Ganesh Chaturthil ಗಣೇಶ ಚತುರ್ಥಿಯ ಸಂಭ್ರಮ; ವಿಶ್ವದೆಲ್ಲೆಡೆ ಗಣೇಶನ ಆರಾಧನೆ

ಥೈಲ್ಯಾಂಡ್‌ನ‌ಲ್ಲಿದೆ ವಿಶ್ವದ ಅತೀ ಎತ್ತರದ ಗಣೇಶನ ಪ್ರತಿಮೆ, ವಿಗ್ರಹಗಳು!

Team Udayavani, Sep 19, 2023, 7:20 AM IST

Ganesh Chaturthil ಗಣೇಶ ಚತುರ್ಥಿಯ ಸಂಭ್ರಮ; ವಿಶ್ವದೆಲ್ಲೆಡೆ ಗಣೇಶನ ಆರಾಧನೆ

ಅಗ್ರಪೂಜಿತ ಗಣೇಶನ ಆರಾಧನೆ ಕೇವಲ ಹಿಂದೂಗಳಿಗಷ್ಟೇ ಸೀಮಿತವಾಗಿರದೆ ಧರ್ಮ, ಜಾತಿಗಳ ಎಲ್ಲೆಯನ್ನು ಮೀರಿ ಸರ್ವರಿಂದಲೂ ಪೂಜಿಸಲ್ಪಡುತ್ತಾನೆ. ಹಿಂದೂಗಳ ಪ್ರಧಾನ ಆರಾಧ್ಯಮೂರ್ತಿಯಾದ ವಿನಾಯಕ, ಬೌದ್ಧ, ಜೈನ ಧರ್ಮೀಯರಿಂದಲೂ ಆರಾಧಿಸಲ್ಪಡುತ್ತಿದ್ದಾನೆ. ಇದರ ಜತೆಯಲ್ಲಿ ಗಣಪತಿಯನ್ನು ಭಾರತ ಮಾತ್ರವಲ್ಲದೆ ವಿಶ್ವದ ವಿವಿಧೆಡೆಗಳಲ್ಲಿ ವೈವಿಧ್ಯಮಯ ಹೆಸರುಗಳಿಂದ ಶತಶತಮಾನಗಳಿಂದ ಆರಾಧಿಸುತ್ತ ಬರಲಾಗಿದೆ. ಕಳೆದ ಕೆಲವು ದಶಕಗಳಿಂದೀಚೆಗೆ ಬಹುತೇಕ ದೇಶಗಳಲ್ಲಿ ಭಾರತೀಯ ಸಮುದಾಯದವರು ನೆಲೆಸಿದ್ದು ಗಣೇಶನನ್ನು ಭಕ್ತಿಯಿಂದ ಪೂಜಿಸುತ್ತ ಬರುತ್ತಿದ್ದಾರೆ. ವಿಶ್ವದ ಅನೇಕ ಕಡೆಗಳಲ್ಲಿ ಪ್ರಾಚೀನ ಕಾಲದಲ್ಲಿಯೇ ಗಣೇಶನ ದೇವಾಲಯಗಳು ನಿರ್ಮಾಣವಾಗಿದ್ದವು. ಇತ್ತೀಚಿನ ದಶಕಗಳಲ್ಲಿ ಮತ್ತಷ್ಟು ದೇವಾಲಯಗಳು ನಿರ್ಮಾಣಗೊಂಡು ಗಣೇಶನ ಆರಾಧನೆ ನಿತ್ಯ ನಿರಂತರವಾಗಿದೆ. ಗಣೇಶ ಚತುರ್ಥಿಯ ಸಂಭ್ರಮ ಈ ರಾಷ್ಟ್ರಗಳಲ್ಲೂ ಮನೆಮಾಡಿದೆ. ಎಲ್ಲೆಡೆಯೂ ಗಣಪತಿ ವಿಘ್ನನಿವಾರಕ, ಸಿದ್ಧಿವಿನಾಯಕನೆಂದೇ ಪ್ರತೀತಿ. ಭಕ್ತರ ಈ ನಂಬಿಕೆಯಿಂದಾಗಿಯೇ ಗಣೇಶ ಸರ್ವಮಾನ್ಯ, ವಿಶ್ವವಂದ್ಯ.

