ವಿಸ್ಮಯ ಸೃಷ್ಟಿಸಿದ ತುಳು ರಂಗಭೂಮಿ
Team Udayavani, Mar 27, 2022, 8:15 AM IST
ಮಾ.27ರ ರವಿವಾರ ವಿಶ್ವ ರಂಗಭೂಮಿ ದಿನ. ಜನರಿಗೆ ಮನೋರಂಜನೆ ನೀಡುವ ಜತೆಯಲ್ಲಿ ಅವರ ಯೋಚನಾಲಹರಿಯನ್ನು ಬದಲಾಯಿಸಬಲ್ಲ ಶಕ್ತಿ ಇರುವುದು ನಾಟಕ ಅಥವಾ ರಂಗಭೂಮಿಗೆ. ರಂಗ ಕಲೆಯಲ್ಲಿ ಬರುವ ಪ್ರತಿಯೊಂದೂ ಪಾತ್ರವೂ ಪ್ರೇಕ್ಷಕನ ಮೇಲೆ ನೇರ ಪರಿಣಾಮ ಬೀರುತ್ತದೆ. ಯಾವುದೇ ರಂಗ ಕಲೆ, ಕಲಾವಿದ ಮತ್ತು ಪ್ರೇಕ್ಷಕನ ನಡುವೆ ನೇರ ಸಂಬಂಧ ಬೆಸೆಯುವುದರಿಂದ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಇಂದಿಗೂ ಪ್ರಭಾವಶಾಲಿ ಕಲಾಮಾಧ್ಯಮವಾಗಿ ಉಳಿದಿದೆ. ಮನೋರಂಜನೆಯ ವ್ಯಾಪ್ತಿ ಸಾಕಷ್ಟು ವಿಸ್ತರಿಸಿರುವುದರಿಂದ ಮತ್ತು ಹತ್ತು ಹಲವು ಹೊಸ ಮಾಧ್ಯಮಗಳು ಸೃಷ್ಟಿಯಾಗಿರುವುದರಿಂದ ರಂಗ ಕಲೆ ಒಂದಿಷ್ಟು ಹಿನ್ನೆಲೆಗೆ ಸರಿಯುತ್ತಿರುವುದು ಸುಳ್ಳಲ್ಲ. ರಂಗ ಕಲೆಗೆ ಎಲ್ಲೂ ಚ್ಯುತಿಯಾಗದಂತೆ ಆಧುನಿಕ ಪೈಪೋಟಿ ಮತ್ತು ಪ್ರೇಕ್ಷಕರ ಮನೋಭಿರುಚಿಗೆ ಅನುಗುಣವಾಗಿ ಒಂದಿಷ್ಟು ಮಾರ್ಪಾಡು, ಹೊಸತನಗಳನ್ನು ಅಳವಡಿಸಿಕೊಂಡಲ್ಲಿ ರಂಗಭೂಮಿಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ. ನಮ್ಮ ಕರಾವಳಿಯ ತುಳು ರಂಗಭೂಮಿಯ ಇತಿಹಾಸ-ವರ್ತಮಾನ-ಭವಿಷ್ಯದತ್ತ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.
ರಂಗಭೂಮಿ ಬೇರೆ ಬೇರೆ ಭಾಷೆಗಳಲ್ಲಿ ಜನಮನ್ನಣೆ ಪಡೆಯುತ್ತಿರುವಾಗ ರಾಜ್ಯದ ಕರಾವಳಿಯಲ್ಲಿ ತುಳು ರಂಗಭೂಮಿ ವ್ಯಾಪಿಸಿರುವ ಶೈಲಿ ಹಾಗೂ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ವಿಸ್ಮಯವನ್ನೇ ಮೂಡಿಸುತ್ತದೆ. 90 ವರ್ಷಗಳ ಇತಿಹಾಸ ಹೊಂದಿರುವ ತುಳು ರಂಗಭೂಮಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸಾವಿರಾರು ಕಲಾವಿದರು ಹಾಗೂ ಅದರ ಬೆಂಗಾವಲಾಗಿ ನಿಂತ ವಿವಿಧ ಸ್ತರದ ಕಲಾ ದಿಗ್ಗಜರನ್ನು ಸೃಷ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅಂದಿನಿಂದ ಇಂದಿನವರೆಗೆ ಪ್ರದರ್ಶನ ಕಂಡ ನಾಟಕಗಳು ಅದೆಷ್ಟು ಸಾವಿರವೋ.. ಲೆಕ್ಕಕ್ಕೆ ಸಿಗಲಾರದು.
