ಇಂದು ಕ್ಷಯ ರೋಗ ದಿನ; ಕ್ಷಯ ಭೀತಿ ಬೇಡ ; ಸಮರ್ಪಕ ಚಿಕಿತ್ಸೆಯಿಂದ ಶಮನ
Team Udayavani, Mar 24, 2022, 1:20 PM IST
ಶತಮಾನಗಳಿಂದ ಕ್ಷಯ ರೋಗ ಜನರನ್ನು ಕಾಡುತ್ತಲೇ ಬಂದಿದ್ದು ಇದುವರೆಗೂ ಈ ರೋಗದ ನಿರ್ಮೂಲನೆ ಸಾಧ್ಯವಾಗಿಲ್ಲ. ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳನ್ನು ಈ ರೋಗ ಇನ್ನಿಲ್ಲದಂತೆ ಕಾಡುತ್ತಿದ್ದು ಬಡ ರಾಷ್ಟ್ರಗಳಲ್ಲಂತೂ ಈ ರೋಗದ ಬಾಧೆಯಿಂದ ಹೊರಬರಲು ಜನರು ಒದ್ದಾಡುತ್ತಿದ್ದಾರೆ. ಬಡತನ, ಸಾರ್ವಜನಿಕ ಜಾಗೃತಿಯ ಕೊರತೆ, ಅಪೌಷ್ಟಿಕತೆ, ರೋಗಪೀಡಿತರ ಬಗೆಗಿನ ನಿರ್ಲಕ್ಷ್ಯ ಧೋರಣೆ ಮತ್ತಿತರ ಕಾರಣಗಳಿಂದಾಗಿ ಕ್ಷಯ ರೋಗದ ನಿರ್ಮೂಲನೆ ಇನ್ನೂ ಕನಸಾಗಿಯೇ ಉಳಿದಿದೆ. ಭಾರತದಲ್ಲಿ ಸರಕಾರ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ನಿರಂತರ ಪ್ರಯತ್ನದ ಹೊರತಾಗಿಯೂ ಈ ರೋಗದ ತೀವ್ರತೆ ಅಧಿಕವಾಗಿದ್ದು ಪ್ರತೀ ವರ್ಷ ಲಕ್ಷಾಂತರ ಮಂದಿ ಕ್ಷಯ ರೋಗದಿಂದ ಸಾವಿಗೀಡಾಗುತ್ತಿದ್ದಾರೆ.
ಕ್ಷಯ ರೋಗ ದಿನದ ಹಿನ್ನೆಲೆ
1882ನೇ ಮಾರ್ಚ್ 24ರಂದು ಕ್ಷಯ ರೋಗಕ್ಕೆ ಕಾರಣವಾದ ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಸೂಕ್ಷ್ಮಾಣುವನ್ನು ವೈದ್ಯಕೀಯ ವಿಜ್ಞಾನಿ ರಾಬರ್ಟ್ ಕಾಕ್ ಅವರು ಪತ್ತೆ ಮಾಡಿದರು. ಆ ಬಳಿಕ ಕ್ಷಯ ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ರೋಗ ಮತ್ತದರ ಚಿಕಿತ್ಸೆಯ ಕುರಿತಂತೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಪ್ರತೀ ವರ್ಷ ಮಾ. 24ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸಲಾಗುತ್ತಿದೆ.
ಕ್ಷಯ ರೋಗದ ಲಕ್ಷಣವೇನು?
ಕ್ಷಯ ರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ಏಕಾಣು ಜೀವಿಯಿಂದ ಬರುತ್ತದೆ. ಸಾಮಾನ್ಯವಾಗಿ ಸಂಜೆ ವೇಳೆ ಜ್ವರ, ಎರಡು ವಾರ ಅಥವಾ ಅದಕ್ಕೂ ಹೆಚ್ಚಿನ ಅವಧಿಯಿಂದ ಕಫ ಸಹಿತ ಕೆಮ್ಮು, ಹಸಿವಿಲ್ಲದೇ ದೇಹದ ತೂಕ ಕಡಿಮೆಯಾಗುತ್ತದೆ. ಕೆಲವೊಮ್ಮೆ ಎದೆನೋವು, ಒಣಕೆಮ್ಮು, ತೂಕ ಕಡಿಮೆ ಯಾಗುತ್ತದೆ. ಸಮರ್ಪಕ ಹಾಗೂ ನಿರಂತರ ವೈದ್ಯಕೀಯ ಚಿಕಿತ್ಸೆಯನ್ನು ಪಡೆದರೆ ಇದು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ.
ಕ್ಷಯ ರೋಗ ತಡೆಗಟ್ಟುವುದು ಹೇಗೆ?
