ಮಣ್ಣಿನ ಋಣ ಹೋಗುತ್ತದೆ; ಗುಣ ಉಳಿಯುತ್ತದೆ…
Team Udayavani, Aug 6, 2023, 12:35 PM IST
ಯಕ್ಷಗಾನ ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ ದೊಡ್ಡ ಹೆಸರು ಮಾಡಿದವರು ಉಮಾಕಾಂತ ಭಟ್. ಅವರ ಪ್ರತಿ ಮಾತಿನಲ್ಲಿಯೂ ಹೊಸದೊಂದು ಚಿಂತನೆ, ಹೊಳಹು ಇರುತ್ತದೆ. ಪ್ರತಿ ಮಾತಿನಲ್ಲಿಯೂ ಅವರ ವಿದ್ವತ್‌ನ ಪರಿಚಯವಾಗುತ್ತದೆ. ಸಾಹಿತ್ಯ, ಯಕ್ಷಗಾನ, ಕಲೆ ಮತ್ತು ಬದುಕಿನ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.
- ಸಾಹಿತ್ಯದಲ್ಲಿ ಯುದ್ಧ ಮತ್ತು ಹಿಂಸೆಯನ್ನೇ ಪ್ರಧಾನವಾಗಿ ಅಭಿವ್ಯಕ್ತಿಗೊಳಿಸಲು ಕಾರಣಗಳೇನಿರಬಹುದು?
ಕಾಮ-ಕ್ರೋಧಗಳನ್ನು ಮಿತಿಯಲ್ಲಿಟ್ಟುಕೊಂಡರೆ ಮಾತ್ರ ಬದುಕು. ಅದಕ್ಕೆ ಅಂಟಿಕೊಂಡರೆ ವ್ಯಾದಿಯಾಗುತ್ತದೆ. ಕೋಪವನ್ನು ಸಂಪೂರ್ಣ ಗೆಲ್ಲಲು ಸುಲಭವಾಗಿ ಸಾಧ್ಯವಿಲ್ಲ. ಅದನ್ನು ಮಿತಿಯಲ್ಲಿರಿಸಿಕೊಳ್ಳಬಹುದಷ್ಟೆ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಸ್ಪಂದನೆ. ಕೋಪಬಂದಾಗ ಹಲ್ಲು ಕಡಿಯುವುದು, ಕಿರುಚುವುದು, ನುಂಗಿಕೊಳ್ಳುವುದು ಇವೆಲ್ಲವೂ ಕ್ರೋಧವನ್ನು ಗೆಲ್ಲುವ ಕ್ರಮಗಳೇ. ಪುರಾಣದಲ್ಲಿ ಶಿವ ಕಾಮನನ್ನು ಸುಟ್ಟು ಅದನ್ನು ಗೆದ್ದ. ಹರಿ ಅದನ್ನು ತನ್ನ ಮಗನನ್ನಾಗಿ ಜತೆಯಲ್ಲಿಟ್ಟುಕೊಂಡು ಉಪಾಯದಿಂದ ಗೆದ್ದ. ಇತಿಹಾಸದಲ್ಲಿ ಬುದ್ಧ, ಗಾಂಧೀಜಿ ಮುಂತಾದವರಿಗೆ ಮಾತ್ರ ಕ್ರೋಧವನ್ನು ಗೆಲ್ಲಲು ಸಾಧ್ಯವಾಯ್ತು. ಕಾಮ-ಕ್ರೋಧ ಈ ಎರಡೂ ವಿಷಯಗಳನ್ನು ಕನ್ನಡ ಸಾಹಿತ್ಯವೂ ಸೇರಿದಂತೆ ಪ್ರಪಂಚದ ಎಲ್ಲ ಕಾಲದಲ್ಲಿಯೂ ಸಾಹಿತ್ಯ ನಿರ್ವಹಿಸಿದೆ. ಭರತ-ಬಾಹುಬಲಿಯ ಪ್ರಸಂಗದಲ್ಲಿ ಇದರ ಅತ್ಯಂತಿಕ ಸ್ಥಿತಿಯನ್ನು ನೋಡಬಹುದು. ಸಂಸಾರ ಚಕ್ರವನ್ನು ಮಾತ್ರವಲ್ಲ; ಕಾಲಚಕ್ರವನ್ನೂ ಗೆದ್ದು “ಅನಂತ’ನಾದವನು ಬಾಹುಬಲಿ.