ನಾಡಿನಾದ್ಯಂತ ಕನ್ನಡ ನಾಟಕ ಸಂಭ್ರಮ ಸುಮಾರು 150 ವರ್ಷಗಳ ಹಿಂದೆ ಆರಂಭವಾಗಿದ್ದರೂ 1933ರಲ್ಲಿ ಮಂಗಳೂರಿನ ಮಾಧವ ತಿಂಗಳಾಯರು ಬರೆದ “ಜನ ಮರ್ಲ್’ ತುಳುವಿನ ಮೊದಲ ನಾಟಕ ಎಂಬ ಲೆಕ್ಕಾಚಾರವಿದೆ. 1936ರಲ್ಲಿ ಪಡುಬಿದ್ರಿ ಶಿವಣ್ಣ ಹೆಗ್ಡೆ ಅವರ “ವಿದ್ಯೆದ ತಾದಿ’ ನಾಟಕ ಬಂತು. ಇದಕ್ಕೂ ಮುನ್ನ ಬೇರೆ ಬೇರೆ ರೀತಿಯ ತುಳು ಪ್ರಹಸನ, ಮಾತುಕತೆ ಪ್ರಕಾರಗಳು ಕೂಡ ಚಾಲ್ತಿಗೆ ಬಂದಿರುವ ಸಾಧ್ಯತೆಯೂ ಇದೆ. ಅಲ್ಲಿಂದ ತುಳು ರಂಗಭೂಮಿಯಲ್ಲಿ ನಡೆದಿರುವುದು ಇತಿಹಾಸ.
1945ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟರ ರಂಗಭೂಮಿಯ ತಂಡ ತುಳುನಾಡಿನಾದ್ಯಂತ ಹಾಗೂ ಹೊರ ಜಿಲ್ಲೆ, ರಾಜ್ಯಕ್ಕೂ ಪ್ರದರ್ಶನದ ಮೂಲಕ ವಿಸ್ತರಣೆ ಕಂಡಿತು. 1946ರಲ್ಲಿ “ಮುತ್ತುನ ಮದೆ¾’ ನಾಟಕ ಸಾವಿರ ಪ್ರದರ್ಶನ ಕಂಡಿತು. ಬಳಿಕ ಒಂದೊಂದೇ ನಾಟಕ ತಂಡಗಳು ಹುಟ್ಟಿಕೊಂಡು, ನೂರು, ಸಾವಿರ ಪ್ರದರ್ಶನಗಳನ್ನು ಕಾಣುವ ಮೂಲಕ ತುಳು ರಂಗಭೂಮಿ ಅಚ್ಚರಿಯ ಬೆಳವಣಿಗೆ ಕಾಣು ವುದರ ಜತೆಗೆ ರಂಗಾಸಕ್ತರನ್ನು ಆಕರ್ಷಿಸಿತು. ಮುಂಬಯಿ, ಬೆಂಗಳೂರು ಮಾತ್ರವಲ್ಲದೆ ವಿದೇಶದಲ್ಲಿಯೂ ತುಳು ರಂಗಭೂಮಿಯ ಹಿರಿಮೆ ಎಲ್ಲೆಡೆ ಪಸರಿಸುವಂತಾಯಿತು.
ಹಳ್ಳಿಯ ಗದ್ದೆಗಳಲ್ಲಿ ಆಡಿದ ನಾಟಕಗಳ ಮುಖೇನವೇ ಇಂದು ತುಳು ರಂಗಭೂಮಿ ಶ್ರೀಮಂತಿಕೆಯನ್ನು ಪಡೆಯುವಂತಾಯಿತು. ಜತೆಗೆ ಹವ್ಯಾಸಿ ನಾಟಕ ತಂಡಗಳು ಗ್ರಾಮಾಂತರ ಭಾಗದಲ್ಲಿ ತುಳು ರಂಗಭೂಮಿಗೆ ಹೊಸ ಚೈತನ್ಯ ನೀಡಿದವು. ಸಾವಿರಾರು ಕಲಾವಿದರನ್ನು ಸೃಷ್ಟಿಸುವಲ್ಲಿ ಇಂತಹ ತಂಡಗಳು ಯಶಸ್ವಿಯಾಗಿವೆ. ನಾಟಕ ಕಲಾವಿದರ ಜತೆಗೆ ಪರದೆ, ಸಂಗೀತ, ಶಬ್ದ-ಬೆಳಕು, ಬಣ್ಣ ಹಾಕುವವರು, ಸೆಟ್ಟಿಂಗ್ ಕೆಲಸದವರು.. ಹೀಗೆ ಸಾವಿರಾರು ಮಂದಿ ತುಳು ರಂಗಭೂಮಿಯಿಂದಾಗಿ ಬದುಕು ನಡೆಸುತ್ತಿದ್ದಾರೆ.