ನೇಪಾಲ
ನೇಪಾಲದಲ್ಲಿ ಬಹುಸಂಖ್ಯಾಕರಾಗಿರುವ ಹಿಂದೂಗಳು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿ ಗಣೇಶನ ಆರಾಧಕರು 2 ಮುಖ್ಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಒಂದು ಗಣೇಶ ಚತುರ್ಥಿಯಾದರೆ ಇನ್ನೊಂದು ಗಣೇಶ ಜಯಂತಿ. ಗಣೇಶ ಚತುರ್ಥಿಯನ್ನು ನೇಪಾಲ ಕ್ಯಾಲೆಂಡರ್‌ ಪ್ರಕಾರ ಶುಕ್ಲಪಕ್ಷದ ಭಾದ್ರಪದ ಮಾಸದಲ್ಲಿ ಅಂದರೆ ಆಗಸ್ಟ್‌ -ಸೆಪ್ಟಂಬರ್‌ನಲ್ಲಿ ಆಚರಿಸಿದರೆ, ಗಣೇಶ ಜಯಂತಿಯನ್ನು ಶುಕ್ಲ ಪಕ್ಷದ ಮಾಘ ಮಾಸದಲ್ಲಿ ಅಂದರೆ ಜನವರಿ- ಫೆಬ್ರವರಿ ತಿಂಗಳಿನಲ್ಲಿ ಆಚರಿಸುತ್ತಾರೆ. ಗಣೇಶ ಚತುರ್ಥಿಯ ವೇಳೆ ನೇಪಾಲದ ಪ್ರಮುಖ ಮತ್ತು ಸ್ಥಳೀಯ ಗಣೇಶ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಈ ದಿನ ಉಪವಾಸ ವ್ರತ ಆಚರಿಸುವ ಜತೆಯಲ್ಲಿ ಗಣಪತಿ ಸ್ಮರಣೆಯ ಹಾಡುಗಳನ್ನು ಹಾಡುತ್ತಾರೆ. ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯಿದ್ದು ಹಿಂದೂಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಕಠ್ಮಂಡು ಕಣಿವೆಯ ಸ್ಥಳೀಯ ಜನರು ವಿಶಿಷ್ಟವಾದ ಸಂಪ್ರದಾಯವೊಂದನ್ನು ಆಚರಿಸುತ್ತಾರೆ. ಚಂದ್ರನನ್ನು ನೋಡದೆ ಹಬ್ಬದ ದಿನ ರಾತ್ರಿ ಇವರು ಚಂದ್ರನಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ನೇಪಾಲದಲ್ಲೂ ಗಣೇಶನಿಗೆ ಮೊದಲ ಪೂಜೆ. ಕಠ್ಮಂಡುವಿನ ಪ್ರತೀ ಬೀದಿಯಲ್ಲೂ ರಸ್ತೆ ಬದಿಗಳಲ್ಲಿ ಗಣೇಶನ ದೇಗುಲವಿದೆ. ನೇಪಾಲದಲ್ಲಿ ಹಲವಾರು ದೊಡ್ಡ ಹಾಗೂ ಸಣ್ಣ ಗಣೇಶನ ದೇಗುಲವಿದ್ದು, ಕಠ್ಮಂಡು ಕಣಿವೆಯಲ್ಲೇ 4 ಪುರಾತನ ಗಣೇಶ ದೇವಾಲಯವಿದೆ. ಭಕ್ತಪುರದಲ್ಲಿ ಸೂರ್ಯ ವಿನಾಯಕ, ಕಠ್ಮಂಡುವಿನಲ್ಲಿ ಚಂದ್ರ ವಿನಾಯಕ ಮತ್ತು ಜಲ್‌ ವಿನಾಯಕ ಹಾಗೂ ಲಲಿತ್‌ಪುರದಲ್ಲಿ ಕಾರ್ಯ ವಿನಾಯಕ ದೇಗುಲವಿದೆ. ಹೆಚ್ಚಿನ ದೇಗುಲಗಳಲ್ಲಿ ಗಣೇಶನೊಂದಿಗೆ ರಿದ್ದಿ- ಸಿದ್ದಿಯನ್ನೂ ಆರಾಧಿಸುತ್ತಾರೆ. ನೇಪಾಲದಲ್ಲಿ ಬೌದ್ಧರು ಗಣೇಶನನ್ನು ವಿನಾಯಕನ ರೂಪದಲ್ಲಿ ಆರಾಧಿಸುತ್ತಾರೆ.

ಮ್ಯಾನ್ಮಾರ್‌
ಮ್ಯಾನ್ಮಾರ್‌ನಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳು ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದರು. ಪ್ರಸ್ತುತ ಗಣೇಶ ಚತುರ್ಥಿಯು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ ಹಾಗೂ ಮುಖ್ಯವಾಗಿ ಭಾರತ ಮತ್ತು ಮ್ಯಾನ್ಮಾರ್‌ ಮಧ್ಯೆ ಸಾಂಸ್ಕೃತಿಕ ವಿನಿಮಯದ ಕಾರಣದಿಂದ ಇತರ ಧರ್ಮದವರೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಭಾರತ ಮಾದರಿಯಲ್ಲೇ ಮನೆಯಲ್ಲಿ ಅಥವಾ ಪೆಂಡಾಲ್‌ಗ‌ಳಲ್ಲಿ ಗಣೇಶನ ಮೂರ್ತಿ ಇರಿಸಿ ಪೂಜಿಸಲಾಗುತ್ತದೆ. ಸಾರ್ವಜನಿಕ ಮೆರವಣಿಗೆಯ ಮೂಲಕ ಗಣೇಶನ ಮೂರ್ತಿಯನ್ನು ಕರೆದೊಯ್ದು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ದಕ್ಷಿಣ ಮ್ಯಾನ್ಮಾರ್‌ನಲ್ಲಿ ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವ ದೇವರಾಗಿ ಪೂಜಿಸಿದರೆ, ಉತ್ತರ ಮ್ಯಾನ್ಮಾರ್‌ನಲ್ಲಿನ ಜನರು “ರಕ್ಷಕ’ ಎಂದು ಆರಾಧಿಸುತ್ತಾರೆ. ಗಣೇಶನ ಮೂರ್ತಿಯನ್ನು ಭಾರತದ ಮಾದರಿಯಲ್ಲೇ ತಯಾರಿಸುತ್ತಾರೆ. ಆದರೆ ವಿಶೇಷವೆಂದರೆ ಗಣೇಶನ ಪೀಠದಲ್ಲಿ ಮೊಸಳೆ, ಆಮೆ ಮತ್ತು ಮೀನಿನ ಚಿತ್ರಗಳು ಕಾಣಸಿಗುತ್ತವೆ.

