![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 27, 2023, 12:30 PM IST
ನಿಸರ್ಗಾರಾಧನೆಯು ಭಾರತೀಯ ಸಂಸ್ಕೃತಿಯ ಪ್ರಧಾನ ಭಾಗವಾಗಿದೆ. ವೃಕ್ಷಗಳಲ್ಲಿ ದೈವತ್ವ ಕಾಣುವ ಪವಿತ್ರ ಸಂಸ್ಕೃತಿ ನಮ್ಮದು. ಅಂತೆಯೇ ಜೈನ ಧರ್ಮದ ಇಪ್ಪತ್ತನಾಲ್ಕು ತೀರ್ಥಂಕರರು ಮೋಕ್ಷವನ್ನು ಪಡೆದ ಮರಗಳನ್ನು ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದ ಅನಂತ ಶಾಂತಿ ತೀರ್ಥಂಕರ ವನದಲ್ಲಿ ನೆಟ್ಟು ಪೋಷಿಸಲಾಗುತ್ತಿದೆ.
ನಾರಾವಿ ಗ್ರಾಮದ ಜೈನ್ ಪೇಟೆಯಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿ ಮತ್ತು ಸೂರ್ಯ ನಾರಾಯಣ ದೇವಾಲಯ ಸಮೀಪ, ಸುವರ್ಣ ನದಿಯ ದಡದಲ್ಲಿ ಶ್ರೀ ಅನಂತ ಶಾಂತಿ ತೀರ್ಥಂಕರ ವನವನ್ನು ಜೈನ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ರಚಿಸಲಾಗಿದೆ.
ಚಾವುಂಡರಾಯ ಪುರಾಣದ ಪ್ರಕಾರ ಭ. ವೃಷಭನಾಥ ಸ್ವಾಮಿ ಮೋಕ್ಷ ಪಡೆದ ವಟ ವೃಕ್ಷ, ಭ. ಅಜಿತನಾಥ ಸ್ವಾಮಿ – ಸಪ್ತಪರ್ಣಿ, ಶಂಭವನಾಥ – ಶಾಲ, ಭ. ಅಭಿನಂದನಾಥ ಸ್ವಾಮಿ – ಸರಳ, ಭ. ಸುಮತಿನಾಥ ಸ್ವಾಮಿ – ಪ್ರಿಯಾಂಗು, ಭ. ಪದ್ಮಪ್ರಭನಾಥ ಸ್ವಾಮಿ – ಪ್ರಿಯಾಂಗು, ಭ. ಸುಪಾರ್ಶ್ವನಾಥ ಸ್ವಾಮಿ – ಶಿರೀಷ, ಭ. ಚಂದ್ರಪ್ರಭನಾಥ ಸ್ವಾಮಿ – ನಾಗ ಕೇಸರ, ಭ. ಪುಷ್ಪದಂತನಾಥ ಸ್ವಾಮಿ – ಬಬೀತಕಿ, ಭ. ಶೀತಲನಾಥ ಸ್ವಾಮಿ – ಪಾಲಾಶ, ಭ. ಶ್ರೇಯಾಂಸನಾಥ ಸ್ವಾಮಿ – ತಿಂದುಕಾ, ಭ. ವಾಸುಪೂಜ್ಯನಾಥ ಸ್ವಾಮಿ – ಕದಂಬ, ಭ. ವಿಮಲನಾಥ ಸ್ವಾಮಿ – ಜಂಬೂ, ಭ. ಅನಂತನಾಥ ಸ್ವಾಮಿ – ಅಶ್ವತ್ಥ, ಭ. ಧರ್ಮನಾಥ ಸ್ವಾಮಿ – ಕಪಿತ್ಥ, ಭ. ಶಾಂತಿನಾಥ ಸ್ವಾಮಿ – ನಂದಿ, ಭ. ಕುಂಥುನಾಥ ಸ್ವಾಮಿ – ತಿಲಕ, ಭ. ಅರನಾಥ ಸ್ವಾಮಿ – ಆಮ್ರ, ಭ. ಮಲ್ಲಿನಾಥ ಸ್ವಾಮಿ – ಅಶೋಕ, ಭ. ಮುನಿಸುವ್ರತನಾಥ ಸ್ವಾಮಿ – ಚಂಪಕ, ಭ. ನಮಿನಾಥ ಸ್ವಾಮಿ – ಬಕುಳ, ಭ. ನೇಮಿನಾಥ ಸ್ವಾಮಿ – ಮೇಷ ಶೃಂಗ, ಭ. ಪಾರ್ಶ್ವನಾಥ ಸ್ವಾಮಿ – ಧವಳ ಮತ್ತು ಭ. ಮಹಾವೀರ ಸ್ವಾಮಿ – ಬೂರುಗ. ಹೀಗೆ ಇಪ್ಪತ್ತನಾಲ್ಕು ತೀರ್ಥಂಕರರ ಮೋಕ್ಷವನ್ನು ಪಡೆದ ವೃಕ್ಷ ಜಾತಿಗಳನ್ನು ಇಲ್ಲಿ ನೆಟ್ಟು ಅದರ ಸನಿಹದಲ್ಲೇ ಪಾದುಕೆಗಳ ಮತ್ತು ಸಂಕೇತಗಳ ಪ್ರತಿಕೃತಿಯನ್ನು ವಜ್ರಾಕೃತಿಯಲ್ಲಿ ನಿರ್ಮಿಸಲಾಗಿದೆ. ಈ ಮೂಲಕ ತೀರ್ಥಂಕರರ ತಪಸ್ಸಿನ ಅಂತಿಮ ದಿನಗಳನ್ನು ಭಕ್ತಿಯಿಂದ ನೆನೆಯಲು ಅವಕಾಶ ಮಾಡಿಕೊಡಲಾಗಿದೆ.
ಧಾರ್ಮಿಕ ಮಹತ್ವವುಳ್ಳ ಈ ಪ್ರದೇಶದಲ್ಲಿ ಲಭ್ಯವಿರುವ ಶಾಸನಗಳ ಪ್ರಕಾರ, ಈ ಹಿಂದೆ ಇಲ್ಲಿ ಹದಿಮೂರನೇ ಶತಮಾನದ ಸುಮಾರಿಗೆ ನಿರ್ಮಾಣವಾಗಿದ್ದ ಶಾಂತಿನಾಥ ಸ್ವಾಮಿ ಮತ್ತು ಅನಂತನಾಥ ಸ್ವಾಮಿ ಬಸದಿಗಳಿದ್ದವು. ಆದರೆ ಸುವರ್ಣ ನದಿಯ ಕೊರೆತದಿಂದ ಈ ಬಸದಿಗಳಿಗೆ ಹಾನಿಯಾಗುವ ಸಾಧ್ಯತೆಗಳಿದ್ದ ಕಾರಣ ಈ ಬಸದಿಗಳನ್ನು ಧರ್ಮನಾಥ ಸ್ವಾಮಿ ಬಸದಿಯ ಎಡ ಮತ್ತು ಬಲ ಭಾಗಗಳಲ್ಲಿ ಸ್ಥಾಪಿಸಲಾಯಿತು.
ಜಿನ ಬಿಂಬಗಳ ಸ್ಥಳಾಂತರದ ನಂತರ ನಾಗ ಮತ್ತು ಕ್ಷೇತ್ರ ಪಾಲಕರ ಹೊರತಾಗಿ ತೆರವಾದ ಇಲ್ಲಿನ ನಿವೇಶನದ ಸದುಪಯೋಗಕ್ಕಾಗಿ ತೀರ್ಥಂಕರ ವನದ ನಿರ್ಮಾಣವಾಯಿತು. ಒಟ್ಟಿನಲ್ಲಿ ಜೈನ ಧರ್ಮದ ಸಮ್ಮೇದ ಶಿಖರಜಿಯಷ್ಟೇ ಪುಣ್ಯ ಸ್ಥಳವೆಂದು ಪರಿಗಣಿಸಲ್ಪಡುವ ಈ ಸ್ಥಳಕ್ಕೆ ಧಾರ್ಮಿಕ ನಂಬಿಕೆಯುಳ್ಳವರಷ್ಟೇ ಅಲ್ಲದೇ ಪರಿಸರ ಪ್ರೇಮಿಗಳು ಹಾಗೂ ಸಸ್ಯ ಶಾಸ್ತ್ರ ಆಸಕ್ತರೂ ಭೇಟಿ ನೀಡಬಹುದಾಗಿದೆ.
– ಅನುರಾಗ್ ಗೌಡ
ದ್ವಿತೀಯ ಪತ್ರಿಕೋದ್ಯಮ
ಎಸ್ ಡಿ ಎಂ ಉಜಿರೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.