ಹಿಂದೆ ಸಾಮಾಜಿಕ ಜವಾಬ್ದಾರಿ ಆಧಾರಿತ
ವಾಗಿಯೇ ನಾಟಕಗಳು ಪ್ರದರ್ಶನವಾಗು ತ್ತಿತ್ತು. ಜನರ ದೈನಂದಿನ ಸಮಸ್ಯೆಗಳು, ಕುಟುಂಬ ಸಂಗತಿಗಳ ಬಗ್ಗೆ ಉಲ್ಲೇಖ ವಾಗುತ್ತಿತ್ತು. ಈ ಮೂಲಕ ವಿಷಯ ಆಧಾರಿತವಾಗಿಯೇ ನಾಟಕ ನಡೆಯುತ್ತಿತ್ತು. ಹಾಸ್ಯ ಬಹುಭಾಗವಾಗಿ ಇರಲಿಲ್ಲ. ಗಾರ್ಡನ್, ರಸ್ತೆ, ಮನೆ ಸೇರಿದಂತೆ ಪರದೆಯ ಪರಿಕಲ್ಪನೆ ಇತ್ತು ಹಾಗೂ ನಾಟಕದ ಹಾಡನ್ನು ಕೂಡ ನಾಟಕ ಪ್ರದರ್ಶನದ ಸ್ಥಳದಲ್ಲಿಯೇ ಹಾಡುವ ಪರಿಸ್ಥಿತಿಯಿತ್ತು. ಆದರೆ ಈಗ ನಾಟಕದ ಸ್ವರೂಪ ಬದಲಾಗಿದೆ. ಹಾಸ್ಯದ ಜತೆಗೆ ಸಂದೇಶ ಬರುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ ಆಧುನಿಕ ವ್ಯವಸ್ಥೆಗಳು ಇಂದಿನ ನಾಟಕಕ್ಕೆ ಹೊಸ ರೂಪವನ್ನು ತಂದುಕೊಟ್ಟಿವೆ. ಪರದೆಗಳ ತಲೆಬಿಸಿಯಿಲ್ಲ-ಸೆಟ್ಟಿಂಗ್ ಮಾತ್ರ ಇದೆ. ಧ್ವನಿಮುದ್ರಿತ ವ್ಯವಸ್ಥೆಗಳು ಹೊಸ ಬದಲಾವಣೆಯನ್ನು ತಂದಿದೆ. ಥಿಯೇಟರ್‌ನಲ್ಲಿ ಕುಳಿತು ಸಿನೆಮಾ ಕಂಡಾಗ ಆಗುವ ಅನುಭವವೇ ಇಂದಿನ ನಾಟಕಗಳನ್ನು ವೀಕ್ಷಿಸಿದಾಗ ಸಿಗುತ್ತಿದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ರಂಗಭೂಮಿಗೂ ನಾವೀನ್ಯದ ಸ್ಪರ್ಶ ನೀಡಿದೆ. ಈ ಎಲ್ಲ ಬದಲಾವಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ರಂಗಭೂಮಿಗೆ ಸಹಕಾರಿಯಾಗಿದೆ.
ತುಳು ರಂಗಭೂಮಿಯಿಂದಾಗಿಯೇ ತುಳು ಸಿನೆಮಾ ಭವಿಷ್ಯವನ್ನು ಕಂಡು ಕೊಂಡಿತು. ಹೀಗಾಗಿ ತುಳು ಸಿನೆಮಾದ ತಾಯಿ ಬೇರು ತುಳು ನಾಟಕ. ತುಳುವಿನ 30ಕ್ಕೂ ಅಧಿಕ ನಾಟಕಗಳೇ ಸಿನೆಮಾ ಆಗಿ ಬದಲಾವಣೆ ಕಂಡಿದೆ. ರಂಗಭೂಮಿಯ ಜಾಣ್ಮೆ ಹಾಗೂ ಅನುಭವವೇ ಸಿನೆಮಾ ಕ್ಷೇತ್ರದ ಗೆಲುವಿಗೆ ಕಾರಣವಾಯಿತು ಎಂಬುದು ಉಲ್ಲೇಖನೀಯ ಅಂಶ.