ಶ್ರೀಲಂಕಾ
ಶ್ರೀಲಂಕಾದಲ್ಲಿ ಸುಮಾರು ಶೇ. 12.6ರಷ್ಟಿರುವ ಹಿಂದೂಗಳು ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ವಾಸಿಸುವ ತಮಿಳು ಭಾಷಿಕರು ಹೆಚ್ಚಾಗಿ ಆಚರಿಸುತ್ತಾರೆ. ಈ ಭಾಗಗಳಲ್ಲಿರುವ ಗಣೇಶ ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಪೂಜೆಗಳನ್ನು ಆಯೋಜಿಸಲಾಗುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಶ್ರೀಲಂಕಾದಲ್ಲಿ ಮುಖ್ಯವಾಗಿ ಗಣೇಶನ ವಿಗ್ರಹದ ಮುಂಭಾಗದಲ್ಲಿ ತೆಂಗಿನಕಾಯಿ ಒಡೆಯುವ ಪದ್ಧತಿಯಿದೆ. ತೆಂಗಿನಕಾಯಿ ಯನ್ನು ಸಮೃದ್ಧಿಯ ಸಂಕೇತ ಎಂದೇ ಪರಿಗಣಿಸುವ ಭಕ್ತರು ಇದನ್ನು ಗಣೇಶನಿಗೆ ಸಮರ್ಪಿಸುವ ಮೂಲಕ ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಬಹುದು ಎಂಬ ನಂಬಕೆಯನ್ನು ಹೊಂದಿದ್ದಾರೆ.

ಇಂಡೋನೇಷ್ಯಾ
ಇಂಡೋನೇಷ್ಯಾವು ಮುಸ್ಲಿಂ ಬಾಹುಳ್ಯ ದೇಶವಾಗಿದ್ದರೂ ಹಿಂದೂ ಸಂಸ್ಕೃತಿ, ಸಂಪ್ರದಾಯಗಳು ಹೆಚ್ಚು ಪ್ರಭಾವ ಬೀರಿದೆ. ವಿಶ್ವದಲ್ಲೇ ಗಣೇಶನ ಚಿತ್ರವಿರುವ ಕರೆನ್ಸಿ ನೋಟ್‌ ಹೊಂದಿರುವ ದೇಶವೆಂದರೆ ಅದು ಇಂಡೋನೇಷ್ಯಾ. ಹಳೆಯ ಜಾವಾನೀಸ್‌ ಮನುಸ್ಕ್ರಿಪ್ಟ್ ಸಮರ ದಹನದಲ್ಲಿ ಗಣೇಶನ ಹುಟ್ಟಿನ ಬಗ್ಗೆ ಹೇಳಿದ್ದು, ಗಣೇಶನು ಹುಟ್ಟವಾಗಲೇ ಆನೆಯ ತಲೆಯನ್ನು ಹೊಂದಿದ್ದನು ಎಂಬ ಉಲ್ಲೇಖವಿದೆ. ಬಾಲಿಯ ಸಂಪ್ರದಾಯದ ಪ್ರಕಾರ ಪ್ರಕೃತಿ ವಿಕೋಪಗಳು ಸಂಭವಿಸುವಾಗ ಗಣೇಶನನ್ನು ಸಮಾಧಾನಿಸಲು “ರಿಷಿಗಂಗ’ ಎಂಬ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಭಾರತ ಮತ್ತು ಇಂಡೋನೇಷ್ಯಾದ ಗಣೇಶನ ಚಿತ್ರಣದಲ್ಲಿ ಹೆಚ್ಚು ವ್ಯತ್ಯಾಸ ವಿಲ್ಲ. ಕುಳಿತುಕೊಂಡಿರುವ ಅಥವಾ ನಿಂತಿರುವ ಗಣಪತಿಯೇ ಹೆಚ್ಚಾಗಿ ಕಾಣಿಸುತ್ತದೆ. ನೃತ್ಯ ಮಾಡುವ ಗಣೇಶ ಇಲ್ಲಿ ಕಾಣಸಿಗುವುದಿಲ್ಲ. ವಿಶೇಷವೆಂದರೆ ಇಂಡೋನೇಷ್ಯಾದಲ್ಲಿ ತಾಂತ್ರಿಕ ಗಣೇಶ ಕಾಣಸಿಗುತ್ತಾನೆ. ಇದು ಭಾರತದಲ್ಲಿಲ್ಲ. ತಾಂತ್ರಿಕ ಗಣೇಶನನ್ನು ತಲೆಯಿಂದ ಪೀಠದವರೆಗೆ ತಲೆಬುರುಡೆಯ ಆಭರಣಗಳಿಂದ ಶೃಂಗರಿಸುತ್ತಾರೆ.

