ವಾರ ಚಿಕಿತ್ಸೆ ಪಡೆದರು. ಕಿಮೊ ಥೆರಪಿ ಯನ್ನು ಮಾಡಿ ಚುಚ್ಚುಮದ್ದು ಹಾಗೂ ಇತರ ಔಷಧ ಗಳನ್ನು  ನೀಡಲಾಗಿದ್ದು, ಇದೀಗ ತಿಂಗಳಿಗೊಮ್ಮೆ ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಬಹುತೇಕ ಗುಣಮುಖರಾಗಿದ್ದಾರೆ.

ತಿಂಗಳಿಗೊಮ್ಮೆ  ಚುಚ್ಚುಮದ್ದು ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ  ವಾರ ಕಾಲ ಬಾಯಿ ರುಚಿ ಸ್ವಲ್ಪ ಕಡಿಮೆ ಇರುತ್ತದೆ. ಮತ್ತೆ ಎಲ್ಲವೂ ಸರಿ ಹೋಗುತ್ತದೆ. ಈ ಒಂದು ವಾರದ ಅವಧಿಯಲ್ಲಿ  ಆಗುತ್ತಿರುವ ಅನನುಕೂಲತೆಗಳನ್ನು ಅನಿವಾರ್ಯವಾಗಿ ಸಹಿಸಿಕೊಂಡು ಬರುತ್ತಿದ್ದೇನೆ ಎಂದವರು ಹೇಳುತ್ತಾರೆ.

ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಪತ್ನಿ ಗೃಹಿಣಿಯಾಗಿದ್ದು, ಪುತ್ರಿಯರು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ವೈದ್ಯರು ಎರಡು ವರ್ಷ ಕಾಲ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಬೇಕು ಹಾಗೂ ಜಾಗ್ರತೆಯಿಂದ ಇರುವಂತೆ ಸೂಚಿಸಿದ್ದಾರೆ.

ವೈದ್ಯರ ಸಲಹೆಯ ಮೇರೆಗೆ ತಾನು ಈಗ ಕೂಲಿ ಕೆಲಸಕ್ಕೆ  ಹೋಗುವುದಿಲ್ಲ. ಮನೆಯಲ್ಲಿ ಮಾಡಲೇಬೇಕಾದ ಅಲ್ಪ ಸ್ವಲ್ಪ ಕೃಷಿ ಸಂಬಂಧಿತ ಕೆಲಸ ಮಾಡು ತ್ತಿರುತ್ತೇನೆ. ಉಳಿದಂತೆ ಸಹಜ ಜೀವನ ನಡೆಸುತ್ತಿದ್ದೇನೆ. ವೈದ್ಯರ ಸಲಹೆಯಂತೆ ಔಷಧ, ಆಹಾರಸೇವನೆ ಮಾಡುತ್ತಿದ್ದು ಈಗ ಯಾವುದೇ ಸಮಸ್ಯೆ ಇಲ್ಲ ಎಂದವರು ಹೇಳುತ್ತಾರೆ.

ಕ್ಯಾನ್ಸರ್‌ ಕಾಯಿಲೆ  ಇದೆ ಎನ್ನುವ ಚಿಂತೆಯೇ ನನಗಿಲ್ಲ. ಗುಣಮುಖ ಹೊಂದುತ್ತೇನೆ ಎಂಬ ಧೈರ್ಯ ನನಗಿದೆ. ವೈದ್ಯರ ಮೇಲೆ ಭರವಸೆ ಇದೆ. ವೈದ್ಯರು ನೀಡುವ ಸಲಹೆ, ಮಾರ್ಗದರ್ಶನವನ್ನು ಪಾಲಿ ಸುತ್ತಾ, ಅವರು ಸೂಚಿಸುವ ಔಷಧ ಗಳನ್ನು ತೆಗೆದುಕೊಂಡು ನೆಮ್ಮದಿ ಯಿಂದ ಇದ್ದೇನೆ. ನಾನು ಆತ್ಮ ಸ್ಥೈರ್ಯ ದಿಂದ ಇರು ವುದರಿಂದ  ನನ್ನ ಕುಟುಂಬವೂ ಹೆಚ್ಚು  ಆತಂಕದಲ್ಲಿಲ್ಲ.

 

-ಮಂಗಳೂರು ಬ್ಯೂರೋ

ಟಾಪ್ ನ್ಯೂಸ್

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.