ಭಾಷೆಯ ಮೇಲಿನ ಪ್ರೀತಿಯಿಂದಾಗಿ ಕರಾವಳಿ ಭಾಗದಲ್ಲಿ ಕೊಂಕಣಿ ಹಾಗೂ ಮಲಯಾಳ ನಾಟಕಗಳು ಕೂಡ ಪ್ರದರ್ಶನ ಕಂಡಿವೆ. ವಿದೇಶದಲ್ಲಿಯೂ ಪ್ರದರ್ಶನ ಕಂಡಿದ್ದೂ ಇದೆ. ಇನ್ನು ಕನ್ನಡ ರಂಗಭೂಮಿಯೂ ಇಲ್ಲಿ ಸಕ್ರಿಯವಾಗಿದೆ. ಕರಾವಳಿಯ ಕೆಲವಷ್ಟು ನಾಟಕ ತಂಡಗಳು ಕನ್ನಡ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದು ಅಪಾರ ಜನಮನ್ನಣೆ ಪಡೆದುಕೊಂಡಿವೆ.
ಆಗಬೇಕಾದ್ದೇನು?
ಕಲಾವಿದರ ಮನಸ್ಸು ಬದಲಾಗಬೇಕು. “ಒರಿಯನ್ ತೂಂಡ ಒರಿಯಗಾಪುಜಿ’ ಎಂಬ ಮನೋಭಾವ ಮೊದಲು ತೊರೆಯಬೇಕು. “ನಾನು’ ಎಂಬುದನ್ನು ಮರೆತು “ನಾವು’ ಎಂಬ ಹೃದಯವೈಶಾಲ್ಯ ಬೆಳೆಸಬೇಕಿದೆ. ಹೀಗಾದಲ್ಲಿ ತುಳು ರಂಗಭೂಮಿ ನವಚೈತನ್ಯ ಪಡೆಯಲಿದೆ. ಕಲಾವಿದರು ಯಾವತ್ತಿಗೂ ಕಲಾ ಶ್ರೀಮಂತರು ಎಂಬ ಮಾನ್ಯತೆ ಇದ್ದೇ ಇದೆ. ಆದರೆ ಅಂತಹ ಶ್ರೀಮಂತರ ಪೈಕಿ ಕೆಲವರು ಕೊರೊನಾ ಕಾಲಘಟ್ಟದಲ್ಲಿ ಪ್ರದರ್ಶನವಿಲ್ಲದೆ “ಕಿಟ್’ ಪಡೆಯಬೇಕಾದ ಅನಿವಾರ್ಯತೆ ಎದುರಾಯಿತು. ಹೀಗಾಗಿ ಕಲಾವಿದರು ಅಹಂ ತೊರೆದು ಧನ್ಯತಾ ಭಾವದಿಂದ ಕಲಾಮಾತೆಯ, ತುಳು ಭಾಷೆ, ಮಣ್ಣಿನ ಕಾರ್ಯವನ್ನು ಮಾಡಿದರೆ ತುಳು ಅಭಿಮಾನಿಗಳು ಯಾವತ್ತಿಗೂ ಕೈ ಬಿಡುವುದಿಲ್ಲ. ಬದಲಾಗಿ ಜಗತ್ತಿನಾದ್ಯಂತ ಇರುವ ಕಲಾಭಿಮಾನಿಗಳು ಪ್ರೀತಿಸುತ್ತಾರೆ. ಕಲಾವಿದರು ಎಲ್ಲರನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತುಳು ಭಾಷೆ ಮತ್ತು ಈ ನೆಲದ ಮಣ್ಣಿನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಣ; ಆ ಮೂಲಕ ನಾವು ಬೆಳೆಯೋಣ.
– ವಿ.ಜಿ. ಪಾಲ್,
ಹಿರಿಯ ರಂಗಕರ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.