ಕಾಂಬೋಡಿಯಾ
ಕಾಂಬೋಡಿಯಾದಲ್ಲಿ ಸುಮಾರು 7ನೇ ಶತಮಾನದಿಂದ ಗಣೇಶನನ್ನು ಮುಖ್ಯ ದೇವರಾಗಿ ಪೂಜಿಸಲಾಗುತ್ತಿದೆ. ಭಾರತದಲ್ಲಿ ಗಣೇಶನ ಆರಾಧನೆ ಪ್ರಾಮುಖ್ಯವನ್ನು ಪಡೆಯುವುದಕ್ಕೂ ಮೊದಲು ಕಾಂಬೋಡಿಯಾದಲ್ಲಿ ಗಣಪತಿಯನ್ನು ಆರಾಧಿಸಲಾಗುತ್ತಿತ್ತು ಎನ್ನಲಾಗಿದೆ. ದೇಶದ ವಿವಿಧೆಡೆ ಗಣೇಶನಿಗಾಗಿಯೇ ದೇವಸ್ಥಾನ ಗಳನ್ನು ನಿರ್ಮಿಸಲಾಗಿದೆ. ಇಲ್ಲಿನ ಬಹುತೇಕ ದೇಗುಲಗಳಲ್ಲಿ ಚತುಭುìಜ ಗಣೇಶನ ವಿಗ್ರಹವಿದೆ. ವಿನಾಯಕನ ಆರಾಧಕರಾದ ಹಿಂದೂ, ಬೌದ್ಧ, ಜೈನ ಧರ್ಮದವರು ಮಾತ್ರವಲ್ಲದೆ ಸ್ಥಳೀಯರು ಕೂಡ ಈ ದೇಗುಲಗಳಿಗೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇನ್ನು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಈ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮಹವನಾದಿಗಳು ನಡೆಸುತ್ತ ಬರಲಾಗಿದ್ದು ಭಕ್ತರು ಶ್ರದ್ಧಾಭಕ್ತಿಯಿಂದ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಥೈಲ್ಯಾಂಡ್‌
ಥೈಲ್ಯಾಂಡ್‌ನ‌ಲ್ಲಿ ಗಣೇಶನನ್ನು ಫ್ರಾ-ಫ‌ಕೀನೆಟ ( ಥೈಲ್ಯಾಂಡ್‌ ಭಾಷೆ ) ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ ಮತ್ತು ಗೌರವದಿಂದ ಪೂಜಿಸಲಾಗುತ್ತದೆ. ಇಲ್ಲಿನ ಫಾಂಗ್‌-ನಾ ಸ್ಥಳದಲ್ಲಿ ದೊರಕಿದ 10ನೇ ಶತಮಾನದ ತಮಿಳು ಹಾಗೂ ಥಾಯ್‌ ಭಾಷೆಯ ಶಾಸನಗಳಲ್ಲಿ ಕಂಚಿನ ಗಣೇಶನ ವಿಗ್ರಹದ ಚಿತ್ರಗಳು ಕಾಣಸಿಕ್ಕಿವೆ. ಇಲ್ಲಿಯೂ ಗಣಪತಿಯನ್ನು ಯಶಸ್ಸು ಹಾಗೂ ವಿಘ್ನ ವಿನಾಶಕನಾಗಿ ಪೂಜಿಸಲಾ ಗುತ್ತದೆ. ವಿಶೇಷವಾಗಿ ಇಲ್ಲಿ ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಕೊಳ್ಳುವುದಕ್ಕೂ ಮುನ್ನ ಗಣಪತಿಯನ್ನು ತಪ್ಪದೇ ಪೂಜಿಸುತ್ತಾರೆ. ಒಂದುವೇಳೆ ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ ಅಥವಾ ಹಿನ್ನಡೆ ಕಂಡುಬಂದರೆ ಗಣೇಶನ ಚಿತ್ರವನ್ನು ಅಥವಾ ಪ್ರತಿಮೆಯನ್ನು ತಲೆಕೆಳಗಾಗಿ ಇರಿಸುತ್ತಾರೆ. ಬ್ಯಾಂಕಾಕ್‌ನ ವರ್ಲ್ಡ್ ಟ್ರೇಡ್‌ ಸೆಂಟರ್‌ನ ಮುಂಭಾಗದಲ್ಲಿ ದೊಡ್ಡದಾದ ಪೀಠದಲ್ಲಿ ಗಣೇಶನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ಲಲಿತ ಕಲೆ ವಿಭಾಗದ ಲೋಗೋ ಅಲ್ಲಿಯೂ ಗಣೇಶನ ಚಿತ್ರವನ್ನು ಮುದ್ರಿಸಲಾಗಿದೆ. ಬ್ಯಾಂಕಾಕ್‌ನ ಉತ್ತಾಯನ್‌ ಗಣೇಶ ದೇಗುಲದಲ್ಲಿ ಇಲ್ಲಿನ ವಿಶ್ವ ಹಿಂದೂ ಪರಿಷತ್‌ ಘಟಕವು ಹಬ್ಬದ ಆಚರಣೆಯನ್ನು ಆಯೋಜಿಸುತ್ತದೆ ಹಾಗೂ ನಖೋನ ನಾಯೋಕ ದೇಗುಲದಲ್ಲಿ ಪರಿಸರ ಸ್ನೇಹಿ ಗಣೇಶನ ಆಚರಣೆ ಮಾಡಲಾಗುತ್ತದೆ. ಹೀಗೆ ಥೈಲ್ಯಾಂಡ್‌ನಾದ್ಯಂತ ವ್ಯಾಪಕವಾಗಿ ವಿನಾಯಕನ ಆರಾಧನೆ ನಡೆಯುತ್ತದೆ. ಗಣೇಶ ಚೌತಿ ಸಹಿತ ಪ್ರಮುಖ ದಿನಗಳಲ್ಲಿ ಇಲ್ಲಿನ ಭಕ್ತರು ಅತ್ಯಂತ ಸಂಭ್ರಮ,
ಸಡಗರದಿಂದಲೇ ಹಬ್ಬ, ಉತ್ಸವವನ್ನು ಆಚರಿಸುತ್ತ ಬಂದಿದ್ದಾರೆ.