- ನೀವು ಯಕ್ಷಗಾನ ಕಲಾವಿದರಾಗಿ, ಅರ್ಥಧಾರಿಗಳಾಗಿ ನೂರಾರು ಪಾತ್ರಗಳನ್ನು ನಿರ್ವಹಿಸಿದ್ದೀರಿ. ಅವುಗಳಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಿದ ಪಾತ್ರ ಯಾವುದು?
ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿದ ಪಾತ್ರ ಶ್ರೀರಾಮ. ಹೊಸ್ತೋಟ ಮಂಜುನಾಥ ಭಾಗವತರ “ರಾಮನಿರ್ಯಾಣ’ದ ಶ್ರೀರಾಮನ ಪಾತ್ರಕ್ಕೆ 500ಕ್ಕೂ ಹೆಚ್ಚು ಪ್ರಸಂಗಗಳಲ್ಲಿ ಅರ್ಥ ಹೇಳಿದ್ದೇನೆ. ಪ್ರತಿಯೊಂದು ಸಂದರ್ಭದಲ್ಲಿಯೂ ರಾಮ ಬೇರೆ ಬೇರೆಯಾಗಿ ಕಂಡಿದ್ದಾನೆ. ಕೇವಲ ಮನುಷ್ಯ ಮಾತ್ರವಲ್ಲ; ಜೀವಜಗತ್ತಿನ ಎಲ್ಲ ಸಂಕುಲಗಳ ಮಿತಿಯನ್ನು ತೋರಿಸಿದವನು ರಾಮ. ಒಂದು ಇರುವೆಯ ನಡೆಯನ್ನು, ಆನೆಯ ಶಕ್ತಿಯನ್ನು, ಮಂಗಗಳ ಸಂವೇದನೆಯನ್ನು, ಅಳಿಲಿನ ಸೇವೆಯನ್ನು, ಹಾರುವ ಹಕ್ಕಿಯ ಸ್ವಾತಂತ್ರ್ಯವನ್ನು ಮಾತ್ರವಲ್ಲ; ಮರಗಿಡ ಬಳ್ಳಿಗಳ ಜೀವ ಚೈತನ್ಯವನ್ನು ರಾಮ ತನ್ನ ಪಾತ್ರದ ಮೂಲಕ, ಪರಕಾಯಪ್ರವೇಶ ಎನ್ನುವ ಹಾಗೆ ತೋರಿಸಿಕೊಟ್ಟಿದ್ದಾನೆ. ತಾನು ಬೆಳಗುತ್ತಾ ಜೀವ ಜಗತ್ತನ್ನೂ ಬೆಳಗಿಸಿದ್ದಾನೆ. ಹೀಗಾಗಿ ಅವನೊಬ್ಬ ವಿಶ್ವಮಾನವನ ಪ್ರತಿನಿಧಿಯಾಗಿದ್ದಾನೆ.
- ಈ ನೆಲದ ಗುಣಗಳಾದ ಬಹುತ್ವ, ಸಹಿಷ್ಣುತೆ ಸೌಹಾರ್ದತೆಗಳು ಮುಂದಿನ ದಿನಮಾನಗಳಲ್ಲಿ ಉಳಿಯಬಹುದೇ?