ಕ್ಷಯ ರೋಗ ಬರುವುದಕ್ಕಿಂತ ಮುನ್ನ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಯೊಬ್ಬರೂ ಗಮನಹರಿಸಬೇಕಿದೆ. ನವಜಾತ ಶಿಶುವಿಗೆ ಕ್ಯಾಲ್ಮೆಟ್ ಗೆರಿನ್(ಬಿಸಿಜಿ) ಲಸಿಕೆಯನ್ನು ತಪ್ಪದೇ ಹಾಕಬೇಕು. ಈ ಲಸಿಕೆ ಹಾಕುವುದರಿಂದ ಕ್ಷಯ ರೋಗ ಹರಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಹಣ್ಣು ಮತ್ತು ತರಕಾರಿ ಯನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಕಾಬೋìಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬುಗಳನ್ನು ಒಳಗೊಂಡಿರುವ ಆಹಾರ ಸೇವನೆ ಅಗತ್ಯ. ಧೂಮಪಾನ, ಮದ್ಯಪಾನ ತ್ಯಜಿಸಬೇಕು. ಪ್ರತೀ ದಿನ ನಿಯಮಿತವಾಗಿ ವ್ಯಾಯಾಮ ಮಾಡ ಬೇಕು. ಸಾಮಾನ್ಯವಾಗಿ ಮಧುಮೇಹ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು.
ರೋಗಿಗಳಿಗೆ ಚಿಕಿತ್ಸಾ ವ್ಯವಸ್ಥೆ
ಕ್ಷಯ ರೋಗ ನಿರ್ಮೂಲನೆಯ ಉದ್ದೇಶದಿಂದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಂಡಿಟಿ (ಪ್ರೋಗ್ರಾಮೇಟ್ ಮ್ಯಾನೇಜ್‌ಮೆಂಟ್ ಆಫ್ ಡ್ರಗ್ ರೆಸಿಸ್ಟೆಂಟ್ ಟ್ಯುಬರ್‌ಕ್ಯುಲೋಸಿಸ್) ಕಾರ್ಯಕ್ರಮ ಪ್ರಾರಂಭವಾಗಿದೆ. ಪ್ರಾಥಮಿಕ ಚಿಕಿತ್ಸೆ ಫಲಕಾರಿಯಾಗದ ರೋಗಿಗಳಿಗೆ ಕಫ ಪರೀಕ್ಷೆಯನ್ನು ನಡೆಸಿ ಮೂರು ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚಿಕಿತ್ಸೆಯನ್ನು ಡಿಆರ್‌ಟಿಬಿ ಸೆಂಟರ್‌ನಲ್ಲಿ ಪ್ರಾರಂಭಿಸಿ ಅನಂತರ ರೋಗಿಯ ಮನೆ ಸಮೀಪದ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಡಾಟ್ ಪ್ರೊವೈಡರ್ ಮೂಲಕ ಔಷಧ ನೀಡಲಾಗುತ್ತಿದೆ.
ಎಂಡಿಆರ್ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಜನವರಿ 2015ರಿಂದ ಡಿಆರ್‌ಟಿಬಿ ಸೆಂಟರ್ ಆರಂಭಿಸಲಾಗಿದೆ. ಇಲ್ಲಿ ಎಂಡಿಆರ್ ಕ್ಷಯ ರೋಗ ಎಂದು ದೃಢಪಟ್ಟ ರೋಗಿಗಳಿಗೆ ಚಿಕಿತ್ಸೆ ಪ್ರಾರಂಭಿಸುವ ಮೊದಲು ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಹಂತದಲ್ಲಿ ರೋಗಿಗಳನ್ನು ಡಿಆರ್‌ಟಿಬಿ ಸೆಂಟರ್‌ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಚಿಕಿತ್ಸೆಯಿಂದ ಏನಾದರೂ ಅಡ್ಡ ಪರಿಣಾಮ ಕಾಣಿಸಿಕೊಳ್ಳುತ್ತಿದೆಯೇ ಎಂದು ಎಚ್ಚರ ವಹಿಸಲಾಗುತ್ತದೆ. ಪ್ರಾರಂಭಿಕ ಹಂತದ ಚಿಕಿತ್ಸೆಯ ಬಳಿಕ ಸುಮಾರು ಒಂದು ವಾರದಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಬಳಿಕ ರೋಗಿಯ ಮನೆಯ ಅಥವಾ ವಾಸಸ್ಥಾನದ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ, ಅಲ್ಲಿಯೇ ಔಷಧ ದೊರೆಯುವ ವ್ಯವಸ್ಥೆ ಮಾಡಿ ನಿಗಾವಣೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಂಡಿಆರ್ ಕ್ಷಯ ರೋಗಿಗಳು ಈ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಷಯ ರೋಗ ನಿಯಂತ್ರಣ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದು, ಹಲವಾರು ಕ್ರಮಗಳನ್ನು ಅನುಸರಿಸುತ್ತಿದೆ. ಕ್ಷಯ ರೋಗ ಬರುವುದಕ್ಕಿಂತ ಮುನ್ನ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಈ ಬಾರಿ “ಕ್ಷಯ ನಿರ್ಮೂಲನೆಗೆ ಸಂಪನ್ಮೂಲಗಳನ್ನು ಬಳಸಿ; ಜೀವ ಉಳಿಸಿ’ ಎಂಬ ಧ್ಯೇಯದಡಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
– ಡಾ| ಬದ್ರುದ್ದೀನ್, ದಕ್ಷಿಣ ಕನ್ನಡ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ
– ಡಾ| ಚಿದಾನಂದ ಸಂಜು, ಉಡುಪಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.