ಥೈಲ್ಯಾಂಡ್‌ನ‌ ಚಾಚೋಂಗ್ಸಾವೊ ಪ್ರಾಂತದ ಖಲಂಗ್ ಖುಯಾನ್‌ ಜಿಲ್ಲೆಯಲ್ಲಿ ವಿಶ್ವದಲ್ಲಿಯೇ ಅತೀ ಎತ್ತರದ ಗಣೇಶನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. 2008ರಲ್ಲಿ ಈ ಪ್ರತಿಮೆಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಅಂದರೆ 2012ರಲ್ಲಿ ಗಣೇಶನ ಕಂಚಿನ ಪ್ರತಿಮೆ ತಲೆ ಎತ್ತಿ ನಿಂತಿತು. ಈ ಪ್ರತಿಮೆಯು ಅಡಿಪಾಯ ಸಹಿತ 39 ಮೀ. ಅಂದರೆ ಸರಿಸುಮಾರು 128 ಅಡಿಗಳಷ್ಟು ಎತ್ತರವನ್ನು ಹೊಂದಿದೆ.
40,000 ಚದರ ಮೀಟರ್‌ಗಳಷ್ಟು ವಿಸ್ತಾರವಾದ ಜಾಗದಲ್ಲಿ ನಿರ್ಮಾಣಗೊಂಡಿರುವ ಖಾÉಂಗ್‌ ಖುಯಾನ್‌ ಗಣೇಶ ಅಂತಾ ರಾಷ್ಟ್ರೀಯ ಪಾರ್ಕ್‌ನಲ್ಲಿ 14 ಅಂತಸ್ತಿನ ಕಟ್ಟಡದಷ್ಟು ಎತ್ತರವನ್ನು ಹೊಂದಿರುವ ಈ ಬೃಹದಾಕಾರದ ಗಣೇಶ ನಾಲ್ಕು ಕೈಗಳನ್ನು ಹೊಂದಿದ್ದಾನೆ. ಬಲಭಾಗದ ಕೈಗಳಲ್ಲಿ ಹಲಸಿನ ಹಣ್ಣು ಮತ್ತು ಬಾಳೆಹಣ್ಣನ್ನು ಹಿಡಿದಿದ್ದರೆ ಎಡಕೈಗಳಲ್ಲಿ ಕಬ್ಬು ಮತ್ತು ಮಾವಿನ ಹಣ್ಣನ್ನು ಹಿಡಿದಿದ್ದಾನೆ. ಕಂಚಿನ 854 ಭಾಗಗಳನ್ನು ಜೋಡಿಸಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಪ್ರತಿಮೆಯ ಅಡಿಪಾಯ ಸುಮಾರು 9 ಮೀಟರ್‌ಗಳಷ್ಟು ಎತ್ತರವಿದ್ದರೆ ನಿಂತ ಭಂಗಿಯಲ್ಲಿರುವ ಗಣೇಶನ ಪ್ರತಿಮೆ 30 ಮೀಟರ್‌ಗಳಷ್ಟು ಎತ್ತರವಿದೆ. ಸಮೃದ್ಧಿ ಮತ್ತು ಪ್ರಗತಿಯ ಸಂಕೇತವಾಗಿ ಗಣೇಶ ಒಂದು ಹೆಜ್ಜೆ ಮುಂದಿಟ್ಟ ಶೈಲಿಯನ್ನು ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಇಲ್ಲಿನ  ಅಕಾಟ ದೇಗುಲದಲ್ಲಿ ಅತೀ ಎತ್ತರದ ಅಂದರೆ 49 ಮೀಟರ್‌ ಎತ್ತರದ ಕುಳಿತ ಭಂಗಿಯ ಗಣೇಶ ಪ್ರತಿಮೆಯಿದೆ. ಸಮನ ವತನರಾಮ ದೇಗುಲದಲ್ಲಿ 16 ಮೀಟರ್‌ ಎತ್ತರ ಹಾಗೂ 22 ಮೀಟರ್‌ ಉದ್ದದ ಗಣೇಶನನ್ನು ಕಾಣಬಹುದು.