ಮಣ್ಣಿನ “ಋಣ’ ಹೋಗುತ್ತದೆ; “ಗುಣ’ ಉಳಿಯುತ್ತದೆ. ಈ ಭಾರತೀಯ ಮಣ್ಣಿನ ಗುಣವೆಂದರೆ ಎಲ್ಲವನ್ನು ಜೀರ್ಣಿಸಿಕೊಂಡು ಹೊಸ ಆವಿಷ್ಕಾರದಲ್ಲಿ ಪ್ರಕಟವಾಗುವುದು. ಸಾಹಿತ್ಯ, ಸಂಸ್ಕೃತಿ, ಧರ್ಮ ಯಾವುದೇ ವಿಷಯವನ್ನು ತೆಗೆದುಕೊಳ್ಳಿ. 1000 ವರ್ಷಗಳ ಹಿಂದೆ ಭಾರತಕ್ಕೆ ಬಂದ ಇಸ್ಲಾಂ, 400 ವರ್ಷಗಳ ಕಾಲಾಂತರದ ಕ್ರಿಶ್ಚಿಯನ್ ಧರ್ಮಗಳನ್ನು ಗಮನಿಸಿ. ಇಲ್ಲಿನವು ರೋಮ್‌ನ ಅಥವಾ ಮೆಕ್ಕಾದ ಧರ್ಮಗಳಂತಲ್ಲ. ತಮ್ಮ ಮೂಲ ಆಶಯವನ್ನಿಟ್ಟಿಕೊಂಡೂ ಈ ಮಣ್ಣಿನ ಗುಣಗಳಾದ ಸಹಬಾಳ್ವೆಯನ್ನು, ಸಂಯಮವನ್ನು, ಸೌಹಾರ್ದತೆಯನ್ನು ಉಳಿಸಿಕೊಂಡಿವೆ. “ಇಹ’, “ಪರ’ಗಳ ವಿಷಯದಲ್ಲಿ ಎಲ್ಲರೂ ಒಂದೇ. “ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ’ ಎಂದ ದೇಶ ನಮ್ಮದು. “ಇಲ್ಲಿ ಯಾರೂ ಮುಖ್ಯರಲ್ಲ; ಅಮುಖ್ಯರೂ ಅಲ್ಲ’ ಎಂದ ಕವಿ ಕುವೆಂಪು ನಾಡಿದು. ಅದಕ್ಕಾಗಿಯೇ ಇದು “ಸರ್ವ ಜನಾಂಗದ ಶಾಂತಿಯ ತೋಟ’ ಮಾತ್ರವಲ್ಲ; “ಹಲವು ಗಿಡ ಮರಗಳ ನಿತ್ಯ ಹರಿದ್ವರ್ಣ ಕಾಡು’.
- ನಿಮಗೆ ಯಾವತ್ತಾದರೂ “ಮಾತು’ ಮಿತಿ ಎನ್ನಿಸಿದೆಯೇ?
ಮಾತು “ಮಂತ್ರ’ವೂ ಹೌದು “ಮಿತಿ’ಯೂ ಹೌದು. ಮಾತು ಮನಸ್ಸಿನಿಂದ ನಾಲಿಗೆಗೆ ಬರುವಷ್ಟರಲ್ಲಿ ಹಲವು ಬಣ್ಣ ವಾಸನೆಗಳನ್ನು ಪಡೆದುಕೊಂಡುಬಿಡುತ್ತದೆ. ಅಮೂರ್ತವು ಮೂರ್ತವಾಗುವ ಪ್ರಕ್ರಿಯೆಯಲ್ಲಿ ಅವಸ್ಥಾಂತರಗಳಾಗುವುದು ಸಹಜ. ನಮ್ಮಲ್ಲಿ “ನಾಯಕ’ನ ಪಾತ್ರವಿರುವಂತೆ “ಪ್ರತಿನಾಯಕ’ನ ಪಾತ್ರವೂ ಇದೆ. ರಾಮ – ಕೃಷ್ಣ – ವಿಶ್ವಾಮಿತ್ರದಂಥ ಪಾತ್ರಗಳು ತೀರ್ಮಾನದ, ನಿರ್ಣಾಯಕವಾದ ಮಾತುಗಳನ್ನಾಡುವುದನ್ನು ಗಮನಿಸಿ. ಆದರೆ ಅದು ಮಾತಿನ ವಿಸ್ತಾರದಂತೆ ಮಿತಿಯೂ ಹೌದು.
- ಯಕ್ಷಗಾನವು ಕರಾವಳಿಯಲ್ಲಿ ಕನ್ನಡವನ್ನು ಉಳಿಸಿದೆ ಎಂಬ ಮಾತನ್ನು ಒಪ್ಪುವಿರಾ?