ಫ್ರಾನ್ಸ್‌
ಫ್ರಾನ್ಸ್‌ನಲ್ಲಿರುವ ಅತೀ ದೊಡ್ಡ ಹಿಂದೂ ದೇಗುಲವಾದ ಶ್ರೀ ಮನಿಕ್ಕಾ ವಿನಾಯಗರ್‌ ದೇಗುಲದಲ್ಲಿ ಗಣೇಶನ
ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಣೇಶನ ಮೂರ್ತಿಯ ಮೆರವಣಿಗೆ
ಯನ್ನು ಮಾಡಲಾಗುತ್ತದೆ. ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ಮೆರವಣಿಗೆಯಲ್ಲಿ ಭಜನೆ, ನೃತ್ಯಗಳನ್ನು ಮಾಡುವ ಮೂಲಕ ಸಾಗಿ ಸಂಭ್ರಮಿಸು ತ್ತಾರೆ. ಇಲ್ಲಿರುವ ಭಾರತೀಯರೊಂದಿಗೆ ಇತರರೂ ಭಾಗವಹಿಸಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ಯಾರಿಸ್‌ನ ರಸ್ತೆಯಲ್ಲಿ ಸುಮಾರು 4 ಮೈಲಿಗಳಷ್ಟು ದೂರದವರೆಗೆ ಈ ಮೆರವಣಿಗೆನಡೆಯುತ್ತದೆ.

ಅಫ್ಘಾನಿಸ್ಥಾನ
ಅಫ್ಘಾನಿಸ್ಥಾನದ ಕಾಬೂಲ್‌ನ ಗರದೇಝ್ನಲ್ಲಿ ಕಿಂಗಾಲ್‌ ಎನ್ನುವ ರಾಜಾ ನೀಡಿದ ಗಣೇಶನ ಮೂರ್ತಿ ಕಾಣಸಿಕ್ಕಿದೆ. ಇಂಡೋ-ಅಫ್ಘಾನ್‌ ಶೈಲಿಯ ಮೂರ್ತಿ ಇದಾಗಿದೆ ಎಂದು ಇತಿಹಾಸ ತಜ್ಞರು ಹೇಳಿದ್ದಾರೆ. ಕ್ರಿಸ್ತ ಶಕ 7-8ರ ಟರ್ಕ್‌ ಶಾಹೀಸ್‌ರ ಕಾಲಕ್ಕೆ ಈ ಮೂರ್ತಿ ಸೇರಿದ್ದಾಗಿದೆ. ಅಫ್ಘಾನಿಸ್ಥಾನದಂತಹ ಮುಸ್ಲಿಂ ಬಾಹುಳ್ಯವಿರುವ ದೇಶದಲ್ಲಿಯೂ ಪ್ರಾಚೀನ ಕಾಲದಿಂದಲೂ ಗಣಪತಿ ದೇವರನ್ನು ಇಲ್ಲಿನ ಕೆಲವೊಂದು ಸಮುದಾಯದ ಜನರು ಪೂಜಿಸುತ್ತ ಬಂದಿದ್ದು ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಟಿಬೆಟ್‌
11ನೇ ಶತಮಾನದಲ್ಲಿ ಭಾರತೀಯ ಬೌದ್ಧ ಭಿಕ್ಷುಗಳಾದ ಅತಿಸಾ ದೀಪಾಂಕರ ಹಾಗೂ ಗಯಾಧಾರಾ ಟಿಬೆಟ್‌ನಲ್ಲಿ ಗಣೇಶನನ್ನು ಪರಿಚಯಿಸಿದ್ದರು. ಅಲ್ಲದೇ ಗಣಪತಿಯ ಕುರಿತಾಗಿ ಇರುವ ಹಲವು ಭಾರತೀಯ ಶಾಸನಗಳನ್ನು ಅತಿಸಾ ದೀಪಾಂಕರ ಟಿಬೆಟಿಯನ್‌ ಭಾಷೆಗೆ ಭಾಷಾಂತರಿಸಿದ್ದಾರೆ. ಬೌದ್ಧ ಧರ್ಮೀಯರು ಅಧಿಕವಾಗಿರುವ ಇಲ್ಲಿನ ಹಲವಾರು ಪ್ರಾಂತಗಳಲ್ಲಿ ಗಣೇಶನ ದೇವಾಲಯಗಳಿದ್ದು ಸ್ಥಳೀಯರ ಜತೆಗೂಡಿ ಬೌದ್ಧ ಮತ್ತು ಹಿಂದೂ ಧರ್ಮೀಯರು ಭಕ್ತಿಯಿಂದ ಗಣಪತಿಯನ್ನು ಪೂಜಿಸುತ್ತ ಬಂದಿದ್ದಾರೆ. ಇಲ್ಲೂ ಗಣೇಶ ವಿಘ್ನ ನಿವಾರಕ, ಸಮೃದ್ಧಿಯ ಸಂಕೇತ.

ಮಾರಿಷಸ್‌

ದ್ವೀಪ ರಾಷ್ಟ್ರ ಮಾರಿಷಸ್‌ನಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಹಿಂದೂ ಸಮುದಾಯದವರು ವಾಸಿಸುತ್ತಾರೆ. ಈ ದೇಶದಲ್ಲಿ ಗಣೇಶನ ಹಬ್ಬದಂದು ಸಾರ್ವಜನಿಕ ರಜೆಯನ್ನು ನೀಡಲಾಗುತ್ತದೆ. 1896ರ ಬಿವಾಜಿ ಕುಟುಂಬ ಮೊದಲ ಬಾರಿಗೆ ಈ ಆಚರಣೆಯನ್ನು ಆರಂಭಿಸಿತು. ಇದನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಗಣೇಶನ ಮಣ್ಣಿನ ಮೂರ್ತಿಗಳನ್ನು ಮಾಡಿ, ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ರಾಷ್ಟ್ರದಲ್ಲೂ ಗಣೇಶನ ಮಂದಿರಗಳಿದ್ದು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತ ಬಂದಿದ್ದಾರೆ. ಗಣೇಶ ಚತುರ್ಥಿಯಂತೂ ಇಲ್ಲಿನ ಜನರ ಪಾಲಿಗೆ ಬಲುದೊಡ್ಡ ಹಬ್ಬವಾಗಿದೆ. ಭಾರತದ ಮಾದರಿಯಲ್ಲಿಯೇ ಮನೆಮನೆಗಳಲ್ಲಿ ಬೆನಕನ ಆರಾಧನೆ ನಡೆಯುತ್ತದೆ.

ಚೀನ  
ಬೌದ್ಧರ ಬಾಹುಳ್ಯವಿರುವ ಉತ್ತರ ಚೀನದಲ್ಲಿ 531 ಕ್ರಿಸ್ತ ಶಕೆಯ ಶಾಸನದ ಗಣೇಶ ಪ್ರತಿಮೆಯಿದೆ. ಇಲ್ಲಿನ ತುನ್‌ ಹುವಾಂಗ್‌ ಹಾಗೂ ತುನ್‌ ಹಸಿಯೇನ್‌ನಲ್ಲಿರುವ ರಾಕ್‌ ಕಟ್‌ ದೇಗುಲದಲ್ಲಿ ಗಣೇಶನ ಚಿತ್ರವನ್ನು ಕಾಣಬಹುದು. ಅಷ್ಟು ಮಾತ್ರವಲ್ಲದೆ ಬೌದ್ಧರು ಮತ್ತು ಹಿಂದೂಗಳ ಸಂಖ್ಯೆ ಒಂದಿಷ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಗಣಪತಿ ಆರಾಧನೆ ನಡೆಯುತ್ತ ಬಂದಿದೆ. ಅಚ್ಚರಿ ಎಂದರೆ ಚೀನದ ಕೆಲವೊಂದು ಭಾಗದಲ್ಲಿ ಗಣಪತಿಯನ್ನು ನಕಾರಾತ್ಮಕವಾಗಿಯೂ ಬಿಂಬಿಸಲಾಗುತ್ತದೆ.