ಖಂಡಿತಾ. ಯಕ್ಷಗಾನ ನಮ್ಮಲ್ಲಿ ಕೇವಲ ಭಾಷೆಯನ್ನು ಮಾತ್ರವಲ್ಲ; ಸಾಹಿತ್ಯವನ್ನೂ ಉಳಿಸಿದೆ, ಬೆಳೆಸಿದೆ. ಮನೆಯಂಗಳದಲ್ಲಿ ನಡೆಯುವ ತಾಳಮದ್ದಲೆ, ಯಕ್ಷಗಾನ ಪ್ರಸಂಗಗಳನ್ನು ನೋಡುತ್ತಾ ಮಗುವಿನ ಬೆಳವಣಿಗೆಯ ಜತೆ ಜತೆಗೆ ಭಾಷೆ ಮತ್ತು ಸಾಹಿತ್ಯದ ಪರಿಚಯವೂ ಆಗುತ್ತದೆ. ಹಲವು ಜಿಲ್ಲೆಗಳ ಜನ ಸಮೃದ್ಧವಾದ ಜಾನಪದವನ್ನು ಮರೆತುಬಿಟ್ಟಿದ್ದಾರೆ. ಅವರಲ್ಲಿ ಕೇವಲ ಭಾಷೆ “ಉಳಿದಿದೆ’. ಸಾಹಿತ್ಯ “ಅಳಿದಿದೆ’. ಇದು ಒಂದು ನೆಲೆಯಲ್ಲಾದರೆ-ಯಕ್ಷಗಾನ ಚೌಕಿ ಎಲ್ಲ ವರ್ಗ, ವರ್ಣ, ಜಾತಿಗಳನ್ನು ಒಳಗೊಳ್ಳಲು, ಮೀರಲು ಸಹಾಯಕವಾಗಿದೆ. ಹೊರಗೆ ಮೊಗೇರ, ನಾಯಕ, ಬ್ರಾಹ್ಮಣ, ನಾಮಧಾರಿ, ಬಡವ, ಶ್ರೀಮಂತ, ಹಿಂದೂ, ಮುಸ್ಲಿಂ ಯಾರೇ ಆಗಿರಲಿ; ಪಾತ್ರದ ಆಶಯದಂತೆ ನಡೆದುಕೊಳ್ಳಬೇಕು. ಅಂಥ ಸಹಿಷ್ಣತೆಯನ್ನು ಕಲೆ ಕಾಪಾಡಿಕೊಂಡಿದೆ.
ವಸ್ತುವಿನ ದೃಷ್ಟಿಯಿಂದ ಹಿಂದೆ ಮಹಾಕಾವ್ಯಗಳನ್ನು ರಚಿಸುತ್ತಿದ್ದರು. ರಾಮಾಯಣ ಮಹಾಭಾರತದ ಪ್ರಸಂಗಗಳು ಒಬ್ಬ ಕವಿಯ ಒಂದು ಜೀವಿತದ ಕೃತಿಯಾಗಿರುತ್ತಿತ್ತು. ಕುಮಾರವ್ಯಾಸನ ಭಾರತದಂತೆ. ಆದರೆ, ಈ ಕಾಲದಲ್ಲಿ ಬೇಂದ್ರೆ, ಕುವೆಂಪು, ಕಣವಿ, ಅಡಿಗ ಇವರೆಲ್ಲರೂ ತಮ್ಮ ಜೀವಿತದ ಕಾಲದಲ್ಲಿ ಬರೆದ ಒಟ್ಟು ಕವಿತೆಗಳನ್ನು ಒಂದು ಕಾವ್ಯಸೂತ್ರದಲ್ಲಿಟ್ಟು ನೋಡಿದರೆ ಮಹಾಕಾವ್ಯದಂತೆಯೇ ಕಾಣುತ್ತದೆ. “ಬಿಡಿ ಬಿಡಿ’ಯಾಗಿ ಇರುವುದು “ಇಡಿ’ಯಾಗಿಯೂ ಕಾಣುತ್ತದೆ.
-ಸಂದರ್ಶನ: ಸಂಧ್ಯಾ ಹೆಗಡೆದೊಡ್ಡಹೊಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.