ಜಪಾನ್‌  
8ನೇ ಶತಮಾನದಲ್ಲೇ ಜಪಾನ್‌ನಲ್ಲಿ ವಿಘ್ನವಿನಾಶಕನ ಅಸ್ತಿತ್ವವನ್ನು ಕಾಣಬಹುದು. ಜಪಾನ್‌ನ ಬೌದ್ಧಧರ್ಮದ ಕಾಂಗಿಟನ್‌ನೊಂದಿಗೆ ಗಣೇಶನನ್ನು ಹೋಲಿಕೆ ಮಾಡಲಾಗುತ್ತದೆ. ಎರಡು ದೇಹದ ಕಾಂಗಿಟನ್‌ ಇಲ್ಲಿ ಪ್ರಚಲಿತವಾಗಿದೆ. ಗಂಡು ಹಾಗೂ ಹೆಣ್ಣು ಆನೆ ತಲೆಗಳನ್ನು ಹೊಂದಿರುವ ದೇವತೆಗಳು ಆಲಿಂಗಿಸುತ್ತಿರುವ ರಚನೆಯಲ್ಲಿರುವ ಕಾಂಗಿಟನ್‌ ಗಣೇಶನ ಮೂರ್ತಿಯು ಇಲ್ಲಿದೆ. ಕಾಂಗಿಟನ್‌ನನ್ನು ಅದೃಷ್ಟ ಹಾಗೂ ಶಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಜಪಾನ್‌ನ ಹಲವೆಡೆ ಕಾಂಗಿಟನ್‌ ಅಂದರೆ ಗಣೇಶನ ಆರಾಧನೆ ನಡೆಯುತ್ತ ಬಂದಿದೆ. ಭಾರತದಲ್ಲಿ ಗಣೇಶನನ್ನು ಮೋದಕ ಪ್ರಿಯ ಎನ್ನುತ್ತಾರೆ. ಆದರೆ ಜಪಾನ್‌ನಲ್ಲಿ ಗಣೇಶನಿಗೆ ಮೂಲಂಗಿ ಪ್ರಿಯವೆಂದು ಅದನ್ನೇ ನೈವೇದ್ಯವಾಗಿ ನೀಡುತ್ತಾರೆ. ದೇಗುಲಗಳ ಗೋಡೆ, ಮೇಲ್ಛಾವಣೆಗಳಲ್ಲಿ ಕಣ್ಣಾಡಿಸಿದರೆ ಮೂಲಂಗಿಯ ಚಿತ್ರ ಮತ್ತು ಕೆತ್ತನೆಗಳೇ ಕಾಣಸಿಗುತ್ತವೆ.

ಯುಎಸ್‌, ಕೆನಡಾ, ಯುಕೆ
ಈ ದೇಶಗಳ ವಿವಿಧ ನಗರಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಅನಿವಾಸಿ ಭಾರತೀಯರು ತಮ್ಮ ತಮ್ಮ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇಲ್ಲಿರುವ ಹಿಂದೂ ದೇಗುಲಗಳಲ್ಲೂ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಲಂಡನ್‌ನ ಲಕ್ಷ್ಮೀ ನಾರಾಯಣ ದೇಗುಲದಲ್ಲಿ ವಿಜೃಂಭಣೆಯಲ್ಲಿ ಗಣೇಶನಿಗೆ ಪೂಜೆ, ಆರತಿಯನ್ನು ನೆರವೇರಿಸಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರುತ್ತಾರೆ. ಮೆರವಣಿಗೆಯ ಮೂಲಕ ಆಚರಣೆಗೆ ತೆರೆ ಎಳೆಯಲಾಗುತ್ತದೆ.
ಯುಎಸ್‌ನ ಪೆನ್ಸಿಲ್ವೇನಿಯಾದ ಭಾರತೀಯ ದೇಗುಲದಲ್ಲಿ ಆಚರಿಸುವ ಫಿಲಿಡೆಲ್ಫಿಯಾ ಗಣೇಶ ಚತುರ್ಥಿ ಅತೀ ದೊಡ್ಡ ಅಂತಾರಾಷ್ಟ್ರೀಯ ಆಚರಣೆಗಳಲ್ಲಿ ಒಂದಾಗಿದೆ. ಈ ಮೂರೂ ದೇಶಗಳ ಹಲವೆಡೆ ಇರುವ ಹಿಂದೂ ದೇವಾಲಯಗಳಲ್ಲಿ ಗಣೇಶ ಒಂದೋ ಪ್ರಧಾನ ದೇವರು ಅಥವಾ ಪರಿವಾರ ದೇವರಾಗಿ ಪೂಜಿಸಲ್ಪಡುತ್ತಾನೆ. ಗಣೇಶ ಚೌತಿಯ ಸಂದರ್ಭದಲ್ಲಿ ಈ ಎಲ್ಲ ದೇಗುಲಗಳಿಗೆ ಭಕ್ತರ ದಿಂಡೇ ಹರಿದು ಬಂದು ದೇವರಿಗೆ ಹರಕೆ, ಸೇವೆ, ಪೂಜೆಗಳನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ.

-ವಿಧಾತ್ರಿ ಭಟ್‌ ಉಪ್ಪುಂದ, ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

12-uv-fusion

UV FUsion: ಇತರರನ್ನು ಗೌರವಿಸೋಣ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.